Homeಮುಖಪುಟಟಿಪ್ಪುನನ್ನು ಉರಿಗೌಡ ಮತ್ತು ದೊಡ್ಡನಂಜೇಗೌಡ ಕೊಂದರೇ? ಸುಳ್ಳುಗಳ ಸರಮಾಲೆಯ ಸರದಾರರ ಹೊಸ ವರಸೆ

ಟಿಪ್ಪುನನ್ನು ಉರಿಗೌಡ ಮತ್ತು ದೊಡ್ಡನಂಜೇಗೌಡ ಕೊಂದರೇ? ಸುಳ್ಳುಗಳ ಸರಮಾಲೆಯ ಸರದಾರರ ಹೊಸ ವರಸೆ

- Advertisement -
- Advertisement -

ಟಿಪ್ಪುನನ್ನು ಉರಿಗೌಡ ಮತ್ತು ದೊಡ್ಡನಂಜೇಗೌಡ ಎಂಬ ಇಬ್ಬರು ಒಕ್ಕಲಿಗರು ಕೊಂದರು ಎಂದು ಇತ್ತೀಚೆಗೆ ಸುದ್ದಿ ಹಬ್ಬಿಸಲಾಗುತ್ತಿದೆ. ಇದು ಕರ್ನಾಟಕದಲ್ಲಿ ಒಕ್ಕಲಿಗ ಹಾಗೂ ಮುಸ್ಲಿಂ ಸಮುದಾಯಗಳಲ್ಲಿ ಪರಸ್ಪರ ದ್ವೇಷವನ್ನು ಬಿತ್ತಿ ಆ ಮೂಲಕ ಒಕ್ಕಲಿಗರ ಮತಗಳನ್ನು ಗಳಿಸಲು ಬಿ.ಜೆ.ಪಿ ಮಾಡುತ್ತಿರುವ ತಂತ್ರ ಯಾರಿಗಾದರೂ ತಿಳಿಯದೆ ಇರದು. ಆದರೆ, ಒಕ್ಕಲಿಗರನ್ನು ಬ್ರಿಟಿಷರೊಂದಿಗೆ ಸೇರಿಕೊಂಡಿದ್ದ ದೇಶದ್ರೋಹಿಗಳೆಂದು ಚಿತ್ರಿಸಲು ಬಿ.ಜೆ.ಪಿ ಮಾಡುತ್ತಿರುವ ಹುನ್ನಾರ ಇದು ಎಂದು ಒಕ್ಕಲಿಗರು ರಾಜಕೀಯವಾಗಿ ಇದಕ್ಕೆ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ. ಈ ಸುದ್ದಿಯ ಐತಿಹಾಸಿಕ ಸತ್ಯಾಸತ್ಯತೆ ಏನು? ಈ ಸುದ್ದಿ ಹಬ್ಬಿಸುತ್ತಿರುವ ಯಾವ ಹಿಂದುತ್ವ ಮತಾಂಧರೂ ಟಿಪ್ಪು ಸತ್ತ ದಿನದಂದು ಬದುಕಿರಲಿಲ್ಲ ಮತ್ತು ಅವನ ಸಾವನ್ನು ಕಣ್ಣಾರೆ ನೋಡಿದವರಲ್ಲ. ಅಂದಮೇಲೆ ಇಂತಹ ಪ್ರತಿಪಾದನೇ ಮಾಡಲು ಐತಿಹಾಸಿಕ ಸಾಕ್ಷ್ಯಾಧಾರಗಳನ್ನು ಅವರು ಆಧರಿಸಬೇಕಿತ್ತು. ಆದರೆ, ಅವರು ಹೇಳುತ್ತಿರುವ ಆಧಾರಗಳು ಸತ್ಯವೇ? ಅವರು ಹೇಳುತ್ತಿರುವ ಆಧಾರಗಳಲ್ಲಿ ಉರಿಗೌಡ ಮತ್ತು ದೊಡ್ಡನಂಜೇಗೌಡರ ಪ್ರಸ್ತಾಪವಿದೆಯೇ? ಆ ಆಧಾರಗಳಲ್ಲಿ ಉರಿಗೌಡ ಮತ್ತು ದೊಡ್ಡನಂಜೇಗೌಡರೇ ಟಿಪ್ಪುನನ್ನು ಕೊಂದಿದ್ದರು ಎಂಬ ಮಾಹಿತಿ ಇದೆಯೇ? ಅವು ಎಷ್ಟರಮಟ್ಟಿಗೆ ಪ್ರಾಮಾಣಿಕ ದಾಖಲೆಗಳು?

ಈಗ ಅವರು ಕಟ್ಟಿರುವ ಕಥೆಯನ್ನೇ ನಿಜ ಎಂದು ನಂಬಿದರೂ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಉರಿಗೌಡ ಮತ್ತು ದೊಡ್ಡನಂಜೇಗೌಡರಿಗೆ ತಾವು ಟಿಪ್ಪು ಸುಲ್ತಾನನನ್ನೇ ಕೊಲ್ಲುತ್ತಿದ್ದೇವೆ ಎನ್ನುವುದು ಗೊತ್ತಿತ್ತೇ? ಗೊತ್ತಿದ್ದರೆ ಅದನ್ನು ಯಾಕೆ ಬ್ರಿಟಿಷರಿಗೆ ಹೇಳಲಿಲ್ಲ? ಹೇಳಿ ಬ್ರಿಟಿಷರಿಂದ ಬಹುಮಾನ, ಹೊಗಳಿಕೆ ಪಡೆಯಬಹುದಿತ್ತಲ್ಲವೇ? ಹೈದರಾಲಿ ಮತ್ತು ಟಿಪ್ಪುರಿಗೆ ವಿಧೇಯನಾಗಿ ಅವರ ಆಸ್ಥಾನದಲ್ಲಿ ಇತಿಹಾಸಕಾರನಾಗಿದ್ದ ಕೀರ್ಮಾಣಿಗೇ ಬ್ರಿಟಿಷರು ಪೆನ್ಷನ್ ಕೊಟ್ಟಿರುವಾಗ ಉರಿಗೌಡ ಮತ್ತು ದೊಡ್ಡನಂಜೇಗೌಡರನ್ನು ವಿಧಿವತ್ತಾಗಿ ಗೌರವಿಸುತ್ತಿರಲಿಲ್ಲವೇ? ಮೈಸೂರಿನ ಮಹಾರಾಣಿಗೆ ಅವರು ನಿಷ್ಠಾವಂತರಾಗಿದ್ದರೆ, ಟಿಪ್ಪುವನ್ನು ತಾವೇ ಕೊಂದ ವಿಷಯ ಮಹಾರಾಣಿಯವರಿಗೆ ಯಾಕೆ ತಿಳಿಸಲಿಲ್ಲ? ವಿಷಯ ತಿಳಿಸಿದ್ದರೆ ಮಹಾರಾಣಿಯವರು ಖಂಡಿತವಾಗಿಯೂ ಅವರಿಗೆ ಬಹುಮಾನ ಕೊಡುತ್ತಿರಲಿಲ್ಲವೇ? ಇದೆಲ್ಲವೂ ಇತಿಹಾಸದಲ್ಲಿ ದಾಖಲಾಗುತ್ತಿರಲಿಲ್ಲವೇ?

ಉರಿಗೌಡ ಮತ್ತು ದೊಡ್ಡನಂಜೇಗೌಡರೇ ಟಿಪ್ಪುವನ್ನು ಕೊಂದವರೆಂದು ಹೇಳುವ ಇವರು ಈ ಕಥೆಗೆ ಒಂದೊಂದು ಸಲ ಒಂದೊಂದು ಆಧಾರಗಳನ್ನು ಹೇಳುತ್ತಾರೆ, ಆದರೆ ಯಾವುದನ್ನೂ ರುಜು ಮಾಡುವುದಿಲ್ಲ. ಅವರು ಹೇಳುವ ಆಧಾರಗಳು, ಲಾವಣಿ, ಮಲಬಾರ್ ಮ್ಯಾನುಅಲ್, ಮೈಸೂರು ಗೆಝೆಟಿಯರ್ ಮತ್ತು ಇಂಟರ್‌ನ್ಯಾಷನಲ್ ಆಪ್.

ಮೊದಲನೆಯದಾಗಿ ಈ ಸುಳ್ಳಿಗೆ ಚಾಲನೆ ಕೊಟ್ಟವರು ರಂಗಾಯಣದ ಹೊಸ ನಿರ್ದೇಶಕ ಅಡ್ಡಂಡ ಕಾರ್ಯಪ್ಪ. ತಾವು ರಚಿಸಿದ ’ಟಿಪ್ಪು ನಿಜ ಕನಸುಗಳು’ ಎಂಬ ನಾಟಕದಲ್ಲಿ ಅವರು ಈ ಇಬ್ಬರು ವ್ಯಕ್ತಿಗಳೇ ಟಿಪ್ಪುನನ್ನು ಕೊಂದಿದ್ದು ಎಂದು ಹೇಳುತ್ತಾರೆ. ಏಶಿಯಾ ನೆಟ್, ಸುವರ್ಣ ನ್ಯೂಸ್‌ನವರು ದಿನಾಂಕ 5, ಡಿಸೆಂಬರ್ 2022ರಂದು ನಡೆಸಿದ ಒಂದು ಚರ್ಚೆಯಲ್ಲಿ ಅಡ್ಡಂಡ ಕಾರ್ಯಪ್ಪನವರು ಉರಿಗೌಡ ಹಾಗೂ ದೊಡ್ಡ ನಂಜೇಗೌಡರ ಉಲ್ಲೇಖ ಮಲಬಾರ್ ಮ್ಯಾನುಅಲ್‌ನಲ್ಲಿ ಇದೆ ಎನ್ನುತ್ತಾರೆ. ಇದಲ್ಲದೇ ’ಒಂದು ಇಂಟರ್‌ನ್ಯಾಷನಲ್ ಆಪ್’ನಲ್ಲಿ (International App) ಇದೆ ಎನ್ನುತ್ತಾರೆ. ಹಾಗೆಯೇ ದಿಗ್ವಿಜಯ ಚಾನಲ್‌ನವರು ದಿನಾಂಕ 14, ಮಾರ್ಚ್ 2023ರಂದು ನಡೆಸಿದ ಒಂದು ಚರ್ಚೆಯಲ್ಲಿಯೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಉಲ್ಲೇಖ ಮಲಬಾರ್ ಮ್ಯಾನುಅಲ್‌ನಲ್ಲಿ ಇರುವುದಾಗಿ ಹೇಳುತ್ತಾರೆ. ಒಕ್ಕಲಿಗರನ್ನು ಮತಾಂತರ ಮಾಡಿದ್ದಕ್ಕಾಗಿ ಹಾಗೂ ಅವರ ಮೇಲೆ ತೆರಿಗೆ ವಿಧಿಸಿದ್ದನ್ನು ಒಕ್ಕಲಿಗರು ವಿರೋಧಿಸಿದ್ದರು. ಇದು ಟಿಪ್ಪುವಿನ ಹತ್ಯೆಗೆ ಕಾರಣವಾಗಿತ್ತು ಎಂದು ಮಲಬಾರ್ ಮ್ಯಾನುಅಲ್‌ನಲ್ಲಿ ದಾಖಲಿಸಲಾಗಿದೆ ಎನ್ನುತ್ತಾರೆ. ಸುಮಾರು 1710ರಲ್ಲಿ ಶಿವಗಂಗೆ ಮತ್ತು ಪುದುಕೊಟ್ಟೈನಲ್ಲಿ ಇದ್ದಂತಹ ವಿಜಯನ್ ಸೇತುಪತಿ ಮತ್ತು ಕಿಲವನ್ ಸೇತುಪತಿ ಇವರ ಕಲಾತ್ಮಕಚಿತ್ರಗಳನ್ನು ಉರಿಗೌಡ ಮತ್ತು ದೊಡ್ಡನಂಜೇಗೌಡರ ಚಿತ್ರಗಳೆಂದು ಬಿಂಬಿಸುತ್ತಿದ್ದಾರೆ.

ಅಡ್ಡಂಡ ಕಾರ್ಯಪ್ಪ

ಮಲಬಾರ್ ಮ್ಯಾನುಅಲ್‌ವನ್ನು ಎರಡು ಸಂಪುಟಗಳಲ್ಲಿ ಅಂದು ಮಲಬಾರ್ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಹಾಗೂ ನಂತರ ಕಲೆಕ್ಟರ್ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಸಹಶಿಕ್ಷಕರಾಗಿದ್ದ ವಿಲಿಯಂ ಲೋಗ್ಯಾನ್ ಅವರು ಬರೆದಿದ್ದಾರೆ. ಇದನ್ನು 1887ರಲ್ಲಿ ಪ್ರಕಟಿಸಲಾಗಿದೆ. 1792ರಿಂದ ಅದು ಪ್ರಕಟವಾಗುವವರೆಗಿನ ಇತಿಹಾಸವನ್ನು ಮೊದಲ ಸಂಪುಟದ ಮೂರನೆಯ ಅಧ್ಯಾಯದ ’ಜಿ’ ಉಪ-ಅಧ್ಯಾಯದಲ್ಲಿ ದಾಖಲಿಸಲಾಗಿದೆ. ಇದರಲ್ಲಿ ಎಲ್ಲಿಯೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಪ್ರಸ್ತಾಪವೇ ಇಲ್ಲ. ಟಿಪ್ಪು ಹೇಗೆ ಸತ್ತರು ಎಂಬ ಬಗ್ಗೆ ಪುಟ 528ರಲ್ಲಿ ಬರಿ ಒಂದು ವಾಕ್ಯವಿದೆ. “ಏಪ್ರಿಲ್ 14ರಂದು ಶ್ರೀರಂಗಪಟ್ಟಣದಿಂದ ಸ್ವಲ್ಪ ದೂರದಲ್ಲಿ ಎರಡೂ ಸೈನ್ಯಗಳು (ಜನರಲ್ ಹ್ಯಾರಿಸ್ ಹಾಗೂ ಜನರಲ್ ಸ್ಟುಅರ್ಟ್ ಅವರ) ಒಟ್ಟಿಗೆ ಸೇರಿದವು ಹಾಗೂ ಮೇ 4ರಂದು ಶ್ರೀರಂಗಪಟ್ಟಣದ ಪತನವಾಯಿತು ಹಾಗೂ ಟಿಪ್ಪುವನ್ನು ಕೊಲ್ಲಲಾಯಿತು” ಇದರ ಹೊರತಾಗಿ ಟಿಪ್ಪುವನ್ನು ಕೊಂದ ಬಗ್ಗೆ ಮಲಬಾರ್ ಮ್ಯಾನುಅಲ್‌ನಲ್ಲಿ ಎಲ್ಲಿಯೂ ಪ್ರಸ್ತಾಪವಿಲ್ಲ. ಇನ್ನು ಕಾರ್ಯಪ್ಪನವರು ಹೇಳುವ ಇಂಟರ್ನ್ಯಾಷನಲ್ ಆಪ್ ಎಲ್ಲಿದೆಯೋ ಬಹುಶಃ ಕಾರ್ಯಪ್ಪನವರಿಗೂ ಗೊತ್ತಿರಲಿಕ್ಕಿಲ್ಲ. ನನಗಂತೂ ಎಷ್ಟು ಹುಡುಕಿದರೂ ಸಿಕ್ಕಿಲ್ಲ.

ಮಾರ್ಚ 19, 2023 ರಂದು “ಕಾಂಗ್ರೆಸ್ ಕಳ್ಳೆಕಾಯಿ” ಎಂಬ ಹೆಸರಿನ ಅಂತರ್ಜಾಲ ವಿಡಿಯೋ ಚಾನಲ್ ಬಿತ್ತರಿಸಿದ “ಉರಿಗೌಡ ದೊಡ್ಡ ನಂಜೇಗೌಡರ ಸಾಕ್ಷಿ ಕೇಳುವವರಿಗೆ ಇಲ್ಲಿದೆ ನೋಡಿ ಸಾಕ್ಷಿ” ಎಂಬ ಶೀರ್ಷಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದಾರೆ. ಆ ವಿಡಿಯೋದಲ್ಲಿ ಮೈಸೂರು ಗೆಝೆಟಿಯರಿನಲ್ಲಿ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವಿನ ವಿರುದ್ಧ ಹೋರಾಡಿದ ಪ್ರಸ್ತಾಪ ಇದೆ ಎಂದು ಹೇಳಲಾಗಿದೆ. ಆದರೆ ಅದು ಮೈಸೂರು ಗೆಝೆಟಿಯರಿನ ಯಾವ ಸಂಪುಟದ ಯಾವ ಭಾಗದ ಯಾವ ಪುಟದಲ್ಲಿದೆ ಎನ್ನುವ ವಿವರಗಳನ್ನು ಮಾತ್ರ ಹೇಳುವುದಿಲ್ಲ.

ಮೈಸೂರು ಗೆಝೆಟಿಯರನ್ನು ಮೊದಲಿಗೆ ಬಿ.ಎಲ್.ರೈಸ್ ಅವರು ಸಂಪಾದಿಸಿದ್ದು ನಂತರ 1924ರಲ್ಲಿ ರಾವ ಬಹಾದುರ ಕಾಂಜೀವರಮ್ ಹಯವದನರಾಯರ ನೇತೃತ್ವದ ಒಂದು ಸಮಿತಿ ಅದನ್ನು ಪರಿಷ್ಕರಿಸಿದೆ. ಪರಿಷ್ಕೃತ ಸಂಪುಟಗಳನ್ನು 1972ರಲ್ಲಿ ಪ್ರಕಟಿಸಲಾಗಿದೆ. ಅದು ಏಳು ಸಂಪುಟಗಳನ್ನು ಹೊಂದಿದ್ದು ಸಾವಿರಾರು ಪುಟಗಳನ್ನು ಹೊಂದಿದೆ.

ಇದನ್ನೂ ಓದಿ: ಹಳತು-ವಿವೇಕ: ‘ಜಂಗ್‌ನಾಮಾ’ದಿಂದ ಆಯ್ದ ಅಧ್ಯಾಯ; ಟಿಪ್ಪು ಸುಲ್ತಾನರು ಶಹಿದ ಆದುದು..

ಅದರಲ್ಲಿ ಸಂಪುಟ 2 ಭಾಗ 4 ಅಧ್ಯಾಯ 11ರ ಪುಟ 2424ನಿಂದ 3070ವರೆಗೆ ಮೈಸೂರು ರಾಜರ, (ಹೈದರಾಲಿ ಮತ್ತು ಟಿಪ್ಪು ಸುಲ್ತಾನರೂ ಸೇರಿದಂತೆ) ಇತಿಹಾಸವನ್ನು ದಾಖಲಿಸಲಾಗಿದೆ. ಇದರಲ್ಲಿ ಟಿಪ್ಪುವಿನ ಸಾವಿನ ಬಗ್ಗೆ ಪುಟ 2657ನಲ್ಲಿ “ಬಿರುಗಾಳಿಯಂತೆ ಶತ್ರು ಪಕ್ಷದ ಒಂದು ಭಾಗ, ಈ ಕಿಕ್ಕಿರಿದ ಹಾದಿಯಲ್ಲಿ ಮಾರಣಾಂತಿಕ ಗುಂಡಿನ ಸುರಿಮಳೆ ಮಾಡಿತು. ಟಿಪ್ಪುವಿಗೆ ಎರಡನೇ ಮತ್ತು ಮೂರನೆಯ ಗಾಯಗಳಾಯಿತು ಮತ್ತು ಅವರ ಕುದುರೆಗೂ ಗುಂಡೇಟು ಬಿದ್ದಿತು. ಆದರೂ ಸುಲ್ತಾನನ ನಿಷ್ಠಾವಂತ ಸೇವಕ ರಜಾ ಖಾನ್, ಇನ್ನೂ ಯಜಮಾನನಿಗೆ ಅಂಟಿಕೊಂಡಿದ್ದ. ಅವನಿಗೂ ಏಟು ಬಿದ್ದಿತು. ಸುಲ್ತಾನನ ಚಿನ್ನದ ಬೆಲ್ಟನ್ನು ಒಬ್ಬ ಸೈನಿಕ ವಶಪಡಿಸಿಕೊಳ್ಳಲು ಪ್ರಯತ್ನಿಸಿದನು. ಟಿಪ್ಪು ತನ್ನ ಕತ್ತಿಯಿಂದ ಅವನನ್ನು ಕತ್ತರಿಸಿದನು, ಆದರೆ ಗ್ರೆನೇಡಿಯರ್ ಅವನ ಕಿವಿಯ ಪಟಲದ ಮೇಲೆ ಗುಂಡು ಹಾರಿಸಿದನು ಮತ್ತು ಹೀಗೆ ಸುಲ್ತಾನನ ಐಹಿಕ ಬದುಕನ್ನು ಕೊನೆಗೊಳಿಸಿದನು” ಎಂದು ಹೇಳಲಾಗಿದೆ. ಇಲ್ಲಿ ಕೂಡ ಉರಿಗೌಡ ಮತ್ತು ದೊಡ್ಡನಂಜೇಗೌಡರೆಂಬುವರು ಟಿಪ್ಪುವನ್ನು ಕೊಂದರು ಎನ್ನುವುದಂತೂ ದೂರ, ಅವರ ಪ್ರಸ್ತಾಪವೇ ಇಲ್ಲ.

ಇನ್ನು ಇವರು ಒಂದು ಲಾವಣಿಯ ಬಗ್ಗೆ ಹೇಳುತ್ತಾರೆ. ಅದು ಟಿಪ್ಪುವನ್ನು ಹೊಗಳಿ ಬರೆದಿರುವ ಲಾವಣಿ ಎಂದು ಒಪ್ಪುತ್ತಾರೆ. ಅದರಲ್ಲಿ ಉರಿಗೌಡ ಮತ್ತು ದೊಡ್ಡನಂಜೇಗೌಡರು ಟಿಪ್ಪುವನ್ನು ಖಡ್ಗದಿಂದ ಇರಿದು ಕೊಂದರು ಎಂದು ಹೇಳಲಾಗಿದೆ. ಇದು ಯಾವ ಸಮಯದಲ್ಲಿ ಸೃಷ್ಟಿಸಿದ ಲಾವಣಿ ಎಂಬುದಕ್ಕೆ ಆಧಾರವಿಲ್ಲ ಮತ್ತು ಈ ವಿವಾದ ಸೃಷ್ಟಿಸಿದ ಮೇಲೆ ಆ ಲಾವಣಿ ಹುಟ್ಟಿರಬಹುದಾದ ಅಂಶವನ್ನೂ ಅಲ್ಲಗಳೆಯುವಂತಿಲ್ಲ. ಆದರೆ ಟಿಪ್ಪು ಸತ್ತದ್ದು ಗುಂಡುಗಳಿಂದ ಆದ ಗಾಯಗಳಿಂದ ಖಡ್ಗದಿಂದಲ್ಲ ಎನ್ನುವುದನ್ನು ಸರಿಸುಮಾರು ಎಲ್ಲಾ ಸಮಕಾಲೀನ ಹಾಗೂ ಆಧುನಿಕ ಇತಿಹಾಸಕಾರರು ಒಪ್ಪುತ್ತಾರೆ. ಜೊತೆಗೆ ಲಾವಣಿಗಳನ್ನು ಒಬ್ಬ ವ್ಯಕ್ತಿಯ ಚಾರಿತ್ರ್ಯವನ್ನು ಅರ್ಥೈಸಿಕೊಳ್ಳಲು ಆಧಾರವಾಗಿ ಬಳಸಿಕೊಳ್ಳಬಹುದೇ ಹೊರತು ಚರಿತ್ರೆಯನ್ನು ತಿಳಿದುಕೊಳ್ಳಲು ಅಲ್ಲ.

ಇನ್ನು ಸುಮಾರು ಸಮಕಾಲೀನ ಇತಿಹಾಸಕಾರರು ಈ ಬಗ್ಗೆ ಏನು ಬರೆದಿದ್ದಾರೆ ನೋಡೋಣ. ಇತಿಹಾಸದ ಹೆಸರಿನಲ್ಲಿ ಕಂತೆ-ಪುರಾಣಗಳನ್ನು ಬರೆಯುವುದನ್ನೇ ತಮ್ಮ ವೈಶಿಷ್ಟ್ಯವನ್ನಾಗಿಸಿಕೊಂಡ ಈ ಹಿಂದೂ ಮತಾಂಧದರು ಹೈದರಾಲಿ ಅಥವಾ ಟಿಪ್ಪುವಿನ ಇತಿಹಾಸವನ್ನು ಬರೆದದ್ದು ಇಲ್ಲವೇ ಇಲ್ಲವೆನ್ನಬಹುದು. ಹೈದರಾಲಿಯ ಬಗ್ಗೆ ಒಂದೇ ಒಂದು ಇತಿಹಾಸ ಕನ್ನಡದಲ್ಲಿ ಲಭ್ಯವಿದೆ. ಅದೂ ಅನಾಮಧೇಯ ರಚನೆ. ಇದರ ಹೆಸರು ’ಹೈದರನಾಮಾ’. ಇದನ್ನು ಸುಮಾರು 1784ರಲ್ಲಿ ರಚಿಸಲಾಯಿತು ಎಂದು ನಂಬಲಾಗಿದೆ. ಮೈಸೂರು ಆರ್ಕಿಯಾಲಾಜಿಕಲ್ ರಿಪೊರ್ಟ್ 1930ರಲ್ಲಿ ಅದರ ಸಾರಾಂಶ ನಮೂದಾಗಿದೆ. ಆದರೆ ಅದರ ಲೇಖಕ ಅದನ್ನು ಟಿಪ್ಪುವಿನ ಆಡಳಿತಕ್ಕೂ ವಿಸ್ತರಿಸುವುದಿಲ್ಲ. ಆದುದರಿಂದ ಇದರಲ್ಲಿಯೂ ಉರಿಗೌಡ ಮತ್ತು ದೊಡ್ಡನಂಜೇಗೌಡರ ಪ್ರಸ್ತಾಪ ಸಿಕ್ಕುವುದಿಲ್ಲ.

ಬ್ರಿಟಿಷರು ’ನಮ್ಮ ಇತಿಹಾಸವನ್ನು ತಿರುಚಿ ತಮಗೆ ಅನುಕೂಲವಾಗುವಂತೆ ಬರೆದುಕೊಂಡಿದ್ದಾರೆ’ ಎಂದು ದೂರುತ್ತಲೂ, ಮುಸಲ್ಮಾನರು ಹಿಂದೂಗಳ ಮೇಲೆ ಅತ್ಯಾಚಾರ ಮಾಡಿದರೆಂದು ದೂರುತ್ತಲೂ, ಈ ಹಿಂದುತ್ವವಾದಿಗಳು ತಮ್ಮ ಇತಿಹಾಸಕ್ಕಾಗಿ ಮುಸ್ಲಿಮರು ಫಾರಸೀ ಭಾಷೆಯಲ್ಲಿ ಬರೆದ, ಬ್ರಿಟಿಷರು ಅವುಗಳನ್ನು ಇಂಗ್ಲೀಷ್ ಭಾಷೆಗೆ ಮಾಡಿದ ಅನುವಾದಗಳನ್ನೇ ಅವಲಂಬಿಸಬೇಕಾಗಿ ಬರುವುದು ಅವರ ದುರಾದೃಷ್ಟ. “ದೇಶದ ರಾಜಕೀಯ ಘಟನೆಗಳನ್ನು ದಾಖಲಿಸುವ ಮತ್ತು ಇತಿಹಾಸ ಸಂಕಲಿಸುವ ಕಲೆಯನ್ನು ಮುಸ್ಲಿಂ ತುರ್ಕರು ಭಾರತೀಯರಿಗೆ ಪರಿಚಯಿಸಿದರು” ಎನ್ನುತ್ತಾರೆ ’ಭಾರತೀಯ ಜನರ ಇತಿಹಾಸ ಮತ್ತು ಸಂಸ್ಕೃತಿ’ಯ ಸಂಪುಟ- 1, ’ವೇದ ಯುಗ’ದ ಪುಟ 63ರಲ್ಲಿ ಇತಿಹಾಸಕಾರ ಡಾ.ಆರ್.ಸಿ.ಮಜುಂದಾರ್.

ಹೈದರಾಲಿ

ಕನ್ನಡದಲ್ಲಿ ಒಂದೇ ಒಂದು ಅನಾಮಧೇಯ ಇತಿಹಾಸ ಹೈದರಾಲಿಯ ಬಗ್ಗೆ ಇದ್ದರೆ, ಟಿಪ್ಪುವಿನ ಬಗ್ಗೆ, ಮೇಲೆ ಹೇಳಿದ ಮೀರ್ ಹುಸ್ಸೈನ್ ಅಲಿ ಖಾನ್ ಕೀರ್ಮಾಣಿ ಬರೆದ ’ನಿಶಾನ್-ಇ-ಹೈದರಿ’ ಅಲ್ಲದೇ, ಫಾರಸೀ ಭಾಷೆಯಲ್ಲಿ ಹಮಿದ್ ಖಾನ್ ಬರೆದಿರುವ ತಾರಿಖ್-ಎ-ಹಮಿದ್ ಖಾನ್, ಹಮಿದ್ ಖಾನ್ ಲೊಹಾನಿ ಬರೆದಿರುವ ತಾರಿಖ್-ಎ-ಕೂರ್ಗ್, ಖ್ವಾಜಾ ಅಬ್ದುಲ್ ಖಾದಿರ್ ಬರೆದಿರುವ ವಾಕ್ಕೈ-ಇ-ಮಂಝಿಲ್-ಇ-ರೂಮ, ಝೈನ್-ಉಲ್-ಅಬಿದಿನ್ ಶುಸ್ತರಿ ಬರೆದಿರುವ ಫತ್-ಉಲ್-ಮುಜಾಹಿದೀನ್, ಮೀರ್ ಆಲಮ್ (ಅಬ್ದುಲ್ ಖಾಸಿಮ್-ಮುಸಾವಿ ಶುಸ್ತರಿ) ಬರೆದಿರುವ ಹದಿಕತ್-ಉಲ್-ಆಲಮ್, ಅಹ್ಮದ್ ಬಿನ್ ಮುಹಮ್ಮದ್ ಅಲಿ ಬರೆದಿರುವ ಮಿರತ್-ಉಲ್-ಅಹವಾಲ್, ಮಿರ್ಜಾ ಮುಹಮ್ಮದ್ ಸರುಇ ಬರೆದಿರುವ ತಾರಿಖ್-ಇ-ಫತ್ ಅಲಿ ಶಾಹ್, ಹಾಗೂ ಮಿರ್ಜಾ ರಜಾ ತಬ್ರಿಜಿ ಮೊದಲಾದವರು ಸೇರಿ ಬರೆದಿರುವ ಜೀನತ್-ಉಲ್-ತವಾರಿಖ್, ಹಾಗೂ ಅನಾಮಧೇಯರು ಬರೆದಿರುವ ತಾರಿಖ್-ಎ-ಟಿಪ್ಪು ಸುಲ್ತಾನ್, ಸುಲ್ತಾನ್-ಉತ್-ತವಾರಿಖ್, ತಾರಿಖ್-ಎ-ಖುದಾದಾದಿ ಈ ಗ್ರಂಥಗಳು ಸಿಕ್ಕುತ್ತವೆ.

ಹೈದರಾಲಿ ಮತ್ತು ಟಿಪು ಇಬ್ಬರ ಆಸ್ಥಾನದಲ್ಲಿಯೂ ಇದ್ದ ಮೀರ್ ಹುಸ್ಸೈನ್ ಅಲಿ ಖಾನ್ ಕೀರ್ಮಾಣಿ, ಹೈದರಾಲಿ ಮತ್ತು ಟಿಪ್ಪು ಸುಲ್ತಾನರಿಬ್ಬರ ಚರಿತ್ರೆಯನ್ನೂ ಬರೆದಿದ್ದಾನೆ. ಇದೇ ’ನಿಶಾನ್-ಇ-ಹೈದರಿ’. ಫಾರಸೀ ಭಾಷೆಯಲ್ಲಿರುವ ಇದನ್ನು ಕರ್ನಲ್ ಡಬ್ಲು. ಮೈಲ್ಸ್ ಅವರು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. ಟಿಪ್ಪುವಿನ ಸಾವಿನ ನಂತರ ಕೀರ್ಮಾಣಿಯನ್ನು ಬ್ರಿಟಿಷರು ಮದ್ರಾಸಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಅವನಿಗೆ ಪೆನ್ಷನ್ ಕೊಡುತ್ತಿದ್ದರು. ’ನಿಶಾನ್-ಇ-ಹೈದರಿ’ಯ ಪುಟ 127 ಮತ್ತು 128ರಲ್ಲಿ ಟಿಪ್ಪುವಿನ ಸಾವಿನ ಬಗ್ಗೆ ಹೀಗೆ ಬರೆಯಲಾಗಿದೆ: “ಬಿರುಗಾಳಿಯಂತೆ ಶತ್ರು ಪಕ್ಷವು ಮುಂದುವರಿಯುತ್ತ ಗುಂಡಿನ ಮಳೆಗರೆಯುತ್ತ ಟಿಪ್ಪು ಸುಲ್ತಾನನ ಬಳಿ ಬಂದಾಗ ಆತ ಅತ್ಯಂತ ಶೌರ್ಯದಿಂದ ಅವರನ್ನು ಎದುರಿಸಿದ ಮತ್ತು ತನ್ನ ಮ್ಯಾಚ್‌ಲಾಕ್‌ನೊಂದಿಗೆ ಹಾಗೂ ತನ್ನ ಕತ್ತಿಯಿಂದ ಎರಡು ಅಥವಾ ಮೂರು ಶತ್ರುಗಳನ್ನು ಕೊಂದನು. ಆದರೆ ಮುಖಕ್ಕೆ ಹಲವಾರು ಮಾರಣಾಂತಿಕ ಗಾಯಗಳು ಆದದ್ದರಿಂದ ಅವನು ಹುತಾತ್ಮನಾದ”.

ಟಿಪ್ಪು ಹತನಾದ ದಿನ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದ ಇಂಗ್ಲಿಷರ ಸೈನ್ಯದಲ್ಲಿ ಭಾಗಿಯಾಗಿದ್ದ ಲೆಫ್ಟಿನೆಂಟ್ ಕರ್ನಲ್ ಎ.ಬೀಟ್ಸನ್ ಟಿಪ್ಪು ಸತ್ತ ಮಾರನೆಯ ವರ್ಷವೇ ಅಂದರೆ 1800ರಲ್ಲಿ ಲಂಡನ್ನಿನಲ್ಲಿ ಪ್ರಕಟವಾದ ತನ್ನ ಪುಸ್ತಕ ’ಎ ವ್ಯೂ ಆಫ್ ದ ಒರಿಜಿನ್ ಎಂಡ್ ಕಂಡಕ್ಟ ಆಫ್ ದ ವಾರ್ ವಿಥ್ ಟಿಪ್ಪು ಸುಲ್ತಾನ್’ನ ಪುಟ 154-55ರಲ್ಲಿ ಟಿಪ್ಪು ಗಾಯಗೊಂಡು ಯುದ್ಧಭೂಮಿಯಲ್ಲಿ ಬಿದ್ದಿರುವಾಗ ಅವನ ರತ್ನಖಚಿತ ನಡುಪಟ್ಟಿಯನ್ನು ಒಬ್ಬ ಇಂಗ್ಲಿಷ್ ಸೈನಿಕ ಕಿತ್ತುಕೊಳ್ಳಲು ಹೋದಾಗ, “ರಕ್ತದ ನಷ್ಟದಿಂದ ಮೂರ್ಛೆ ಹೋಗುವ ಸ್ಥಿತಿಯಲ್ಲಿದ್ದರೂ ಈ ಅವಮಾನವನ್ನು ಸಹಿಸಲಾಗದೆ ಹತ್ತಿರವಿದ್ದ ಒಂದು ಕತ್ತಿಯನ್ನು ವಶಪಡಿಸಿಕೊಂಡು ಅವನು ಸೈನಿಕನ ಮೇಲೆ ಏಟು ಹಾಕಿದ. ಆದರೆ ಆ ಏಟು ಆ ಸೈನಿಕನ ಮಸ್ಕೆಟ್ ಮೇಲೆ ಬಿದ್ದಿತು. ಆದ್ದರಿಂದ ಅವನು ಇನ್ನೊಬ್ಬ ಸೈನಿಕನ ಮೇಲೆ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಹೊಡೆದ. ಆಗ ಟಿಪ್ಪುವಿನ ಕಿವಿಪಟಲದ ಮೇಲೆ ಗುಂಡು ಹಾರಿಸಲಾಯಿತು ಮತ್ತು ಅವನು ಸತ್ತು ಬಿದ್ದನು” ಎಂದು ಬರೆಯುತ್ತಾರೆ.

ಟಿಪ್ಪು ಮೂರನೆಯ ಗುಂಡಿನೇಟಿನಿಂದ ಹತನಾದಾಗ ಅವನ ಅಂಗರಕ್ಷಕ ರಜಾ ಖಾನ್, ಟಿಪ್ಪುವಿಗೆ ತಾನೇ ಟಿಪ್ಪು ಸುಲ್ತಾನ್ ಎಂಬುದನ್ನು ಶತ್ರುಗಳಿಗೆ ಬಹಿರಂಗಪಡಿಸಲು ಹೇಳುತ್ತಾನೆ. ಆದರೆ ಇಂಗ್ಲಿಷರ ಕೈಯ್ಯಲ್ಲಿ ಸೆರೆಯಾಳಾಗುವುದಕ್ಕಿಂತ ಯುದ್ಧದಲ್ಲಿ ಸಾಯುವುದೇ ಲೇಸೆಂದು ಟಿಪ್ಪು ರಜಾ ಖಾನ್‌ನ ಸಲಹೆಯನ್ನು ತಿರಸ್ಕರಿಸುತ್ತಾನೆ. ಟಿಪ್ಪು ಹತನಾದ ದಿನ ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದ ಇಂಗ್ಲಿಷರ ಸೈನ್ಯದಲ್ಲಿ ಭಾಗಿಯಾಗಿದ್ದ ಮೇಜರ್ ಅಲೆಕ್ಸಾಂಡರ್ ಅಲ್ಲನ್ ಅದೇ ವರ್ಷ ಬರೆದ ಹಾಗೂ ನಂತರ 1912ರಲ್ಲಿ ಕಲ್ಕತ್ತೆಯಲ್ಲಿ ಪ್ರಕಟಿಸಲಾದ ತನ್ನ ಪುಸ್ತಕ ’ಎನ್ ಅಕೌಂಟ ಆಫ್ ದ ಕ್ಯಾಂಪೇನ್ ಇನ್ ಮೈಸೂರ್’ನ ಪುಟ 96ರಲ್ಲಿ ಹಾಗೂ ಮೇಲೆ ಹೇಳಿದ ಬೀಟ್ಸನ್ ಅವರು ತಮ್ಮ ಪುಸ್ತಕದ ಪುಟ 165ರಲ್ಲಿ ಈ ಮಾತನ್ನು ಪುಷ್ಟೀಕರಿಸುತ್ತಾರೆ.

ಜರ್ಮನಿಯ ನಾಜಿ ಕಾಲದ ಪ್ರಚಾರಕ ಗೋಬೆಲ್ಸ್‌ನಂತೆ, ಉರಿಗೌಡ ಮತ್ತು ದೊಡ್ಡನಂಜೇಗೌಡರ ಈ ಹಸಿ ಸುಳ್ಳನ್ನು ದಿನಬೆಳಗಾದರೆ ಹರಡುತ್ತಿರುವ ಹಾಗೂ ದಿನ ನಿತ್ಯ ಮನುಸ್ಮೃತಿಯ ಜಪ ಮಾಡುವ ಈ ಹಿಂದೂ ಮತಾಂಧರು ಮನುವಿನ ಪ್ರಕಾರವೇ ಸನಾತನ ಧರ್ಮದಿಂದ ದಿನನಿತ್ಯ ಭ್ರಷ್ಟರಾಗುತ್ತಿದ್ದಾರೆ. ತನ್ನ ಸ್ಮೃತಿಯ 4ನೆಯ ಅಧ್ಯಾಯದ 138ನೆಯ ಶ್ಲೋಕದಲ್ಲಿ ಮನು ಹೀಗೆ ಹೇಳಿದ್ದ: “ಸತ್ಯಂ ಬ್ರೂಯಾತ್, ಪ್ರಿಯಂ ಬ್ರೂಯಾತ್, ನ ಬ್ರೂಯಾತ್ ಸತ್ಯಮ್ ಅಪ್ರಿಯಮ್, ಪ್ರಿಯಂ ಚ ನಾನೃತಮ್ ಬ್ರೂಯಾತ್, ಎಷ ಧಮಃ ಸನಾತನಃ.” ಸತ್ಯವನ್ನು ನುಡಿ, ಪ್ರಿಯವಾದುದನ್ನು ನುಡಿ, ಆದರೆ ಅಪ್ರಿಯವಾದ ಸತ್ಯವನ್ನೂ ನುಡಿಯಬೇಡ, ಪ್ರಿಯವಾದ ಅಸತ್ಯವನ್ನೂ ನುಡಿಯಬೇಡ. ಇದೇ ಸನಾತನ ಧರ್ಮ. ಇತಿಹಾಸ ಮತ್ತು ಪುರಾಣಗಳಿಂದ ಸುಳ್ಳನ್ನು ಮಾತ್ರ ತೆಗೆದುಕೊಂಡು ಸತ್ಯ ಮತ್ತು ವಾಸ್ತವಗಳನ್ನು ನಿರಾಕರಿಸುವ ಈ ಮತಾಂಧರ ಕೈಯ್ಯಲ್ಲಿ ಈಗ ಟಿಪ್ಪು ಸಿಕ್ಕಿಕೊಂಡು ’ನಿಜ ಇತಿಹಾಸ’ ನರಳುವಂತಾಗಿದೆ!

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read