Homeಅಂಕಣಗಳುಕಲ್ಯಾಣ ಯೋಜನೆಗಳ ಬಗ್ಗೆ ಕುಹಕವಾಡುವ ಪ್ರತಿಷ್ಠಿತ ಪುಂಡರಿಗೆ ಏನೆನ್ನೋಣ?

ಕಲ್ಯಾಣ ಯೋಜನೆಗಳ ಬಗ್ಗೆ ಕುಹಕವಾಡುವ ಪ್ರತಿಷ್ಠಿತ ಪುಂಡರಿಗೆ ಏನೆನ್ನೋಣ?

- Advertisement -
- Advertisement -

ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿ ಸುಮಾರು 15 ದಿನಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಘೋಷಿಸಿದ ಮತ್ತು ಪ್ರಣಾಳಿಕೆಯಲ್ಲಿ ನಮೂದಿಸಿದ್ದ ಐದು ಮುಖ್ಯ ಭರವಸೆಗಳ ಬಗ್ಗೆ ಆಗಲೇ ಭಾರೀ ಟೀಕೆಯನ್ನು ಎದುರಿಸುತ್ತಿದೆ. ರೊಬಸ್ಟ್ ಆದಂತಹ ಪ್ರಜಾಪ್ರಭುತ್ವಕ್ಕೆ ಆಡಳಿತ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ವಿರೋಧ ಪಕ್ಷಗಳು ಬಹಳ ಮುಖ್ಯ. ಆದರೆ ಆ ವಿರೋಧಗಳೇ ಜನವಿರೋಧಿ ಆಗಿದ್ದರೆ?

ಈ ನೆಲೆಯಲ್ಲಿ ಬರುತ್ತಿರುವ ವಿರೋಧವನ್ನು ಗಮನಿಸಿ; ಕಾಂಗ್ರೆಸ್ ಮಾಡಿದ ಚುನಾವಣಾ ಪ್ರಾಮಿಸ್‌ಗಳಾದ, ಕುಟುಂಬವೊಂದರ ಯಜಮಾನಿಗೆ ಪ್ರತಿ ತಿಂಗಳೂ 2000 ರೂ ಕೊಡುತ್ತೇವೆಂಬ ಭರವಸೆಯನ್ನು ಯಾವುದೇ ಷರತ್ತು ಅನ್ವಯಿಸದೆ ಅನುಷ್ಠಾನಕ್ಕೆ ತರಬೇಕು; ಎಲ್ಲಾ ಮನೆಗಳಿಗೂ 200 ಯುನಿಟ್ ಉಚಿತ ವಿದ್ಯುತ್ ನೀಡಬೇಕು; ಎಲ್ಲಾ ಮಹಿಳೆಯರಿಗೆ ಎಲ್ಲ ಬಸ್ಸುಗಳಲ್ಲೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು; ಹೀಗೆ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ತನ್ನ ಭರವಸೆಗಳನ್ನು ಯಾವುದೇ ವಿಳಂಬವಿಲ್ಲದಂತೆ ಅನುಷ್ಠಾನಗೊಳಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒತ್ತಡ ಹಾಕುತ್ತಿವೆ. ಕಲ್ಯಾಣ ಯೋಜನೆಗಳು ಅಗತ್ಯ ಇರುವ ಎಲ್ಲ ಜನರಿಗೂ ಪರಿಣಾಮಕಾರಿಯಾಗಿ ತಲುಪಬೇಕು ಅನ್ನುವ ಯೋಚನೆಯೇನೋ ಸರಿ. ಆದರೆ ಈಗಾಗಲೇ ಒಂದು ಮಟ್ಟದ ಸ್ವಾವಲಂಬನೆ ಸಾಧಿಸಿಕೊಂಡಿರುವ ಕುಟುಂಬಗಳನ್ನು ಹೊರತುಪಡಿಸಿ, ಬಡ ಕುಟುಂಬಗಳಿಗೇ ಈ ಕಲ್ಯಾಣ ಯೋಜನೆಗಳನ್ನು ಮೊದಲು ಜಾರಿ ಮಾಡಬೇಕಿದೆ. ಅಸಮಾನತೆ ತೀವ್ರತಮವಾಗಿರುವ ಸಮಾಜದಲ್ಲಿ ಕಡುಬಡತನದ ಕುಟುಂಬಗಳಿಗೆ ಸರ್ಕಾರದ ಯೋಜನೆಗಳ ನೆರವು ಹೆಚ್ಚಿನ ಪ್ರಮಾಣದಲ್ಲಿ ಬೇಕಿರುತ್ತದೆ. ಬಜೆಟ್‌ನಲ್ಲಿ ಉಳಿತಾಯ ಸಾಧ್ಯವಾದರೆ ಮಧ್ಯಮ ವರ್ಗದವರಿಗೂ ಈ ಯೋಜನೆಗಳನ್ನು ವಿಸ್ತರಿಸಬೇಕು. ಇದಕ್ಕಾಗಿ ಆರ್ಥಿಕ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವುದನ್ನು ಸರ್ಕಾರ ಆದ್ಯತೆ ಮಾಡಿಕೊಳ್ಳಬೇಕು. ಈಗಾಗಲೇ ಬಿಪಿಎಲ್ ಕಾರ್ಡು ಹೊಂದಿರುವ ಬಡಕುಟುಂಬಗಳಿಗೆ ಈ ಯೋಜನೆಗಳನ್ನು ತಕ್ಷಣಕ್ಕೇ ಅನುಷ್ಠಾನಗೊಳಿಸಲು ಸುಲಭವಾಗಬಹುದು. ಅದಕ್ಕಾಗಿ ಒಂದು ಮಟ್ಟದ ಒತ್ತಡ ಹಾಕುವುದರಲ್ಲಿ ನ್ಯಾಯವಿದೆ. ಆದರೆ ಷರತ್ತು ಹಾಕಬೇಡಿ ಎಂದು ಕೂಗಿಕೊಳ್ಳುವುದು ಕೇವಲ ರಾಜಕೀಯಕ್ಕಾಗಿ ಮಾತ್ರ ವಿರೋಧ ಎಂದೆನಿಸಿಕೊಳ್ಳುತ್ತದೆ.

ನಿಜಕ್ಕೂ ವಿರೋಧ ಪಕ್ಷಗಳು ಮಾಡಬೇಕಿರುವುದು; ಬಿಪಿಎಲ್ ಪಡಿತರ ಚೀಟಿಗಳು ಸಿಕ್ಕಿರದ ಎಷ್ಟೋ ಜನಕ್ಕೆ ಅದು ಸಿಗುವಂತೆ ಮಾಡಬೇಕು. ಎಷ್ಟೋ ಬಡ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಸಿಕ್ಕುವ ಮಾನದಂಡವೇ ಗೊತ್ತಿರದೆ ಉಳಿದಿರುತ್ತಾರೆ. ಅಂತಹ ಕುಟುಂಬಗಳಿಗೆ ಅದು ಸಿಗುವಂತೆ ನೋಡಿಕೊಂಡು ಕಲ್ಯಾಣ ಕಾರ್ಯಕ್ರಮಗಳ ತಿಳಿವು ಮೂಡಿಸಬೇಕು. ಈ ಕಲ್ಯಾಣ ಯೋಜನೆಗಳು ಎಲ್ಲೂ ಸೋರಿಕೆಯಾಗದಂತೆ ಹದ್ದಿನ ಕಣ್ಣಿಟ್ಟು, ದುರುಪಯೋಗ ನಡೆಯುವ ಕಡೆ ವಿರೋಧಪಕ್ಷಗಳು ಕೆಂಡವಾಗಬೇಕು. ಯಾವುದೇ ಸಮಯದಲ್ಲಿ ಲಕ್ಷಾಂತರ ಬಿಪಿಎಲ್ ನೊಂದಣಿ ಅರ್ಜಿಗಳು ಪೆಂಡಿಂಗ್ ಹಂತದಲ್ಲಿರುತ್ತವೆ. ಅವುಗಳ ಬಗ್ಗೆ ಶೀಘ್ರ ಕ್ರಮ ತೆಗೆದುಕೊಳ್ಳುವುದಕ್ಕೆ ಒತ್ತಡ ಹಾಕಬೇಕು. ಇಂತಹ ಜವಾಬ್ದಾರಿಗಳನ್ನು ವಿರೋಧ ಪಕ್ಷಗಳು ಹೊತ್ತಿಕೊಂಡರೆ ಜನಸಾಮಾನ್ಯರಿಗೆ ನೆರವೂ ಅದೀತೂ, ಆ ಪಕ್ಷಗಳಿಗೆ ಮುಂದೆ ಜನಸಮೂಹದ ಬೆಂಬಲವೂ ದೊರೆತೀತು.

ಮೋಹನ್‌ದಾಸ್ ಪೈ

ಕಲ್ಯಾಣ ಯೋಜನೆಗಳ ಬಗ್ಗೆ ಮತ್ತೊಂದು ರೀತಿಯ ಅಸಹ್ಯಕಾರಿ ವಿರೋಧ ಕೂಡ ಎದ್ದುಕಾಣುತ್ತದೆ. ಬಹುತೇಕ ಅರ್ಬನ್ ಎಲೈಟ್ ಆದ, ಸಂಘ ಪರಿವಾರದ ಜೊತೆಗೆ ನಿಕಟವಾಗಿ ಗುರುತಿಸಿಕೊಂಡ ಸೋ ಕಾಲ್ಡ್ ಮೇಲ್ಜಾತಿಯ ಜನರೇ ಈ ವಿರೋಧದ ಮುಂದಾಳುಗಳು. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್‌ದಾಸ್ ಪೈ. ಇಂತಹವರಿಂದ ಉತ್ತೇಜನ ಪಡೆಯುವ ಹಲವು ಐಟಿ ಮಂದಿಯೂ ಇದ್ದಾರು. ಇವರು ಅವಲತ್ತುಕೊಳ್ಳುವುದೇನೆಂದರೆ, ’ನಾವು ಜಾಸ್ತಿ ತೆರಿಗೆ ಕಟ್ಟುತ್ತೇವೆ; ನಮ್ಮ ತೆರಿಗೆ ದೇಶದ ಅಭಿವೃದ್ಧಿಗೆ ಮಾತ್ರ. ಅದು ಉಚಿತ ಹಂಚಿಕೆಗೆ ಸಲ್ಲ’ ಎಂದು. ಈ ರೀತಿಯ ಒಂದು ಪೋಸ್ಟರ್‌ಅನ್ನು ಈ ಪೈ ಕೂಡ ಹಂಚಿಕೊಂಡಿದ್ದರು. ಸಾವಿರಾರು ಜನ ಅದನ್ನು ಫಾಲೋ ಮಾಡಿದರು. ಈ ’ಪ್ರತಿಷ್ಠಿತ’ ವರ್ಗ ಎಂದು ಕರೆದುಕೊಳ್ಳುವವರು, ’ಅರ್ಥಶಾಸ್ತ್ರ’ದ ಅಥವಾ ಆರ್ಥಿಕತೆಯ ಮೂಲ ಪರಿಕಲ್ಪನೆಯ ಬಗ್ಗೆಯೇ ಅರಿವಿರದ ಮೂಢರು ಅಥವಾ ಅದರ ಬಗ್ಗೆ ತಿಳಿದುಕೊಳ್ಳಲು ಮುಂದಾಗದ ಮೈಗಳ್ಳರು.

ಯಾವುದೇ ಸಮಯದಲ್ಲಿ ಇರುವ ಸೀಮಿತ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಹಂಚುವ ವಿಧಾನವೇ ಆರ್ಥಿಕತೆಯ ಜೀವಾಳ. ಅಂತಹ ವಿಧಾನವನ್ನು ಅಧ್ಯಯನ ಮಾಡುವುದೇ ಅರ್ಥಶಾಸ್ತ್ರ. ಬಂಡವಾಳವನ್ನು ಕೆಲವೇ ಕೆಲವರಲ್ಲಿ ಕ್ರೋಢೀಕರಿಸಿಕೊಳ್ಳುವ (ಅವರ ತೆರಿಗೆಯನ್ನು ಕಡಿತಗೊಳಿಸಿ) ಕ್ಯಾಪಿಟಲಿಸಂ ಅಥವಾ ಬಂಡವಾಳಶಾಹಿ ಅರ್ಥಶಾಸ್ತ್ರ ಕೂಡ, ಟ್ರಿಕಲ್ ಡೌನ್ ಎಫೆಕ್ಟ್‌ನಿಂದ ಅಥವಾ ಪಿರಾಮಿಡ್ ವಿನ್ಯಾಸದ ಆರ್ಥಿಕ ವ್ಯವಸ್ಥೆಯಲ್ಲಿ ನಡೆಯುವ ಹಲವು ವ್ಯವಹಾರ-ವಹಿವಾಟುಗಳಿಂದ ಸೋರುವ ಹಣಕಾಸು, ಪಿರಾಮಿಡ್‌ನ ಕೆಳಗಿರುವವರಿಗೂ ಸಂಪನ್ಮೂಲಗಳನ್ನು ಒದಗಿಸುತ್ತದೆ ಮತ್ತು ಇದು ಸಂಪನ್ಮೂಲ ಹಂಚಿಕೆಯ ಪರಿಣಾಮಕಾರಿ ವಿಧಾನ ಎಂದು ನಂಬುತ್ತದೆ. ಇದು ಭಾರತದಂತಹ ದೇಶಗಳಲ್ಲಿ ಮತ್ತು ವಿಶ್ವದ ಹಲವು ದೇಶಗಳಲ್ಲಿ ಅಸಮಾನತೆಯನ್ನು ಹೆಚ್ಚಿಸಿದೆ ಮತ್ತು ಈ ಆರ್ಥಿಕ ಮಾದರಿ ವಿಫಲವಾಗಿದೆ ಎಂಬುದು ಹಲವು ಅಧ್ಯಯನಗಳಿಂದ ಅರ್ಥಶಾಸ್ತ್ರಜ್ಞರು ಕಂಡುಕೊಂಡು ಹೇಳುತ್ತಿರುವ ವಿಷಯ. ಅದನ್ನು ಈಗ ಸದ್ಯಕ್ಕೆ ಪಕ್ಕಕ್ಕಿಟ್ಟು ಹೇಳುವುದಾದರೂ, ಈ ಕಲ್ಯಾಣ ಯೋಜನೆಗಳನ್ನು ವಿರೋಧಿಸುವ ವಾಟ್ಸ್‌ಆಪ್ ಅರ್ಥಶಾಸ್ತ್ರಜ್ಞರು ಸಂಪನ್ಮೂಲಗಳ ಹಂಚಿಕೆಯನ್ನೇ ನಿರಾಕರಿಸುತ್ತಾರೆ. ಒಟ್ಟಿನಲ್ಲಿ ತಾವು ಪ್ರತಿನಿಧಿಸುವ ರಾಜಕೀಯಕ್ಕಾಗಿ ತಮ್ಮ ಕಾಲನ್ನು ತಾವೇ ಕತ್ತರಿಸಿಕೊಂಡರೂ ಸರಿ, ಸ್ವಂತ ಚಿಂತನೆಯೇ ಇಲ್ಲದೆ ಇಂತಹ ಅಪದ್ಧಗಳನ್ನು ಅನುಕರಿಸುತ್ತಾರೆ. ಇದೇ ಮಾನದಂಡದಲ್ಲಿ, ಮುಂದೆಂದಾದರೂ, ಸಂಪನ್ಮೂಲಗಳ ಸಿಂಹಪಾಲನ್ನು ಹೊಂದಿರುವ 1% ಶ್ರೀಮಂತರು ಮತ್ತು ಕ್ರೋನಿ ಕ್ಯಾಪಿಟಲಸ್ಟ್‌ಗಳು ಈಗ ಕಲ್ಯಾಣ ಯೋಜನೆಗಳನ್ನು ವಿರೋಧಿಸುತ್ತಿರುವ ಮೇಲುಮಧ್ಯಮ ವರ್ಗಕ್ಕೆ ಸಿಗುತ್ತಿರುವ ಸಬ್ಸಿಡಿಗಳನ್ನು ನಿಲ್ಲಿಸುವಂತೆ ಕೂಡ ಸರ್ಕಾರಗಳಿಂದ ಒತ್ತಡ ಹೇರಬಲ್ಲರು. ಅದು ಈಗಾಗಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಬ್ಸಿಡಿಗಳು ಖೋತಾ ಆಗಿರುವುದರಲ್ಲಿ ಕಾಣಬಹುದು. ಮುಂದೆ ಸುಲಭ ಬಡ್ಡಿ ದರದಲ್ಲಿ ಹೌಸಿಂಗ್ ಲೋನ್ ಸಿಗದಂತೆ ನೋಡಿಕೊಳ್ಳಲು ಒತ್ತಡ ಹಾಕಬಹುದು. ನೌಕರರಿಗೆ ಸಿಗುವ ರಜೆಗಳನ್ನು ಕಡಿತಗೊಳಿಸಿ ವೇತನ ಹೆಚ್ಚಿಸದೆ ಹೆಚ್ಚು ಅವಧಿಯ ಕೆಲಸ ಮಾಡಿಸಿಕೊಳ್ಳುವ ಕಾನೂನುಗಳಿಗೆ ಒತ್ತಡ ತರಬಹುದು. ಈಗ ಸದ್ಯಕ್ಕೆ ಸ್ವಾವಲಂಬನೆ ಸಾಧಿಸಿರುವ ಮೇಲು ಮಧ್ಯಮ ವರ್ಗದವರು ಮಧ್ಯಮ ವರ್ಗಕ್ಕೆ ಅಥವಾ ಬಡತನಕ್ಕೆ ಕುಸಿಯುವುದಕ್ಕೆ ಹೆಚ್ಚಿನ ಎಫರ್ಟ್ ಏನೂ ಬೇಕಾಗುವುದಿಲ್ಲ. ಮಧ್ಯಮ ವರ್ಗದಿಂದ ಬಡತನಕ್ಕೆ ಕುಸಿಯುವುದಕ್ಕೆ ಕುಟುಂಬವೊಂದರ ಸದಸ್ಯ ಗಂಭೀರ ರೋಗವೊಂದಕ್ಕೆ ತುತ್ತಾದರೆ ಸಾಕೆಂಬ ಮಾತಿದೆ. ಕೊರೊನಾ ಸಮಯದಲ್ಲಿ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳು ಬಡತನಕ್ಕೆ ಜಾರಿದ್ದನ್ನು ಹಲವು ವರದಿಗಳು ದಾಖಲಿಸಿದ್ದವು. ಇಂತಹ ಕಾರಣಗಳಿಂದ 1% ಇರುವ ಶ್ರೀಮಂತ ಪ್ರತಿಷ್ಠಿತ ವರ್ಗದ ಕಲ್ಯಾಣ ಕಾರ್ಯಕ್ರಮಗಳ ವಿರೋಧಿ ಮಾತುಗಳನ್ನು ಮೇಲು ಮಧ್ಯಮ ಮತ್ತು ಮಧ್ಯಮ ವರ್ಗಗಳು ಅನುಕರಿಸಿ ಗಿಣಿರಾಮನಂತೆ ಪುನರುಚ್ಚರಿಸುತ್ತಿರುವುದು ದುರಂತದ ಕಥೆಯಾಗಿದೆ ಮತ್ತು ದುರುದ್ದೇಶದ ರಾಜಕಾರಣದಿಂದ ಕೂಡಿದೆ.

ಇದನ್ನೂ ಓದಿ: ಜೂ.1ರಿಂದ ಪ್ರತಿ ಮನೆಗೂ 100 ಯೂನಿಟ್ ವಿದ್ಯುತ್ ಉಚಿತ: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಣೆ

ಹೀಗೆ ಕಲ್ಯಾಣ ಯೋಜನೆಗಳನ್ನು ಬಿಟ್ಟಿ ಅಥವಾ ಫ್ರೀಬೀಸ್ ಎಂದು ಲೇವಡಿಯಾಡುವ ಇದೇ ಮಧ್ಯಮವರ್ಗ ತಮ್ಮ ಕುಟುಂಬದ 90ರ ದಶಕದ ಜೀವನನ್ನ ಒಮ್ಮೆ ನೆನಪಿಸಿಕೊಂಡರೂ ಇಂತಹ ದುರುದ್ದೇಶದ ಮಾತುಗಳಿಗೆ ಇಳಿಯಲಾರದು. ತಮ್ಮ ಒಂದು ಹಿಂದಿನ ಪೀಳಿಗೆ ಸಾಮಾನ್ಯವಾಗಿ ರೇಷನ್ ಕಾರ್ಡ್ ಹೊಂದಿದ ಮತ್ತು ಅಕ್ಕಿ, ಗೋಧಿ, ಸೀಮೆ ಎಣ್ಣೆ ಮುಂತಾದವಕ್ಕೆ ಪಡಿತರ ವ್ಯವಸ್ಥೆಯನ್ನು ಅವಲಂಬಿಸಿದ್ದ ಕುಟುಂಬವೇ ಆಗಿರುತ್ತದೆ. ನಂತರ ಆಗಿರುವ ಬೆಳವಣಿಗೆಗಳಿಂದ ತುಸು ಚಲನೆ ಸಾಧ್ಯವಾಗಿ ಒಂದಿಷ್ಟು ಸ್ವಾವಲಂಬನೆಯನ್ನು ಸಾಧಿಸಿರುವ ಕಾರಣಕ್ಕೆ, ಇನ್ನೂ ಬಡವರಾಗಿಯೇ ಉಳಿದಿರುವವರನ್ನು ಅವಮಾನಿಸುವ ಧೋರಣೆ ತಳೆಯುವುದು ದುರುಳತನವಾದೀತು. ಈ ವರ್ಗ ಈ ಚಲನೆಯನ್ನು ಸಾಧಿಸುವುದಕ್ಕೋಸ್ಕರವೇ ಒಂದು ದೊಡ್ಡ ವರ್ಗ ಇನ್ನೂ ಬಡತನ ರೇಖೆಯಿಂದ ಕೆಳಗಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳದೆ ಹೋದರೆ ಒಳಗಿನಿಂದಲೇ ಕೊಳೆತುಹೋಗುತ್ತರುವ ಸಮಾಜದ/ವರ್ಗದ ಲಕ್ಷಣ ಇದೆನಿಸುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕಲ್ಯಾಣ ಯೋಜನೆಗಳ ವಿರುದ್ಧ ಯುದ್ಧ ಸಾರುವ ಬೆರಳೆಣಿಕೆಯಷ್ಟು ಪ್ರಿವಿಲೆಜ್ ಮಂದಿಯ ಮಾತಿಗೆ ಮರಳಾಗುವ ಮುನ್ನ ಐಎಚ್‌ಡಿಎಸ್ (ಇಂಡಿಯನ್ ಹ್ಯೂಮನ್ ಡೆವಲಪ್‌ಮೆಂಟ್ ಸರ್ವೇ) ಸಂಸ್ಥೆ ಬಿಡುಗಡೆ ಮಾಡಿದ್ದ ಕೆಲವು ಅಂಕಿಅಂಶಗಳನ್ನು ನೋಡೋಣ. 2011-12ರಲ್ಲಿ ಈ ಸಂಸ್ಥೆ ನೀಡಿದ ವರದಿ ಪ್ರಕಾರ ಇಡೀ ದೇಶದ ಕುಟುಂಬಗಳನ್ನು ಐದು ಸಮಾನ ವರ್ಗಗಳನ್ನಾಗಿ ವಿಂಗಡಿಸಿದರೆ, 20% ಜನ ಕಡುಬಡತನದ ಕುಟುಂಬಗಳು ವಾರ್ಷಿಕವಾಗಿ 1000 ರೂಪಾಯಿಯಿಂದ 33,000 ರೂಪಾಯಿ ವರಮಾನದಲ್ಲಿ ಬದುಕುತ್ತಾರೆ. 20% ಕುಟುಂಬಗಳ ವಾರ್ಷಿಕ ವರಮಾನ 33,001ರಿಂದ 55,640 ರೂಪಾಯಿಗಳು. ವಾರ್ಷಿಕವಾಗಿ 55,641ದಿಂದ 88,000 ರೂಪಾಯಿ ಗಳಸುವ ಕುಟುಂಬಗಳು ಮೂರನೇ 20% ವರ್ಗವಾದರೆ, 88,001ದಿಂದ 1.5 ಲಕ್ಷ ರೂಪಾಯಿ ವಾರ್ಷಿಕ ಗಳಿಕೆಯಿರುವ ಮತ್ತು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಿಂತಲೂ ಹೆಚ್ಚು ಗಳಿಸುವ ಕುಟುಂಬಗಳು ಉಳಿದ ಎರಡು ವರ್ಗಗಳಲ್ಲಿ ಬರುತ್ತವೆ. ಇನ್ನು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಗಿಂತಲೂ ಹೆಚ್ಚು ಗಳಿಸುವ 20%ನ ಶ್ರೀಮಂತ ವರ್ಗದಲ್ಲಿ, 8 ಲಕ್ಷಕ್ಕೂ ಹೆಚ್ಚು ಆದಾಯವಿರುವ ಒಟ್ಟು ಕುಟುಂಬಗಳ ಕೇವಲ 2% ಮಾತ್ರ! ಕರ್ನಾಟಕದಲ್ಲೂ ಈ ಅನುಪಾತ ಭಿನ್ನವಾಗೇನೂ ಇಲ್ಲ. ತಲಾವಾರು ಆದಾಯ ಹೆಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದರೂ, ಬೆಂಗಳೂರು ಎಂಬ ಮಹಾನಗರಿಯ ಪಾತ್ರದಿಂದ ಮಾತ್ರ ಅದು ಆ ಹೆಚ್ಚಳ ಕಂಡಿದೆ. ಕೇಂದ್ರ ಸರ್ಕಾರದ ಯೋಜನಾ ಆಯೋಗ 2011-12ರಲ್ಲಿ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ಐವರಲ್ಲಿ ಒಬ್ಬರು ಬಡತನದ ಕೆಳಗಿನ ರೇಖೆಯಲ್ಲಿದ್ದಾರೆ. ಅಂದರೆ ಸುಮಾರು 1.3 ಕೋಟಿ ಜನ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾರ್ಷಿಕವಾಗಿ 902ರಿಂದ 1098ರೂಪಾಯಿಗಳನ್ನು ಗಳಿಸಿ ಜೀವನ ದೂಕುತ್ತಿದ್ದಾರೆ. ವಾಸ್ತವ ಚಿತ್ರಣ ಹೀಗಿರುವಾಗ, ಈ ವರ್ಗಕ್ಕೆ ಸಹಾಯ ಮಾಡುವ ಕೆಲವು ಯೋಜನೆಗಳನ್ನು ಕಂಡು ಕರುಬುವವರಿಗೆ ಏನು ಹೇಳುವುದು?

(ಜೂನ್ 2ರಂದು ನಡೆದ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಮಾಡಿ ನಿರ್ಧಾರ ಘೋಷಿಸಿದೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ, ಶಾ ವಿರುದ್ಧ ಘೋಷಣೆ ಆರೋಪ: ತನ್ನದೇ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಮನವಿ ಮಾಡಿದ ಜೆಎನ್‌ಯು ಆಡಳಿತ ಮಂಡಳಿ

ಸೋಮವಾರ ರಾತ್ರಿ ವಿದ್ಯಾರ್ಥಿಗಳ ಗುಂಪೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಆ ಘೋಷಣೆಗಳು "ಪ್ರಚೋದನಕಾರಿ, ಪ್ರಚೋದನಕಾರಿ ಮತ್ತು ಗೌರವಾನ್ವಿತ ಸುಪ್ರೀಂ ಕೋರ್ಟ್‌ನ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎಸ್‌ಐಟಿ ತನಿಖೆ ಪಕ್ಷಪಾತದಿಂದ ಕೂಡಿದೆ ಎಂಬ ವಿಪಕ್ಷಗಳ ಆರೋಪ ತಿರಸ್ಕರಿಸಿದ ಕೇರಳ ಹೈಕೋರ್ಟ್

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆಯು ಪಕ್ಷಪಾತದಿಂದ ಕೂಡಿದೆ ಅಥವಾ ಸರ್ಕಾರದ ಒತ್ತಡದಲ್ಲಿದೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ತಿರಸ್ಕರಿಸಿರುವ ಕೇರಳ ಹೈಕೋರ್ಟ್, ಪ್ರಸ್ತುತ ನಡೆಯುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ...

ಆರ್‌ಎಸ್‌ಎಸ್ ಕುರಿತ ಹೇಳಿಕೆ: ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ನಲಪಾಡ್‌ಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್‌ಎಸ್‌ಎಸ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಾನನಷ್ಟ ಮೊಕದ್ದಮೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್ ಮತ್ತು ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಂಸದ/ಶಾಸಕರ...

‘ನಾನು ಹಿಂದೂ ಅಲ್ಲ, ಮನುಷ್ಯ’: ಎಸ್‌ಪಿ ನಾಯಕ ಶಿವರಾಜ್ ಸಿಂಗ್ ಯಾದವ್ ಹೇಳಿಕೆ ತಿರುಚಿ ವಿವಾದ ಸೃಷ್ಟಿಸಿದ ಬಿಜೆಪಿ ಬೆಂಬಲಿಗರು

ಸಮಾಜವಾದಿ ಪಕ್ಷದ ನಾಯಕ, ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಆಪ್ತ ಸಹಾಯಕ ಹಾಗೂ ಉತ್ತರ ಪ್ರದೇಶದ ಫಿರೋಜಾಬಾದ್‌ನ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಸಿಂಗ್ ಯಾದವ್ ‘ನಾನು ಹಿಂದೂ ಅಲ್ಲ, ನಾನು...

ಛತ್ತೀಸ್‌ಗಢ : ಎಂಟು ಮಂದಿ ಬಂಗಾಳಿ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ; ವರದಿ

ಛತ್ತೀಸ್‌ಗಢದ ರಾಯ್‌ಪುರದಲ್ಲಿ ಭಾನುವಾರ (ಜ.4) ಬಜರಂಗದಳ ಕಾರ್ಯಕರ್ತರು ಎಂಟು ಮಂದಿ ಬಂಗಾಳಿ ಮಾತನಾಡುವ ಮುಸ್ಲಿಂ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಾಯ್‌ಪುರ ಜಿಲ್ಲೆಯ ಕಟೋವಾಲಿ...

‘ಉಮರ್ ಮತ್ತು ಶಾರ್ಜಿಲ್ ಜಾಮೀನು ನಿರಾಕರಣೆ’: ಶಾಸಕಾಂಗ, ನ್ಯಾಯಾಂಗದ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆ: ಶ್ರೀಪಾದ್ ಭಟ್

ಇಂಡಿಯನ್ ಎಕ್ಸ್ಪ್ರೆಸ್ ನಲ್ಲಿನ ವರದಿಯ ಪ್ರಕಾರ ಈ ಪ್ರಕರಣದ ವಿಚಾರಣೆಯಲ್ಲಿರುವ ಮುಖ್ಯ ಪ್ರಶ್ನೆ: ಬಂಧನವಾಗಿ ಐದು ವರ್ಷಗಳಾದರೂ ಸಹ ಇನ್ನೂ ವಿಚಾರಣೆ ಆರಂಭವಾಗಿಲ್ಲ. ದೀರ್ಘಕಾಲದ ಜೈಲುವಾಸವನ್ನು ಭಯೋತ್ಪಾದಕ ವಿರೋಧಿ ಕಾನೂನಿನ ಅಡಿಯಲ್ಲಿ ಸಮರ್ಥಿಸಬಹುದೇ?...

ಉತ್ತರ ಪ್ರದೇಶ SIR : ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್‌) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ...

ಕರೂರ್ ಕಾಲ್ತುಳಿತ ಪ್ರಕರಣ: ಟಿವಿಕೆ ನಾಯಕ ವಿಜಯ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್

ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಟಿವಿಕೆ ನಾಯಕ ವಿಜಯ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ ಎಂದು ಪಿಟಿಐ ಮಂಗಳವಾರ ವರದಿ ಮಾಡಿದೆ. ಸೆಪ್ಟೆಂಬರ್ 27 ರಂದು ನಟ-ರಾಜಕಾರಣಿ ವಿಜಯ್ ಅವರ ತಮಿಳಗ...

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ರಾಯಭಾರ ಕಚೇರಿ ಉದ್ಘಾಟನೆ : ‘ಐತಿಹಾಸಿಕ ಕ್ಷಣ’ ಎಂದ ರಾಯಭಾರಿ ಹುಸಾಮ್ ಝೊಮ್ಲೋಟ್

ಲಂಡನ್‌ನಲ್ಲಿ ಪ್ಯಾಲೆಸ್ತೀನ್ ದೇಶದ ರಾಯಭಾರಿ ಕಚೇರಿ ಅಧಿಕೃತವಾಗಿ ಉದ್ಘಾಟನೆಯಾಗಿದ್ದು, ಯುಕೆಯ ಪ್ಯಾಲೆಸ್ತೀನ್‌ ರಾಯಭಾರಿ ಇದನ್ನು 'ಐತಿಹಾಸಿಕ ಕ್ಷಣ' ಎಂದು ಬಣ್ಣಿಸಿದ್ದಾರೆ. ಸೋಮವಾರ (ಜ.5) ಪಶ್ಚಿಮ ಲಂಡನ್‌ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ರಾಯಭಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ...

ಬಾಂಗ್ಲಾದೇಶದಲ್ಲಿ ಹಿಂದೂ ಉದ್ಯಮಿ ಮತ್ತು ಪತ್ರಕರ್ತನಾಗಿದ್ದ ರಾಣಾ ಪ್ರತಾಪ್ ಬೈರಾಗಿ ತಲೆಗೆ ಗುಂಡಿಕ್ಕಿ ಹತ್ಯೆ 

ಬಾಂಗ್ಲಾದೇಶದ ಜೆಸ್ಸೋರ್ ಜಿಲ್ಲೆಯಲ್ಲಿ ಸೋಮವಾರ 38 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರ ತಲೆಗೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.  ಬೈರಾಗಿ ಒಬ್ಬ ಹಿಂದೂ ಉದ್ಯಮಿ ಮತ್ತು...