ಪೊಲೀಸರು ಮಾಡಿದ ನ್ಯಾಯದ ಕೊಲೆ ಮತ್ತು ದ್ವಂದ್ವಭಕ್ತರ ಉನ್ನಾವ್ ಅತ್ಯಾಚಾರ ಒಂದು ದೇಶ ಎರಡು ನ್ಯಾಯ

ತೆಲಂಗಾಣದ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿಯ ಮೇಲೆ ಅತ್ಯಾಚಾರ ಎಸಗಿದ್ದರು ಎನ್ನಲಾಗಿದ್ದ ನಾಲ್ವರು ಆರೋಪಿಗಳನ್ನು ಸೈಬರಾಬಾದ್ ಪೊಲೀಸ್ ಕಮಿಷನರ್ ವಿ ಸಿ ಸಜ್ಜನರ್ ನೇತೃತ್ವದ ಪೊಲೀಸ್ ಪಡೆ ಡಿಸೆಂಬರ್ 6ರಂದು ರಾತ್ರೋರಾತ್ರಿ ಕೊಂದು ಹಾಕಿದ ಘಟನೆ ದೇಶಾದ್ಯಂತ ಚರ್ಚೆ-ವಿವಾದ ಹುಟ್ಟುಹಾಕಿದೆ. ಪ್ರಿಯಾಂಕಾ ರೆಡ್ಡಿಯ ಮೇಲೆ ಅಮಾನುಷ ಗ್ಯಾಂಗ್ ರೇಪ್ ನಡೆಸಿ, ಆಕೆಯ ಕಗ್ಗೊಲೆ ಮಾಡಿ, ದೇಹವನ್ನು ಸುಟ್ಟು ಹಾಕಿದ್ದ ವಿವರಗಳನ್ನು ಮಾಧ್ಯಮಗಳ ಮೂಲಕ ಕಂಡಿದ್ದ ಬಹಳಷ್ಟು ಜನರ ಕಣ್ಣಲ್ಲಿ ಆರೋಪಿಗಳನು ಒಂದೇ ಏಟಿಗೆ ಎನ್ಕೌಂಟರ್ ಮಾಡಿ ಬಿಸಾಕಿರುವ ಸಜ್ಜನರ್ ಒಂದೇ ರಾತ್ರಿಯಲ್ಲಿ ‘ಮಾಸ್ ಹೀರೋ” ಆಗಿಬಿಟ್ಟಿದ್ದಾರೆ. ಈಗ ಹೋದಲ್ಲೆಲ್ಲಾ ಸಜ್ಜನರ್ ಕುರಿತು ಹೊಗಳಿಕೆ, ಹೊಗಳಿಕೆ, ಹೊಗಳಿಕೆಯೇ. ಅವರೇ ಈಗ ದೇಶದ ನ್ಯಾಯವ್ಯವಸ್ಥೆಯ ರೋಲ್ ಮಾಡೆಲ್ ಸಹ.

ಇಂತಹ ಹೊಗಳಿಕೆಗೆ ಜನರಲ್ಲಿ ಅತ್ಯಾಚಾರ-ಕೊಲೆಯಂತಹ ಘಟನೆಗಳ ಕುರಿತು ಸಹಜವಾಗಿ ಮಡುಗಟ್ಟಿರುವ ಆಕ್ರೋಶ ಒಂದು ಕಾರಣವಾಗಿದ್ದರೆ ನಮ್ಮ ಸಮಾಜದಲ್ಲಿ ನ್ಯಾಯಪ್ರಜ್ಞೆ ಹಾಗೂ ಸಾಂವಿಧಾನಿಕ ನೈತಿಕತೆ ಅತ್ಯಂತ ದುರ್ಬಲವಾಗಿರುವುದು ಮತ್ತೊಂದು ಕಾರಣ. ಸಾಮಾನ್ಯ ಜನರ ಕಣ್ಣಿನಲ್ಲಿ ಹೀರೋ ಆಗಿರುವ ಸಜ್ಜನರ್ ಅವರ ಕುರಿತು ಕಟುವಾದ ಟೀಕೆಗಳು ಬರುತ್ತಿರುವುದನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕಿದೆ. ಸಜ್ಜನರ್ ನಡೆಸಿರುವ ಎನ್ಕೌಂಟರ್ ಕೃತ್ಯವೂ ಅಷ್ಟೇ ಅಮಾನವೀಯವಾದುದು, ಬರ್ಬರವಾದುದು; ಒಬ್ಬ ಪೊಲೀಸ್ ಅಧಿಕಾರಿಯಾಗಿ ಕಾನೂನಿನ ಮೂಲಕವೇ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿ ಜನರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಹೆಚ್ಚಿಸುವ ಕೆಲಸವನ್ನು ಸಜ್ಜನರ್ ಮಾಡಬೇಕಿತ್ತೇ ವಿನಃ ತಾನೇ ಕಾನೂನು ಕೈಗೆ ತೆಗೆದುಕೊಂಡು ನ್ಯಾಯಾಲಯವು ಆರೋಪಿಗಳು ಅಪರಾಧಿಗಳು ಎಂದು ತೀರ್ಪು ನೀಡುವ ಮೊದಲೇ ಕೊಲೆ ಎಂದು ಮಾಡಿದ್ದು ಒಪ್ಪತಕ್ಕದ್ದಲ್ಲ ಎಂಬ ಅಭಿಪ್ರಾಯ ಅನೇಕರಿಂದ ಕೇಳಿ ಬಂದಿದೆ.

‘ದಿಢೀರ್ ನ್ಯಾಯದಾನ ಕೂಡದು, ನ್ಯಾಯನೀಡಿಕೆಯು ಪ್ರತೀಕಾರವಾದರೆ ನ್ಯಾಯವು ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತದೆ” ಎಂಬ ತೀಕ್ಷ್ಣ ಮಾತನ್ನು ಸ್ವತಃ ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿ ಎಸ್ ಎ ಬೋಬಡೆಯವರು ಸಜ್ಜನರ್ ಎನ್ಕೌಂಟರ್ ನಡೆಸಿದ ಮರುದಿನವೇ ಆಡಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಎನ್ಕೌಂಟರ್ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ತನಿಖೆಗೆ ಆದೇಶಿಸಿದೆ. ಇಬ್ಬರು ಸುಪ್ರೀಂಕೋರ್ಟ್ ನ್ಯಾಯಾಧೀಶರು ಈ ಎನ್ಕೌಂಟರ್‍ನ್ನು ಹೊಗಳಿದ ಸಂಸದೆ ಜಯಾ ಬಚ್ಚನ್, ಮತ್ತು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನೂ ಸೇರಿದಂತೆ ತೆಲಂಗಾಣ ಪೊಲೀಸರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಕಳೆದೊಂದು ದಶಕದಲ್ಲಿ ಇಂತಹುದೇ ಮೂರು ಎನ್ಕೌಂಟರ್‍ಗಳನ್ನು ಮಾಡಿರುವ ಕನ್ನಡಿಗನೂ ಆಗಿರುವ ಸಜ್ಜನರ್ ಎಲ್ಲಾ ಘಟನೆಗಳಲ್ಲಿ ಒಂದು ಶಬ್ದವೂ ಹೆಚ್ಚೂಕಡಿಮೆ ಇಲ್ಲದಂತೆ ಒಂದೇ ರೀತಿಯ ವಿವರಣೆ ನೀಡಿರುವುದು ಅವರು ನಡೆಸಿರುವ ಎನ್ಕೌಂಟರುಗಳೆಲ್ಲವೂ ಫೇಕ್ ಎನ್ಕೌಂಟರುಗಳು ಎಂಬುದನ್ನು ಜಾಹೀರುಪಡಿಸಿದೆ. ಈಗ ಎನ್ಕೌಂಟರ್ ಅಂದರೆ 99% ಪ್ರಕರಣಗಳಲ್ಲಿ ನಿರಾಯುಧ ವ್ಯಕ್ತಿಗಳನ್ನು ಕೈಕಟ್ಟಿ ಹಾಕಿ ಹತ್ತಿರದಿಂದ ಗುಂಡಿಟ್ಟು ಕೊಂದು ನಂತರ ಹೆಣಗಳನ್ನು ಬಿಸಾಕಿ ಪೊಲೀಸರು ಕತೆ ಕಟ್ಟುವ ಘಟನೆಗಳು ಎಂಬುದು ಎಲ್ಲರಿಗೂ ತಿಳಿದ ವಿಷಯ. ಇಂತಹ ಹೇಡಿತನದ ಪರಮಾವಧಿಯ ಕೃತ್ಯಗಳನ್ನು ನಡೆಸಿದ ಪೊಲೀಸ್ ಅಧಿಕಾರಿಗಳು ಭಾರೀ ಧೀರರು, ಶೂರರು ಎಂಬ ಪ್ರಚಾರ ಪಡೆಯುವುದು ಮತ್ತೊಂದು ವಿಪರ್ಯಾಸ. ವಾಸ್ತವದಲ್ಲಿ ಇಂತಹ ಅಧಿಕಾರಿಗಳಲ್ಲಿ ಕೆಲಸ ಮಾಡುವುದು ಅವರಲ್ಲಿ ಅಡಕವಾಗಿರುವ ಅಪರಾಧಿ ಮನೋಭಾವವಾಗಿರುವುದರಿಂದ ಅವರು ಹ್ಯಾಬಿಚುಅಲ್ ಕ್ರಿಮಿನಲ್‍ಗಳೇ ಆಗಿರುತ್ತಾರೆ. ಈಗ ತೆಲಂಗಾಣದಲ್ಲಿ ಸಜ್ಜನರ್ ಮಾಡಿರುವ ಎನ್ಕೌಂಟರ್ ಕೊಲೆಗಳನ್ನು ಬೆಂಬಲಿಸುತ್ತಿರುವ ಬಹುತೇಕರದ್ದು ಕೇವಲ ಭಾವನಾತ್ಮಕ ಮತ್ತು ಆವೇಶಭರಿತ ಹೇಳಿಕೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ದುರಂತವೆಂದರೆ ಬಹುಜನ ಸಮಾಜವಾದಿ ಪಕ್ಷದ ರಾಷ್ಟ್ರನಾಯಕಿ ಮಾಯಾವತಿಯವರೂ ಸಹ ಇಂತಹ ಒಂದು ಕಗ್ಗೊಲೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. ತೆಲಂಗಾಣದಲ್ಲಿ ನೀಡಿದ ರೀತಿಯಲ್ಲೇ ಅಂತಹುದೇ ನ್ಯಾಯವನ್ನು ‘ಕ್ರಿಮಿನಲ್‍ಗಳಿಗೆ ಉತ್ತರ ಪ್ರದೇಶದಲ್ಲೂ ನೀಡಬೇಕು” ಎಂದು ಮಾಯಾವತಿ ಹೇಳಿಕೆ ನೀಡಿದ್ದೇ ತಡ ತಾವೇನೂ ಕಮ್ಮಿ ಅಲ್ಲ ಎಂದು ಎದೆ ತಟ್ಟಿಕೊಂಡಿರುವ ಉತ್ತರ ಪ್ರದೇಶದ ಪೊಲೀಸರು ಕಳೆದ 2 ವರ್ಷಗಳಲ್ಲಿ ತಾವು 103 ಕ್ರಿಮಿನಲ್ ಆರೋಪಿಗಳನ್ನು ಅದೇ ರೀತಿ ಎನ್ಕೌಂಟರ್ ಮಾಡಿ ಬಿಸಾಕಿದ್ದೇವೆ’ ಎಂದು ಟ್ವೀಟುತ್ತರ ನೀಡಿದ್ದಾರೆ! ಅಂದರೆ ಉತ್ತರ ಪ್ರದೇಶದಲ್ಲಿರುವುದು ಸಂವಿಧಾನಬದ್ಧವಾದ ನ್ಯಾಯವ್ಯವಸ್ಥೆಯಲ್ಲ, ಪೊಲೀಸರೇ ತಮಗೆ ಮುಗಿಸಬೇಕು ಎನಿಸಿದ ಅಪರಾಧಿಗಳನ್ನೆಲ್ಲಾ ಕೊಲೆ ಮಾಡುತ್ತಿರುವ ‘ಪೊಲೀಸ್ ರಾಜ್ಯ’ ಎಂಬುದನ್ನು ಅಧಿಕೃತಪಡಿಸಿದ್ದಾರೆ.

ಈ ಇಂತಹ ವಿಷಯಗಳು ವ್ಯಾಪಕವಾಗಿ ಚರ್ಚೆಯಾಗುವ ಸಾಮಾಜಿಕ ಜಾಲತಾಣದಲ್ಲಿ ಒಂದು ಬೆಳವಣಿಗೆ ನಡೆಯಿತು. ಯಾರೆಲ್ಲಾ ಸಜ್ಜನರ್ ಮಾಡಿರುವ ನಾಲ್ಕು ಆರೋಫಿಗಳ ಕೊಲೆಗಳನ್ನು ಖಂಡಿಸುತ್ತಿದ್ದಾರೋ ಅಂತವರನ್ನು ಅಪಹಾಸ್ಯ ಮಾಡುವ ಇಲ್ಲವೇ ‘ಇವರೆಲ್ಲ ಬುದ್ಧಿಜೀವಿಗಳು, ಪ್ರಗತಿಪರರು, ಒಬ್ಬ ಸಹೋದರಿಯ ಮೇಲೆ ಕ್ರೂರ ಅತ್ಯಾಚಾರ ನಡೆಸಿ ಸುಟ್ಟು ಹಾಕಿರುವ ಕ್ರೂರಿಗಳಿಗೆ ಶಿಕ್ಷೆ ನೀಡಿದ್ದೇ ತಪ್ಪು ಎನ್ನುತ್ತಿರುವ ಎಡಬಿಡಂಗಿಗಳು, ಇವರಿಗೆ ಅಕ್ಕತಂಗಿಯರೇ ಇಲ್ಲ, ಇವರೆಲ್ಲಾ ಅತ್ಯಾಚಾರ ಬೆಂಬಲಿಸುವವರು’ ಎಂಬ ಉದ್ದೇಶಪೂರ್ವಕ ಕತೆಯೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಟ್ಟಿ ಹರಿಬಿಡಲಾಯಿತು. ಟ್ರೋಲ್ ಮಾಡಲಾಯಿತು.

ಇದಕ್ಕೂ ಮೊದಲು ಪ್ರಿಯಂಕಾ ರೆಡ್ಡಿ ಪ್ರಕರಣದಲ್ಲಿ ಆರಂಭದಲ್ಲಿ ಮೊಹಮ್ಮದ್ ಅರಿಫ್ ಎಂಬ ಮುಸ್ಲಿಂ ಹುಡುಗನ ಹೆಸರು ಮಾತ್ರ ಕಾಣಿಸಿಕೊಂಡಾಗ ಮೈಮೇಲೆ ದೆವ್ವ ಬಂದವರಂತೆ ಆಡಿ ಅತ್ಯಾಚಾರಿಯನ್ನು ಗಲ್ಲಿಗೇರಿಸಬೇಕು ಎಂದು ಹೂಂಕರಿಸಿದ ಚಕ್ರವರ್ತಿ ಸೂಲಿಬೆಲೆ ಸುಡುವ ಬೆಂಕಿಯಲ್ಲಿ ತನ್ನ ಕೋಮುಬೇಳೆ ಬೇಯಿಸಲು ಯತ್ನಿಸಿದ್ದ. ಆದರೆ ಅತ್ಯಾಚಾರ ಆರೋಪಿಗಳಲ್ಲಿ ಉಳಿದ ಮೂವರು ಹಿಂದೂಗಳ ಹೆಸರುಗಳ ಬಗ್ಗೆ ಆತ ಬೇಕೆಂದೇ ಮಾತಾಡಿರಲಿಲ್ಲ. ಈ ಕುರಿತು ವ್ಯಾಪಕ ಖಂಡನೆಯಾದಾಗ ಆತ ಬಿಲ ಸೇರಿಕೊಂಡಿದ್ದ. ಇಂತಹ ಮತಾಂಧರನ್ನು ಬಿಟ್ಟರೆ ಪ್ರಿಯಾಂಕಾ ರೆಡ್ಡಿಯ ಅತ್ಯಾಚಾರಿಗಳಿಗೆ ಕೂಡಲೇ ಕಠಿಣ ಶಿಕ್ಷೆ ನೀಡುವಂತೆ ಪ್ರತಿಯೊಬ್ಬರೂ ಒತ್ತಾಯಿಸುತ್ತಿದ್ದರು. ನ್ಯಾಯ ತನ್ನ ಸಹಜ ಗತಿಯಲ್ಲಿದ್ದಾಗ ‘ಎನ್ಕೌಂಟರ್’ ಎಂಬ ಅನಾಹುತಕಾರಿ ಘಟನೆ ನಡೆಯಿತು.

ಸಜ್ಜನರ್ ನಡೆಸಿದ ಎನ್ಕೌಂಟರ್ ನಿಜಕ್ಕೂ ಹಾನಿ ನಡೆಸಿದ್ದು ದೇಶದ ಅತ್ಯಾಚಾರ ವಿರೋಧಿ ಕಾನೂನಿಗೆ. ಈ ಮಾತು ಅಚ್ಚರಿ ಎನಿಸಿದರೂ ಸತ್ಯ. ಮೇಲ್ನೋಟಕ್ಕೆ ಈ ಪೊಲೀಸ್ ಅಧಿಕಾರಿ ಮಾಡಿರುವುದು ‘ಶೀಘ್ರ ನ್ಯಾಯದಾನ’ ಎಂದು ಅನೇಕರಿಗೆ ಅನ್ನಿಸಿರಬಹುದು. ಪ್ರಿಯಾಂಕಾ ರೆಡ್ಡಿಯ ಕುಟುಂಬದವರಿಗೆ ಬಂಧುಗಳಿಗೆ ಕೃತಜ್ಞತಾಭಾವ ಮೂಡಿರಬಹುದು. ಹೀಗೆ ಅನ್ನಿಸಲು ನಮ್ಮ ಕೋರ್ಟ್ ವ್ಯವಸ್ಥೆಯ ವಿಳಂಬ ನೀತಿ ಸಹ ಕಾರಣವಿಲ್ಲದಿಲ್ಲ. ಆದರೆ ಸಜ್ಜನರ್ ನೀಡಿರುವ ‘ಇನ್ಸಟಂಟ್ ಜಸ್ಟೀಸ್’ ಈ ದೇಶ ಒಪ್ಪಿಕೊಂಡಿರುವ ನ್ಯಾಚುಲರ್ ಜಸ್ಟೀಸ್‍ಗೆ ಸಂಪೂರ್ಣ ವಿರುದ್ಧವಾದುದು ಎಂಬ ಸತ್ಯ ಬಹುತೇಕರಿಗೆ ಗೋಚರಿಸದು. ಅದಕ್ಕಿಂತ ಮುಖ್ಯವಾದ ಸಂಗತಿ ಏನೆಂದರೆ ಒಂದು ಕೇಸಿನಲ್ಲಿ ನ್ಯಾಯ ನೀಡಿ ಹೀರೋ ಎನಿಸಿಕೊಂಡಿರುವ ಸಜ್ಜನರ್ ಅತ್ಯಾಚಾರ ಪ್ರಕರಣಗಳಲ್ಲಿ ದೇಶದ ಕಾನೂನು ವ್ಯವಸ್ಥೆಯ ಸುಧಾರಣೆಗೆ ಅಡ್ಡಿಯನ್ನೂ ಮಾಡಿದ್ದಾರೆ.
ಇದು ಹೇಗೆ ನೋಡಲು ನಮ್ಮ ದೇಶದಲ್ಲಿ ಅತ್ಯಾಚಾರದ ವಿರುದ್ಧದ ಕಾನೂನು ಬೆಳೆದು ಬಂದಿರುವ ಬಗೆಯನ್ನೂ, ಇದಕ್ಕಿರುವ ಕಾರಣ ಪ್ರೇರಣೆಗಳನ್ನೂ ಗಮನಿಸಬೇಕು. ಕಳೆದೊಂದು ದಶಕದಲ್ಲಿ ಈ ನಿಟ್ಟಿನಲ್ಲಿ ಆಗಿರುವ ಬದಲಾವಣೆಗಳನ್ನು ನೋಡಿದರೂ ಇದು ನಮಗೆ ಅರ್ಥವಾಗುತ್ತದೆ.

ಭಾರತದಲ್ಲಿ ಅತ್ಯಾಚಾರದ ಕುರಿತ ಕಾನೂನು 1862ರಿಂದ ಮೊದಲುಗೊಂಡು 2018ರಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದವರಿಗೆ ಮರಣದಂಡನೆ ವಿಧಿಸುವ 2018ರ ಕಠಿಣ ಕಾನೂನಿನವರೆಗೆ ಹಲವು ಹಂತಗಳಲ್ಲಿ ಸುಧಾರಣೆಗೊಂಡಿದೆ. ಸರ್ಕಾರಗಳು ಅತ್ಯಾಚಾರದ ಕುರಿತ ಕಾನೂನುಗಳನ್ನು ಬಿಗಿಗೊಳಿಸುತ್ತಾ ಬಂದಿರುವುದು ಬಹುತೇಕವಾಗಿ ಸಾರ್ವಜನಿಕ ಒತ್ತಡದಿಂದಾಗಿಯೇ. ಕೆಲವರು ಉದಾಹರಣೆಗಳನ್ನು ನೋಡುವುದಾದರೆ, 1972ರಲ್ಲಿ ಮದುರಾ ಎಂಬ ಆದಿವಾಸಿ ಬಾಲಕಿಯನ್ನು ಮಹಾರಾಷ್ಟ್ರದ ಗುಂಜ್ ಪೊಲೀಸ್‍ಠಾಣೆಯಲ್ಲಿ ಪೊಲೀಸರೇ ಅತ್ಯಾಚಾರವೆಸಗಿ ಲಾಕಪ್ಪಿನಲ್ಲಿ ಕೊಂದಿದ್ದ ಪ್ರಕರಣದಲ್ಲಿ ತಳಹಂತದ ನ್ಯಾಯಾಲಯ ಮತ್ತು ಉನ್ನತ ನ್ಯಾಯಾಲಯಗಳು ಬಾಲಕಿಯ ವಿರುದ್ಧವಾಗಿಯೇ ತೀರ್ಪು ನೀಡಿದ್ದವು. ಅದು ಅತ್ಯಾಚಾರವೇ ಅಲ್ಲ ಎಂಬಂತೆ ನೀಡಿದ್ದ ಆ ತೀರ್ಪಿನ ವಿರುದ್ಧ ದೇಶಾದ್ಯಂತ ಆಕ್ರೋಶವನ್ನುಂಟುಮಾಡಿ ಎಲ್ಲೆಡೆ ಪ್ರತಿಭಟನೆ ನಡೆದ ಪರಿಣಾಮವಾಗಿ 1983ರಲ್ಲಿ ಕಾನೂನಿಗೆ ತಿದ್ದುಪಡಿ ತರಲಾಗಿತ್ತು. ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರು ಮತ್ತು ವಕೀಲರು ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳನ್ನೇ ‘ನಡತೆಗೆಟ್ಟ ಹೆಣ್ಣು’ ಎಂಬಂತೆ ಪ್ರಶ್ನಿಸುವುದರ ವಿರುದ್ಧ ಹಲವು ಮಹಿಳಾ ಸಂಘಟನೆಗಳು ಧ್ವನಿ ಎತ್ತಿದ ಪರಿಣಾಮವಾಗಿ ಕಾನೂನು ಆಯೋಗ ಎಚ್ಚೆತ್ತುಕೊಂಡು 2002ರಲ್ಲಿ ನೀಡಿದ ಪ್ರಸ್ತಾಪದ ಮೇರೆಗೆ ಸಾಕ್ಷ್ಯ ಅಧಿನಿಯಮದಲ್ಲಿ ಬದಲಾವಣೆ ತರಲಾಯಿತು. ಇನ್ನು 2012ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಅತ್ಯಾಚಾರ-ಕೊಲೆ (ಇದಕ್ಕಿಂತ ಕ್ರೂರ ಅತ್ಯಾಚಾರ ಪ್ರಕರಣಗಳು ದೇಶದಲ್ಲಿ ಈ ಮೊದಲು ನಡೆದಿದ್ದರೂ ದೇಶ ಬೆಚ್ಚಿ ಬಿದ್ದಿರಲಿಲ್ಲ! ಉದಾಹರಣೆಗೆ- ಖೈರ್ಲಾಂಜಿ ದಲಿತ ಮಹಿಳೆಯರ ಅತ್ಯಾಚಾರ ಕೊಲೆ ಪ್ರಕರಣ) ಪ್ರಕರಣದ ನಂತರ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಜೆ ಎಸ್ ವರ್ಮಾ ಅವರ ಸಮಿತಿ ನೀಡಿದ್ದ ಶಿಫಾರಸಿನ ಮೇರೆಗೆ 2013ರಲ್ಲಿ ಅತ್ಯಾಚಾರ ವಿರೋಧಿ ಕಾನೂನು ಮತ್ತಷ್ಟು ಬಿಗಿಯಾಯಿತು. ಹೆಚ್ಚಿನ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯ ಅವಧಿಯನ್ನು ಹೆಚ್ಚಿಸಿದ್ದಲ್ಲದೇ ಅತ್ಯಾಚಾರ ಸಂತ್ರಸ್ತೆ ಸಾವಿಗೀಡಾದ ಪಕ್ಷದಲ್ಲಿ ಅಪರಾಧಿಗಳಿಗೆ ಮರಣದಂಡನೆಯನ್ನು ಸಹ ವಿಧಿಸಲಾಯಿತು. ಗ್ಯಾಂಗ್‍ರೇಪ್‍ಗಳಲ್ಲಿ ಈ ಹಿಂದೆ 10 ವರ್ಷದ ಸಜೆ ಇದ್ದರೆ ನಿರ್ಭಯಾ ಪ್ರಕರಣದ ದೇಶವ್ಯಾಪಿ ಪ್ರತಿಭಟನೆಗಳ ನಂತರದಲ್ಲಿ ಸಜೆಯನ್ನು 20 ವರ್ಷಗಳಿಂದ ಜೀವಾವಧಿಯವರೆಗೂ ಶಿಕ್ಷೆಯನ್ನು ಹೆಚ್ಚಿಸುವಂತೆ ಕ್ರಿಮಿನಲ್ ಕಾಯ್ದೆಯಲ್ಲಿ ತಿದ್ದುಪಡಿ ತರಲಾಯ್ತು. ಇನ್ನು 2018ರಲ್ಲಿ ಜಮ್ಮು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆಸಿದ ಗ್ಯಾಂಗ್‍ರೇಪ್ ನಂತರ ಮತ್ತೆ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿತಲ್ಲದೇ ಈ ಪ್ರಕರಣವೂ ಸಹ ಅತ್ಯಾಚಾರ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಿತು. ಪರಿಣಾಮವಾಗಿ 2018ರಲ್ಲಿ ಮೋದಿ ಸರ್ಕಾರವು ಕಾನೂನು ತಿದ್ದುಪಡಿ ತಂದು 12 ವರ್ಷದೊಳಗಿನ ಮಕ್ಕಳ ಮೇಲಿನ ಅತ್ಯಾಚಾರ ಕೊಲೆಯಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಮರಣದಂಡನೆ ಮತ್ತು ಕನಿಷ್ಠ 20 ವರ್ಷ ಶಿಕ್ಷೆ ವಿಧಿಸುವಂತೆ ಮಾಡಲಾಯಿತು. 16 ವರ್ಷದೊಳಗಿನ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಸಹ ಶಿಕ್ಷೆಯನ್ನು ಕನಿಷ್ಠ 20 ವರ್ಷಗಳಿಗೆ ಹೆಚ್ಚಿಸಲಾಯಿತು ಹಾಗೂ ಇತರ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕಣಗಳಲ್ಲಿ ಮೊದಲಿದ್ದ 7 ವರ್ಷಗಳಿಂದ ಶಿಕ್ಷೆಯನ್ನು 10 ವರ್ಷಗಳಿಗೆ ಹೆಚ್ಚಿಸಲಾಯಿತು.

ಅತ್ಯಾಚಾರದಂತಹ ಹೇಯ ಕೃತ್ಯಗಳನ್ನು ಮಾಡಿದವರಿಗೆ ದೀರ್ಘಾವಧಿ ಕಠಿಣ ಜೈಲು ಶಿಕ್ಷೆ ಮತ್ತು ಗಂಭೀರ ಪ್ರಕರಣಗಳಲ್ಲಿ ಮರಣದಂಡನೆಯನ್ನೂ ವಿಧಿಸುವ ತಿದ್ದುಪಡಿಗಳನ್ನು ಇದುವರೆಗೆ ಕಾಯ್ದೆಯಲ್ಲಿ ತರಲಾಗಿದೆ. ಆದರೆ ಈ ಪ್ರಕರಣಗಳ ವಿಚಾರಣೆಯ ಗತಿ ಅತ್ಯಂತ ನಿಧಾನ ಗತಿಯಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದ್ದು ಈ ಕುರಿತು ಸಹ ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಫಾಸ್ಟ್ ಟ್ರಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾನೂನು ರಚನೆಯಾಗಬೇಕಿದೆ. ಅತ್ಯಾಚಾರ ಪ್ರಕರಣಗಳು ದೊಡ್ಡ ಮಟ್ಟದ ಆಕ್ರೋಶ ಉಂಟು ಮಾಡಿದ ಸಂದರ್ಭದಲ್ಲೆಲ್ಲಾ ಸರ್ಕಾರಗಳು ಅನಿವಾರ್ಯವಾಗಿ ಕಾನೂನನ್ನು ಕಠಿಣಗೊಳಿಸಿರುವ ಇತಿಹಾಸವನ್ನು ಗಮನಿಸಿದಾಗ ಅಂತಹ ಒಂದು ಬದಲಾವಣೆ ಪ್ರಿಯಾಂಕ ರೆಡ್ಡಿ ಪ್ರಕರಣದಲ್ಲಿಯೂ ಆಗುತ್ತಿತ್ತೆನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಈಗ ಅಂತಹ ಒಂದು ಸಾಧ್ಯತೆಯನ್ನು ಪಬ್ಲಿಕ್ ಹೀರೋ ಸಜ್ಜನರ್ ತಮ್ಮ ಪರಾಕ್ರಮದ ಎನ್ಕೌಂಟರ್ ಹಳಿತಪ್ಪಿಸಿದ್ದಾರೆ. ಈಗ ಜನರು ಕಾನೂನಿನಲ್ಲಿ ಬದಲಾವಣೆ ತಂದು ಶೀಘ್ರದಲ್ಲಿ ನ್ಯಾಯ ಒದಗಿಸಿ ಎಂದು ಕೇಳುವ ಬದಲಿಗೆ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿ ಇಲ್ಲವೇ ಆರೋಪಿಗಳನ್ನು ಮಾಬ್‍ಲಿಂಚ್ ಮಾಡಿ ಎನ್ನುವ ಕಾಡಿನ ನ್ಯಾಯಕ್ಕೆ ಮೊರೆಹೋಗಿದ್ದಾರೆ.

ಹೀಗಾಗಿಯೇ ಹೇಳಿದ್ದು ಸಜ್ಜನರ್ ನಡೆಸಿದ ಎನ್ಕೌಂಟರ್ ಅತ್ಯಾಚಾರ ಕಾನೂನಿನ ಬೆಳವಣಿಗೆಗೆ ಅನಾಹುತಕಾರಿಯಾಗಿ ಪರಿಣಮಿಸಿದೆ ಎಂದು.

“ನಾನು ಸಂವಿಧಾನಕ್ಕೆ ಬದ್ಧನಾಗಿ ಕಾರ್ಯ ನಿರ್ವಹಿಸುತ್ತೇನೆ” ಎಂದು ಹೇಳಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಐಪಿಎಸ್ ಅಧಿಕಾರಿಯಾಗಿ ಕೆಲಸ ಆರಂಭಿಸಿದ್ದ ಸಜ್ಜನರ್ ಎಂಬ ವ್ಯಕ್ತಿಯಲ್ಲಿ ನಾವೀಗ ಕಾಣುವುದು ಸಂವಿಧಾನವನ್ನು ಅರ್ಥ ಮಾಡಿಕೊಂಡು ಇಡೀ ಸಮಾಜದಲ್ಲಿ ನ್ಯಾಯಪ್ರಜ್ಞೆಯನ್ನು ಬೆಳೆಸುತ್ತಾ, ಪುರುಷರಲ್ಲಿನ ವಿಕೃತ ಮನಸ್ಥಿತಿಗೆ ದಿನನಿತ್ಯ ಬಲಿಯಾಗುತ್ತಿರುವ ಸಾವಿರಾರು ಪ್ರಿಯಂಕಾರನ್ನು ಉಳಿಸುವ ಬದ್ಧತೆಯಾಗಲೀ ವಿವೇಕವಾಗಲೀ ಅಲ್ಲ. ಬದಲಾಗಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ, ಬಲಾಢ್ಯರಲ್ಲದ ಮತ್ತು ಹೊಡೆದು ಹಾಕಿದರೆ ಎಲ್ಲರೂ ಬೆಂಬಲಿಸುವಂತ ಮೊಹಮ್ಮದ್ ಅರಿಫ್, ಚಿಂತನಕುಂಟ ಚನ್ನಕೇಶವುಲು, ಜೊಲ್ಲು ಶಿವ, ಜೊಲ್ಲು ನವೀನ್‍ಜೊಲ್ಲು ಎಂಬ ಲಾರಿ ಡ್ರೈವರ್ ಕೆಲಸ ಮಾಡುವ ಕೆಳವರ್ಗದ ಹುಡುಗರನ್ನು ಸುಲಭವಾಗಿ, ಕಾನೂನುಬಾಹಿರವಾಗಿ ಹೊಡೆದು ಹಾಕಿ ಒಬ್ಬ ಪೊಲೀಸ್ ಅಧಿಕಾರಿಯಾಗಿದ್ದರೂ ತನಗೆ ದೇಶದ ನ್ಯಾಯವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ ಎಂಬ ಸಂದೇಶ ನೀಡಿದ್ದಾರೆ. ಕಾನೂನಿನರ ರೀತಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗದು ಎಂಬ ಕೆಟ್ಟ ಸಂದೇಶವನ್ನು ನೀಡಿದ್ದಾರೆ. ಇದು ಸ್ವತಃ ತನಗೆ ಅನ್ನ ನೀಡುತ್ತಿರುವ ಪೊಲೀಸ್ ಹುದ್ದೆಗೆ ಮಾಡಿರುವ ಅಪಮಾನ. ಒಬ್ಬ ಉನ್ನತ ಪೊಲೀಸ್ ಅಧಿಕಾರಿಯೇ ನ್ಯಾಯವ್ಯವಸ್ಥೆಯಲ್ಲಿ ಅಪನಂಬಿಕೆ ತೋರಿದಾಗ ದೇಶದ ಸಾಮಾನ್ಯ ಜನರು ಕೋರ್ಟು, ಕಾನೂನನ್ನು ನಂಬುವುದಾದರೂ ಹೇಗೆ? ಇಂತಹ ಅಪನಂಬಿಕೆ ದೇಶದಲ್ಲಿ ಹುಟ್ಟಿಸುವ ಅರಾಜಕತೆ ಯಾವ ಪರಿಣಾಮ ಉಂಟುಮಾಡುತ್ತದೆ? ಇದಾದ ಮರುದಿನವೇ ಕೇರಳದಲ್ಲಿ ಗುಂಪೊಂದು ಅತ್ಯಾಚಾರ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಮಧು ಎಂಬ ಯುವಕನ ಮೇಲೆ ಗುಂಪುಹಲ್ಲೆ ನಡೆಸಿದೆ. ಇಂತಹ ಗುಂಪುನ್ಯಾಯ ದೇಶದೆಲ್ಲೆಡೆ ನಡೆಯುತ್ತಾ ಹೋದರೆ ಮುಂದೆ ಎಂತಹ ನಾಗರಿಕ ವ್ಯವಸ್ಥೆ ಸೃಷ್ಟಿಯಾಗಬಹುದು? ಇವೆಲ್ಲಾ ಯೋಚಿಸಬೇಕಾದ ಪ್ರಶ್ನೆಗಳು.

ದೇಶ ಒಂದು- ನ್ಯಾಯ ಎರಡು: ಬಿಜೆಪಿಯ ಹಿಪೋಕ್ರೆಸಿ

ಅಧಿಕಾರಾರೂಢ ಬಿಜೆಪಿ ಮತ್ತು ಸಂಘಪರಿವಾರ ಒಂದುಕಡೆ ಅತ್ಯಂತ ಅವಕಾಶವಾದಿ ರೀತಿಯಲ್ಲಿ ‘ಒಂದು ದೇಶ ಒಂದು ಸಂವಿಧಾನ’ ಎಂಬ ಘೋಷಣೆಯನ್ನು ಪ್ರಚುರಪಡಿಸುತ್ತಿದ್ದಂತೆ ಮತ್ತೊಂದು ಕಡೆ ಅತ್ಯಾಚಾರದ ವಿಷಯದಲ್ಲಿ ಒಂದೇ ದೇಶದಲ್ಲಿ ಎರಡೆರಡು ನ್ಯಾಯದಾನ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಿವೆ. ಒಂದೇ ವಾರದಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಸಂಘಿಗಳು ನಡೆದುಕೊಂಡ ರೀತಿ ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಪ್ರಿಯಾಂಕಾ ರೆಡ್ಡಿ ಪ್ರಕರಣದಲ್ಲಿ ಮುಸ್ಲಿಂ ಅತ್ಯಾಚಾರಿಯ ಹೆಸರು ಕಾಣಿಸಿಕೊಳ್ಳುತ್ತಿದ್ದಂತೆ ಅತ್ಯಾಚಾರಿಯನ್ನು ನೇಣಿಗೇರಿಸಿ ಎಂಬ ಹ್ಯಾಶ್‍ಟ್ಯಾಗ್ ಮೂಲಕ ಜೋರಾಗಿ ಬೊಬ್ಬೆ ಹಾಕಲು ಶುರುಮಾಡಿದ ಸಂಘಿಗಳು ಅದೇ ಪ್ರಕರಣದಲ್ಲಿ ಇತರ ಮೂವರು ಮುಸ್ಲಿಮೇತರರ ಹೆಸರು ಕೇಳಿಬಂದಕೂಡಲೇ ಬಾಲ ಮುದುರಿಕೊಂಡ ಕುನ್ನಿಗಳಂತಾಡಿದರು. ಸಜ್ಜನರ್ ಮಾಡಿದ ಎನ್ಕೌಂಟರನ್ನು ಹಿಂದೆಮುಂದೆ ನೋಡದೇ ಹೊಗಳುತ್ತಾ, ದೇಶದಲ್ಲಿ ಪ್ರಿಯಾಂಕಾ ರೆಡ್ಡಿಯ ಸಾವಿಗೆ ಮರುಗಿದವರು ತಾವು ಮಾತ್ರವೇನೋ, ಇತರರೆಲ್ಲಾ ಅತ್ಯಾಚಾರಿಗಳ ಮೇಲೆ ಕನಿಕರ ತೋರುವವರೇ ಇರಬೇಕೇನೋ ಎಂಬಂತೆ ಆಡಿದವರು ಮರುದಿನವೇ ಬಂದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಕೊಲೆಯ ಸುದ್ದಿಗೆ ತಮ್ಮ ನವರಂಧ್ರಗಳನ್ನು ಮುಚ್ಚಿಕೊಂಡು ಕುಳಿತರು. ಅತ್ಯಾಚಾರದ ವಿಷಯದಲ್ಲಿ ಸಂಘಪರಿವಾರಿಗಳು ಎಂತಹ ಪಾಖಂಡಿಗಳು ಎಂಬುದು ಒಂದೇ ದಿನದಲ್ಲಿ ಜಗಜ್ಜಾಹೀರಾಯಿತು.

ಎರಡು ವರ್ಷಗಳ ಹಿಂದೆ ಉತ್ತರ ಪ್ರದೇಶದ ಇದೇ ಉನ್ನಾವೋದಲ್ಲಿ ಕುಲದೀಪ್ ಸೆಂಗರ್ ಎಂಬ ಬಿಜೆಪಿ ಶಾಸಕ ಪ್ರಮುಖ ಆರೋಪಿಯಾಗಿರುವ ಬಾಲಕಿಯ ಅತ್ಯಾಚಾರ ಪ್ರಕರಣ ಇತ್ಯರ್ಥವಾಗದೇ, ಆ ಬಾಲಕಿಯ ಕುಟುಂಬದ ಅನೇಕರನ್ನು ಆರೋಪಿಗಳಿ ಕೊಲೆ ಮಾಡುತ್ತಾ ಇರುವ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಅದೇ ಉನ್ನಾವೋದಲ್ಲಿ 23 ವರ್ಷದ ಮತ್ತೊಬ್ಬ ಬಾಲಕಿಯ ಮೇಲೆ ನಡೆದ ಗ್ಯಾಂಗ್‍ರೇಪ್ ಪ್ರಕರಣ ಇದು. ಇದರಲ್ಲಿ ಸಹ ಪ್ರಮುಖ ಆರೋಪಿಗಳಿಬ್ಬರಲ್ಲಿ ಒಬ್ಬನ ತಂದೆ ಊರಿನ ಗ್ರಾಮಪ್ರಧಾನ್ ಆಗಿದ್ದಾನಲ್ಲದೇ ಬಿಜೆಪಿ ಮುಖಂಡನೂ ಹೌದು. ಈ ಪ್ರಕರಣದಲ್ಲಿಯೂ ಅತ್ಯಾಚಾರ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಕ್ಕೆ ಬಂದು ಕಳೆದೊಂದು ವರ್ಷದಿಂದಲೂ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಹಿಂಸಿಸುತ್ತಿದ್ದಾರೆ. ಹತ್ತು ವರ್ಷದ ಬಾಲಕಿ ಸೇರಿದಂತೆ ಉಳಿದ ಮಹಿಳೆಯರ ಮೇಲೂ ಅತ್ಯಾಚಾರ ಮಾಡಿ ಕೊಂದು ಹಾಕುವುದಾಗಿ ಧಮಕಿ ಹಾಕಲಾಗಿದೆ. ಮನೆಗೆ ನುಗ್ಗಿ ಅತ್ಯಾಚಾರಕ್ಕೊಳಗಾದ ಬಾಲಕಿಯ ತಂದೆಯ ಮೇಲೆ ಹಲ್ಲೆ ನಡೆಸಲಾಗಿದೆ ಮಾತ್ರವಲ್ಲ ಕೆಲವು ತಿಂಗಳ ಹಿಂದೆ ಇವರು ಬೆಳೆದ ಬೆಳೆಯನ್ನೆಲ್ಲಾ ಧ್ವಂಸ ಮಾಡಿದ್ದಾರೆ. ಇಷ್ಟೆಲ್ಲ ನಡೆದರೂ ಕಾನೂನು ಪಾಲಕ ಪೊಲೀಸರು ಕಣ್ಣುಮುಚ್ಚಿ ಕುಳಿತಿದ್ದರು. ಈ ಹೆಣ್ಣುಮಗಳು ಎಷ್ಟು ಸಲ ಪೊಲೀಸರಿಗೆ ಅಂಗಲಾಚಿ ಬೇಡಿಕೊಂಡರೂ ಆಕೆಯ ಆಕ್ರಂದನವನ್ನು ಕೇಳದೇ ಕಿವಿ ಮುಚ್ಚಿಕೊಂಡು ಕುಳಿತಿದ್ದರು. ಕೊನೆಗೆ ಮೊನ್ನೆ ಡಿಸೆಂಬರ್ 5ರಂದು ಅತ್ಯಾಚಾರ ಆರೋಪಿಗಳು ಬಾಲಕಿಯನ್ನು ಅಟ್ಟಾಡಿಸಿಕೊಂಡು ಬಂದು ಮೈಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಜೀವ ಉಳಿಸಿಕೊಳ್ಳಲು ಬಾಲಕಿ ಓಡಿದ ಕೂಡಲೇ ಬೆಂಕಿ ದೇಹವನ್ನೆಲ್ಲಾ ಆವರಿಸಿಕೊಂಡಿದೆ. ಅವಳ ಕೂಗಾಟಕ್ಕೆ ಯಾರೂ ಸಹಾಯ ಮಾಡಲಿಲ್ಲ. ಕೊನೆಗೆ ಅವಳು ಸತ್ತಳೆಂದುಕೊಂಡು ಗುಂಪು ಹೊರಟುಹೋದ ಮೇಲೆ ಒಂದು ಮನೆಯವರು ಆಕೆಗೆ ಆಸ್ಪತ್ರೆಗೆ ದಾಖಲಾಗಲು ಸಹಾಯ ಮಾಡಿದ್ದಾರೆ. ಇಷ್ಟರಲ್ಲಿ ಈ ವಿಷಯ ಮಾಧ್ಯಮಗಳಲ್ಲಿ ಸುದ್ದಿಯಾದ ಕಾರಣಕ್ಕೆ ಅಂದೇ ದೆಹಲಿಗೆ ಹೆಲಿಕಾಪ್ಟರ್ ಮೂಲಕ ಬಾಲಕಿಯ ದೇಹವನ್ನು ಕೊಂಡೊಯ್ದು ಅಲ್ಲಿನ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ 90% ಸುಟ್ಟ ಗಾಯಗಳಿದ್ದ ಬಾಲಕಿಯ ದೇಹ ಸಾವುಬದುಕಿನೊಡನೆ ಹೋರಾಡಿ ಡಿಸೆಂಬರ್ 6ರಂದು ಕೊನೆಯುಸಿರೆಳೆದಿದೆ.

ಈ ಪ್ರಕರಣ ತೆಲಂಗಾಣದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಪ್ರಕರಣಕ್ಕೆ ಯಾವ ರೀತಿಯಲ್ಲಿಯೂ ಕಡಿಮೆ ಗಂಭೀರತೆಯುಳ್ಳದ್ದಲ್ಲ. ಎರಡೂ ಅತ್ಯಾಚಾರ ಪ್ರಕರಣಗಳೂ ಒಂದೇ ರೀತಿಯ ಗಂಭೀರತೆ ಹೊಂದಿರುವಂತವು. ಆದರೆ ಒಬ್ಬನೇ ಒಬ್ಬ ಸಂಘಪರಿವಾರಿ ಇದರ ಬಗ್ಗೆ ಉಸುರೊಡೆಯುತ್ತಿಲ್ಲವಲ್ಲ? ಇನ್ನು ಕುಲದೀಪ್ ಸೆಂಗರ್ ಆರೋಪಿಯಾಗಿರುವ ಪ್ರಕರಣದಲ್ಲಿಯೂ ಅವರೆಲ್ಲೂ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಪರ ವಹಿಸಲಿಲ್ಲ. ಇದಕ್ಕೂ ಹಿಂದಿನ ಕಥುವಾ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿಯಂತೂ ಅತ್ಯಾಚಾರಿಗಳ ಪರವಾಗಿ ಮೆರವಣಿಗೆ ಮಾಡುವ ಘನಕಾರ್ಯವನ್ನು ಬಿಜೆಪಿ ಪಕ್ಷ ಮಾಡಿತು. ಬಿಜೆಪಿ ಅಧ್ಯಕ್ಷರೂ ಹಾಲಿ ಕೇಂದ್ರ ಗೃಹಸಚಿವರೂ ಭಾಗಿಯಾಗಿರುವ ಆರೋಪ ಇರುವ ಸೊಹ್ರಾಬುದೀನ್ ಎನ್ಕೌಂಟರ್ ಪ್ರಕರಣದ ನಂತರ ಸೊಹ್ರಾಬುದೀನ್ ಪತ್ನಿ ಕೌಸರ್‍ಬಿಯ ಮೇಲೆ ಪೊಲೀಸರೇ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಎಂದಾದರೂ ಸಂಘಿಗಳು ಬಾಯಿಬಿಟ್ಟಿದ್ದಾರೆಯೇ? ಇಂತಹ ಪ್ರಕರಣಗಳಲ್ಲಿಯೂ ಸಜ್ಜನರ್ ತರದ ಎನ್ಕೌಂಟರ್ ವೀರರನ್ನು ಕಳಿಸಿಕೊಡುವ ಬೇಡಿಕೆಯನ್ನು ಇವರೇಕೆ ಮಾಡುವುದಿಲ್ಲ?

ಇವೆಲ್ಲ ಪ್ರಕರಣಗಳು ಬಿಜೆಪಿ ಮತ್ತು ಸಂಘಪರಿವಾರಗಳು ಅತ್ಯಾಚಾರ-ಕೊಲೆಯಂತಹ ವಿಷಯದಲ್ಲಿ ತಾವೆಷ್ಟು ಪಾಖಂಡಿಗಳು ಎಂಬುದನ್ನು ತೋರಿಸಿಕೊಂಡಿದ್ದಾರೆ. ಹೀಗಾಗಿ ಅತ್ಯಾಚಾರದ ಕುರಿತು ಬಿಜೆಪಿ-ಸಂಘಪರಿವಾರ ಈ ಇಬ್ಬಂದಿನೀತಿಯನ್ನು ಬಯಲು ಮಾಡುತ್ತಲೇ ದೇಶದಲ್ಲಿ ಅತ್ಯಾಚಾರಿಗಳ ವಿರುದ್ಧ ಶೀಘ್ರ ತನಿಖೆ ನಡೆದು, ಕಠಿಣ ಶಿಕ್ಷೆ ಆಗುವಂತಹ ಕಾನೂನಿಗಾಗಿ ದೇಶದ ಪ್ರಜ್ಞಾವಂತರು ದನಿ ಎತ್ತಬೇಕಿದೆ. ದೇಶದ ಜನರಲ್ಲಿ ಗುಂಪುನ್ಯಾಯದ ಬದಲಿಗೆ ನೈಸರ್ಗಿಕ ನ್ಯಾಯವನ್ನು, ಸಂವಿಧಾನಬದ್ಧ ನ್ಯಾಯಪ್ರಜ್ಞೆಯನ್ನು ಹೆಚ್ಚಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ. ಈ ಮೂಲಕ ಮಾತ್ರವೇ ಪ್ರಿಯಾಂಕಾ ರೆಡ್ಡಿ, ಉನ್ನಾವೋ ಬಾಲಕಿ, ಕಥುವಾ ಬಾಲಕಿ ಆಸಿಫಾ, ಬಿಜಾಪುರದ ಬಾಲಕಿ ದಾನಮ್ಮ, ದೆಹಲಿ ಯವತಿ ‘ನಿರ್ಭಯಾ’, ಗುಜರಾತ್ ಪೊಲೀಸರಿಂದ ಕೊಲೆಯಾದ ಕೌಸರ್ಬಿ, ಖೈರ್ಲಾಂಜಿಯ ದಲಿತ ಮಹಿಳೆ ಸುರೇಖಾ ಭೋತ್ಮಾಂಗೆ, ಆಕೆಯ ಮಗಳು ಪ್ರಿಯಂಕಾ ಭೋತ್ಮಾಂಗೆ… ಹೀಗೆ ನಾವೇ ಸೃಷ್ಟಿಸಿಕೊಂಡಿರುವ ಅಮಾನುಷ ಅತ್ಯಾಚಾರಿ ವ್ಯವಸ್ಥೆಯಲ್ಲಿ ಸಾಲು ಸಾಲಾಗಿ ಹೆಣಗಳಾಗಿ ಚಿರಶಾಂತಿಗಾಗಿ ಹಪಹಪಿಸುತ್ತಿರುವ ಸೋದರಿಯರ ಆತ್ಮಗಳಿಗೆ ನಿಜವಾದ ಶಾಂತಿ ಸಲ್ಲುವಂತೆ ಮಾಡಬೇಕಿದೆ.

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

1 COMMENT

  1. ವಾಸ್ತವದ ಸತ್ಯಾಸತ್ಯಗಳ ಕನ್ನಡಿ ಇದೆಂದು ಹೇಳಬಲ್ಲೆ.ಗೌರೀ ಅಕ್ಕನವರ ಸತ್ಯದ ಎದೆ ಮೇಲೆ ಹೊಡೆಯುವಂತಹ ಈ ಪಥ ನೈಜ ಚಿಂತನೆ ಹುಟ್ಟು ಹಾಕುವುದರಲ್ಲಿ ಸಂಶಯವೇ ಇಲ್ಲ.ನಾನು ಗೌರಿ.ಕಾ.ಹರ್ಷಕುಮಾರ್ ಕುಗ್ವೆ ಸರ್ ರ ಬರಹ ಉತ್ತಮವಾಗಿದೆ.ಧನ್ಯವಾದಗಳು.

LEAVE A REPLY

Please enter your comment!
Please enter your name here