RCB ತಂಡವು ಲೀಗ್ ಹಂತದ 14 ಪಂದ್ಯಗಳಲ್ಲಿ 8 ಅನ್ನು ಗೆಲ್ಲುವು ಮೂಲಕ 16 ಅಂಕ ಗಳಿಸಿ ತನ್ನ ಲೀಗ್ ಪೂರ್ಣಗೊಳಿಸಿದ್ದು ಪ್ಲೇಆಫ್ ಹತ್ತಿರಕ್ಕೆ ಬಂದಿದೆ. ಆದರೆ ಆರ್‌ಸಿಬಿ ಪ್ಲೇಆಫ್ ಪ್ರವೇಶಿಸಬೇಕಾದರೆ ಇಂದು ರಾತ್ರಿ ನಡೆಯುವ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಗೆಲ್ಲಬೇಕಿದೆ. ಅದಕ್ಕಾಗಿ RCB ಅಭಿಮಾನಿಗಳು ಮುಂಬೈ ಗೆಲುವಿಗಾಗಿ ಮತ್ತು ಡೆಲ್ಲಿ ಸೋಲಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ಆರ್‌ಸಿಬಿ ತಂಡವೂ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್‌ಗಳ ಅಧಿಕಾರಯುತ ಗೆಲುವು ಸಾಧಿಸಿದೆ. 16 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಆದರೆ ಅದರ ನೆಟ್ ರನ್ ರೇಟ್ -253 ಇರುವುದು ಕಂಟಕವಾಗಿ ಪರಿಣಮಿಸಿದೆ. ಮುಂಬೈ ತಂಡ ಪ್ಲೇ ಆಫ್‌ನಿಂದ ಹೊರಹೋಗಿದ್ದು ಔಪಚಾರಿಕವಾಗಿ ತನ್ನ ಕೊನೆಯ ಪಂದ್ಯ ಎದುರಿಸುತ್ತಿದೆ. ಡೆಲ್ಲಿ ತಂಡ ಸದ್ಯ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದ್ದರೂ ಅದರ ನೆಟ್ ರನ್ ರೇಟ್ +255 ಇದೆ. ಒಂದು ವೇಳೆ ಅದು ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದರೆ 16 ಅಂಕ ಮತ್ತು ಉತ್ತಮ ನೆಟ್ ರನ್ ರೇಟ್ ಆಧಾರದಲ್ಲಿ ಪ್ಲೇಆಫ್ ಪ್ರವೇಶಿಸುತ್ತದೆ ಮತ್ತು ಬೆಂಗಳೂರು ಹೊರಬೀಳುತ್ತದೆ.
ಆರ್‌ಸಿಬಿ ಬಯಕೆಯಂತೆ ಇಂದು ಮುಂಬೈ ಗೆದ್ದರೆ ಡೆಲ್ಲಿ ತಂಡ 14 ಅಂಕಗಳಿಗೆ ಸೀಮಿತವಾಗುವುದರಿಂದ ಅದು ಪ್ಲೇಆಫ್ ರೇಸ್‌ನಿಂದ ಹೊರಬೀಳುತ್ತದೆ. ಆರ್‌ಸಿಬಿ ತಂಡ ಪ್ಲೇ ಆಫ್‌ಗೇರುತ್ತದೆ.
ಇದನ್ನೂ ಓದಿ: ಫ್ಲೇಆಫ್ ಹತ್ತಿರಕ್ಕೆ ಬಂದ RCB: ಗುಜರಾತ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ
ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಮತ್ತು ಎರಡನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ ತಂಡಗಳು ಮೇ 24 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ಎದುರಿಸಲಿವೆ. ಅಲ್ಲಿ ಗೆದ್ದವರು ನೇರ ಫೈನಲ್ ತಲುಪುತ್ತಾರೆ. ಸೋತವರಿಗೆ ಎರಡನೇ ಕ್ವಾಲಿಫೈಯರ್ (ಸೆಮಿಫೈನಲ್) ಅವಕಾಶವಿರುತ್ತದೆ. ಮೂರನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ನಾಲ್ಕನೇ ಸ್ಥಾನ ಪಡೆಯುವ ಡೆಲ್ಲಿ/ಆರ್‌ಸಿಬಿ ನಡುವೆ ಎಲಿಮಿನೇಟರ್ ಪಂದ್ಯ ಮೇ 25 ರಂದು ನಡೆಯಲಿದೆ. ಅಲ್ಲಿ ಸೋತವರು ಟೂರ್ನಿಯಿಂದ ಹೊರಬೀಳುತ್ತಾರೆ. ಗೆದ್ದವರು ಎರಡನೇ ಕ್ವಾಲಿಫೈಯರ್ (ಸೆಮಿಫೈನಲ್) ಪ್ರವೇಶಿಸುತ್ತಾರೆ. ಆ ಪಂದ್ಯ ಮೇ 27 ರಂದು ನಡೆಯಲಿದೆ. ಅಲ್ಲಿ ಗೆದ್ದವರು ಮೇ 29 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಸೆಣಸುತ್ತಾರೆ.