HomeಅಂಕಣಗಳುIndia Independence : ಎಪ್ಪತ್ತರ ತಿರುವಿನಲ್ಲಿ .....

India Independence : ಎಪ್ಪತ್ತರ ತಿರುವಿನಲ್ಲಿ …..

- Advertisement -
- Advertisement -

1947ರ ಆಗಸ್ಟ್ 15ರ ಮಧ್ಯರಾತ್ರಿ ಹೊತ್ತಿಸಿದ ಭರವಸೆಯ ಬೆಳಕು ಇಂದು ಮಂದವಾಗಿದೆ. ನಮ್ಮ ಪ್ರಥಮ ಪ್ರಧಾನಮಂತ್ರಿಗಳಾದ ಜವಹರಲಾಲ್ ನೆಹರೂ ಅವರು ಸ್ವಾತಂತ್ರ್ಯವನ್ನು ಭವಿಷ್ಯದೊಂದಿಗೆ ನಮ್ಮ ಸಾಮೂಹಿಕ ಮುಖಾಮುಖಿಯೆಂದು ಬಣ್ಣಿಸಿದ್ದರು; ಭಾರತದ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾದ ಬಿ.ಆರ್. ಅಂಬೇಡ್ಕರ್ ಅವರು, ರಾಜಕೀಯ ಸಮಾನತೆಯನ್ನು ಮಾತ್ರ ಖಾತರಿಗೊಳಿಸಿದರೂ ತನ್ನ ನಾಗರಿಕರಿಗೆ ಅತ್ಯಂತ ಮೂಲಭೂತವಾದ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ನಿರಾಕರಿಸುವ ಜೀವಂತ ವೈರುಧ್ಯಗಳ ಬಗ್ಗೆ ಯುವ ಗಣರಾಜ್ಯವನ್ನು ಅಂದೇ ಎಚ್ಚರಿಸಿದ್ದರು. ಸ್ವಾತಂತ್ರ್ಯ ಬಂದದಿನ ಮಹಾತ್ಮ ಗಾಂಧಿಯವರು ಕೋಮು ಗಲಭೆಗಳಿಂದ ಸಂತ್ರಸ್ತವಾಗಿದ್ದ ನೌಖಾಲಿಯಲ್ಲಿ ಏಕಾಂಗಿಯಾಗಿ ನಡೆದಾಡುತ್ತಾ ಕಮ್ಯುನಿಸ್ಟರ ಭಾಷೆಯಲ್ಲಿಯೇ ಆಜಾದಿ ಜೂಟಾ ಹೈ (ಈ ಸ್ವಾತಂತ್ರ ್ಯ ನಿಜವಲ್ಲ) ಎಂದು ಪ್ರವಾದಿಯಂತೆ ನುಡಿದಿದ್ದರು.

ಈ ಸಂದಿಗ್ಧತೆ ಮತ್ತು ನಮ್ಮ ಸ್ವಾತಂತ್ರ್ಯವು ನಿಜವಾದದ್ದೋ ಅಥವಾ ಭ್ರಮಾತ್ಮಕವಾದದ್ದೋ ಎಂಬ ಚರ್ಚೆಗಳು ಕಳೆದ 70 ವರ್ಷಗಳುದ್ದಕ್ಕೂ ಜೊತೆಜೊತೆಯಾಗಿ ಸಾಗುತ್ತಲೇ ಬಂದಿವೆ. ಹಾಗೆ ನೋಡಿದರೆ, ಸ್ವಾತಂತ್ರ್ಯದ 70ನೇ ವರ್ಷವನ್ನು ಸಂಭ್ರಮಿಸಲು ಸಹ ಸಾಕಷ್ಟು ವಿಷಯಗಳಿವೆ. ನಾವು ಒಂದು ಪ್ರಜಾತಂತ್ರವಾಗಿಯೇ ಉಳಿದಿದ್ದೇವೆ ಮತ್ತು 70 ವರ್ಷಗಳ ಹಿಂದಿನ ಸ್ಥಿತಿಗೆ ಹೋಲಿಸಿದಲ್ಲಿ ಕೋಟ್ಯಾಂತರ ಜನರು ತಮ್ಮ ಬದುಕು ಮತ್ತು ಜೀವನೋಪಾಯಗಳ ಬಗೆಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಮೊದಲಿಗಿಂತಲೂ ಹೆಚ್ಚಿಗೆ ಸಬಲೀಕರಣಗೊಂಡಿದ್ದಾರೆ.

ಆದರೆ ಅಷ್ಟೇ ಮಟ್ಟಿಗೆ ದೇಶದ ನಿತ್ಯ ಜೀವನದ ಬರ್ಬರತೆ ದಾರುಣವಾಗುತ್ತಿದ್ದು ದಲಿತರು ದೇಶದ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಾ ಸಾಯುತ್ತಲೇ ಇದ್ದಾರೆ, ಮಹಿಳೆಯರ ಮೇಲೆ ದಾಳಿಗಳಾಗುತ್ತಲೇ ಇವೆ ಮತು ಮುಸ್ಲಿಮರನ್ನು ಹಾದಿಬೀದಿಗಳಲ್ಲಿ ಗುಂಪುಗೂಡಿ ಕೊಲೆಮಾಡಲಾಗುತ್ತಿದೆ. ಒಂದೆಡೆ ಚುನಾವಣಾ ಆಯೋಗ ಮತ್ತು ಅಂತರಿಕ್ಷ ಸಂಶೋಧನಾ ಸಂಸ್ಥೆ(ಇಸ್ರೋ)ಯಂಥ ಪ್ರತಿಷ್ಠಿತ ಸಂಸ್ಥೆಗಳನ್ನು ಹುಟ್ಟುಹಾಕಿದ್ದು ಮಾತ್ರವಲ್ಲದೆ ಅವುಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದೇವೆ. ಮತ್ತೊಂದೆಡೆ ನಮ್ಮ ಗಣರಾಜ್ಯದ ಆರೋಗ್ಯಕ್ಕೆ ಮೂಲಭೂತವಾಗಿ ಅಗತ್ಯವಾಗಿರುವಂಥ ಸಂಸ್ಥೆಗಳನ್ನು ನಿರ್ವೀರ್ಯಗೊಳಿಸುತ್ತಿದ್ದೇವೆ. ಒಂದೆಡೆ ಇತರ ವಸಾಹತೋತ್ತರ ದೇಶಗಳು ಎದುರಿಸಿದಂಥ ಅತ್ಯಂತ ಹೀನಾಯ ಧಾರ್ಮಿಕ ಹಿಂಸೆ ಮತ್ತು ತಾರತಮ್ಯಗಳು ನಮ್ಮ ದೇಶದಲ್ಲಿ ಸಂಭವಿಸದಂತೆ ಯಶಸ್ವಿಯಾಗಿ ತಡೆಗಟ್ಟಿರುವುದು ಮಾತ್ರವಲ್ಲದೆ ನಮ್ಮ ಧಾರ್ಮಿಕ ಬಹುತ್ವ ಮತ್ತು ಸಹಿಷ್ಣುತೆಗಳನ್ನು ಕಾಪಾಡಿಕೊಂಡು ಬಂದಿದ್ದೇವೆ; ಆದರೆ ಜಾತ್ಯತೀತತೆಯನ್ನು ನಾಶಮಾಡಲು ಕಟಿಬದ್ಧವಾಗಿರುವ ಮತ್ತು ಬಹುಸಂಖ್ಯಾತರ ಹಿಂಸಾಚಾರಕ್ಕೆ ಉತ್ತೇಜನ ಕೊಡುವ ಸರ್ಕಾರಗಳನ್ನೇ ಆಯ್ಕೆ ಮಾಡಿ ಅಧಿಕಾರ ಕೊಟ್ಟಿದ್ದೇವೆ.

ಹೀಗಾಗಿ ಇಂದು ನಾವು ನಮ್ಮ ಸ್ವಾತಂತ್ರ ್ಯವನ್ನು ಸಂಭ್ರಮಿಸಬೇಕೋ ಅಥವಾ ಕಳೆದುಹೋದ ಅವಕಾಶಗಳನ್ನು ನೆನೆದು ಶೋಕಿಸಬೇಕೋ ಅಥವಾ ಪ್ರಸ್ತುತ ಸವಾಲುಗಳನ್ನು ಗಂಭೀರವಾಗಿ ಎದುರುಗೊಳ್ಳಬೇಕೋ? ವಸಾಹತುಶಾಹಿಯಿಂದ ನಾವು ಪಡೆದ ಸ್ವಾತಂತ್ರ ್ಯವನ್ನೂ ಮತ್ತು ಆ ನಂತರದ ಈ ಅವಧಿಯನ್ನು ಹೇಗೆ ಮೌಲ್ಯೀಕರಿಸಬೇಕೆಂಬ ಸಂದಿಗ್ಧತೆ ಅಥವಾ ಕೆಲವರು ಕರೆಯುವಂತೆ ವೈರುಧ್ಯಗಳು, ಒಂದು ಸಕಾರಾತ್ಮಕ ಪರಿಣಾಮವನ್ನಂತೂ ಉಂಟುಮಾಡಿದೆ. ಇದು ವಿವಿಧ ಬಗೆಯ ಉಪಯುಕ್ತ ರಾಜಕೀಯ ವಾಗ್ವಾದಗಳನ್ನೂ ಮತ್ತು ವಿದ್ವತ್ಪೂರ್ಣ ಚರ್ಚೆಗಳನ್ನಂತೂ ಹುಟ್ಟುಹಾಕಿದೆ ಮತ್ತು ನಮ್ಮ ತಿಳಿವಳಿಕೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಈ ಪತ್ರಿಕೆಯೂ ಸಹ ಅಂಥ ಎಲ್ಲಾ ವಾಗ್ವಾದ ಮತ್ತು ಚರ್ಚೆಗಳಿಗೆ ಬಹಿರಂಗ ವೇದಿಕೆಯಾಗುತ್ತಲೇ ಬಂದಿದೆ. ಈ ವಿಷಯಗಳ ಬಗ್ಗೆ ಈ ಪತ್ರಿಕೆಗೆ ಬರೆಯುವ ಲೇಖಕರ ಬಳಗ ಹಲವು ಪಟ್ಟು ಹೆಚ್ಚಾಗಿದೆ. ಜೊತೆಗೆ ಅದು ನಮ್ಮ ಶೈಕ್ಷಣಿಕ ಲೋಕ, ಸರ್ಕಾರ ಮತ್ತು ಸಮಾಜದ ಎಲ್ಲಾ ವಿಭಾಗಗಳಿಂದಲೂ ಹರಿದುಬರುತ್ತಿದೆ. ಒಂದು ರೀತಿಯಲ್ಲಿ ಸಮಾಜ ವಿಜ್ಞಾನ ಅಧ್ಯಯನ ಮತ್ತು ಸಾರ್ವಜನಿಕ ನೀತಿಗಳ ಬಗೆಗಿನ ವಾಗ್ವಾದಗಳು ಹುಲುಸಾಗಿ ಬೆಳೆಯುತ್ತಿವೆ. ಹಾಗಿದ್ದರೂ ವಿದ್ವತ್ ಲೋಕ ಮತ್ತು ಸಾರ್ವಜನಿಕ ನೀತಿಗಳ ನಡುವಿನ, ವಾಗ್ವಾದಗಳು ಮತ್ತು ರಾಜಕೀಯದ ನಡುವಿನ ಅಂತರ ಮಾತ್ರ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಸರ್ಕಾರದ ನೀತಿಗಳ ಸಾರ್ವಜನಿಕ ಚಿಂತನೆಗಳ ರೂಪಣೆಯಲ್ಲಿ ವಿದ್ವತ್ ಲೋಕಕ್ಕೆ ಇದ್ದ ಧ್ವನಿ ಕಡಿಮೆಯಾಗುತ್ತಿದೆ. ಮತ್ತೊಂದೆಡೆ ಸರ್ಕಾರ ಮತ್ತು ಸಾರ್ವಜನಿಕ ಜೀವನದಲ್ಲಿರುವವರಿಗೆ ವಿದ್ವತ್ ಲೋಕದ ಜೊತೆ ಯಾವ ಸಂಬಂಧವೂ ಇರುತ್ತಿಲ್ಲ.

ಸ್ವಾತಂತ್ರ ್ಯದ ಪ್ರಾರಂಭಿಕ ದಶಕಗಳಲ್ಲಿ ಸಮಾಜ ವಿಜ್ಞಾನಿಗಳು ಬಗೆಹರಿಸಲು ತೊಡಗಿಕೊಂಡ ಪ್ರಶ್ನೆಗಳೆಲ್ಲಾ ರಾಷ್ಯ್ರ ನಿರ್ಮಾಣದ ತುರ್ತು ಆಗ್ರಹಗಳಿಂದಲೇ ಹುಟ್ಟುಕೊಂಡಿರುತ್ತಿದ್ದವು. ಆದ್ದರಿಂದಲೇ ಭಾರತದಲ್ಲಿ ಭೌತಿಕ ದಾರಿದ್ರ್ಯದ ಪರಿಸ್ಥಿತಿಯಲ್ಲೂ ಸಮಾಜ ವಿಜ್ಞಾನ ಮಾತ್ರ ಹುಲುಸಾಗಿ ಬೆಳೆಯಲು ಸಾಧ್ಯವಾದದ್ದು ಕಾಕತಾಳಿಯವೇನಲ್ಲ. ಆ ಕಾಲಘಟ್ಟದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ಜಾಗತಿಕ ಗುಣಮಟ್ಟದ ವಿದ್ವಾಂಸರನ್ನು ಮತ್ತು ಚಿಂತನೆಗಳನ್ನು ಹುಟ್ಟುಹಾಕುತ್ತಿದ್ದವು. ಹೀಗಾಗಿ ಹಲವು ಕುಂದುಕೊರತೆಗಳ ನಡುವೆಯೂ ಭಾರತದ ಆರ್ಥಿಕ ನೀತಿ, ಪ್ರಜಾತಂತ್ರ ಮತ್ತು ಜಾತ್ಯತೀತತೆಗಳಲ್ಲಿ ಜಾಗತಿಕ ಗುಣಪಾಠಗಳಿದ್ದದ್ದೂ ಸಹ ಕಾಕತಾಳಿಯವೇನಲ್ಲ. ಅಂಥ ಸಾಧನೆಗಳ ಪಟ್ಟಿಯೂ ಯಾವತ್ತೂ ಎಲ್ಲವನ್ನೂ ಒಳಗೊಂಡು ಸಮಗ್ರವಾಗಿರಲು ಸಾಧ್ಯವಿಲ್ಲ. ಆದರೂ ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಸಾಹಿತ್ಯ, ಅರ್ಥಶಾಸ್ತ್ರಗಳಲ್ಲಿ, ನಡೆಯುತ್ತಿದ್ದ ಜಾಗತಿಕ ವಾಗ್ವಾದಗಳಲ್ಲಿ ಭಾರತದ ಧ್ವನಿಯು ಗಂಭೀರವಾಗಿ ಆಲಿಸಲ್ಪಡುತ್ತಿತ್ತು. ಇಂಥಾ ಅಪರೂಪದ ಗೌರವಕ್ಕೆ ಪಾತ್ರವಾಗುತ್ತಿದ್ದ ಕೆಲವೇ ಮಾಜಿ ವಸಾಹತು ದೇಶಗಳಲ್ಲಿ ಭಾರತವೂ ಒಂದಾಗಿತ್ತು. ಸಂಕ್ಷಿಪ್ತಗೊಳಿಸಿ ಹೇಳಬೇಕೆಂದರೆ ತನ್ನೆಲ್ಲಾ ಕೊರತೆಗಳ ನಡುವೆಯೂ ಭಾರತವು ರಾಜಕೀಯ ವಾಗ್ವಾದಗಳನ್ನು ಮತ್ತು ಸಾರ್ವಜನಿಕ ನೀತಿಯನ್ನು ಪ್ರಭಾವಿಸಬಲ್ಲ ಸಾವಯವ ವಿದ್ವತ್ತನ್ನು ಸೃಷ್ಟಿಸಿತ್ತು.

ಸ್ವಾತಂತ್ರಾ ್ಯನಂತರದಲ್ಲಿ ಅದರಲ್ಲೂ ವಿಶೇಷವಾಗಿ 1980ರ ನಂತರದಲ್ಲಿ ಭಾರತದ ಉನ್ನತ ಶಿಕ್ಷಣವು ಹಿಂದೆಂದೂ ಇಲ್ಲದಷ್ಟು ವಿಸ್ತರಣೆಗೊಂಡಿದೆ. ಹೆಚ್ಚುತ್ತಿರುವ ಸಾಕ್ಷರತೆ ಮತ್ತು ಸಾಮಾಜಿಕ ಅಂತಃ ಚಲನೆಗಳ ಭಾಗವಾಗಿ (ಈ ವಿದ್ಯಮಾನವನ್ನು ನಾವಿನ್ನೂ ಸಂಪೂರ್ಣವಾಗಿ ಅರ್ಥವೂ ಮಾಡಿಕೊಂಡಿಲ್ಲ, ಇದರ ಬಗ್ಗೆ ಹೆಚ್ಚಿನ ಸಂಶೋಧನೆಗಳೂ ನಡೆದಿಲ್ಲ) ಲಕ್ಷಾಂತರ ಹೊಸ ವಿದ್ಯಾರ್ಥಿಗಳು ಕಾಲೇಜುಗಳನ್ನು ಮತ್ತು ವಿಶ್ವವಿದ್ಯಾಲಯಗಳನ್ನೂ ಪ್ರವೇಶಿಸುತ್ತಿದ್ದಾರೆ. ಇದು ಕೇವಲ ವಿಜ್ಞಾನ, ತಂತ್ರಜ್ಞಾನ, ಇಂಜನಿಯರಿಂಗ್ ಮತ್ತು ಆಡಳಿತ ಅಧ್ಯಯನಗಳಲ್ಲಿ ಮಾತ್ರ ನಡೆಯುತ್ತಿರುವ ವಿದ್ಯಮಾನವಲ್ಲ. ಬದಲಿಗೆ ಸಮಾಜ ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳಲ್ಲೂ ಇದೇ ಬಗೆಯ ವಿಸ್ತರಣೆಯು ನಡೆಯುತ್ತಿದೆ. ಸರ್ಕಾರಿ ಧನಸಹಾಯವು ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ, ಪ್ರವೇಶಾತಿಯಲ್ಲಿ ಆಗುತ್ತಿರುವ ಹೆಚ್ಚಳಕ್ಕೆ ಹೋಲಿಸಿದಲ್ಲಿ ಏನೇನೂ ಸಾಲುತ್ತಿಲ್ಲ. ಖಾಸಗಿ ವ್ಯಾಪಾರಿ ವಿದ್ಯಾಸಂಸ್ಥೆಗಳಿಗೆ ಸಮಾಜ ವಿಜ್ಞಾನದ ಬಗ್ಗೆ ಯಾವುದೇ ಕಾಳಜಿಯಿಲ್ಲ. ಈ ಕಾಲಘಟ್ಟದಲ್ಲಿ ನಾಗರಿಕತ್ವ ಮತ್ತು ರಾಜಕಿಯ ಧ್ವನಿಯನ್ನು ಪಡೆದುಕೊಂಡ ಎರಡು ಪೀಳಿಗೆಗಳಿಗೆ ಸಾಮಾಜಿಕ ವಿಜ್ಞಾನ ಮತ್ತು ಮಾನವಿಕ ಶಿಕ್ಷಣವನ್ನು ಎಟುಕಿಸಿಕೊಳ್ಳಲಾಗಿಯೇ ಇರಲಿಲ್ಲ. ಆ ಕೊರತೆಯನ್ನು ದೂರದರ್ಶನಗಳು ಮತ್ತು ಇದೀಗ ವಾಟ್ಸಪ್‍ಗಳು ಪೂರೈಸುತ್ತಿವೆ. ಅಂಥಾ ಶಿಕ್ಷಣದಿಂದ ಎಂಥಾ ರಾಜಕೀಯ ಸೃಷ್ಟಿಯಾಗಬಲ್ಲದು ಎಂಬುದಕ್ಕೆ ಇದು ಒಂದು ಸಣ್ಣ ಮುನ್ಸೂಚನೆಯನ್ನು ಕೊಡಬಲ್ಲದು.

ಈ ರೀತಿ ಲಕ್ಷಾಂತರ ಯುವಜನತೆಯು ಸಮಾಜ ವಿಜ್ಞಾನ ಮತ್ತು ಮಾನವಿಕ ಶಿಕ್ಷಣಗಳಿಂದ ವಂಚಿತವಾಗಿದೆಯೆಂದರೆ ಅಷ್ಟರಮಟ್ಟಿಗೆ ವಿದ್ವತ್ ಲೋಕವು ಕೂಡಾ ಸೊರಗಿದೆ ಮತ್ತು ಅವಾಸ್ತವಿಕವಾಗಿದೆ ಎಂದೇ ಅರ್ಥ. ಇದು ಹಲವು ದುಷ್ಪರಿಣಾಮಗಳನ್ನು ಉಂಟುಮಾಡಿದೆ. ಇಂದು ಸಮಾಜ ವಿಜ್ಞಾನ ಮತ್ತು ಮಾನವಿಕ ಶಾಸ್ತ್ರಗಳಲ್ಲಿ ಸರಳ ಸಂಗತಿಗಳ ವಿವರಣೆಯಲ್ಲೂ ಸುಶಿಕ್ಷಿತರಿಗೂ ಅರ್ಥವಾಗದ ಪದಪುಂಜಗಳ ಅಬ್ಬರವೇ ಹೆಚ್ಚಾಗಿರುವುದಕ್ಕೂ ಇದೇ ಕಾರಣ. ಇದು ಸಂಶೋಧನೆಗಳನ್ನು ನಿತ್ಯಜೀವನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿಗಿಂತ ವಿಕ್ಷಿಪ್ತ ಮತ್ತು ಕೂದಲು ಸೀಳುವಂಥ ಅತ್ಯಾರ್ಥಗಳು ಮತ್ತು ಸಂಕೀರ್ಣತೆಗಳ ಕಡೆ ಸೆಳೆಯುತ್ತಿದೆ. ಇದರಿಂದಾಗಿ ಸಮಾಜ ವಿಜ್ಞಾನಿಗಳಿಗೆ ತಮ್ಮ ಸುತ್ತಮುತ್ತಲಿನ ಸಮಾಜವನ್ನು ಅರ್ಥಮಾಡಿಕೊಳ್ಳಲು ಎಷ್ಟು ಕಷ್ಟವಾಗುತ್ತಿದೆಯೋ ಅಷ್ಟೆ ಮಟ್ಟಿಗೆ ತಮ್ಮ ಉಳಿವಿಗೆ ಪ್ರಭುತ್ವದ ಮೇಲೆ ಆಧಾರಪಡುವಂತೆಯೂ ಮಾಡುತ್ತಿದೆ.

ಭಾರತದ ಸಮಾಜ ಮತ್ತು ರಾಜಕೀಯ ವಾಸ್ತವಗಳು ಎರಡು ಮೂರು ದಶಕಗಳ ಹಿಂದೆ ಹೇಗಿತ್ತೋ ಹಾಗಿಲ್ಲ. ಓದು-ಬರಹ ಮಾಡಬಲ್ಲವರ ಸಂಖ್ಯೆ, ಕೆಲಸ ಅರಸುತ್ತಾ ಮತ್ತು ಮನೋಲ್ಲಾಸಗಳಿಗಾಗಿ ಪ್ರವಾಸ ಮಾಡುವವರ ಸಂಖ್ಯೆ, ಆಸ್ತಿಯನ್ನು ಹೊಂದಿರುವವರ ಸಂಖ್ಯೆಗಳಲ್ಲಿ ಆಗಿರುವ ಬದಲಾವಣೆಗಳು, ವೃತ್ತಿ ಮತ್ತು ಆದಾಯದ ರೀತಿಗಳಲ್ಲಿ ಬಂದಿರುವ ಬದಲಾವಣೆಗಳು, ಕುಟುಂಬದಲ್ಲಿ ಮತ್ತು ಗಂಡು -ಹೆಣ್ಣುಗಳ ಪಾತ್ರದಲ್ಲಿ ಬಂದಿರುವ ಬದಲಾವಣೆಗಳು ಮತ್ತು ರಾಜಕೀಯ ಭಾಗವಹಿಸುವಿಕೆಯಲ್ಲಿ ಬಂದಿರುವ ಬದಲಾವಣೆಗಳು ಅಗಾಧವಾಗಿವೆ; ಇವುಗಳ ಸ್ವರೂಪ ಸ್ವಾತಂತ್ರ ್ಯ ಬಂದಾಗ ಇದ್ದ ರೀತಿಗೂ ಮಾತ್ರವಲ್ಲ, ಇಂದಿರಾ ಗಾಂಧಿ ಬಿಟ್ಟುಹೋದ ಭಾರತಕ್ಕಿಂತಲೂ ಭಿನ್ನವಾದ ಹಾಗೂ ಮೂಲಭೂತವಾದ ವ್ಯತ್ಯಾಸಗಳನ್ನು ಪಡೆದುಕೊಂಡಿವೆ.

ಈ ಹೊಸ ಭಾರತವನ್ನು ವಿವರಿಸಬಲ್ಲ ಹೊಸ ಸಿದ್ಧಾಂತಗಳೆಲ್ಲಿವೆ? ಹೊಸ ವಿಧಾನಗಳೆಲ್ಲಿವೆ? ಇಂದಿನ ಭಾರತವನ್ನು ಅರ್ಥಮಾಡಿಕೊಳ್ಳಲು ಮತ್ತು ವಿವರಿಸಲು ಸಹಾಯ ಮಾಡಬಲ್ಲ ಮಾದರಿಗಳು, ದೃಷ್ಟಿಕೋನಗಳು ಮತ್ತು ವರ್ಗೀಕರಣಗಳೆಲ್ಲಿ? ಅನಿರೀಕ್ಷಿತವಾದ ಚುನಾವಣಾ ಫಲಿತಾಂಶಗಳು ಮತ್ತು ನೋಟು ನಿಷೇಧ ಉಂಟು ಮಾಡಿದ ಊಹಿಸಲಸಾಧ್ಯವಾದ ಪರಿಣಾಮಗಳು ಹೊಸ ಭಾರತಕ್ಕೂ ಮತ್ತು ವಿದ್ವತ್ ಲೋಕಕ್ಕೂ ನಡುವೆ ಇರುವ ಬಿರುಕನ್ನು ತೋರಿಸಿಕೊಡುವ ಎರಡು ಹತ್ತಿರದ ಉದಾಹರಣೆಗಳು. ನಮ್ಮ ರಾಜಕೀಯ ಮತ್ತು ಸಾಮಾಜಿಕ ಪ್ರಪಂಚವನ್ನು ನಮಗೆ ವಿವರಿಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣಗಳಿವೆ.

ಸ್ವಾತಂತ್ರ್  ದ  70 ವರ್ಷಗಳ ನಂತರ ನಾವು ಕಾಣುತ್ತಿರುವ ಭಾರತವು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಮಾತ್ರವಲ್ಲ ಈ ಪತ್ರಿಕೆಯನ್ನು ಓದುವ ನಮ್ಮಂಥವರೂ ಸಹ ಗುರುತಿಸಲಾಗದಷ್ಟು ಬದಲಾಗಿಬಿಟ್ಟಿದೆ. ಶೇಕ್ಸ್‍ಪಿಯರ್‍ನ ಮಾತುಗಳಲ್ಲಿ ಹೇಳುವುದಾದರೆ (ಮ್ಯಾಕ್ಬೆತ್ ನಾಟಕದ ಸಾಲುಗಳು)

ಎಪ್ಪತ್ತಾದರೂ ನನಗೆ , ನೆನಪಿದೆ ಎಲ್ಲವೂ ಸುಮಾರಿಗೆ

ಕಡಿಮೆ ಇರಲಿಲ್ಲ ಬೆಚ್ಚಿಬೀಳಿಸಿದ ಭಯದ ಗಳಿಗೆಗಳಿಗೆ

ಆದರೂ, ಮರೆತುಹೋಗಿವೆ ಎಲ್ಲವೂ ಈ ಕಾಳರಾತ್ರಿಯ ದಿಗಿಲಿಗೆ.

ಸ್ವಾತಂತ್ರ ್ಯದ ದಿನವು ನಮ್ಮ ನಮ್ಮ ಕರ್ತವ್ಯಗಳಿಗೆ ಮತ್ತೊಮ್ಮೆ ನಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳುವ ಗಳಿಗೆಯೂ ಆಗಿರುತ್ತದೆ. ಎಕಾನಾಮಿಕ್ ಅಂಡ್ ಪೆÇಲಿಟಿಕಲ್ ವೀಕ್ಲಿ (ಇಪಿಡಬ್ಲೂ ್ಯ) ಮತ್ತದರ ಮೊದಲ ರೂಪವಾಗಿದ್ದ ಎಕಾನಾಮಿಕ್ ವೀಕ್ಲಿಗಳು ಭಾರತದ ಈ ಜಾಗೃತಿಯಲ್ಲಿ ಉದ್ದಕ್ಕೂ ಸಹಚರನಾಗಿ ಹೆಜ್ಜೆಹಾಕಿರುವುದರಲ್ಲಿ ಹೆಮ್ಮೆ ಪಡುತ್ತದೆ. ನಮ್ಮ ಅನ್ವೇಷಣೆಗಳು ರೂಪಾಂತರಗೊಳ್ಳಬೇಕಾಗಿರುವ ಈ ಹೊತ್ತಿನಲ್ಲಿ ಸಂವಾದ ಮತ್ತು ಚರ್ಚೆಗಳಿಗೆ ಹಾಗೂ ಧ್ವನಿ ಇರದ ಮತ್ತು ಧ್ವನಿ ಕೇಳದ ವರ್ಗಗಳಿಗೆ ಧ್ವನಿಯಾಗುವ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಖಾತರಿಗೊಳಿಸುತ್ತೇವೆ. ವಸಾಹತುಶಾಹಿಯ ಅನುಭವವೇ ಇಲ್ಲದ ಹೊಸ ಪೀಳಿಗೆಯ ಆಶಯಗಳನ್ನು ಮತ್ತು ಆಗ್ರಹಗಳನ್ನು ಹಿಡಿದಿಡಬಲ್ಲ ಹೊಸ ಧ್ವನಿಯೊಂದು ಹುಟ್ಟಬೇಕಾದ ಅಗತ್ಯವಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...