Homeಕರ್ನಾಟಕHijab Live | ಹಿಜಾಬ್ ಲೈವ್‌ | ಶುಕ್ರವಾರ ವಿಚಾರಣೆ ಮುಗಿಸಲಿರುವ ಕರ್ನಾಟಕ ಹೈಕೋರ್ಟ್‌

Hijab Live | ಹಿಜಾಬ್ ಲೈವ್‌ | ಶುಕ್ರವಾರ ವಿಚಾರಣೆ ಮುಗಿಸಲಿರುವ ಕರ್ನಾಟಕ ಹೈಕೋರ್ಟ್‌

- Advertisement -
- Advertisement -

ತರಗತಿಗಳಲ್ಲಿ ಹಿಜಾಬ್ ನಿಷೇಧ ಮಾಡಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ರಾಜ್ಯ ಹೈಕೋರ್ಟ್‌ ಹತ್ತನೇ ದಿನವಾದ ಗುರುವಾರವು ಮುಂದುವರೆಸಿದೆ.  ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ. ಎಂ. ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠವು ಹಿಜಾಬ್‌ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ.


ಅಪ್‌ಡೇಟ್‌ – 05:30 PM

 • ಕಾಮತ್‌: ನಿರ್ಬಂಧಿಸುವ ಉದ್ದೇಶವು ಕಾಯಿದೆಯಿಂದಲೇ ಸ್ಪಷ್ಟವಾಗಿರಬೇಕು. ʼಇಂತಿಂಥಾ ಕಾರಣಗಳಿಗಾಗಿ ಹಿಜಾಬ್ ಅನುಕೂಲಕರವಾಗಿಲ್ಲ ಮತ್ತು ಆದ್ದರಿಂದ ನಾವು ಕಾನೂನನ್ನು ಮಾಡುತ್ತಿದ್ದೇವೆ’ ಎಂದು ಹೇಳಬೇಕು. ಶಿಕ್ಷಣ ಕಾಯಿದೆ ಮತ್ತು ಕೆಲವು ನಿಯಮಗಳನ್ನು ತರಲು ಸಾಧ್ಯವಿಲ್ಲ. ನಿರ್ಬಂಧವು ಉದ್ದೇಶ ನೇರ ಸಂಬಂಧ ಹೊಂದಿರಬೇಕು. ಉದ್ದೇಶ ಹಿಜಾಬ್ ಆಗಿದ್ದರೆ ಮತ್ತು ಅವರು ಏಕರೂಪತೆಯನ್ನು ಬಯಸಿದರೆ, ನಂತರ ಕಾಯಿದೆ ಮತ್ತು ನಿಯಮಗಳು ಅದರ ಬಗ್ಗೆ ಸ್ಪಷ್ಟವಾಗಿರಬೇಕು.
 • ಸಂವಿಧಾನ ಸಭೆಯ ಚರ್ಚೆಗಳನ್ನು ಉಲ್ಲೇಖಿಸುತ್ತಾ ಕಾಮತ್ ಅವರು, “ಯಾವುದೆ ಧಾರ್ಮಿಕ ಚಿಹ್ನೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಾರದು ಎಂಬುವುದನ್ನು, ಸಂವಿಧಾನ ಸಭೆಯ ಚರ್ಚೆಯ ಸಮಯದಲ್ಲಿ ತಿದ್ದುಪಡಿಯನ್ನು ತರಲಾಯಿತು” ಎಂದು ಕಾಮತ್ ಹೇಳುತ್ತಾರೆ.
 • ಕಾಮತ್‌: ಇದನ್ನು ಸಂವಿಧಾನ ರಚನೆಕಾರರು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಸರ್ಕಾರವು ಈಗ ಇದನ್ನು ಪುನರುತ್ಥಾನಗೊಳಿಸಲು ಪ್ರಯತ್ನಿಸುತ್ತಿದೆ. ಇದು ಸಾಧ್ಯವಿಲ್ಲ.
 • ಕಾಮತ್: ನೀವು ಆರ್ಟಿಕಲ್ 19 ಅನ್ನು ಕ್ಲೈಮ್ ಮಾಡಿದರೆ ಅದು ಆರ್ಟಿಕಲ್ 25 ರ ಹಕ್ಕುಗಳನ್ನು ನಾಶಪಡಿಸುತ್ತದೆ ಎಂದು ಅಡ್ವೋಕೇಟ್‌ ಜನರಲ್‌ ಆಶ್ಚರ್ಯಕರವಾದ ವಾದ ಮಾಡಿದ್ದಾರೆ.
 • ನ್ಯಾಯಮೂರ್ತಿ ದೀಕ್ಷಿತ್: ನಾನು ಅವರಿಗೆ ಉತ್ತರಿಸಿದ್ದೇನೆ.
 • ಕಾಮತ್: ನಂತರ ಸಾಂವಿಧಾನಿಕ ನೈತಿಕತೆಯನ್ನು ಉಲ್ಲೇಖಿಸಲಾಗಿದೆ. ಇದು ನಮ್ಮ ಹಕ್ಕುಗಳ ನ್ಯಾಯಶಾಸ್ತ್ರವನ್ನು ಮತ್ತೊಮ್ಮೆ ತಲೆಕೆಳಗು ಮಾಡುತ್ತಿದೆ. ಸಾಂವಿಧಾನಿಕ ನೈತಿಕತೆಯು ಮೂಲಭೂತ ಹಕ್ಕಿನ ಮೇಲಿನ ನಿರ್ಬಂಧವಲ್ಲ ಆದರೆ ಅದು ರಾಜ್ಯಗಳ ಅಧಿಕಾರದ ಮೇಲಿನ ನಿರ್ಬಂಧವಾಗಿದೆ.
 • ಕಾಮತ್: ಶಬರಿಮಲೆ, ನವತೇಜ್ ಜೋಹರ್ ತೀರ್ಪುಗಳು ಆಯ್ಕೆಯ ಪರವಾಗಿರುವ ತೀರ್ಪುಗಳಾಗಿವೆ. ಸಾಂವಿಧಾನಿಕ ನೈತಿಕತೆಯು ಆಯ್ಕೆಯ ಪರವಾಗಿದೆ. ಇದು ಸರ್ಕಾರದ ಅಧಿಕಾರದ ಮೇಲಿನ ನಿರ್ಬಂಧವಾಗಿದೆ.
 • ಕಾಮತ್: ಹಿಜಾಬ್‌ಗೆ ಅನುಮತಿ ನೀಡಿದರೆ, ಅದನ್ನು ದುರುಪಯೋಗ ಮಾಡುವ ಸಾಧ್ಯತೆಯ ಮೇಲೆ ವಾದಗಳನ್ನು ಮಾಡಲಾಗುತ್ತದೆ. ಒಂದು ವೇಳೆ ಹಿಜಾಬ್‌ಗೆ ಅನುಮತಿ ನೀಡಿದರೆ, ಇತರರು ಧಾರ್ಮಿಕ ಉಡುಗೆ ಮತ್ತು ಚಿಹ್ನೆಗಳನ್ನು ಧರಿಸಿ ಬರುತ್ತಾರೆ, ಬ್ರಾಹ್ಮಣ ಹುಡುಗರು, ಇತ್ಯಾದಿಯಾಗಿ ಹೇಳಲಾಗುತ್ತಿದೆ. ಸಂವಿಧಾನದ ಅಧಿಕಾರ ವ್ಯಾಪ್ತಿಯಲ್ಲಿ, ನಾವು ಸತ್ಯಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬೇಕು, ಊಹೆಯ ಮೇಲೆ ಅಲ್ಲ.
 • ಕಾಮತ್‌: ಇತರೆ ನ್ಯಾಯವ್ಯಾಪ್ತಿ ಬಗ್ಗೆ ಕೆಲವು ವಾದ ಮಾಡಲಾಗಿದೆ. ಪೂವಯ್ಯ ಅವರು ಟರ್ಕಿಯ ಯುರೋಪಿಯನ್ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿದರು. ಅಲ್ಲಿ ಅವರು ಶಿರವಸ್ತ್ರ ನಿಷೇಧ ಎತ್ತಿಹಿಡಿಯಲಾಗಿದೆ ಎಂದು ಹೇಳಿದರು. ಈ ನಿರ್ಧಾರವನ್ನು ನಂತರ ರದ್ದುಗೊಳಿಸಲಾಯಿತು. ಟರ್ಕಿಯ ಸಾಂವಿಧಾನಿಕ ನ್ಯಾಯಾಲಯವು ನಿಷೇಧವನ್ನು ರದ್ದುಗೊಳಿಸಿದೆ.
 • ಕಾಮತ್‌: “ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗಗಳ ಕಾಯಿದೆ” ಎಂಬ ಸಂಸದೀಯ ಕಾನೂನು ಇದೆ. ಇದು ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಮಕ್ಕಳ ಹಕ್ಕುಗಳೆಂದರೆ ಭಾರತವು ಸಹಿ ಮಾಡಿರುವ ಮಕ್ಕಳ ಹಕ್ಕುಗಳ ಕಾಯಿದೆ. ಇದನ್ನು ಅಂತರರಾಷ್ಟ್ರೀಯ ಸಮಾವೇಶದಂತೆಯೇ ಸಂಸತ್ತು ವ್ಯಾಖ್ಯಾನಿಸಿದೆ. ಅಂತರರಾಷ್ಟ್ರೀಯ ಸಮಾವೇಶವು ಸ್ಕಾರ್ಫ್ ಅನ್ನು ಸ್ಪಷ್ಟವಾಗಿ ಸ್ವೀಕರಿಸುತ್ತದೆ. ಭಾರತ ಸೇರಿದಂತೆ 196 ದೇಶಗಳಿಂದ ಅಂಗೀಕರಿಸಲ್ಪಟ್ಟ ಮಕ್ಕಳ ಹಕ್ಕುಗಳ ಸಮಾವೇಶ ಶಿರವಸ್ತ್ರವನ್ನು ಸ್ಪಷ್ಟವಾಗಿ ಗುರುತಿಸುತ್ತದೆ.
 • ಕಾಮತ್‌: ಹಿಜಾಬ್ ಪ್ರತಿಗಾಮಿ ಅಭ್ಯಾಸ ಎಂದು ವಾದಿಸಲಾಗಿದೆ. ಹುಡುಗಿಯರನ್ನು ಯಾಕೆ ಮುಚ್ಚಬೇಕು ಎಂದು ವಾದಿಸಲಾಗಿದೆ. ಇದು ಪ್ರತಿಗಾಮಿತನ ಅಲ್ಲ ಎಂದು ಸಾಬೀತು ಮಾಡಲು ನಾನು ಈ ಕಾಯಿದೆಯನ್ನು ತೋರಿಸುತ್ತಿದ್ದೇನೆ. ಇದು ವೈವಿಧ್ಯತೆಯ ಪ್ರದರ್ಶನ ಮಾತ್ರ.
 • ಮುಖ್ಯ ನ್ಯಾಯಮೂರ್ತಿ: ಹಿಜಾಬ್ ಮಾನ್ಯತೆ ಪಡೆದ ಶಿರವಸ್ತ್ರವಲ್ಲ ಎಂದು ಯಾರೂ ನಿರಾಕರಿಸುವುದಿಲ್ಲ. ಅದ ಘನತೆಗೆ ಸಂಬಂಧಿಸಿದಂತೆ ವಾದಿಸಲಾಯಿತು.
 • ಕಾಮತ್: ಉಲ್ಲೇಖಿಸಲಾದ ಇತರ ನ್ಯಾಯವ್ಯಾಪ್ತಿ ಫ್ರಾನ್ಸ್ ಆಗಿತ್ತು. ಫ್ರಾನ್ಸ್ ಮತ್ತು ಟರ್ಕಿ ಮಕ್ಕಳ ಹಕ್ಕುಗಳ ಸಮಾವೇಶಕ್ಕೆ ಹೊರತಾಗಿವೆ.
 • ಕಾಮತ್: ಕೊನೆಯದಾಗಿ ನಾನು ಹೇಳಬಯಸುತ್ತೇನೆ, ಇದರ ಒಟ್ಟು ಫಲಿತಾಂಶ ಏನು. ಒಟ್ಟು ಫಲಿತಾಂಶವೆಂದರೆ ತಲೆಗೆ ಸ್ಕಾರ್ಫ್ ಅಥವಾ ಪೇಟವನ್ನು ಬಯಸುವ ಜನರು, ಈ ಸರ್ಕಾರಿ ಆದೇಶದ ನೆಪದಲ್ಲಿ ಶಿಕ್ಷಣದ ಹಕ್ಕಿನಿಂದ ನಿರಾಕರಿಸಲ್ಪಡುತ್ತಾರೆ. ಅವರ ಶಿಕ್ಷಣದ ಹಕ್ಕು ಅತ್ಯಂತ ಮಹತ್ವದ್ದಾಗಿದೆ. ಸರ್ಕಾರವು ಇದನ್ನು ಸುಗಮಗೊಳಿಸಬೇಕು ಮತ್ತು ಸಕ್ರಿಯಗೊಳಿಸುವ ವಾತಾವರಣವನ್ನು ಸೃಷ್ಟಿಸಬೇಕು. ಶಿಕ್ಷಣದ ಹಕ್ಕು 21ರ ವಿಧಿ ಅಡಿಯಲ್ಲಿ ಬದುಕುವ ಹಕ್ಕಿನ ಒಂದು ಭಾಗವಾಗಿದೆ. ಈ ನಿಯಮವು ಜನರು ಸರ್ಕಾರದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ಪರಿಸ್ಥಿತಿಗೆ ಕಾರಣವಾಗುತ್ತಿದ್ದರೆ ಅದನ್ನು 21 ರ ಅಡಿಯಲ್ಲಿ ಪ್ರಶ್ನಿಸಬಹುದಾಗಿದೆ.
 • ಮುಖ್ಯ ನ್ಯಾಯಮೂರ್ತಿ: ನೀವು ಇದನ್ನು ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಹೇಳಲು ಬಯಸುತ್ತೀರಾ ಅಥವಾ 25 ನೇ ವಿಧಿ ಆಕರ್ಷಿಸಲು ಅದು ಅತ್ಯಗತ್ಯ ಧಾರ್ಮಿಕ ಆಚರಣೆ ಆಗಿರಬೇಕು ಎಂದು ನೀವು ಹೇಳಲು ಬಯಸುತ್ತೀರಾ ಎಂಬುದರ ಕುರಿತು ಮೊದಲು ನಿಮ್ಮ ನಿಲುವು ತಿಳಿಸಿ.
 • ಕಾಮತ್‌: ಇದು ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ನಿರ್ಬಂಧ ಹಾಕುವ ಸರ್ಕಾರಿ ಆದೇಶ ಕಾನೂನುಬಾಹಿರ ಎಂದೂ ಹೇಳುತ್ತಿದ್ದೇನೆ. ಹಿಜಾಬ್‌ ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಹೇಳಲು ನಾವು ಕುರಾನ್‌ನಿಂದ ಸೂರಾಗಳನ್ನು ಉಲ್ಲೇಖಿಸಿದ್ದೇವೆ. ಇದು ಕುರಾನ್.ಕಾಂನಲ್ಲಿ ಇದೆ.
 • ನ್ಯಾಯಮೂರ್ತಿ ದೀಕ್ಷಿತ್‌: ದೇಶದ ಯಾವುದಾದರೂ ನ್ಯಾಯಾಲಯ ಇದನ್ನು ಅಧಿಕೃತ ಪಠ್ಯವೆಂದು ಪರಿಗಣಿಸಿದೆಯೇ?
 • ಕಾಮತ್: http://Quran.com ಸೈಯದ್ ಯೂಸುಫ್‌ ಅಲಿ ಸೇರಿದಂತೆ ವಿವಿಧ ಲೇಖಕರ ಸಂಕಲನವಾಗಿದೆ. ಇದು ಅನಧಿಕೃತ ಅನುವಾದವಲ್ಲ. ಖುರಾನ್ ಶ್ಲೋಕಗಳು ಸ್ಪಷ್ಟವಾಗಿ ಹೇಳುತ್ತವೆ.
 • ಮುಖ್ಯ ನ್ಯಾಯಮೂರ್ತಿ: ಎಲ್ಲಿ ಹೇಳಲಾಗಿದೆ?
 • ಕಾಮತ್ ಕುರಾನಿನ ಶ್ಲೋಕಗಳನ್ನು ಉಲ್ಲೇಖಿಸುತ್ತಾರೆ. ಅರೇಬಿಕ್ ಪದ “ಖಮೇರ್”.
 • ಮುಖ್ಯ ನ್ಯಾಯಮೂರ್ತಿ: ಖಮೇರ್ ಹಿಜಾಬ್ ಅಲ್ಲ.
 • ಕಾಮತ್ : ಖಿಮರ್ ಒಂದು ಮುಸುಕು, ಅದು ಘೂಂಗಾಟ್ ಹಾಗೆ.
 • ತ್ರಿವಳಿ ತಲಾಖ್ ಪ್ರಕರಣದಲ್ಲಿ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರ ತೀರ್ಪನ್ನು ಉಲ್ಲೇಖಿಸಿದ ಕಾಮತ್: ಕುರಾನ್‌ನಲ್ಲಿ ಉಲ್ಲೇಖಿಸಿರುವುದನ್ನು ಅನುಸರಿಸಬೇಕು. ಎರಡನೆಯ ಮೂಲವೆಂದರೆ ಹದೀಸ್. ಹದೀಸ್ ಖುರಾನ್‌ನಂತೆಯೇ ಅಧಿಕೃತವಾಗಿದೆ. ಶಾಯಿರಾ ಬಾನೋ ಪ್ರಕರಣದಲ್ಲಿ, ಹದೀಸ್ ಕುರಾನ್‌ನ ಜೊತೆಗೆ ನಿಲ್ಲುತ್ತದೆ ಎಂದು ನ್ಯಾಯಮೂರ್ತಿ ನಾರಿಮನ್ ಅವರು ತೀರ್ಪಿನಲ್ಲಿ ಹೇಳುತ್ತಾರೆ.
 • ಕಾಮತ್: ಪ್ರತಿವಾದಿ ವಕೀಲರು ಕೇರಳ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ನ ಎರಡು ತೀರ್ಪುಗಳನ್ನು ಆಕ್ಷೇಪಿಸಿಲ್ಲ. ಅಲ್ಲಿ ಅವರು ಪರ್ದಾ ಅಥವಾ ಬುರ್ಖಾ ಅತ್ಯಗತ್ಯ ಆಚರಣೆಯಲ್ಲ, ಆದರೆ ಶಿರವಸ್ತ್ರ ಅತ್ಯಗತ್ಯ ಎಂದು ತೀರ್ಮಾನಕ್ಕೆ ಬಂದರು. ಅವರಲ್ಲಿ ಯಾರೂ ಶಿರವಸ್ತ್ರವು ಧಾರ್ಮಿಕ ಆಚರಣೆಯ ಅತ್ಯಗತ್ಯ ಭಾಗವಲ್ಲ ಎಂಬ ನಿರ್ಧಾರವನ್ನು ಉಲ್ಲೇಖಿಸಿಲ್ಲ. ನಾನು ಕನಿಷ್ಠ ಮೂರು ಭಾರತದ ತೀರ್ಪುಗಳನ್ನು ಉಲ್ಲೇಖಿಸಿದ್ದೇನೆ. ಅದು ಶಿರವಸ್ತ್ರವು ಇಸ್ಲಾಂನ ಅಗತ್ಯ ಭಾಗವಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.
 • ಕಾಮತ್: ಸರ್ಕಾರದ ಆದೇಶ ಕಾನೂನುಬಾಹಿರವಾಗಿದೆ ಎಂದು ನಾನು ವಾದಿಸುತ್ತೇನೆ. ಸಂವಿಧಾನ ಕರಡು ರಚಿಸಿದ ಬಳಿಕ ಡಾ. ಬಿ ಆರ್‌ ಅಂಬೇಡ್ಕರ್‌ ಅವರು “ನಮ್ಮದು ಶ್ರೇಷ್ಠವಾದ ಸಂವಿಧಾನ ಆದರೆ ಅದನ್ನು ಜಾರಿಗೊಳಿಸುವವರು ಕೆಟ್ಟವರಾದರೆ ಅದು ಕೆಟ್ಟದಾಗುತ್ತದೆ” ಎಂದು ಹೇಳಿದ್ದನ್ನು ಪ್ರಸ್ತಾಪಿಸಿ ನನ್ನ ವಾದವನ್ನು ಪೂರ್ಣಗೊಳಿಸುವೆ. ಸರ್ಕಾರವು ಉತ್ತಮ ಸಂವಿಧಾನವನ್ನು ಜಾರಿಗೊಳಿಸಿದ ರೀತಿ ಕೆಟ್ಟದಾಗಿದೆ.
 • ವಾದ ಪೂರ್ಣಗೊಳಿಸಿದ ಹಿರಿಯ ವಕೀಲ ಕಾಮತ್‌
 • CFI ವಿರುದ್ಧ ದಾಖಲಾದ ದೂರಿನಲ್ಲಿ, ತನಿಖೆಯ ಪ್ರಗತಿಯ ಕುರಿತ ವರದಿ ಬಗ್ಗೆ ಅಡ್ವೊಕೇಟ್ ಜನರಲ್ ಮುಚ್ಚಿದ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುತ್ತಾರೆ.
 • ನಾಳೆ ವಿಚಾರಣೆ ಮುಗಿಯಲಿದ್ದು, ನಾಳೆ ನ್ಯಾಯಾಲಯ ಉಳಿದ ಅರ್ಜಿದಾರರ ವಿಚಾರಣೆ ನಡೆಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳುತ್ತಾರೆ.
 • ನಾಳೆ ತೀರ್ಪು ಕಾಯ್ದಿರಿಸಲಾಗುತ್ತದೆ. 2-3 ದಿನಗಳಲ್ಲಿ ಲಿಖಿತ ವಾದ ಸಲ್ಲಿಸುವಂತೆ ಕಕ್ಷಿದಾರರಿಗೆ ಸೂಚನೆ. ಶುಕ್ರವಾರ ಮಧ್ಯಾಹ್ನ 2.30 ಕ್ಕೆ ವಿಚಾರಣೆ ಮುಂದೂಡಿಕೆ.

ಶಿಕ್ಷಣ ಕಾಯಿದೆ ಮತ್ತು ಸಮವಸ್ತ್ರ ನಿಯಮ ಸಮಾಜ ಸುಧಾರಣೆಯ ಅಳತೆಗೋಲು ಅಲ್ಲ: ಹಿರಿಯ ವಕೀಲ ದೇವದತ್‌ ಕಾಮತ್‌‌

ಅಪ್‌ಡೇಟ್‌ – 04:50 PM

 • ಕಾಮತ್: ಸರ್ಕಾರಿ ಆದೇಶ ರದ್ದಾದರೆ, ಎರಡನೆಯ ಪ್ರಶ್ನೆ ಉದ್ಭವಿಸುವುದಿಲ್ಲ.
 • ಮುಖ್ಯ ನ್ಯಾಯಮೂರ್ತಿ: ಸಮವಸ್ತ್ರವನ್ನು ಸೂಚಿಸಿರುವ ಸಂಸ್ಥೆಯೊಳಗೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಹೇಗೆ ಕೇಳುತ್ತೀರಿ? ನಿಮಗೆ ಮೂಲಭೂತ ಹಕ್ಕಿದೆ ಎಂದು ನೀವು ಹೇಳುತ್ತೀರಿ ನಾವು ಅದನ್ನು ಅರ್ಥಮಾಡಿಕೊಳ್ಳಲು ಬಯಸುತ್ತೇವೆ. ಅಡ್ವೊಕೇಟ್‌ ಜನರಲ್‌‌ ಹೇಳುವುದನ್ನು ಮರೆತುಬಿಡಿ, ಮೊದಲು ನೀವು ನಿಮ್ಮ ಹಕ್ಕುಗಳ ಬಗ್ಗೆ ಸಾಬೀತುಪಡಿಸಿ.
 • ಮುಖ್ಯ ನ್ಯಾಯಮೂರ್ತಿ: ನೀವು ಸ್ಕಾರ್ಫ್ ಧರಿಸಲು ಹೇಳುತ್ತಿದ್ದೀರಿ, ಆದರೆ ಕಾಲೇಜಿನಲ್ಲಿ ಸಮವಸ್ತ್ರವನ್ನು ಸೂಚಿಸಲಾಗಿದೆ. ಈಗ ಹಿಜಾಬ್‌ ನಿಮ್ಮ ಮೂಲಭೂತ ಹಕ್ಕು ಎನ್ನುತ್ತೀರಿ, ಆ ಮೂಲಭೂತ ಹಕ್ಕು ಯಾವುದು ಎಂದು ಹೇಳುತ್ತೀರಾ?
 • ಕಾಮತ್: ಸರ್ಕಾರವು ಆ ಹಕ್ಕನ್ನು ಪ್ರಶ್ನಿಸುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ.
 • ಮುಖ್ಯ ನ್ಯಾಯಮೂರ್ತಿ: ಸರ್ಕಾರವನ್ನು ಮರೆತುಬಿಡಿ, ಮೊದಲು ನಿಮ್ಮ ಹಕ್ಕುಗಳ ಬಗ್ಗೆ ಸಾಬೀತುಪಡಿಸಿ.
 • ಕಾಮತ್(ಆರ್ಟಿಕಲ್ 25 ಅನ್ನು ಓದುತ್ತಾ): ಇದು ಅತ್ಯಗತ್ಯ ಮತ್ತು ಅನಿವಾರ್ಯವಲ್ಲದ ಆಚರಣೆಗಳನ್ನು ಒಳಗೊಂಡಿದೆ.
 • ಕಾಮತ್: ಆರ್ಟಿಕಲ್ 25 ಹಕ್ಕುಗಳ ಮೇಲಾವರಣವನ್ನು ನೀಡುತ್ತದೆ.
 • ಮುಖ್ಯ ನ್ಯಾಯಮೂರ್ತಿ: ಇದು ಆತ್ಮಸಾಕ್ಷಿಯ ಸ್ವಾತಂತ್ರ್ಯವೊ ಅಥವಾ ಧರ್ಮವನ್ನು ಆಚರಣೆಯೊ? ಯಾವುದು ಇದು?
 • ಕಾಮತ್: ಇದು ಧಾರ್ಮಿಕ ಆಚರಣೆ.
 • ಮುಖ್ಯ ನ್ಯಾಯಮೂರ್ತಿ: ಯಾವ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ತಿಳಿಯಲು ನಾವು ಬಯಸುತ್ತೇವೆ.
 • ಕಾಮತ್: ಹಕ್ಕನ್ನು ನೋಡುವ ಮೊದಲು, ಅದು ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು.
 • ಮುಖ್ಯ ನ್ಯಾಯಮೂರ್ತಿ: ನೀವು ನ್ಯಾಯಾಲಯಕ್ಕೆ ಬಂದಿದ್ದೀರಿ ಆದ್ದರಿಂದ ನೀವು ಹಕ್ಕನ್ನು ಸಾಬೀತುಪಡಿಸಬೇಕು.
 • ಮುಖ್ಯ ನ್ಯಾಯಮೂರ್ತಿ: ಇದು ಸಮವಸ್ತ್ರವನ್ನು ನಿಗದಿಪಡಿಸಿದ ಸಂಸ್ಥೆಯಾಗಿದೆ.
 • ಕಾಮತ್: ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ಶಿಕ್ಷಣ ಕಾಯಿದೆ ಮತ್ತು ನಿಯಮಗಳು ಸಮಾಜ ಸುಧಾರಣೆಯೇ ಎಂಬುದು ನ್ಯಾಯಾಲಯದ ಮುಂದೆ ಇರುವ ಪ್ರಶ್ನೆಯಾಗಿದೆ.
 • ಮುಖ್ಯ ನ್ಯಾಯಮೂರ್ತಿ: ಆರ್ಟಿಕಲ್ 25 (2) ಸರ್ಕಾರಕ್ಕೆ ನೀಡುವ ಸುಧಾರಣಾ ಶಕ್ತಿಯಾಗಿದೆ.
 • ಕಾಮತ್: ಬಿಜೊ ಇಮ್ಯಾನ್ಯುಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ವಿದ್ಯಾರ್ಥಿಗಳನ್ನು ಹಕ್ಕುಗಳನ್ನು ತೋರಿಸುವಂತೆ ಕೇಳಲಿಲ್ಲ, ನಿಮ್ಮ ನಿರ್ಬಂಧ ತೋರಿಸಿ ಎಂದು ಕೇಳಿದ್ದರು. ಯಾವುದೇ ನಿರ್ಬಂಧವಿಲ್ಲದಿದ್ದರೆ ಅತ್ಯಗತ್ಯ ಧಾರ್ಮಿಕ ಆಚರಣೆಯ ಪ್ರಶ್ನೆಯೇ ಇಲ್ಲ. ಸರ್ಕಾರವು ಇಲ್ಲಿ ಕಾನೂನನ್ನು ತಲೆಕೆಳಗು ಮಾಡಿದೆ. ಅತ್ಯಗತ್ಯ ಧಾರ್ಮಿಕ ಆಚರಣೆ 25(1) ಅಡಿಯಲ್ಲಿ ಬರುವ ಮೂಲಭೂತ ಹಕ್ಕಿನ ಮೇಲಿನ ನಿರ್ಬಂಧವಲ್ಲ. ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದು ಧಾರ್ಮಿಕ ಆಚರಣೆಯಲ್ಲಿ ಹಸ್ತಕ್ಷೇಪ ಮಾಡುವ ರಾಜ್ಯದ ಅಧಿಕಾರದ ಮೇಲಿನ ನಿರ್ಬಂಧವಾಗಿದೆ. ಪರಿಗಣನೆಗೆ ಮೊದಲು ಉದ್ಭವಿಸುವ ಪ್ರಶ್ನೆ – ನಿರ್ಬಂಧ ಎಲ್ಲಿದೆ?
 • ನ್ಯಾಯಮೂರ್ತಿ ದೀಕ್ಷಿತ್: ಏನಿದು ನಿರ್ಬಂಧ? ನಿಮ್ಮ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ದೂರಿ ನ್ಯಾಯಾಲಯಕ್ಕೆ ಬಂದಿದ್ದೀರಿ. ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ನಿಮ್ಮ ಹಕ್ಕು ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
 • ಕಾಮತ್: ನಿಮಗೆ ಆಭಾರಿಯಾಗಿದ್ದೇನೆ. ಇದು ಇಡೀ ಪ್ರಕರಣದ ಹೃದಯ ಭಾಗ.
 • ಕಾಮತ್: 25(1)ನೇ ವಿಧಿಯ ಮೇಲಾವರಣ, ಅಗಲ ಮತ್ತು ಹಕ್ಕುಗಳ ವ್ಯಾಪ್ತಿಯನ್ನು ನಿರ್ದಿಷ್ಟ ಸೂತ್ರದಲ್ಲಿ ಇರಿಸಲು ಸಮರ್ಥವಾಗಿಲ್ಲ. ಸ್ಕಾರ್ಫ್ ಅನ್ನು ಧರಿಸುವುದು ನನ್ನ ಧಾರ್ಮಿಕ ಆಚರಣೆಯಾಗಿದೆ, ಅದನ್ನು ಈಗ ನಿರ್ಬಂಧಿಸಲಾಗಿದೆ. ಇದನ್ನು ನಿರ್ಬಂಧಿಸುವುದಿದ್ದರೆ, ನಿರ್ಬಂಧಿಸಿರುವ ಕಾನೂನು ಎಲ್ಲಿದೆ? ಇಂತಹ ಕಾನೂನು ಇಲ್ಲ ಎಂದು ನಾನು ಹೇಳುತ್ತೇನೆ.
 • ಕಾಮತ್: ಶಿಕ್ಷಣ ಕಾಯಿದೆಯು ಆರ್ಟಿಕಲ್ 25(2) ರ ಅರ್ಥದಲ್ಲಿ ಬರುವ ಧರ್ಮದ ಸುಧಾರಣೆಗಾಗಿ ಬರುವ ಕಾಯಿದೆಯಲ್ಲ. ಕಣ್ಣಿಗೆ ಕಾಣದ ಎಲಿಯನ್ ಕಾಯ್ದೆಯಿಂದ ಆಕಸ್ಮಿಕವಾಗಿ ಉಲ್ಲಂಘನೆಯ ಕುರಿತು ಮಾತನಾಡುವ ಯಾವುದೇ ತೀರ್ಪು ಇಲ್ಲ. ಶಿಕ್ಷಣ ಕಾಯಿದೆ ಮತ್ತು ಸಮವಸ್ತ್ರ ನಿಯಮವು ಸಮಾಜ ಸುಧಾರಣೆಯ ಅಳತೆಗೋಲು ಆಗುವುದಿಲ್ಲ.

ಹಿಜಾಬ್ ನಿಷೇಧ ಮಾಡಿರುವ ಸರ್ಕಾರಿ ಆದೇಶ ರದ್ದಾದರೆ ಪ್ರಕರಣ ಕೊನೆಗೊಳ್ಳುತ್ತದೆ: ಹಿರಿಯ ವಕೀಲ ದೇವದತ್‌ ಕಾಮತ್‌

ಅಪ್‌ಡೇಟ್‌ – 04:40 PM

 • ವಕೀಲ ಅಹ್ಮದ್: ಭಂಡಾರ್ಕರ್‍ಸ್‌ ಕಾಲೇಜು ಪ್ರವೇಶ ಪಡೆಯುವ ಸಮಯದಲ್ಲಿ ನನಗೆ ಸ್ಕಾರ್ಫ್ ಧರಿಸಲು ಅನುಮತಿ ನೀಡಿತ್ತು. ಈಗ ಅವುಗಳನ್ನು ನಿರ್ಬಂಧಿಸಲಾಗಿದೆ. ಅರ್ಜಿದಾರರು ಪದವಿ ಕಾಲೇಜು ವಿದ್ಯಾರ್ಥಿಗಳು.
 • ಮುಖ್ಯ ನ್ಯಾಯಮೂರ್ತಿ: ಇದು ಏಕ ನ್ಯಾಯಾಧೀಶರ ಮುಂದೆ ಇರುವ ಅರ್ಜಿಯೊಂದಿಗೆ ಸಂಪರ್ಕ ಹೊಂದಿರಲಿ.
 • ಪ್ರತಿಭಟನೆಯ ಪ್ರಚೋದನೆಯ ತನಿಖೆಯನ್ನು ಕೋರಿ ಘನಶಾಮ್ ಉಪಾಧ್ಯಾಯ ಸಲ್ಲಿಸಿದ PIL ಅನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತು.
 • ನ್ಯಾಯಮೂರ್ತಿ ದೀಕ್ಷಿತ್: ನೀವು ನ್ಯಾಯಾಲಯದ ಶುಲ್ಕವನ್ನು ಪಾವತಿಸಿಲ್ಲ, ಅದಿಲ್ಲದೆ ನಾವು ಅರ್ಜಿ ತೆಗೆದುಕೊಳ್ಳುವುದಿಲ್ಲ.
 • ವಕೀಲ ಸುಭಾಷ್ ಝಾ: ನಾನು ಅದನ್ನು ಇಂದು ಅಥವಾ ನಾಳೆ ಪಾವತಿಸುತ್ತೇನೆ.
 • ಮುಖ್ಯ ನ್ಯಾಯಮೂರ್ತಿ: ನ್ಯಾಯಾಲಯದ ಶುಲ್ಕ ಅಷ್ಟೇ ಅಲ್ಲ. ಮನವಿಯಲ್ಲಿ 14 ಆಕ್ಷೇಪಣೆಗಳಿವೆ. ನ್ಯಾಯಾಲಯದ ಶುಲ್ಕ ಮತ್ತು ಅಗತ್ಯ ರೀತಿಯಲ್ಲಿ ಮನವಿ ಸಲ್ಲಿಸದಿರುವುದರಿಂದ ಈ ಮನವಿ ನಿರ್ವಹಣೆಗೆ ಅರ್ಹವಲ್ಲ. ಆಕ್ಷೇಪಣೆ ಸರಿಪಡಿಸಿ ಸಲ್ಲಿಸಿ. ನಿಮ್ಮ ವಾದವನ್ನು ನಾಳೆ ಆಲಿಸುತ್ತೇವೆ.
 • ಹಿರಿಯ ವಕೀಲ ದೇವದತ್‌ ಕಾಮತ್‌ ಅವರಿಂದ ಪ್ರತ್ಯುತ್ತರ ವಾದ ಆರಂಭ.
 • ಕಾಮತ್: ನಾನು ನನ್ನ ಹಿರಿಯ ಸ್ನೇಹಿತರಿಂದ ಚಕಿತಗೊಳಿಸುವ ವಾದಗಳನ್ನು ಕೇಳಿದ್ದೇನೆ. ಇದು ಕಲಿಕೆಯ ಪ್ರಕ್ರಿಯೆಯಾಗಿತ್ತು. ಹಗುರವಾದ ಧಾಟಿಯಲ್ಲಿ ಹೇಳುವುದಾದರೆ, ನಾನು ಬ್ಯಾಟ್ಸ್‌ಮನ್‌ನಂತೆ, ಎರಡೂ ಕಡೆಯಿಂದ ವೇಗದ ಎಸೆತಗಳನ್ನು ಎದುರಿಸುತ್ತೇನೆ.
 • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ನೀವೆ ಆರಂಭಿಕರು.
 • ಕಾಮತ್: ಕೆಲವು ಉತ್ತಮ ಎಸೆತಗಳು ಬಂದಿದ್ದು, ಅವುಗಳನ್ನು ನಾನು ಎದುರಿಸಬೇಕಿದೆ. ಕೆಲವೊಂದು ವೈಡ್‌ ಬಾಲ್‌ಗಳಾಗಿದ್ದು, ಅವುಗಳನ್ನು ಪರಿಗಣಿಸಬೇಕೆ ಅಥವಾ ಬೇಡಬೇ ಎಂಬುದನ್ನು ನ್ಯಾಯಾಲಯ ನಿರ್ಧರಿಸಬೇಕು. ಕೆಲವೊಂದು ಅಜಾಗರೂಕ ನಿರ್ಧಾರಗಳು, ಭಿನ್ನಾಭಿಪ್ರಾಯದ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ.
 • ಇದನ್ನು ಲಘು ದಾಟಿಯಲ್ಲಿ ಹೇಳುತ್ತಿದ್ದೇನೆ ಎಂದ ಕಾಮತ್‌.
 • ನ್ಯಾಯಮೂರ್ತಿ ದೀಕ್ಷಿತ್‌: ನ್ಯಾಯಾಲಯದ ಕೊಠಡಿಯಲ್ಲೂ ಸ್ವಲ್ಪ ಹಾಸ್ಯ ಇರಬೇಕು.
 • ಕಾಮತ್: ನನ್ನ ಕಕ್ಷಿದಾರ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶದ ಸಮಯದಿಂದ ಸರ್ಕಾರದ ಆದೇಶ ಬರುವವರೆಗೂ ತಲೆಗೆ ಸ್ಕಾರ್ಫ್ ಧರಿಸಿದ್ದರು ಎಂದು ನಾನು ನಿರ್ದಿಷ್ಟವಾಗಿ ಮನವಿ ಮಾಡಿದ್ದೇನೆ. ಪ್ಯಾರಾಗ್ರಾಫ್ 6ಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತ್ಯುತ್ತರ/ನಿರಾಕರಣೆ ಇಲ್ಲ. ಇದು ಬಾಲಕ-ಬಾಲಕಿಯರು ಸೇರಿ ಕಲಿಯುವ ಶಾಲೆ.
 • ಮುಖ್ಯ ನ್ಯಾಯಮೂರ್ತಿ: ನೀವು ಯಾವಾಗ ಪ್ರವೇಶ ಪಡೆದಿದ್ದೀರಿ?
 • ಕಾಮತ್: 2 ವರ್ಷಗಳ ಹಿಂದೆ.
 • ಕಾಮತ್: ದಯವಿಟ್ಟು ನನ್ನ ಪರಿಹಾರಗಳನ್ನು ನೋಡಿ. ಸ್ಕಾರ್ಫ್ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಾಗಿದೆ ಎಂಬ ಸಾಮಾನ್ಯ ಘೋಷಣೆಯನ್ನು ನಾನು ಕೇಳುತ್ತಿಲ್ಲ. ನಾನು ಪ್ರಾಥಮಿಕವಾಗಿ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದೇನೆ. ಸರ್ಕಾರದ ಆದೇಶ ರದ್ದುಪಡಿಸಲು ಮತ್ತು ಅರ್ಜಿದಾರರಿಗೆ ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಕೋರಿದ್ದೇನೆ.
 • ಕಾಮತ್: ನನ್ನ ಪ್ರಾಥಮಿಕ ಸವಾಲು ಸರ್ಕಾರದ ಆದೇಶವಾಗಿದೆ. ಈ ಸರ್ಕಾರಿ ಆದೇಶಕ್ಕೆ ಸಂಬಂಧಿಸಿದಂತೆ ನನ್ನ ಹೆಚ್ಚಿನ ಕಾರ್ಯವು ತುಂಬಾ ಸುಲಭವಾಗಿದೆ. ಏಕೆಂದರೆ 90% ಸರ್ಕಾರಿ ಆದೇಶವನ್ನು ಅಡ್ವೋಕೆಟ್‌ ಕೈಬಿಟ್ಟಿದ್ದಾರೆ. ಅದನ್ನು ಬಿಟ್ಟುಕೊಡಲಾಗಿದೆ.
 • ಕಾಮತ್: ಹಿಜಾಬ್‌ಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಿರುವ 3 ತೀರ್ಪುಗಳು (ಹಿಜಾಬ್ ಅನ್ನು ಉಲ್ಲೇಖಿಸುವ ತೀರ್ಪುಗಳು) ಆದೇಶದ ಉದ್ದೇಶವಲ್ಲ ಎಂದು ಅಡ್ವೋಕೇಟ್‌ ಜನರಲ್‌ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಸರ್ಕಾರಿ ಆದೇಶ ಸಿದ್ಧಪಡಿಸಿದವರ ಅತಿಯಾದ ಉತ್ಸಾಹದ ಪರಿಣಾಮವಾಗಿರಬಹುದು ಮತ್ತು ಅದು ಅಗತ್ಯವಿಲ್ಲದಿರಬಹುದು ಎಂದು ಅವರು ಹೇಳಿದ್ದಾರೆ.
 • ಕಾಮತ್: ಸರ್ಕಾರಿ ಆದೇಶದಲ್ಲಿ ಸರ್ಕಾರದ ಈ ತಿಳುವಳಿಕೆಯು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಮೊದಲನೆಯದಾಗಿ, ಉಲ್ಲೇಖಿಸಿದ ಯಾವುದೇ ತೀರ್ಪುಗಳು ಅನ್ವಯಿಸುವುದಿಲ್ಲ. ಅಡ್ವೊಕೇಟ್‌ ಜನರಲ್‌ ಅವರು ಆ ತೀರ್ಪುಗಳನ್ನು ವಿವರಿಸುವುದಾಗಿ ಕೊನೆಯವರೆಗೂ ಹೇಳುತ್ತಲೇ ಇದ್ದರು. ಆದರೆ ಅವುಗಳನ್ನು ವಿವರಿಸಲಿಲ್ಲ. ನನ್ನ ಪ್ರಕಾರ ಸರ್ಕಾರಿ ಆದೇಶದ ಈ ಭಾಗವನ್ನು ಕೈಬಿಡಬೇಕು.
 • ಕಾಮತ್: ಪೀಠವು ಅಡ್ವೊಕೇಟ್‌ ಜನರಲ್‌ ಅವರು ನೀಡಿದ ರಿಯಾಯಿತಿಯನ್ನು ತಿರಸ್ಕರಿಸಿದರೂ ಸಹ ಸರ್ಕಾರಿ ಆದೇಶದ ಈ ಭಾಗವು ಕೈಬಿಡಬೇಕಾಗುತ್ತದೆ. ಏಕೆಂದರೆ ಇದು ಆಡಳಿತಾತ್ಮಕ ಕಾನೂನಿನಲ್ಲಿ ನಿರ್ದೇಶನ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ. ಸರ್ಕಾರಿ ಆದೇಶದ ಮೂಲಕ ಉನ್ನತ ಅಧಿಕಾರದ ವಲಯವು ಅಧೀನ ಅಧಿಕಾರ ವಲಯಕ್ಕೆ ಹೇಳುವುದೇನೆಂದರೆ ‘ನೀವು ಬಯಸಿದಂತೆ ಏನಾದರೂ ಮಾಡಿ. ಆದರೆ, ಹಿಜಾಬ್ 25ನೇ ವಿಧಿಯ ಭಾಗವಲ್ಲ’. ಹಿಜಾಬ್‌ ಧರಿಸುವುದಕ್ಕೆ ಅನುಮತಿಯಿಲ್ಲ ಎಂಬುವುದಾಗಿದೆ.
 • ಕಾಮತ್: ಸರ್ಕಾರಿ ಆದೇಶದ ಈ ಭಾಗ ಯಾಕೆ ಕೈಬಿಡಬೇಕು ಎಂಬುವುದಕ್ಕೆ ಮೂರನೇ ಕಾರಣವೆಂದರೆ ಅದಕ್ಕೆ ಯಾವುದೇ ಆಧಾರವಿಲ್ಲ. ತೀರ್ಪುಗಳು ಅಪ್ರಸ್ತುತವಾಗಿದ್ದರೆ, ಹಿಜಾಬ್ ಮೂಲಭೂತ ಹಕ್ಕುಗಳ ಒಂದು ಭಾಗವಲ್ಲ ಎಂಬ ಈ ಪ್ರಾಥಮಿಕ ವಿಚಾರವನ್ನು ಪುಷ್ಠೀಕರಿಸಲು ಏನು ಆಧಾರವಿದೆ? ಸರ್ಕಾರಿ ಆದೇಶದ ಕಾರ್ಯನಿರ್ವಹಣಾ ಭಾಗದಲ್ಲಿನ ಕೊನೆಯ ಮೂರು ಸಾಲುಗಳು ಅನಗತ್ಯ ಮತ್ತು ಅಗತ್ಯವಿಲ್ಲ ಎಂದು ಅಡ್ವೋಕೇಟ್‌ ಜನರಲ್‌ ಹೇಳಿದ್ದಾರೆ.
 • ಕಾಮತ್‌: ಅಫಿಡವಿಟ್‌ನಲ್ಲಿ ಸರ್ಕಾರವು ಸಾರ್ವಜನಿಕ ಸುವ್ಯವಸ್ಥೆ(ಪಬ್ಲಿಕ್ ಅರ್ಡರ್‌)ಯ ಆಧಾರದ ಮೇಲೆ ಅದನ್ನು ಮಾಡುತ್ತಿದೆ ಎಂದು ಹೇಳುತ್ತದೆ. ಸರ್ಕಾರ ಆದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಅರ್ಥ ಬರುವ ಹಾಗಿದೆ. ಆದರೆ ವಾದಗಳಲ್ಲಿ ಅಡ್ವೋಕೇಟ್‌ ಅವರು ಇದನ್ನು ಬಿಟ್ಟುಕೊಟ್ಟಿದ್ದಾರೆ. ಸಂವಿಧಾನದಲ್ಲಿ ಇರುವ ಪದಕ್ಕೆ  ವಿರುದ್ಧವಾಗಿ ಪಬ್ಲಿಕ್ ಆರ್ಡರ್‌ ಅನ್ನು ವ್ಯಾಖ್ಯಾನ ಮಾಡಲಾಗಿದೆ. ಇದು ಸರ್ಕಾರಿ ಆದೇಶವನ್ನು ರೂಪಿಸುವ ವಿಧಾನವೇ?
 • ಕಾಮತ್ ತೀರ್ಪನ್ನು ಉಲ್ಲೇಖಿಸುತ್ತಾರೆ.
 • ನ್ಯಾಯಮೂರ್ತಿ ದೀಕ್ಷಿತ್ ಅವರು ಉಲ್ಲೇಖವನ್ನು ನೀಡುತ್ತಾರೆ.
 • ಕಾಮತ್‌(ನ್ಯಾಯಮೂರ್ತಿ ದೀಕ್ಷಿತ್‌ ಅವರಿಗೆ): ನಮ್ಮ ವಯಸ್ಸಿನಲ್ಲಿ ನಮಗೆ ಉಲ್ಲೇಖಗಳು ನೆನಪಿಲ್ಲ, ನಿಮ್ಮ ನೆನಪಿನ ಶಕ್ತಿಯಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ. ಅದು ದೇವರ ಕೊಡುಗೆ.
 • ನ್ಯಾಯಮೂರ್ತಿ ದೀಕ್ಷಿತ್‌: ಸಹಿಷ್ಣುತೆ ಸಹ (ಹಾಸ್ಯದ ದಾಟಿಯಲ್ಲಿ)
 • ಕಾಮತ್: ಹೀಗಾಗಿ, ಸಾರ್ವಜನಿಕ ಸುವ್ಯವಸ್ಥೆ ಆಧಾರವನ್ನೂ ಅವರು ಬಿಟ್ಟುಕೊಟ್ಟಿದ್ದಾರೆ. ಇನ್ನು, ಸಮವಸ್ತ್ರ ಸೂಚಿಸಲು ಕಾಲೇಜು ಅಭಿವೃದ್ಧಿ ಸಮಿತಿಗೆ ವ್ಯಾಪ್ತಿ ಇದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶದಲ್ಲಿ ಕಾಣುವ ವಿರೋಧಭಾಸದ ಅಂಶಕ್ಕೆ ಬರುತ್ತೇನೆ.
 • ಕಾಮತ್: ಅಡ್ವೋಕೇಟ್‌ ಜನರಲ್‌‌ ಅವರು ಹೇಳುತ್ತಾರೆ ನಮ್ಮದು ವೆಸ್ಟ್‌ಮಿನಿಸ್ಟರ್‌ ಮಾದರಿ ಎಂದು. ಶಾಸಕರು ಸಾರ್ವಜನಿಕ ಪ್ರತಿನಿಧಿಗಳು, ಅದರಲ್ಲಿ ಏನು ತಪ್ಪಿದೆ ಎನ್ನುತ್ತಾರೆ. ನಾನು ಹೇಳುತ್ತೇನೆ ಎಲ್ಲವೂ ತಪ್ಪು ಎಂದು. ನಾವು ವೆಸ್ಟ್‌ಮಿನಿಸ್ಟರ್‌ಗೆ ಹೋಗಬೇಕಿಲ್ಲ. ಅದಕ್ಕಾಗಿ ದಯವಿಟ್ಟು ಶಿಕ್ಷಣ ಕಾಯಿದೆಯ ಸೆಕ್ಷನ್ 143 ಅನ್ನು ನೋಡಿ. ಕಾಲೇಜು ಅಭಿವೃದ್ಧಿ ಸಮಿತಿಯನ್ನು 2014 ರ ಸುತ್ತೋಲೆಯಿಂದ ರಚಿಸಲಾಗಿದೆ. ನಾನು ಸುತ್ತೋಲೆಗೆ ಸವಾಲು ಹಾಕುತ್ತಿಲ್ಲ. ಈ ಸಮಿತಿಗೆ ಕಾರ್ಯನಿರ್ವಾಹಕ ಮತ್ತು ಶಾಸನಬದ್ಧ ಕಾರ್ಯ ಜವಾಬ್ದಾರಿ ನೀಡುವುದನ್ನು ನಾನು ಪ್ರಶ್ನಿಸಿದ್ದೇನೆ.
 • ನ್ಯಾಯಮೂರ್ತಿ ದೀಕ್ಷಿತ್: ಈ ಅಂಶವನ್ನು ರವಿವರ್ಮ ಕುಮಾರ್ ಅವರು ಹೇಳಿದ್ದಾರೆ. ಕಾರ್ಯಗಳನ್ನು ಕಾಲೇಜು ಅಭಿವೃದ್ಧಿ ಸಮಿತಿಗೆ ನಿಯೋಜಿಸಲಾಗುವುದಿಲ್ಲ.
 • ಕಾಮತ್: ಸುಪ್ರೀಂ ಕೋರ್ಟ್ ಅಶ್ವಿನಿ ಕುಮಾರ್ ಉಪಾಧ್ಯಾಯ ವರ್ಸಸ್ ಯೂನಿಯನ್ ಆಫ್ ಇಂಡಿಯಾದ ತೀರ್ಪಿನಲ್ಲಿ ಒಬ್ಬ ಶಾಸಕರು ರಾಜ್ಯ ಸರ್ಕಾರದ ಅಧೀನ ಅಧಿಕಾರಿಯಲ್ಲ ಎಂಬುದನ್ನು ಹೇಳಿದೆ.
 • ಕಾಮತ್‌: 2014ರ ಸುತ್ತೋಲೆಯನ್ನು ನಾವು ಪ್ರಶ್ನಿಸಿಲ್ಲ ಎಂದು ವಾದಿಸಿದ್ದಾರೆ. ನಾನು ಅದನ್ನು ಪ್ರಶ್ನಿಸುವ ಅಗತ್ಯವಿಲ್ಲ. ಎಲ್ಲಿಯವರೆಗೆ ಕಾಲೇಜು ಅಭಿವೃದ್ಧಿ ಸಮಿತಿ ಸೂಚಿಸುವ ಸುತ್ತೋಲೆಯು ಮಾರ್ಗದರ್ಶಕ ಮಂಡಲವಾಗಿ ಉಳಿಯುತ್ತದೆ, ನನಗೆ ಸಮಸ್ಯೆ ಇಲ್ಲ. ಕಾಲೇಜಿಗೆ ಕಾಲೇಜು ಅಭಿವೃದ್ಧಿ ಸಮಿತಿ ಮಾರ್ಗದರ್ಶನ ನೀಡಲಿ, ಶಾಸಕರು ಮಾರ್ಗದರ್ಶಕ ಶಕ್ತಿಯಾಗಬಹುದು. ಆದರೆ, ನೀವು ಕಾಲೇಜು ಅಭಿವೃದ್ಧಿ ಸಮಿತಿಗೆ ಶಾಸನಬದ್ಧ ಕಾರ್ಯದ ಅಧಿಕಾರ ನೀಡುವುದೆ ಸಮಸ್ಯೆಯಾಗಿದೆ.
 • ಕಾಮತ್: ಹೀಗಾಗಿ ಸರ್ಕಾರಿ ಆದೇಶವನ್ನು ರದ್ದುಗೊಳಿಸಬೇಕು. ಸರ್ಕಾರಿ ಆದೇಶವನ್ನು ರದ್ದು ಮಾಡಿದರೆ, ಮೂಲಭೂತ ಹಕ್ಕುಗಳ ಅನುಷ್ಠಾನಕ್ಕೆ ಯಾವುದೇ ನಿರ್ಬಂಧವಿಲ್ಲ. ಸಾಂವಿಧಾನಿಕ ತೀರ್ಪಿನಲ್ಲಿ ಯಾವಾಗ ಅಗತ್ಯ ಧಾರ್ಮಿಕ ಆಚರಣೆ ಬರುತ್ತದೆ ಎಂಬುದನ್ನು ನ್ಯಾಯಾಲಯಕ್ಕೆ ಹೇಳದೆಯೇ ಅಗತ್ಯ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ತೀರ್ಪುಗಳ ಮೇಲೆ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ.
 • ನ್ಯಾಯಮೂರ್ತಿ ದೀಕ್ಷಿತ್: ನೀವು ಉತ್ತರವನ್ನು ನೀಡುತ್ತಿರುವಾಗ, ಹೊಸ ವಾದಗಳನ್ನು ಮಾಡಬಾರದು.
 • ಕಾಮತ್: ಅಗತ್ಯ ಧಾರ್ಮಿಕ ಆಚರಣೆ ಪ್ರಶ್ನೆಯನ್ನು ಸರ್ಕಾರಿ ಆದೇಶದ ಮೇಲಿನ ದಾಳಿಯಾಗಿ ಮಾತ್ರ ನಾವು ಎತ್ತಿದ್ದೇವೆ. ಒಂದು ವೇಳೆ ಸರ್ಕಾರಿ ಆದೇಶ ರದ್ದಾದರೆ, ಪ್ರಕರಣವು ಕೊನೆಗೊಳ್ಳುತ್ತದೆ. ಆದರೆ ಅಗತ್ಯ ಧಾರ್ಮಿಕ ಆಚರಣೆ ವಿಚಾರ ಪ್ರಸ್ತಾಪಿಸಿರುವುದರಿಂದ ಅದರ ಉಲ್ಲೇಖ ನನ್ನ ಕರ್ತವ್ಯ.
 • ಮುಖ್ಯ ನ್ಯಾಯಮೂರ್ತಿ: ಈ ಸರ್ಕಾರಿ ಆದೇಶ ರದ್ದಾದರೆ, ಮೂಲಭೂತ ಹಕ್ಕುಗಳ ಅನುಷ್ಠಾನಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದು ನೀವು ಹೇಳುತ್ತೀರಿ. ನೀವು ಚಲಾಯಿಸಲು ಬಯಸುವ ಮೂಲಭೂತ ಹಕ್ಕು ಯಾವುದು?
 • ಕಾಮತ್‌: ಆ ಕುರಿತು ನಾಳೆ ನಾನು ವಾದಿಸುತ್ತೇನೆ.
 • ಮುಖ್ಯ ನ್ಯಾಯಮೂರ್ತಿ: ನಾವು ಸಮಯ ವಿಸ್ತರಿಸುತ್ತೇವೆ. ಇಂದೇ ಮುಗಿಸಿ. ನಾವು ಹೆಚ್ಚು ಸಮಯ ನೀಡಿದರೆ ನೀವು ಎರಡು ತಾಸು ತೆಗೆದುಕೊಳ್ಳುತ್ತೀರಿ.
 • ಕಾಮತ್‌: ನನ್ನ ವಿಚಾರದಲ್ಲಿ ಪೀಠವು ಅತ್ಯಂತ ತಾಳ್ಮೆಯಿಂದ ಇದೆ. ಈ ಪ್ರಕರಣದಲ್ಲಿ ಅಗತ್ಯ ಧಾರ್ಮಿಕ ವಿಚಾರ ಹಂತ ಉದ್ಭವಿಸುವುದಿಲ್ಲ. 25ನೇ ವಿಧಿ ಅಡಿ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ಪ್ರಶ್ನಿಸಿದಾಗ ನಿರ್ಬಂಧ ಎಲ್ಲಿದೆ ಎಂಬುದು ಮೊದಲ ಪ್ರಶ್ನೆ. ಒಮ್ಮೆ ಮಾನ್ಯವಾದ ನಿರ್ಬಂಧವಿದ್ದರೆ – ಮಾನ್ಯವಾದ ಕಾನೂನು ಅಥವಾ ಕಾನೂನಿನ ಬಲವನ್ನು ಹೊಂದಿರುವ ಆದೇಶವು ನಂತರ ಎರಡನೇ ಹಂತದ ಪರಿಶೀಲನೆಯು ಅತ್ಯಗತ್ಯ ಧಾರ್ಮಿಕ ಆಚರಣೆ ಮೇಲೆ ಹಕ್ಕನ್ನು ಉಂಟುಮಾಡುತ್ತದೆಯೇ ಎಂಬುದಾಗಿದೆ.
 • ಕಾಮತ್‌: ರಾಜ್ಯ ಸರ್ಕಾರವು ಮೊದಲ ಮಿತಿಯನ್ನು ದಾಟಿಲ್ಲ ಎಂದು ನಾನು ಹೇಳುತ್ತಿದ್ದೇನೆ. ಸರ್ಕಾರಿ ಆದೇಶ ರದ್ದಾದರೆ ಉಳಿದಿರುವುದು ನಿಯಮ 11 ಮಾತ್ರ.

ಭಾರತ ಹಿಂದೂ ಅಥವಾ ಇಸ್ಲಾಮಿಕ್‌ ರಾಷ್ಟ್ರವಲ್ಲ, ನಮ್ಮದು ಪ್ರಜಾಸತ್ತಾತ್ಮಕ ಜಾತ್ಯತೀತ ಗಣರಾಜ್ಯ: ಹಿರಿಯ ವಕೀಲ ಎ.ಎಂ. ಧರ್‌

ಅಪ್‌ಡೇಟ್‌ – 04:10 PM

 • ಹಿರಿಯ ವಕೀಲ ಎ. ಎಂ. ಧರ್‌ ಅವರು ವಾದ ಪ್ರಾರಂಭಿಸುತ್ತಾರೆ.
 • ಮುಖ್ಯ ನ್ಯಾಯಮೂರ್ತಿ: ಅರ್ಜಿದಾರರು ಯಾರು?
 • ಧರ್: ವಿದ್ಯಾರ್ಥಿಗಳು.
 • ಮುಖ್ಯ ನ್ಯಾಯಮೂರ್ತಿ: ಇದು ಸರ್ಕಾರಿ ಕಾಲೇಜೆ?
 • ಧರ್‌: ಹೌದು.
 • ಅಡ್ವೋಕೇಟ್‌ ಜನರಲ್‌: ಇದು ಖಾಸಗಿ ಕಾಲೇಜು.
 • ಧರ್: ನಾನು ಅರೇಬಿಕ್ ಭಾಷೆಯನ್ನು ಸಹ ಅಧ್ಯಯನ ಮಾಡಿದ್ದೇನೆ. ನಾನು ಕುರಾನ್‌ ವಿಷಯದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಬಹುದು.
 • ಮುಖ್ಯ ನ್ಯಾಯಮೂರ್ತಿ: ನೀವು ನ್ಯೂ ಹೊರೈಜನ್ ಕಾಲೇಜಿನಲ್ಲಿ ಓದುತ್ತಿದ್ದೀರಿ ಎಂದು ಹೇಳಿದ್ದೀರಾ? ಇದು ಸರ್ಕಾರಿ ಕಾಲೇಜೆ?
 • ಧರ್: ಈ ಕಾಲೇಜು ಸರ್ಕಾರಿ ಅನುದಾನಿತ.
 • ಅಡ್ವೋಕೇಟ್‌ ಜನರಲ್‌(ನಗು): ನಾನು ಈ ಶಾಲೆಯಲ್ಲಿ ಓದಿದ್ದೇನೆ, ಇದು ಖಾಸಗಿ ಸಂಸ್ಥೆ.
 • ಧರ್: ನಮಗೆ ಕಾಲೇಜು ಪ್ರವೇಶಿಸದಂತೆ ತಡೆಯಲಾಗಿದೆ. ಕುರಾನ್ ವಿಚಾರದಲ್ಲಿ ನ್ಯಾಯಾಲಯಕ್ಕೆ ಯಾರೂ ಸಹಾಯ ಮಾಡಿಲ್ಲ. ನನಗೆ ಕುರಾನ್ ಗೊತ್ತು. ನಾನು ಸಹಾಯ ಮಾಡಬಹುದು. (ವಕೀಲ ಧರ್‌ ಅವರು ಪವಿತ್ರ ಕುರಾನಿನ ಸೂರಾಗಳು ಮತ್ತು ಶ್ಲೋಕಗಳ ವಿವರಗಳನ್ನು ನೀಡುತ್ತಾರೆ…)
 • ಧರ್: ಹಿಜಾಬ್ ಬಗ್ಗೆ ನಾನು ಸಂಪೂರ್ಣ ಹಿನ್ನೆಲೆ ನೀಡುತ್ತೇನೆ. ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯವಾಗಿದೆ. ಕುರಾನ್ ಇದನ್ನು ಉಲ್ಲೇಖಿಸಲಾಗಿದೆ. ಇದು ಅಲ್ಲಾಹನ ಕಡೆಯಿಂದ ಬಂದ ಆಜ್ಞೆಯಾಗಿದೆ. ಕುರಾನ್ ಪೂರ್ಣಗೊಳ್ಳುವ ಹೊತ್ತಾದ 4 ಹಿಜರಿ ಶಕೆ ಸಮಯದಲ್ಲಿ ಈ ಆಜ್ಞೆ ಬಂದಿದೆ.
 • ಧರ್: ಮೊದಲ ಆಜ್ಞೆಯು ಪ್ರತಿದಿನ 5 ಪ್ರಾರ್ಥನೆಗಳು ಕಡ್ಡಾಯವಾಗಿದೆ. ಯಾರೂ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ಮುಸ್ಲಿಮರು ಇದನ್ನು ಮಾಡುತ್ತಾರೆಯೇ ಅಥವಾ ಇಲ್ಲವೋ ಎಂಬುದು ಬೇರೆ ವಿಷಯ. ಎರಡನೆಯದು ಝಕಾತ್, ಮೂರನೆಯದು ಕುರಾನ್‌ನಲ್ಲಿ ವ್ಯಾಖ್ಯಾನಿಸಲಾದ ಉತ್ತರಾಧಿಕಾರದ ತೀರ್ಪು. ನಾಲ್ಕನೆಯದು ರಂಜಾನ್ ಉಪವಾಸ, ಇದು ಕೆಲವು ವಿನಾಯಿತಿಗಳೊಂದಿಗೆ ಕಡ್ಡಾಯವಾಗಿದೆ.
 • ಸಿಜೆ: ಐದನೆಯದು ಯಾವುದು.?
 • ಧರ್: ಹಜ್.
 • ಧರ್: ಕುರಾನ್‌ನಲ್ಲಿ ಹಿಜಾಬ್ ಪದವಿಲ್ಲ, ಈ ಪದ ವಿಭಾಗಿಸುವುದನ್ನು ಸೂಚಿಸುತ್ತದೆ. ಹಿಜಾಬ್ ಧರಿಸುವುದು ಕಡ್ಡಾಯವಾಗಿದೆ. ಪ್ರವಾದಿಯ ಪತ್ನಿಯರು ಕೂಡಾ ಅದನ್ನು ಧರಿಸುತ್ತಿದ್ದರು. ಕುರಾನ್‌ ಪಠಿಸಲು ನನಗೆ ಅನುಮತಿ ನೀಡಿದರೆ, ನಾನು ಕುರಾನಿನ ಸೂರಾಗಳನ್ನು ಓದುತ್ತೇನೆ.
 • ಧರ್‌: ನಾನು ಪೀಠವನ್ನು ದಾರಿ ತಪ್ಪಿಸುವುದಿಲ್ಲ. ಅಲ್ಲಾಹ್‌ನ ಆಜ್ಞೆಯ ಆಧಾರದ ಮೇಲೆ ಇರುವ ಕುರಾನಿನ ಶ್ಲೋಕಗಳನ್ನು ತಿಳಿಸಲು ನಾನು ಪ್ರಯತ್ನಿಸುತ್ತೇನೆ. ನಾನು ಪೀಠವನ್ನು ಎಂದಿಗೂ ದಾರಿ ತಪ್ಪಿಸುವುದಿಲ್ಲ.
 • ಧರ್: ನಮ್ರತೆ, ಗೌಪ್ಯತೆ ಮತ್ತು ಎಲ್ಲಾ ಮುಸ್ಲಿಂ ಮೌಲ್ಯಗಳನ್ನು ರಕ್ಷಿಸಲು ನೀವು ತಲೆ, ಮುಖ ಮತ್ತು ಎದೆಯನ್ನು ಮುಚ್ಚಿಕೊಳ್ಳಬೇಕು. ನಾವು ಬುರ್ಖಾ ಹಾಕಿಕೊಂಡು ಶಾಲೆಗೆ ಹೋಗುತ್ತೇವೆ ಎಂದು ಯಾರೂ ಹೇಳುತ್ತಿಲ್ಲ.
 • ಧರ್‌: ನಾವು ತಲೆ, ಮುಖ ಮತ್ತು ಎದೆಯನ್ನು ಮಾತ್ರ ಮುಚ್ಚುತ್ತಿದ್ದೇವೆ. ಇವು ದೇಹದ ಸೂಕ್ಷ್ಮ ಭಾಗಗಳು ಆದ್ದರಿಂದ, ಜನರ ಕಣ್ಣಿನಿಂದ ಅದನ್ನು ದೂರವಿಡಲು ಹಿಜಾಬ್ ಧರಿಸುತ್ತಾರೆ. ಹಿಜಾಬ್ ಧರಿಸಬೇಕು ಎಂಬುವುದು ಅಲ್ಲಾಹನ ಆಜ್ಞೆಯಾಗಿದೆ.
 • ದಾರ್: ನಾವೆಲ್ಲರೂ ಭಾರತದ ಮಣ್ಣಿನ ಮಕ್ಕಳು. ನಾವು ಕಾನೂನು ಆಳ್ವಿಕೆಯ ದೇಶದಲ್ಲಿ ವಾಸಿಸುತ್ತಿದ್ದೇವೆ. ಹಿಜಾಬ್‌ ನಮಗೆ ಪವಿತ್ರವಾಗಿದೆ. ನಾವು ಮಹಿಳೆಯರನ್ನು ಧರಿಸಲು ಹೇಳುತ್ತಿರುವುದು ಫ್ಯಾಷನ್‌ನಿಂದಲ್ಲ, ಕುರಾನ್‌ನಲ್ಲಿ ಕಡ್ಡಾಯವಾಗಿ ಹೇಳಿರುವುದರಿಂದ.
 • ಈ ಬಗ್ಗೆ ಹಿರಿಯ ವಕೀಲ ಧರ್‌ ಅವರು ಕುರಾನಿನ ಶ್ಲೋಕ ಓದುತ್ತಾರೆ.
 • ಧರ್ ಜಸ್ಟೀಸ್ ಖಾಜಿಯನ್ನು ಉದ್ದೇಶಿಸಿ: ಮಹಿಳಾ ನ್ಯಾಯಮೂರ್ತಿ ಇದನ್ನು ಅರ್ಥಮಾಡಿಕೊಳ್ಳುತ್ತಾರೆ.
 • ನಮ್ಮಲ್ಲಿ ಎರಡು ಅಗತ್ಯ ಧಾರ್ಮಿಕ ಆಚರಣೆಗಳಿವೆ. ಮೊದಲನೆಯದು ಶಿಕ್ಷಣ ಪಡೆಯುವುದು, ಎರಡನೆಯದು, ತಲೆಯನ್ನು ಮುಚ್ಚಿಕೊಳ್ಳುವುದು.
 • ನ್ಯಾಯಮೂರ್ತಿ ದೀಕ್ಷಿತ್: ನಾವು ಗಮನಿಸಬೇಕಾದ ಸೂರಾ ಯಾವುದು.
 • ಮುಖ್ಯ ನ್ಯಾಯಮೂರ್ತಿ: ನಾವು ನಿಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ ಆದರೆ ನಮಗೆ ಸಾಧ್ಯವಾಗಲಿಲ್ಲ. ನಾವು ಸಂಬಂಧಿತ ಸೂರಾವನ್ನು ಗಮನಿಸಲು ಬಯಸುತ್ತೇವೆ.
 • ಧರ್‌: ಅದನ್ನು ನಾನು ನಿಮಗೆ ಕೊಡುತ್ತೇನೆ. ಸೂರಾ ಘಾಶಿಯಾ, ಸೂರಾ ಇಸ್ರಾ
 • ನ್ಯಾಯಮೂರ್ತಿ ದೀಕ್ಷಿತ್: ನೀವು ಅರ್ಜಿಯಲ್ಲಿ ಎಲ್ಲಿ ಉಲ್ಲೇಖಿಸಿದ್ದೀರಿ? ನಾವು ಗಮನಿಸಲು ಬಯಸುತ್ತೇವೆ.
 • ಧರ್‌ ಅವರು ಪ್ಯಾರಾಗಳನ್ನು ಓದುತ್ತಾರೆ.
 • ಧರ್‌: ಇದು 2 ಶತಕೋಟಿ ಜನರನ್ನು ಹೊಂದಿರುವ ಧರ್ಮ. ನಾವು ಭಾರತೀಯರು ಎಂದು ಹೆಮ್ಮೆಪಡುತ್ತೇವೆ. ಪ್ರವಾದಿ ಕಾಲದಲ್ಲಿ, ಇಸ್ಲಾಂ ಧರ್ಮವನ್ನು ಪ್ರಚಾರ ಮಾಡುತ್ತಿದ್ದಾಗ ಹಿಂದೂ ದೇಶವಾಗಿದ್ದ ಇಂಡೋನೇಷ್ಯಾದ ಸಮುದಾಯದವರೊಬ್ಬರು, “ನಮ್ಮ ಕುಂದನನ್ನು ಇಟ್ಟುಕೊಳ್ಳಲು ಸಾಧ್ಯವಾದರೆ ನಾವು ಇಸ್ಲಾಂ ಸ್ವೀಕರಿಸುತ್ತೇವೆ” ಎಂದು ಹೇಳುತ್ತಾರೆ. ಇದಕ್ಕೆ ಪ್ರವಾದಿ ಅವರು, ಕುಂದನನ್ನು ಇಟ್ಟುಕೊಳ್ಳಿ ಎಂದು ಹೇಳುತ್ತಾರೆ.
 • ಧರ್: ಪ್ರವಾದಿಯವರ ಔದಾರ್ಯವನ್ನು ನೋಡಿ, ಪ್ರವಾದಿಯವರು ಅದನ್ನು ಅನುಮತಿಸಿದರು. ಅವರ ಅಗತ್ಯ ಧಾರ್ಮಿಕ ಆಚರಣೆಗಳನ್ನು ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟರು. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ, ಸ್ಕಾರ್ಫ್ ಸಾರ್ವಜನಿಕ ಸುವ್ಯವಸ್ಥೆಗೆ ಕಾರಣವಾಗುತ್ತದೆಯೆ.
 • ಧರ್: ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಮತ್ತು ಪುರುಷರು ಬೇರೆ ಬೇರೆಯಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಹಜ್ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಹಜ್ ಸಮಯದಲ್ಲಿಯೂ ಕೂಡಾ ಮಹಿಳೆಯರು ತಲೆಯನ್ನು ಮುಚ್ಚಿಕೊಳ್ಳಬೇಕು. ಪ್ರವಾದಿಯವರು ತಲೆ ಮುಚ್ಚಿಕೊಳ್ಳುವುದರಿಂದ ಮಹಿಳೆಯರಿಗೆ ಹಜ್‌ ಸಮಯದಲ್ಲೂ ವಿನಾಯಿತಿ ನೀಡಿಲ್ಲ.
 • ಧರ್: ಪ್ರವಾದಿಯವರು ಹೇಳಿದ್ದಕ್ಕೆವೂ ನಾವು ಬದ್ಧವಾಗಿರಬೇಕು. ಅವರನ್ನು ನಿರ್ಲಕ್ಷಿಸುವ ಹಾಗೆ ಇಲ್ಲ. ಹೀಗಾದರೆ ನಾವು ಮುಸ್ಲಿಮರಾಗಲು ಸಾಧ್ಯವಿಲ್ಲ. ಇದು ಅಲ್ಲಾಹನ ಆಜ್ಞೆಯಾಗಿದೆ. ನಾವು ಉತ್ತಮ ಜೀವನ ನಡೆಸಬೇಕಾದರೆ ಅದನ್ನು ಅನುಸರಿಸಬೇಕು. ನಾವು ಅಂತಿಮ ತೀರ್ಪಿನ ದಿನವನ್ನು ಎದುರಿಸಬೇಕಾಗಿರುವುದರಿಂದ, ಹಿಜಾಬ್ ಧರಿಸಲು ನಮ್ಮ ಸಹೋದರಿಯರು, ತಾಯಂದಿರು ಮತ್ತು ಮಗಳಿಗೆ ಸಲಹೆ ನೀಡುತ್ತೇವೆ.
 • ಧರ್: ಧಾರ್ಮಿಕ ಅಂಶಗಳನ್ನು ನಾನು ತಿಳಿಸಿದ್ದೇನೆ. ಈಗ ನಾನು ಸಾಂವಿಧಾನಿಕ ಅಂಶಕ್ಕೆ ಬರುತ್ತೇನೆ.
 • ಮುಖ್ಯ ನ್ಯಾಯಮೂರ್ತಿ: ಧಾರ್ಮಿಕ ವಿಚಾರದಲ್ಲಿ ನಾವು ನಿಮ್ಮನ್ನು ಆಲಿಸಿದ್ದೇನೆ. ಕಾನೂನು ಅಂಶಗಳನ್ನು ಬೇರೆಯವರು ಎತ್ತಿದ್ದಾರೆ…
 • ಧರ್: ನಾವು ಆರ್ಟಿಕಲ್ 25 ರ ಅಡಿಯಲ್ಲಿ ರಕ್ಷಣೆ ಹೊಂದಿದ್ದೇವೆ ಮತ್ತು ಸಂವಿಧಾನದ ಪೀಠಿಕೆಯ ರಕ್ಷಣೆಯನ್ನೂ ನಾವು ಹೊಂದಿದ್ದೇವೆ. ನಮ್ಮದು ಎಂತಹ ದೇಶವೆಂದರೆ, ನಮ್ಮ ಆರ್ಥಿಕತೆಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದು ಬನಾನಾ ರಿಪಬ್ಲಿಕ್ ಅಲ್ಲ. ನಾವು ಸೌಹಾರ್ದತೆ, ಸಹೋದರತೆಯಿಂದ ಬಾಳುತ್ತಿದ್ದೇವೆ.
 • ಧರ್: ಇಷ್ಟು ದೊಡ್ಡ ದೇಶಕ್ಕೆ ಸ್ಕಾರ್ಫ್‌ ಒಂದು ಸಣ್ಣ ಸಮಸ್ಯೆ. ನಮ್ಮ ಹೃದಯ ತೆರೆದಿರಬೇಕು, ವಿಶಾಲವಾಗಿರಬೇಕು. ಶಿರವಸ್ತ್ರ ಮಹಿಳೆಯ ಖ್ಯಾತಿಯನ್ನು ಹೆಚ್ಚಿಸುತ್ತದೆ, ಅದು ಶುದ್ಧೀಕರಿಸುತ್ತದೆ ಮತ್ತು ನಮ್ರತೆಯನ್ನು ನೀಡುತ್ತದೆ. ಇದು ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸ್ಕಾರ್ಫ್ ನೈತಿಕತೆಗೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಬದಲಿಗೆ, ಇದು ನೈತಿಕತೆಯನ್ನು ಹೆಚ್ಚಿಸುತ್ತದೆ.
 • ದಾರ್: ಸಮವಸ್ತ್ರಕ್ಕೆ ಸಮಾನವಾದ ಸ್ಕಾರ್ಫ್ ಅನ್ನು ಧರಿಸಿದರೆ, ಯಾವ ಸ್ವರ್ಗ ಕುಸಿಯುತ್ತದೆ? ಸ್ಕಾರ್ಫ್ ಧರಿಸಿದರೆ, ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ವಿಗ್ರಹಗಳನ್ನು ಅಪವಿತ್ರಗೊಳಿಸಿದರೆ, ಅದು ಭಾವನೆಗಳನ್ನು ಘಾಸಿಗೊಳಿಸಬಹುದು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೆ ತಲೆಯನ್ನು ಮುಚ್ಚುವುದು ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆಗಳನ್ನು ಹೇಗೆ ಉಂಟುಮಾಡುತ್ತದೆ?.
 • ಜಸ್ಟಿಸ್‌ ದೀಕ್ಷಿತ್: ದಯವಿಟ್ಟು ನಿಮ್ಮ ಇತರ ಸ್ನೇಹಿತರಿಗೂ ಕರುಣೆ ತೋರಿಸಿ. ನೀವು 5 ನಿಮಿಷ ಕೇಳಿದ್ದೀರಿ, ಆದರೆ ನೀವು 10 ನಿಮಿಷಗಳನ್ನು ತೆಗೆದುಕೊಂಡಿದ್ದೀರಿ.
 • ಧರ್: ಹಿಜಾಬ್ ಧರಿಸುವುದರಿಂದ ಯಾರಿಗೂ ನೋವಾಗುವುದಿಲ್ಲ.
 • ನ್ಯಾಯಮೂರ್ತಿ ದೀಕ್ಷಿತ್: ನಮಗೆ ಉಲ್ಲೇಖವನ್ನು ನೀಡಿ, ಓದಬೇಡಿ.
 • ಧರ್: ನಾವು ವೈವಿಧ್ಯತೆ, ಸಾಮರಸ್ಯದಿಂದ ಬದುಕುತ್ತಿದ್ದೇವೆ. ದಯವಿಟ್ಟು ನಮ್ಮ ಹುಡುಗಿಯರು ತಲೆ ಮುಚ್ಚಿಕೊಳ್ಳಲು ಅವಕಾಶ ಮಾಡಿಕೊಡಿ, ಅದು ಯಾರಿಗೂ ಯಾವುದೇ ಪೂರ್ವಾಗ್ರಹವನ್ನು ಉಂಟುಮಾಡುವುದಿಲ್ಲ. ಇದು ಹಿಂದೂ ರಾಷ್ಟ್ರವಲ್ಲ. ಇದು ಇಸ್ಲಾಮಿಕ್ ರಿಪಬ್ಲಿಕ್ ಅಲ್ಲ. ಇದು ಪ್ರಜಾಸತ್ತಾತ್ಮಕ ಜಾತ್ಯತೀತ ಗಣರಾಜ್ಯ. ದಯವಿಟ್ಟು ನಮ್ಮ ರಕ್ಷಣೆಗೆ ಬನ್ನಿ.
 • ವಕೀಲ ಧರ್‌ ಅವರು ‘ಸಾರೆ ಜಹಾನ್ ಸೆ ಅಚ್ಚಾ’ ಹಾಡನ್ನು ಹಾಡುತ್ತಾರೆ.
 • ಧರ್‌: “ಈ ಮಧ್ಯಂತರ ಆದೇಶವು ಸಂವಿಧಾನ ಬಾಹಿರವಾಗಿದ್ದು, ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದೆ. ಇದು ನಮಗೆ ಜೀವನ್ಮರಣ ಪ್ರಶ್ನೆಯಾಗಿದೆ. ಒಂದೋ ನಾವು ನಮ್ಮ ಶಿಕ್ಷಣ, ಇಲ್ಲವೇ ನಮ್ಮ ತತ್ವಗಳನ್ನು ಬಿಡಬೇಕಾಗುತ್ತದೆ. ದಯವಿಟ್ಟು ಸರ್ಕಾರವನ್ನು ಕೇಳಿ, ಅವರು ಈ ಆದೇಶವನ್ನು ಹೇಗೆ ರವಾನಿಸಲು ಸಾಧ್ಯ?”
 • ಹಿರಿಯ ವಕೀಯ ಧರ್ ಅವರು ತಮ್ಮ ವಾದವನ್ನು ಮುಕ್ತಾಯಗೊಳಿಸುತ್ತಾರೆ.
 • ಜಸ್ಟಿಸ್ ದೀಕ್ಷಿತ್: ಇದು ಒಂದು ಅರ್ಹವಾದ ಭಾಷಣ

ಧಾರ್ಮಿಕ ಹಕ್ಕುಗಳಲ್ಲಿ ಮಧ್ಯಪ್ರವೇಶ ಮಾಡುವ ಯಾವುದೆ ಉದ್ದೇಶವಿಲ್ಲ: ಉಡುಪಿ ಪಿಯು ಕಾಲೇಜಿನ ಉಪನ್ಯಾಸಕರ ಪರ ಹಿರಿಯ ವಕೀಲ ಗುರು ಕೃಷ್ಣಕುಮಾರ್

ಹತ್ತನೇ ದಿನದ ವಿಚಾರಣೆ ಪ್ರಾರಂಭ (ಫೆಬ್ರವರಿ 24 ಗುರುವಾರ 2022)

ಅಪ್‌ಡೇಟ್‌ – 03:30 PM

 • ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕುರಿತಾದ ಅವಲೋಕನಗಳಿಗೆ ಅಡ್ವೊಕೇಟ್ ಜನರಲ್ ಪ್ರತಿಕ್ರಿಯಿಸುತ್ತಾರೆ.
 • ಅಡ್ವೊಕೇಟ್‌‌ ಜನರಲ್‌: ಕೆಲವು ಸಂಘಟನೆಗಳ ವಿರುದ್ಧ ಶಿಕ್ಷಕರು ನೀಡಿರುವ ದೂರುಗಳ ಬಗ್ಗೆ ನಾಗಾನಂದ್ ಮಾಹಿತಿ ನೀಡಿದ್ದಾರೆ. ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಅದರ ವರದಿಯನ್ನು ಮುಚ್ಚಿದ ಕವರ್‌ನಲ್ಲಿ ದಾಖಲಿಸುತ್ತೇವೆ.
 • ಪ್ರತಿವಾದಿ ಸಂಖ್ಯೆ-8 ಆಗಿರುವ ಉಡುಪಿ ಪಿಯು ಕಾಲೇಜಿನ ಉಪನ್ಯಾಸಕರ ಪರವಾಗಿ ಹಿರಿಯ ವಕೀಲ ಗುರು ಕೃಷ್ಣಕುಮಾರ್ ಅವರು ನ್ಯಾಯಾಲಯದಲ್ಲಿ ಹಾಜರಾಗುತ್ತಾರೆ.
 • ಕೃಷ್ಣಕುಮಾರ್‌: ಪ್ರಶ್ನಿಸಲಾದ ನಿಯಂತ್ರಣವನ್ನು ಅದು ಸಾಧಿಸಲು ಬಯಸುವ ಉದ್ದೇಶದ ಪರಿಗಣಿಸಬೇಕಾಗುತ್ತದೆ. ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಏಕರೂಪತೆದಿಂದ ನೋಡುವ ಉದ್ದೇಶ ಹೊಂದಲಾಗಿದೆ. ಸಮವಸ್ತ್ರದ ಉದ್ದೇಶವು ವಿದ್ಯಾರ್ಥಿಯ ಹಿನ್ನೆಲೆಯನ್ನು ಸಂಪೂರ್ಣವಾಗಿ ತೆಗೆದುಹಾಕುವುದಾಗಿದೆ. ಅವರ ಜಾತಿ, ಬಣ್ಣ, ಪಂಥ, ಧರ್ಮವನ್ನು ಸಂಪೂರ್ಣವಾಗಿ ವಿಮುಖ ಮಾಡುವುದಾಗಿದೆ. ಜಾತ್ಯತೀತ ಸ್ಥಳದಲ್ಲಿ, ಜಾತ್ಯತೀತ ಶಿಕ್ಷಣ ಪದ್ಧತಿ ಅನುಸರಿಸುವಲ್ಲಿ ವಿದ್ಯಾರ್ಥಿಗಳ ತಾರತಮ್ಯದ ಚಿಕಿತ್ಸೆಯ ಉದ್ದೇಶದ ಮೇಲೆ ನಿಯಂತ್ರಣವನ್ನು ಪರಿಶೀಲಿಸಬೇಕು.
 • ಕೃಷ್ಣಕುಮಾರ್: ನಿರ್ಬಂಧದಿಂದ ಸಾಧಿಸಲು ಉದ್ದೇಶಿಸಿರುವ ಹಿನ್ನೆಲೆಯಿಂದ ಅರ್ಜಿದಾರರ ಹಕ್ಕನ್ನು ಪರಿಶೀಲಿಸಿ. ಇದು ಶಿಕ್ಷಣದ ಜಾತ್ಯತೀತ ಚಟುವಟಿಕೆಯೊಂದಿಗೆ ವ್ಯವಹರಿಸುತ್ತದೆಯೇ ವಿನಾ ಇಲ್ಲಿ ಧಾರ್ಮಿಕವಿಚಾರಕ್ಕೆ ಅವಕಾಶವಿಲ್ಲ. ಸಮವಸ್ತ್ರದ ಉದ್ದೇಶವು ಸಾಮಾನ್ಯ ವೇದಿಕೆಯಲ್ಲಿ ಗುಣಮಟ್ಟ ತರುವುದಾಗಿದೆ. ಆದ್ದರಿಂದ, ಕರ್ನಾಟಕ ಶಿಕ್ಷಣ ಕಾಯಿದೆಯು ಪ್ರಜ್ಞಾಪೂರ್ವಕವಾಗಿ ಈ ಸ್ವರೂಪದ ನಿಬಂಧನೆಯನ್ನು ಒಳಗೊಂಡಿದೆ. ಹಿಜಾಬ್‌ ನಿರ್ಬಂಧದ ಪ್ರಶ್ನೆಯನ್ನು ಸಹ ಹಾಗೆ ಪರಿಗಣಿಸಬೇಕು.
 • ಕೃಷ್ಣಕುಮಾರ್‌: ಆಕ್ಷೇಪಾರ್ಹವಾದ ಸರ್ಕಾರದ ಆದೇಶವನ್ನು ಧಾರ್ಮಿಕ ಹಕ್ಕುಗಳಲ್ಲಿ ಮಧ್ಯಪ್ರವೇಶ ಯಾವುದೆ ಉದ್ದೇಶ ಹೊಂದಿಲ್ಲ ಎಂಬ ಅರ್ಥದಲ್ಲಿ ಮನನ ಮಾಡಿಕೊಳ್ಳಬೇಕಿದೆ. ಶಿಕ್ಷಣದಲ್ಲಿ ಜಾತ್ಯತೀತ ಚಟುವಟಿಕೆ ಮುಂದುವರಿಸುವ ಉದ್ದೇಶದಿಂದ ಸರ್ಕಾರ ಆದೇಶ ಹೊರಡಿಸಿದೆಯೇ ವಿನಾ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದಲ್ಲ. ಹೀಗಾಗಿ, ಅರ್ಜಿದಾರರ ಬಿಂಬಿಸುತ್ತಿರುವುದನ್ನು ಸಮರ್ಥಿಸಲಾಗದು ಎಂದು ನನ್ನ ವಾದ.
 • ಅರ್ಜಿದಾರರ ಪರ ಹಿರಿಯ ವಕೀಲ ದೇವದತ್‌‌ ಕಾಮತ್‌‌ ಅವರು ನಿರಂತರವಾಗಿ ಹೊಸ ಮನವಿಗಳನ್ನು ಸಲ್ಲಿಸಲಾಗುತ್ತಿದೆ. ಹೀಗಾಗಿ, ತಮ್ಮ ಪೂರಕ ವಾದವನ್ನು ಆಲಿಸಲು ಒಂದು ಗಂಟೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಕೋರುತ್ತಾರೆ.
 • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ಎಲ್ಲಾ ಮನವಿದಾರರನ್ನು ಮೊದಲು ಆಲಿಸೋಣ.
 • ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಅಸೋಸಿಯೇಷನ್‌ಗಾಗಿ ಹಿರಿಯ ವಕೀಲೆ ಕೀರ್ತಿ ಸಿಂಗ್‌ ವಾದಿಸಲು ಪ್ರಾರಂಭ ಮಾಡುತ್ತಾರೆ.
 • ಅಡ್ವೋಕೇಟ್‌‌‌ ಜನರಲ್‌: ಅರ್ಜಿದಾರರು ತಾವು ಯಾವ ಕಾಯಿದೆಯ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.
 • ಮುಖ್ಯ ನ್ಯಾಯಮೂರ್ತಿ: ನೀವು ನೋಂದಾಯಿತ ಸಂಸ್ಥೆಯೇ?
 •  ಕೀರ್ತಿ ಸಿಂಗ್: ನಾವು ನೋಂದಾಯಿತ ಸಂಸ್ಥೆಯಲ್ಲ. ನಮ್ಮದು ಹಲವು ಪ್ರಕರಣಗಳ ವಿರುದ್ಧ ಹೋರಾಡಿದ ಮಹಿಳೆಯರ ಸಾಮೂಹಿಕ ಸಂಘಟನೆ. ಕರ್ನಾಟಕ ಸಮಿತಿಯಲ್ಲೇ ಸುಮಾರು ಒಂದು ಲಕ್ಷ ಮಹಿಳೆಯರು ಇದ್ದಾರೆ. ನಾನು ಅದರ ಉಪಾಧ್ಯಕ್ಷರನ್ನು ಪ್ರತಿನಿಧಿಸುತ್ತಿದ್ದೇನೆ.
 • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ನಿಮ್ಮ ಉಪಾಧ್ಯಕ್ಷಕರಿಗೆ ಇಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆಯೇ?
 •  ಕೀರ್ತಿ ಸಿಂಗ್: 2021ರ ಫೆಬ್ರವರಿ 15ರ ನಿರ್ಣಯದಲ್ಲಿ ಅದನ್ನು ಉಲ್ಲೇಖಿಸಲಾಗಿದೆ. ಅದನ್ನು ನಾವು ಪೀಠಕ್ಕೆ ಸಲ್ಲಿಸಿದ್ದೇವೆ.
 • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ಅರ್ಜಿ ಸಲ್ಲಿಸಲು ನಿರ್ಧಾರ ಕೈಗೊಂಡ ಸಮಿತಿಯ ಸಂವಿಧಾನ ಯಾವುದು. ನಿರ್ಣಯವು ಅದನ್ನು ಹೇಳುವುದಿಲ್ಲ. ಸಮಿತಿಯ ಸಂವಿಧಾನ ಮತ್ತು ಪಿಐಎಲ್‌ ಸಲ್ಲಿಸಲು ಅಧ್ಯಕ್ಷರ ಅಧಿಕಾರವನ್ನು ಬಹಿರಂಗಪಡಿಸುವ ನಿರ್ಣಯ ಮತ್ತು ಪ್ರಕ್ರಿಯೆಗಳನ್ನು ನೀವು ಲಗತ್ತಿಸಬೇಕು.
 • ವಕೀಲ ಆದಿತ್ಯ ಚಟರ್ಜಿ: ಹೆಚ್ಚುವರಿಯಾಗಿ ಸಲ್ಲಿಸಬೇಕಿರುವ ದಾಖಲೆಗಳನ್ನು ನಾನು ಪೀಠಕ್ಕೆ ಸಲ್ಲಿಸುವೆ.
 • ಮುಖ್ಯ ನ್ಯಾಯಮೂರ್ತಿ: ಆಗಲಿ. ನಾವು ನಿಮ್ಮ ಮನವಿಯ ನಿರ್ವಹಣೆ ವಿಚಾರಕ್ಕೆ ಬರುತ್ತೇವೆ. ಅಹವಾಲು ಹೊಂದಿರುವವರೇ ಪೀಠದ ಮುಂದಿರುವಾಗ ನೀವು ನ್ಯಾಯಾಲಯದ ಮುಂದೆ ಬರಬೇಕು ಎಂದು ಭಾವಿಸಿರುವುದು ಏಕೆ?
 • ಕೀರ್ತಿ ಸಿಂಗ್: ಕಾನೂನಿನ ಚಿತ್ರಣ ಸೇರಿದಂತೆ ಇಡೀ ಚಿತ್ರಣವನ್ನು ಪೀಠದ ಮುಂದೆ ಇಡಲಾಗಿಲ್ಲ. ನಾವು ಸಂಪೂರ್ಣ ಚಿತ್ರಗಳನ್ನು ನೀಡಲು ಬಯಸುತ್ತೇವೆ, ಬೇರೆ ಬೇರೆ ಆಧಾರಗಳನ್ನು ಎತ್ತಲಾಗಿಲ್ಲ.
 • ಮುಖ್ಯ ನ್ಯಾಯಮೂರ್ತಿ: ನ್ಯಾಯಾಲಯದ ಮುಂದೆ ಬಂದಿರುವ ಅರ್ಜಿದಾರರಿಗೆ ನೀವು ಸಹಾಯ ಮಾಡಿ. ಈಗಾಗಲೇ ನ್ಯಾಯಾಲಯದ ಮುಂದೆ ಇರುವ ವ್ಯಕ್ತಿಗಳ ಪರವಾಗಿ ವಾದಿಸಲು ನಿಮಗೆ ನಾವು ಅನುಮತಿಸುವುದಿಲ್ಲ.
 • ಕೀರ್ತಿ ಸಿಂಗ್‌: ಸರ್ಕಾರದ ಆಕ್ಷೇಪಾರ್ಹ ಆದೇಶದಿಂದ ನಮ್ಮ ಸಂಘಟನೆಯಲ್ಲಿರುವ ಮಹಿಳೆಯರ ಮಕ್ಕಳು ಬಾದಿತರಾಗಿದ್ದಾರೆ. ನಾವು ನೈಜ ಕಕ್ಷಿದಾರರು. ನಾವು ಅಧೀನ ನ್ಯಾಯಾಲಯಗಳು, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹಲವು ಮನವಿಗಳನ್ನು ದಾಖಲಿಸಿದ್ದೇವೆ.
 • ಮುಖ್ಯ ನ್ಯಾಯಮೂರ್ತಿ: ನಿಮ್ಮ ಪರಿಚಯದ ಮೇಲೆ ನಾವು ಇದನ್ನು ಹೇಳುತ್ತಿಲ್ಲ. ನೊಂದವರು ಈಗಾಗಲೇ ಪೀಠದ ಮುಂದೆ ಇರುವಾಗ ನಿಮ್ಮ ಮನವಿ ನಿರ್ವಹಣೆಗೆ ಅರ್ಹವಲ್ಲ. ನಿಮ್ಮ ಕಾಳಜಿಯನ್ನು ನಾವು ಪ್ರಶಂಸಿಸುತ್ತೇವೆ. ನಿಮ್ಮ ಅರ್ಜಿಯ ನಿರ್ವಹಣೆಯಿಂದ ನಾವು ತೃಪ್ತರಾಗಿಲ್ಲ. ನಾವು ಆದೇಶವನ್ನು ರವಾನಿಸುತ್ತೇವೆ.
 • ಕೀರ್ತಿ ಸಿಂಗ್: ನೀವು ನಮ್ಮನ್ನು ಆಲಿಸುವುದಿಲ್ಲವೆ? ವಿವಿಧ ತತ್ವಗಳ ಬಗ್ಗೆ ಈ ಹಿಂದೆ ಯಾರೂ ಈ ವಾದಗಳನ್ನು ಮಾಡಿಲ್ಲ. ಮಹಿಳೆಯರ ದೃಷ್ಟಿಕೋನವನ್ನು ನಾವು ನಿಮ್ಮ ಮುಂದೆ ಇಡುತ್ತೇವೆ.
 • ನ್ಯಾಯಮೂರ್ತಿ ದೀಕ್ಷಿತ್: ವೈಯಕ್ತಿಕ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿ ಮಿಶ್ರಣವಾಗಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
 • ಕೀರ್ತಿ ಸಿಂಗ್: ಇಲ್ಲ ಇಲ್ಲ.
 • ಮುಖ್ಯ ನ್ಯಾಯಮೂರ್ತಿ: ಬೇರೆ ಪ್ರಕರಣದಲ್ಲಿ ನಿಮ್ಮ ವಾದ ಆಲಿಸುತ್ತೇವೆ.
 • ಕೀರ್ತಿ ಸಿಂಗ್: ಇದು ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯವಾಗಿದೆ. ಶಾಲೆಗಳಲ್ಲಿ ಹಿಜಾಬ್ ಏಕೆ ಅನುಮತಿಸಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ. ನಾವು ಸಮವಸ್ತ್ರ ವಿರೋಧಿಸುವುದಿಲ್ಲ. ಆದರೆ ಈ ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡದಿರುವ ಕನಿಷ್ಠ ನಿರ್ಬಂಧಿತ ಮಾರ್ಗವನ್ನು ನಾವು ನೋಡಬೇಕಾಗಿದೆ. ಹೆಣ್ಣು ಮಕ್ಕಳ ಶಿಕ್ಷಣದ ಹಕ್ಕಿಗೆ ಧಕ್ಕೆಯಾಗುತ್ತಿದೆ.
 • ನ್ಯಾಯಮೂರ್ತಿ ದೀಕ್ಷಿತ್: ಇವೆಲ್ಲವೂ ರಾಷ್ಟ್ರೀಯ ತೀರ್ಪುಗಳೊಂದಿಗೆ ಮಾತ್ರವಲ್ಲದೆ ವಿದೇಶಿ ತೀರ್ಪುಗಳೊಂದಿಗೆ ವಾದಿಸಲ್ಪಟ್ಟಿವೆ.
 • ಕೀರ್ತಿ ಸಿಂಗ್ ತಮ್ಮ ವಾದಗಳನ್ನು ಮುಂದುವರಿಸುತ್ತಾರೆ.
 • ಮುಖ್ಯ ನ್ಯಾಯಮೂರ್ತಿ: ಧನ್ಯವಾದಗಳು. ನಾವು ನಿಮ್ಮ ಅರ್ಜಿಯನ್ನು ವಿಲೇವಾರಿ ಮಾಡಿದ್ದೇವೆ.
 • ನ್ಯಾಯಾಲಯದ ಅಧಿಕಾರಿ ಕೀರ್ತಿ ಸಿಂಗ್ ಅವರನ್ನು ಮ್ಯೂಟ್ ಮಾಡುತ್ತಾರೆ.
 • ಹಿಜಾಬ್ ಧರಿಸಿರುವ ಮಹಿಳೆಯರನ್ನು ಹಿಂಬಾಲಿಸುವ ಮಾಧ್ಯಮಗಳ ಮೇಲೆ ನಿಯಂತ್ರಣಗಳನ್ನು ಕೋರಿ ಸಲ್ಲಿಸಲಾದ ಪಿಐಎಲ್ ಅನ್ನು ನ್ಯಾಯಾಲಯ ಕೈಗೆತ್ತಿಕೊಂಡಿತು.
 • ಆದರೆ ಅರ್ಜಿದಾರರಿಗೆ ಪ್ರಾತಿನಿಧ್ಯವಿರಲಿಲ್ಲ. ಕರ್ನಾಟಕ ಪಿಐಎಲ್‌ ನಿಯಮಗಳನ್ನು ಪಾಲಿಸಿಲ್ಲ ಎಂದು ಮನವಿ ವಜಾ ಮಾಡಿದ ಪೀಠ.
 • ವಕೀಲ ಮೊಹಮ್ಮದ್‌ ತಾಹೀರ್‌ ಅವರು ಎರಡು ಅರ್ಜಿಗಳನ್ನು ಹಿಂಪಡೆಯುತ್ತಾರೆ.

ಅಪ್‌ಡೇಟ್‌ – 02:30 PM

ತರಗತಿಗಳಲ್ಲಿ ಹಿಜಾಬ್ ನಿಷೇಧ ಮಾಡಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ರಾಜ್ಯ ಹೈಕೋರ್ಟ್‌ ಹತ್ತನೇ ದಿನವಾದ ಗುರುವಾರವು ಮುಂದುವರೆಸಿದೆ. ಬುಧವಾರ ನಡೆದ ವಿಚಾರಣೆಯ ಸಮಯದಲ್ಲಿ ಫೆಬ್ರವರಿ 10 ರಂದು ಹೊರಡಿಸಿದ ಮಧ್ಯಂತರ ಆದೇಶವು ಸಮವಸ್ತ್ರವನ್ನು ನಿಗದಿಪಡಿಸಿರುವ ಪದವಿ ಕಾಲೇಜುಗಳು ಮತ್ತು ಪದವಿ ಪೂರ್ವ (ಪಿಯು) ಕಾಲೇಜುಗಳಿಗೆ ಅನ್ವಯಿಸುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಜೊತೆಗೆ ಈ ಆದೇಶವು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆಯೆ ಹೊರತು, ಶಿಕ್ಷಕರಿಗೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆ. ಎಂ. ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠವು ಹಿಜಾಬ್‌ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ.


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮ್ಯಾನೇಜ್‌ಮೆಂಟ್‌ ಸರ್ಕಾರ| ಆಡಿಯೊ ನನ್ನದೇ, ರಾಜೀನಾಮೆ ಕೇಳಿದರೆ ಕೊಡುವೆ- ಮಾಧುಸ್ವಾಮಿ

0
ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಅವರ ಆಡಿಯೊವೊಂದು ಸೋರಿಕೆಯಾಗಿರುವ ಪರಿಣಾಮ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೊಳಗಾಗಿದ್ದು ಸರ್ಕಾರದೊಳಗೆ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ನಾಯಕರು ಮಾಧುಸ್ವಾಮಿ ಹೇಳಿಕೆಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಮಾಧುಸ್ವಾಮಿಯವರೂ ಪ್ರಕರಣಕ್ಕೆ ಸಂಬಂಧಿಸಿದಂತೆ...