Homeಕರ್ನಾಟಕಜೈನಮುನಿಯ ಬರ್ಬರ ಹತ್ಯೆ; ಕೋಮುಬಣ್ಣ ಬಳಿಯಲು ಬಿಜೆಪಿ-ಸಂಘಪರಿವಾರ ಯತ್ನಿಸಿದ್ದು ಹೇಗೆ?

ಜೈನಮುನಿಯ ಬರ್ಬರ ಹತ್ಯೆ; ಕೋಮುಬಣ್ಣ ಬಳಿಯಲು ಬಿಜೆಪಿ-ಸಂಘಪರಿವಾರ ಯತ್ನಿಸಿದ್ದು ಹೇಗೆ?

- Advertisement -
- Advertisement -

ರಾಜ್ಯದ ಎರಡನೇ ರಾಜಧಾನಿಯಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದುಹೋಗಿದೆ. ಜುಲೈ 5ರಂದು ಚಿಕ್ಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಈ ಪ್ರಕರಣಕ್ಕೆ ರಾಜಕೀಯ ತಿರುವು ಕೂಡಾ ಸಿಕ್ಕಿ, ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಜೊತೆಯಲ್ಲೇ ಈ ಘಟನೆಗೆ ಕೋಮು ಬಣ್ಣವನ್ನೂ ಬಳಿಯಲಾಗುತ್ತಿದೆ. ಈ ಪ್ರಕರಣದ ಕುರಿತಾಗಿ ಸತ್ಯಕ್ಕಿಂತ ಹೆಚ್ಚಾಗಿ ಸುಳ್ಳು ವದಂತಿಗಳೇ ಹರಿದಾಡುತ್ತಿವೆ. ಈ ನಿಟ್ಟಿನಲ್ಲಿ ಸತ್ಯಾಸತ್ಯತೆ ಅರಿಯುವ ಪ್ರಯತ್ನ ಮಾಡಿದ್ದೇವೆ. ಪೊಲೀಸರ ಎಫ್‌ಐಆರ್‌ನಲ್ಲಿ ಏನಿದೆ? ನಿಜಕ್ಕೂ ನಡೆದಿದ್ದೇನು? ಎಂಬ ಸಮಗ್ರ ಮಾಹಿತಿ ಇಲ್ಲಿದೆ.

ಬಿಜೆಪಿ ಹಾಗೂ ಸಂಘ ಪರಿವಾರದವರು ಹೆಣದ ಮೇಲೆ ರಾಜಕಾರಣ ಮಾಡುವುದು, ಆ ಮೂಲಕ ಎರಡು ಕೋಮುಗಳ ನಡುವೆ ವಿಷ ಬಿತ್ತುವುದು ಸಾಮಾನ್ಯವೆಂತಾಗಿಬಿಟ್ಟಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರಂತೂ ಕೊಲೆಗಳಿಗೆ ಕೋಮುಬಣ್ಣ ಬಳಯುವ ಪ್ರಕ್ರಿಯೆ ಚುರುಕು ಪಡೆದುಕೊಂಡುಬಿಡುತ್ತದೆ. ಈ ಪ್ರಕರಣದ ಪ್ರಮುಖ ಆರೋಪಿ ಹಿಂದೂ ಧರ್ಮದವನಾಗಿದ್ದರೂ, ಆತನಿಗೆ ಸಹಾಯ ಮಾಡಿದವನು ಮುಸ್ಲಿಂ ಸಮುದಾಯದವನಾಗಿದ್ದಾನೆ. ಇದಿಷ್ಟೇ ಸಾಕಿತ್ತು ಈ ಸಂಘಪರಿವಾರ ಹಾಗೂ ಬಿಜೆಪಿಯವರಿಗೆ…

ಜೈನ ಸಮುದಾಯದ ಮುನಿ ಕಾಮಕುಮಾರ ನಂದಿ ಮಹಾರಾಜ ಅವರು, ಈ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಾರಾಯಣ ಬಸಪ್ಪ ಮಾಳಿಯೊಂದಿಗೆ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಂಡಿದ್ದರು. ಇಬ್ಬರ ನಡುವಿನ ವೈಮನಸ್ಸಿನಿಂದ ಮಾಳಿಯು ಮುನಿಗಳ ಹತ್ಯೆಗೆ ಸ್ಕೆಚ್ ರೂಪಿಸಿದ್ದನು. ಈ ಹತ್ಯೆಗೆ ತನ್ನ ವಾಹನ ಚಾಲಕ ಹಸನಸಾಬ್ ದಲಾಯತ್‌ನ ಸಹಾಯ ಪಡೆದಿದ್ದಾನೆ. ಈ ಸಹಾಯಕ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದಾನೆ ಎನ್ನುವ ಒಂದೇ ಕಾರಣಕ್ಕೆ ಈ ಪ್ರಕರಣಕ್ಕೆ ಕೋಮುಬಣ್ಣ ಬಳಿಯಲು ಕೆಲವರು ಮುಂದಾಗಿದ್ದಾರೆ.

ಬಿಜೆಪಿ ನಾಯಕರು ಸದನದಲ್ಲೂ ಈ ಬಗ್ಗೆ ಗದ್ದಲ ಎಬ್ಬಿಸಿದ್ದರು. ಈ ಕೊಲೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಹಾಗಾಗಿ ಇದನ್ನು ಸಿಬಿಐಗೆ ವಹಿಸಬೇಕು ಎಂದು ಹೇಳುವ ಮೂಲಕ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ದಾಳಿ ಮಾಡಲು ಮುಂದಾದರು. ಆದರೆ ಸರ್ಕಾರ ಮಾತ್ರ ಬಿಜೆಪಿ ನಾಯಕರ ಮಾತಿಗೆ ಸೊಪ್ಪು ಹಾಕಲಿಲ್ಲ. ಇದು ರಾಜ್ಯದಲ್ಲಿನ ಪೊಲೀಸರೇ ತನಿಖೆ ನಡೆಸಬಹುದಾದ ಪ್ರಕರಣವಾಗಿದೆ ಎಂದು ಹೇಳುವ ಮೂಲಕ ಪ್ರಕರಣ ದಿಕ್ಕುತಪ್ಪದಂತೆ ನೋಡಿಕೊಂಡರು.

ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಈ ಪ್ರಕರಣವನ್ನು ಹೇಗಾದರೂ ಮಾಡಿ ಕೋಮುವಾದದ ಕೊಲೆ ಎಂದು ಬಿಂಬಿಸಬೇಕು ಎಂದು ಸತ್ಯಶೋಧನ ಸಮಿತಿಯನ್ನು ಹುಟ್ಟುಹಾಕಿದರು. ಆದರೆ ಆ ಸಮಿತಿಗೂ ಕೊಲೆ ಪ್ರಕರಣದಲ್ಲಿ ಕೋಮುವಾದದ ವಾಸನೆಯೂ ಸಿಗಲಿಲ್ಲ, ಬದಲಿಗೆ ಹಣದ ವ್ಯವಹಾರದ ಲೆಕ್ಕ ಸಿಕ್ಕಿತು. ಸದ್ಯ ಅವರು ಕೂಡ ಪ್ರಕರಣದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಎಸ್‌ಪಿ ಡಾ. ಸಂಜೀವ್ ಪಾಟೀಲ ಅವರು, “ಈ ಪ್ರಕರಣಕ್ಕೆ ಕೋಮು ಬಣ್ಣ ಬಳಿಯಲು ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಇದರಲ್ಲಿ ಮಾಧ್ಯಮದವರು ಕೂಡ ಕೈ ಜೋಡಿಸುತ್ತಿರುವುದು ಕಂಡುಬಂದಿದೆ. ಒಂದುವೇಳೆ ನೀವು ಇದೇರೀತಿ ಮುಂದುವರಿದರೆ ನಿಮ್ಮಗಳ ಮೇಲೂ ಪ್ರಕರಣ ದಾಖಲಿಸಬೇಕಾಗುತ್ತದೆ” ಎಂದು ಮಾಧ್ಯಮ ವರದಿಗಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜೈನಮುನಿಗೂ ಆರೋಪಿ ಮಾಳಿಗೂ ಸಂಬಂಧವೇನು?

ರಾಯಭಾಗ ತಾಲೂಕಿನ ನಿವಾಸಿಯಾದ ಮಾಳಿ ಮೂಲತಃ ಬಡ ಕುಟುಂಬದಿಂದ ಬಂದವನು. ತನ್ನ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದನು. ನಂತರದ ಅಕ್ರಮ ದಂಧೆಗಳ ಮೂಲಕ ಕೆಲವೇ ದಿನಗಳಲ್ಲಿ ಸಾಕಷ್ಟು ಆಸ್ತಿ ಸಂಪಾದಿಸಿದ್ದನು. ಇದರ ಹಿಂದೆ ಕೆಲ ರೋಚಕ ಸಂಗತಿಗಳಿವೆ. ಅಕ್ರಮ ಮರಳು ದಂಧೆ ಮಾಡುತ್ತಿದ್ದ ಆರೋಪಿ ಕಾಳಿಯು ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಸ್ನೇಹ ಗಳಿಸುವವರೆಗೂ ಅನೇಕ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದನು.

ಚಿಕ್ಕೋಡಿ ಹಿರೇಕೊಡಿ ನಂದಿ ಪರ್ವತ ಆಶ್ರಮದಲ್ಲಿ ಈ ಹಿಂದೆ ಸ್ವಾಮೀಜಿ ನೇತೃತ್ವದಲ್ಲಿ ನಡೆದಿದ್ದ ಅಭಿವೃದ್ಧಿ ಕಾಮಗಾರಿಗಳ ಸಂದರ್ಭದಲ್ಲಿ ಮರಳು ಸಾಗಿಸುವ ಕೆಲಸವನ್ನು ಪ್ರಕರಣದ ಆರೋಪಿ ನಾರಾಯಣ ಕಾಳಿ ಮಾಡುತ್ತಿದ್ದನು. ಈ ಸಂದರ್ಭದ ಸ್ವಾಮೀಜಿ ಜೊತೆಗೆ ಆತ್ಮೀಯತೆ ಬೆಳೆಸಿದ್ದಾನೆ. ಆಶ್ರಮದಲ್ಲಿ ಯಾವುದೇ ಕೆಲಸ ನಡೆದರೂ ಈತನ ಉಪಸ್ಥಿತಿ ಇರುತ್ತಿತ್ತು ಎಂದು ಹಲವರು ನೆನಪಿಸಿಕೊಂಡಿದ್ದಾರೆ.

ಕೇವಲ 6 ಲಕ್ಷಕ್ಕೆ ಇಂತಹ ಬರ್ಬರ ಹತ್ಯೆ ನಡೆಯಲು ಸಾಧ್ಯವೇ?

ಈ ಕೊಲೆ ಪ್ರಕರಣ ಹೊರಬಂದ ನಂತರ, ಕೇವಲ 6 ಲಕ್ಷ ರೂ.ಗಳ ವ್ಯವಹಾರಕ್ಕಾಗಿಯಷ್ಟೇ ಇಂತಹ ಬರ್ಬರ ಹತ್ಯೆ ನಡೆಯಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬರುವುದು ನಿಜ. ಇದು ಕೇವಲ 6 ಲಕ್ಷಕ್ಕಾಗಿ ನಡೆದ ಕೊಲೆಯಲ್ಲ, ಇದರ ಹಿಂದೆ ಮರಳು ಮಾಫಿಯಾದ ಕೈವಾಡವಿರುವ ಬಲವಾದ ಶಂಕೆ ವ್ಯಕ್ತವಾಗಿದೆ.

ತನಿಖೆ ಸಂದರ್ಭದಲ್ಲಿ ಹತ್ಯೆ ಹಿಂದಿನ ಅನೇಕ ಸತ್ಯಾಂಶಗಳು ಒಂದೊಂದಾಗಿ ಹೊರಬರುತ್ತಿವೆ; ಮಾಳಿಗೆ, ಯಾವಾಗ ಜೈನ ಮನಿಗಳ ಜತೆ ಒಡನಾಟ ಪ್ರಾರಂಭವಾಯಿತು ಆ ನಂತರದಲ್ಲಿ ಮರಳು ಸಾಗಿಸುವುದರಿಂದ ಹಿಡಿದು ಅನೇಕ ವ್ಯವಹಾರಗಳಿಗೆ ಕೈಹಾಕಿದ್ದಾನೆ; ನೋಡನೋಡುತ್ತಿದ್ದಂತೆ ಲಕ್ಷಾಂತರ ಹಣ ಹಾಕಿ ಜಮೀನು ಖರೀದಿಸುವ ಮೂಲಕ ಆರ್ಥಿಕವಾಗಿ ಮೇಲೆ ಬಂದಿದ್ದು ಇದೇ ಕಾಮಕುಮಾರ ನಂದಿ ಮಹಾರಾಜರಿಂದಲೇ ಎನ್ನಲಾಗುತ್ತಿದೆ.

ಇದನ್ನೂ ಓದಿ: 

ಸ್ವಾಮೀಜಿ ಹಾಗೂ ಆರೋಪಿ ನಡುವೆ ಕೋಟ್ಯಂತರ ರೂ. ವ್ಯವಹಾರ ನಡೆದಿದ್ದು, ಆರೋಪಿ ಸುಮಾರು 14 ಲಕ್ಷ ಮೌಲ್ಯದ 2 ಟಿಪ್ಪರ್ ವಾಹನ ಖರೀದಿ ಮಾಡಿದ್ದನು ಅಲ್ಲದೆ ಅನೇಕರಿಗೆ ಮುನಿಗಳಿಂದ ಹಣ ಕೊಡಿಸುತ್ತಿದ್ದನು ಎಂದು ಹೇಳುತ್ತಾರೆ ಸ್ಥಳೀಯರು.

ಮಾಳಿ ಕೆಲವು ದಿನಗಳ ಹಿಂದಷ್ಟೇ ಸುಮಾರು 40 ಲಕ್ಷ ರೂ. ಮೌಲ್ಯದ ಎರಡು ಎಕರೆ ಜಮೀನು ಖರೀದಿಸಿದ್ದನು. ಇದೇ ಕಾರಣಕ್ಕೆ ಸ್ವಾಮೀಜಿಯಿಂದ ಹಣದ ಸಹಾಯ ಪಡೆದು ವಾಪಸ್ ಕೊಡುವುದಾಗಿ ತಿಳಿಸಿದ್ದನು. ನಂತರ ಟಿಪ್ಪರ್ ವಾಹನ ಖರೀದಿಗೆ ಹಣದ ಸಹಾಯವನ್ನು ಪಡೆದುಕೊಂಡಿದ್ದ ಎಂದು ಹೇಳಲಾಗುತ್ತಿದೆ. ನಾರಾಯಣ ಕಾಳಿಗೆ ನೀಡಿದ್ದ ಆಶ್ರಮದ ಹಣವನ್ನು ವಾಪಸ್ ನೀಡುವಂತೆ ಒಂದೆರಡು ಬಾರಿ ಮುನಿಗಳು ಕೇಳಿದ್ದರು. ಆರೋಪಿ ಪ್ರತಿ ಬಾರಿ ಒಂದಲ್ಲಾ ಒಂದು ಕಾರಣ ಕೊಟ್ಟು ಸುಮ್ಮನಾಗುತ್ತಿದ್ದನು. ಇದು ಇಬ್ಬರ ನಡುವೆ ವೈಷಮ್ಯ ಬೆಳೆಯಲು ಕಾರಣವಾಗಿದೆ.

ಪ್ರಕರಣದಲ್ಲಿ ಡ್ರೈವರ್ ಹಸನಸಾಬ್ ದಲಾಯತ್‌ನ ಪಾತ್ರವೇನು?

ಈ ಪ್ರಕರಣದ ಎರಡನೇ ಆರೋಪಿ ಹಸನಸಾಬ್ ದಲಾಯತ್. ಈತ ನಾರಾಯಣ ಮಾಳಿಯ ಟಿಪ್ಪರ್ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದವನು. ಇಬ್ಬರ ನಡುವೆ ಉತ್ತಮ ಒಡನಾಟ ಇತ್ತು. ನಾರಾಯಣ ಮಾಳಿ ನಂದಿ ಆಶ್ರಮಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಈ ಎರಡನೇ ಆರೋಪಿ ಹಸನಸಾಬ್ ಕೂಡ ಹಾಜರಿರುತ್ತಿದ್ದನು. ಜತೆಗೆ ಕಾಮಕುಮಾರ ನಂದಿ ಮಹಾರಾಜರ ಜತೆಗಿನ ಹಣಕಾಸು ವ್ಯವಹಾರ ಹಸನಸಾಬ್ ದಲಾಯತ್‌ಗೂ ಗೊತ್ತಿತ್ತು ಎಂದು ಹೇಳಲಾಗುತ್ತಿದೆ. ಹಾಗಾಗಿ ಪ್ರಮುಖ ಆರೋಪಿ ನಾರಾಯಣ ಮಾಳಿ ಮುನಿಗಳ ಹತ್ಯೆಗೆ ಈ ಹಸನಸಾಬ್ ದಲಾಯತ್‌ನ ಸಹಾಯ ಪಡೆಯುತ್ತಾನೆ ಎಂದು ಆರೋಪಿಸಲಾಗಿದೆ.

ಹಸನಸಾಬ್ ದಲಾಯತ್, ನಾರಾಯಣ ಮಾಳಿ

ಕಾಮಕುಮಾರ ನಂದಿ ಮಹಾರಾಜರ ಹತ್ಯೆಯ ದಿನ ಜುಲೈ 5ರಂದು ಪ್ರಕರಣದ ಮೊದಲ ಆರೋಪಿ ನಾರಾಯಣ ಮಾಳಿ ಹಾಗೂ ಎರಡನೇ ಆರೋಪಿ ಹಸನ್ ದಲಾಯತ್ ಇಬ್ಬರೂ ಭೇಟಿಯಾಗುತ್ತಾರೆ. ಸ್ವಾಮೀಜಿ ಹತ್ಯೆ ಕುರಿತು ಮೊದಲೇ ರೂಪಿಸಿದ್ದ ಸಂಚನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರಲು ಸಿದ್ಧರಾಗಿರುತ್ತಾರೆ. ಆರೋಪಿ ನಾರಾಯಣ ಮಾಳಿ ಸ್ವಂತ ಬೈಕ್‌ನಲ್ಲಿಯೇ ಸ್ವಾಮೀಜಿಯನ್ನು ಮುಗಿಸಲು ಹೊರಡುತ್ತಾರೆ. ಮಾರಕಾಸ್ತ್ರ ಹಾಗೂ ಗೋಣಿ ಚೀಲ ತೆಗೆದುಕೊಂಡು ಆಶ್ರಮದತ್ತ ತೆರಳುತ್ತಾರೆ. ಚಿಕ್ಕೋಡಿಯ ಹಿರೇಕೊಡಿ ನಂದಿ ಪರ್ವತಕ್ಕೆ ಬಂದ ಇಬ್ಬರು ಆರೋಪಿಗಳು ಕಾಮಕುಮಾರ ನಂದಿ ಮಹಾರಾಜರು ತಂಗಿದ್ದ ಕೊಠಡಿಗೆ ನುಗ್ಗುತ್ತಾರೆ. ಮೊದಲಿಗೆ ಸ್ವಾಮೀಜಿ ಅವರು ವಾಸಿಸುವ ಕೊಠಡಿಯಲ್ಲಿ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಯತ್ನಿಸಿದರು. ಆದರೆ ಈ ಪ್ರಯತ್ನದಲ್ಲಿ ವಿಫಲರಾದರು. ಬಳಿಕ ಇಬ್ಬರೂ ಆರೋಪಿಗಳೂ ಸೇರಿಕೊಂಡು ಟವಲ್‌ನಿಂದ ಶ್ರೀಗಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ವಿಚಾರ ಪೊಲೀಸರ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಕಾಮಕುಮಾರ ಸ್ವಾಮೀಜಿಗಳನ್ನು ಕೊಂದ ಬಳಿಕ ಇಬ್ಬರೂ ಆರೋಪಿಗಳೂ ಸ್ವಾಮೀಜಿಗಳ ಶವವನ್ನೇ ಕಣ್ಮರೆ ಮಾಡಲು ಮುಂದಾದರು. ಶವ ಯಾರ ಕೈಗೂ ಸಿಗಬಾರದು ಎನ್ನುವ ಉದ್ದೇಶ ಹೊಂದಿದ್ದ ಆರೋಪಿಗಳು, ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿಕೊಂಡು ನಾರಾಯಣ ಮಾಳಿಯ ಮೋಟಾರ್ ಸೈಕಲ್ ಮೇಲೆ ಇಟ್ಟುಕೊಂಡು ಕಟಕಬಾವಿ ಪ್ರದೇಶಕ್ಕೆ ತೆರಳಿದರು. ಇಲ್ಲಿ ಒಂದು ತೆರೆದ ಕೊಳವೆ ಬಾವಿ ಇತ್ತು. ಈ ಕೊಳವೆ ಬಾವಿಯ ಬಳಿ ಮೃತ ದೇಹವನ್ನು ತಂದ ಆರೋಪಿಗಳು ಶವವನ್ನು ತುಂಡುತುಂಡಾಗಿ ಕತ್ತರಿಸಿ ಶವದ ತುಂಡುಗಳನ್ನು ಕೊಳವೆ ಬಾವಿಗೆ ಹಾಕಿದರು. ಶವದ ತುಂಡುಗಳು ಕೊಳವೆ ಬಾವಿಯ ಆಳಕ್ಕೆ ಹೋಗಿದ್ದನ್ನು ಖಚಿತಪಡಿಸಿಕೊಂಡರು. ನಂತರ ಸ್ವಾಮೀಜಿಗಳ ಬಳಿ ಇದ್ದ ಒಂದು ಡೈರಿಯನ್ನೂ ಸುಟ್ಟು ಹಾಕಿದ್ದಾರೆ. ಸ್ವಾಮೀಜಿಗಳಿಂದ ನಾರಾಯಣ ಮಾಳಿ ಪಡೆದಿದ್ದ ಸಾಲದ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲದಂತೆ ನೋಡಿಕೊಂಡಿದ್ದಾರೆ.

ಹತ್ಯೆ ಮಾಡಿ ಬಂದ ಆರೋಪಿಗಳು ತಮ್ಮ ಬಟ್ಟೆಗಳನ್ನೆಲ್ಲಾ ಸುಟ್ಟು ಹಾಕಿದ್ದಾರೆ. ತನಿಖೆ ವೇಳೆ ಕೊಲೆ ಮಾಡಿದ್ದ ಕುಡಗೋಲು ಕಾಲುವೆಯಲ್ಲಿ ಪತ್ತೆಯಾಗಿದ್ದು, ಸಾಕ್ಷ್ಯ ನಾಶ ಮಾಡಿದ ಬಟ್ಟೆ ಹಾಗೂ ಡೈರಿಯ ಬೂದಿಯನ್ನು ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.

ಪ್ರಕರಣದ ದಿಕ್ಕುತಪ್ಪಿಸಲು ಮುಂದಾದ ಆರೋಪಿ ಮಾಳಿ

ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆಗೈದ ಪ್ರಮುಖ ಆರೋಪಿ ನಾರಾಯಣ ಮಾಳಿ ಪೊಲೀಸರ ಹಾಗೂ ಭಕ್ತರ ದಾರಿ ತಪ್ಪಿಸಲೆಂದು ಮುಗ್ಧನಂತೆ ವರ್ತಿಸಿದ್ದನು. ಪ್ರಕರಣದ ಬಗ್ಗೆ ತನಗೇನೂ ಗೊತ್ತಿಲ್ಲ ಎಂಬಂತೆ ಆಶ್ರಮಕ್ಕೆ ಬಂದ ಭಕ್ತರು, ಪೊಲೀಸರೆದುರೇ ಯಾರಿಗೂ ಅನುಮಾನ ಬಾರದಂತೆ ಓಡಾಡಿಕೊಂಡಿದ್ದನು.

ನಂದಿ ಮಹಾರಾಜರು ನಾಪತ್ತೆಯಾಗಿದ್ದಾರೆ ಎಂಬ ಭಾವನೆ ಭಕ್ತರಲ್ಲಿ ಇತ್ತು. ಆ ಸುದ್ದಿ ಸಾರ್ವಜನಿಕವಾಗಿ ಹಬ್ಬಿದಾಗ ಪೊಲೀಸರು ತಕ್ಷಣವೇ ಜೈನಮುನಿ ಹುಡುಕಾಟದಲ್ಲಿ ತೊಡಗಿದ್ದರು. ಆಶ್ರಮ ಮತ್ತು ಕಾಮಕುಮಾರರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದವರನ್ನು ಮತ್ತು ಆಪ್ತರನ್ನು ವಿಚಾರಣೆ ನಡೆಸತೊಡಗಿದ್ದರು. ಆಗ ಆರೋಪಿ ನಾರಾಯಣ ಮಾಳಿ ಭಕ್ತರೊಂದಿಗೆ ಸೇರಿಕೊಂಡು ಮೊಸಳೆ ಕಣ್ಣೀರು ಇಡತೊಡಗಿದ್ದನು; ಎದೆಬಡಿದುಕೊಂಡು ಗೋಳಾಡತೊಡಗಿದ್ದನು; ಕೆಲವರು ಈತನನ್ನು ಸಂತೈಸುವುದರಲ್ಲೇ ಹೈರಾಣಾಗಿದ್ದರು. ಮಹಾರಾಜದೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದರಿಂದ ಸಹಜವಾಗಿ ದುಃಖಿತನಾಗಿದ್ದಾನೆ ಎಂದು ಯಾರಿಗೂ ಈತನ ಮೇಲೆ ಅನುಮಾನ ಮೂಡಲೇ ಇಲ್ಲ!

ಹೀಗೆ ಆಕ್ರಂದನದಲ್ಲಿ ತೊಡಗಿದ್ದಾಗ ತನಗೇ ಗೊತ್ತಿಲ್ಲದಂತೆ ಮಹಾರಾಜರ ಹತ್ಯೆ ಹಾಗೂ ನಾಪತ್ತೆ ಬಗ್ಗೆ ತನ್ನ ಮಾತುಗಳಲ್ಲೇ ಕೆಲ ಸುಳಿವು ಬಿಟ್ಟುಕೊಡುತ್ತಲೇ ಹೋಗಿದ್ದನು. ಇದಕ್ಕೆ ಪೂರಕ ಎಂಬಂತೆ ನಾರಾಯಣ ಮಾಳಿ, ಹಸನಸಾಬ್ ದಲಾಯತ್ ಸಂಜೆ ವೇಳೆ ಆಶ್ರಮಕ್ಕೆ ಬಂದಿದ್ದರ ಬಗ್ಗೆ ಆಶ್ರಮದ ಸೇವಕಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಹಂತಕನೇ ಕೊಟ್ಟ ಸುಳಿವಿನಿಂದ ಭಕ್ತರಿಗೂ ಗೊತ್ತಾಗದಂತೆ ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಇಷ್ಟೆಲ್ಲಾ ಮಾಹಿತಿಯಿದ್ದರೂ ಇದಕ್ಕೆ ಕೋಮು ವಿಷಮತೆಯ ಕೋನವನ್ನು ನೀಡಲು ನಂತರ ಸಂಘ ಪರಿವಾರ ಮತ್ತು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನಿಸಿದ್ದು ಕೊಲೆಯಷ್ಟೇ ನೀಚ ಕೃತ್ಯ ಎನ್ನಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...