Homeಅಂಕಣಗಳುಕೃಷಿ ಕಥನಕೃಷಿಕಥನ 2: ತುಮಕೂರು ಜಿಲ್ಲೆಯ ಕೆಲವು ಸಾವಯವ ತೋಟಗಳ ಒಳನೋಟಗಳು

ಕೃಷಿಕಥನ 2: ತುಮಕೂರು ಜಿಲ್ಲೆಯ ಕೆಲವು ಸಾವಯವ ತೋಟಗಳ ಒಳನೋಟಗಳು

- Advertisement -
- Advertisement -

ಸುಸ್ಥಿರವಾದ ಬೆಳೆನೀತಿ, ನೀರಿನ ನೀತಿ, ಭೂನೀತಿಗಳು ಇಲ್ಲದಿರುವ ಪರಿಣಾಮವಾಗಿ ಎಲ್ಲೆಡೆಯು ಕೃಷಿ, ತೋಟಗಾರಿಕೆಗಳು ಮುಗ್ಗರಿಸುತ್ತಿವೆ. ಇದು ತುಮಕೂರು ಜಿಲ್ಲೆಯ ಸಂದರ್ಭದಲ್ಲೂ ನಿಜವೇ. ಅಡಕೆ, ತೆಂಗು ಆವರಿಸಿ ಧವಸಧಾನ್ಯ ಪೇರಿ ಕಿತ್ತಿವೆ. ತಿನ್ನುವ ರಾಗಿಗೆ ಒಂದು ಕೆ.ಜಿ.ಗೆ ಎಂಟು ರೂಪಾಯಿ ತಿಂದು ಉಗಿಯುವ ಅಡಕೆಗೆ ನೂರೈವತ್ತು ರೂಪಾಯಿ. ಯಾರು ಆಸೆಪಡುವುದಿಲ್ಲ ಹೇಳಿ. ಹಾಗೇ ತೆಂಗು ಇದ್ದುದರಲ್ಲಿ ಪರವಾಗಿಲ್ಲ ಎನಿಸಿ ಎಲ್ಲೆಲ್ಲೂ ನೆಡಲಾಯ್ತು. ನೀರಿಲ್ಲದೆ ಈ ಎರಡೂ ಬೆಳೆ ಬೆಳೆಯುವುದು ಕಷ್ಟವಾಗಿದೆ. ಇದರ ಪರಿಣಾಮವಾಗಿ ಬೋರ್‍ವೆಲ್‍ಗಳು ಭೋರಿಟ್ಟವು. ಆಳಆಳಕ್ಕೆ ನೀರು ತಪ್ಪಿಸಿಕೊಂಡು ಹೋಯಿತು. ಒಂದು ಸಾವಿರ ಅಡಿಯವರೆಗೆ ತಲುಪಿ ಆಗಿದೆ. ಅಲ್ಲಿಗೂ ಪೈಪುಗಳನ್ನು ಇಳಿಬಿಟ್ಟು ನೀರನ್ನು ತಡಕುವುದು ನಿಲ್ಲಲಿಲ್ಲ. ಖರ್ಚು ಹೆಚ್ಚಾಯಿತು. ಏಕ ಬೆಳೆ ಪದ್ಧತಿಯಿಂದಾಗಿ ರೋಗಗಳು ಹೆಚ್ಚಾದವು.

ಇಂಥ ಆರ್ಥಿಕ ಬೆಳೆಗಳನ್ನು ಬೆಳೆದೂ ಬದುಕಲು ಹಪಹಪಿಸುವ ಸಂದರ್ಭದಲ್ಲಿ ಹುಟ್ಟಿಕೊಂಡದ್ದು ಸಾವಯವ ಕೃಷಿ ಚಳುವಳಿ. ತುಮಕೂರು ಜಿಲ್ಲೆಯಲ್ಲಿ 80ರ ದಶಕದಲ್ಲಿ ಆರಂಭವಾದ ಈ ಬದಲಾವಣೆಯ ಗಾಳಿ ತೋಟಗಳತ್ತ ಬೀಸಿತೇ ಹೊರತು ಹೊಲಗದ್ದೆಗಳತ್ತ ಬೀಸುವಲ್ಲಿ ವಿಫಲವಾಯಿತೆಂದೇ ಹೇಳಬೇಕು. ಈಗಾಗಲೇ ಇಲ್ಲಿ ಹಬ್ಬಿ ಬೆಳೆದಿದ್ದ ತೋಟಗಳನ್ನು ಉಳಿಸಿಕೊಳ್ಳುವುದು, ಹಾಗೇ ತಮ್ಮ ಬದುಕನ್ನು ಕಾಯ್ದುಕೊಳ್ಳುವುದು ಇವರಿಗೆ ಅನಿವಾರ್ಯವಾಗಿತ್ತು ಎಂಬುದನ್ನಿಲ್ಲಿ  ಒಪ್ಪಬೇಕಾಗುತ್ತದೆ. ರಾಸಾಯನಿಕ ಮುಕ್ತವಾದ ನೀರಿನ ಮಿತವ್ಯಯದ ಬಹುಬೆಳೆಯ, ಪಶು ಮತ್ತು ಹಸಿರು ಸೊಪ್ಪಿನ ಆಧಾರಿತವಾದ ಸಾವಯವ ಕೃಷಿ ತುಮಕೂರು ಜಿಲ್ಲೆಯಲ್ಲಿ ಶಿವನಂಜಯ್ಯ ಬಾಳೆಕಾಯಿಯವರು ಆರಂಭಿಸಿದ ‘ಶೂನ್ಯ ಕೃಷಿಕರ ಬಳಗ’ದ ಮೂಲಕ ಪುನರಾರಂಭವಾಯಿತು. ಕೃಷಿ ಎಲ್ಲ ದೃಷ್ಟಿಯಿಂದಲೂ ದುಬಾರಿಯಾಗಿ, ಬೆಲೆಗಳು ನೆಲಕಚ್ಚಿದ್ದ ಹೊತ್ತಲ್ಲಿ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾಗ ಸ್ವತಂ ರೈತರು ಕೃಷಿ  ಖರ್ಚು ಕಡಿಮೆ ಮಾಡದೆ ಕೃಷಿಯನ್ನು ಲಾಭದಾಯಕ ಮಾಡುವುದು, ತನ್ಮೂಲಕ ರೈತರು ಜೀವಂತವಾಗಿ ಉಳಿಯುವುದು ಸಾಧ್ಯವಿಲ್ಲವೆಂದರಿತ ಬಾಳೆಕಾಯಿಯವರು “ಸಹಜ ಕೃಷಿ” ಹೆಸರಿನಿಂದ ತಮ್ಮ ಪ್ರಯೋಗಗಳನ್ನು ಆರಂಭಿಸಿದರು. ಇದಕ್ಕೆ ಜಪಾನಿನ ಕೃಷಿ ಗುರು ಪುಕುವೋಕಾ ಇವರಿಗೆ ಪ್ರೇರಣೆ.

ಇದೇ ಹೊತ್ತಿಗೆ ಸರಿಯಾಗಿ ತಮಕೂರು ಜಿಲ್ಲಾ ಸಿರಿಸಮೃದ್ಧಿ ಸಾವಯವ ಕೃಷಿಕರ ಬಳಗ ಆರಂಭವಾಯಿತು. ಇದಕ್ಕೆ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಡಾ. ಜಿ. ಎನ್. ಎಸ್. ರೆಡ್ಡಿ ಜೀವನಾಡಿಯಾಗಿ ಒದಗಿ ಬಂದರು. ರೆಡ್ಡಿ, ಬಾಳೇಕಾಯಿ ಮಡಿದ ಸಾವಿರಾರು ಭಾಷಣಗಳು ಮತ್ತು ಸ್ವತಃ ಇವರಿಬ್ಬರೂ ರೂಪಿಸಿದ ಪ್ರಾತ್ಯಕ್ಷಿಕೆಗಳು ಅಪಾರ ಪರಿಣಾಮ ಉಂಟು ಮಾಡಿದವು. ಬೈಫ್ ರೂಪಿಸಿದ ಮೈಲನಹಳ್ಳಿ ಯೋಜನೆ ರಾಷ್ಟ್ರದ ಗಮನ ಸೆಳೆಯಿತು. ಮರ ಬೇಸಾಯ, ಮಿಶ್ರಬೆಳೆ, ಮಳೆನೀರಿನ ಸದ್ಭಳಕೆ, ಕೊಪ್ಪಲುಗಳ ಮರುಸೃಷ್ಟಿ (ಕಿಚನ್ ಗಾರ್ಡನ್) ಮುಂತಾದ ಅನೇಕ ವಿಷಯಗಳಲ್ಲಿ ಇದು ಅತ್ಯುನ್ನತ ಮಾದರಿಯಾಗಿ ರೂಪುಗೊಂಡಿತು. ಹಾಗೆಯೇ ಶಿವನಂಜಯ್ಯನವರ ತೋಟ ಕೃಷಿಕರ ಯಾತ್ರಾಸ್ಥಳವಾಗಿ ಮಾರ್ಪಟ್ಟಾದ್ದು ಬದಲಾಣೆಯ ಗಾಳಿ ಬಿರುಸಾಗಲು ಕಾರಣವಾಯಿತು. ತಿಪಟೂರಿನಿಂದ ಆರಂಭವಾದ “ಸಿರಿಸಮೃದ್ಧಿ” ಪತ್ರಿಕೆ ಸಾವಯವ ಕೃಷಿಗೆ ಮೀಸಲಾಗಿ, ರಾಜ್ಯದಾದ್ಯಂತ ಚಳುವಳಿ ವಿಸ್ತಾರವಾಗಲು ಕಾರಣವಾಯಿತು.

ಸಿರಿಸಮೃದ್ಧಿ ಬಳಗವು ಪ್ರತಿತಿಂಗಳ ಮೂರನೇ ಭಾನುವಾರ ರೈತರ ತೋಟಗಳಲ್ಲೆ ನಡೆಸುತ್ತಿದ್ದ ಕೃಷಿಕರ ಸಭೆಗಳದ್ದೇ ಒಂದು ವಿಶೇಷ ಪರಿಣಾಮ. ಅಲ್ಲಿನ ತೋಟ ವೀಕ್ಷಣೆ, ತಜ್ಞರ ವೀಕ್ಷಕ ವಿವರಣೆ (ಮುಖ್ಯವಾಗಿ ಬಾಳೆಕಾಯಿಯವರದ್ದು) ಚರ್ಚೆ, ಮಾತುಕತೆ, ಅಲ್ಲಿನ ದೇಸಿ ಊಟೋಪಚಾರ, ಚೇರ್ಕಾಡಿ, ಪುರುಷೋತ್ತಮರಾಯರು ನಾರಾಯಣರೆಡ್ಡಿ, ಭರಮಗೌಡ, ಶಿವರಾಜ ಪಾಟೀಲ, ಎ.ಪಿ ಚಂದ್ರಶೇಖರ್, ಪ್ರಫುಲ್ಲಚಂದ್ರ ವಿಜಯ ಅಂಗಡಿ, ಸಂತೋಷ ಕೌಲಗಿ ಮುಂತಾದವರ ಅನುಭವ ಜನ್ಯ ಭಾಷಣಗಳು, ಪುಸ್ತಕ, ಕೃಷಿ ಪತ್ರಿಕೆ, ಪ್ರದರ್ಶನ ಒಂದೇ ಎರಡೆ. ಸದಾಶಿವಪ್ಪ ಮಾರಗೊಂಡನಹಳ್ಳಿಯವರ ರಂಗಪ್ರವೇಶದ ನಂತರ ಸಸಿವಿನಿಮಯ, ಸಸಿ ಕೊಡುಗೆ, ಬೀಜ ವಿನಿಮಯ ಆರಂಭವಾಯಿತು. ಅವರ ಅಮೋಘ ಭಾಷಣವೂ ಸಹ. ಸೊಗದೆ ಬೇರು, ಶಂಬೆಕಾಯಿ ನನಗೆ ಪರಿಚಯವಾದದ್ದು ಇಲ್ಲೆ. ನಾನು ನೂರಾರು ಹಾಡುಗಳನ್ನು ಬರೆಯುವಂತೆ ಪ್ರೇರೇಪಿಸಿದ ಈ ಸಭೆಗಳು ನನ್ನ ಗುರುಗಳು. ನಾವು ನಡೆಸಿದ ನಾಟಿಬೀಜಗಳ ಜಾತಾ, ಮಳೆನೀರಿನ ಆಂದೋಲನ, ಎಳನೀರು ಮೇಳಗಳೇ ಮುಂತಾದುವು ಈ ಬಳಗದ ಒತ್ತಾಸೆಯಿಂದಲೇ ನಡೆದಂತವು.

ಅಣೆಕಟ್ಟೆ ರಘುರಾಂ ಸಿರಿಸಮೃದ್ಧಿ ಬಳಗದ ಖಾಯಂ ಸಂಘಟಕರಾಗಿ ದಣಿವರಿಯದೆ ದುಡಿದವರು. ಅವರೊಂದಿಗೆ, ಚಿಕ್ಕನಾಯಕನಹಳ್ಳಿಯ ಪುರುಷೋತ್ತಮ, ಸುಬ್ರಹ್ಮಣ್ಯ ಕುಮಾರ್, ಬಳ್ಳಗೆರೆಯ ಸ್ವಾಮಿ, ತಂಪು ಎಳನೀರು ಖ್ಯಾತಿಯ ವಿನೋದ್, ತಂಡಗದ ರಾಜರತ್ನಂ, ಹೊನ್ನವಳ್ಳಿಯ ಶಂಕರನಾರಾಯಣ, ಮಠದಪಾಳ್ಯದ ವೀರಭದ್ರಸ್ವಾಮಿ, ನಂದಿಹಳ್ಳಿಯ ಮೃತ್ಯುಂಜಯಪ್ಪ, ಒದೆಕರ್ ಫಾರಂನ ನೀಲಕಂಠಮೂರ್ತಿ, ಗುರುಲಿಂಗಪ್ಪನವರು, ತಿಪಟೂರಿನ ನಂಜುಂಡಪ್ಪ, ಕೆ.ಆರ್ ಬಸವರಾಜು, ಷಡಕ್ಷರದೇವರು, ನಂಜುಡಪ್ಪ _ ಹೀಗೆ ನೂರಾರು ಜನಸೇರಿ ಈ ಬಳಗ ರೂಪುಗೊಂಡಿತು. ಇದರ ಪರಿಣಾಮವಾಗಿ ಬಹುಮಹಡಿ ಬಹುಬೆಳೆಯ ಸಹಜವಾದ, ಉಳುಮೆ ಇಲ್ಲದ, ಕಾಡುಕೃಷಿ ಎನ್ನಬಹುದಾದ ನೂರಾರು ತೋಟಗಳನ್ನು ಈಗ ಕಾಣಬಹುದಾಗಿದೆ. ಇವು ತುಮಕೂರು ಜಿಲ್ಲೆಯ ಹೊಸ ತೋಟದೇವಾಲಯಗಳಾಗಿ ಕೃಷಿ ಯಾತ್ರಿಕರನ್ನು ಆಕರ್ಷಿಸುತ್ತಿವೆ. ಇವು ಕೇವಲ ತೆಂಗಿನ ಅಥವಾ ಅಡಕೆಯ ಗೂಟಗಳಲ್ಲ ನಿಜವಾದ ತೋಟಗಳು. ಅಂಥ ಕೆಲವು ತೋಟಗಳ ಪಾಠಗಳನ್ನು ದಾಖಲಿಸಿದ್ದೇನೆ. ಇದು ಚಂದ್ರನನ್ನು ಕನ್ನಡಿಯಲ್ಲಿ ತೋರಿಸುವ ಪ್ರಯತ್ನ ಮಾತ್ರವೆಂಬುದನ್ನು ಬೇರೆ ಹೇಳಬೇಕಿಲ್ಲ. ಏಕೆಂದರೆ ಇದು ಕೃಷಿಯ ಮಾತು ಆದ್ದರಿಂದ ನೀವೇ ಸ್ವತಃ ಈ ತೋಟಗಳಿಗೆ ಭೇಟಿ ಕೊಡುವುದಕ್ಕಿಂತ ಶ್ರೇಷ್ಠ ಮಾರ್ಗ ಯಾವುದಿದೆ ಹೇಳಿ.

ಬಿಸಿಲ ಬೆಂಕಿಯ ನಡುಮಧ್ಯದ ಈ ತೋಟ

ಜೂನ್ ತಿಂಗಳ ಎರಡನೇ ವಾರದಲ್ಲಿ ಈ ಲೇಖನ ಬರೆಯುತ್ತಿರುವ ಹೊತ್ತಿನಲ್ಲಿ ಮಳೆಯೆಂಬ ಮಾಯೆ ಇನ್ನೂ ನೆಲಕ್ಕಿಳಿದಿಲ್ಲ. ಬಿಸಿಲು ಮಾತ್ರ ಕಿಂಚಿತ್ತು ಕರುಣೆ ತೋರದೆ ಸುರಿಯುತ್ತಲೇ ಇದೆ. ಮಳೆತಜ್ಞರು ಹಲ್ಲಿ ಶಕುನದಂತೆ ಆಗ ಈಗ ಎನ್ನುತ್ತಿದ್ದಾರೆ. ಸಾಲು ಸಾಲು ತೆಂಗು, ಅಡಿಕೆ ತೋಟಗಳು ಗೋಣು ಎಸೆಯುತ್ತಿವೆ. ನಾಲಾ ಬಯಲುಗಳಲ್ಲೇ ಕಬ್ಬು, ಭತ್ತ ಇತ್ಯಾದಿಗಳೆಲ್ಲಾ ನೀರಿಲ್ಲದೆ ಉರಿದು ಹೋಗುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ, ಜಾನುವಾರುಗಳು ಮೇವು ನೀರುಗಳಿಲ್ಲದೆ ಗುಂಪುಗುಂಪಾಗಿ, ಹಿಂದಿರುಗಿ ಬರಗಾಲದ ಜಾಗಕ್ಕೆ ಸಾಗುತ್ತಿವೆ. ಜನರ ಸ್ಥಿತಿ ಇದಕ್ಕಿಂತ ಕಡೆಯಾಗಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಪತ್ರಿಕೆ, ಟಿ.ವಿ. ರೇಡಿಯೋಗಳಲ್ಲಿ ಮಳೆ ಭವಿಷ್ಯ, ಮುಂಗಾರು ಮಾತು ಕೇಳಿಬರುತ್ತಿವೆ. ಸರ್ಕಾರಗಳು ಮಾಡುವ ಕೆಲಸಬಿಟ್ಟು ಆಡೋ ದಾಸಯ್ಯನ ಕೂಡಿ ಪೂಜೆ ಮಾಡಿಸುತ್ತಿವೆ. ಕೆರೆ ಕಟ್ಟೆಗಳ ಹೂಳು ಹಾಗೆ ಕುಳಿತಿದೆ, ‘ಕೂಲಿಗಾಗಿ ಕಾಳು’ ಯೋಜನೆ ಟ್ರಾಕ್ಟರ್, ಹಿಟಾಚಿಗಳೆಂಬ ರಾಕ್ಷಸ ಚಕ್ರಗಳ ಅಡಿ ಇಟ್ಟಾಡುತ್ತಿದೆ. ಮಳೆ ಬಂದರೆ ಮಳೆ ನೀರು ಹಿಡಿಯಲು ಒಂದು ಪುಟ್ಟ ಗುಂಡಿಯನ್ನು ತೋಡಿ ಸಿದ್ಧಗೊಳಿಸಿಕೊಳ್ಳದ ಜನ ಹೋಮ, ಹವನ, ಯಜ್ಞ, ಸೆಮಿನಾರ್‌ಗಳಲ್ಲಿ ಹೂತು ಕೂತಿದೆ.

ಜಿ. ಶಿವನಂಜಯ್ಯ

ಈ ನಿರಾಶೆಯ ನಡುವೆಯೂ ಭರವಸೆಗಳಿವೆ. ಅಂಥ ಒಂದು ಭರವಸೆ ‘ಬಿಸಿಲ ಬೆಂಕಿಯ ನಡುಮಧ್ಯದ ಈ ತೋಟ’ ಸಾವಯವ ಕೃಷಿ ಚಳುವಳಿಯನ್ನು ಕರ್ನಾಟಕದಲ್ಲಿ ಹುಟ್ಟು ಹಾಕಿದವರಲ್ಲಿ ಒಬ್ಬರಾದ ಜೆ.ಸಿ.ಪುರದ ಜಿ.ಶಿವನಂಜಯ್ಯನವರ ಈ ತೋಟವನ್ನು ಅನೇಕ ಕೃಷಿ ಆಸಕ್ತರು ನೋಡಿರಬಹುದು. 25 ವರ್ಷಗಳಿಂದಲೂ ಉಳುಮೆ ಇಲ್ಲದೆ ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆದು ಉಳಿದಿರುವ ಇವರ ತೊಟವನ್ನು ಈ ವರ್ಷದ ರಣ ಬಿಸಿಲು, ಕಳೆದ ವರ್ಷದ ಅತಿ ಕಡಿಮೆ ಮಳೆ, ಕಡಿಮೆ ನೀರುಗಳೆಲ್ಲಾ ಅಗ್ನಿಪರೀಕ್ಷೆಗೆ ಗುರಿಪಡಿಸಿವೆ.

ಬಿಸಿಲಿಗೆ ಬಗ್ಗದ ತೋಟ

ಸಹಜ ಕೃಷಿಯ, ಮಿಶ್ರ ಬೆಳೆಗಳ ಈ ಹಸುರು ತುಂಬಿದ ತೋಟದ ಪಕ್ಕದ ತೋಟಗಳನ್ನು ನೋಡಿದರೆ ಹೊಟ್ಟೆಗೆ ಬೆಂಕಿ ಬಿದ್ದಷ್ಟು ಘಾಸಿಯಾಗುತ್ತದೆ. ನೆಲ ರಕ್ತ ಕಾರುತ್ತಿದೆ. ತೆಂಗಿನ ಗರಿಗಳು ಇಳಿಬಿದ್ದಿವೆ. ಅಡಕೆ ಗಿಡಗಳ ಪಾಡು ಹೇಳತೀರ ದಾಗಿದೆ. ಬೋರ್ವೆಲ್ ಬಿಸಿನೀರನ್ನು ಅಷ್ಟೋ ಕುಡಿಯುತ್ತಿದ್ದರೂ ಬದುಕುವ ಭರವಸೆ ಇಲ್ಲವಾಗಿದೆ. ಆದರೆ ಶಿವನಂಜಯ್ಯನವರ ತೋಟವೂ ಅದೇ ಹನಕು ನೀರು ಕುಡಿಯುತ್ತಿದ್ದರೂ, ರಣ ಬಿಸಿಲು ತಡೆದುಕೊಂಡು ಹಸಿರುಕ್ಕುತ್ತಾ ಸವಾಲನ್ನು ಎದುರಿಸುತ್ತಿದೆ.

ತೋಟಕ್ಕೆ ಅಡಿ ಇಡುವ ಮುನ್ನ

ಅವರ ತೋಟದೊಳಗೆ ಹೋಗುವ ದಾರಿಯಲ್ಲಿ ಕಂಡ ಓಣ ತೋಟಗಳನ್ನು ನೋಡಿ ಅಷ್ಟೊಂದು ವ್ಯತ್ಯಾಸ ಕಂಡು, ಹೀಗೇಕೆ ಎಂದರೆ ಸಾಕು ಶಿವನಂಜಯ್ಯನವರು ರೊಚ್ಚಿಗೆದ್ದು ಮಾತನಾಡುತ್ತಾರೆ. “ಇದು ನನಗೆ ನೋವುಂಟು ಮಾಡುವ, ನನ್ನ ಬಗ್ಗೆ ನನಗೇ ಬೇಸರವಾಗುವ ವಿಷಯ 25 ವರ್ಷಗಳಿಂದ  ಈ ತೋಟವನ್ನು ಸತತವಾಗಿ ನೋಡುತ್ತಿರುವವರೂ, ಸುಮ್ಮನೆ ತಮ್ಮ ತಪ್ಪು ಮಾಡುತ್ತಾ ಈ ಸ್ಥಿತಿಗೆ ಬಂದಿದ್ದಾರೆ. ನಮ್ಮ ಬಯಲು ಸೀಮೆಗೆ ಅಲ್ಲದ ಈ ತೆಂಗು, ಈ ಅಡಕೆ ತಂದದ್ದೇ ಅಪರಾಧ. ತಂದದ್ದು ಆಯ್ತು. ಲಕ್ಷಾಂತರ ಎಕರೆ ಬೆಳೆದರು. ಮೇಲೇ ಇದ್ದ ನೀರು ಈಗ ಪಾತಾಳದಲ್ಲೂ ಇಲ್ಲವಾಗಿದೆ. ಇದು ಅತಂತ್ರದ ಸ್ಥಿತಿ. ಬಿಡುವಂತಿಲ್ಲ, ಕಟ್ಟಿಕೊಳ್ಳುವಂತಿಲ್ಲ. ಇಷ್ಟಾದರೂ ಜನ ಇನ್ನೂ ಆಮೆ ವೇಗದಲ್ಲಿ ಯೋಚಿಸುತ್ತಿದ್ದಾರೆ. ನಾವು ಸಿರಿಸಮೃದ್ಧಿ ತಿಂಗಳ ಸಭೆಗಳಲ್ಲಿ ಈ ಬಗೆಗೆ ಕೂಗಿ ಕೂಗಿ ಹೇಳುತ್ತಾ ಬಂದಿದ್ದೇವೆ. ರಾಜ್ಯದ ತುಂಬಾ ಅನೇಕ ಸಂಘಟನೆಗಳು ಈ ಬಗೆಯ ಸಹಜ ಕೃಷಿ ತೋಟಗಳಿವೆ. ಆಗಿರುವ ಪ್ರೇರಣೆ, ಪ್ರಯೋಜನಗಳು ಕಡಿಮೆ ಎಂದೇ ಹೇಳಬೇಕು… ಬನ್ನಿ ಅದರ ಕತೆ ಯಾಕೆ ಹೇಳೋಣ…” ಎನ್ನುತ್ತಾ ತೋಟದೊಳಕ್ಕೆ ಅಹ್ವಾನಿಸುತ್ತಾರೆ.

ತೋಟದೊಳಗೆ ತೋಟ

ಶಿವನಂಜಯ್ಯನವರ ಜೆ.ಸಿ. ಪುರದ ತೋಟ 6 ಎಕರೆಯಲ್ಲಿ ಚಾಚಿಕೊಂಡಿದೆ. ಈ ತೋಟಕ್ಕೆ 40 ವರ್ಷದಿಂದ ಉಳುಮೆ ಇಲ್ಲದೆ ಇರುವುದೊಂದೇ ಇದರ ಹೆಚ್ಚುಗಾರಿಕೆಯಲ್ಲ. ತೆಂಗು, ಅಡಿಕೆ, ಸೀಬೆ, ಸಪೋಟ, ನುಗ್ಗೆ, ಪಪ್ಪಾಯಿ, ಮಾವು, ಬಾಳೆ, ಗ್ಲಿರಿಸೀಡಿಯಾ, ಬಳ್ಳಿ ತರಕಾರಿಗಳು ಇತ್ಯಾದಿಗಳಿಂದ ತುಂಬಿರುವುದು ವಿಶೇಷ. ಬಯಲು ಸೀಮೆಯ ತೋಟಗಳೆಂದರೆ ತೆಂಗಿನ ಗೂಟಗಳ ಕೂಟ ಅಥವಾ ಅಡಕೆ ದೊಣ್ಣೆಗಳ ಸಾಲು ಅಷ್ಟೆ. ಅದರೊಳಗೆ ಇನ್ನೇನೂ ಇರುವಂತಿಲ್ಲ. ಆದರೆ ಶಿವನಂಜಯ್ಯನವರ ಈ ತೋಟದಲ್ಲಿ ಸುಮಾರು 6 ಸಾವಿರದಷ್ಟು ವಿವಿಧ ಗಿಡಗಳಿವೆ. ಎರಡಿಂಚು ನೀರು ಕೋಡುವ ಬೋರ್‍ವೆಲ್ ಇದೆ. ಡ್ರಿಪ್ ಮೂಲಕ ನೀರು. ಕಡಿಮೆ ನೀರಿನಲ್ಲಿ ಅಪಾರ ಗಿಡಗಳು ಈ ತೋಟದ ಗುಟ್ಟು.

ಹೋದ ವರ್ಷ ಬಿದ್ದದ್ದು 3-4 ದಿನಗಳ, ಕೆಲವು ತಾಸಿನ ಮಳೆ. ಈ ವರ್ಷ ಜೂನ್ ಬಂದರೂ ಮಳೆ ಇಲ್ಲ. ಇಷ್ಟಾದರೂ ನಿಮ್ಮ ತೋಟದಲ್ಲಿ ಈ ಹಸಿರಿದೆ, ಫಸಲಿದೆ. ಏನಿದರ ಗುಟ್ಟು? ಎಂದರೆ… ಹೀಗೆ ವಿವರಿಸುತ್ತಾರೆ.

ನೀವು ದಾರಿಯಲ್ಲಿ ಬರುವಾಗ ಕಂಡ ತೋಟಗಳೆಲ್ಲ ಸೊರಗಿ ಬರಡಾಗಿವೆ. ಅವುಗಳಿಗೂ ನೀರು ಕೊಡುತ್ತಾರೆ ಎಂಬುದು ನಿಮಗೆ ನೆನಪಿರಲಿ. ಆದರೆ ಬಿಸಿಲಿನ ತಾಪಕ್ಕೆ ಅವು ತಡೆಯುತ್ತಿಲ್ಲ. ನಮ್ಮ ತೋಟ ನೋಡಿ, ಇದಕ್ಕೆ 25 ವರ್ಷದಿಂದ ಉಳುಮೆ ಇಲ್ಲ. ಉಳುಮೆ ಮಾಡದಿದ್ದರೆ ತೋಟವೇ ಹೋಗುತ್ತದೆ ಎಂದು ಹೆಸರಿಸಲು ಯತ್ನಿಸಿದವರ ತೋಟಗಳೇ ದಾರುಣ ಸ್ಥಿತಿಗೆ ಬಂದಿವೆ. ಇದು ನೋವಿನ ವಿಷಯ. ಅದಿರಲಿ, ನಮ್ಮ ತೋಟದ ಹಸಿರಿಗೆ ಅನೇಕ ಕಾರಣಗಳಿವೆ ಎಂದು ಈ ಕಾರಣಗಳನ್ನು ಬಿಡಿಸಿಟ್ಟರು.

1. ಮಲ್ಚಿಂಗ್ ಮಂತ್ರ

ನಮ್ಮ ಬಯಲು ಸೀಮೆಯಲ್ಲಿ ಆಗುವ ಮಳೆಯನ್ನು ನೆಚ್ಚಿಕೊಂಡು ತೆಂಗು, ಅಡಕೆ ಮಾಡಬೇಕಾದರೆ ಬಿದ್ದ ಮಳೆ ಪೂರ್ಣವಾಗಿ ಇಂಗುವಂತೆ ಮಾಡಬೇಕು. ಇಂಗಿದ ನೀರು ಆವಿಯಾಗದಂತೆ ತಡೆ ಹಿಡಿಯಬೇಕು. ಇದಕ್ಕೆ ಇರುವ ಅತ್ಯುತ್ತಮ ಮಾರ್ಗ, ನೆಲವನ್ನು ಸ್ವಾಗೆ ಗರಿ, ಎಡಮಟ್ಟೆ, ತೆಂಗಿನಮಟ್ಟೆ, ಸೊಪ್ಪು ಸೆದೆಗಳಿಂದ ಮುಚ್ಚುವುದು. ನೋಡಿ, ನಮ್ಮ ತೋಟದ ಎಲ್ಲಾ ಗಿಡಗಳ ಬುಡದಲ್ಲಿ 1 1/2 ಅಡಿ ಮಲ್ಚಿಂಗ್ ಇದೆ. ಸೂರ್ಯನಿಗೆ ನೆಲ ಕಾಣದಂತೆ ಮಾಡಬೇಕು. ನೆಲವನ್ನು ಹಾಗೆ ಬಿಟ್ಟರೆ ಸೂರ್ಯ ನೆಲ ಸುಡುತ್ತಾನೆ. ಆಗ ನೆಲದ ಮೇಲಿನ ಗಿಡಗಳು ಸುಟ್ಟು ಹೋಗುತ್ತವೆ. ಮಳೆಗಾಲದಲ್ಲಿ ಈ ಮುಚ್ಚಿಗೆ ಕರಗುತ್ತದೆ. ಗೊಬ್ಬರವಾಗುತ್ತದೆ. ಇನ್ನು ಗೊಬ್ಬರ ಹಾಕಬಯಸುವವರು ಮಳೆಗಾಲದಲ್ಲಿ ಮುಚ್ಚಿಗೆಯ ಮೇಲೆ ಹಾಕಬಹುದು. ಮುಚ್ಚಿಗೆಗೆ ಕೊಬ್ಬರಿ (ತೆಂಗಿನ) ಮಟ್ಟೆ, ಅಡಕೆ ಪಟ್ಟೆ, ಅಡಕೆ ಸಿಪ್ಪೆ, ತರಗು ಹೀಗೆ ಕೃಷಿಯಲ್ಲಿ ಬರುವ ತ್ಯಾಜ್ಯ ವಸ್ತುಗಳನ್ನು ಬಳಸಬಹುದು. ಪಟ (ಪಟ್ಟೆ)ಗಳಲ್ಲಿ ಓಡಾಡಲು ದಾರಿ ಬಿಟ್ಟುಕೊಂಡರೆ ಒಳ್ಳೆಯದು.

ನಮ್ಮದು ಮಲ್ಚಿಂಗ್ ಮಂತ್ರದ ತೋಟ. ಮಳೆಗಾಲದಲ್ಲಿ ಒಣಹೊದಿಕೆ ಜೊತೆಗೆ ಹಸಿರಿನ ಹೊದಿಕೆ ಜೀವತಳೆಯುತ್ತದೆ. ಮಲ್ಚಿಂಗ್ ಇಲ್ಲದ ತೋಟಕ್ಕೆ ಎಷ್ಟು ನೀರು ಕೊಟ್ಟರೂ, ಎಷ್ಟು ಗೊಬ್ಬರ ಹಾಕಿದರೂ ಎಲ್ಲಾ ಸೂರ್ಯನ ಪಾಲು, ತೋಟ ಪಾಳು, ಬೀಳು ಬೋಳು.

2. ಗಿಡದ ಸಾಂದ್ರತೆ

ಬೇರೆ ಯಾವ ತೋಟವನ್ನಾದರೂ ನೋಡಿ. ಒಂದು ಎಕರೆಗೆ 50 ಗಿಡ ತೆಂಗು ಇರುತ್ತದೆ. ನಮ್ಮ ಆರು ಎಕರೆ ತೋಟದಲ್ಲಿ 6000 ಗಿಡಗಳಿವೆ. ಸೂರ್ಯನ ಬೆಳಕಿನ ಲಭ್ಯತೆಗೆ ಅನುಗುಣವಾಗಿ ಆದಷ್ಟು ಹೆಚ್ಚು ಗಿಡಗಳನ್ನು ನೆಡಬೇಕು. ನೆಲದ ಶಕ್ತಿ ಅಪಾರ. ಹೆಚ್ಚು ಗಿಡಗಳನ್ನು ಇಟ್ಟರೆ ನೆಲದ ಶಕ್ತಿ ಹೆಚ್ಚು, ಹೆಚ್ಚು ಮರಗಳು ನಿಂತಿವೆ, ಹೆಚ್ಚು ನೀರು ನಿಂತಿದೆ ಎಂದರ್ಥ. ಆಗ ಹೆಚ್ಚು ತೇವಾಂಶವೂ ತೋಟದಲ್ಲಿರುತ್ತದೆ. ಈ ತೇವಾಂಶವು ತೋಟವನ್ನು ಕಾಪಾಡುತ್ತದೆ. ಬೋರ್‍ವೆಲ್ ನೀರೊಂದೇ ಹಸಿರು ಉಳಿಸಲು ಸಾಧ್ಯವಿಲ್ಲ. ಹಾಗಾಗಿದ್ದರೆ, ನಮ್ಮ ತೋಟದಂತೆ ಮಿಕ್ಕೆಲ್ಲಾ ಬೋರ್‍ವೆಲ್ ಆಶ್ರಿತ ತೋಟಗಳೂ ಇರಬೇಕಾಗಿತ್ತು. ಇದನ್ನು ರೈತರು ಅರಿತರೆ ಎಷ್ಟು ಒಳ್ಳೆಯದು ಅಲ್ಲವೆ?

3. ಮಳೆ ನೀರಿನ ಪೂರ್ಣ ಬಳಕೆ

ನಮ್ಮ ತೋಟದಲ್ಲಿ ಬಿದ್ದ ಒಂದು ಹನಿ ಮಳೆ ನೀರು ಈಚೆ ಹೋಗುವಂತಿಲ್ಲ. ಮುಚ್ಚಿಗೆ ಮತ್ತು ಗಿಡಗಳ ಸಾಂದ್ರತೆ ಕಾರಣಗಳಿಂದ ನೆಲವೆಲ್ಲಾ ಸ್ಪಂಜಿನಂತಾಗಿ, ಎಲ್ಲಾ ನೀರನ್ನು ಒಳಕ್ಕೆ ತೆಗೆದುಕೊಳ್ಳುತ್ತದೆ. ತೀಕ್ಷ್ಮಜೀವಿಗಳು, ಎರೆಹುಳು, ಗೊದ್ದ, ಇರುವೆ ಮತ್ತು ಗಿಡಮರಗಳ ಬೇರುಗಳು ಇದಕ್ಕೆ ಸಹಾಯ ಮಾಡುತ್ತವೆ. ಇದರ ಜೊತೆ ಅಲ್ಲಲ್ಲಿ ತೋಟದಗಲಕ್ಕೂ ಬಲೆಯಂತೆ ಹೆಣೆದುಕೊಂಡಿರುವ ಕಡಗು, ಕಂಗುಗಳು (ಚಿಕ್ಕ ಕಡಗು) ಹೆಚ್ಚುವರಿ ನೀರನ್ನು ಇಂಗಿಸಲು ಸಹಾಯಕವಾಗುತ್ತವೆ. ಇವು ಕೃಷಿ ಹೊಂಡ ಮಾಡುವ ಕೆಲಸವನ್ನೂ ಮಾಡುತ್ತವೆ.

4. ಬೇಲಿಯೆಂಬ ಹಸಿರುಗೋಡೆ

ತೇವಾಂಶ ಕಾಪಾಡಲು ನೀರು ಇಂಗಲು ಗಿಡಮರಗಳು ತುಂಬಿದ ಈ ಬೇಲಿ ಇಲ್ಲಿ ಬಳಕೆಯಾಗುತ್ತಿದೆ. ರಕ್ಚಣೆಯೂ ಇದೆ. ತೋಟಗಾರಿಕೆ ಇರುವ ಕಡೆ ಸಾಮೂಹಿಕವಾಗಿ ಎಲ್ಲ ರೈತರು ಈ ಮಾದರಿ ಅನುಸರಿಸಿದರೆ ನೀರಿನ ನಿರ್ವಹಣೆ ಬಲು ಸುಲಭವಾಗುತ್ತದೆ. ಬೀಳುವ ಮಳೆ ಸಾಕಾಗುತ್ತದೆ. ಹೀಗೆ ಮುಂದುವರಿಯುತ್ತದೆ ಬಾಳೇಕಾಯಿಯವರ ಕ್ರಿಯಾ ಅರಿವು.

ತುಮಕೂರು ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಸಿರಿಸಮೃದ್ಧಿ ಸಾವಯುವ ಕೃಷಿಕರ ಬಳಗದ ಮೂಲಕ ಈ ಬಗೆಯ ಕೃಷಿ ವಿಧಾನವನ್ನು ಜನಪ್ರಿಯಗೊಳಿಸಲು ಜಿ. ಶಿವನಂಜಯ್ಯನವರು ತಮ್ಮ ನಿರಂತರ ದಣಿವರಿಯದ ಕ್ರಿಯೆಯ ಮೂಲಕ ಶ್ರಮಿಸುತ್ತಿದ್ದಾರೆ. ನಾಲ್ಕು ಜನ ರೈತರು ಸಿಕ್ಕಿದರೂ ಸಾಕು ಅವರಿಗೆ ತಮ್ಮ ಅನುಭವಗಳನ್ನು ವಿವರಿಸುತ್ತಾರೆ. ರಾಜ್ಯದ ವಿವಿದೆಡೆಯಿಂದ ತೋಟ ನೋಡಲು ಬರುವ ರೈತರಿಗೆ ಸಮಾಧಾನ ಚಿತ್ತರಾಗಿ, ಅದೇ ಉತ್ಸಾದಲ್ಲಿ ಒಂದೊಂದನ್ನು ವಿವರಿಸುತ್ತಾರೆ. ನೀರು, ಮಣ್ಣು, ಬೇಲಿ, ಮಿಶ್ರಬೆಳೆ, ಮಲ್ಚಿಂಗ್, ಬೋರ್ ವೆಲ್ ಮರುಪೂರಣ ಇತ್ಯಾದಿ ಹೇಳುತ್ತಾ ಸಾಗುತ್ತಾರೆ. ಸುಮಾರು ಸಾವಿರಾರು ರೈತರ ಸಭೆಗಳಲ್ಲಿ ಮಾತಾಡಿದ್ದಾರೆ. ಸ್ವತಃ ತಾವೇ ಸಭೆಗಳನ್ನು ಮಾಡಿದ್ದಾರೆ.

ಇಂಥವರ ಪ್ರಯತ್ನದಿಂದಲೇ ಹಸಿರು ಕ್ರಾಂತಿಯ ಮಧ್ಯೆ ಸತ್ತೇ ಹೋಗಲಿದ್ದ ಸಾವಯವ ಕೃಷಿಯ ಪರಂಪರೆ ಉಳಿಯಲು ಸಾಧ್ಯವಾಗಿದೆ. ವಿಶ್ವವಿದ್ಯಾಲಯದ ವಿಜ್ಞಾನಿಗಳು ರೇಡಿಯೋ, ಟಿ.ವಿ.ಗಳು, ಪತ್ರಿಕೆಗಳ ಕೃಷಿ ಬರಹಗಾರರು ತಮ್ಮ ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಕೆಟ್ಟ ರಾಗ ಬದಲಿಸಿಕೊಳ್ಳಲು ನಿಜ ಪ್ರೇರಕರಾಗಿದ್ದಾರೆ.

ನಾರಾಯಣರೆಡ್ಡಿ, ಭರಮಗೌಡ, ಶ್ರೀಪಡ್ರೆ, ಎ.ಪಿ. ಚಂದ್ರಶೇಖರ್, ಕೈಲಾಸಮೂರ್ತಿ, ಶಿವರಾಜ್‍ಪಾಟೀಲ್, ಚೇರ್ಕಾಡಿ ರಾಮಚಂದ್ರರಾಯರು ಮುಂತಾದ ನೂರಾರು ಜನರ ಕೃಷಿ ಬಗೆಗಿನ ಮಾತುಗಳು ಎಂದಿಗಿಂತಲೂ ಇಂದು ಅಪಾರ ಮಹತ್ವ ಪಡೆಯುತ್ತಿವೆ. ಅನಿಲ್ ಅಗರ್‍ವಾಲ್, ರಾಜೇಂದ್ರಸಿಂಗ್, ಅಣ್ಣಾ ಹಜಾರೆ ಇತ್ಯಾದಿ ಹೆಸರುಗಳು ಈಗಲಾದರೂ ದೊಡ್ಡ ಎಚ್ಚರದ ಅಲೆ ಎಬ್ಬಿಸುತ್ತಿರುವುದು ಸಂತಸದ ವಿಷಯ. ಬತ್ತಿ ಹೋಗುತ್ತಿರುವ ಕೆರೆ, ಕಟ್ಟೆ, ಬಾವಿ, ಬೋರ್‍ವೆಲ್‍ಗಳ ಮರುಪೂರಣದ ಬಗ್ಗೆ, ಮಳೆನೀರಿನ ಕೊಯ್ಲಿನ ಬಗ್ಗೆ ಮಾತು ತೆಗೆದವರು ಇಂಥ ರೈತರೇ ಹೊರತು ಗುತ್ತಿಗೆ ವಿಜ್ಞಾನಿಗಳಲ್ಲ. ಕೃಷಿ ಅಧಿಕಾರಿಗಳಲ್ಲಿ ಮಹತ್ವದ ಬದಲಾವಣೆಗಳು ರೈತರಿಂದಲೇ ಆರಂಭವಾಗಬೇಕು. ರೈತರಿಗೆ ರೈತರೇ ಆಸರೆ.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ಕೃಷಿ ಕಥನ 1: ಗಣಿಗಾರಿಕೆ ತಂದಿಟ್ಟ ಆಪತ್ತುಗಳ ಚರಿತ್ರೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಶ್ರೀ ಶಿವನಂಜಯ್ಯನವರ ತೋಟದ ವಿಳಾಸ ತಿಳಿಸಿ, ಮೊಬೈಲ್ ಸಂಖ್ಯೆ 9591806828

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...