Homeಮುಖಪುಟಕರಾವಳಿ: ಬಿಜೆಪಿ ಬೆನ್ನಿಗೇ ಬಂದು ನಿಂತಿದೆ ಕಾಂಗ್ರೆಸ್!

ಕರಾವಳಿ: ಬಿಜೆಪಿ ಬೆನ್ನಿಗೇ ಬಂದು ನಿಂತಿದೆ ಕಾಂಗ್ರೆಸ್!

- Advertisement -
- Advertisement -

ಕರಾವಳಿಯ ತ್ರಿವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಮುಗಿದ ಎಂಜಿಪಿ(ಮೆಂಬರ್ ಆಫ್ ಗ್ರಾಮ್ ಪಂಚಾಯತ್) ಚುನಾವಣಾ ರಣಕೇಕೆ ಎಂಪಿ(ಮೆಂಬರ್ ಆಫ್ ಪಾರ್ಲಿಮೆಂಟ್) ಚುನಾವಣೆಗಿಂತ ಒಂದು ಗುಂಜಿ ಹೆಚ್ಚೇ ಇತ್ತೆಂದು ಚುನಾವಣಾ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಗ್ರಾಪಂ ಎಲೆಕ್ಷನ್‌ನಲ್ಲಿ ಪಕ್ಷಗಳ ಸಿಂಬಲ್ ಮೇಲೆ ಪೈಪೋಟಿಗೆ ಅವಕಾಶವಿಲ್ಲ. ಆದರೆ ಬಿಟ್ಟೆನೆಂದರೂ ಬಿಡದು ನಿನ್ನ ಮಾಯೆ ಎಂಬಂತೆ ಹಳ್ಳಿ ಜಿದ್ದಾಜಿದ್ದಿಯಲ್ಲಿ ಪಕ್ಷ ರಾಜಕೀಯದ ಅಮಲು-ಘಮಲಿನ ಅಂಡರ್‌ಕರೆಂಟ್ ಹರಿದಾಡಿತ್ತು! ಬಿಜೆಪಿಯ ಧರ್ಮರಾಜಕಾರಣದ ತಂತ್ರಗಾರಿಕೆ ಜೋರಾಗಿರುವ ಈ ಕಾಲಘಟ್ಟದಲ್ಲಿ ಜರುಗಿದ ಪಂಚಾಯ್ತಿ ಪೈಟಿಂಗ್‌ನಲ್ಲಿ ಕರಾವಳಿಯಲ್ಲಂತೂ ಆ ಪಕ್ಷದ ಅಡ್ಡ ಆಕ್ರಮಣದ ಅನೇಕ ಆಯಾಮಗಳನ್ನು ತೆರೆದು ತೋರಿಸಿದೆ..

ಗ್ರಾಪಂ-ತಾಪಂ-ಜಿಪಂನಂಥ ಸ್ಥಳೀಯ ಸಂಸ್ಥೆ ಚುನಾವಣೆಗಳು ಅಸೆಂಬ್ಲಿ ಪಾರ್ಲಿಮೆಂಟ್ ಮಹಾಯುದ್ಧದ ಗೆಲುವು-ಸೋಲಿನ ಮುನ್ಸೂಚನೆ ಎಂಬ ಅಭಿಪ್ರಾಯವಿದೆ. ಆದರೆ ಕರಾವಳಿಯ ಉತ್ತರಕನ್ನಡ-ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಈ ಸೂತ್ರ ಸಮೀಕರಣದ ಲೆಕ್ಕಾಚಾರ ಪಲ್ಟಿ ಹೊಡೆದದ್ದೇ ಹೆಚ್ಚು! ಹಿಂದುತ್ವದ ಪ್ರಯೋಗ ಶಾಲೆಯಂತಾಗಿರುವ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕೇಸರಿ ರಾಜಕಾರಣದ ಬೇರುಗಳು ಕುಗ್ರಾಮದಲ್ಲೂ ಹಬ್ಬಿ ಹೆಚ್ಚುಕಮ್ಮಿ ಎರಡು ದಶಕಗಳೇ ಕಳೆದುಹೋಗಿದೆ. ಬಿಜೆಪಿಯ ಕುರ್ಚಿ ಕಸರತ್ತಿಗೆ ಹಿಂದುತ್ವದ ಸಿದ್ಧಾಂತದಷ್ಟೇ ದೊಡ್ಡ ಅನುಕೂಲ ಕಾಂಗ್ರೆಸ್‌ನ ಒಳ ಜಗಳದಿಂದಲೂ ಆಗಿದೆ. ಉತ್ತರಕನ್ನಡದ ಮಟ್ಟಿಗೆ ಹೇಳಬೇಕೆಂದರೆ ಗ್ರಾಮಗಳಲ್ಲಿ ಬಿಜೆಪಿ ನೆಲೆ ದಕ್ಷಿಣ ಕನ್ನಡದಷ್ಟು ವ್ಯಾಪಕವಾಗಿ ವ್ಯಾಪಿಸಿಲ್ಲ. ಹಿಂದುತ್ವದ ಬೆಂಕಿ ಚೆಂಡಾದ ಅನಂತಕುಮಾರ್ ಹೆಗಡೆಯಂಥವರು ಜನಪರ ಕೆಲಸವೇನೂ ಮಾಡದಿದ್ದರೂ ಮತ್ತೆ ಮತ್ತೆ ಗೆಲ್ಲುತ್ತಿದ್ದಾರೆಂದರೆ ಅದಕ್ಕೆ ಕಾರಣ ಕಾಂಗ್ರೆಸ್‌ನ ಹಿರಿತಲೆಗಳಾದ ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವರ ಬಣದ ಲಾಗಾಯ್ತಿನ ಮನೆಮುರುಕುತನ!

ಈ ಮೂರು ಕೇಸರಿ ಕೋಟೆಯಲ್ಲಿ ಮೊನ್ನೆ ಮುಗಿದ ಗ್ರಾಪಂ ಫಲಿತಾಂಶದ ಮೇಲೊಮ್ಮೆ ಕಣ್ಣು ಹಾಯಿಸಿದರೆ ಬಿಜೆಪಿ ಬೀಗುವಂಥ ಸಾಧನೆಯೇನೂ ಮಾಡಿದಂತೆ ಕಾಣಿಸದು. ಚುಕ್ಕಾಣಿಯೇ ಇಲ್ಲದೆ ದಿಕ್ಕೆಟ್ಟು ಹೊಯ್ದಾಡುತ್ತಿರುವ ಕಾಂಗ್ರೆಸ್ ಎದುರು ಬಿಜೆಪಿ ಕನಿಷ್ಠವೆಂದರೂ ಮುಕ್ಕಾಲು ಪಾಲು ಸ್ಥಾನಗಳನ್ನಾದರೂ ಗೆದ್ದುಕೊಳ್ಳಬೇಕಿತ್ತು. ಬಿಜೆಪಿಯ ನಳಿನ್‌ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ ಮತ್ತು ಶೋಭಾ ಕರಂದ್ಲಾಜೆಯಂಥ ಬೆಂಕಿ ಬ್ರ್ಯಾಂಡಿನವರ ಬಡಾಯಿಯೂ ಜೋರಾಗಿಯೇ ಇತ್ತು. ಆದರೆ ಹೊಂದಾಣಿಕೆ, ಸಂಘಟನೆಯಿಲ್ಲದೆ ಹೋದದ್ದಕ್ಕೆ, ಮೂರೂ ಜಿಲ್ಲೆಗಳಲ್ಲಿಯೂ ದುರ್ಬಲ ಕಾಂಗ್ರೆಸ್ ಬಲಾಢ್ಯ ಬಿಜೆಪಿಯನ್ನು ಅಟ್ಟಾಡಿಸಿಕೊಂಡು ಬಂದು ಈಗ ಅದರ ಬೆನ್ನಿಗೇ ನಿಂತಿದೆ!

2005ರಲ್ಲಿ ನಡೆದ ಗ್ರಾಪಂ ಸಮರದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯನವರ ಸರ್ಕಾರವಿತ್ತು. ಆಗ ಅವಿಭಜಿತ ದಕ್ಷಿಣಕನ್ನಡದಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿತ್ತು. ಅಂದರೆ ದಕ್ಷಿಣಕನ್ನಡ ಮತ್ತು ಉಡುಪಿ ಹುಸಿ ಹಿಂದುತ್ವಕ್ಕೆ ಮರುಳಾಗುವ ಮಾಮೂಲಿ ’ಸಂಪ್ರದಾಯ’ಕ್ಕೆ ಶರಣಾಗಿತ್ತು. ಈ ಬಾರಿಯೂ ಅದೇ ಪರಂಪರೆ ಪುನರಾವರ್ತನೆಯಾಗಿದೆಯಷ್ಟೆ. ಹಾಗಂತ ಗತಿ-ಗೋತ್ರವಿಲ್ಲದ ಕಾಂಗ್ರೆಸ್ ಅಂಥ ಹೀನಾಯ ಪ್ರದರ್ಶನವೇನೂ ತೋರಿಸಿಲ್ಲ. ಮೂಡಬಿದರೆ, ಉಳ್ಳಾಲ, ಬಂಟ್ವಾಳ, ಬೈಂದೂರುಗಳಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಹಿಂದೆ ಹಾಕಿದೆಯೆಂಬ ಚರ್ಚೆಗಳು ನಡೆದಿದೆ. ಹಲವೆಡೆ ಬಿಜೆಪಿ ತನ್ನ ಸುಪರ್ದಿಯಲ್ಲಿದ್ದ ಪಂಚಾಯ್ತಿಗಳನ್ನು ಬಿಟ್ಟುಕೊಡಬೇಕಾಗಿದೆ. ಹೇಗಾದರೂ ಮಾಡಿ ಕರಾವಳಿ ಮೇಲಿನ ಹಿಡಿತ ಬಿಗಿಗೊಳಿಸಿಕೊಳ್ಳವ ಹಠಕ್ಕೆ ಬಿದ್ದಿದ್ದ ಬಿಜೆಪಿ ಹಣ ಹಾಗೂ ಆಡಳಿತ ಯಂತ್ರದ ಬಲ ಬಳಸಿದೆ. ಇಷ್ಟಾದರೂ ಕೇಸರಿ ಪಡೆ ನಿರೀಕ್ಷಿಸಿದ್ದ ಭರ್ಜರಿ ದಿಗ್ವಿಜಯ ಸಾಧ್ಯವಾಗಿಲ್ಲ! ಕಾಂಗ್ರೆಸ್ ’ಕಲಿ’ಗಳು ಪರಸ್ಪರ ಕಾಲೆಳೆವ ಕಸರತ್ತು ಬಿಟ್ಟು ಒಂದಾದರೆ ಬಿಜೆಪಿಯನ್ನು ಹಿಮ್ಮೆಟ್ಟಿಸುವುದೇನೂ ಕಷ್ಟವಲ್ಲವೆಂಬ ಸಂದೇಶವನ್ನಂತೂ ಗ್ರಾಪಂ ಚುನಾವಣೆ ನೀಡಿದೆ.

ಹಾಗಂತ ಉತ್ತರ ಕನ್ನಡದಲ್ಲಿರುವುದು ಹಿಂದುತ್ವದ ಅಮಲಲ್ಲ. ಅದು ಬಿಜೆಪಿ ಎಂಎಲ್‌ಎಗಳು ತಮ್ಮ ಅಸ್ತಿತ್ವಕ್ಕಾಗಿ ಅಧಿಕಾರ, ಶಕ್ತಿ ಪ್ರಯೋಗಿಸಿ ದಕ್ಕಿಸಿಕೊಂಡ ಜಯ. ಹಳ್ಳಿಗಳಲ್ಲಿ ಬಿಜೆಪಿ ನಾಯಕರು ಅಂದುಕೊಂಡಷ್ಟು ಆಳಕ್ಕೆ ಆ ಪಕ್ಷದ ಬೇರುಗಳಿನ್ನೂ ಇಳಿದಿಲ್ಲ ಎಂಬುದನ್ನು ಈ ಫಲಿತಾಂಶ ಪಕ್ಕಾ ಮಾಡಿದೆ. ಕುಮಟಾದ ಬಿಜೆಪಿ ಶಾಸಕ ದಿನಕರ ಶೆಟ್ಟಿ, ಭಟ್ಕಳ ಹೊನ್ನಾವರದ ಸುನಿಲ್ ನಾಯ್ಕ್, ಶಿರಸಿ ಸಿದ್ದಾಪುರದ ಕಾಗೇರಿ (ಸ್ಪೀಕರ್) ಹಗಲಿರುಳು ಬೆವರಿಳಿಸಿದರೂ ಕಾಂಗ್ರೆಸನ್ನು ಸಂಪೂರ್ಣವಾಗಿ ಸೋಲಿಸಲಾಗಿಲ್ಲ. ಹಾಲಿ ಶಾಸಕರಾಗಿರುವುದರಿಂದ ಸಣ್ಣ ಅಂತರದಿಂದ ಗೆಲುವು ಬೀರಿ ಮುಖ ಉಳಿಸಿಕೊಂಡರೂ ವಿರೋಚಿತ ಗೆಲವು ಪಡೆಯಲಾಗಿಲ್ಲ. ಭಟ್ಕಳದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಶಿರಸಿ ಸಿದ್ದಾಪುರದಲ್ಲಿ ಬೀಮಣ್ಣ, ವಸಂತ್ ನಾಯ್ಕ್, ಸಶ್ಮಾರೆಡ್ಡಿ(ಹೊನ್ನಾವರ) ಬಳಗ, ಹಳಿಯಾಳ ಕ್ಷೇತ್ರದಲ್ಲಿ ದೇಶಪಾಂಡೆ, ಘೋಟನೇಕರ್ ತಂಡ ಬಿಜೆಪಿ ಬಲಾಢ್ಯರಿಗೆ ಬೆಚ್ಚಿ ಬೀಳಿಸಿದೆ!

ಎಂಎಲ್‌ಎ ದೀಕ್ಷೆ ನೀಡಿದ್ದ ಪೂರ್ವಾಶ್ರಮದ ಕಾಂಗ್ರೆಸನ್ನು ನಿರ್ನಾಮ ಮಾಡುವ ವೀರಾವೇಷದ ಆಟ ಆಡಿದ್ದ ಮಂತ್ರಿ ಶಿವರಾಮ ಹೆಬ್ಬಾರ್‌ನ ಹಲವು ಭ್ರಮೆಗಳನ್ನು ಗ್ರಾಪಂ ಎಲೆಕ್ಷನ್ ಇಳಿಸಿದೆ. ಆತ ಯಲ್ಲಾಪುರ, ಮುಂಡಗೋಡಲ್ಲಿ ತನ್ನ ನಿಷ್ಠರಿಗೆ ಮಣೆಹಾಕಿ ಬಿಜೆಪಿಯನ್ನೇ ಮುಗಿಸಿದ್ದಾರೆಂದು ಮೂಲ ಬಿಜೆಪಿಗರು ಗೊಣಗಾಡುತ್ತಿದ್ದಾರೆ. ಸ್ವಜಾತಿಯ ಹವ್ಯಕರು ಹೆಚ್ಚಿರುವ ಯಲ್ಲಾಪುರದಲ್ಲಿ ಹೆಚ್ಚು ಹಿಂಬಾಲಕರನ್ನು ಗೆಲ್ಲಿಸಿಕೊಂಡಿರುವ ಹೆಬ್ಬಾರ್ ಮುಂಡಗೋಡಿನಲ್ಲಿ ಮುಗ್ಗರಿಸಿದ್ದಾರೆ! ಮಾಜಿ ಮಂತ್ರಿ ಪಕ್ಕದ ಕಲಘಟಗಿಯ ಮಾಜಿ ಶಾಸಕ ಸಂತೋಷ್ ಲಾಡ್ ಕಾಂಗ್ರೆಸ್‌ನ ಎಲೆಕ್ಷನ್ ಉಸ್ತುವಾರಿಯಾಗಿ ಹೆಬ್ಬಾರ್‌ಗೆ ಸೆಡ್ಡುಹೊಡೆದು ನಿಂತಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಂತೋಷ್ ಲಾಡ್ ಹೆಬ್ಬಾರ್ ವಿರುದ್ಧ ಕಾಂಗ್ರೆಸ್ ಕ್ಯಾಂಡಿಡೇಟಾಗುವ ಸುದ್ದಿಗಳಿಗೀಗ ರೆಕ್ಕೆಪುಕ್ಕ ಬಂದುಬಿಟ್ಟಿದೆ. ಹಂಗೇನಾದರೂ ಆದರೆ ಗಣಿಧಣಿಗಳ ನಡುವೆ ’ಹಣಾ’ಹಣಿಯೇ ಏರ್ಪಡಲಿದೆ. ಪಾರ್ಟಿ ಕಟ್ಟುವುದು ಬಿಟ್ಟು ಸ್ವ ಸಾಮ್ರಾಜ್ಯ ವಿಸ್ತರಣೆಗೆ ಹವಣಿಸುತ್ತಿರುವ ಹೆಬ್ಬಾರ್ ಬಿಜೆಪಿಗೆ ಮಗ್ಗಲು ಮುಳ್ಳಾಗಿರುವುದಂತೂ ಖರೆ.

ಪತ್ರಿಕೆಗಳಿಗೆ ಪ್ರತಿದಿನ ಲಕ್ಷಾಂತರ ರೂ ಜಾಹೀರಾತು ಕೊಡುತ್ತ ಕಾರವಾರ, ಅಂಕೋಲಾದಲ್ಲಿ ’ಜಾಹೀರಾತು ರಾಣಿ’ ಎಂದೇ ಹೆಸರುವಾಸಿಯಾಗಿರುವ ಶಾಸಕಿ ರೂಪಾಲಿ ನಾಯ್ಕ್ ನೆಲೆ ಗಟ್ಟಿಗೊಳಿಸಿಕೊಂಡಿದ್ದಾರೆ. 24/7 ಎಲೆಕ್ಷನ್ ರಾಜಕಾರಣ ಮಾಡಿದ ಅವರು ಕ್ಷೇತ್ರದಲ್ಲಿನ ತಮ್ಮ ಸಾಧನೆ, ಬಿಜೆಪಿ ಹೈಕಮಾಂಡ್‌ನ ಕಣ್ಣು ಕೋರೈಸಿದರೆ ಮಂತ್ರಿಗಿರಿ ಕರುಣಿಸಬಹುದೆಂದು ಭಾವಿಸಿದ್ದಾರೆ.

ಹಿಂದೆಂದಿಗಿಂತ ಈಗ ಗ್ರಾಪಂ ಅಧಿಕಾರ ಆಕರ್ಷಣೆ ಜೋರಾಗಿರುವುದರಿಂದ ಹಳ್ಳಿ ಸರ್ಕಾರ ರಚನೆ ರಾಜಕಾರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಎಂಜಿಪಿಯಾಗಲಿಕ್ಕೇ ಕಷ್ಟಪಟ್ಟ ಈ ರಾಜಕಾರಣಿಗಳು ಅಧ್ಯಕ್ಷ, ಉಪಾಧ್ಯಕ್ಷ ಆಗುವ ಅವಕಾಶ ಸಿಕ್ಕರೆ ಬಿಡುವರಾ?! ಗ್ರಾಪಂಗಳ ಚಹರೆ ಬದಲಾಗುವ ಸೂಚನೆಗಳಂತೂ ಗೋಚರಿಸಲಾರಂಭಿಸಿದೆ.


ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಬಿರುಕು: ಯತ್ನಾಳ್ ವಿರುದ್ಧ ರಾಷ್ಟ್ರ ನಾಯಕರಿಗೆ ದೂರು ನೀಡಿದ ಸಿಎಂ ಬೆಂಬಲಿಗರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...