Homeಮುಖಪುಟ‘ಕಾಂತರಾಜು ಆಯೋಗದ ವರದಿ ಸ್ವೀಕರಿಸುತ್ತೇನೆ…’; ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಿಎಂ ಭರವಸೆ

‘ಕಾಂತರಾಜು ಆಯೋಗದ ವರದಿ ಸ್ವೀಕರಿಸುತ್ತೇನೆ…’; ಶೋಷಿತರ ಜಾಗೃತಿ ಸಮಾವೇಶದಲ್ಲಿ ಸಿಎಂ ಭರವಸೆ

- Advertisement -
- Advertisement -

‘ಕಾಂತರಾಜು ಆಯೋಗದ ವರದಿಯನ್ನು ಓದದೆಯೆ ಕೆಲವರು ವಿರೋಧ ಮಾಡುತ್ತಿದ್ದು, ವೈಜ್ಞಾನಿಕವಾಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನಾನು ವರದಿಯನ್ನು ಸ್ವೀಕಾರ ಮಾಡುತ್ತೇನೆ. ಏನಾದರೂ ಲೋಪಗಳಿದ್ದರೆ ತಜ್ಞರ ಅಭಿಪ್ರಾಯ ಪಡೆದು ಸರಿಪಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದರು.

ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿ, ಜಾರಿ ಮಾಡಬೇಕು ಎಂದು ಒತ್ತಾಯಿಸಿ ಇಂದು ಚಿತ್ರದುರ್ಗದಲ್ಲಿ ನಡೆದ ‘ಶೋಷಿತರ ಜಾಗೃತಿಗಾಗಿ ರಾಜ್ಯ ಸಮಾವೇಶ’ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಆಯೋಗದ ವರದಿಯನ್ನು ಸ್ವೀಕರಿಸುವುದಾಗಿ ಭರವಸೆ ನೀಡಿದರು.

‘ಹಿಂದುಳಿದ ಜಾತಿಗಳ ಶಾಶ್ವತ ಆಯೋಗದ ಅಂದಿನ ಅಧ್ಯಕ್ಷರಾಗಿದ್ದ ಕಾಂತರಾಜು ಅವರಿಗೆ ರಾಜ್ಯದ ಜನರ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಬೇಕು ಎಂದು ನಾನು ಮುಖ್ಯಮಂತ್ರಿ ಆಗಿದ್ದಾಗ ಆದೇಶ ನೀಡಿದ್ದೆ. ಆಮೇಲೆ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ, ಬಿಜೆಪಿ ಸರ್ಕಾರದಲ್ಲೂ ಯಾವ ಮುಖ್ಯಮಂತ್ರಿಯೂ ವರದಿಯನ್ನು ಸ್ವೀಕರಿಸಲಿಲ್ಲ. ಈಗ ನೀವು ವರದಿ ಕೊಡಿ ಎಂದು ಆಯೋಗಕ್ಕೆ ಹೇಳಿದ್ದೇನೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಎಲ್ಲ ರಾಜ್ಯಗಳಲ್ಲೂ ಜಾತಿ ಸಮೀಕ್ಷೆ ಮಾಡಿಸುತ್ತೇವೆ ಎಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಹೇಳಿದ್ದಾರೆ. ನಮ್ಮ ಹೈಕಮಾಂಡ್ ಮಾತಿಗೆ ನಾವು ಒಪ್ಪಿಗೆ ಸೂಚಿಸುತ್ತೇವೆ. ನಾನು ಯಾವಾಗಲೂ ನಿಮ್ಮ ಪರವಾಗಿ ಇರುತ್ತೇನೆ.. ನಾನು ಯಾರ ವಿರೋಧಿಯೂ ಅಲ್ಲ, ಎಲ್ಲ ಮನುಷ್ಯರ ಪರವಾಗಿದ್ದೇನೆ’ ಎಂದು ಹೇಳಿದರು.

‘ಸಮಾಜದಲ್ಲಿ ಶೋಷಿತ ಸಮುದಾಯದ ಜನಸಂಖ್ಯೆ ಸಿಂಹಪಾಲು ಇದೆ. ಈ ಸಿಂಹಪಾಲು ಇರುವ ಜನರು ಶತಶತಮಾನಗಳಿಂದ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಸಮುದಾಯಗಳ ಮೇಲೆ ಶೋಷಣೆ, ದೌರ್ಜನ್ಯ ನಡೆಯುತ್ತಲೇ ಇದೆ. ಜಾತಿ ವ್ಯವಸ್ಥೆಯ ಪರಿಣಾಮದಿಂದಾಗಿ ಬಹುಸಂಖ್ಯಾತರು ಅಕ್ಷರದಿಂದ ವಂಚಿತರಾಗುತ್ತಿದ್ದಾರೆ. ನಮ್ಮಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಇನ್ನೂ ಇದೆ. ಆ ಅಸಮಾನತೆಯ ಜಾತಿ ವ್ಯವಸ್ಥೆಯಿಂದ ನಿರಂತರವಾಗಿ ಶೋಷಿತ ಸಮುದಾಯಗಳ ಮೇಲೆ ಶೋಷಣೆ, ದೌರ್ಜನ್ಯ ನಡೆದಿದೆ; ಈಗಲೂ ಕೂಡ ನಡೆಯುತ್ತಲೆ ಇದೆ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಸಂವಿಧಾನ ಕೊಟ್ಟರು. ಆ ಸಂವಿಧಾನದಲ್ಲಿ ಸರ್ವರಿಗೂ ಸಮಪಾಲು; ಸರ್ವರಿಗೂ ಸಮಬಾಳು ಎಂದು ಹೇಳಿದೆ. ಎಲ್ಲರಿಗೂ ಸಮಾನ ಅವಕಾಶಗಳಿರಬೇಕು ಎಂದು ಪ್ರತಿಪಾದಿಸುತ್ತದೆ. ಇಲ್ಲಿ ಬುದ್ದ, ಬಸವ, ಅಂಬೇಡ್ಕರ್, ಮಹಾತ್ಮ ಗಾಂಧೀಜಿ, ನಾರಾಯಣ ಗುರು, ಕನಕದಾಸರು, ಶಾಹು ಮಹಾರಾಜರು, ಜ್ಯೋತಿಬಾ ಫುಲೆ ಎಲ್ಲರೂ ಕೂಡ ಸಮಾಜದಲ್ಲಿ ಬದಲಾವಣೆ ತರುವುದಕ್ಕೆ ಪ್ರಯತ್ನ ಮಾಡಿದರು’ ಎಂದರು.

‘ಜಾತಿ ವ್ಯವಸ್ಥೆಯಿಂದ ಶೋಷಣೆ ನಡೆಯುತ್ತಿದೆ; ಇದನ್ನು ತೊಡೆದುಹಾಕಬೇಕು ಎಂದು ಈ ಮಹನೀಯರು ಪ್ರಯತ್ನ ಮಾಡಿದರು. ಅದೇ ಆಶಯವನ್ನು ನಮ್ಮ ಸಂವಿಧಾನ ಕೂಡ ಪ್ರತಿಪಾದಿಸುತ್ತದೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಸಮಾನತೆ ಮತ್ತು ಎಲ್ಲರಿಗೂ ಸಮಾನ ಅವಕಾಶ ಸಿಗಬಾರದು ಎಂದು ಬಯಸುತ್ತಾರೆ. ಸಮಾಜ ಬದಲಾದರೆ ಶೋಷಣೆ, ದೌರ್ಜನ್ಯಕ್ಕೆ ಅವಕಾಶ ಇಲ್ಲ ಎಂಬುದು ಅವರ ಆತಂಕ’ ಎಂದು ವಾಗ್ದಾಳಿ ನಡೆಸಿದರು.

‘ಸಮಾನತೆ ತರುವುದಕ್ಕಾಗಿ ಬಸವಣ್ಣನವರ ಕಾಲದಿಂದ, ನಾಲ್ವಡಿ, ಶಾಹು ಮಹಾರಾಜರು ಹೋರಾಡಿ, ಮೀಸಲಾತಿ ಜಾರಿ ಮಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಮಿಲ್ಲರ್ ಆಯೋಗ ರಚನೆ ಮಾಡಿ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಶೇ.85 ಮೀಸಲಾತಿ ಜಾರಿ ಮಾಡಿದರು’ ಎಂದು ವಿವರಿಸಿದರು.

‘ಸಮಾಜದಲ್ಲಿ ಅಸಮಾನತೆ ಇದೆ, ಮೇಲ್ವರ್ಗ- ಕೆಳವರ್ಗ ಇದೆ. ಇದು ನಿವಾರಣೆ ಆಗಬೇಕಾದರೆ ಸಮಾನತೆ ಜಾರಿಯಾಗಬೇಕು; ಸಂಪತ್ತಿನ ಸಮಾನ ಹಂಚಿಕೆ ಆಗಬೇಕು. ಮೀಸಲಾತಿ ಯಾರ ಸ್ವತ್ತನ್ನೂ ಕಿತ್ತುಕೊಳ್ಳುವುದಲ್ಲ, ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕೆನ್ನುವುದು ಅದರ ಉದ್ದೇಶ. ಆದರೆ ಮೀಸಲಾತಿಗೆ ಬಿಜೆಪಿ-ಆರ್‌ಎಸ್‌ಎಸ್‌ ಬಿಜೆಪಿ ವಿರೋಧ ಇದೆ. ಇತಿಹಾಸವನ್ನೆ ನೋಡಿ, ಮಂಡಲ್ ಆಯೋಗದ ವರದಿ ಜಾರಿ ಆದಾಗ, ಈಗ ಶ್ರೀರಾಮನ್ನು ರಾಜಕೀಯಕ್ಕ ಬಳಸುತ್ತಿರುವವರು ವಿರೋಧಿಸಿದ್ದರು. ಅವರು ಮಂಡಲ್ ವರದಿಯನ್ನು ಯಾಕೆ ವಿರೋಧಿಸಿದರು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮಂಡಲ್ ವರದಿ ಜಾರಿ ಮಾಡಲು ನಿರ್ಧರಿಸಿದ, ಅಂದಿನ ಪ್ರಧಾನಿ ವಿ.ಪಿ. ಸಿಂಗ್ ವರದಿ ಸ್ವೀಕರಿಸಿದರು, ಅದನ್ನು ನರಸಿಂಹರಾವ್ ಜಾರಿ ಮಾಡಿದರು’ ಎಂದು ನೆನಪಿಸಿದರು.

‘ಅಂದಿನಿಂದಲೂ ಆರ್‌ಎಸ್‌ಎಸ್‌-ಬಿಜೆಪಿ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತಿದ್ದಾರೆ. ಶಿಕ್ಷಣ, ಅರೋಗ್ಯ, ಅಧಿಕಾರ ಮತ್ತು ಸಂಪತ್ತಿನಲ್ಲಿ ಪಾಲು ಸಿಗಬೇಕು ಎಂದು ಮಂಡಲ್ ವರದಿ ಹೇಳುತ್ತದೆ’ ಎಂದರು.

ಕುರಿ ಕಾಯುವವನ ಮಗ ಸಿಎಂ ಆದರೆ ವಿರೋಧಿಸುತ್ತಾರೆ:

‘ಬಲಾಡ್ಯರ ಕೈನಲ್ಲಿ ಅಧಿಕಾರ ಇದ್ದರೆ ಶೋಷಿತ ಸಮುದಾಯಗಳಿಗೆ ಮಾರಕ ಎಂದು ಅಂಬೇಡ್ಕರ್ ಹೇಳಿದ್ದರು. ಆದ್ದರಿಂದ, ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿದ್ದಾನೆ ಎಂದು ನನ್ನನ್ನು ವಿರೋಧಿಸುತ್ತಾರೆ. 17 ಬಜೆಟ್‌ಗಳನ್ನು ಮಂಡಿಸಿದ ಎಂದು ವಿರೋಧಿಸುತ್ತಾರೆ. ವಿರೋಧಿಸಲು ನಾನು ಏನು ತಪ್ಪು ಮಾಡಿದ್ದೇನೆ? ಎಲ್ಲರಿಗೂ ನ್ಯಾಯ ಕೊಡಿಸುವ ಕೆಲಸ ಮಾಡಿದ್ದು ತಪ್ಪಾ, ಹಲವು ಭಾಗ್ಯಗಳನ್ನು ನೀಡಿದ್ದು ಸಿದ್ದರಾಮಯ್ಯ ತಪ್ಪಾ? ಗ್ಯಾರಂಟಿ ಯೋಜನೆಗಳು ದಲಿತರಿಗೆ, ಮಹಿಳೆಯರಿಗೆ, ಹಿಂದುಳಿದವರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಕೊಡುತ್ತದೆ. ಆದ್ದರಿಂದ, ಅವರು (ಬಿಜೆಪಿಗರು) ನನ್ನನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ನಡುವೆ ಭಿನ್ನಾಭಿಪ್ರಾಯ ಏನೇ ಇರಬಹುದು; ನಾವೆಲ್ಲರೂ ಅಣ್ಣತಮ್ಮಂದಿರು, ಸಮಾನ ದುಃಖಿಗಳು’ ಎಂದರು.

‘ಆದರೆ, ಸುಖ ಅನುಭವಿಸುತ್ತಿರುವವರು ನಮಗೆ ಅವಕಾಶ ಸಿಗ್ತಾ ಇಲ್ಲ ಎನ್ನುತ್ತಿದ್ದಾರೆ. ಕೆಲವರಿಗೆ ಜಾತಿ ವ್ಯವಸ್ಥೆಯೆ ಮೀಸಲಾತಿ. ಅದರಿಂದ ಅವರು ಸಂಪತ್ತು, ಉದ್ಯೋಗ, ವಿದ್ಯೆ ಸೇರಿದಂತೆ ಎಲ್ಲ ಅವಕಾಶ ಪಡೆದುಕೊಂಡಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸುವವರೆಗೆ ಇಂಥ ಸಮಾವೇಶಗಳು ಅಗತ್ಯ. ಮುಂದುವರಿದ ಜಾತಿಗಳು ಸಮಾವೇಶ ಮಾಡಿದರೆ ಜಾತಿ ಸಮಾವೇಶ ಆಗುತ್ತದೆ. ಅನ್ಯಾಯಕ್ಕೆ ಶೋಷಣೆಗೆ, ದೌರ್ಜನ್ಯಕ್ಕೆ ಒಳಗಾದ ಜನ ಸಂಘಟನೆಗೋಸ್ಕರ ಸಮಾವೇಶ ಮಾಡಿದರೆ, ಅದು ಇಂದಿನ ಅತ್ಯಗತ್ಯ, ಅನಿವಾರ್ಯ. ಜಾತಿ ವ್ಯವಸ್ಥೆ ಚಾಲ್ತಿಯಲ್ಲಿರುವವರೆಗೆ ಇಂಥ ಸಮಾವೇಶಗಳು ಅನಿವಾರ್ಯ, ಇದನ್ನು ಮುಂದುವರಿಸುವ ಕೆಲಸ ನಾವು ಮಾಡಬೇಕಾಗುತ್ತದೆ’ ಎಂದು ಹೇಳಿದರು.

ನೀವೆ ದೇವಸ್ಥಾನ ಕಟ್ಟಿಕೊಳ್ಳಿ:

ಅಸ್ಪೃಶ್ಯತೆ ಆಚರಣೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಯಾವ ದೇವಸ್ಥಾನಗಳಿಗೆ ನಿಮಗೆ ಪ್ರವೇಶ ಇಲ್ಲವೋ, ಅಲ್ಲಿಗೆ ನೀವು ಹೋಗಲೇಬೇಡಿ. ನೀವೆ ಒಂದು ದೇವಸ್ಥಾನ ಕಟ್ಟಿಕೊಂಡು, ನೀವೇ ಪೂಜಾರಿಗಳಾಗಿ. ದೇವರು ಬೇಡ ಅನ್ನಲ್ಲ, ಇಂಥ ಜಾತಿಗಳೆ ಪೂಜೆ ಮಾಡಿ ಅಂತ ದೇವರು ಎಲ್ಲೂ ಹೇಳಿಲ್ಲ. ಏಕೆಂದರೆ, ದೇವರು ಸರ್ವಾಂತರ್ಯಾಮಿ. ಆದರೆ, ಈ ಬಿಜೆಪಿ-ಆರ್‌ಎಸ್‌ಎಸ್‌ನವರು ಜಾತಿ, ದೇವರು ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಛಿದ್ರ ಮಾಡುವ ಕೆಲಸ ಮಾಡುತ್ತಿದ್ದಾರೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಸ್ವಾಭಿಮಾನ ಬೆಳೆಸಿಕೊಳ್ಳಿ:

‘ಶಿಕ್ಷಣ, ಸಂಘಟನೆ, ಹೋರಾಟ’ ಈ ಮೂರು ಮಂತ್ರಗಳನ್ನು ಶೋಷಿತ ಸಮುದಾಯಗಳಿಗೆ ಅಂಬೇಡ್ಕರ್ ಹೇಳಿದ್ದಾರೆ. ನಮಗೆ ನ್ಯಾಯ ಸಿಗಬೇಕಾದರೆ ಎಲ್ಲರೂ ಶಿಕ್ಷಿತರಾಗಬೇಕು; ಇವತ್ತಿಗೂ ಈ ಶೋಷಿತ ಸಮುದಾಯಗಳಲ್ಲಿ ನೂರಕ್ಕೆ ನೂರು ಶಿಕ್ಷಣ ಸಿಕ್ಕಿಲ್ಲ. ಇನ್ನೂ ಶೇ.28ರಷ್ಟು ಜನ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಪಡೆದುಕೊಂಡು ಸ್ವಾಭಿಮಾನ ಬೆಳೆಸಿಕೊಳ್ಳಿ.. ಧೈರ್ಯವಾಗಿರಿ, ನಿಮಗೆ ಸಂವಿಧಾನ ರಕ್ಷಣೆಯನ್ನು ನೀಡುತ್ತದೆ. ಸಂವಿಧಾನವನ್ನು ನಾವು ರಕ್ಷಿಸಿದರೆ, ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ’ ಎಂದು ಸಿಎಂ ಶೋಷಿತ ಸಮುದಾಯಗಳಿಗೆ ಕಿವಿಮಾತು ಹೇಳಿದರು.

‘ಅಂಬೇಡ್ಕರ್ ಅವರ ಸಂವಿಧಾನದಿಂದ ನಾನು ಎರಡನೆ ಅವಧಿಗೆ ಮುಖ್ಯಮಂತ್ರಿ ಆಗಿದ್ದೇನೆ. ನಾವು ನಮ್ಮ ಕಾರ್ಯಕ್ರಮಗಳನ್ನು ಜಾತಿ-ಧರ್ಮದ ಮೇಲೆ ವಿಂಗಡಿಸಿಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮೀಸಲಾತಿ ವಿರೋಧಿಸುವವರು ನಮ್ಮ ವೈರಿಗಳು.. ಇದನ್ನು ನಾವು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ನಮಗೆ ಮಿತ್ರರು ಯಾರು? ಶತೃಗಳು ಯಾರು? ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಇವರ ಪರವಾಗಿ ನಾವು ಯಾವ ಕಾರಣಕ್ಕೂ ನಿಲ್ಲಬಾರದು. ಸಂವಿಧಾನ, ಪ್ರಜಾಪ್ರಭುತ್ವದ ಪರವಾಗಿರುವರ ಜೊತೆ ನಾವು ನಿಲ್ಲಬೇಕು’ ಎಂದರು.

‘ಈ ಸಮಾವೇಶವನ್ನು ಸಂಘಟಿಸಿದ ಕೆ.ಎಂ. ರಾಮಚಂದ್ರಪ್ಪ, ಮಾವಳ್ಳಿ ಶಂಕರ್, ಎಂಆರ್ ಸೀತಾರಾಮ್, ನಜೀರ್ ಅಹಮದ್ ಸೇರಿದಂತೆ ಇನ್ನೂ ಅನೇಕ ಮುಖಂಡರು ದೊಡ್ಡ ಸಮಾವೇಶಕ್ಕೆ ಜನರನ್ನು ಸೇರಿಸಿದ್ದಾರೆ. ಅದಕ್ಕಾಗಿ ಈ ಸಮಾವೇಶವನ್ನು ಸಂಘಟಿಸಿದ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇದು ರಾಜಕೀಯ ಪಕ್ಷದ ಸಮಾವೇಶ ಅಲ್ಲ; ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳು ಏರ್ಪಡಿಸಿರುವ ಸಮಾವೇಶ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇದನ್ನೂ ಓದಿ; ಬಸವಲಿಂಗಪ್ಪ-ಪ್ರೊ. ಬಿ. ಕೃಷ್ಣಪ್ಪ ಅವರನ್ನು ‘ಕರ್ನಾಟಕ ರತ್ನ’ ಎಂದು ಘೋಷಿಸಿ: ಮಾವಳ್ಳಿ ಶಂಕರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಿರ್ಗಿಸ್ತಾನ್‌ನಲ್ಲಿ ಹಿಂಸಾಚಾರ: ಮನೆಬಿಟ್ಟು ಹೊರಬರದಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ

0
ಕಿರ್ಗಿಸ್ತಾನ್‌ನ ರಾಜಧಾನಿ ಬಿಷ್ಕೆಕ್‌ನಲ್ಲಿ ವಿದೇಶಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗುಂಪು ಹಿಂಸಾಚಾರದ ವರದಿಗಳ ಮಧ್ಯೆ ಭಾರತ ಮತ್ತು ಪಾಕಿಸ್ತಾನವು ಶನಿವಾರ ಬಿಷ್ಕೆಕ್‌ನಲ್ಲಿರುವ ವಿದ್ಯಾರ್ಥಿಗಳಿಗೆ ತಾವು ತಂಗಿರುವ ಹಾಸ್ಟೆಲ್‌, ಮನೆಗಳಿಂದ ಹೊರಗೆ ಬರದಂತೆ ಸೂಚಿಸಿದೆ. ಕಿರ್ಗಿಸ್ತಾನ್‌ನಲ್ಲಿರುವ ಭಾರತದ...