Homeಮುಖಪುಟ'ಸಂಸ್ಕೃತಿ ಇಲ್ಲದವರು ಕಾಡುಜನರಂತೆ ಇರುವರು': ಪರಿಷ್ಕೃತ ಪಠ್ಯದಲ್ಲಿ ಸ್ವಾಮಿ ವಿವೇಕಾನಂದರ ಪಾಠ ಸಂಪೂರ್ಣ ಬದಲು

‘ಸಂಸ್ಕೃತಿ ಇಲ್ಲದವರು ಕಾಡುಜನರಂತೆ ಇರುವರು’: ಪರಿಷ್ಕೃತ ಪಠ್ಯದಲ್ಲಿ ಸ್ವಾಮಿ ವಿವೇಕಾನಂದರ ಪಾಠ ಸಂಪೂರ್ಣ ಬದಲು

"ಸ್ವಮತಾಭಿಮಾನ, ಅನ್ಯಮತ ದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ...” ಎಂಬ ಸಂದೇಶವಿದ್ದ ಪಠ್ಯವನ್ನು ಕೈಬಿಡಲಾಗಿದೆ.

- Advertisement -
- Advertisement -

ಬಿಜೆಪಿ ಸರ್ಕಾರ ನೇಮಿಸಿದ್ದ ನೂತನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ 1 ರಿಂದ 10 ನೇರ ತರಗತಿ ಪಠ್ಯಗಳಲ್ಲಿ ಮಾಡಿರುವ ಬದಲಾವಣೆಗಳು ದೊಡ್ಡ ವಿವಾದ ಸೃಷ್ಟಿಸಿವೆ. ಬಹುತೇಕ ಬ್ರಾಹ್ಮಣ ಸದಸ್ಯರು ನೂತನ ಸಮಿತಿಯಲ್ಲಿದ್ದು ಪರಿಶಿಷ್ಟ, ಹಿಂದುಳಿದ ವರ್ಗದ ಲೇಖಕರ ಪಠ್ಯ ಕೈಬಿಟ್ಟು ಬ್ರಾಹ್ಮಣ ಲೇಖಕರ ಪಠ್ಯಗಳನ್ನು ಸೇರಿಸಲಾಗಿದೆ ಎಂಬ ಆರೋಪ ಜೋರಾಗಿದೆ. 10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಪಠ್ಯವನ್ನು ಸಂಪೂರ್ಣ ಕೈಬಿಟ್ಟು ಅದೇ ಶೀರ್ಷಿಕೆಯಲ್ಲಿ ಬೇರೆಯದೆ ಪಠ್ಯ ಸೇರಿಸಲಾಗಿದ್ದು, ವಿವೇಕಾನಂದರ ಚಿಂತನೆಗಳನ್ನು ತಿರುಚಿ ಅವರಿಗೆ ಕೆಟ್ಟ ಹೆಸರು ಬರುವ ಹಾಗೆ ಅಗೌರವ ತೋರಲಾಗಿದೆ ಎಂಬ ಆಪಾದನೆ ಕೇಳಿಬಂದಿದೆ.

ಈ ಹಿಂದಿನ ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಸಮಿತಿಯು ಪಠ್ಯಪೂರಕ ಅಧ್ಯಯನದ ಭಾಗವಾಗಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಪಠ್ಯವನ್ನು ಸೇರಿಸಿತ್ತು. ಅದರಲ್ಲಿ ವಿವೇಕಾನಂದರಿಗೆ ಬಡಜನರ ಬಗ್ಗೆ ಇದ್ದ ಪ್ರೀತಿ, ಹಸಿವು ಹೋಗಲಾಡಿಸಲು ಅವರು ಕರೆ ನೀಡಿದ್ದು, ಸರ್ವಧರ್ಮ ಸಹಿಷ್ಣುತೆಯ ವಿಚಾರಗಳನ್ನು ಸೇರಿಸಿ ಸರಳವಾಗಿ ಹೇಳಲಾಗಿತ್ತು. “ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ… ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು” ಎಂಬ ಚಿಕಾಗೋ ಸಮ್ಮೇಳನದ ಅವರ ಭಾಷಣವನ್ನು ಸೇರಿಸಲಾಗಿತ್ತು.

ಆದರೆ ನೂತನ ಸಮಿತಿಯ ಅದೇ ಹೆಸರಿನಲ್ಲಿ ಆ ಪಠ್ಯವನ್ನು ಸಂಪೂರ್ಣ ಕೈಬಿಟ್ಟು “ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ” ಎಂಬ ಅರ್ಥ ಬರುವ ಕಠಿಣ ಪಠ್ಯವನ್ನು ಸೇರಿಸಲಾಗಿದೆ. ಅಷ್ಟು ಮಾತ್ರವಲ್ಲದೇ ಕಾಡುಜನರಂತೆ ಇರುವರು ಎಂಬ ಹೋಲಿಕೆ ಮಾಡುವ ಮೂಲಕ ಈ ನಾಡಿನ ಮೂಲನಿವಾಸಿಗಳಾದ ಆದಿವಾಸಿಗಳನ್ನು ಅವಹೇಳನ ಮಾಡಿ, ಸಂಸ್ಕೃತಿಯ ವ್ಯಸನ ಹೇರಲಾಗಿದೆ. ‘ಕಾಡುಜನರಂತೆ ಇರುವರು’ ಎಂದು ಸ್ವಾಮಿ ವಿವೇಕಾನಂದರು ಎಲ್ಲಿಯೂ ಹೇಳಿರದಿದ್ದರೂ ಅವರ ಹೆಸರಿನಲ್ಲಿ ಆ ಪದಗಳನ್ನು ಹಾಕಿ ಅವಮಾನಿಸಲಾಗಿದೆ ಎಂದು ವಿವೇಕಾನಂದರ ಕುರಿತು ಅಧ್ಯಯನ ನಡೆಸಿರುವ ತಜ್ಞರು ತಿಳಿಸಿದ್ದಾರೆ.

ದೈಹಿಕ ಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆ; ಅನಂತರ ಆತ್ಮದ ಅವರ ಹಸಿವು, ವೇದಾಂತದ ಹಸಿವು, ಸಾಂಸ್ಥಿಕವಾದ ಧರ್ಮದ ಹಸಿವು. ಈ ಕಾರಣದಿಂದಾಗಿಯೇ ವಿವೇಕಾನಂದರು ಯಾವತ್ತೂ ಧಾರ್ಮಿಕ ಮೂಲಭೂತವಾದಿಯಾಗಿರಲಿಲ್ಲ. ಬದಲಾಗಿ ಧಾರ್ಮಿಕ ಮೂಲಭೂತವಾದಕ್ಕೆ ಉಗ್ರ ವಿರೋಧಿಯಾಗಿದ್ದರು. ಜಾತಿವಾದ ಮತ್ತು ಕೋಮುವಾದಕ್ಕೆ ಪ್ರತಿರೋಧವೊಡ್ಡಿದರು. ಹಿಂದೂಧರ್ಮದೊಳಗಿದ್ದೂ ಅದನ್ನು ಮೀರಿದ ಸಾಮಾಜಿಕ ಶಕ್ತಿಯಾದರು. ಆದ್ದರಿಂದ ಇಂದಿನ ಸನ್ನಿವೇಶದಲ್ಲಿ ಅವರು ಹೆಚ್ಚು ಪ್ರಸ್ತುತರು. ಇದು ಈ ಹಿಂದಿನ ಪಠ್ಯದಲ್ಲಿ ಸ್ವಾಮಿ ವಿವೇಕನಾಂದರನ್ನು ಕಟ್ಟಿಕೊಟ್ಟಿದ್ದ ಪರಿ. ಆದರೆ ಈಗಿನ ಪಠ್ಯದಲ್ಲಿ ನಮ್ಮ ಶಾಸ್ತ್ರಗಳಲ್ಲಿ ಹುದುಗಿರುವ, ಮಠ ಮತ್ತು ಆರಣ್ಯಗಳಲ್ಲಿ ಅಡಗಿರುವ ಕೆಲವೇ ವ್ಯಕ್ತಿಗಳ ಸ್ವತ್ತಾಗಿರುವ ಆಧ್ಯಾತ್ಮಿಕರತ್ನಗಳನ್ನು ದೇಶ ಭಾಷೆಗಳ ಮೂಲಕ ಜನರಿಗೆ ಪ್ರಚಾರ ಮಾಡಬೇಕು. ವೇದವೇದಾಂತಗಳ ಮುಖ್ಯ ಪಲ್ಲವಿಯೇ ಶ್ರದ್ದೆ ಎಂಬ ಪಠ್ಯ ಸೇರಿಸಲಾಗಿದೆ. ಹಿಂದಿನ ಪಠ್ಯ ವಿವೇಕಾನಂದರ ಸರ್ವರ ಏಳಿಗೆಯನ್ನು, ದೇಶದ ಪ್ರಗತಿಯ ಆಶಯವನ್ನು ಸಾರಿದರೆ, ಹೊಸ ಪಠ್ಯದಲ್ಲಿ ವೇದ ಶಾಸ್ತ್ರಗಳ ಕಾಲಕ್ಕೆ ತೆಗೆದುಕೊಂಡು ಹೋಗುವ ಹುನ್ನಾರ ನಡೆಸಲಾಗಿದೆ.

“ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ”. ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿ ಶೂದ್ರರು, ಅಸ್ಪಶ್ಯರು ಸ್ವಾತಂತ್ರ್ಯಹೀನರಾಗಿ ಗುಲಾಮತನ ಅನುಭವಿಸುವುದನ್ನು ಟೀಕಿಸುವ ವಿವೇಕಾನಂದರು ಶೂದ್ರವರ್ಗ ತನ್ನ ‘ಊಳಿಗ ಸ್ವಭಾವ’ವನ್ನು ಬಿಟ್ಟು ಹೊರಬರಬೇಕೆಂದು ಕರೆಕೊಡುತ್ತಾರೆ ಎಂಬುದು ಹಿಂದಿನ ಪಠ್ಯವಾಗಿದೆ. ಆಮೂಲಕ ಜಾತಿಪದ್ದತಿ ಮತ್ತು ಅಸ್ಪೃಶ್ಯತೆಯನ್ನು ಸ್ವಾಮಿ ವಿವೇಕಾನಂದರು ಕಟುವಾಗಿ ಟೀಕಿಸಿದ್ದರು ಎಂಬ ಆಶಯ ಸಾರಲಾಗಿದೆ.

ಆದರೆ ನೂತನ ಪಠ್ಯದಲ್ಲಿ, “ನಿಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಿಮ್ಮ ಮೇಲೆ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮುಖರಾಗಿ, ವೇದಾಂತದ ಸಂದೇಶವನ್ನು ಪ್ರತಿ ಮನೆಗೂ ಸಾರಿ, ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ, ಅನಂತರ ನೀವು ಎಷ್ಟೇ ಅಲ್ಪವನ್ನು ಸಾಧಿಸಿದ್ದರೂ ನೀವು ಒಂದು ಮಹಾ ಆದರ್ಶಕ್ಕಾಗಿ ಬಾಳಿ ದುಡಿದು ಮಡಿದಿರಿ ಎಂಬ ತೃಪ್ತಿಯಾದರೂ ಇರುತ್ತದೆ” ಎಂದು ಸೇರಿಸಲಾಗಿದೆ. ಆ ಮೂಲಕ ವೇದಾಂತ, ಪಾವಿತ್ರ್ಯ ಎಂಬ ಮಕ್ಕಳಿಗೆ ಅರ್ಥವಾಗದ ಪಾರಮಾರ್ಥಿಕ ಪದಗಳನ್ನು ಸೇರಿಸುವ ಮೂಲಕ ಕರ್ಮಠ ಬ್ರಾಹ್ಮಣ್ಯವನ್ನು ತುರುಕಲಾಗಿದೆ.

ಹಿಂದಿನ ಸಮಿತಿಯು ವಿವೇಕಾನಂದರ ಜನಪರ, ಜೀವಪರ ಆಲೋಚನೆಗಳನ್ನು ಪಠ್ಯವಾಗಿಸಿತ್ತು. ಅದನ್ನು ಕಿತ್ತೊಗೆದಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಅವರ ಪ್ರಖರ ವಿಚಾರಗಳನ್ನು ತಿರುಚಿ, ಆತ್ಮ, ಪಾರಮಾರ್ಥದಲ್ಲಿ ಅಂತ್ಯಗೊಳಿಸಿದೆ. ಮುಂಚಿನ ಸಮಿತಿ ಸುಮಾರು 350 ಪದಗಳ ಪಠ್ಯ ಇಟ್ಟಿದ್ದರೆ ಈಗಿನ ಸಮಿತಿಯು ಅದನ್ನು 240 ಪದಗಳಿಗೆ ಸಿಮೀತಗೊಳಿಸಿದೆ. ಈ ಕೆಳಗೆ ಎರಡೂ ಸಮಿತಿ ನೀಡಿರುವ ಪೂರ್ಣ ಪಠ್ಯವನ್ನು ಪ್ರಕಟಿಸಲಾಗಿದೆ. ಆಸಕ್ತರು ಓದಬಹುದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಿಂದಿನ ಸಮಿತಿಯ ಪಠ್ಯ (ಕೈಬಿಟ್ಟ ಪಠ್ಯ)

ವಿವೇಕಾನಂದರೆಂದರೆ ಸಾಮಾಜಿಕ ಸಂಕಟ, ಸಿಟ್ಟು, ಸ್ಫೋಟ, ಸ್ಪಷ್ಟತೆಗಳ ರೂಪಕ. ಅವರು ಶಿಖರ ಚಿಂತಕ, ಅವರ ಆಲೋಚನೆಯಲ್ಲಿ ಗೊಂದಲಗಳಿಲ್ಲ. ಕೆಲವೊಮ್ಮೆ ವೈರುದ್ಧದಂತೆ ಕಂಡರೂ ಅದು ಸಾಂದರ್ಭಿಕ ಪ್ರತಿಕ್ರಿಯೆಗಳ ಫಲ. ಅವರ ಎಲ್ಲ ವಿಚಾರಗಳನ್ನು ಒಟ್ಟಿಗೇ ನೋಡಿದಾಗ ಸ್ಪಷ್ಟ ನೋಟ ಕಾಣಿಸುತ್ತದೆ.

ದೈಹಿಕ ಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆ; ಅನಂತರ ಆತ್ಮದ ಅವರ ಹಸಿವು, ವೇದಾಂತದ ಹಸಿವು, ಸಾಂಸ್ಥಿಕವಾದ ಧರ್ಮದ ಹಸಿವು. ಈ ಕಾರಣದಿಂದಾಗಿಯೇ ವಿವೇಕಾನಂದರು ಯಾವತ್ತೂ ಧಾರ್ಮಿಕ ಮೂಲಭೂತವಾದಿಯಾಗಿರಲಿಲ್ಲ. ಬದಲಾಗಿ ಧಾರ್ಮಿಕ ಮೂಲಭೂತವಾದಕ್ಕೆ ಉಗ್ರ ವಿರೋಧಿಯಾಗಿದ್ದರು. ಜಾತಿವಾದ ಮತ್ತು ಕೋಮುವಾದಕ್ಕೆ ಪ್ರತಿರೋಧವೊಡ್ಡಿದರು. ಹಿಂದೂಧರ್ಮದೊಳಗಿದ್ದೂ ಅದನ್ನು ಮೀರಿದ ಸಾಮಾಜಿಕ ಶಕ್ತಿಯಾದರು. ಆದ್ದರಿಂದ ಇಂದಿನ ಸನ್ನಿವೇಶದಲ್ಲಿ ಅವರು ಹೆಚ್ಚು ಪ್ರಸ್ತುತರು. ಈ ಅಂಶವನ್ನು ಮುಂದಿನಂತೆ ಮತ್ತಷ್ಟು ವಿವರಿಸಬಹುದು: ಜಾತಿವಾದ ಮತ್ತು ಕೋಮುವಾದಗಳು ಮುನ್ನೆಲೆಗೆ ಬಂದು ಮಾನವೀಯ ಮೌಲ್ಯವನ್ನು ನುಂಗಿ ನೊಣೆಯುತ್ತಿವೆ. ಸಮಾನತೆಯ ಆಶಯಗಳನ್ನು ತಪ್ಪಿತಸ್ಥ ಶಾಲಾ ಬಾಲಕರಂತೆ ಹಿಂದಿನ ಸಾಲಿನಲ್ಲಿ ಕೈಕಟ್ಟಿ ನಿಲ್ಲಿಸಲಾಗಿದೆ. ಬಡಜನರ ಪರವಾದ ಆದ್ಯತೆಗಳು ಪಲ್ಲಟಗೊಳ್ಳುತ್ತಿವೆ. ವಿವೇಕಾನಂದರಿಗೆ ಬಡಜನರ ಹೊಟ್ಟೆಹಸಿವನ್ನು ಹಿಂಗಿಸುವುದು ಮೊದಲ ಆದ್ಯತೆಯಾಗಿತ್ತು. ಆನಂತರ ಧರ್ಮ, ಜಾತಿವಾದದ ವಿಷಯಕ್ಕೆ ಬಂದರೆ ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ ಅವರಿಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು. ಹೀಗಾಗಿಯೇ ಅವರು ಸಂಶಯಕ್ಕೆಡೆಯಿಲ್ಲದಂತೆ ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸಿದರು. ಅವರು “ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನೀಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ” ಎಂದು ಹೇಳಿದರು. ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿ ಶೂದ್ರರು, ಅಸ್ಪಶ್ಯರು ಸ್ವಾತಂತ್ರ್ಯಹೀನರಾಗಿ ಗುಲಾಮತನ ಅನುಭವಿಸುವುದನ್ನು ಟೀಕಿಸುವ ವಿವೇಕಾನಂದರು ಶೂದ್ರವರ್ಗ ತನ್ನ ಊಳಿಗ ಸ್ವಭಾವ’ವನ್ನು ಬಿಟ್ಟು ಹೊರಬರಬೇಕೆಂದು ಕರೆಕೊಡುತ್ತಾರೆ. ಮುಂದೊಮ್ಮೆ ಶೂದ್ರರು ತಮ್ಮ ಶೂದ್ರತ್ವದ ಶಕ್ತಿಯಿಂದಲೇ ಮೇಲೇಳುವ ಕಾಲಬರುತ್ತದೆ ಎಂದು ಭಾವಿಸುತ್ತಾರೆ ಮತ್ತು ವಿಶೇಷವೆಂದರೆ, ಮುಂದೆ ಬರುವುದು ಸಮತಾವಾದ, ಅರಾಜವಾದ, ಶೂನ್ಯವಾದಗಳು ಮುಂದಾಗಲಿರುವ ಸಮಾಜ ಕ್ರಾಂತಿಯ ಅರುಣೋದಯ” ಎಂದು ಘೋಷಿಸಿದ್ದಾರೆ.

ಕೋಮುವಾದದ ವಿಷಯಕ್ಕೆ ಬಂದರೆ ವಿವೇಕಾನಂದರೆಂದೂ ಏಕಸಂಸ್ಕೃತಿ ಮತ್ತು ಏಕ ಧರ್ಮ ವಿಸ್ತರಣೆಗಳ ಪರವಾಗಿರಲಿಲ್ಲ. ಅದು ಹಿಂದೂ ಧರ್ಮವಿರಲಿ, ಕ್ರೈಸ್ತ ಧರ್ಮವಿರಲಿ, ಇಸ್ಲಾಂ ಧರ್ಮವಿರಲಿ, ಏಕಧರ್ಮ ಶ್ರೇಷ್ಠತೆ ಮತ್ತು ವಿಸ್ತರಣೆಯು ಜೀವವಿರೋಧವೆಂದು ಅವರು ಭಾವಿಸಿದ್ದರು; ೧೧-೦೯-೧೮೯೩ ರಂದು ಚಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ಅವರು “ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ… ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದುವರೆಯುತ್ತಿತ್ತು” ಎಂದರು. ಇನ್ನೊಮ್ಮೆ ಅವರು ಹೀಗೆ ಹೇಳಿದರು : ಪ್ರತಿಯೊಬ್ಬರೂ ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬಾರದಿರಲಿ. ಈಗ ಧರ್ಮ ಮತ್ತು ಆಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ….. ನಾವು ಎಲ್ಲ ಧರ್ಮಗಳಿಗೂ ಗೌರವವನ್ನು ತೋರಬೇಕು.”

ವಿವೇಕಾನಂದರ ಧಾರ್ಮಿಕ ಚಿಂತನೆಗಳನ್ನು ಅವಲೋಕಿಸಿದಾಗ ಅವರು ಸ್ಪಷ್ಟವಾಗಿ ಕೋಮುವಾದ ವಿರೋಧಿಯಾಗಿದ್ದರೆಂದು ತಿಳಿದುಬರುತ್ತದೆ. ಕೋಮುವಾದವು ಏಕಧರ್ಮ ಮತ್ತು ಏಕಸಂಸ್ಕೃತಿಯೇ ಶ್ರೇಷ್ಠವೆಂದೂ ಅದೇ ಅಂತಿಮವೆಂದೂ ನಂಬುತ್ತ ನಂಬಿಸುತ್ತ, ಪರಮಧರ್ಮ ದ್ವೇಷವನ್ನು ಬಿತ್ತಿ ಬೆಳೆಸುತ್ತದೆ. ಇಂತಹ ಪ್ರವೃತ್ತಿಗೆ ವಿವೇಕಾನಂದರು ಕಟ್ಟಾ ವಿರೋಧಿಯಾಗಿದ್ದರು. ಕುವೆಂಪು ಅವರು ಹೇಳುವಂತೆ ಅವರು ‘ಮಾನವತಾಮಿತ್ರ’ರಾಗಿದ್ದರು. “ಮನುಷ್ಯತ್ವದ ಮಹಿಮೆಯನ್ನು ಎಂದಿಗೂ ಮರೆಯಬೇಡಿ. ನಮಗಿಂತಲೂ ಬೇರೆಯಾದ ದೇವರು ಹಿಂದೆ ಇರಲಿಲ್ಲ. ಮುಂದೆ ಬರುವುದಿಲ್ಲ. ಕ್ರೈಸ್ತ, ಬುದ್ಧ, ಕೃಷ್ಣ, ರಾಮರೆಲ್ಲ ಅಹಮಸ್ಮಿ ಎಂಬ ಮಹಾವಾರಿಧಿಯ ತರಂಗಗಳು ಮಾತ್ರ” ಎಂದು ಘೋಷಿಸಿದರು.

ವಿವೇಕಾನಂದರ ‘ಧೀರೋದಾತ್ತ’ ನಿಲುವುಗಳು ವೈಯಕ್ತಿಕ ಮಾತ್ರವಾಗದೆ ಸಾಮಾಜಿಕವಾಗಿ ರೂಪಾಂತರಗೊಂಡು ಗಟ್ಟಿಯಾದದ್ದೇ ಅವರ ವ್ಯಕ್ತಿತ್ವದ ವಿಶೇಷ; ಅವರದು ಪ್ರಖರ ಸಾಮಾಜಿಕ ವ್ಯಕ್ತಿತ್ವ, ದೀನ ದಲಿತರ ಉದ್ಧಾರವೇ ಅವರ ಧರ್ಮದ ಮೊದಲ ತತ್ವ: ಅದೇ ಅವರ ವೈಚಾರಿಕ ಸತ್ವ. ಆದ್ದರಿಂದ ವಿವೇಕಾನಂದರು ಇಂದಿಗೂ ಸತ್ಯ.

ನೂತನ ಸಮಿತಿಯ ಪಠ್ಯ (ಸೇರಿಸಿದ ಪಠ್ಯ)

ದೇಶದ ಭಾಷೆಯಲ್ಲಿ ಜನರಿಗೆ ಭಾವನೆಗಳನ್ನು ನೀಡಿ. ಅವರು ವಿಷಯಗ್ರಹಣ ಮಾಡಿಕೊಳ್ಳುವರು, ಆದರೆ ಅವರಿಗೆ ಮತ್ತೊಂದು ಅವಶ್ಯಕತೆ ಇದೆ. ಅದು ಸಂಸ್ಕೃತಿ. ನೀವು ಅವರಿಗೆ ಇದನ್ನು ಕೊಡುವ ತನಕ ಅವರ ಪ್ರಗತಿ ಸ್ಥಿರವಾಗಲಾರದು. ಸಂಸ್ಕೃತಿ ಮಾತ್ರ ಆಘಾತವನ್ನು ಸಹಿಸಬಲ್ಲದು, ಕೇವಲ ಜ್ಞಾನರಾಶಿಗೆ ಅದನ್ನು ಎದುರಿಸುವ ಶಕ್ತಿ ಇಲ್ಲ. ಜಗತ್ತಿಗೆ ಜ್ಞಾನರಾಶಿಯನ್ನೇ ಕೊಡಬಹುದು. ಆದರೆ ಅದರಿಂದ ಹೆಚ್ಚು ಪ್ರಯೋಜನವಿಲ್ಲ. ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಆದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ.

ನಮ್ಮ ಶಾಸ್ತ್ರಗಳಲ್ಲಿ ಹುದುಗಿರುವ, ಮಠ ಮತ್ತು ಆರಣ್ಯಗಳಲ್ಲಿ ಅಡಗಿರುವ ಕೆಲವೇ ವ್ಯಕ್ತಿಗಳ ಸ್ವತ್ತಾಗಿರುವ ಆಧ್ಯಾತ್ಮಿಕ ರತ್ನಗಳನ್ನು ದೇಶ ಭಾಷೆಗಳ ಮೂಲಕ ಜನರಿಗೆ ಪ್ರಚಾರ ಮಾಡಬೇಕು. ವೇದವೇದಾಂತಗಳ ಮುಖ್ಯ ಪಲ್ಲವಿಯೇ ಶ್ರದ್ದೆ. ಯಾವ ಶದ್ಧೆಯ ಮೂಲಕ ನಚಿಕೇತನು ಯಮರಾಜನನ್ನು ಕೂಡ ಸಂದರ್ಶಿಸಿ ಪ್ರಶ್ನೆ ಮಾಡುವುದಕ್ಕೆ ಧೈರ್ಯ ಹೊಂದಿದನೋ, ಯಾವ ಶ್ರದ್ಧೆಯ ಮೂಲಕ ಪ್ರಪಂಚ ಚಲಿಸುತ್ತಿರುವುದೋ- ಅಂತಹ ಶ್ರದ್ಧೆಯು ನಾಶವಾಗುತ್ತಿದೆ. ಇದರ ಪರಿಹಾರಕ್ಕಾಗಿ ಮೊದಲು ಆತ್ಮಜ್ಞಾನ ಪ್ರಚಾರವಾಗಬೇಕು.

ಯಾರೂ ದುರ್ಬಲರಲ್ಲ, ಆತ್ಮ ಸರ್ವಶಕ್ತಿ, ಸರ್ವಜ್ಞ, ಏಳಿ, ಯಾರಿಗೂ ಮಣಿಯಬೇಡಿ, ನಿಮ್ಮಲ್ಲಿರುವ ಭಗವಂತನನ್ನು ವ್ಯಕ್ತಗೊಳಿಸಿ. ಅದನ್ನು ಅಲ್ಲಗಳೆಯಬೇಡಿ, ಏಳಿ, ದುರ್ಬಲತೆಯ ಪರವಶತೆಯಿಂದ ಪಾರಾಗಿ, ಪಾರಾಗುವುದಕ್ಕೆ ಮಾರ್ಗ ನಿಮ್ಮ ಶಾಸ್ತ್ರಗಳಲ್ಲಿಯೇ ಇದೆ. ನಿಜವಾದ ಆತ್ಮನ ವಿಷಯವನ್ನು ನೀವು ಕೇಳಿ, ಇತರರಿಗೆ ಬೋಧಿಸಿ, ನಿದ್ರಿಸುವವರನ್ನು ಎಬ್ಬಿಸಿ, ಅವರು ಹೇಗೆ ಜಾಗೃತರಾಗುತ್ತಾರೆ ಎಂಬುದನ್ನು ನೋಡಿ. ಆಗ ಶಕ್ತಿ ಬರುವುದು, ಮಹಿಮೆ ಬರುವುದು, ಶ್ರೇಯಸ್ಸು ಬರುವುದು, ಪಾವಿತ್ರ್ಯ ಬರುವುದು. ಈಗ ನಿದ್ರಿಸುತ್ತಿರುವ ಜೀವ ಜಾಗೃತವಾಗಿ ಕಾರ್ಯೋನ್ಮುಖನಾಗುವಾಗ ಅವನಲ್ಲಿ ಎಲ್ಲ ಕಲ್ಯಾಣ ಗುಣಗಳೂ ಬರುವುವು.

ನಿಮ್ಮ ದೇಶದ ಮತ್ತು ಇಡಿಯ ಜಗತ್ತಿನ ಕಲ್ಯಾಣ ನಿಮ್ಮ ಮೇಲೆ ನಿಂತಿದೆ ಎಂದು ಭಾವಿಸಿ ಕಾರ್ಯೋನ್ಮುಖರಾಗಿ, ವೇದಾಂತದ ಸಂದೇಶವನ್ನು ಪ್ರತಿ ಮನೆಗೂ ಸಾರಿ, ಪ್ರತಿಯೊಂದು ಆತ್ಮದಲ್ಲಿರುವ ಸುಪ್ತ ಪಾವಿತ್ರ್ಯವನ್ನು ಜಾಗೃತಗೊಳಿಸಿ, ಅನಂತರ ನೀವು ಎಷ್ಟೇ ಅಲ್ಪವನ್ನು ಸಾಧಿಸಿದ್ದರೂ ನೀವು ಒಂದು ಮಹಾ ಆದರ್ಶಕ್ಕಾಗಿ ಬಾಳಿ ದುಡಿದು ಮಡಿದಿರಿ ಎಂಬ ತೃಪ್ತಿಯಾದರೂ ಇರುತ್ತದೆ.

ಇದನ್ನೂ ಓದಿ: ಭಗತ್ ಸಿಂಗ್ ಬದಲು ಹೆಡಗೇವಾರ್ ಪಾಠ; ಮಕ್ಕಳ ಮೇಲೆ ಹಿಂದುತ್ವದ ಪ್ರಯೋಗ

ಈ ಆತ್ಮದ ಅನಂತ ಶಕ್ತಿಯನ್ನು ಭೌತಿಕ ಪ್ರಪಂಚದ ಮೇಲೆ ಬೀರಿದರೆ ಹಲವು ಭೌತಿಕ ಬೆಳವಣಿಗೆಗಳಾಗುವುವು. ಆಲೋಚನಾ ಪ್ರಪಂಚದ ಮೇಲೆ ಬೀರಿದರೆ ಬುದ್ಧಿ ತನ್ನ ಪರಾಕಾಷ್ಠೆಯನ್ನು ಮುಟ್ಟುವುದು, ತನ್ನ ಮೇಲೆಯೇ ಅದನ್ನು ಬೀರಿಕೊಂಡರೆ ಮಾನವನನ್ನು ದೇವನನ್ನಾಗಿ ಮಾಡುವುದು. ಮೊದಲು ನಾವು ದೇವರಾಗೋಣ, ಆನಂತರ ಇತರರು ದೇವರಾಗಲು ಅವರಿಗೆ ಸಹಾಯ ಮಾಡೋಣ. ಆದ್ದರಿಂದ ಆರ್ಯಮಾತೆಯ ಪುತ್ರರಿರಾ ಎಚ್ಚರಗೊಳ್ಳಿ, ಎದ್ದೇಳಿ: ಸೋಮಾರಿಗಳಾಗಬೇಡಿ: ಗುರಿಯು ದೊರಕುವವರೆಗೂ ನಿಲ್ಲಬೇಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. New text books refined as truth based is good move..
    Lots of history hidden in last samithi…
    Tried to apraise sm kings misdeeds and hide real agendas happening in India since decades like happened in near by countries like Afghan etc..
    Failures of succeeding India is also a pain for sm fake patriotics.
    Fake patriotics are the best tools for these anti nationalist.

LEAVE A REPLY

Please enter your comment!
Please enter your name here

- Advertisment -

Must Read

ರಾಷ್ಟ್ರದ ಭದ್ರತೆಗೆ ಬೆದರಿಕೆಯಾಗಿರುವ ನೂಪುರ್ ಶರ್ಮಾ ಇಡೀ ದೇಶದ ಎದುರು ಕ್ಷಮೆ ಕೇಳಬೇಕು: ಸುಪ್ರೀಂ

0
ಪ್ರವಾದಿ ಮೊಹಮ್ಮದ್‌ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಇಡೀ ರಾಷ್ಟ್ರದ ಎದುರು ಕ್ಷಮೆ ಕೇಳಬೇಕೆಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ. ತನ್ನ ಮೇಲೆ ದೇಶಾದ್ಯಂತ ದಾಖಲಾಗಿರುವ ಪ್ರಕರಣಗಳನ್ನು ಒಂದೇ ಎಫ್‌ಐಆರ್‌ಗೆ ವರ್ಗಾಹಿಸುವಂತೆ...