ಹಿಂದಿ ಹೇರಿಕೆ ಸಹಿಸುವುದಿಲ್ಲ; ಹಿಂದಿ ಭಾಷಾ ದಿನಾಚರಣೆಗೆ ಆಸ್ಪದವಿಲ್ಲ. ಹಿಂದಿ ದಿನದ ವಿರುದ್ಧ ಕರಾಳ ದಿನ ಆಚರಣೆಗೆ ಕನ್ನಡಿಗರ ಸಜ್ಜು

ಹಿಂದಿ ಭಾಷಾ ದಿನದ ಬದಲಿಗೆ ಭಾರತ ಭಾಷಾ ದಿನವನ್ನು ಆಚರಿಸಬೇಕೆಂದು ಆಗ್ರಹಿಸಿ ಬೃಹತ್ ಹಕ್ಕೊತ್ತಾಯ ಸಮಾವೇಶ

ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಹಿಂದಿ ಭಾಷಾ ದಿನವನ್ನು ಒಕ್ಕೂಟದ ಸರ್ಕಾರ ಆಚರಿಸುತ್ತಾ ಬಂದಿದೆ. ಈ ಹಿಂದಿ ದಿನದ ಆಚರಣೆಯನ್ನು ರದ್ದುಗೊಳಿಸುವಂತೆ ಹಲವಾರು ಹೋರಾಟಗಳು ನಡೆಯುತ್ತಿವೆ. ಆದರೂ ತನ್ನ ನಿಲುವನ್ನು ಬದಲಾಯಿಸಿಕೊಳ್ಳದ ಸರ್ಕಾರದ ಧೋರಣೆಯನ್ನು ವಿರೋಧಿಸಿ ಹಿಂದಿ ದಿನವನ್ನು ರದ್ದು ಮಾಡುವಂತೆ ಆಗ್ರಹಿಸಿ ಕನ್ನಡಿಗರು ಕರಾಳ ದಿನಾಚರಣೆಗೆ ಮುಂದಾಗಿದ್ದಾರೆ. ನಾಳೆ ಬೆಂಗಳೂರಿನಲ್ಲಿರುವ ಟೌನ್‍ಹಾಲ್‍ನಿಂದ ಫ್ರೀಡಂ ಪಾರ್ಕ್‍ವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲು ಸಿದ್ದತೆ ನಡೆಸಿದ್ದಾರೆ. ಕೇವಲ ಹಿಂದಿ ಭಾಷಾ ದಿನದ ಬದಲಿಗೆ ಭಾರತ ಭಾಷಾ ದಿನವನ್ನು ಆಚರಿಸಬೇಕೆಂದು ಆಗ್ರಹಿಸಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಿದ್ದು, ಹೋರಾಟಗಾರರ ನಿಯೋಗವು ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಆಗ್ರಹ ಪತ್ರವನ್ನು ನೀಡಲಿದ್ದಾರೆ.

ಭಾರತ ಒಂದು ವೈವಿದ್ಯತೆಯಿಂದ ಕೂಡಿದ ಒಕ್ಕೂಟ ರಾಷ್ಟ್ರ. ಬಹುತ್ವದಿಂದ ಕೂಡಿರುವ ಈ ದೇಶದಲ್ಲಿ ಎಲ್ಲಾ ಸಂಸ್ಕøತಿ, ಭಾಷೆ, ಜನಾಂಗ, ಆಚಾರ-ವಿಚಾರಗಳನ್ನೂ ಸಮಾನ ಗೌರವದಿಂದ ಆಚರಿಸುವ ಸ್ವಾತಂತ್ರ್ಯವನ್ನು ಎಲ್ಲಾ ವರ್ಗಗಳಿಗೂ ಸಂವಿಧಾನಿಕವಾಗಿ ನೀಡಲಾಗಿದೆ. ಆದರೆ ಹಲವಾರು ವರ್ಷಗಳಿಂದ ಉತ್ತರ ಭಾರತದ ಸಂಸ್ಕøತಿಯನ್ನು ದಕ್ಷಿಣ ಭಾರತೀಯರ ಮೇಲೆ ಬಲವಂತವಾಗಿ ಹೇರುವ ಧೋರಣೆಯನ್ನು ಒಕ್ಕೂಟ ವ್ಯವಸ್ಥೆಯ ಸರ್ಕಾರ ತೋರುತ್ತಾ ಬಂದಿದೆ. ಅದರಲ್ಲಿ ಹಿಂದಿ ಭಾಷೆಯ ಹೇರಿಕೆಯೂ ಪ್ರಮುಖವಾದದ್ದು. ಭಾರತದಲ್ಲಿ ಹಿಂದಿ ಭಾಷೆಯನ್ನು ಉತ್ತೇಜಿಸುವ ಸಲುವಾಗಿ 1953ರಿಂದ ಸೆಪ್ಟೆಂಬರ್ 14 ರಂದು ಹಿಂದಿ ಭಾಷಾ ದಿವಸವನ್ನಾಗಿ ಆಚರಿಸಲು ಕೇಂದ್ರ ಸರ್ಕಾರ ಆರಂಭಿಸಿದೆ. ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತೀಯರ ಮೇಲೆ ಹಿಂದಿ ಹೇರುವ ಕೆಲಸಕ್ಕೆ ಕೇಂದ್ರ ಸರ್ಕಾರ ಮತ್ತಷ್ಟು ಕುಮ್ಮಕ್ಕು ನೀಡುತ್ತಾ ಬಂದಿದೆ.

ಕೇಂದ್ರದ ಹಿಂದಿ ಹೇರಿಕೆಯ ಧೋರಣೆ ಹೆಚ್ಚಾದಂತೆ, ಕನ್ನಡಿಗರು ಹಿಂದಿ ಹೇರಿಕೆಯನ್ನು ಕಠುವಾಗಿ ವಿರೋಧಿಸುತ್ತಾ ಬಂದಿದ್ದಾರೆ. ನಮ್ಮದು ಹಿಂದಿ ಒಕ್ಕೂಟ ರಾಷ್ಟ್ರವಲ್ಲ. ಎಲ್ಲಾ ಭಾಷೆಗಳಿಗೂ ತಮ್ಮದೇ ಆದ ಮಹತ್ವವಿದೆ. ಹಾಗಾಗಿ ನಮ್ಮೆಲ್ಲರ ತೆರಿಗೆ ಹಣದಿಂದ ಕೇವಲ ಒಂದು ಭಾಷೆಯ ಪ್ರಚಾರ ಮತ್ತು ಹೇರಿಕೆ ಮಾಡುವುದನ್ನು ನಾವು ಒಪ್ಪುವುದಿಲ್ಲ ಎಂದಿರುವ ಕನ್ನಡಿಗರು, ಹಿಂದಿ ಬಿಟ್ಟು ಉಳಿದ ಭಾಷೆಗಳ ಪ್ರಚಾರಕ್ಕೆ ಕೇಂದ್ರ ಸರ್ಕಾರವೇಕೆ ಮುಂದಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಿಂದಿ ದಿನವನ್ನು ಭಾರತೀಯ ಭಾಷಾ ದಿನವನ್ನಾ ಆಚರಿಸಬೇಕೆಂದು ಆಗ್ರಹಿಸಿ ಸೆಪ್ಟೆಂಬರ್ 5 ರಂದು ಟ್ವಿಟರ್ ಅಭಿಯಾನ ಕೂಡ ಮಾಡಲಾಗಿದೆ. ಆದರೂ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬದಲಾಯಿಸಿಕೊಂಡಿಲ್ಲ. ಹಾಗಾಗಿ ಆಕ್ರೋಶಗೊಂಡಿರುವ ಕನ್ನಡಿಗರು ಮತ್ತು ಕನ್ನಡಪರ ಸಂಘಟನೆಗಳು ಹಿಂದಿ ಭಾಷಾ ದಿನವಾದ ಸೆಪ್ಟೆಂಬರ್ 14ನ್ನು ಕನ್ನಡಿಗರ ಕರಾಳ ದಿನವನ್ನಾಗಿ ಆಚರಿಸಲು ಮುಂದಾಗಿವೆ. ಹೋರಾಟದ ಸಮಾವೇಶವನ್ನು ಕರ್ನಾಟಕ ರಕ್ಷಣಾ ಸೇನೆ, ಕರುನಾಡ ಸೇವಕರು ಸಂಘಟನೆ, ಕರುನಾಡ ಯುವಕರು ಸಂಘಟನೆ ಮತ್ತು ರಣಧೀರ ಪಡೆ ಸಂಘಟನೆಗಳು ಜೊತೆಗೂಡಿ ಆಯೋಜಿಸುತ್ತಿದ್ದಾರೆ.

ಈಗಾಗಲೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಹಿಂದಿ ಭಾಷೆ ಬಳಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬೃಹತ್ ಮಟ್ಟದ ವಿರೋಧ ವ್ಯಕ್ತವಾದ ಬಳಿಕ ಮೆಟ್ರೋದಲ್ಲಿ ಹಿಂದಿ ಭಾಷೆಯನ್ನು ಹಿಂಪಡೆಯಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

“ನಾವು ಎಲ್ಲಾ ಭಾಷೆಯನ್ನು ಸಮಾನವಾಗಿ ಕಾಣುತ್ತೇವೆ. ಅಂತೆಯೇ ಹಿಂದಿಯನ್ನು ಒಂದು ಭಾಷೆಯಾಗಿ ಗೌರವಿಸುತ್ತೇವೆ. ಆದರೆ ನಮ್ಮ ಭಾಷೆಯ ಮೇಲೆ ಸವಾರಿ ಮಾಡಲು ಬಂದರೆ ನಾವು ಸಹಿಸುವುದಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ. ಕನ್ನಡಿಗರೇ ಇದರ ರುವಾರಿಗಳು” ಎಂದು ಕನ್ನಡಪರ ಹೋರಾಟಗಾರ ಹರೀಶ್‍ಕುಮಾರ್ ಬಿ ತಿಳಿಸಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here