Homeಕರ್ನಾಟಕHijab Live | ಹಿಜಾಬ್‌ ಅರ್ಜಿ ವಿಚಾರಣೆ | ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ...

Hijab Live | ಹಿಜಾಬ್‌ ಅರ್ಜಿ ವಿಚಾರಣೆ | ಶಾಂತಿ ಕಾಪಾಡುವಂತೆ ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದ ಹೈಕೋರ್ಟ್‌

- Advertisement -
- Advertisement -

ಉಡುಪಿ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪ್ರವೇಶ ನಿರಾಕರಿಸಿರುವುದನ್ನು ಪ್ರಶ್ನಿಸಿ, ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶ ನೀಡುವಂತೆ ಕೋರಿ ಹಾಕಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮಂಗಳವಾರ ಪ್ರಾರಂಭಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ನಾಲ್ಕು ಅರ್ಜಿಗಳ ವಿಚಾರಣೆಯನ್ನು ಕೋರ್ಟ್‌ ನಡೆಸಿದೆ. ಈ ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಕೋರ್ಟ್ ಮುಂದೂಡಿದೆ.

ಹಿಜಾಬ್ ಧರಿಸಿದ ಏಕೈಕ ಕಾರಣಕ್ಕಾಗಿ ಶಿಕ್ಷಣ ಸಂಸ್ಥೆಗಳು ಅರ್ಜಿದಾರರು ಮತ್ತು ಇತರ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರವೇಶವನ್ನು ನಿರಾಕರಿಸುವ ಮೂಲಕ ತಾರತಮ್ಯ ಮಾಡುತ್ತಿವೆ ಎಂದು ಅರ್ಜಿದಾರ ವಿದ್ಯಾರ್ಥಿಗಳು ವಾದಿಸಿದ್ದಾರೆ.

ಜೂಮ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಯಲ್ಲಿ ಭಾಗಿಯಾಗಿರುವ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಸರ್ಕಾರದ ಪರವಾಗಿ ವಾದಿಸುತ್ತಿದ್ದು, ವಿದ್ಯಾರ್ಥಿನಿಯರ ಪರವಾಗಿ ಹಿರಿಯ ವಕೀಲ ದೇವದತ್ತ ಕಾಮತ್‌ ಮತ್ತು ಮೊಹಮ್ಮದ್ ತಾಹೀರ್‌ ವಾದಿಸುತ್ತಿದ್ದಾರೆ. ಈಗಾಗಲೇ ಹಿಜಾಬ್‌ ಪರವಾಗಿ ಹಲವಾರು ವಿಷಯಗಳನ್ನು ನ್ಯಾಯಾಲಯದಲ್ಲಿ ಹಿರಿಯ ವಕೀಲ ದೇವದತ್ತ ಕಾಮತ್‌ ಮಂಡಿಸಿದ್ದಾರೆ.

ನ್ಯಾಯಾಲಯವು ಅರ್ಜಿದಾರರ ವಾದಗಳನ್ನು ಆಲಿಸಿ ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಲು ವಿನಂತಿಸಿದೆ.

ಹಿಜಾಬ್‌ ಧರಿಸಿ ಕಾಲೇಜಿಗೆ ಪ್ರವೇಶಕೋರಿ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ವಿಚಾರಣೆಯನ್ನ ಬೋಜನದ ನಂತರ ಮುಂದೂಡಿದ್ದರು. ಬೆಳಗ್ಗಿನ ವಾದಗಳ ಬಗ್ಗೆ ಸಂಕ್ಷಿಪ್ತವಾಗಿ ಇಲ್ಲಿ ಓದಿ ( ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶ ಕೋರಿ ವಿದ್ಯಾರ್ಥಿನಿಯರ ಅರ್ಜಿ ವಿಚಾರಣೆ). ಮಧ್ಯಾಹ್ನದ ನಂತರದ ವಿಚಾರಣೆ ಸಂಕ್ಷಿಪ್ತ ವಿವರಣೆ ಇಲ್ಲಿದೆ.

  • ವಿಚಾರಣೆ ಪುನರಾರಂಭ.
  • ಜೂಮ್ ಮೀಟಿಂಗ್‌ನಲ್ಲಿ ಭಾಗವಹಿಸಿದವವ ಸಂಖ್ಯೆ ಮಿತಿ ಮೀರಿರುವುದರಿಂದ ಸರ್ಕಾರದ ಪರವಾಗಿ ವಾದ ಮಂಡಿಸಲು ಅಡ್ವಕೇಟ್‌ ಜನರಲ್‌ಗೆ ಜೂಮ್‌ ವಿಡಿಯೊ ಕಾನ್ಪರೆನ್ಸ್‌ಗೆ ಸೇರಲು ಸಾಧ್ಯವಾಗುತ್ತಿಲ್ಲ ಎಂದು ವಕೀಲರೊಬ್ಬರು ನ್ಯಾಯಾಲಯಕ್ಕೆ ಹೇಳಿದ್ದು, ಅನಗತ್ಯವಾಗಿ ಭಾಗವಹಿಸುವವರನ್ನು ತೆಗೆದುಹಾಕಲು ವಿನಂತಿಯನ್ನು ಮಾಡಲಾಗಿದೆ.
  • ಕೆಲವು ಜನರು ತೊರೆಯುತ್ತಿದ್ದಂತೆ, ಅನೇಕ ಹೊಸಬರು ಸೇರಿಕೊಳ್ಳುತ್ತಿದ್ದಾರೆ ಎಂದು ವಕೀಲರು ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.
  • ಅಡ್ವಕೇಟ್‌ ಜನರಲ್‌(ಎಜಿ) ಸೇರಿದ್ದಾರೆ ಎಂದು ಎಎಜಿ ಮಾಹಿತಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
  • ನ್ಯಾಯಮೂರ್ತಿ ದೀಕ್ಷಿತ್: ಮತ್ತೆ ನಮ್ಮ ಪ್ರಯಾಣ ಆರಂಭಿಸೋಣ.
  • ಖಾಸಗಿ ಶಾಲೆಯಲ್ಲಿ ಹೆಡ್ ಸ್ಕಾರ್ಫ್‌ಗೆ ಅವಕಾಶ ನೀಡದ, “ನ್ಯಾಯಮೂರ್ತಿ ಮುಹಮ್ಮದ್ ಮುಸ್ತಾಕ್ ಅವರ ಕೇರಳ ಹೈಕೋರ್ಟ್‌ನ 2018” ರ ತೀರ್ಪನ್ನು ಉಲ್ಲೇಖಿಸಿದ ವಕೀಲ ಕಾಮತ್, ಅದು ಕ್ರಿಶ್ಚಿಯನ್ ಮ್ಯಾನೇಜ್ಮೆಂಟ್ ಶಾಲೆ ಎಂದು ಹೈಲೈಟ್ ಮಾಡಿದ್ದು, ಆದ್ದರಿಂದ ಈ ತೀರ್ಪಿನ ಪರಿಗಣನೆಗಳು ವಿಭಿನ್ನವಾಗಿವೆ ಎಂದು ಹೇಳಿದ್ದಾರೆ.
  • “ಅಲ್ಪಸಂಖ್ಯಾತ ಸಂಸ್ಥೆಗಳಲ್ಲಿ ಮೂಲಭೂತ ಹಕ್ಕುಗಳ ಸ್ವರೂಪಗಳು ಸರ್ಕಾರಿ ಸಂಸ್ಥೆಯಲ್ಲಿ ಭಿನ್ನವಾಗಿರುತ್ತವೆ” ಎಂದು ಹೇಳಿದ್ದಾರೆ.
  •  ಈ ವೇಳೆ, “ಇದಕ್ಕೆ ಏನಾದರೂ ಅಧಿಕಾರವಿದೆಯೇ?” ಎಂದು ನ್ಯಾಯಮೂರ್ತಿ ದೀಕ್ಷಿತ್ ಪ್ರಶ್ನಿಸುತ್ತಾರೆ.
  • ಇದಕ್ಕೆ ಉತ್ತಿರಿಸಿದ ಕಾಮತ್‌‌, “ಹೌದು, 30 ನೇ ವಿಧಿಯು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಕೆಲವು ಹಕ್ಕುಗಳನ್ನು ನೀಡುತ್ತದೆ” ಎಂದು ತಿಳಿಸಯತ್ತಾರೆ.
  • ನ್ಯಾಯಮೂರ್ತಿ ದೀಕ್ಷಿತ್: ಹಾಗಾದರೆ ಇದು ಎರಡು ಮೂಲಭೂತ ಹಕ್ಕುಗಳು ಪೈಪೋಟಿ ನಡೆಸುತ್ತಿರುವ ಪ್ರಕರಣವೇ?
  • ಕಾಮತ್: ಹೌದು, 30 ನೇ ವಿಧಿಗೆ ಪ್ರಾಮುಖ್ಯತೆ ನೀಡಲಾಗಿದೆ. ಆರ್ಟಿಕಲ್ 30 ಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗಿದೆ ಮತ್ತು ವಿದ್ಯಾರ್ಥಿನಿಯರ ಹಕ್ಕು ಆರ್ಟಿಕಲ್‌ 25 ರದ್ದಾಗಿದೆ.
  • ವಿದ್ಯಾರ್ಥಿಯ ವೈಯಕ್ತಿಕ ಹಕ್ಕಿಗಿಂತ ಆ ಸಂದರ್ಭದಲ್ಲಿ ಪ್ರಾಮುಖ್ಯತೆ ನೀಡಿದ ಸಂಸ್ಥೆಯನ್ನು ನಿರ್ವಹಿಸುವುದು ಅಲ್ಪಸಂಖ್ಯಾತ ಆಡಳಿತದ ಹಕ್ಕು ಎಂದು ಕಾಮತ್ ನ್ಯಾಯಾಲಯಕ್ಕೆ ಹೇಳುತ್ತಾರೆ.
  • ಕಾಮತ್: ಕೇರಳ ಹೈಕೋರ್ಟ್‌ ತೀರ್ಪು ಖಾಸಗಿ ಅಲ್ಪಸಂಖ್ಯಾತ ಸಂಸ್ಥೆಗೆ ಸೀಮಿತವಾಗಿದ್ದು, ಅದು ಸರ್ಕಾರಿ ಸಂಸ್ಥೆಯಾಗಿರಲಿಲ್ಲ. ಹೀಗಾಗಿ, ಕೇರಳ ಹೈಕೋರ್ಟ್‌ ತೀರ್ಪು ಇಲ್ಲಿಗೆ ಅನ್ವಯಿಸದು.
  • ಜಸ್ಟಿಸ್ ದೀಕ್ಷಿತ್: ಸ್ವಲ್ಪ ಇರಿ, ನಾನು ಕೆಲವು ಟಿಪ್ಪಣಿಗಳನ್ನು ಮಾಡುತ್ತೇನೆ.
  • ನ್ಯಾಯಮೂರ್ತಿ ದೀಕ್ಷಿತ್ ಅವರ ಟಿಪ್ಪಣಿಗಳು: “ಕಾಮತ್ ಅವರು ಕೇರಳದ ಮತ್ತೊಂದು ಹೈಕೋರ್ಟ್ ತೀರ್ಪಿನತ್ತ ಗಮನ ಸೆಳೆಯುತ್ತಾರೆ. ಇದು ಎರಡು ಘಟಕಗಳ ಸ್ಪರ್ಧಾತ್ಮಕ ಹಕ್ಕುಗಳನ್ನು ಒಳಗೊಂಡಿರುವ ಪ್ರಕರಣವಾಗಿದ್ದು, ಅದರಲ್ಲಿ ಒಂದು ವಿದ್ಯಾರ್ಥಿಗಳು ಮತ್ತು ಇನ್ನೊಂದು ಅಲ್ಪಸಂಖ್ಯಾತ ಸಂಸ್ಥೆ. ಅಲ್ಲಿ ಆರ್ಟಿಕಲ್‌ 25 ರ ಅಡಿಯಲ್ಲಿ ಪಡೆದ ಹಕ್ಕುಗಳನ್ನು ಆರ್ಟಿಕಲ್ 29 ಮತ್ತು 30 ರ ಅಡಿಯಲ್ಲಿ ಹಕ್ಕುಗಳಿಗೆ ಅಧೀನ ಎಂದು ಪರಿಗಣಿಸಲಾಗಿದೆ. ಹಾಗಾಗಿ ಆ ಆಕ್ಷೇಪಾರ್ಹ ಆದೇಶವು ಈ ಪರಿದಿಯಲ್ಲಿ ಬರುವುದಿಲ್ಲ ಎಂದು ನ್ಯಾಯಮೂರ್ತೀ ದೀಕ್ಷಿತ್ ಹೇಳಿದ್ದಾರೆ.
  • ಕಾಮತ್‌ ಅವರು ಸರ್ಕಾರದ ಆದೇಶ ಮೂರನೇ ನಿರ್ಧಾರದ “ಬಾಂಬೆ ಹೈಕೋರ್ಟ್‌ನ ಫಾತೀಮಾ ಹುಸೇನ್ ಸಯೀದ್‌‌ ಪ್ರಕರಣ (2003)”ವನ್ನು ಉಲ್ಲೇಖಿಸುತ್ತಾರೆ.
  • ಈ ನಿರ್ಧಾರವು ವಿಶೇಷವಾಗಿ ಹೆಣ್ಣುಮಕ್ಕಳ ಶಾಲೆಯ ಹಿನ್ನೆಲೆಯಲ್ಲಿ ಪರಿಗಣಿಸಲಾಗಿದೆ ಎಂದು ಕಾಮತ್ ಹೇಳುತ್ತಾರೆ. ಬಾಲಕಿಯರ ಶಾಲೆಯಲ್ಲಿ ಓದುವಾಗ ಮುಸ್ಲಿಂ ಹುಡುಗಿ ತನ್ನ ತಲೆಯನ್ನು ಮುಚ್ಚಿಕೊಳ್ಳುವುದು ಕಡ್ಡಾಯವಲ್ಲ ಎಂದು ಬಾಂಬೆ ನ್ಯಾಯಾಲಯ ಹೇಳಿದೆ.
  • ಈ ವೇಳೆ ನ್ಯಾಯಮೂರ್ತಿ ದೀಕ್ಷಿತ್ ಅವರು ವಾದವನ್ನು ನೋಟ್‌ ಮಾಡಿ, “ಪ್ರಸ್ತುತ ಪ್ರಶ್ನೆಯಲ್ಲಿರುವ ಸಂಸ್ಥೆಯು ವಿಶೇಷವಾಗಿ ಬಾಲಕಿಯರ ಶಾಲೆಯಾಗಿತ್ತು….(ಇಷ್ಟು ಹೊತ್ತಿಗೆ ಪೀಠದ ಸಂಪರ್ಕವು ತಪ್ಪಿ ಹೋಗುತ್ತದೆ).
  • “ಪ್ರಾಂಶುಪಾಲರ ನಿರ್ದೇಶನದ ನಂತರ ಬಾಲಕಿ ತಲೆಗೆ ಸ್ಕಾರ್ಫ್ ಧರಿಸದೆ ಶಾಲೆಗೆ ಹೋಗುತ್ತಿದ್ದಳು ಎಂದು ಹೇಳುವ ತೀರ್ಪಿನ ಕೊನೆಯ ಪ್ಯಾರಾವನ್ನು ನ್ಯಾಯಮೂರ್ತಿ ದೀಕ್ಷಿತ್ ಎತ್ತಿ ತೋರಿಸುತ್ತಾರೆ.
  • ಇದಕ್ಕೆ ಉತ್ತರಿಸುವ ಕಾಮತ್‌ ಅವರು, ಇದು ತೀರ್ಪಿನ ಅನುಪಾತದ ಮೇಲೆ ಪ್ರಭಾವ ಬೀರಿಲ್ಲ ಎಂದು ಉಲ್ಲೇಖಿಸುತ್ತಾರೆ.
  • ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾದ ಮೂರನೇ ನಿರ್ಧಾರವು ಆರ್ಟಿಕಲ್‌‌ 25 ರೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅದಲ್ಲಿ ಶಿಕ್ಷಕರಿಗೆ ಡ್ರೆಸ್ ಕೋಡ್ ಅನ್ನು ಸೂಚಿಸಲಾಗಿದೆ. ಶಿಕ್ಷಕರು ನಿರ್ದಿಷ್ಟ ಡ್ರೆಸ್ ಕೋಡ್ ಧರಿಸಬೇಕೇ ಎಂಬುದು ಪ್ರಶ್ನೆಯಾಗಿತ್ತು. ಅಲ್ಲಿ ಯಾವುದೇ ಆರ್ಟಿಕಲ್ 25 ಸಮಸ್ಯೆ ಅಥವಾ ಹಿಜಾಬ್ ಒಳಗೊಂಡಿರಲಿಲ್ಲ.
  • ಹಿಜಾಬ್ ಮೂಲಭೂತ ಹಕ್ಕಲ್ಲ ಎಂಬುದಕ್ಕೆ ತೀರ್ಪುಗಳ ಆಧಾರದಲ್ಲಿ ಹೇಳಲಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ ಇದು ಕೇರಳ, ಮದ್ರಾಸ್ ಮತ್ತು ಬಾಂಬೆ ಹೈಕೋರ್ಟ್‌ಗಳ ತೀರ್ಪುಗಳನ್ನು ಅನುಸರಿಸುವುದಿಲ್ಲ ಎಂದು ಕಾಮತ್‌ ತಿಳಿಸುತ್ತಾರೆ.
  • ಪರ್ದಾ/ಬುರ್ಖಾ ಧರಿಸಿರುವ ಮುಸ್ಲಿಂ ಮಹಿಳೆಯರನ್ನು ಮತದಾರರ ಪಟ್ಟಿಗಾಗಿ ಛಾಯಾಚಿತ್ರ ಮಾಡಬಹುದೇ ಎಂಬ ವಿಷಯದ ಕುರಿತು ವ್ಯವಹರಿಸಿದ ಮತ್ತೊಂದು ಮದ್ರಾಸ್ ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಕಾಮತ್, ಈ ನಿರ್ಧಾರವು ಸ್ಕಾರ್ಫ್ ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳುತ್ತಾರೆ.
  • “ಹೀಗಾಗಿ, ಪರ್ದಾ ಅತ್ಯಗತ್ಯವಲ್ಲ ಆದರೆ ಸ್ಕಾರ್ಫ್‌ನಿಂದ ತಲೆಯನ್ನು ಮುಚ್ಚುವುದು ಕಡ್ಡಾಯವಾಗಿದೆ ಎಂದು ಮುಸ್ಲಿಂ ವಿದ್ವಾಂಸರಲ್ಲಿ ಬಹುತೇಕ ಏಕಾಭಿಪ್ರಾಯವಿದೆ” ಎಂಬ ಮದ್ರಾಸ್ ಹೈಕೋರ್ಟ್‌‌ ನೀಡಿದ ತೀರ್ಪನ್ನು ಕಾಮತ್‌ ಅವರು ಉಲ್ಲೇಖಿಸುತ್ತಾರೆ.
  • ಕಾಮತ್ ಅವರು ಬಿಜೋ ಇಮ್ಯಾನುಯೆಲ್ ವಿರುದ್ಧ ಕೇರಳ ರಾಜ್ಯದ ತೀರ್ಪನ್ನು ಉಲ್ಲೇಖಿತ್ತಾರೆ.
  • ಈ ವೇಳೆ ನ್ಯಾಯಮೂರ್ತಿ ದೀಕ್ಷಿತ್, ಕೇರಳದಿಂದ ಹೆಚ್ಚು ತೀರ್ಪುಗಳು ಬಂದಂತಿದೆ ಎಂದು ಹೇಳುತ್ತಾರೆ.
  • “ಹಾಗೆ ಕರ್ನಾಟಕದ ತೀರ್ಪುಗಳೂ ಇವೆ. ಶಿರೂರು ಮಠ. ಈ ರಾಜ್ಯಗಳು ಸಾಂವಿಧಾನಿಕ ಕಾನೂನಿನ ಭದ್ರಕೋಟೆ” ಎಂದು ತೋರುತ್ತದೆ ಎಂದು ಕಾಮತ್ ಹೇಳುತ್ತಾರೆ.
  • ಬಿಜೋ ಇಮ್ಯಾನುಯೆಲ್ ಪ್ರಕರಣದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆಯನ್ನು ನುಡಿಸಿದಾಗ ಗೌರವದಿಂದ ಎದ್ದು ನಿಂತರು ಆದರೆ ಅವರ ನಂಬಿಕೆಯ ಕಾರಣ ಹಾಡಲಿಲ್ಲ ಎಂದು ಕಾಮತ್ ಹೇಳುತ್ತಾರೆ.
  • ಎಲ್ಲಾ ಪ್ರಕರಣಗಳ ಸತ್ಯಗಳು ಒಂದೇ ಆಗಿವೆ. ಇಲ್ಲಿಯ ವಿದ್ಯಾರ್ಥಿಗಳು ಪ್ರವೇಶ ಪಡೆದ ದಿನದಿಂದ ಇನ್ನೊಬ್ಬರು ಇದು ನಿಯಮಗಳ ಉಲ್ಲಂಘನೆ ಎಂದು ಭಾವಿಸುವವರೂ ಯಾರಿಗೂ ತೊಂದರೆಯಾಗದಂತೆ ತಲೆಗೆ ಸ್ಕಾರ್ಫ್ ಧರಿಸಿದ್ದರು ಎಂದು ಕಾಮತ್‌ ಹೇಳಿದ್ದಾರೆ.
  • ರತಿಲಾಲ್ ತೀರ್ಪನ್ನು ಉಲ್ಲೇಖಿಸಿದ ಕಾಮತ್‌‌ ಅವರು, ಜಾತ್ಯತೀತ ದೃಷ್ಟಿಕೋನಗಳು ಸಮುದಾಯದ ನಂಬಿಕೆಯನ್ನು ನಿರ್ಧರಿಸುವಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳುತ್ತಾರೆ.
  • ವೈಯಕ್ತಿಕವಾಗಿ ಹೇಳಬೇಕೆಂದರೆ, ಮಕ್ಕಳು ತಮ್ಮ ತಲೆ ಮುಚ್ಚಿಕೊಳ್ಳುವ ನಿಲುವಿಗೆ ನನ್ನ ಬೆಂಬಲ ಇಲ್ಲದಿರಬಹುದು. ಆದರೆ, ನಾವು ಮತ್ತೊಬ್ಬರ ನಿರ್ಧಾರದಲ್ಲಿ ತೀರ್ಪು ನೀಡಲು ಆಗದು ಎಂದು ನ್ಯಾಯಾಲಯಗಳು ಹೇಳಿವೆ ಎಂದು ಕಾಮತ್‌ ಉಲ್ಲೇಖಿಸುತ್ತಾರೆ.
  • “ಯಾವುದೇ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಸುವ್ಯವಸ್ಥೆ ಎಂದು ಹೇಳಿ ಅದನ್ನು ಮಾಡುತ್ತದೆ. ಸುವ್ಯವಸ್ಥೆ ನೆಪವೊಡ್ಡಿ ಸರ್ಕಾರವು ಎಲ್ಲಾ ಧಾರ್ಮಿಕ ಆಚರಣೆಗಳನ್ನು ನಿಲ್ಲಿಸುತ್ತದೆ. ಆದರೆ ಜೊಳ್ಳಿನಿಂದ ಕಾಳನ್ನು ಬೇರ್ಪಡಿಸುವುದನ್ನು ನ್ಯಾಯಾಲಯ ಮಾಡಬೇಕು” ಎಂದು ಕೋರ್ಟ್‌ಗೆ ಕಾಮತ್‌ ಹೇಳಿದ್ದಾರೆ.
  • “ಇದು ವ್ಯವಸ್ಥೆಯ ವಿಷಯವೇ ಆದರೆ ಅವರು ಹಿಜಾಬ್‌ ಧರಿಸಿ ಶಾಲೆಗೆ ಬರುವಾಗ ಮಾತ್ರವೇ ಏಕೆ ಸಮಸ್ಯೆಯಾಗುತ್ತದೆ. ಹೊರಗಡೆ ಇರುವಾಗ ಏಕೆ ಸಮಸ್ಯೆಯಾಗುವುದಿಲ್ಲ. ನಾವು GSB ಬ್ರಾಹ್ಮಣರಾಗಿದ್ದು, ನಾಮವನ್ನು ಧರಿಸಿ ಶಾಲೆಗೆ ಹೋಗುತ್ತೇವೆ. ಇದು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಶಾಲೆ ಹೇಳುವುದು ಸರಿಯೆ? ಅಥವಾ ಪೇಟ ಧರಿಸಿರುವ ಸಿಖ್‌ನಿಂದಾಗಿ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜ್ಯ ಸರ್ಕಾರ ಹೇಳುವುದು ಸರಿಯೆ?” ಎಂದು ಕಾಮತ್‌ ಹೇಳಿದ್ದಾರೆ.
  • ಈ ವೇಳೆ ನ್ಯಾಯಮೂರ್ತಿ ದೀಕ್ಷಿತ್‌, “ಸಿಖ್ಖರ ವಿಷಯದಲ್ಲಿ, ಗುರು ಗ್ರಂಥ ಸಾಹಿಬ್ ಐದು ಅಗತ್ಯ ‘ಕೆ’ಗಳನ್ನು ಸೂಚಿಸುತ್ತದೆ. ಮತ್ತು ಇದನ್ನು ನ್ಯಾಯಾಲಯಗಳು ಅಗತ್ಯ ಧಾರ್ಮಿಕ ಆಚರಣೆಗಳು ಎಂದು ಅಭಿಪ್ರಾಯಪಟ್ಟಿವೆ. ಇದನ್ನೇ ಕೆನಡಾ ಮತ್ತು ಯುಎಸ್ಎ ನ್ಯಾಯಾಲಯಗಳು ಹೇಳಿವೆ” ಎಂದು ಹೇಳಿದ್ದಾರೆ.
  • “ಈಗ ನಾವು ಈ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಯನ್ನು ನೋಡೋಣ. ನಾನು ಕಾಲೇಜಿಗೆ ಸೇರಿದಾಗ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಇರಲಿಲ್ಲ. ಇಷ್ಟು ವರ್ಷ ಅದರ ಸಮಸ್ಯೆ ಇರಲಿಲ್ಲ. ಇದು ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಯಾಗಿದ್ದರೆ, ಮುಸ್ಲಿಂ ಮಹಿಳೆಯರು ಹೊರಗೆ ಹಿಜಾಬ್ ಧರಿಸುವಾಗ ಅದು ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಯಾಗಿಲ್ಲ. ಅವರು ಕಾಲೇಜು ಪ್ರವೇಶಿಸಿದಾಗ ಅದು ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಯಾಗುವುದು ಹೇಗೆ? ಅವರು ಮಾರುಕಟ್ಟೆಗೆ ಹೋದಾಗ, ಸಮಸ್ಯೆ ಅಗುವುದಿಲ್ಲ ಆದರೆ ಕಾಲೇಜಿನಲ್ಲಿ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಹೇಗೆ ಆಗುತ್ತದೆ!” ಎಂದು ಹೇಳಿದ್ದಾರೆ.
  • ಈ ವೇಳೆ, ಸಾರ್ವಜನಿಕ ಸುವ್ಯವಸ್ಥೆಗಾಗಿ ಏಕರೂಪದ ಪರೀಕ್ಷೆ ಇದೆಯೇ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿ, “ಅದು ಹೊರಗೆ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಯಲ್ಲದಿದ್ದರೆ, ಅದು ಒಳಗೆ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಯಾಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
  • “ನಾನು ಹಂದಿಮರಿಯನ್ನು ಹೊತ್ತುಕೊಂಡು ಕನ್ನಾಟ್ ಪ್ಲೇಸ್‌ಗೆ ಹೋದರೆ, ಈ ಮನುಷ್ಯನು ಹುಚ್ಚನಾಗಿದ್ದಾನೆ ಎಂದು ಹೇಳುತ್ತಾರೆಯೆ ವಿನಃ ಯಾರೂ ಸಮಸ್ಯೆಯನ್ನು ಸೃಷ್ಟಿಸುವುದಿಲ್ಲ. ಆದರೆ ನಾನು ಮಸೀದಿ ಅಥವಾ ದೇವಸ್ಥಾನ ಅಥವಾ ಚರ್ಚ್‌ಗೆ ಹಾಗೆ ಹೋದರೆ ಅದು ಸಮಸ್ಯೆಯನ್ನು ಉಂಟುಮಾಡಬಹುದು” ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
  • “ಸಾರ್ವಜನಿಕ ಸುವ್ಯವಸ್ಥೆಯ ವಿಷಯದಲ್ಲಿ ವಿಧಿಸಲಾದ ನಿರ್ಬಂಧವು ಸಮರ್ಥನೀಯವಾಗಿದೆ ಎಂದು ಸರ್ಕಾರವು ದಾಖಲೆಯ ಮೂಲಕ ಸಮರ್ಥಿಸಿಕೊಳ್ಳಬೇಕು. ಪಠ್ಯಕ್ರಮವನ್ನು ನಿರ್ಧರಿಸುವ ಅಧಿಕಾರಗಳಿಗೆ ಸಂಬಂಧಿಸಿದ ವಿಭಾಗದ ಅಡಿಯಲ್ಲಿ ಸರ್ಕಾರ ಈ ಆದೇಶವನ್ನು ನೀಡಿದೆ” ಎಂದ ದೇವದತ್ತ ಕಾಮತ್‌ ಹೇಳಿದ್ದಾರೆ.
  • ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ಜನರ ಮೂಲಭೂತ ಹಕ್ಕನ್ನು ಸರ್ಕಾರ ಕಸಿಯಲಾಗದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸಿದ ಕಾಮತ್‌, “ಮೂಲಭೂತ ಹಕ್ಕುಗಳನ್ನು ಪಡೆಯಲು ಸರ್ಕಾರ ಕ್ರಮಕೈಗೊಳ್ಳಬೇಕು. ಅವುಗಳನ್ನು ರಿಯಾಯಿತಿ ನೀಡಲು ಆಗುವುದಿಲ್ಲ. ಹಾಗಾಗಿ ಗೂಂಡಾಗಳು ಅವಾಂತರ ಸೃಷ್ಟಿಸುತ್ತಿದ್ದರೆ, ಈ ಹೆಣ್ಣುಮಕ್ಕಳ ಶಾಲೆಗೆ ಹೋಗುವ ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.
  • “ಆನಂದ ಮಾರ್ಗಿಗಳಂತಹ ಪ್ರಕರಣಗಳಲ್ಲಿ ನಾವು ಇದನ್ನು ಅರ್ಥಮಾಡಿಕೊಳ್ಳಬಹುದು” ಎಂದು ಕಾಮತ್‌ ಹೇಳಿದಾಗ, ಉತ್ತರಿಸಿದ ನ್ಯಾಯಮೂರ್ತಿ ದೀಕ್ಷಿತ್‌, “ಹೌದು, ಅವರು ತಲೆಬುರುಡೆಗಳನ್ನು ಹೊತ್ತುಕೊಂಡು ಸಾರ್ವಜನಿಕ ರಸ್ತೆಯಲ್ಲಿ ಶಿವತಾಂಡವ ಮಾಡಲು ಬಯಸಿದ್ದರು” ಎಂದು ಹೇಳಿದ್ದಾರೆ.
  • “ತಲೆಗೆ ಸ್ಕಾರ್ಫ್ ಹಾಕಿಕೊಂಡು ಶಾಲೆಗೆ ಹೋಗುವ ಬಾಲಕಿ, ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಯಾಗುವುದು ಹೇಗೆ? ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲೇಖಿಸಿ ವಿಧಿಸಲಾದ ಚಲನಚಿತ್ರದ ಮೇಲಿನ ನಿಷೇಧವನ್ನು ಹಿಂತೆಗೆದುಕೊಳ್ಳುವ ಪ್ರಕರಣದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಅವರ ತೀರ್ಪನ್ನು ಉಲ್ಲೇಖಿಸಿ, “ಸ್ವಾತಂತ್ರ್ಯವು ಅಧಿಕಾರದ ಅಪೇಕ್ಷೆಯಲ್ಲ” ಎಂದು ಕಾಮತ್ ತೀರ್ಪನ್ನು ಓದುತ್ತಾರೆ.
  • “ಕೆಲವು ವಿದೇಶಿ ನ್ಯಾಯವ್ಯಾಪ್ತಿಗಳು ‘ಋಣಾತ್ಮಕ ಸೆಕ್ಯುಲರಿಸಂ’ ಪರಿಕಲ್ಪನೆಯನ್ನು ಅನುಸರಿಸುತ್ತವೆ ಅಲ್ಲಿ ಸಾರ್ವಜನಿಕವಾಗಿ ಧಾರ್ಮಿಕ ಗುರುತನ್ನು ಪ್ರದರ್ಶಿಸಲು ಅನುಮತಿಸುವುದಿಲ್ಲ. ಆದರೆ, ಭಾರತದಲ್ಲಿ ‘ಸಕಾರಾತ್ಮಕ ಸೆಕ್ಯುಲರಿಸಂ’ ಅನುಸರಿಸಲಾಗುತ್ತಿದೆ” ಎಂದು ಕಾಮತ್‌ ವಾದಿಸಿದ್ದಾರೆ.
  • “ನಾವು ‘ಸಕಾರಾತ್ಮಕ ಜಾತ್ಯತೀತತೆಯ’ ಮಾರ್ಗವನ್ನು ಅನುಸರಿಸುತ್ತೇವೆ, ಇಲ್ಲಿ ಸರ್ಕಾರವು ಎಲ್ಲಾ ಧರ್ಮಗಳ ಆಚರಣೆಯನ್ನು ಗೌರವಿಸುವ ವಾತಾವರಣವನ್ನು ಸೃಷ್ಟಿಸುತ್ತದೆ. ಶಾಲೆಗಳಲ್ಲಿ, ಯಾರಾದರೂ ನಾಮ, ಹಿಜಾಬ್, ಶಿಲುಬೆ ಧರಿಸುತ್ತಾರೆಂದರೆ, ಅದು ಧನಾತ್ಮಕ ಜಾತ್ಯತೀತತೆಯ ಪ್ರತಿಬಿಂಬವಾಗಿದೆ” ಎಂದು ಕಾಮತ್‌ ಹೇಳಿದ್ದಾರೆ.
  • “ನಿನ್ನೆ ಹಿಜಾಬ್ ಧರಿಸಿದ ಹುಡುಗಿಯರನ್ನು ಒಳಗೆ ಪ್ರವೇಶಿಸಲು ಅನುಮತಿಸಲಾಯಿತು, ಆದರೆ ಪ್ರತ್ಯೇಕ ಸಭಾಂಗಣದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಯಿತು” ಎಂದು ಕಾಮತ್ ಸೋಮವಾರಂದು ನಡೆದ ಘಟನೆಯನ್ನು ನ್ಯಾಯಾಲಯದ ಗಮನಕ್ಕೆ ತರುತ್ತಾರೆ.
  • ಈ ವೇಳೆ ಜಸ್ಟಿಸ್ ದೀಕ್ಷಿತ್, “ಇದು ಅಮೇರಿಕನ್ ಪ್ರಕರಣದಂತೆಯೇ, ಪ್ರತ್ಯೇಕ ಆದರೆ ಸಮಾನತೆ ತರವೇ?” ಎಂದು ಪ್ರಶ್ನಿಸುತ್ತಾರೆ.
  • ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಕುಳಿತುಕೊಳ್ಳಲು ಅವಕಾಶ ನೀಡುವುದು ‘ಧಾರ್ಮಿಕ ವರ್ಣಭೇದ ನೀತಿ’ ಮತ್ತು ‘ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ’ ಎಂದು ಕಾಮತ್ ಹೇಳುತ್ತಾರೆ.
  •  ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕುಳ್ಳಿರಿಸಲಾಗಿದೆ ಎಂಬ ಕಾಮತ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಡ್ವೊಕೇಟ್ ಜನರಲ್ ಎಜಿ ನಾವದಗಿ, “ಇಂಥ ಆಧಾರ ರಹಿತ ಹೇಳಿಕೆ ನೀಡಬಾರದು. ಇದು ನಮ್ಮಂಥ ಸೂಕ್ಷ್ಮವಾದ ಸಮಾಜದಲ್ಲಿ ಗಂಭೀರ ಪರಿಣಾಮ ಉಂಟು ಮಾಡಬಹುದು. ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಇರಬೇಕು, ರಾಜಕೀಯವಾಗಿ ಅಲ್ಲ” ಎಂದು ಹೇಳುತ್ತಾರೆ.
  • “ಹೀಗೆ ಪ್ರತ್ಯೇಕವಾಗಿ ಕೂರಿಸುವುದು ಆರ್ಟಿಕಲ್ 14 ರ ಉಲ್ಲಂಘನೆಯಾಗಿದೆ ಎಂಬುದು ನನ್ನ ಸಲ್ಲಿಕೆಯಾಗಿದೆ. ನ್ಯಾಯಾಲಯದ ಒಳಗೆ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ” ಎಂದು ಕಾಮತ್‌ ಅವರು ಹೇಳುತ್ತಾರೆ. ಈ ವೇಳೆ ನ್ಯಾಯಮೂರ್ತಿ ದೀಕ್ಷಿತ್ ಅವರು ಕಾಮತ್ ಅವರ ವಾದಗಳನ್ನು ಸಾರಾಂಶವಾಗಿ ಟಿಪ್ಪಣಿ ಮಾಡುತ್ತಾರೆ.
  • ಹಿಜಾಬ್ ಧರಿಸಿದ ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಲಾಗಿದೆ ಎಂದು ಕಾಮತ್ ಅವರ ಹೇಳಿಕೆಯನ್ನು ಅಡ್ವೊಕೇಟ್ ಜನರಲ್ ಅವರು ಮತ್ತೆ ಆಕ್ಷೇಪಿಸಿದರು. ಇಂತಹ ಹೇಳಿಕೆಗಳು ದೂರಗಾಮಿ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ.
  • ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ದೀಕ್ಷಿತ್‌, “ನಾನು ಅವರ ಹೇಳಿಕೆಯನ್ನು ಮಾತ್ರ ರೆಕಾರ್ಡ್ ಮಾಡುತ್ತಿದ್ದೇನೆ. ಅವರು ಹೈಕೋರ್ಟ್ ಕಟ್ಟಡವನ್ನು ಕೆಡವಬೇಕು ಎಂದು ಹೇಳಿದರೂ, ನಾನು ಅದನ್ನು ಒಪ್ಪದಿದ್ದರೂ ಅದನ್ನು ನಾನು ದಾಖಲಿಸಬೇಕು” ಎಂದು ಹೇಳುತ್ತಾರೆ. ಈ ವೇಳೆ ಅಡ್ವೊಕೇಟ್‌ ಜನರಲ್‌, “ನನ್ನ ಹೇಳಿಕೆಯನ್ನೂ ದಾಖಲಿಸಿಕೊಳ್ಳಿ” ಎಂದು ಹೇಳುತ್ತಾರೆ. ಈ ವೇಳೆ ಜಸ್ಟಿಸ್‌ ದೀಕ್ಷಿತ್‌ ಅವರು, “ನಾನು ನಿಮ್ಮ ಹೇಳಿಕೆಯನ್ನು ದಪ್ಪ ಅಕ್ಷರಗಳಲ್ಲಿ ದಾಖಲಿಸುತ್ತೇನೆ” ಎಂದು ಲಘು ದಾಟಿಯಲ್ಲಿ ಹೇಳುತ್ತಾರೆ.
  • ನ್ಯಾಯಮೂರ್ತಿ ದೀಕ್ಷಿತ್ ಟಿಪ್ಪಣಿಗಳು: ಅಫಿಡವಿಟ್‌ನಲ್ಲಿ ಹೇಳಿರುವಂತೆ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸುವ ಬಗ್ಗೆ ಕಾಮತ್ ಅವರ ಹೇಳಿಕೆಯನ್ನು ಜನರಲ್ ಅಡ್ವಕೇಟ್‌ ತೀವ್ರವಾಗಿ ಆಕ್ಷೇಪಿಸಿದ್ದಾರೆ. ನಮ್ಮಂತಹ ಸೂಕ್ಷ್ಮ ಸಮಾಜದಲ್ಲಿ ಇಂತಹ ಆಧಾರ ರಹಿತ ಆರೋಪಗಳನ್ನು ಮಾಡಬಾರದು ಎಂದು ಅವರು ಹೇಳಿದ್ದಾರೆ.
  • ಮತ್ತೊಂದು ತೀರ್ಪನ್ನು ಉಲ್ಲೇಖಿಸಿದ ಕಾಮತ್ ಅವರು, ನಾವು ಏನು ಧರಿಸಬೇಕು ಎಂಬುದು ಖಾಸಗಿತನ ಮತ್ತು ಅಭಿವ್ಯಕ್ತಿಯ ಹಕ್ಕಿನ ಭಾಗವಾಗಿದೆ ಎಂದು ಹೇಳುತ್ತಾರೆ. ಈ ವೇಳೆ, ನ್ಯಾಯಮೂರ್ತಿ ದೀಕ್ಷಿತ್‌, “ಹಾಗಾದರೆ ನಾಳೆಯಿಂದ ನನ್ನ ಸಹೋದರರು ನ್ಯಾಯಮೂರ್ತಿಗಳು ನ್ಯಾಯಾಧೀಶರ ಉಡುಪನ್ನು ಧರಿಸಬಾದರು ಎಂದು ಹೇಳಬಹುದೇ?” ಎಂದು ಪ್ರಶ್ನಿಸುತ್ತಾರೆ.
  • ಇದಕ್ಕೆ ಉತ್ತಿರಿಸಿದ ಕಾಮತ್‌, “ಸಮವಸ್ತ್ರವನ್ನು ಸೂಚಿಸುವ ಕಾನೂನು ಇರಬಹುದು. ಉದಾಹರಣೆಗೆ, ಬಾರ್ ಕೌನ್ಸಿಲ್ ವಕೀಲರಿಗೆ ಡ್ರೆಸ್ ಕೋಡ್ ಅನ್ನು ಸೂಚಿಸಬಹುದು. ನಿರ್ಬಂಧಗಳು ಮೂಲಭೂತ ಹಕ್ಕುಗಳೊಂದಿಗೆ ಹೊಂದಿಕೊಳ್ಳುತ್ತವೆ ಮತ್ತು ಈ ಕಾನೂನು ಸಮಂಜಸವಾಗಿದ್ದರೆ ಅದು ವಿಷಯ” ಎಂದು ಹೇಳಿದ್ದಾರೆ.
  • ಕೇರಳ ಶಿಕ್ಷಣ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ಹೊರಡಿಸಲಾದ ಸರ್ಕಾರದ ಆದೇಶವು ತನ್ನ ಅಧಿಕಾರವನ್ನು ಮೀರಿ ಮೀರಿದೆ. ಡ್ರೆಸ್ ಕೋಡ್ ಅನ್ನು ಸೂಚಿಸುವ ನಿಬಂಧನೆಯ ಅಡಿಯಲ್ಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಕಾಮತ್‌ ಹೇಳಿದ್ದಾರೆ.
  • ಕಾಮತ್ ಈಗ ತಮ್ಮ ಹೇಳಿಕೆಗಳನ್ನು ಮುಗಿಸುತ್ತಾ, “ಮೊದಲನೆಯದಾಗಿ, ಇದು ಆರ್ಟಿಕಲ್ 25, 19 ಮತ್ತು 14 ರ ಅಡಿಯಲ್ಲಿ ಇರುವ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆ. ಎರಡನೆಯದಾಗಿ, ಸಾರ್ವಜನಿಕ ಸುವ್ಯವಸ್ಥೆಯ ಆಧಾರದ ಮೇಲೆ ಇದನ್ನು ಮಾಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ಹೇಳುತ್ತಾರೆ.
  • ಕಾಮತ್ ಅವರು ಮಧ್ಯಂತರ ಆದೇಶಕ್ಕಾಗಿ ವಿನಂತಿ ಮಾಡುತ್ತಾ, “ವಿದ್ಯಾರ್ಥಿಗಳು ದೀರ್ಘಕಾಲದವರೆಗೆ ತಲೆಗೆ ಸ್ಕಾರ್ಫ್ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪರೀಕ್ಷೆಗಳು ಸಮೀಪಿಸುತ್ತಿವೆ ಎಂಬ ಅಂಶವನ್ನು ಪರಿಗಣಿಸಿ, ಅನುಕೂಲತೆಯ ಸಮತೋಲನದ ಆಧಾರದ ಮೇಲೆ ತರಗತಿಗಳಿಗೆ ಹಾಜರಾಗಲು ದಯವಿಟ್ಟು ಅವರಿಗೆ ಅವಕಾಶ ಮಾಡಿಕೊಡಿ” ಎಂದು ಹೇಳುತ್ತಾರೆ.
  • ಈ ವೇಳೆ ನ್ಯಾಯಮೂರ್ತಿ ದೀಕ್ಷಿತ್, “ಈಗ ಕಾಲೇಜಿಗೆ ಹಾಜರಾಗದಂತೆ ಅವರು ಎಷ್ಟು ದಿನಗಳಿಂದ ತಡೆದಿದ್ದಾರೆ?” ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುತ್ತಾ ಕಾಮತ್‌ ಅವರು “ನಾನು ಕುಂದಾಪುರ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರತಿನಿಧಿಸುತ್ತಿದ್ದೇನೆ. ಕಳೆದ 4-5 ದಿನಗಳಿಂದ ಅವರನ್ನು ತಡೆದು ನಿಲ್ಲಿಸಲಾಗಿದೆ” ಎಂದು ಹೇಳುತ್ತಾರೆ.
  • ಈ ವೇಳೆ ಅಡ್ವೊಕೇಟ್ ಜನರಲ್, “ನಾನು ಕೂಡಾ ಹೇಳಿಕೆ ನೀಡಲು ಬಯಸುತ್ತೇನೆ. ನ್ಯಾಯಾಲಯವು ವಿಚಾರಣೆ ನಡೆಸುತ್ತಿದ್ದಾಗ ಕೂಡಾ ಕೆಲವು ಆಂದೋಲನಗಳು ನಡೆಯುತ್ತಿವೆ. ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿರುವಾಗ, ಯಾವುದೇ ಸಾರ್ವಜನಿಕ ಪ್ರತಿಭಟನೆಗಳನ್ನು ಮಾಡಬಾರದು ಎಂದು ಮಧ್ಯಂತರ ಆದೇಶವನ್ನು ನೀಡಲಿ” ಎಂದು ಹೇಳುತ್ತಾರೆ.
  • ಈ ವೇಳೆ ಕಾಮತ್‌ ಅವರು “ನಾನು ಅಡ್ವೊಕೇಟ್‌ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಪ್ರಕರಣವು ಒಮ್ಮೆ ನ್ಯಾಯಾಲಯಗಳ ಮುಂದೆ ಬಂದರೆ, ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಹಿಜಾಬ್ ಧರಿಸಿರುವ ಹುಡುಗಿಯರನ್ನು ಕೆಲವು ಹುಡುಗರು ಬೆನ್ನಟ್ಟುತ್ತಿರುವ ಚಿತ್ರಗಳಿವೆ” ಎಂದು ಹೇಳುತ್ತಾರೆ. ಈ ಹೇಳಿಕೆಗೆ ಅಡ್ವೊಕೇಟ್‌‌ ಆಕ್ಷೇಪ ವ್ಯಕ್ತಪಡಿಸುತ್ತಾರೆ.
  • “ಇಂತಹ ಹೇಳಿಕೆಗಳು ತಪ್ಪು ಸಂಕೇತವನ್ನು ನೀಡುತ್ತವೆ. ಕೋರ್ಟು ವಿಚಾರಣೆ ನಡೆಯುತ್ತಿರುವುದರಿಂದ ನಾನು ಹೇಳುತ್ತಿರುವುದು ಪ್ರತಿಭಟನೆ, ಬಂದ್ ಇತ್ಯಾದಿಗಳಾಗಬಾರದು ಎಂದಾಗಿದೆ. ಹಿಜಾಬ್ ಧರಿಸಿರುವ ಹುಡುಗಿಯರ ಮೇಲೆ ದಾಳಿ ಮಾಡಲಾಗುತ್ತಿದೆ ಎಂಬಂತಹ ಹೇಳಿಕೆಗಳು ಅಪಾಯಕಾರಿ. ರಾಜ್ಯ ನಿಯಂತ್ರಣದಲ್ಲಿದೆ” ಎಂದು ಹೇಳಿದ್ದಾರೆ.
  • “ರೈತರ ಪ್ರತಿಭಟನೆಯ ಪ್ರಕರಣದಲ್ಲಿ ಕೂಡಾ ಉಚ್ಛ ನ್ಯಾಯಾಲಯ ಪ್ರತಿಭಟನೆಯ ವಿರುದ್ಧ ಆದೇಶ ನೀಡಿದೆ” ಎಂದು ಅಡ್ವೊಕೇಟ್‌ ಹೇಳಿದ್ದಾರೆ.
  • ನ್ಯಾಯಮೂರ್ತಿ ದೀಕ್ಷಿತ್, “ನಾನು ವಿದ್ಯಾರ್ಥಿಯಾಗಿದ್ದಾಗ ಕಾಲೇಜಿನಿಂದ ದೂರ ಉಳಿಯುವಂತಹ ಘಟನೆಗಳು ನಡೆಯಲಿಲ್ಲ” ಎಂದು ಹೇಳುತ್ತಾರೆ.
  • ಪ್ರಕರಣವು ವಿಚಾರಣೆ ಮಾಡುತ್ತಿರುವಾಗ ಪ್ರತಿಭಟನೆಗಳ ವಿರುದ್ಧ ಸುಪ್ರೀಂ ಕೋರ್ಟ್‌ನ ಅವಲೋಕನಗಳನ್ನು ಅಡ್ವೋಕೇಟ್‌ ಉಲ್ಲೇಖಿಸುತ್ತಾರೆ.
  • “ನಾನು ಅಡ್ವೋಕೇಟ್‌ ಅವರನ್ನು ಒಪ್ಪುತ್ತೇನೆ. ನ್ಯಾಯಾಲಯದ ಮುಂದೆ ಇರುವವರು ಸಾರ್ವಜನಿಕ ವೇದಿಕೆಗೆ ಹೋಗುವಂತಿಲ್ಲ. ಆದರೆ ಆರ್ಟಿಕಲ್ 19 ರ ಹಕ್ಕುಗಳನ್ನು ಅಮಾನತುಗೊಳಿಸಲು ಇತರರ ವಿರುದ್ಧ ನ್ಯಾಯಾಲಯವು ಓಮ್ನಿಬಸ್ ತಡೆಯಾಜ್ಞೆ ನೀಡಲು ಹೇಗೆ ಸಾಧ್ಯ? ಅರ್ಜಿದಾರರಿಗೆ ಸಂಬಂಧಿಸಿದಂತೆ, ನಾವು ಯಾವುದೇ ಪ್ರತಿಭಟನೆ ಮಾಡುವುತ್ತಿಲ್ಲ. ಆದರೆ ಇತರರನ್ನು ಹೇಗೆ ತಡೆಯುವುದು?” ಎಂದು ಪ್ರಶ್ನಿಸಿದ್ದಾರೆ.
  • ಪ್ರತಿಭಟನೆಯ ವಿರುದ್ಧ ಆದೇಶವನ್ನು ರವಾನಿಸುವುದು ಗಂಭೀರವಾದ ಸಾಂವಿಧಾನಿಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಕಾಮತ್ ಹೇಳಿದ್ದಾರೆ.
  • ನ್ಯಾಯಮೂರ್ತಿ ದೀಕ್ಷಿತ್: ನಾನು ತಾಳ್ಮೆಯಿಂದ ವಿಚಾರಣೆ ನಡೆಸುತ್ತಿದ್ದೇನೆ. ಸಂವಿಧಾನದಲ್ಲಿ ಜನರಿಗೆ ನಂಬಿಕೆ ಇರಬೇಕು. ಚೇಷ್ಟೆ ಮಾಡುವುದು ಸಮಸ್ಯೆ ಇನ್ನೂ ಉರಿಯುವಂತೆ ಮಾಡುತ್ತದೆ. ಆದರೆ ಆಂದೋಲನ ಮಾಡುವುದು, ಬೀದಿಗಿಳಿಯುವುದು, ಘೋಷಣೆಗಳನ್ನು ಕೂಗುವುದು, ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡುವುದು, ವಿದ್ಯಾರ್ಥಿಗಳು ಇತರರ ಮೇಲೆ ಹಲ್ಲೆ ಮಾಡುವುದು ಒಳ್ಳೆಯದಲ್ಲ.
  • ನ್ಯಾಯಮೂರ್ತಿ ದೀಕ್ಷಿತ್: ನ್ಯಾಯಾಲಯಕ್ಕೆ ತೊಂದರೆ ನೀಡಬೇಡಿ. ನೀವು ನ್ಯಾಯಾಧೀಶರನ್ನು ಶಾಂತಿಯಿಂದ ಬಿಡಬೇಕು. ಟಿವಿಯಲ್ಲಿ ಬೆಂಕಿ ಮತ್ತು ರಕ್ತವನ್ನು ನೋಡಿದರೆ, ನ್ಯಾಯಾಧೀಶರು ವಿಚಲಿತರಾಗುತ್ತಾರೆ ಎಂದು ಭಾವಿಸೋಣ. ಮನಸ್ಸಿಗೆ ತೊಂದರೆಯಾದರೆ ಬುದ್ಧಿ ಕೆಲಸ ಮಾಡುವುದಿಲ್ಲ.
  • ನ್ಯಾಯಮೂರ್ತಿ ದೀಕ್ಷಿತ್ : ಹಾಗಾಗಿ ನಾನು ಎಲ್ಲ ಜನರಿಗೆ ಮನವಿ ಮಾಡುತ್ತೇನೆ, ಕೆಲವರನ್ನು ಹೊರತುಪಡಿಸಿ ಎಲ್ಲಾ ಜನರು ಒಳ್ಳೆಯವರು ಎಂದು ನಾನು ನಂಬುತ್ತೇನೆ … ನಾನು ಲಿಖಿತ ಆದೇಶವನ್ನು ನೀಡುತ್ತೇನೆ.
  • ನ್ಯಾಯಮೂರ್ತಿ ದೀಕ್ಷಿತ್ ಆದೇಶ: ಕೋರ್ಟ್ ವಾದಗಳನ್ನು ಆಲಿಸುತ್ತಿರುವಾಗಲೂ ಕ್ಯಾಂಪಸ್‌ನ ಒಳಗೆ ಮತ್ತು ಹೊರಗೆ ಸಾಕಷ್ಟು ಗಲಾಟೆ ನಡೆಯುತ್ತಿದೆ ಎಂದು ಅಡ್ವೊಕೇಟ್‌ ಜನರಲ್ ಹೇಳಿದ್ದಾರೆ. ಇದಕ್ಕೆ ಬೆಂಬಲವಾಗಿ, ಅವರು ಕಿಸಾನ್ ಮಹಾಪಂಚಾಯತ್ ವಿಷಯದಲ್ಲಿ ಸುಪ್ರೀಂಕೋರ್ಟ್‌ ತೀರ್ಪನ್ನು ಉಲ್ಲೇಖಿಸುತ್ತಾರೆ.
  • ನ್ಯಾಯಮೂರ್ತಿ ದೀಕ್ಷಿತ್ ಅವರ ಆದೇಶ: ಕಾಮತ್ ಅವರು ಅಡ್ವೋಕೇಟ್‌ ಅವರ ಸಲಹೆಯನ್ನು ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಆಂದೋಲನ ಮಾಡುತ್ತಿರುವವರು ಅರ್ಜಿದಾರರು ಅಲ್ಲದಿರುವಾಗ ಆಂದೋಲನಗಳನ್ನು ನಿಷೇಧಿಸುವ ಆದೇಶವನ್ನು ನ್ಯಾಯಾಲಯವು ರವಾನಿಸಬಹುದೇ ಎಂದು ಅವರಿಗೆ ಖಚಿತವಿಲ್ಲ.
  • ನ್ಯಾಯಮೂರ್ತಿ ದೀಕ್ಷಿತ್ ಆದೇಶ: ಈ ವಿಷಯದ ಮುಂದಿನ ವಿಚಾರಣೆ ಬಾಕಿಯಿದೆ, ಈ ನ್ಯಾಯಾಲಯವು ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವಜನಿಕರಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಲು ವಿನಂತಿಸುತ್ತದೆ. ಈ ನ್ಯಾಯಾಲಯವು ಸಾರ್ವಜನಿಕರ ಬುದ್ಧಿವಂತಿಕೆ ಮತ್ತು ಸದ್ಗುಣದಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದೆ ಮತ್ತು ಅದನ್ನು ಆಚರಣೆಗೆ ತರಬೇಕೆಂದು ಅದು ಆಶಿಸುತ್ತದೆ.
  • ನ್ಯಾಯಮೂರ್ತಿ ದೀಕ್ಷಿತ್: ವಿಚಾರಣೆಯನ್ನು ನಾನು ನಾಳೆ ಮುಂದುವರಿಸುತ್ತೇನೆ. ಎಲ್ಲರೂ ವಾದಿಸಬಹುದು. ಆದರೆ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ವಾದಗಳು ನಡೆಯದಂತೆ ನೋಡಿಕೊಳ್ಳಿ. ದಾಖಲೆಯಲ್ಲಿರುವ ಎಲ್ಲರಿಗೂ ಅನುಮತಿ ನೀಡಲಾಗುವುದು, ಯಾವುದೇ ನಕಲಿಗೆ ಒಳಪಡುವುದಿಲ್ಲ. ಚಿಕ್ಕದಾಗಿ ಇಟ್ಟುಕೊಳ್ಳಿ.
  • ಈ ದಿನದ ವಿಚಾರಣೆಯು ಕೊನೆಗೊಳ್ಳುತ್ತದೆ. ನಾಳೆ ಮಧ್ಯಾಹ್ನ 2.30ಕ್ಕೆ ಮುಂದುವರೆಯುವುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...