Homeಕರ್ನಾಟಕಹಳತು-ವಿವೇಕ: 'ಜಂಗ್‌ನಾಮಾ'ದಿಂದ ಆಯ್ದ ಅಧ್ಯಾಯ; ಟಿಪ್ಪು ಸುಲ್ತಾನರು ಶಹಿದ ಆದುದು..

ಹಳತು-ವಿವೇಕ: ‘ಜಂಗ್‌ನಾಮಾ’ದಿಂದ ಆಯ್ದ ಅಧ್ಯಾಯ; ಟಿಪ್ಪು ಸುಲ್ತಾನರು ಶಹಿದ ಆದುದು..

- Advertisement -
- Advertisement -

(ಜಂಗ್‌ನಾಮಾ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನರ ಬಗೆಗಿನ ಅಪೂರ್ವ ಮಾಹಿತಿಯುಳ್ಳ ಕೃತಿ. ಗುಲಾಂ ಮಹಮ್ಮದ್ ಜುನೈದಿ ಅವರು ಹೇಳಿದ್ದನ್ನು ಬಿದನೂರಿನ ಖಾಜಿ [ನ್ಯಾಯಾಧೀಶ] ಮಿಸಕಿಂನ್ ನಸೀರುದ್ದೀನ್ ಅವರು ಬರೆದುಕೊಂಡ ದಾಖಲೆ ’ತಾರೀಖ್-ಇ-ಹೈದರ್’; ಈ ಕೃತಿಯನ್ನು ಮಹಮ್ಮದ್ ಖಾಸಿಂ ಎನ್ನುವವರು ಕನ್ನಡಕ್ಕೆ ಜಂಗ್‌ನಾಮ ಹೆಸರಿನಲ್ಲಿ ಅನುವಾದಿಸಿದ್ದಾರೆ ಎಂದು ತಿಳಿದುಬಂದಿದೆ. ಜಂಗ್ ಎಂದರೆ ಯುದ್ಧಗಳ ವಿವರಗಳ ದಾಖಲೆಯಾದರೂ, ಹೈದರ್ ಮತ್ತು ಟಿಪ್ಪು ಬಗೆಗಿನ ಹಲವು ಮಾನವ ಕುತೂಹಲಿ ಸಂಗತಿಗಳನ್ನೂ ಬಹಳ ಪರಿಣಾಮಕಾರಿಯಾಗಿ ಮತ್ತು ಮನಮುಟ್ಟುವಂತೆ ದಾಖಲಿಸಲಾಗಿದೆ. ಅದರಲ್ಲಿ ಟಿಪ್ಪು ಹತನಾದ ದಿನದ ಘಟನೆಗಳೂ ಕೂಡ ಪ್ರಮುಖವಾಗಿವೆ. ಹಲವು ಬ್ರಿಟಿಷ್ ಮತ್ತು ಫ್ರೆಂಚ್ ಇತಿಹಾಸಕಾರರು ಟಿಪ್ಪು ಕೊನೆಯ ದಿನದ ಬಗ್ಗೆ ದಾಖಲಿಸಿರುವ ಮಾಹಿತಿಗಳಿಗೆ ಈ ಹಸ್ತಪ್ರತಿಯಲ್ಲಿ ಸಿಕ್ಕ ಮಾಹಿತಿಗಳು ಹೊಂದುತ್ತವೆ. ಇತಿಹಾಸವನ್ನು ತಿರುಚಲು ಸಂಘ ಪರಿವಾರ ನಡೆಸುತ್ತಿರುವ ಹುನ್ನಾರಗಳಲ್ಲಿ, ಟಿಪ್ಪು ಕೊಂದವರು ಉರಿಗೌಡ ಮತ್ತು ನಂಜೇಗೌಡ ಎಂಬ ಸುಳ್ಳು ಮಾಹಿತಿ ಇತ್ತೀಚಿನದ್ದು; ಇದನ್ನು ವ್ಯಾಪಕವಾಗಿ ಹಂಚುತ್ತಿರುವ ಸಮಯದಲ್ಲಿ ಟಿಪ್ಪು ಕೊನೆಯ ದಿನವನ್ನು ಚಿತ್ರಿಸುವ ಈ ಐತಿಹಾಸಿಕ ಕನ್ನಡ ದಾಖಲೆ ಮುಖ್ಯವಾದೀತು.

ಜಂಗ್‌ನಾಮ ಕನ್ನಡ ಆವೃತ್ತಿ 1891ರಲ್ಲಿ ರಚಿಸಿರಬಹುದ್ದಾಗಿದೆ ಎಂದು ಊಹಿಸಲಾಗಿದ್ದು, ಕೈಬರಹದ ಈ ಹಸ್ತಪ್ರತಿ ಕನ್ನದ ಪ್ರಖ್ಯಾತ ಲೇಖಕ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಂಗ್ರಹದಲ್ಲಿತ್ತಂತೆ. ಮಾಸ್ತಿಯವರು ತಮ್ಮ ಸಂಶೋಧನೆಯ ಸಮಯದಲ್ಲಿ ಈ ಹಸ್ತಪ್ರತಿಯನ್ನು ಬಿದನೂರಿನಲ್ಲಿ ಸಂಗ್ರಹಿಸಿದ್ದರು ಎಂದು ’ಜಂಗ್‌ನಾಮ’ವನ್ನು ಪ್ರಕಟಣೆಗಾಗಿ ಸಂಪಾದಿಸಿರುವ ಡಾ. ಎಸ್ ಎಲ್ ಶ್ರೀನಿವಾಸ ಮೂರ್ತಿಯವರು (ಡಾ. ವಿ ವಸಂತಶ್ರೀ ಮತ್ತೊಬ್ಬ ಸಂಪಾದಕರು) ತಮ್ಮ ಪ್ರಸ್ತಾವನೆಯಲ್ಲಿ ಹೇಳುತ್ತಾರೆ. ಈ ಪಠ್ಯದಲ್ಲಿ ಯಾವುದೇ ಪೂರ್ಣವಿರಾಮ ಅಥವಾ ಅಲ್ಪವಿರಾಮವನ್ನು ಬಳಸಿಲ್ಲ. ಬಹಳಷ್ಟು ಪಾರ್ಸಿ ಪದಗಳನ್ನು ಹೊಂದಿರುವ ವಿಶಿಷ್ಟ ಕನ್ನಡ ಲಯದ ಈ ದಾಖಲೆಯ ಒಂದು ಭಾಗವನ್ನು ಮೇಲೆ ಹೆಸರಿಸಿದ ಸಂಪಾದಕರು ಮಾಡಿರುವ ತಿದ್ದುಪಡಿಯನ್ನು ಉಳಿಸಿಕೊಂಡು ಹಾಗೆಯೇ ಪ್ರಕಟ ಮಾಡಲಾಗಿದೆ. ಇತಿಹಾಸವನ್ನು ತಿರುಚುವವರ ಬಗ್ಗೆ ಹೊಂದಬೇಕಿರುವ ಎಚ್ಚರದ ವಿವೇಕವನ್ನು ಈ ದಾಖಲೆ ಉದ್ದೀಪಿಸುತ್ತದೆ ಎಂಬ ನಂಬಿಕೆಯೊಂದಿಗೆ..

– ಸಂ)

ಮೊದಲು ದಿವ್ಸ ಇಂಗ್ಲಿಷ್‌ನವರು ಮಾರಚಾಲ್‌ನಿಂದ ವಿಶೇಷವಾಗಿ ತೋಫಗಳು ಹೊಡೆದರು ಮತ್ತು ಕೋಟೆ ಮೇಲೆ ಮನುಷ್ಯರು ತಲೆಯೆತ್ತುವುದಕ್ಕೆ ಆಗುತ್ತಿರಲಿಲ್ಲ ಯಿಂತಾ ಕ್ರೂರವಾಗಿ ಹೊಡಿಯುವುದಕ್ಕೆ ಷುರುಮಾಡಿದರು ಯಿಂತಾದರಲ್ಲಿ ಬಂದೋಖ ಗುಂಡಿನಿಂದ ಪೆಟ್ಟು ತಾಕಿ ಸೈಯದ ಗಫಾರ ಶಹಿದ ಯಾನೆ ಮೃತವಾದರು ಆಗ ಹರೆಕಾರೆ ಜನಗಳು ಬಂದು ಸೈಯದ ಗಫಾರವರು ಗುಂಡಿನ ಪೆಟ್ಟು ತಾಕಿ ಶಹಿದ ಆದರೆಂತ ಬಂದು ಸುಲ್ತಾನ್‌ರವರಿಗೆ ವರ್ತಮಾನ ಕೊಟ್ಟರು ಸದ್ರಿ ಸುಲ್ತಾನ್‌ರವರು ಕೇಳಿದ ಕೂಡ್ಲೆ ಬಹಳವಾಗಿ ವ್ಯಸನಪಟ್ಟರು ದುಃಖ ಮಾಡುವದಾಗಿ ಸೈಯದ ಗಫಾರು ಮೊದಲೇ ಆದರು ನಾನು ಯಿನ್ನು ಯರಡುನಲ್ಲಿ ಹೋಗುವನಾಗಿದ್ದೆನೆ ಯೆನಾಗುವದು ದೇವಚಿತ್ತದಲ್ಲಿ ಯಿದ್ದಂತೆ ಆಗುವದೆಲ್ಲ ಆಗಿ ಮುಗದುಹೋಯಿತೆಂತ ಅಪ್ಪಣೆ ಕೊಟ್ಟು ಕಂಣಿನಲ್ಲಿ ನೀರು ತಂದು ವಿಶೇಷವಾಗಿ ವ್ಯಸನಪಟ್ಟರು ಮತ್ತು ಅನ್ನವು ಯರಡು ಮೂರು ಗುಟ್ಕ ವೂಟ ಮಾಡಿರಬಹುದು ಆಗ ಯೆಡೆ ಇಂದ ಕೈ ತೆಗೆದು ಮೊಖೂಫ ಮಾಡಿದರು ಕೈತೊಳೆದು ನೀರು ಕುಡಿದು ಈಗ ನಾನು ದೇವರ ಹೆಸರಿನ ಮೇಲೆ ಖಂಡಿತ್ತವಾಗಿ ನಿಂತು ಯಿದ್ಧೆನೆ – ಯಂತ ಅಪ್ಪಣೆ ಕೊಟ್ಟದ್ದಲ್ಲದೆ ಕೆಲವು ಜನಗಳು

(page 168) ಸರ್ಕಾರದ ರಿಯಾಸ್ತಾನದಲ್ಲಿ ಯಿದ್ದವರು ವಬ್ಬರೇ ವಬ್ಬರೇ ಶಹಿದ ಯಾನೆ ಮೃತವಾದರು ಈಗ ನನಗೆ ಶಹಿದ ಆಗುವ ಕಾಲ ಸಮೀಪ್ಸಿಯಿಧೆ ದೇವರು ದೊಡ್ಡವನು ಯೀಗಲು ಶ್ರೀಹರಿ ಯಿಷ್ಟದಂತೆ ನಡಿಶ್ಯಾನೆಂತ ಅಪ್ಪಣೆ ಕೊಟ್ಟರು ಮತ್ತು ಆ ಸ್ಥಳದಲ್ಲಿ ಯಾರು ಬುದ್ಧಿವಂತರು ಧೈರ್ಯಶಾಲಿ ಜವಾಮರ್ದ ಜನಗಳು ಯಿರಲಿಲ್ಲ ಅಲ್ಲೇ ಬಂದೋಬಸ್ತು ಕೆಲ್ಸಗಳು ಯಾವತ್ತು ಸುಲ್ತಾನ್‌ರವರು ವಬ್ಬರೆ ಕೊಡಬೇಕಾದ್ರಿಂದ ಮತ್ತು ಸೈಯದ ಗಫಾರವರ ಸಂಗಡ ಯಿದ್ದ ಶಿಪಾ ಕೊಟೆ ಬಿಟ್ಟು ಶ್ರವದ ಸಂಗಡ ಬಂದರು ಸದ್ರಿ ಜನಗಳಿಗೆ ನಿಂತುಯಿದ್ದ ಸ್ಥಳ ಬಿಟ್ಟುಹೋಗಬಾರದಂತೆ ಯಾರು ಹೇಳಿ ನಿಲ್ಲಿಸಲಿಲ್ಲಾ ಆದಾಗ್ಯು ಆಖೈರ ಅಂತ್ಯಕಾಲ ಶಹಿದ ಆಗುವುದು ಸಮೀಪ್ಸಿತು ಶಿವಾ ಸೈಯದ ಗಫಾರವರು ಶಹಿದ ಆದ ಲಾಗಾತು ಹಲ್ಲಾ ಆಗುವವರಿಗು ಮಧ್ಯ ಯರಡು ಘಂಟೆ ಹೊತ್ತು ಆಗಿರಬಹುದು ಆ ವೇಳೆದಲ್ಲಿ ಜನರಲ್ ಹಾರಿಸ್ ಸಾಹೇಬರವರ್ರು ಮಾರಚಾಲ್‌ನಲ್ಲಿ ತಮ್ಮ ಫವುಜ ಸುಮಾರು (12) ಘಂಟೆ ಹೊತ್ತು ಯಿರಬಹುದು ಆ ಸಮಯದಲ್ಲಿ ವೂಟ ಮಾಡಿಕೊಂಡು ನಶಾ ತೆಗದುಕೊಂಡು ತಯಾರಾಗಿದ್ದರು ಆ ವೇಳೆದಲ್ಲಿ ಸದ್ರಿ ಜನರಲ್ ಹಾರಿಸ್ ಸಾಹೇಬರವರು ಮಾರಚಾಲ್‌ನಲ್ಲಿ ಹಾಜರಾಗಿ ಯರುಶ ಯಾನೆ ಹಲ್ಲಾ ಮಾಡುವುದಕ್ಕೆ ಅಪ್ಪಣೆ ಕೊಟ್ಟರು. ಆಗ್ಯೆ ವಂದು ಘಂಟೆ ಹೊಡದುಯಿತ್ತು ಆಗ ಇಂಗ್ಲಿಷ್‌ನವರು ಗುಂಡು ಹೊಡಿಯುತ್ತಾ ನದಿ ವಳಗೆ ಬಂದರು ಮತ್ತು ಕೋಟೆ ಸಮೀಪ ಬಂದು ತಲ್ಪಿದರು ಆಗ ಹಲ್ಲಾ ಬಂದಿರುವದು ಸುಲ್ತಾನ್‌ರವರ ಕಡೆ ಅನೇಕ ಜನಗಳು ನೋಡಿ ಘಾಬರಿಯಿಂದ ಬುದ್ಧಿ ಸ್ವಾಧೀನ ತಪ್ಪಿ ಇತು ಮತ್ತು ಕೈಕಾಲುಗಳಲ್ಲಿ ನಡಗುವುಂಟಾಯಿತು ಬಂದೋಖ ತೋಫ್ ಹೊಡಿಯುವುದಕ್ಕೆ ಮರ್ತುಹೊದರು ಕೈಕಾಲುಗಳು ಬಹಳ ಸುಸ್ತ ಆಗಿದ್ದವು ಅಷ್ಟರಲ್ಲೇ ಸದ್ರಿ ಇಂಗ್ಲಿಷ್‌ನವರು ಕೋಟೆ ಮೇಲೆ ಹತ್ತಿ ತೊಫ ಬಂದೋಖಗಳು ವಿಶೇಷವಾಗಿ ಹೊಡಿಯುವುದಕ್ಕೆ ಷುರು ಮಾಡಿದರು ಇದಕ್ಕೆ ಮುಂಚೆಯೇ ಕೋಟೆ ಮೇಲೆ ಇದ್ದ ಜನಗಳು ನೋಡಿ ಘಾಬರಿ ಯಿಂದ ಬುದ್ಧಿಶೂನ್ಯವಾಯಿತು ಸದ್ರಿ ಇಂಗ್ಲಿಷ್‌ನವರು ಕೋಟೆ ಮೇಲೆ ಬಂದದ್ದು ನೋಡುತ್ತಾ ಅಲ್ಲಿ ಇದ್ದ ಶಿಪಾ ಜನಗಳು ಫರಾರಿ ಆದರು ಮತ್ತು ಆ ವೇಳೆದಲ್ಲಿ ಮೀರ ಮಯನೋದೀನ್

(page 169) ಮಹಂಮದ ಯ್ಸಿಮಾಯಿಲ್ ಮೀರಖಾಖಿನ್ ವಗೈರೆ ಸರದಾರಗಳು ಮತ್ತು ಶಿಪಾಯಿ ಜನಗಳು ಹೆಂಗಸರು ಮಕ್ಕಳು ಸಹ ಯೇಕ ಮಥದವರು ಕೂಡಿಬಂದು ಗುಂಡಿನ ಪೆಟ್ಟು ತಾಕಿ ಆ ಗಳಿಯಲ್ಲಿ ನಿದ್ದು ಮ್ರುತಪಟ್ಟರು ಆಗ ಟೀಪು ಸುಲ್ತಾನ್ ಗಾಜಿಯವರು ಈ ಜನಗಳ ಶ್ರವಗಳು ನೆತ್ರವು ನೋಡಿ ಪಶ್ಚಿಮ ದಿಕ್ಕಿ ಮುಖವಾಗಿ ನಿಂತು ದೇವರ ಸನ್ನಿಧಾನದಲ್ಲಿ ಯೆರಡು ಕೈಗಳು ಯೆತ್ತಿ ದೇವರ್ರು ನನ್ನ ಆಯಸ್ಸು ಯಿನ್ನು ಬಹಳವಾಗಿ ಯಿದ್ದರೆ ನಿನ್ನ ಕೃಪೆಯಿಂದ ಕಮ್ಮಿ ಮಾಡು ಸ್ವಾಮಿ ಮತ್ತು ಶಹಿದರ ದರಜೆ ಕೊಡು ದೇವರೇ ಮತ್ತು ಧ್ವೇಷ್ಕರು ಮತ್ತು ದುಶಮನರ ಕೈಯಲ್ಲಿ ಕೊಟ್ಟು ಖೈದಿ ಮಾಡಿ ಯಿಡಗೊಡೊಸಬ್ಯಾಡ ಯೆಂದು ದೇವರ ಸನ್ನಿಧಾನದಲ್ಲಿ ಪ್ರಾರ್ಥನೆ ಮಾಡಿ ಶಹಿದರ ಪದವಿ ಪಡೆಯುವದಕ್ಕೆ ದೇವರ ಧ್ಯಾನ ಮಾಡಿ ಮಹಲ್‌ನಿಂದ ಹೊರಿಕೆ ಹೊರಟು ಯಿದ್ದರು ಅದುವರಿಗೂ ಸೋಲ್ಜರ ಜನಗಳು ಬಂದು ಕೋಟೆ ಮೊದಲ್‌ನೇ ಬಾಗಲು ಸಮೀಪಕ್ಕೆ ಬಂದು ಯಿದ್ದರು ಆಗ ಸದರ್ರಿ – ಸೋಲ್ಜರುಗಳು ಬಂದು ರೂಬರ್ರೂ ನಿಂತ್ತಿರುವದು ಸುಲ್ತಾನ್‌ರವರು ನೊಡಿ ಈಗ ಶಹಿದ ಆಗುವ ಕಾಲ ಸಮೀಪಕ್ಕೆ ವದಗಿ ಬಂತೆಂದು ಯೊಚ್ಸಿ ತುಂಬಾ ಜವಾಮರ್ದಿಯಿಂದ ನಿಂತರು ಆಗ ರಾಜೆಖಾನ್‌ಯವರು ಅಪ್ಪಣೆ ಆದರೆ ಪಾದಶಾ ಯಾನೆ ಸುಲ್ತಾನ್‌ರವರು ದಯಮಾಡ್ಸುರುತ್ತಾರೆಂತ ಹೇಳುತ್ತೆನೆಂದು ವಿಜ್ಞಾಪನೆ ಮಾಡಿಕೊಂಡಿದ್ದರಿಂದ ಹೇಳಕೂಡದಂತೆ ಅಪ್ಪಣೆ ಆಯಿತ್ತು ಆ ವೇಳೆ ಸುಲ್ತಾನ್‌ರವರ ಸಂಗಡ ಆಗದುಲ್ಲಾಯಿ ರಾಜೆಖಾನ್ ಮುನಶಿ ಆಗದ್ ಅನವರ ಮತ್ತು ಕೆಲವು ಪ್ಯಾದೆ ಜನಗಳು ಮುತಫರಖಾತ ಜನಗಳು ಸಹ ಯಿದ್ದರು ಆಗ ಸದ್ರಿ ಸೋಲ್ಜರು ಜನಗಳು ನೋಡಿ ಹತ್ರ ಬರುವದಕ್ಕೆ ಅಪೇಕ್ಷೆ ಮಾಡಿದರು ಆದಾಗ್ಯು ಸುಲ್ತಾನ್‌ರವರ ಜವಾಮರ್ದಿ ನೋಡಿ ವಾಪ್ಸ ಹೊರ್ಟು ಹೋದರು ನಂತ್ರ ಹೊರಗೆ ಹೋಗಿ ಸದ್ರಿ ಸೋಲ್ಜರು ಜನಗಳು ಸುಲ್ತಾನ್‌ರವರ ಮೇಲೆ ಗುಂಡು ಹೊಡದರು ಆ ಬಾಣದ ಪೆಟ್ಟು ತಾಕಿ ಸದ್ರಿ ಸುಲ್ತಾನ್‌ರವರ ತಲೆ ಮೇಲೆ ವಂದು ಬಲವಾದ ಘಾಯವು

(page 170) ಆಯಿತು ಮತ್ತು ಟೀಪು ಸುಲ್ತಾನ್ ಗಾಜಿಯವರಿಗೆ ಶಹಿದ ಮಾಡಿದರು ಆ ವೇಳೆದಲ್ಲಿ ಸದ್ರಿ ಮುನಶಿ ಆಗದ್ದ ಅನವರ ವಗೈರೆ ಜನಗಳು ಸದ್ರಿ ಶಹಿದರ ಶ್ರವದ ಬಳಿ ಅತ್ರಾಫ ನಿಂತು ಅವರ ಪೈಕಿ ವಬ್ಬ ರಾಜೆಖಾನ್ ಮಾತ್ರ ಬಾಕಿ ನಿಂತರು ಮತ್ತು ಕುಂಪಣಿ ಶಿಪಾ ಜನಗಳು ಕೋಟೆ ಮೇಲೆ ಖಾಯಂ ಆದರು ಮತ್ತು ಕೋಟೆ ಮೇಲೆ ಕುಂಪಣಿಯವರ ಬಾವುಟೆ ಹೇರಿಶಿದರು ಆಮೇಲೆ ವಂದುವರೇ ದಿವ್ಸದವರಿಗು ಜನಗಳ ಸಾಮಾನುಗಳು ಲೂಟಿ ಮಾಡುವದಕ್ಕೆ ತಮ್ಮ ಫೌಜಿಗೆ ಅಪ್ಪಣೆ ಕೊಟ್ಟರು ಆಗ ಸದ್ರಿ ಜನಗಳ ಸಾಮಾನುಗಳು ಯಾವತ್ತು ನಾಶಮಾಡಿದರು ಮತ್ತು ಆಮೇಲೆ ಟೀಪು ಸುಲ್ತಾನ್‌ರವರ ಶ್ರವವನ್ನ ಮಂಣು ಮಾಡುವ ವುದ್ದಿಸ್ಯ ಮಿರ ಆಲಂ ವಗೈರೆ ಸರದಾರ ಜನಗಳು ಕೂಡಿ ರಿಯಾಸರ್ತ್ತಿನ ಕೆಲವು ಸರದಾರ ಜನಗಳು ಮತ್ತು ಖಾಜಿ ಸಾಹೇಬರವರಿಗೆ ಸಹ ಅಪೇಕ್ಷೆ ಮಾಡಿದರು ಆಗ ಆ ವಿಶಿಷ್ಟು ಜನಗಳು ಹಾಜರಾಗಿ ವಳ್ಳೆ ವುತ್ತಮವಾದ ಸಂಜರಖಾನಿಯಂಬ ಬಟ್ಟೆ ತರಶಿ ಮಥ ಪದ್ಧತಿ ಪ್ರಕಾರ ತಯಾರ ಮಾಡ್ಸಿದ್ದಲ್ಲದೇ ಧಾನ ಮಾಡುವ ವುದ್ದಿಸ್ಯ ಖಜಾನೆಯಿಂದ ಕೆಲವು ಹೊನ್ನು ರೂಪಾಯಿಗಳು ತರ್‍ಸಿದರು ಆಗ ಪಟ್ಣದ ಖಾಜ ಶಂಶದೀನ್‌ರವರು ತಮ್ಮ ಕೈಯಿಂದ ಸುಲ್ತಾನ್‌ರವರಿಗೆ ಅಭ್ಯಾಂಗನೆ ಮಾಡ್ಸಿ ಕಫನ್ ಏಂಬ ಬಟ್ಟೆ ವುಡಶಿ ಆಗ ವಿಶಿಷ್ಟು ರಿಯಾಸತ್ತಿನ ಹುದ್ದೇದಾರ ಅಹಲೇಕಾರ ಜನಗಳು ಕೂಡಿ ಸದ್ರಿ ಶ್ರವದ ಸಂಗಡ ಮಸೂದಿಗೆ ಹೋಗಿ ಮಥಪದ್ಧತಿ ಮ್ಯೇರಿಗೆ ನಮಾಜಮಾಡಿ ಲಾಲ್‌ಬಾಗನಲ್ಲಿ ಬಹಾದೂರ ಸಾಹೇಬರವರ ಗೋರಿಯಿದ್ದ ಬಳಿಗೆ ತೆಗೆದುಕೊಂಡು ಹೋಗಿ ಮತಘನ ಮಾಡಿದರು ಅನಂತ್ರ ಪಹಾ ಯೆಂಬ ಶಾಸ್ತ್ರವನ್ನು ವೋದಿ ದಫನ್ ಮಾಡಿದ ನಂತ್ರ ಸದ್ರಿ ಮೊಬಲಗು ಮಶಾಯಖ ಜನಗಳಿಗು ಗುರುಮಠಸ್ತಾನದ ಜನಗಳಿಗು ಫಕೀರ ಮತ್ತು ಗರೀಬ್ ಜನಗಳಿಗೆ ದಾನ ಕೊಟ್ಟರು ಆನಂತ್ರ ಜಿಯಾರತ್ತ ಯೆಂಬ ಮೂರು ದಿವ್ಸದ ತಿತಿಯು ಹತ್ತು ದಿವ್ಸದ್ದು ಯಿಪ್ಪತ್ತು ದಿವ್ಸ ಮತ್ತು ನಾಲವತ್ತು ದಿವ್ಸದ ತಿತಿಗಳು ಮಾಡುವದಕ್ಕೆ ಖಜಾನೆಯಿಂದ ಮೊಬಲಗು

ಟಿಪ್ಪುವಿನ ಮರಣದ ವರದಿ 1894 Illustrated London News ನಲ್ಲಿ

(page 171) ಕೊಟ್ಟರು ಅಂದ್ರೆ ಸದ್ರಿ ಕೋಟೆ ಹಲ್ಲಾ ಆದ ನಂತ್ರ ದಿವಾನ್ ಮೀರಸಾದಕ್ಕ್ ಕುದುರೆ ಮೇಲೆ ಸವಾರ ಆಗಿ ಹೈದರ ದರವಾಜಾ ಯೆಂಬ ಬಾಗಲು ಹೊರಗೆ ಹೋಗುತ್ತಾ ಯಿದ್ದರು ಆ ವೇಳೆದಲ್ಲಿ ವಬ್ಬ ಟಿಪದಾರ ಆ ಬಾಗಿಲಿನಲ್ಲಿ ಕತ್ತಿಯಿಂದ ಸದರಿ ಮೀರ ಸಾದಖನಿಗೆ ಕಡದು ಹಾಕಿದನು ಆದಾಗ್ಯು ಆ ವೇಳೆದಲ್ಲಿ ಸುಲ್ತಾನ್‌ರವರ ಮಕ್ಕಳು ಫತ್ತೆ ಹೈದರ ಮತ್ತು ಪೂರ್ಣೈನವರು ಕೆಲವು ಸವಾರ ಸಹ ಕರಿಕಟ್ಟದ ಸಮೀಪದಲ್ಲಿ ವಾಸವಾಗಿದ್ದರು ಆಗ ಫತ್ತೆ ಹೈದರವರು ಸುಲ್ತಾನ್‌ರವರು ಶಹಿದ ಆದ್ದು ಕೋಟೆ ತಮ್ಮ ಸ್ವಾಧೀನದಿಂದ ಹೋದ್ದು ವರ್ತಮಾನ ಕೇಳಿ ಖಮರುದಿನ್‌ಖಾನ್‌ರವರಿಗೆ ನೀವು ಫವುಜ ತೆಗೆದುಕೊಂಡು ನಮ್ಮ ಹತ್ರಕ್ಕೆ ಬರಬೇಕೆಂತ ಕಾಗದ ಬರದು ಕಳುಹ್ಸಿದರು ಅದುವರಿಗೂ ಸದರಿ ಖಾನ್ ಮಜ್ಕುರವರು ಸೊರಂಕೊಂಡೆ ಜಹಗೀರು ನನಗೆ ಕೊಟ್ಟರೆ ನಾನು ವಳಿಕೆ ಬರುತ್ತೆನೆಂಬುದಾಗಿ ಜನರಲ್ ಹಾರಿಸ್ ಸಾಹೇಬರವರಿಗೆ ಬರದು ಕಳಿಹ್ಸಿದರು ಆಗ ಸದ್ರಿ ಹಾರಿಸ್ ಸಾಹೇಬರವರು ತಮ್ಮ ಚಿತ್ತದಲ್ಲಿ ಯೋಚ್ಸಿದರು ಯೀ ಸರದಾರು ಬಹಳ ಜವಾಮರ್ದ ಬಹದೂರ ಯಿರುತ್ತಾರೆ ಅವರಿಗೆ ನಾಖುಷಿ ಮತ್ತು ಅಸಮಾಧಾನ ಮಾಡಿದ್ರೆ ಅಯಿಂದ ಫಿತೂರಿ ಮತ್ತು ಲಡಾ ಆಗಲು ಕಾರಣವಾಯಿತೆಂತ ಆ ಕೂಡ್ಲೆ ಸುರಂಕೊಂಡೆ ಶೀಮೆ ವಿಶಿಷ್ಟು ನಿಮಗೆ ಕೊಟ್ಟುಯಿಧೆಯೆಂತ ಸನದು ಬರದು ದಸ್ತಖತ್ತ ಮತ್ತು ಮೊಹರು ಮಾಡಿ ರವಾನೆ ಮಾಡಿದರು ತಾವು ಸೌಖ್ಯವಾಗಿದ್ದರು ಆಗ ಸದ್ರಿ ಖಾನ್‌ಮಜ್ಕುರವರು ಆ ಸನದು ನೋಡಿದ ಕೂಡ್ಲೆ ಕೋಟೆ ವಳಿಕೆ ದಾಖಲಾದರು ಆಮೇಲೆ ಸದ್ರಿ ಹಾರಿಸ್ ಸಾಹೇಬರವರು ಅನೇಕ ಯುಕ್ತಿ ಪ್ರಯತ್ನಗಳಿಂದ ಮತ್ತು ಭಯ ಕಾರಣಗಳು ತೋರಿಸಿ ಪೂರ್ಣೈಯ್ಯನವರಿಗೆ ಹೇಳಿಕಳುಹ್ಸಿದ್ದೇನೆಂದರೆ ಶಾಃಜಾದೆ ಯಾನೆ ಟೀಪು ಸುಲ್ತಾನ್‌ರವರ ಮಕ್ಕಳಿಗೆ ಹರ ತರದೂದ ಕೋಟೆಯಲ್ಲಿ ಕರತರಬೇಕು ಯಿಲ್ಲವಾದ್ರೆ ನಿನ್ನ ಮೇಲೆ ತಾರಾಜ ಯಾನೆ ನಾಶಮಾಡಿ ನಿನ್ನ ಹೆಂಗಸರು ಮಕ್ಕಳನ್ನ ಹಿಡದು ಸೋಲ್ಜರುಗಳಿಗೆ ಕೊಡುತ್ತೆನಂತೆ ಸದ್ರಿ ಪೂರ್ಣೈನವರ ಮಕ್ಕಳಿಗೆ ಕರಶಿ ಅಪ್ಪಣೆ ಮಾಡಿದರು – ಆಗ ಸದ್ರಿ ಪೂರ್ಣೈಯ್ಯನವರ ಮಕ್ಕಳು ತಮ್ಮ ತಂದೆಯವರಿಗೆ ಖಮರುದೀನ್‌ಖಾನ್‌ರು ಸುಲ್ತಾನ್‌ರವರ ಸಂಮಂಧಿಕರು ಮತ್ತು ದೌಲತ್ತಿಗೆ ಹಖದಾರು ಅವರು ಬಂದು ಇಂಗ್ಲಿಷ್‌ನವರಿಂದ ಕೂಡಿಯಿರುತ್ತಾರೆ. ನೀವು ಯಾತಗೋಸ್ಕರ ಹೊರಗೆ ಯಿರುತ್ತಿರಿ ಯಲ್ಲಾ ರಿಯಾಸತ್ತಿನ ಜನಗಳು ಕೂಡಿ ವಿಧೇಯರಾದರೆ ಹರಪ್ರಯತ್ನ ಶಾಃಜಾದೆಯವರಿಗೆ ಪುಸಲಾಶಿ ಕೋಟೆ ವಳಿಕೆ ಕಕರಶ

ಇದನ್ನೂ ಓದಿ: ಮಲಬಾರಿನಲ್ಲಿ ಟಿಪ್ಪು ಸುಲ್ತಾನ

(page 172) ಬೇಕು ಯಿಲ್ಲವಾದ್ರೆ ನಿಮ್ಮ (9) ಮಕ್ಕಳ ಪಾಪವು ನಿಮಗೆ ತಗಲುತ್ತಧೆ ಯೆಂದು ಕಾಗದ ಬರದು ಕಳುಹ್ಸಿದರು ಆಗ ಪೂರ್ಣೈಯ್ಯನವರು ಫತ್ತೆ ಹೈದರವರಿಗೆ ನೀವು ಕೋಟೆ ವಳಿಕೆ ದಯಮಾಡ್ಸಿದರೆ ನಿಮ್ಮ ಯೋಗ್ಯವಾದ ಬುದ್ಧಿ ನೋಡಿ ಸಂತೋಷಪಟ್ಟು ಸದ್ರಿ ಇಂಗ್ಲಿಷ್‌ನವರು ನಿಮ್ಮ ದೌಲತ್ತು ನಿಮಗೆ ವಹ್ಸಿಕೊಟ್ಟು ತಮ್ಮ ಶೀಮೆಗೆ ಹೊರಟುಹೋದಾರು ವಂದು ವೇಳೆ ನೀವು ಹೋಗದೆ ಯಿದ್ದರೆ ನಿಮ್ಮ ತಮ್ಮಂದಿರು ಸುಲ್ತಾನ್ ಮೊಹಧೀನ್ ಯಂಬವರಿಗೆ ರಿಯಾಸತ್ತು ಕೊಟ್ಟು ಹೋಗುತ್ತಾರೆ ಆ ವೇಳೆದಲ್ಲಿ ನಿಮ್ಮ ಅಹವಾಲು ಕರಿಂಖಾನ್‌ರವರ ಹಾಗೆ ಆದೀತೆಂತಲೂ ಮತ್ತು ಇಂಗ್ಲಿಷ್‌ನವರಿಗೆ ತಮ್ಮ ವೈರಿಯಾದ ಫರಾಶಿಶರವರಿಗೆ ಹಿಡಿಯಬೇಕಾದ ಅವಶ್ಯವಿತ್ತು ನಿಮ್ಮ ದೌಲತ್ತಿನಿಂದ ಅವರಿಗೆ ಯೇನು ಕೆಲ್ಸವಿಲ್ಲ ಯೀಗ ಅದರ ಖುಲಾಸೆ ಗೊತ್ತಾಯಿತು ಇಂತಾ ಕೆಲವು ಸಂಗತಿಗಳು ಹೇಳಿ ಭಯದ ಕಾರಣವು ತೋರ್ಸಿ ಫಸಲಾಯ್ಸಿ ಕೋಟೆ ವಳಿಕೆ ಕರತಂದರು ಆಗ ಸದ್ರಿ ಹಾರಿಸ್ ಸಾಹೇಬರವರು ಆ ಶಾಃಜಾದೆಯವರಿಗೆ ನಜರು ಬಂದಿಯಲ್ಲಿಟ್ಟರು ಆನಂತ್ರ ಕೆಲವು ದಿವ್ಸದ ಮೇಲೆ ರಾಜಾ ಸಾಹೇಬರವರಗೆ ಪಟ್ನದ ತಖತ್ತಮೇಲೆ ಕುಂಡ್ರಿಸಿ ಶಾಃಜಾದೆಯವರಿಗೆ ಸುಲ್ತಾನ್‌ರವರ ಕುಟುಂಬ ಸಮೇತ ಯಲುರಿಗೆ ರವಾನೆ ಮಾಡಿದರು ಮತ್ತು ಅವರಗಳಲ್ಲಿ ಪ್ರತಿವಬ್ಬ ಶಾಃಜಾದೆಯವರಿಗೆ ಸಾಲಿಯಾನ ಐವತ್ತು ಸಾವಿರ ರೂಪಾಯಿ ತಲಬು ಮೊಖರೂರು ಮಾಡಿದರು ಯಿದರ ಶಿವಾ ಅವರ ಕಡೆ ಕೆಲವು ಹೆಂಗಸರಿಗೆ ದೊಡ್ಡ ಮನುಷ್ಯರಿಗೊ ಮತ್ತು ಕೆಲವು ಜಖಮಿ ಜನಗಳಿಗೂ ತಲಬು ಗೊತ್ತುಮಾಡಿದ್ದಲ್ಲದೇ ಮತ್ತು ಮಸೂದಿ ಖಾಜಿ ವಗೈರೆ ಜನಗಳಿಗು ಮತ್ತು ನವಾಬ ಸಾಹೇಬರವರ ಸಂಮಜ ನೌಕರಗಳಿಗೆ ಮೊದ್ಲು ಸುಲ್ತಾನ್‌ರವರ ಕಾಲದಲ್ಲಿ ಯಾವ ಮೇರೆಗೆ ನಡಿಯುತ್ತಾ ಇತ್ತೊ ಅದರಂತೆ ಜಾರಿ ಮಾಡಿದರು ಮತ್ತು ಯಾರ ಮೇಲು ಮತ್ತೊಬ್ಬರು ಬಂದು ಜುಲುಂ ವಗೈರೆ ನಡ್ಸುವದಕ್ಕು ರಹಯಿಲ್ಲದಂತೆ ಕುಂಪಣಿಯವರು ಅ ಖಾ ಪಟ್ಟ ಮೂಲ್ಕ ಬಂದೋಬಸ್ತ ಮಾಡಿದರು ಮತ್ತು ಶೀಮೆಯಲ್ಲಿಯ ಕೋಟೆಗಳಲ್ಲಿ ಸಹ ಕುಂಪಣಿಯವರ ಠಾಣೆಗಳು ನೇಮಕವಾದವು ಮತ್ತು ಠಾಣೆಗಳು ಬೀಳುವುದಕ್ಕೆ ಕಾರಣವೇನೆಂದರೆ ಕೋಟೆ ಮಲಯುರು ಆದ ನಂತ್ರ ಫತ್ತೆ ಹೈದರ ಶಾಃಜಾದೆಯವರ್ರು

(page 173) ಪೂರ್ಣೈಯ್ಯನವರು ಸಹ ಸವಾರ ಜನಗಳ ತಮಾಂ ಫೌಜ ತೆಗೆದುಕೊಂಡು ಸನದ ಕಟ್ಟೆ ಬಳಿ ಬಂದು ವಾಸಮಾಡಿದರು ಮತ್ತು ಖಮರುದೀನ್‌ಖಾನ್‌ರವರ ಬರುವ ನೀರಿಕ್ಷಣೆ ಮಾಡುತ್ತಾ ಯಿದ್ದರು ಆ ವೇಳೆದಲ್ಲಿ ಮುಲ್ಕೆ ಜಹಾಖಾನ್ ವ್ರುಫ ದೊಡ್ಡ ಜಿ ಶಾಃಜಾದೆಯವರಲ್ಲಿ ಹಾಜರಾಗಿ ತಮ್ಮಂದರು ಬಸ್ತು ಸವಾರುಗಳು ನನ್ನ ತಾಬೆ ಮಾಡಿ ಚಿತ್ರದುರ್ಗಕ್ಕೆ ದಯಮಾಡ್ಸುವಣವಾದರೆ ವಿಶಿಷ್ಟು ಶೀಮಾ ಯಿನ್ನು ಹಾಗೆ ಯಿಧೆ ವಂದು ಪಟ್ಣದ ಕೋಟೆ ಮಾತ್ರ ಹೋಗಿರುತ್ತೆ ಯೇನು ಚಿಂತೆಯಿಲ್ಲ ದರೋಬಸ್ತ ಆಶಫಾಸ ಜನಗಳು ಅಮಲ್‌ದಾರುಗಳಿಂದ ಹಣ ತರಶಿ ಫವುಜ ಜಮಾಯ್ಸಬೇಕು ಮತ್ತು ಶೀಮೆಯಲ್ಲಿ ಅನೇಕ ಕಡೆ ಅಲ್ಲಲ್ಲಿ ಬಾಣಗಳು ಬಂದೋಖ ತೋಫಗಳು ಬಾರುತ್ತ ಗೊಲಾ ವಿಶೇಷವಿಧೆ ಆ ವಿಶಿಷ್ಟು ಹತ್ಯಾರಗಳು ತರಶಿ ಶಿಪಾಯಿ ಜನಗಳಿಗೆ ಕೊಡಬೇಕು ಮತ್ತು ಕಿಲ್ಲೇದಾರುಗಳಿಗೆ ಕೋಟೆ ಕೊಡಬಾರದು ಇಂಗ್ಲಿಷ್‌ನವರು ಬಂದರೆ ಅವರ ಸಂಗಡ ಲಡೈ ಮಾಡಬೇಕು ಈ ಮೇರೆಗೆ ಬಂದೋಬಸ್ತು ಮಾಡಬೇಕೆಂತಲೂ ಮತ್ತು ಮರಾಟೆಯವರಿಗೆ ಯಿಲ್ಲಿ ನಡದ ಅಹವಾಲು ಯಾವತ್ತು ಬರಿರ್ರಿ ಮತ್ತು ಅವರಿಂದ ಸ್ವಲ್ಪ ಕುಂಮಕು ಅಪೇಕ್ಷೆ ಮಾಡಿ ನಾನು ಅವೆಲ್ಲ ಸವಾರಗಳನ್ನ ಕರದುಕೊಂಡು ಘಟ್ಟದ ಕೆಳಗೆ ಹೋಗಿ ಚಿನಾಪಟ್ಣದ ಬಾಗಲುವರಿಗು ಯಲ್ಲಾ ಶೀಮೆ ತಾರಾಜ ಯಾನೆ ನಾಶ ಮಾಡುತ್ತೆನೆ ಯೆಂಬುದಾಗಿ ಹೇಳಿಕೊಂಡನು ಮತ್ತು ತಮಾಂ ಸವಾರುಗಳು ಪ್ಯಾದೆ ಜನಗಳ ಹುದ್ದೇದಾರು ಸಹ ಯಿದೇ ಮ್ಯೆರೆಗೆ ಹೇಳಿಕೊಂಡರು ಮತ್ತು ತಾವು ನಮ್ಮಗಳಿಗೆ ತಲಬು ವಗೈರೆ ಕೊಡಬ್ಯಾಡಿ ತಮ್ಮ ತಂದೆಯವರ ಪದವಿ ಹೊಂದಿ ಅವರ ಸ್ಥಾನಕ್ಕೆ ಸೇರಿದ ನಂತ್ರ ನಮ್ಮಗಳ ತಲಬ ಲೆಖ್ಕ ಮಾಡಿ ಕೊಡಬೇಕು – ಯಂತ ಮಾರುಜ ಮಾಡಿಕೊಂಡರು ಮತ್ತು ವಿಶಿಷ್ಟು ಶೀಮೆಯಲ್ಲಿ ಆಶಫರ್ರು ಫವುಜದಾರ ಕಿಲ್ಲೇದಾರ ಅಮಲ್ದಾರುಗಳು ವಗೈರ ಜನಗಳು ಫತ್ತೆ ಹೈದರರವರ ಹ್ಕುಂ ನಿರೀಕ್ಷಣೆ ಮಾಡುತ್ತಾಯಿದ್ದರು ಯಾ ಮೇರೆಗೆ ಆಗುವುದು ಯಾರೀಗು ನೆಲೆಯಿರಲಿಲ್ಲಾ ಆದ್ದರಿಂದ ಸದ್ರಿ ಫತ್ತೆ ಹೈದರವರು ಪೂರ್ಣೈಯ್ಯನವರ ಮಾತು ಕೇಳಿದರು ಯಾತಕ್ಕಂದರೆ ಹರ ವಂದು ಆಲೋಚನೆಗಳು ಸುಲ್ತಾನ್‌ರುವರ್ರು ಈ ಪೂರ್ಣೈಯ್ಯ

(page 174) ನವರಿಗೆ ಕೇಳಿ ನಡ್ಸುತ್ತಾಯಿದ್ದರು ಆದ್ದರಿಂದ ಸದ್ರಿಯವರ ಮನ ಯಿತಬಾರ್ರೆ ಮಾಡಿಕೊಂಡು ಕೋಟೆಯಲ್ಲಿ ಬಂದು ಶಿಕ್ಕಿಬಿಟ್ಟರು ಆಗ ಜನರಲ್ ಹಾರಿಸ್ ಸಾಹೇಬರವರು ಮಿರಸಜರ ಗುಲಾಮಲ್ಲಿಖಾನ್‌ರವರಿಗೆ ಕರಶಿ ಆಯಾ ಸ್ಥಳದಲ್ಲಿ ಕಿಲ್ಲೇದಾರ್ರುಗಳಿಗೆ ಕೋಟೆಗಳು ಯಾವತ್ತು ಬಿಟ್ಟುಬಿಡಿ ಯೆಂಬುದಾಗಿ ತಾಕಿತ್ತಗಳು ಬರ್ರಿಯಿರಿ ಯೆಂತ ಅಪ್ಪಣೆ ಆದ್ರಿಂದ ಸದರಿ ಮೀರಮೇರವರ್ರು ಅಲ್ಲಲ್ಲಿ ಕಿಲ್ಲೇದಾರರುಗಳಿಗೆ ದಾರಲ್‌ಸುಲ್ ತನಕ್ ಯಾನೆ ವಿಶಿಷ್ಟು ಶೀಮೆ ಇಂಗ್ಲಿಷ್ ಬಹಾದೂರವರ ತಾಬೇಯಲ್ಲಿ ಬಂದುಯಿಧೆ ಮತ್ತು ಸುಲ್ತಾನ್‌ರವರು ಶಹಿದ ಆಗಿರುತ್ತಾರೆ ಅವರ ಮಕ್ಕಳು ಖೈದನಲ್ಲಿರುತ್ತಾರೆ ಕುಂಪಣಿಯವರ ಕಡೆ ಜನಗಳು ಠಾಣೆಗಳು ಯಿಡುವುದಕ್ಕೆ ಬರುತ್ತಾರೆ ನೀವು ಕೋಟೆ ಮತ್ತು ಸರ್‍ಕಾರದ ಸರಂಜಾಮ ಅವರ ತಾಬೆ ಮಾಡಿ ನಿಮ್ಮ ಸಾಮಾನುಗಳು ತೆಗೆದುಕೊಂಡು ಹೊರ್‍ಟುಹೋಗರಿ ಯಂಬದಾಗಿ ಹ್ಕುಂ ಬಂತು ಆದರಿಂದ ಶೀಮೆಯು ಕೋಟೆಯು ಸಹ ಇಂಗ್ಲಿಷ್‌ನವರ ಸುಫರ್ದು ಆಯಿತ್ತು ಆಗ ಫತ್ತೆ ಹೈದರವರು ಕೋಟೆ ವಳಿಕ್ಕೆ ಬರುವಾಗ್ಯೆ ಮುಲಕೆ ಬಹಾರಖಾನ್‌ರವರಿಗೆ ವಂದು ಕುದುರೆ ಮತ್ತು ಕೆಲವು ಮೊಬಲಗು ಖರ್ಚಿಗೆ ಕೊಟ್ಟರು ಖಸ್ತು ಮಾಡಿದರು ಮತ್ತು ತಮಾಂ ಸವಾರಗಳಿಗೆ ರಜಾ ಕೊಟ್ಟರು ಯೀ ಕೆಲ್ಸ ಆಗುವದರಿಂದ ವಿಶಿಷ್ಟು ಶೀಮೆಯಲ್ಲಿ ಇಂಗ್ಲಿಷ್‌ನವರ ಹ್ಕುಂನದು ಸ್ವಾಧೀನಕ್ಕೆ ಬಂತು – ಶಿವಾ ಸುಲ್ತಾನ್‌ರವರ ಕಾಲದ ಲೆಖ್ಕ ಪತ್ರಗಳ ದಪ್ತರಳು ಸುಡಶಿ ಹೊಸ ದವಲತ್ತು ಹೊಸ ಅಪ್ಪಣೆ ಜಾರಿಯಲ್ಲಿ ತಂದರು ಆದ್ದರಿಂದ ವಿಶಿಷ್ಟು ಶೀಮೆ ಜನಗಳು ರೈತರು ಖುಶಬಾಶ ವಗೈರೆ ಜನಗಳು ತುಂಬಾ ಖುಷಿಯಿಂದ ತಮ್ಮ ಕಾಲವನ್ನು ಕಳಿಯುತ್ತಾ ಯಿದ್ದಾರೆ—

ಈ ವರ್ತಮಾನ ಪಟ್ಣದ ರಾಜರವರದು ಮತ್ತು ನವಾಬ ಹೈದರ ಅಲಿ ಖಾನ್ ಬಹಾದೂರದು ಮ ಮತ್ತು ಟೀಪು ಸುಲ್ತಾನ್ ಬಾದಾಶಾಃ ಗಾಜಿಯವರದು ಸಹ ಕರ್ನಲ್ ಮಖ ಸಾಹೇಬ ಬಹಾದೂರ ಸಾಹೇಬರವರ ಅಪ್ಪಣೆ ಮೇರೆಗೆ ಫಾರಶಿ ಇಂದ ತಯಾರ್‍ಮಾಡಿ ತವಾರಿಬ ಹೈದರ ಅಂದರೆ ಈ ಕಿತಾಬಿನ ಹೆಸರು ಯಿಟ್ಟರು ಈ ಹೈ

(page 175) ದ ನಾಮಾ ಯೆಂಬವದಕ್ಕೆ ಹಿಂದುಸ್ತಾನಿಯಿಂದ ತರ್ಜುಮೆ ಮಾಡುವದಕ್ಕಡ ರಿಚರಡ ಹಾರಿಸ್‌ಹಾರ್ಸೆ ಸಾಹೇಬರವರು ಸಹ ಯೀ ಸಂಗತಿಗಳ್ಯಾವತ್ತು ತಿಳದು ನೋಡುವ ವುದ್ದಿಸ್ಯ ತಮ್ಮ ಮುನಶಿ ಮಹಮ್ಮದ್ ಖಾಶಿಂರವರಿಗೆ ಅಪ್ಪಣೆ ಮಾಡಿ ದಖನಿ ಮಾಷೆಯಿಂದ ತರ್ಜುಮಾ ಮಾಡ್ಸಿದರು ಯಿದರಲ್ಲಿ ಯನಾದ್ರು ತಪ್ಪತ ತೋರಬಂದರೆ ವೋದಿಕೊಳ್ಳುವ ಸಾಹೇಬರ್ರು ದುರುಸ್ತು ಮಾಡಿಕೊಳ್ಳಬೇಕು ಮತ್ತು ಆಕ್ಷೇಪಣೆ ಮಾಡಬಾರದು ಗುಲಾಂ ಮಹಮ್ಮದ ಜುನೈದಿಯ ಜಂಗನಾಮ ಅಂದರೆ ಈ ಪುಸ್ತಕವು ಮಿಸಕಿಂನ್ ನಶಿರುದಿಂನ್‌ರವರು ಬರಿಯಲ್‌ಪಟ್ಟದ್ದು ನಗರದ ಖಾಜಿ ನಶಿರುದೀಂನ್ ಸಾಹೇಬರವರು ಬರಿಯಲ್ಲಟ್ಟದು—–

ಈ ಕಿತಾಬ ಹಿಂದುಸ್ತಾನಿ ಭಾಷೆಯಿಂದ ಯಿದ್ದದನ್ನ ವೊದ್ಸಿ ಕೀಳಿ ದಿವ್ಯಚಿತ್ತಕ್ಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...