Homeಮುಖಪುಟಕೆಲಸಕ್ಕಾಗಿ ಇಂಟರ್ ವ್ಯೂ ನೀಡುವಾಗ ನೀವು ವಹಿಸಲೇಬೇಕಾದ ಎಚ್ಚರಿಕೆಗಳು

ಕೆಲಸಕ್ಕಾಗಿ ಇಂಟರ್ ವ್ಯೂ ನೀಡುವಾಗ ನೀವು ವಹಿಸಲೇಬೇಕಾದ ಎಚ್ಚರಿಕೆಗಳು

- Advertisement -
- Advertisement -

ಜೀವನ ಕಲೆಗಳು: ಅಂಕಣ-25

ಕೆಲಸದ ಸಂದರ್ಶನ ನೀಡುವ ಕಲೆ

ಇತ್ತೀಚೆಗೆ ಕೆಲಸಗಳು ಸಿಗುವುದು ಕಷ್ಟಕರವಾಗುತ್ತಿದ್ದು, ಒಂದು ಹುದ್ದೆಗೆ ಸಾವಿರವೋ, ಲಕ್ಷವೋ ಅರ್ಜಿಗಳು ಬರುತ್ತವೆ. ಸಂದರ್ಶನಕ್ಕೆ ಕರೆದ ಕಂಪನಿಗಳು ಅರ್ಜಿಯ ಶುಲ್ಕದಿಂದಲೇ ಕೋಟಿಗಟ್ಟಲೆ ಸಂಗ್ರಹಿಸಿ, ನಿರುದ್ಯೋಗಿ ಯುವಕರ ಕುಟುಂಬಗಳನ್ನು ನಿರ್ದಾಕ್ಷಿಣ್ಯವಾಗಿ ಸುಲಿಯುತ್ತವೆ. ಒಂದು ವೇಳೆ ಸಂದರ್ಶನಕ್ಕೆ ಕರೆ ಬಂದರೂ, ಕೇವಲ ಅರ್ಧ ಅಥವಾ ಒಂದು ನಿಮಿಷದಲ್ಲಿ, ಕಂಪನಿಯ ಹಿರಿಯ ಅಧಿಕಾರಿಗಳು, ನಾಲ್ಕಾರು ಪ್ರಶ್ನೆ ಕೇಳಿ, ಮುಂದಿನ ಅಭ್ಯರ್ಥಿಯನ್ನು ಒಳಗೆ ಕಳುಹಿಸಿ ಎಂದು ಹೇಳಿ ನೌಕರಿ ಕೇಳಲು ಬಂದ ಯುವಜನರನ್ನು ಸಾಗಹಾಕುತ್ತಾರೆ. 1 ನಿಮಿಷದಲ್ಲಿ ಒಬ್ಬ ಯುವಕನ/ಯುವತಿಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಒಳಗೆ ಕುಳಿತಿರುವ ಅಧಿಕಾರಿಗಳಿಗೆ ಹೇಗೆ ಸಾಧ್ಯ, ಸಂದರ್ಶನವೆಲ್ಲಾ ಕೇವಲ ತೋರ್ಪಡಿಕೆ, ಕೆಲಸ ಯಾರಿಗೋ ಮೊದಲೇ ಒಳಗಿಂದೊಳಗೆ ಇತ್ಯರ್ಥವಾಗಿರುತ್ತದೆ ಎಂದು ನಿಮಗೆ ಅನಿಸಿಕೆ ಇರಬಹುದು.

ಹಾಗಾದರೆ ಯುವಕರು ಕೆಲಸಕ್ಕೆ ಅರ್ಜಿ ಸಲ್ಲಿಸಿ, ಪ್ರಾಮಾಣಿಕವಾಗಿ ಕೆಲಸ ಗಿಟ್ಟಿಸಿಕೊಳ್ಳುವುದನ್ನು ಖಾತರಿ ಪಡಿಸಿಕೊಳ್ಳುವುದು ಹೇಗೆ?

ಬಹುಶಃ ನೀವು ದಿನಾ ಟಿವಿ/ರೇಡಿಯೋ ನೋಡುತ್ತೀರಿ/ಕೇಳುತ್ತೀರಿ ಮತ್ತು ಅದರಲ್ಲಿ ಬರುವ ಎಷ್ಟೋ ಜಾಹಿರಾತುಗಳು ಚಿಕ್ಕಂದಿನಿಂದ ನಿಮ್ಮ ಗಮನ ಸೆಳೆದಿವೆ ಎಂದು ನಂಬಿದ್ದೇನೆ. ಸರಾಸರಿ ಒಂದು ಜಾಹಿರಾತಿನ ಸಮಯ ಎಷ್ಟಿರುತ್ತದೆ ಎಂದು ನಿಮಗೆ ಗೊತ್ತೇ? ಕೇವಲ 10 ಸೆಕೆಂಡು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ಇದಕ್ಕಿಂತ ಹೆಚ್ಚಿನ ಸಮಯದ ಜಾಹಿರಾತುಗಳೂ ಬರುತ್ತವೆ ಆದರೆ ಅವಕ್ಕೆ ಪ್ರತಿ ಹತ್ತು ಅಥವಾ ಐದು ಸೆಕೆಂಡಿಗೆ ಇನ್ನಷ್ಟು ಹಣ ಕಂಪನಿಯವರು ಟಿವಿ/ರೇಡಿಯೋ ರವರಿಗೆ ತೆರಬೇಕು.

ಕೇವಲ 10 ಸೆಕೆಂಡು? ಇಷ್ಟು ಕಡಿಮೆ ಸಮಯದಲ್ಲಿ ಒಂದು ವಸ್ತುವಿನ ಬಗ್ಗೆ ಗ್ರಾಹಕರ ಮನದಲ್ಲಿ ಛಾಪು ಮೂಡಿಸುವಂತೆ ಸಂದೇಶ ತಲುಪಿಸಲು ಸಾಧ್ಯವೇ ಎಂದು ನಿಮಗೆ ಅನಿಸಬಹುದು. ಆದರೆ ಅದು ದಿನನಿತ್ಯ ನಡೆಯುತ್ತಿರುತ್ತದೆ.  ಅದೇ ಒಂದು ನಿಮಿಷದಲ್ಲಿ, ಹತ್ತು ಸೆಕೆಂಡುಗಳ ಆರು ಟಿವಿ ಜಾಹಿರಾತು ನಿಮ್ಮ ಬಗ್ಗೆಯೇ ಇದ್ದರೆ, ನಿಮ್ಮ ಬಗ್ಗೆ ಒಳ್ಳೆಯ ಪ್ರಚಾರ ಮಾಡುವಂತಿದ್ದರೆ, ನಿಮ್ಮ ಕೆಲಸ ಗ್ಯಾರಂಟಿ ಪಡಿಸಿಕೊಳ್ಳಬಹುದು ಎಂದು ನಿಮಗೆ ಅನಿಸುವುದಿಲ್ಲವೇ?

ಇಲ್ಲಿದೆ ಕೆಲವು ಸುಲಭ ಉಪಾಯ.

ಸಂದರ್ಶನಕ್ಕೆ ಬಂದಾಗ ನಿಮ್ಮ ಹಸ್ತಲಿಖಿತ ಅರ್ಜಿ ಜೊತೆಯಲ್ಲಿ ತಂದಿದ್ದರೆ, ಅಥವಾ ಅದನ್ನು ಕಂಪನಿಗೆ ಮುಂಚಿತವಾಗಿ ಕಳುಹಿಸುವಾಗ, ಅದರಲ್ಲಿ ಯಾವುದೇ ತಪ್ಪು, ತಿದ್ದುಪಡಿಗಳಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಅಕ್ಷರ ಕೆಟ್ಟದಾಗಿರುವ, ತಪ್ಪು-ತಿದ್ದುಪಡಿ ಇರುವ ಲಿಖಿತ ಅರ್ಜಿಗಳು ನಿಮ್ಮ ಸ್ವಯಂನಿರ್ಮಿತ ನೇಣುಗಂಬ.

ಸಂದರ್ಶನಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿ. ಸಂದರ್ಶನದ ಸಮಯ ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ಎಂದು ಇದ್ದಲ್ಲಿ, ನೀವು ಬೆಳಿಗ್ಗೆ 9.00ರ ಮುಂಚೆ ಸ್ಥಳದಲ್ಲಿರಿ. ನಿಮ್ಮ ಆಗಮನದ ಸಮಯವನ್ನು ಎಲ್ಲೋ ಒಂದು ಕಡೆ ಗುರುತು ಹಾಕಿಕೊಳ್ಳಲಾಗಿರುತ್ತದೆ. ನಿಮ್ಮ ಸಮಯ ಪ್ರಜ್ಞೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಯಾರೋ ನೋಂದಾಯಿಸಿಕೊಳ್ಳುತ್ತಿರುತ್ತಾರೆ.

ಸಂದರ್ಶನಕ್ಕೆ ಬಂದಾಗ ನಿಮ್ಮ ವೇಷಭೂಷ ಕೆಲಸಕ್ಕೆ ತಕ್ಕಂತೆ ಇರಲಿ. ನಿಮ್ಮ ವೇಷಭೂಷ, ಹಾವಭಾವ ನಿಮಗಿಂತ ಹೆಚ್ಚು ಮಾತನಾಡುತ್ತವೆ. ನೀವು ಕಾಯಲು ಕುಳಿತಿರುವ ಶೈಲಿಯೂ ನಿಮ್ಮ ಬಗ್ಗೆ ಸಾರಿ ಹೇಳುತ್ತಿರುತ್ತದೆ.

ಎಲ್ಲರೂ ಒಂದೆಡೆ ಗುಂಪಾಗಿ ಕುಳಿತಿರುವಾಗ, ನೀವು ದೂರದಲ್ಲಿ ಒಂಟಿ ಕುರ್ಚಿಯಲ್ಲಿ ಹೋಗಿ ಕುಳಿತುಕೊಳ್ಳಬೇಡಿ. ಇದೂ ನಿಮ್ಮ ಬಗ್ಗೆ ಅಪಪ್ರಚಾರ.

ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳು ಕಾಯಲು ವಿಶಾಲವಾದ ಕೊಠಡಿಯಲ್ಲಿ ಕುರ್ಚಿಗಳ ವ್ಯವಸ್ಥೆ ಇದೆ ಮತ್ತು ಅಲ್ಲಿ ಹೋಗಿ ಕೂತು, ಕಾಯಲು ನಿಮಗೆ ತಿಳಿಸಲಾಗಿದೆ ಎಂದುಕೊಳ್ಳಿ, ಆಗ ಅದನ್ನು ಬಿಟ್ಟು ಬೇರೆ ಸ್ಥಳದಲ್ಲಿ ನಿಂತು, ಬೇರೆ ಕೊಠಡಿಗಳಲ್ಲಿ ಇಣುಕಿ, ನಿಮ್ಮ ಮುಖ ತೋರಿಸಲು ಹೋಗಬೇಡಿ. ಇದೂ ಸಹ ನಿಮ್ಮ ಬಗ್ಗೆ ಅಪಪ್ರಚಾರವಾಗುತ್ತದೆ.

ಕಾಯುವ ಕೊಠಡಿ (ವೇಟಿಂಗ್ ರೂಂ) ನಲ್ಲಿ ಒಂದೆಡೆ ಕುಡಿಯುವ ನೀರು ಇಡಲಾಗಿದೆ ಮತ್ತು ಕುಡಿದ ಲೋಟ ಎಸೆಯಲು ಕಸದ ಪೆಟ್ಟಿಗೆ ಇದ್ದರೆ ಅದರಲ್ಲಿ ಸರಿಯಾಗಿ ಕಸವನ್ನು ಹಾಕಿ, ಇನ್ನೆಲ್ಲೋ ಎಸೆಯಬೇಡಿ.

ಅಲ್ಲಿ ನೀರು ಕುಡಿಯಲು ಲೋಟ ಇಟ್ಟಿಲ್ಲ ಎಂದುಕೊಳ್ಳಿ, ಎಲ್ಲರೂ ಮುಖ-ಮುಖ ನೋಡಿಕೊಳ್ಳುತ್ತಾ ಕುಳಿತಿರಬೇಡಿ, ನೀವು ಮೊದಲ ಹೆಜ್ಜೆ (ಇನಿಷಿಯೇಟಿವ್) ತೆಗೆದುಕೊಂಡು, ನೀರಿನ ಲೋಟ ಬೇಕೆಂದು ಸ್ವಾಗತಕಾರರ ಕಚೇರಿಯಲ್ಲಿ ಕೇಳಿ, ತಂದಿಡಿ.

ಕಾಯುವ ಕೊಠಡಿಯಲ್ಲಿ ಒಂದು ತಟ್ಟೆಯಲ್ಲಿ ಚಾಕಲೇಟ್ ಇಟ್ಟಿದ್ದಾರೆ ಮತ್ತು ಅಲ್ಲಿ ಅದನ್ನು ನೋಡಿಕೊಳ್ಳಲು ಯಾರೂ ಇಲ್ಲಎಂದುಕೊಳ್ಳಿ. ಸಮಯ ನೋಡಿ ಒಂದಿಷ್ಟು ಚಾಕಲೇಟ್ ನಿಮ್ಮ ಕಿಸೆಗೆ ಸೇರಿಸಿಕೊಳ್ಳಬೇಡಿ. ಮೊದಲೇ ತಿಳಿಸಿದಂತೆ ಕಾಣದ ಕಣ್ಣುಗಳು ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸುತ್ತಿರುತ್ತವೆ.

ನೀವು ಕೆಲಸಕ್ಕೆ ಅರ್ಜಿ ಹಾಕಿರುವ ಕಂಪನಿಯ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿ, ಅವರ ಸಾಧನೆಗಳೇನು, ಅವರ ಶಕ್ತಿ ಏನು, ಅವರ ದುರ್ಬಲತೆ ಏನು ಎಂಬ ಬಗ್ಗೆ ಅಥವಾ ಅವರು ಇರುವ ಕ್ಷೇತ್ರದ ಮುನ್ನೋಟ ಏನು ಎಂಬುದರ ಬಗ್ಗೆ ಅಂತರ್ಜಾಲ ಶೋಧಿಸಿ ತಿಳಿದುಕೊಳ್ಳಿ. ಎಷ್ಟೋ ಬಾರಿ ಕಂಪನಿಯ ಈ ರೀತಿಯ ಮಾಹಿತಿ ಪತ್ರಗಳನ್ನು ಸಂದರ್ಶನದ ಕಾಯುವ ಕೊಠಡಿಯಲ್ಲಿ ಇಟ್ಟಿರುತ್ತಾರೆ ಅಥವಾ ಫಲಕದಲ್ಲಿ ಹಾಕಿರುತ್ತಾರೆ. ಅದನ್ನು ಗಮನವಿಟ್ಟು ಓದಿ.

ಸಂದರ್ಶನ ಒಂದು ವ್ಯಾವಹಾರಿಕ ಭೇಟಿ, ಅಲ್ಲಿ ನಿಮ್ಮ ನೆಂಟಸ್ತನ ತೋರಿಸಲು ಹೋಗಬೇಡಿ, ನನಗೆ ಅವರು ಗೊತ್ತು, ಇವರು ಗೊತ್ತು, ಅವರು ನನ್ನ ಸಂಬಂಧಿ ಎಂಬ ಅನಾವಶ್ಯಕ ಬುರುಡೆ ಬಿಡಬೇಡಿ.

ಹೆಚ್ಚು ಮಾತನಾಡಬೇಡಿ, ಸಕ್ರಿಯವಾಗಿ ಕೇಳಿಸಿಕೊಳ್ಳುವುದನ್ನು ಕಲಿಯಿರಿ.

ಕೆಲಸ ನಿಮಗೆ ಅತ್ಯವಶ್ಯಕವಾಗಿದೆ, ಇಲ್ಲದಿದ್ದರೆ ನೀವು ಉಪವಾಸ ಸಾಯುವ ಪರಿಸ್ಥಿತಿ ಇದೆ ಎಂದು ಖಂಡಿತಾ ಹೇಳಬೇಡಿ. ಯಾರೂ ಕನಿಕರ ತೋರಿಸಿ ನಿಮಗೆ ನೌಕರಿ ನೀಡುವುದಿಲ್ಲ.

ಸಂದರ್ಶನಕ್ಕೆ ಬೆಳಿಗ್ಗೆ ಕರೆದು, ಸಂಜೆಯ ತನಕ ಕಾಯಿಸಿದರು ಎಂದುಕೊಳ್ಳಿ, ನಿಮ್ಮ ಕೋಪ, ಹಸಿವು, ತಾಪದ ಮನಃಸ್ಥಿತಿಯನ್ನು ಸಂದರ್ಶನಕಾರರ ಮೇಲೆ ತೀರಿಸಿಕೊಳ್ಳಬೇಡಿ. ಬಡವನ ಸಿಟ್ಟು ದವಡೆಗೆ ಮೂಲ ಎಂಬ ಗಾದೆ ಕೇಳಿರಬಹುದು. ಅಭ್ಯರ್ಥಿಗಳನ್ನು ಕಾಯಿಸುವುದು ಅವರ ಪ್ರತಿಕ್ರಿಯೆ/ನಡವಳಿಕೆ ತಿಳಿದುಕೊಳ್ಳುವ ಒಂದು ವಿಧಾನ.

ಕಂಪನಿಯ ಬಗ್ಗೆ, ಕೆಲಸದ ಬಗ್ಗೆ ನಿಮಗೆ ಹೆಚ್ಚು ಗೊತ್ತಿಲ್ಲದಿದ್ದಲ್ಲಿ ಅಥವಾ ಕೆಲಸದ ಸಮಯ, ಸಂಬಳ ಇತ್ಯಾದಿಗಳ ಬಗ್ಗೆ ಬೇಕಿದ್ದರೆ, ನೀವೂ ಪ್ರಶ್ನೆ ಕೇಳಿ. ಪ್ರಶ್ನೆ ಕೇಳುವ ಅಧಿಕಾರ ನಿಮಗೂ ಇದೆ. ಆದರೆ ಸೌಜನ್ಯಪೂರ್ವಕವಾಗಿ ಮಾತನಾಡಿ.

ನಿಮ್ಮ ಬಗ್ಗೆ ನಿಮಗೇ ಸರಿಯಾದ ಅರಿವು ಇರಲಿ. “ನಿಮ್ಮ ಬಗ್ಗೆ ಏನಾದರೂ ಹೇಳಿ” ಎಂದು ಸಂದರ್ಶನಕಾರರು ಕೇಳಿದಾಗ ಕಕ್ಕಾಬಿಕ್ಕಿಯಾಗಬೇಡಿ. ನಿಮ್ಮ ಶಕ್ತಿಗಳ ಬಗ್ಗೆ, ಆಸಕ್ತಿ, ಆಕಾಂಕ್ಷೆಗಳ ಬಗ್ಗೆ ತಿಳಿಸಿ. ನೀವಾಗೇ ಹೇಳದಿದ್ದರೂ, ನಿಮ್ಮ ದೌರ್ಬಲ್ಯವೇನು ಎಂಬುದನ್ನು ತಿಳಿದುಕೊಳ್ಳುವ ಸಾಮರ್ಥ್ಯವನ್ನು ಅವರು ಇಟ್ಟುಕೊಂಡಿರುತ್ತಾರೆ, ಹಾಗಾಗಿ ಅವರೇ ಮುಂದಾಗಿ ನಿಮ್ಮ ದೌರ್ಬಲ್ಯದ ಬಗ್ಗೆ ಕೇಳಿದಲ್ಲಿ ಅದನ್ನು ನೀವು ಹೇಗೆ ಹೋಗಲಾಡಿಸಿಕೊಳ್ಳುತ್ತೀರಿ ಎಂಬುದರ ಬಗ್ಗೆ ತಿಳಿಸಿ.

ಸಾವಿರ ಅರ್ಜಿದಾರರ ಪೈಕಿ ಕೆಲಸ ಪಡೆದ ಏಕೈಕ ಅಭ್ಯರ್ಥಿ ನೀವಾಗಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...