Homeಕರ್ನಾಟಕಒಳಮೀಸಲಾತಿ: ಮಾದಿಗ ಸಮುದಾಯಕ್ಕೆ ಮತ್ತೆ ಮೋಸ

ಒಳಮೀಸಲಾತಿ: ಮಾದಿಗ ಸಮುದಾಯಕ್ಕೆ ಮತ್ತೆ ಮೋಸ

ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿ ಹಂಚಿಕೆಯಲ್ಲಿ ಮಾದಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದೆ.

- Advertisement -
- Advertisement -

ಒಳಮೀಸಲಾತಿಯನ್ನು ಜಾರಿಗೊಳಿಸುವುದಾಗಿ ರಾಜ್ಯ ಸಚಿವ ಸಂಪುಟ ತೀರ್ಮಾನ ಕೈಗೊಂಡಿದ್ದು, ಮೀಸಲಾತಿ ಹಂಚಿಕೆಯ ಪ್ರಮಾಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ. 4.5, ಇತರೆ ಅಲೆಮಾರಿ ಸಮುದಾಯಗಳಿಗೆ ಶೇ. 1 ಮೀಸಲಾತಿಯನ್ನು ಹಂಚಿಕೆ ಮಾಡುವ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ.

ಒಳಮೀಸಲಾತಿಯ ಸಮಸ್ಯೆ ಬಗೆಹರಿದಿರುವಂತೆ ಸರ್ಕಾರ ಬಿಂಬಿಸಿಕೊಳ್ಳಲು ಯತ್ನಿಸಿದರೂ ತಾಂತ್ರಿಕ ಅಂಶಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಅಲ್ಲದೆ ಸುಮಾರು 30 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಸಿರುವ ಮಾದಿಗ ಸಮುದಾಯಕ್ಕೆ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂಬ ಕೂಗು ಎದ್ದಿದೆ.

ಸಾಮಾಜಿಕ ನ್ಯಾಯಕ್ಕಾಗಿ ಜನಸಂಖ್ಯೆ ಆಧರಿಸಿ ಪರಿಶಿಷ್ಟ ಜಾತಿಯಲ್ಲಿನ 101 ಉಪ ಪಂಗಡಗಳಿಗೆ ಮೀಸಲಾತಿ ಸೌಲಭ್ಯವನ್ನು ಹಂಚಬೇಕು. ಏಕೆಂದರೆ ಕೆಲವೇ ಜಾತಿಗಳು ತಮ್ಮ ವರ್ಚಸ್ಸಿನಿಂದ ಕಬಳಿಸುತ್ತಿವೆ ಎನ್ನುವ ದೂರು ವ್ಯಾಪಕವಾದ ಹಿನ್ನೆಲೆಯಲ್ಲಿ 2005ರ ಸೆಪ್ಟೆಂಬರ್‌ನಲ್ಲಿ ಧರಂಸಿಂಗ್ ನೇತೃತ್ವದ ಸರಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗವನ್ನು ರಚಿಸಿತು. ಸದಾಶಿವ ಆಯೋಗ(2005)ವು ಕೇವಲ 2 ವರ್ಷದ ಸಮೀಕ್ಷಾ ಕಾರ್ಯದ ಮಿತಿ ಹೊಂದಿತ್ತಾದರೂ, ಹಣಕಾಸು ಹಾಗೂ ಇನ್ನಿತರ ಸಮರ್ಪಕ ಸೌಲಭ್ಯ ದೊರೆಯದೆ 7 ವರ್ಷಗಳ ನಂತರ ಸಾಕಷ್ಟು ವಿಳಂಬವಾಗಿ 2012ರ ಜೂನ್‌ನಲ್ಲಿ ತನ್ನ ಶಿಫಾರಸು ವರದಿಯನ್ನು ನೀಡಿತು. ಆಗ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದರು. ಆನಂತರದಲ್ಲಿ ವರದಿ ಬಿಡುಗಡೆಯೇ ಆಗಲಿಲ್ಲ.

ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿ ಸಾರ್ವಜನಿಕವಾಗಿ ಲಭ್ಯವಾಗಿಲ್ಲ, ಚರ್ಚೆಗೂ ಒಳಪಟ್ಟಿಲ್ಲ. ಆದರೆ ಸಾರ್ವಜನಿಕವಾಗಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿದೆ. ಅದರಂತೆ ಶೇ.33.4ರಷ್ಟಿರುವ ಎಡಗೈ (ಮಾದಿಗ) ಸಮುದಾಯಕ್ಕೆ ಶೇ.6ರಷ್ಟು, ಶೇ.32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ.5ರಷ್ಟು, ಶೇ.23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ.3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ.1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿರುವುದಾಗಿ ಹೇಳಲಾಗುತ್ತಿದೆ.

ರಾಜ್ಯ ಸರ್ಕಾರ ಕಳೆದ ವರ್ಷ ಪರಿಶಿಷ್ಟ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸುವುದಾಗಿ ಹೇಳಿತು. ಜಸ್ಟಿಸ್ ಎಚ್.ಎನ್.ನಾಗಮೋಹನದಾಸ್ ಸಮಿತಿ ವರದಿಯ ಅನ್ವಯ ಪರಿಶಿಷ್ಟರಿಗೆ ಶೇ.2ರಷ್ಟು ಮೀಸಲಾತಿಯನ್ನು ಹೆಚ್ಚಿಸುವ ನಿರ್ಧಾರ ಪ್ರಕಟಿಸಿತು. ಅದರನ್ವಯ ರಾಜ್ಯದಲ್ಲಿ ಎಸ್‌ಸಿ ಮೀಸಲಾತಿಯು ಶೇ.17ಕ್ಕೆ ಏರಿಕೆಯಾಗುತ್ತದೆ. ಈಗ ಮೀಸಲಾತಿ ಹಂಚಿಕೆ ಮಾಡುವಾಗಲೂ ಹೆಚ್ಚಳವಾದ ಮೀಸಲಾತಿ ಪ್ರಮಾಣವನ್ನು ಸೇರಿಸಿಕೊಂಡು ಸರ್ಕಾರ ನಿರ್ಧಾರ ಪ್ರಕಟಿಸಿದೆ. ಅಂದರೆ ಸದಾಶಿವ ಆಯೋಗದ ವರದಿಯಲ್ಲಿ ಸೂಚಿಸಿದ ಪ್ರಮಾಣವಷ್ಟೇ (ಶೇ.6) ಮಾದಿಗ ಸಮುದಾಯಕ್ಕೆ ನೀಡಲಾಗಿದೆ ಹೊರತು, ಮೀಸಲಾತಿ ಹೆಚ್ಚಳದಲ್ಲಿ ಒಂದು ನಯಾಪೈಸೆ ಕೂಡ ಮಾದಿಗರಿಗೆ ದೊರೆತ್ತಿಲ್ಲ. ಜೊತೆಗೆ ಇತರೆ ಸಮುದಾಯಗಳ ಪಟ್ಟಿಯಲ್ಲಿನ ಅಲೆಮಾರಿಗಳಿಗೂ ಹೆಚ್ಚಳವಾಗಿಲ್ಲ.

ಶೇ.2ರಷ್ಟು ಹೆಚ್ಚಳ ಮಾಡಲಾಗಿರುವ ಮೀಸಲಾತಿಯಲ್ಲಿ ಬರೋಬ್ಬರಿ ಒಂದೂವರೆ ಪರ್ಸೆಂಟ್ ಮೀಸಲಾತಿಯನ್ನು ಸ್ಪೃಶ್ಯ ಸಂಬಂಧಿತ ಜಾತಿಗಳಿಗೆ ನೀಡಿದರೆ, ಅಸ್ಪೃಶ್ಯ ಹೊಲೆಯ ಸಮುದಾಯಕ್ಕೆ ಅರ್ಧ ಪರ್ಸೆಂಟ್ ನೀಡಲಾಗಿದೆ. ಮಾದಿಗ ಸಮುದಾಯದ ಜನಸಂಖ್ಯೆ ಹೆಚ್ಚಳವಾಗಿಲ್ಲ ಎಂಬಂತೆ ಸರ್ಕಾರ ವರ್ತಿಸಿದೆ. ಮತ್ತೆ ಮಾದಿಗ ಸಮುದಾಯವನ್ನು ವಂಚಿಸುವ ಕೆಲಸವಾಗಿದೆ. ಯಾವ ಅಂಕಿ-ಅಂಶದ ಮೇಲೆ ಈ ವಿಂಗಡಣೆಯನ್ನು ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದರ ಜೊತೆಗೆ ಒಬಿಸಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಕಿತ್ತುಹಾಕಿ, ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ಹಂಚಿಕೆ ಮಾಡುವ ಪ್ರಸ್ತಾಪವನ್ನು ಮಾಡಿರುವುದು ಯಾವ ಸಮೀಕ್ಷೆಯ ಅಂಕಿ-ಅಂಶಗಳ ಆಧಾರದ ಮೇಲೆ ಎಂಬುದಕ್ಕೂ ಸಾರ್ವಜನಿಕವಾಗಿ ಉತ್ತರ ಲಭ್ಯವಿಲ್ಲ.

ಈ ಅನ್ಯಾಯದ ವಿರುದ್ಧ ದನಿ ಎತ್ತಿರುವ ದಲಿತ ಮುಖಂಡ ಭಾಸ್ಕರ್‌ ಪ್ರಸಾದ್, “ಬೊಮ್ಮಾಯಿ ಸರ್ಕಾರ ಶಿಫಾರಸ್ಸು ಮಾಡಿರುವುದು 17% ಮೀಸಲಾತಿಯನ್ನು ಆಧರಿಸಿ. ಇದರಲ್ಲಿ 6% ಎಡಗೈ ಸಮುದಾಯಕ್ಕೆ, 5.5% ಬಲಗೈ ಸಮುದಾಯಕ್ಕೆ. ಕೋಲಂಬೋ (ಕೊರಚ, ಲಂಬಾಣಿ, ಭೋವಿ) ಸಮುದಾಯಗಳಿಗೆ 4.5% ಎಂದು. ನಿಜ ಹೇಳಿ ಜನಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮೀಸಲಾತಿ ಹಂಚಿಕೆ ಆಗಿದೆಯಾ? ಹೆಚ್ಚಿಸಲಾಗಿದೆ ಎಂದು ಹೇಳುತ್ತಿರುವ 2% ಮೀಸಲಾತಿಯಲ್ಲಿ 1.5% ಮೀಸಲಾತಿಯನ್ನು ಕೊಲಂಭೋ ಸಮುದಾಯಗಳಿಗೆ ಮಾತ್ರ ಶಿಫಾರಸು ಮಾಡಲಾಗಿದೆ, ಕೇವಲ 0.5% ಮೀಸಲಾತಿ ಹೆಚ್ಚಳವನ್ನು ಬಲಗೈ ಸಮುದಾಯಕ್ಕೆ ನೀಡಲು ಶಿಫಾರಸ್ಸು ಮಾಡಲಾಗಿದೆ ಎಂದು ಹೇಳಲಾಗಿದೆ. ಅತಿ ಮುಖ್ಯವಾಗಿ ಈಗ ಅತಿ ಹೆಚ್ಚಿನ ಸಂಭ್ರಮಾಚರಣೆಯಲ್ಲಿ ತೊಡಗಿರುವ ಮಾದಿಗ ಸಮುದಾಯಕ್ಕೂ 2% ಪ್ರಮಾಣದ ಮೀಸಲಾತಿ ಹೆಚ್ಚಳಕ್ಕೂ ಯಾವ ಬಾದರಾಯನ ಸಂಬಂಧವು ಇಲ್ಲವೇ ಇಲ್ಲ ಎಂದು ನೇರವಾಗಿ ತಿಳಿಸಲಾಗಿದೆ. ಈ ಶಿಫಾರಸ್ಸಿನ ಪ್ರಕಾರವಾಗಿ ನೋಡಿದರೇ, ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಹೊಲೆಯರ ಜನಸಂಖ್ಯೆ ಹೆಚ್ಚಳ ಕೇವಲ 0.5% ಆಗಿದೆಯೆಂದೂ, ಮಾದಿಗರ ಜನಸಂಖ್ಯೆ ಹೆಚ್ಚಳ ಪ್ರಮಾಣ ಸೊನ್ನೆ, ಸೊನ್ನೆ, ಸೊನ್ನೆ‌ ಎಂದೂ, ಆದರೇ, ಕೊಲಂಭೋಗಳ ಜನಸಂಖ್ಯೆ ಮಾತ್ರ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಇಲ್ಲಿ ಪ್ರತಿಪಾದಿಸಲಾಗಿದೆ. ಹಾಗಾಗಿ ಅವರಿಗೆ 1.5% ಮೀಸಲಾತಿಯನ್ನು ಹೆಚ್ಚಾಗಿ ನೀಡಲಾಗಿದೆ ಎಂದೂ ಒಪ್ಪಿಕೊಳ್ಳಬೇಕಾಗುತ್ತದೆ. ಈಗ ಸಂಭ್ರಮದಿಂದ ಮೈ ಮರೆತಿರುವವರು ಈ ಅನ್ಯಾಯವನ್ನು ಒಪ್ಪಿಕೊಳ್ತೀರಾ?” ಎಂದು ಪ್ರಶ್ನಿಸಿದ್ದಾರೆ.

“ಈಗ ಮತ್ತೊಂದು ಅತೀ ಮುಖ್ಯ ಪ್ರಶ್ನೆ ಏನೆಂದರೆ, ಈ 17% ಮೀಸಲಾತಿ ಜಾರಿ ಆಗಿದ್ದು ಯಾವಾಗ? ಜಾರಿಯೇ ಆಗದ ಮೀಸಲಾತಿ ಪ್ರಮಾಣವನ್ನು 15% ಮೀಸಲಾತಿ ಪ್ರಮಾಣದ ಬದಲಾಗಿ ಹೀಗೆ ತನಗಿಷ್ಟ ಬಂದಂತೆ ಮಾದಿಗ ಮತ್ತು ಸಂಬಂಧಿತ ಜಾತಿಗೆ 6%, ಹೊಲೆಯ ಮತ್ತು ಸಂಬಂಧಿತ ಜಾತಿಗೆ 5.5%, ಕೊಲಂಭೋಗಳಿಗೆ 4.5%, ಮತ್ತು ಇತರರಿಗೆ 1% ಎಂದು 15 ಅನ್ನು 17ಕ್ಕೆ ಹೆಚ್ಚಿಸಿ ವಿಂಗಡಿಸುವುದಾದರು ಎಲ್ಲಿ ಮತ್ತು ಹೇಗೆ?” ಎಂದು ಕೇಳಿದ್ದಾರೆ.

“ಮೀಸಲಾತಿ ಹೆಚ್ಚಳದ ಬಗ್ಗೆ ಲೋಕಸಭೆಯಲ್ಲಿ ಸ್ವತಃ ಎ. ನಾರಾಯಣಸ್ವಾಮಿ ಅವರೇ ಮಾತನಾಡುತ್ತಾ, ಮೀಸಲಾತಿಯನ್ನು 15% ನಿಂದ 17% ಹೆಚ್ಚಿಸುವ ಯಾವ ಪ್ರಸ್ತಾಪವೂ ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದಿದ್ದಾರೆ. ಮತ್ತೀಗ 17% ಮೀಸಲಾತಿ ಪೈಕಿ ಮಾದಿಗರಿಗೆ 6% ಸಿಕ್ಕಿದೆ ಎಂದು ಹೇಳುತ್ತಿದ್ದಾರೆ. ಹೊಟ್ಟೆ ಉರಿತಿದೆ ಸ್ವಾಮಿ, ಕೇವಲ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ತನ್ನದೇ ಸಮುದಾಯಕ್ಕೆ ಸುಳ್ಳು ಹೇಳಿ ಮೋಸ ಮಾಡ್ತಾ ಇದ್ದಾರಲ್ಲಾ, ತನ್ನ ಸಮುದಾಯಕ್ಕೆ ಮೋಸ ಮಾಡುವುದಕ್ಕೂ, ತನ್ನ ಹೆತ್ತ ತಾಯಿಯ ಎದೆಗೆ ಒದೆಯುವುದಕ್ಕೂ ಏನಾದರೂ ವ್ಯತ್ಯಾಸ ಇದೆಯಾ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸರ್ಕಾರದ ನಿರ್ಧಾರಗಳಲ್ಲಿನ ತೊಡಕುಗಳನ್ನು ಪ್ರಸ್ತಾಪಿಸಿದ್ದಾರೆ. “ರಾಜ್ಯ ಸರ್ಕಾರ ಘೋಷಿಸಿರುವ ಪರಿಷ್ಕೃತ ಮೀಸಲಾತಿ ನೀತಿ ‘ಕನ್ನಡಿಯೊಳಗಿನ ಗಂಟು’ ಅಷ್ಟೆ. ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದ್ದೇಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್ ಗಳಿಗೆ ಜನ ಬಲಿಯಾಗಬಾರದು” ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿರಿ: ಒಳಮೀಸಲಾತಿಯ ಮುಂಚೂಣಿ ನಾಯಕ ಅಂಬಣ್ಣ, ಬಿ.ಗೋಪಾಲ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆ

“ಹಿಂದುಳಿದ ಜಾತಿಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ದುರುದ್ದೇಶ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯ ಅನುಷ್ಠಾನ ಒಂದು ದೀರ್ಘ ಪ್ರಕ್ರಿಯೆ. ಇದಕ್ಕಾಗಿ ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ಸಂಪುಟ ಕೈಗೊಂಡಿದ್ದ ತೀರ್ಮಾನವನ್ನು ಇಲ್ಲಿಯವರೆಗೆ ಕೇಂದ್ರ ಸರ್ಕಾರಕ್ಕೆ ಕಳಿಸದೆ ಇರುವುದು ರಾಜ್ಯ ಸರ್ಕಾರದ ಅಪ್ರಾಮಾಣಿಕತೆಗೆ ಸಾಕ್ಷಿ” ಎಂದು ತಿಳಿಸಿದ್ದಾರೆ.

“ಮುಸ್ಲಿಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರೂ ಇದು ಸುಲಭಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯ ಇಲ್ಲ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...