Homeಕರ್ನಾಟಕಬಿಜೆಪಿಯ ’ಮೀಸಲಾತಿ ಮಾಯಾಬಜಾರ್'

ಬಿಜೆಪಿಯ ’ಮೀಸಲಾತಿ ಮಾಯಾಬಜಾರ್’

- Advertisement -
- Advertisement -

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಮೋದಿ-ಬೊಮ್ಮಾಯಿ ಡಬಲ್ ಎಂಜಿನ್ ಸರ್ಕಾರ ’ಎಂಜಿನ್ ಇಲ್ಲದ’ ಸಾಲುಸಾಲು ರೈಲುಗಳನ್ನು ಕನ್ನಡ ನಾಡಿನಲ್ಲಿ ಬಿಡುತ್ತಿದೆ. ಅದರಲ್ಲಿ ಹಳಿಯೇ ಇಲ್ಲದ ’ಮೀಸಲಾತಿ’ ರೈಲನ್ನೂ ಬಿಟ್ಟಿದೆ. ಬೂತ್ ಮಟ್ಟದಲ್ಲಿ ತಮ್ಮ ’ಎಂಜಿನ್ ಇಲ್ಲದ ರೈಲು’ಗಳಿಗೆ ಬಣ್ಣ ಬಳಿದು ಜನರ ಮೆದುಳಿಗೆ ತುಂಬಲು ಬಹುದೊಡ್ಡ ತಂಡವನ್ನೇ ’ಬರಿಗೈ ಜಾದುಗಾರ ಅಮಿತ್ ಶಾ’ ತಯಾರು ಮಾಡಿದ್ದಾರೆ. ಈ ತಂಡ ಪ್ರತಿಯೊಂದು ’ಎಂಜಿನ್ ಇಲ್ಲದ ರೈಲನ್ನು’ ಸಂಬಳಕ್ಕೆ ಓಡಿಸುತ್ತಿದೆ.

ಇಂತಹ ಹಲವಾರು ’ರೈಲು’ಗಳಲ್ಲಿ ಇತ್ತೀಚಿನದ್ದೇ ಮೀಸಲಾತಿ ರೈಲು. ಉರಿಗೌಡ-ನಂಜೇಗೌಡ ’ರೈಲು’ ತಿರುಗೇಟು ನೀಡಿದ್ದರಿಂದ, ’2ಸಿ’ ಮತ್ತು ’2ಡಿ’ ರೈಲನ್ನು ವೇಗವಾಗಿ ಬಿಡಲಾಗಿದೆ. ಅದಕ್ಕೆ ’ಮುಸ್ಲಿಮರ ಮೀಸಲಾತಿ ರದ್ದು’ ಎಂಬ ಕೋಮುವಾದಿ ಬಣ್ಣವನ್ನೂ ಬಳಿಯಲಾಗಿದೆ. ಇದರ ಜೊತೆಜೊತೆಗೆ ’ಒಳಮೀಸಲಾತಿ’ ರೈಲನ್ನು ಸಹ ಬಿಟ್ಟಿದೆ. ಈ ಮೂಲಕ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಓಟುಗಳನ್ನು, ಉತ್ತರ ಕರ್ನಾಟಕದ ಭಾಗದ ಲಿಂಗಾಯತರ ಓಟುಗಳ ಮೇಲೆ ಕಣ್ಣಿಟ್ಟಿದೆ. ರಾಜ್ಯಾದ್ಯಂತ ದಲಿತರ ಓಟುಗಳನ್ನು ಒಗ್ಗೂಡದಂತೆ ಒಡೆದು ಹಾಕಲು ಯತ್ನಿಸುತ್ತಿದೆ. ಹಾಗಾದರೆ ಈ ಮೀಸಲಾತಿಯನ್ನು ಬಿಜೆಪಿಯು ತನ್ನ ಮಾಯಾಬಜಾರಿನಲ್ಲಿ ಸುಳ್ಳುಸುಳ್ಳೇ ಬಿಕರಿಗಿಟ್ಟಿರುವ ಹಿಂದಿನ ಸತ್ಯ ತಿಳಿಯುವುದು ಬಹಳ ಸುಲಭ. ಅದು ಓಟು.

ರಾಜ್ಯವೊಂದರ ಬಲಾಢ್ಯ ಜನಸಮುದಾಯಗಳು ಮೀಸಲಾತಿಗಾಗಿ ಹಾಗೂ ಮೀಸಲಾತಿ ಹೆಚ್ಚಳಕ್ಕಾಗಿ ಆಗ್ರಹಿಸಿದ್ದು ಇದೇ ಮೊದಲಲ್ಲ. ಗುಜರಾತಿನ ಪಾಟಿದಾರ್ (ಪಟೇಲರು), ರಾಜಸ್ಥಾನದ ಗುಜ್ಜಾರರು, ಮಹಾರಾಷ್ಟ್ರದ ಮರಾಠರು, ತಮಿಳುನಾಡಿನ ವಣ್ಣಿಯಾರರು ಹೀಗೆ ಹಲವರು ಮೀಸಲಾತಿಗಾಗಿ ಬೀದಿಗಿಳಿದು ಹೋರಾಡಿದ್ದಾರೆ. ಅವರ ಹೋರಾಟಕ್ಕೆ ಮಣಿದು ಅಲ್ಲಿನ ಸರ್ಕಾರಗಳು ಮೀಸಲಾತಿ ನೀಡಿ ಆದೇಶವನ್ನೂ ಮಾಡಿದ್ದವು. ಆದರೆ ನ್ಯಾಯಾಲಯವು ಆ ಎಲ್ಲಾ ಆದೇಶಗಳನ್ನೂ ರದ್ದುಗೊಳಿಸಿತು. ಹಾಗೆ ರದ್ದುಗೊಳಿಸಲು ಪ್ರಮುಖ ಕಾರಣ 1. ಮೀಸಲಾತಿಯ ಮಿತಿ ಶೇ.50 ಮೀರಬಾರದೆಂಬುದು 2. ಮೀಸಲಾತಿಗೆ ಆಧಾರವಾಗಿ ಸಮೀಕ್ಷಾಧಾರಿತ ಅಂಕಿಅಂಶ ಇಲ್ಲವೆಂಬುದು. ಕರ್ನಾಟಕ ಬಿಜೆಪಿ ಸರ್ಕಾರ ಈಗ ಒಕ್ಕಲಿಗರು-ಲಿಂಗಾಯತರಿಗೆ ನೀಡಲು ಹೊರಟಿರುವ ’2ಸಿ’ ಮತ್ತು ’2ಡಿ’ ಮೀಸಲಾತಿ ಘೋಷಣೆಯೂ ಸಹ ಈ ಎರಡು ನಿಯಮಗಳನ್ನು ಪಾಲಿಸಿಲ್ಲ. ಜೊತೆಗೆ ಮೂರನೆಯದಾಗಿ ಕಾನೂನಾತ್ಮಕ ಕಾರ್ಯವಿಧಾನವನ್ನೂ ಪಾಲಿಸಿಲ್ಲ.

ಕರ್ನಾಟಕದಲ್ಲಿ ಹಿಂದುಳಿದ ಜಾತಿಗಳ ಮೀಸಲಾತಿ ಹೋರಾಟ

ಕರ್ನಾಟಕದ ಹಿಂದುಳಿದ ವರ್ಗಗಳ ಮೀಸಲಾತಿ ಜಾರಿಗೊಂಡಿದ್ದರ ಬಗ್ಗೆ ಕನಿಷ್ಟ ಜ್ಞಾನವೂ ಇಲ್ಲದ ಸರ್ಕಾರ ಮಾತ್ರ ಈ ರೀತಿಯ ಬೇಕಾಬಿಟ್ಟಿ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಸ್ವತಃ ಬಿಜೆಪಿ ಸರ್ಕಾರದ ಮಂತ್ರಿಯೊಬ್ಬರು ಇದೆಲ್ಲಾ ’ತಾತ್ಕಾಲಿಕ’ ಹಾಗೂ ’ರಾಜಕೀಯ ಬಲವಂತಕ್ಕಷ್ಟೆ’ ಎಂದಿರುವಾಗಲೂ ಜನ ಇನ್ನೂ ಬೇಸ್ತುಬೀಳುತ್ತಿರುವುದು ಅಪಾಯಕಾರಿಯಾಗಿದೆ.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿದ್ದು ಸುಲಭಕ್ಕಲ್ಲ. ಅದು ಹೆಜ್ಜೆಹೆಜ್ಜೆಗೂ ಅಗ್ನಿಪರೀಕ್ಷೆಯನ್ನು ಎದುರಿಸಿ ಈ ಹಂತಕ್ಕೆ ಬಂದು ನಿಂತಿದೆ. ಮೈಸೂರು ಸಂಸ್ಥಾನದಲ್ಲಿ 1851 ಮತ್ತು 1881ರ ನಡುವೆಯೇ ಅಬ್ರಾಹ್ಮಣರಿಗೆ ಸರ್ಕಾರಿ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡಬೇಕೆಂಬ ಆಲೋಚನೆ ಆರಂಭವಾಗಿತ್ತು. 1921ರಷ್ಟೊತ್ತಿಗೆ ಮಿಲ್ಲರ್ ಸಮಿತಿಯ ಶಿಫಾರಸ್ಸಿನಂತೆ ಶೇ.75ರಷ್ಟು ಮೀಸಲಾತಿ ಬ್ರಾಹ್ಮಣೇತರರಿಗೆ ದೊರೆಯಿತು. ಇದರಲ್ಲಿ ಮುಸ್ಲಿಮರಿಗೂ ಪಾಲಿತ್ತು. ಈ ಕಾಲದಲ್ಲಿಯೇ ಮೈಸೂರಿನಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಂಘಗಳು ಸ್ಥಾಪನೆಯಾಗಿದ್ದು, ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದು. ’ಪ್ರಜಾ ಮಿತ್ರ ಮಂಡಳಿ’ ಇಡೀ ಮೈಸೂರು ಪ್ರಾಂತ್ಯದ ಬ್ರಾಹ್ಮಣೇತರರನ್ನು ಜಾಗೃತಿಗೊಳಿಸುವಲ್ಲಿ ಸಫಲವಾಯಿತು. ಸ್ವತಂತ್ರ ಭಾರತದ ಮೊದಲ ನಾಲ್ಕು ದಶಕಗಳಲ್ಲಿ ಅಖಿಲ ಭಾರತ ಮಟ್ಟದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಸಿಗಲಿಲ್ಲವಾದರೂ ಕರ್ನಾಟಕದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಕಿಕೊಟ್ಟ ಬುನಾದಿಯಿಂದಾಗಿ ರಾಜ್ಯ ಸರ್ಕಾರದಲ್ಲಿ ಓಬಿಸಿ ಮೀಸಲಾತಿ ಮುಂದುವರಿಯಿತು. ಅದರ ಭಾಗವಾಗಿ 1960ರಲ್ಲಿ ಏಕೀಕೃತ ಕರ್ನಾಟಕದ ಒಬಿಸಿ ಮೀಸಲಾತಿ ವಿಸ್ತರಣೆಗಾಗಿ ಆರ್. ನಾಗನಗೌಡ ಸಮಿತಿ ರಚಿಸಲಾಯಿತು. ಅದು ಈ ಹಿಂದಿನಂತೆಯೇ ಸಾಮಾಜಿಕ-ಶೈಕ್ಷಣಿಕ ಹಾಗೂ ಆರ್ಥಿಕ ಆಧಾರದಲ್ಲಿ ಜನಗಣತಿಯ ದಾಖಲೆಗಳನ್ನು ಪರಿಶೀಲಿಸಿ ಒಬಿಸಿ ಮೀಸಲಾತಿ ನೀಡಿತು. ಈ ಒಬಿಸಿ ಪಟ್ಟಿಯಲ್ಲಿ 10 ಮುಸ್ಲಿಂ ಜಾತಿಗಳನ್ನೂ ಗುರುತಿಸಿತು. ಇದನ್ನು 1962 ಮತ್ತು 1964ರಲ್ಲಿ ಎರಡೆರಡು ಬಾರಿ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಇದೇ ಬಾಲಾಜಿ ವರ್ಸಸ್ ಮೈಸೂರು ರಾಜ್ಯ ಪ್ರಕರಣ ಹಾಗೂ ಚಿತ್ರಲೇಖ ವರ್ಸಸ್ ಮೈಸೂರು ರಾಜ್ಯ ಪ್ರಕರಣ. ಈ ಪ್ರಕರಣದ ತೀರ್ಪಿನಲ್ಲಿ ಹಿಂದುಳಿದಿರುವಿಕೆಯನ್ನು ಸೂಚಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಮಾನದಂಡಗಳು ಬಹಳ ಮುಖ್ಯವೆಂದು ಕೋರ್ಟ್ ಹೇಳಿತು. ಜೊತೆಗೆ ಜಾತಿ ಮತ್ತು ವರ್ಗಗಳೆರಡೂ ಸಮಾನಾರ್ಥಕ ಪದಗಳಲ್ಲ ಎಂದು ಹೇಳಿತು. ಇದಾದ ಮೇಲೆ ದೇವರಾಜ್ ಅರಸು ಅವರ ಸರ್ಕಾರ ಮೊದಲ ಹಿಂದುಳಿದ ವರ್ಗಗಳ ಆಯೋಗವನ್ನು 1972ರಲ್ಲಿ ರಚಿಸಿತು. ಇದೇ ಎಲ್.ಜಿ.ಹಾವನೂರು ಆಯೋಗ. ಏಳು ಜನ ಸದಸ್ಯರಿದ್ದ ಈ ಆಯೋಗ ಹಿಂದೆಂದಿಗಿಂತಲೂ ಅಚ್ಚುಕಟ್ಟಾಗಿ ಸ್ಯಾಂಪಲ್ ಸಮೀಕ್ಷೆ ಮಾಡಿ ಮುಂದಿನವರಿಗೆ ಮಾದರಿಯಾಯಿತು. ಆದರೆ ಲಿಂಗಾಯತರು, ಮುಸ್ಲಿಮರು ಮತ್ತು ಕ್ರೈಸ್ತರನ್ನು ಹಿಂದುಳಿದ ವರ್ಗಗಳು ಅಲ್ಲವೆಂದು ನಿರ್ಧರಿಸಿತು. ಆದರೆ ಸರ್ಕಾರ ಹಾಗೂ ಆಯೋಗದ ಮೇಲೆ ಹೆಚ್ಚಿದ ಒತ್ತಡದಿಂದಾಗಿ ದೇವರಾಜ ಅರಸು ಸರ್ಕಾರ ಮೀಸಲಾತಿಯನ್ನು ಶೇ.40ಕ್ಕೆ ಏರಿಸಿ ಲಿಂಗಾಯತರು, ಮುಸ್ಲಿಮರು ಹಾಗೂ ಕ್ರೈಸ್ತರಿಗೂ ಮೀಸಲಾತಿ ಒದಗಿಸಿತು. ಇದರ ವಿರುದ್ಧವೂ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಯಿತು. ನಂತರ ಸುಪ್ರೀಂಕೋರ್ಟ್‌ಗೂ ತೆರಳಿತು. ಈ ಪ್ರಕರಣವೇ ಕೆ.ಸಿ.ವಸಂತಕುಮಾರ್ ವರ್ಸಸ್ ಕರ್ನಾಟಕ ರಾಜ್ಯ. ಐದು ಜನರ ನ್ಯಾಯಪೀಠವು ಮಹತ್ವದ ತೀರ್ಪು ನೀಡಿತು. ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಬಡತನ ಒಂದೇ ಮಾನದಂಡವಾಗಬಾರದು, ಜೊತೆಗೆ ಸಾಮಾಜಿಕ ಮತ್ತು ಶೈಕ್ಷಣಿಕೆ ಹಿಂದುಳಿದಿರುವಿಕೆಯನ್ನೂ ಪರಿಗಣಿಸಬೇಕು ಹಾಗೂ ಜಾತಿ ಶ್ರೇಣೀಕರಣವನ್ನು, ಆರ್ಥಿಕ ಸಮೀಕ್ಷೆಯನ್ನು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಗಳೊಂದಿಗೆ ಹೋಲಿಕೆ ಮಾಡಿ ಹಿಂದುಳಿದಿರುವಿಕೆಯನ್ನು ಪರಿಗಣಿಸಬೇಕು ಎಂದಿತು. ಈ ವಿಚಾರಣೆ ನಡೆಯುತ್ತಿರುವಾಗಲೇ 1984ರಲ್ಲಿ ಕರ್ನಾಟಕ ಸರ್ಕಾರ ಮತ್ತೊಂದು ಹಿಂದುಳಿದ ವರ್ಗಗಳ ಆಯೋಗ ರಚಿಸಿತು. ಅದುವೇ ವೆಂಕಟಸ್ವಾಮಿ ಆಯೋಗ; ಈ ಆಯೋಗವು 15 ಸದಸ್ಯರಿಂದ ಕೂಡಿತ್ತು. ಅತಿ ಮುಖ್ಯವಾಗಿ ರಾಜ್ಯದ ಶೇ.91ರಷ್ಟು ಅಂದರೆ 3.6 ಕೋಟಿ ಜನಸಂಖ್ಯೆಯನ್ನು ಇದು ಮನೆಮನೆಗೆ ತೆರಳಿ ಸಮೀಕ್ಷೆ ಮಾಡಿತು. ಅತ್ಯಂತ ಕಟ್ಟುನಿಟ್ಟಿನ ಸಮೀಕ್ಷೆ ಮಾಡಿದ ಈ ಆಯೋಗ ಒಕ್ಕಲಿಗರು ಮತ್ತು ಲಿಂಗಾಯತರನ್ನೇ ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟಿತು. ಅಂದಿನ ಜನತಾ ಸರ್ಕಾರದ ಇಚ್ಛಾಶಕ್ತಿಯಿಂದಾಗಿ ಈ ಎರಡು ಬೃಹತ್ ಸಮುದಾಯಗಳು ಪಟ್ಟಿಯಲ್ಲಿ ಸೇರ್ಪಡೆಗೊಂಡವು. ಮೀಸಲಾತಿಯನ್ನು ಶೇ.50ಕ್ಕೆ ಏರಿಸಲಾಯಿತು. ನಂತರ ರಚಿತವಾದದ್ದೇ ಚಿನ್ನಪ್ಪ ರೆಡ್ಡಿ ಆಯೋಗ. ಇದು ಒಬಿಸಿ ಮೀಸಲಾತಿಯನ್ನು ಶೇ.38ಕ್ಕೆ ಏರಿಸಿತು. ತದನಂತರ ರಚನೆಯಾದದ್ದು ಒಬಿಸಿ ಶಾಶ್ವತ ಆಯೋಗ; ಪ್ರೊ.ರವಿವರ್ಮಕುಮಾರ್ ಆಯೋಗ. ಈ ಆಯೋಗ ರಚನೆಯಾಗುವ ಹೊತ್ತಿಗೆ ಮೀಸಲಾತಿ ಮಿತಿಯನ್ನು ಶೇ.50ಕ್ಕೆ ಸೀಮಿತಗೊಳಿಸಲಾಗಿತ್ತು. ಕೇಂದ್ರ ಸರ್ಕಾರ ಮಂಡಲ್ ವರದಿಯನ್ನು ಜಾರಿಗೊಳಿಸಿದ ನಂತರ ಒಬಿಸಿ ಮೀಸಲಾತಿಗೆ ಬಹುದೊಡ್ಡ ಬಲ ಬಂದಂತಾಯಿತು. ಆನಂತರದ್ದು ಸಿ.ಎಸ್.ದ್ವಾರಕಾನಾಥ ಆಯೋಗ.

ಇದನ್ನೂ ಓದಿ: ಒಳಮೀಸಲಾತಿ: ಮಾದಿಗ ಸಮುದಾಯಕ್ಕೆ ಮತ್ತೆ ಮೋಸ

ಈ ಮೇಲಿನ ಸುದೀರ್ಘ ಇತಿಹಾಸದ ಸಂಕ್ಷಿಪ್ತ ನೋಟ ನೀಡಲು ಕಾರಣವಿದೆ. ಒಕ್ಕಲಿಗ, ಲಿಂಗಾಯತ, ಕುರುಬ ಮುಂತಾದ ಹಿಂದುಳಿದ ಜಾತಿಗಳಿಗೆ ಮೀಸಲಾತಿ ದಕ್ಕಿದ್ದು ಸುಲಭದ ವಿಚಾರವಾಗಿರಲಿಲ್ಲ. ಹೆಜ್ಜೆಹೆಜ್ಜೆಗೂ ಅಗ್ನಿ ಪರೀಕ್ಷೆ ಎದುರಿಸಿಯೇ ಮೀಸಲಾತಿ ಪಡೆದುಕೊಂಡದ್ದು. ಬಹುಮುಖ್ಯವಾಗಿ ಈ ಒಬಿಸಿ ಮೀಸಲಾತಿ ಪಡೆಯುವ ಯಾವುದೇ ಹೋರಾಟದಲ್ಲಿಯೂ ಸಹ ಮುಸ್ಲಿಮರನ್ನು ಒಬಿಸಿ ಪಟ್ಟಿಯಿಂದ ತೆಗೆಯುವ ಹಕ್ಕೊತ್ತಾಯಗಳೇ ಇರಲಿಲ್ಲ. ಹಾವನೂರು ಆಯೋಗ ಅದನ್ನು ಪ್ರಸ್ತಾಪಿಸಿದರೂ ಸಹ ವಿಶೇಷ ಕೆಟಗರಿ ಮಾಡಲು ಹಿಂಜರಿಯಲಿಲ್ಲ. ಅತಿಮುಖ್ಯವಾಗಿ ಈ ಎಲ್ಲಾ ಆಯೋಗಗಳೂ ಸಹ ಮೀಸಲಾತಿಯನ್ನು ಶೇ.50ಕ್ಕಿಂತಲೂ ಹೆಚ್ಚು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿದ್ದವು. ಆದರೆ ಇಂದಿರಾ ಸಹಾನಿಯವರ ತೀರ್ಪು ಅವೈಜ್ಞಾನಿಕವಾಗಿ ಅದನ್ನು ಕಟ್ಟಿಹಾಕಿತು. ಆ ಕಾರಣಕ್ಕೆ ಜನಸಂಖ್ಯೆಯಲ್ಲಿ ಶೇ.70ರಷ್ಟಿದ್ದರೂ ಕೇವಲ ಶೇ.32 ಮೀಸಲಾತಿ ಪ್ರಮಾಣಕ್ಕೆ ಒಬಿಸಿಗಳು ಒಪ್ಪಿಕೊಳ್ಳಬೇಕಾಯಿತು.

’2ಸಿ’ ಎಂಬ ಉರಿಗೌಡ, ’2ಡಿ’ ಎಂಬ ನಂಜೇಗೌಡ, ’ಶೇ.4’ ಎಂಬ ಟಿಪ್ಪು ಸುಲ್ತಾನ್

ಹೀಗೆ ಶೇ.32ಕ್ಕೆ ತೃಪ್ತಿಗೊಂಡಿದ್ದ ಒಬಿಸಿ ವರ್ಗಗಳಲ್ಲಿನ ಜಾತಿಗಳಿಗೆ 2019ರಲ್ಲಿ ಮೋದಿ ಸರ್ಕಾರ ಬ್ರಾಹ್ಮಣರು, ಮೊದಲಿಯಾರ್, ನಗರ್ತರಂತಹವರಿಗೆ ಏಕಾಏಕಿ ಕೊಡಮಾಡಿದ ’ಇಡಬ್ಲೂಎಸ್’ ಮೀಸಲಾತಿಯು ಪ್ರಚೋದನೆ ನೀಡಿದೆ. ಶೇ.5ಕ್ಕಿಂತಲೂ ಕಡಿಮೆ ಇರುವ ಹಾಗೂ 8 ಲಕ್ಷ ವಾರ್ಷಿಕ ಆದಾಯವಿದ್ದರೂ ಶೇ.10ರಷ್ಟು ಮೀಸಲಾತಿಯನ್ನು ಸಲೀಸಾಗಿ ಮುಂದುವರಿದ ಜಾತಿಗಳಿಗೆ ಮೋದಿ ಸರ್ಕಾರ ನೀಡಿದ ಮೇಲೆ ಅತಿ ಹೆಚ್ಚು ಜನಸಂಖ್ಯೆ ಇದ್ದರೂ ಕಡಿಮೆ ಮೀಸಲಾತಿ ಪ್ರಮಾಣ ಏಕೆ ಪಡೆಯಬೇಕು? ಎಂಬ ಸ್ವಾಭಿಮಾನದ ಪ್ರಶ್ನೆಯನ್ನು ಮುಂದಿರಿಸಿದೆ. ಹಾಗಾಗಿ ಶೇ.50ರ ಮಿತಿಯನ್ನು ಮೀರಿ ಒಬಿಸಿಗಳಿಗೆ ಮೀಸಲಾತಿ ನೀಡಬೇಕೆಂಬ ಒತ್ತಾಯಕ್ಕೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮೋದಿಯವರ ಮೇಲೆ ಒತ್ತಡ ಹೇರದೇ ಮುಸ್ಲಿಮರ ಮೀಸಲಾತಿಯನ್ನು ’ಇಡಬ್ಲೂಎಸ್’ಗೆ ವರ್ಗಾಯಿಸಿ ಆ ಶೇ.4ನ್ನು ಒಕ್ಕಲಿಗರು ಮತ್ತು ಲಿಂಗಾಯತರಿಗೆ ಹಂಚಲು ತೀರ್ಮಾನಿಸಿದೆ. ಶೇ.25ಕ್ಕೂ ಹೆಚ್ಚಿರುವ ಒಕ್ಕಲಿಗ ಮತ್ತು ಲಿಂಗಾಯತ ಜಾತಿಗಳಿಗೆ ಶೇ.13ರಷ್ಟು ಮೀಸಲಾತಿಯನ್ನು ಕೊಟ್ಟಿರುವುದರಲ್ಲಿ ಮುಸ್ಲಿಮರಿಂದ ಕಿತ್ತು ಕೊಟ್ಟಿರುವುದೂ ಸೇರಿದೆ. ಬೊಮ್ಮಾಯಿ ಸರ್ಕಾರದ ಇಂತಹ ಹುನ್ನಾರವನ್ನು ಒಕ್ಕಲಿಗರು-ಲಿಂಗಾಯತರು ಒಪ್ಪಿಕೊಳ್ಳಲು ಸಾಧ್ಯವೇ? ಇಲ್ಲವೇಇಲ್ಲ. ಬ್ರಾಹ್ಮಣರ ಮೀಸಲಾತಿಗೆ ಶೇ.50ರ ಮಿತಿ ಇಲ್ಲದಿದ್ದ ಮೇಲೆ ಹಿಂದುಳಿದ ಜಾತಿಗಳ ಮೀಸಲಾತಿಗಳಿಗೆ ಮಿತಿ ಏಕೆ? ಉರಿಗೌಡ ಮತ್ತು ನಂಜೇಗೌಡ ಕಾಲ್ಪನಿಕ ಪಾತ್ರಗಳು ಬಿಜೆಪಿಗೆ ಕೈ ಕೊಟ್ಟಿದ್ದರಿಂದ ಅವುಗಳ ಜಾಗದಲ್ಲಿ ’2ಸಿ’ ಮತ್ತು ’2ಡಿ’ ತರಲಾಗಿದೆಯಷ್ಟೇ.

ಮುಸ್ಲಿಮರನ್ನು ಒಬಿಸಿ ಪಟ್ಟಿಯಿಂದ ತೆಗೆಯಲು ಯಾವುದೇ ಮಾನದಂಡಗಳನ್ನು, ಸಮೀಕ್ಷೆಗಳನ್ನು ನೀಡದ ಬೊಮ್ಮಾಯಿ ಸರ್ಕಾರ ಒಬಿಸಿಗಳಿಗೆ ಚಳ್ಳೆ ಹಣ್ಣು ತಿನಿಸುತ್ತಿದೆ ಅಷ್ಟೆ.

ಒಳಮೀಸಲಾತಿ ವರ್ಗೀಕರಣ: ಬಿಜೆಪಿ ಕೈಗೊಂಡ ಐತಿಹಾಸಿಕ ಅನ್ಯಾಯ

ರಾಜ್ಯ ಬಿಜೆಪಿ ಸರ್ಕಾರ ಚುನಾವಣೆಯ ಹೊಸ್ತಿಲಲ್ಲಿಯೇ ಒಳಮೀಸಲಾತಿ ವರ್ಗೀಕರಣ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಹೇಳಿದೆ. ಆದರೆ ಇದನ್ನು ಒಳಮೀಸಲಾತಿ ಜಾರಿ ಎಂದೇ ಸುಳ್ಳು ಪ್ರಚಾರ ಮಾಡುತ್ತಿದೆ. ವಾಸ್ತವವೆಂದರೆ ಈ ಒಳಮೀಸಲಾತಿ ಶಿಫಾರಸ್ಸು ಸದ್ಯಕ್ಕೆ ಜಾರಿಯಾಗಲು ಸಾಧ್ಯವಿಲ್ಲ. ಇದು ಕೇವಲ ಬಿಜೆಪಿಯ ಚುನಾವಣಾ ತಂತ್ರವಾಗಿದೆ.

ಒಳಮೀಸಲಾತಿ ವರ್ಗೀಕರಣ ಶಿಫಾರಸ್ಸು ಮಾದಿಗ ಸಮುದಾಯ ನಡೆಸಿದ 30 ವರ್ಷಗಳ ಹೋರಾಟದ ಪ್ರತಿಫಲವೇ ಹೊರತು ಯಾವುದೋ ಒಂದು ಸರ್ಕಾರದ ಸಾಧನೆಯಲ್ಲ. ಜಸ್ಟಿಸ್ ಸದಾಶಿವ ಆಯೋಗ ಮಾಡಿದ ವರ್ಗೀಕರಣವು ಶೇ.15ರ ಮೀಸಲಾತಿಯನ್ನು ಆಧರಿಸಿತ್ತು. ಹಲವು ವರ್ಷ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಮಾಡಿ ಎಡಗೈ ಸಂಬಂಧಿತ ಜಾತಿಗಳಿಗೆ 6%, ಬಲಗೈ ಸಂಬಂಧಿತ ಜಾತಿಗಳಿಗೆ 5%, ಸ್ಪೃಶ್ಯ ಜಾತಿಗಳಿಗೆ 3%, ಇತರೆ ಪರಿಶಿಷ್ಟರಿಗೆ 1% ಮೀಸಲಾತಿ ನಿಗದಿಗೊಳಿಸಿತ್ತು. ಈಗ ಬಿಜೆಪಿ ಸರ್ಕಾರ ಪರಿಶಿಷ್ಟರಿಗೆ ಹೆಚ್ಚಳಗೊಳಿಸಬೇಕೆಂದಿರುವ 17% ಮೀಸಲಾತಿಯಲ್ಲಿ ಮೇಲಿನಂತೆ ಕ್ರಮವಾಗಿ 6%, 5.5%, 4.5% ಮತ್ತು 1% ವರ್ಗೀಕರಿಸಿ ಆದೇಶಿಸಿದೆ. ಇದಕ್ಕೆ ಯಾವುದೇ ಸಮೀಕ್ಷೆಗಳು ಆಗಿಲ್ಲ. ಅದಕ್ಕೆ ಪುರಾವೆಗಳನ್ನೂ ಸಹ ಸರ್ಕಾರ ನೀಡಿಲ್ಲ. ಯಾವ ಆಧಾರದಲ್ಲಿ ಸ್ಪೃಶ್ಯ ಜಾತಿಗಳಿಗೆ 1.5% ನೀಡಿತೋ ತಿಳಿಯದಾಗಿದೆ. ಈ ಅನ್ಯಾಯವನ್ನು ಮುಚ್ಚಿಡಲು ಹೊಲೆಯ ಸಂಬಂಧಿತ ಜಾತಿಗಳ ಮೂಗಿಗೆ 0.5% ತುಪ್ಪ ಸವರಿದೆ. ಹೆಚ್ಚಳ ಮಾಡುತ್ತೇವೆ ಎಂದಿರುವ 17%ರಲ್ಲಿ ಮಾದಿಗರಿಗೆ ಬಹುದೊಡ್ಡ ಅನ್ಯಾಯವಾಗಿದೆ.

ಆಯ್ತು, ಈಗಾಗಿರುವ ವರ್ಗೀಕರಣವನ್ನೇ ಒಪ್ಪಿಕೊಂಡರೂ ಅದು ಜಾರಿಯಾಗುತ್ತದೆಯೇ? ನೋಡೋಣ ಬನ್ನಿ. ಪರಿಶಿಷ್ಟರ ಮೀಸಲಾತಿಯನ್ನು 15% ನಿಂದ 17%ಗೆ ಹೆಚ್ಚಿಸಬೇಕೆಂದು ಆದೇಶ ಮಾಡಿರುವ ಬಿಜೆಪಿ ಸರ್ಕಾರದ ನಡೆ ಸಂಪೂರ್ಣ ವಂಚನೆಯಿಂದ ಕೂಡಿದೆ. ಪರಿಶಿಷ್ಟರ ಮೀಸಲಾತಿ 17%ಗೆ ಹೆಚ್ಚಳವಾದರೆ ಅದು ಸುಪ್ರೀಂಕೋರ್ಟ್ ವಿಧಿಸಿರುವ 50% ಮಿತಿ ದಾಟುತ್ತದೆ. ಹಾಗಾಗಿ 17% ಊರ್ಜಿತವಾಗಬೇಕೆಂದರೆ ದೆಹಲಿಯ ಸಂಸತ್ತಿನಲ್ಲಿ ಇದು ಮಂಡನೆಯಾಗಿ ಸಂವಿಧಾನದ 9ನೇ ಶೆಡ್ಯೂಲಿಗೆ ಕಾಯ್ದೆ ಮಾಡಿ ಸೇರಿಸಬೇಕಿದೆ. ತಮಿಳುನಾಡು ಹೀಗೇ ಜಾರಿ ಮಾಡಿಕೊಂಡಿದೆ. ಮಹಾವಂಚನೆ ಏನೆಂದರೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಈ ಪ್ರಸ್ತಾವನೆಯನ್ನೇ ಕಳಿಸಿಲ್ಲ. ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಪರಿಶಿಷ್ಟರ ಮೀಸಲಾತಿ ಹೆಚ್ಚಳದ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇಲ್ಲವೆಂದು ಹೇಳಿದ್ದಾರೆ. ಅಲ್ಲಿಗೆ 17% ಕತೆ ಮುಗಿಯಿತು. 17%ಗೆ ಮೀಸಲಾತಿ ಹೆಚ್ಚಳವಾಗಲ್ಲ ಎಂದರೆ 17% ವರ್ಗೀಕರಣ ಮಾಡಿರುವ ಒಳಮೀಸಲಾತಿ ಹೇಗೆ ಜಾರಿಯಾಗುತ್ತದೆ? ಸಾಧ್ಯವಿಲ್ಲ.

ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರದ ಕೈಯ್ಯಲಿಲ್ಲವೇ? ಹೌದು ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸುವುದು ಅಸಾಧ್ಯ. ಹಿಂದೆ ಇ.ವಿ. ಚಿನ್ನಯ್ಯ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ 5 ಜನ ನ್ಯಾಯಾಧೀಶರ ಪೀಠ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯಗಳಿಗಿಲ್ಲ ಎಂದಿತ್ತು. ಆದರೆ ಪಂಜಾಬ್‌ನ ಧವಿಂದರ್ ಸಿಂಗ್ ಪ್ರಕರಣದಲ್ಲಿ, 2020ರಲ್ಲಿ ಅರುಣ್ ಮಿಶ್ರಾ ಅವರನ್ನು ಒಳಗೊಂಡ 5 ಜನ ನ್ಯಾಯಾಧೀಶರ ಪೀಠವು ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯಕ್ಕಿದೆ ಎಂದು ತೀರ್ಪು ನೀಡಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ 5 ಜನ ನ್ಯಾಯಾಧೀಶರು ನೀಡಿದ ತೀರ್ಪನ್ನು ಮತ್ತೊಂದು 5 ಜನ ನ್ಯಾಯಾಧೀಶರ ಪೀಠವು ಅನೂರ್ಜಿತಗೊಳಿಸಲಾರದು. ಹಾಗಾಗಿ 7 ಜನ ನ್ಯಾಯಾಧೀಶರ ಪೀಠದ ಮುಂದೆ ಈ ವಿಷಯ ಹೋಗಬೇಕು. ದುರಂತವೆಂದರೆ ಮೂರು ವರ್ಷವಾದರೂ 7 ಜನ ನ್ಯಾಯಾಧೀಶರ ಪೀಠವನ್ನು ರಚಿಸಿಲ್ಲ.

ಹಾಗಾದರೆ ಒಳಮೀಸಲಾತಿ ಜಾರಿ ಅಸಾಧ್ಯವೇ? ಇಲ್ಲ ಸಾಧ್ಯವಾಗುತ್ತದೆ. 2008ರಲ್ಲಿ ಉಷಾ ಮೆಹ್ರಾ ಸಮಿತಿಯು ಸಂವಿಧಾನ ವಿಧಿ 341ಕ್ಕೆ 3ನೇ ತಿದ್ದುಪಡಿ ತರುವ ಮೂಲಕ ಒಳಮೀಸಲಾತಿಯನ್ನು ಜಾರಿಗೆ ತರಬಹುದಾಗಿದೆ ಎಂದು ವರದಿ ನೀಡಿದೆ. EWS ಮಾದರಿಯಲ್ಲಿ ಮೂರೇ ದಿನದಲ್ಲಿ ಈ ಕೆಲಸವನ್ನು ಮೋದಿ ಸರ್ಕಾರ ಮಾಡಬಹುದು. ಆದರೆ ಪ್ರತಿಯೊಂದಕ್ಕೂ ಚುನಾವಣೆಯ ಗಿಮಿಕ್ ಮಾಡುವ ಮೋದಿ ಸರ್ಕಾರ ಇದನ್ನು 2024ರ ಲೋಕಸಭಾ ಚುನಾವಣೆಯವರೆಗೆ ತಳ್ಳುತ್ತ blackmail ಮಾಡುತ್ತದೆ. 2024ಕ್ಕೆ ಮೋದಿ ಸರ್ಕಾರ ಮತ್ತೆ ಬಂದರೆ ಅಂಬೇಡ್ಕರ್ ಅವರ ಸಂವಿಧಾನವನ್ನೇ ಬದಲಾಯಿಸುವ ಆತಂಕಗಳು ನಮ್ಮ ಮುಂದೆ ಇರುವಾಗ, ಆಗ ಒಳಮೀಸಲಾತಿ ಅಲ್ಲ ಮೀಸಲಾತಿಯೇ ಇರುವುದಿಲ್ಲ.

ಒಟ್ಟಾರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಳಮೀಸಲಾತಿ ಹೋರಾಟಗಾರರಿಗೆ ಅದರಲ್ಲೂ ಮಾದಿಗ ಸಂಬಂಧಿ ಜಾತಿಗಳ ಮೂರು ದಶಕದ ಹೋರಾಟಕ್ಕೆ ಮೋಸ ಮಾಡಿದೆ. ಚುನಾವಣಾ ಹೊಸ್ತಿಲಲ್ಲಿ ಓಟಿನ ಮೇಲೆ ಕಣ್ಣಿಟ್ಟು ಒಳಮೀಸಲಾತಿ ಹೋರಾಟಗಾರರನ್ನು ಕಣ್ಕಟ್ಟಿನ ಮೂಲಕ ವಂಚಿಸಲು ಹವಣಿಸಿದೆ. 2023ರ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು blackmail ತಂತ್ರಕ್ಕೆ ಕೈಹಾಕಿದೆ.

ಇದೀಗ ಬಂದಿರುವ ವರ್ತಮಾನದಂತೆ, ಒಳಮೀಸಲಾತಿ ಜಾರಿ ಉಪಸಮಿತಿಯ ಅಧ್ಯಕ್ಷರಾದ ಮಾಧುಸ್ವಾಮಿಯವರು, ಜಸ್ಟಿಸ್ ಸದಾಶಿವ ವರದಿಯನ್ನು ಸರ್ಕಾರ ತಿರಸ್ಕರಿಸಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಸ್ಪೃಶ್ಯ ದಲಿತರು ಇದನ್ನೇ ಒತ್ತಾಯಿಸಿದ್ದರು. ಅಸ್ಪೃಶ್ಯ ದಲಿತರು ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ಬಹಿರಂಗಗೊಳಿಸಿ ಅದರಂತೆ ವರ್ಗೀಕರಣ ಮಾಡಲು ಒತ್ತಾಯಿಸಿದ್ದರು. ಬಿಜೆಪಿ ಸರ್ಕಾರ ಲಂಬಾಣಿ-ಬೋವಿ ಜಾತಿಗಳ ಬೇಡಿಕೆಗೆ ಮಣೆ ಹಾಕಿದೆ. ಮಾದಿಗರು ಹಾಗೂ ಹೊಲೆಯರ ಬೇಡಿಕೆಯನ್ನು ತಿರಸ್ಕರಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...