Homeಮುಖಪುಟಮುಸ್ಲಿಂ ಮಹಿಳೆಯರ ಅವಹೇಳನ: ಕಲ್ಲಡ್ಕ ಭಟ್‌ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

ಮುಸ್ಲಿಂ ಮಹಿಳೆಯರ ಅವಹೇಳನ: ಕಲ್ಲಡ್ಕ ಭಟ್‌ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

- Advertisement -
- Advertisement -

ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಅವರ ಜಾಮೀನು ಅರ್ಜಿಯ ಆದೇಶವನ್ನು ಶ್ರೀರಂಗಪಟ್ಟಣ ನ್ಯಾಯಾಲಯ ಜನವರಿ 17ಕ್ಕೆ ಕಾಯ್ದಿರಿಸಿದೆ.

ಪ್ರಭಾಕರ್‌ ಭಟ್‌ ಜಾಮೀನು ಅರ್ಜಿಯ ವಿಚಾರಣೆಯನ್ನು ಶ್ರೀರಂಗಪಟ್ಟಣದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಾಲ ಕೃಷ್ಣ ರೈ ಟಿ ಅವರು ಬುಧವಾರ ನಡೆಸಿದರು.

ದೂರುದಾರೆ ನಜ್ಮಾ ನಝೀರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್‌. ಬಾಲನ್‌ ಅವರು, “ಪ್ರಕರಣದ ವಾಸ್ತವಿಕ ಅಂಶಗಳನ್ನು ಪರಿಗಣಿಸಿದರೆ ಮೇಲ್ನೋಟಕ್ಕೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಸೆಕ್ಷನ್‌ 13 ಮತ್ತು ಕೋಕಾ ಕಾಯ್ದೆಯ ನಿಬಂಧನೆಗಳು ಅನ್ವಯಿಸುತ್ತವೆ. ಯಾವುದೇ ಕೋನದಿಂದ ನೋಡಿದರೂ, ಅರ್ಜಿದಾರ ಭಟ್‌ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸಬೇಕಿದೆ. ಅಲ್ಲದೇ, ದೇಶದ ಸಮಗ್ರತೆ, ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಮಾಡುವ ವಸ್ತುಗಳನ್ನು ಅವರಿಂದ ವಶಕ್ಕೆ ಪಡೆಯಬೇಕಿದೆ. ಮೇಲ್ನೋಟಕ್ಕೆ ಮಧ್ಯಂತರ ಜಾಮೀನು ಪಡೆಯಲು ಅವರು ಅರ್ಹರಲ್ಲ” ಎಂದು ಜಾಮೀನಿಗೆ ವಿರೋಧ ದಾಖಲಿಸಿದರು.

ಪ್ರಸ್ತುತ ಇಸ್ಲಾಮೋಫೋಬಿಕ್ ವಾತಾವರಣದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಆಧಾರದ ಮೇಲೆ ರಾಷ್ಟ್ರೀಯ ಅಭಿಪ್ರಾಯ ರೂಪಿಸಲು ಅರ್ಜಿದಾರರು ಬಯಸಿದ್ದಾರೆ. ಮುಸ್ಲಿಮರನ್ನು ಅತಿಮಾನುಷವಾಗಿ ಬಿಂಬಿಸುವ ಉದ್ದೇಶವನ್ನು ಹೊಂದಿದ್ದಾರೆ. ಭಟ್‌ ಅವರ ಭಾಷಣವು ಮುಸ್ಲಿಂ ಸಮುದಾಯವನ್ನು ನಿಂದಿಸುವ ಅವರ ಪ್ರಾಥಮಿಕ ಉದ್ದೇಶವನ್ನು ಸೂಚಿಸುತ್ತದೆ ಎಂದು ಆಕ್ಷೇಪಿಸಿದರು.

ಪ್ರಭಾಕರ್‌ ಭಟ್‌ ಪರವಾಗಿ ವಾದಿಸಿದ ವಕೀಲ ಚಂದ್ರೇಗೌಡ ಅವರು, “ತಮ್ಮ ಕಕ್ಷಿದಾರರ ವಿರುದ್ಧ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಸೆಕ್ಷನ್‌ಗಳು ಅನ್ವಯಿಸುವುದಿಲ್ಲ. ದೂರುದಾರೆಯು ನೊಂದ ಮಹಿಳೆಯಲ್ಲ. ಭಟ್‌ ಅವರಿಗೆ 82 ವರ್ಷ ವಯಸ್ಸಾಗಿದ್ದು, ಹೃದಯ ಶಸ್ತ್ರಚಿಕಿತ್ಸೆಯಾಗಿದೆ. ಭಟ್‌ ಅವರು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿದ್ದು, ಅವರ ವಿರುದ್ಧ ದೂರು ನೀಡಿದರೆ ಪ್ರಚಾರ ಪಡೆಯಬಹುದು ಎಂಬ ದುರುದ್ದೇಶವಿದೆ. ಭಟ್‌ ಅವರ ಭಾಷಣದಲ್ಲಿ ಕೋಮು ದ್ವೇಷ ಹರಡುವ ಅಥವಾ ಸೃಷ್ಟಿಸುವ ಉದ್ದೇಶವಿಲ್ಲ. ಘಟನೆ ನಡೆದ ಹಲವು ದಿನಗಳ ಬಳಿಕ ದೂರು ನೀಡಲಾಗಿದೆ ಎಂದು ಸಮರ್ಥಿಸಿದರು.

ಶ್ರೀರಂಗಪಟ್ಟ ಪೊಲೀಸರ ಪರವಾಗಿ ವಾದಿಸಿದ ಸರ್ಕಾರಿ ಅಭಿಯೋಜಕರು, ಆರೋಪಿಯ ವಿರುದ್ಧ ಅನ್ವಯಿಸಿರುವ ಸೆಕ್ಷನ್‌ಗಳು ಗಂಭೀರ ಸ್ವರೂಪದ್ದಾಗಿವೆ. ಜಾಮೀನು ಪಡೆಯಲು ಅವರು ಅರ್ಹರಲ್ಲ ಎಂದು ವಾದಿಸಿದರು.

ಮೂರು ಕಡೆಯ ವಾದ ಆಲಿಸಿದ ನ್ಯಾಯಾಲಯ ಪ್ರಭಾಕರ್ ಭಟ್ ಜಾಮೀನು ಅರ್ಜಿಯ ತೀರ್ಪನ್ನು ಜನವರಿ 17ಕ್ಕೆ ಕಾಯ್ದಿರಿಸಿದೆ.

ಪ್ರಕರಣದ ಹಿನ್ನೆಲೆ :

ಡಿಸೆಂಬರ್ 24,2023ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ್ದ ಕಲ್ಲಡ್ಕ ಪ್ರಭಾಕರ್ ಭಟ್, “ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನು ಕೊಟ್ಟಿದ್ದು ಮೋದಿ ಸರ್ಕಾರ” ಎಂದು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರ ವಿರುದ್ದ ನಜ್ಮಾ ದೂರು ನೀಡಿದ್ದು, ಪ್ರಭಾಕರ್ ಭಟ್‌ ವಿರುದ್ಧ ರೌಡಿ ಶೀಟ್ ತೆರೆಯುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ‘ಸ್ವಲ್ಪ ಯಾಮಾರಿದ್ದರೂ ನನ್ನ ಜೀವವನ್ನೇ ತೆಗೆಯುತ್ತಿದ್ದರು…’: ಗೊಲ್ಲರಿಂದ ಹಲ್ಲೆಗೊಳಗಾದ ಮಾರುತಿ ಹೇಳಿದ್ದೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read