Homeಮುಖಪುಟ‘ದೇಶದ ಒಕ್ಕೂಟ ವ್ಯವಸ್ಥೆ ವಿಷಯದಲ್ಲಿ ಈ ಆಂದೋಲನ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದೆ’: ಡಾ. ದರ್ಶನ್...

‘ದೇಶದ ಒಕ್ಕೂಟ ವ್ಯವಸ್ಥೆ ವಿಷಯದಲ್ಲಿ ಈ ಆಂದೋಲನ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದೆ’: ಡಾ. ದರ್ಶನ್ ಪಾಲ್ ಸಂದರ್ಶನ

- Advertisement -
- Advertisement -

ಸಂಯುಕ್ತ ಕಿಸಾನ್ ಮೋರ್ಚಾದ ಸಕ್ರಿಯ ಸದಸ್ಯರಾಗಿರುವ ಮತ್ತು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಮುನ್ನಡೆಸುತ್ತಿರುವ ಮುಖಂಡರಲ್ಲಿ ಒಬ್ಬರಾಗಿರುವ ಡಾ. ದರ್ಶನ್ ಪಾಲ್ ಅವರು ಕರ್ನಾಟಕದಲ್ಲಿ ನಡೆದ ಮಹಾಪಂಚಾಯತ್‌ಗಳಲ್ಲಿ ಭಾಗವಹಿಸಲು ಬಂದಿದ್ದರು. ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡಿದ ಗೌರಿಲಂಕೇಶ್‌ನ್ಯೂಸ್.ಕಾಂನ ಸಂಪಾದಕರಾದ ಡಾ. ಸ್ವಾತಿ ಸಂದರ್ಶಿಸಿದ್ದಾರೆ.

ಸ್ವಾತಿ: ಡಾ. ದರ್ಶನ್ ಪಾಲ್ ಅವರು ಕಳೆದ ಐದು ದಶಕಗಳಿಂದ ಭೂಹೀನ, ಸಮಾಜದ ಅಂಚಿನಲ್ಲಿರುವ ಕೃಷಿ ಕಾರ್ಮಿಕರನ್ನು, ರೈತರನ್ನು ಸಂಘಟಿಸುತ್ತಿದ್ದಾರೆ. ಅವರು ರಾಜ್ಯದ ಅನೇಕ ರೈತ ಸಂಘಟನೆಗಳನ್ನು ಒಟ್ಟಿಗೆ ತರುವಲ್ಲಿ ಮುಖ್ಯ ಪಾತ್ರ ವಹಿಸಿದರು. ಅವರು ಕ್ರಾಂತಿಕಾರಿ ಕಿಸಾನ್ ಯೂನಿಯನ್‌ನ ಅಧ್ಯಕ್ಷರಾಗಿದ್ದಾರೆ ಹಾಗೂ ಈಗ ಹೋರಾಟವನ್ನು ಮುನ್ನಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ಸಕ್ರಿಯ ಸದಸ್ಯರಾಗಿದ್ದಾರೆ. ಕರ್ನಾಟದಲ್ಲಿಯ ತಮ್ಮ ಅನುಭವದ ಬಗ್ಗೆ ಹೇಳುವಿರಾ?

ದರ್ಶನ್ ಪಾಲ್: ಧನ್ಯವಾದಗಳು. ನಾವು ಕಳೆದ ಕೆಲವು ತಿಂಗಳುಗಳಿಂದ ದೆಹಲಿ ಗಡಿಗಳಲ್ಲಿ ಆಂದೋಲನವನ್ನು ಮುನ್ನಡೆಸುತ್ತಿದ್ದೇವೆ. ಹಾಗೂ ದೇಶದ ಎಲ್ಲೆಡೆ ಕಿಸಾನ್ ಮಹಾಪಂಚಾಯತ್‌ಗಳಲ್ಲಿ ಭಾಗವಹಿಸಿ ಈ ಆಂದೋಲನ ಹೇಗೆ ಶುರುವಾಯಿತು, ಈ ಆಂದೋಲನದ ಪ್ರಮುಖ ವಿಷಯಗಳೇನು ಹಾಗೂ ಸರಕಾರದ ಧೋರಣೆ ಏನಾಗಿದೆ ಹಾಗೂ ಅದರೊಂದಿಗೆ ರೈತ ನಾಯಕರು ಯಾವ ಪಾತ್ರ ವಹಿಸಬಹುದು ಎಂಬುದರ ಬಗ್ಗೆ ಚರ್ಚಿಸಿ, ಕೊನೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಾಮೂಹಿಕವಾಗಿ ತೆಗೆದುಕೊಂಡ ನಿರ್ಣಯಗಳನ್ನು ಜಾರಿ ಮಾಡಲು ಕರೆ ನೀಡುತ್ತೇವೆ. ಹಾಗೆಯೇ ದೆಹಲಿಯ ಸುತ್ತಮುತ್ತಲಿನವರಿಗೆ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಲು ಕರೆ ನೀಡುತ್ತೇವೆ. ಅದೇ ರೀತಿ ಶಿವಮೊಗ್ಗದಲ್ಲಿಯ ಕಿಸಾನ್ ಮಹಾಪಂಚಾಯತ್‌ನಲ್ಲಿ ಹಾಗೂ ಬೆಂಗಳೂರಿನಲ್ಲಿ 22ರಂದು ನಡೆಯುವ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿಯ ನಾಯಕರು ಕರೆ ನೀಡಿದರು. ಈ ನಿಟ್ಟಿನಲ್ಲಿ ಕರ್ನಾಟಕದ ರೈತ ನಾಯಕರ ಬಗ್ಗೆ ತುಂಬಾ ಹೆಮ್ಮೆ ಎನಿಸುತ್ತದೆ. ಅವರು ಆಯೋಜಿಸಿದ ಬೃಹತ್ ಕಾರ್ಯಕ್ರಮದಲ್ಲಿ ಹದಿನೈದು ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಅದು ತುಂಬಾ ಶಿಸ್ತಿನಿಂದ ಕೂಡಿದ ಪರಿಣಾಮಕಾರಿಯಾದ ಕಾರ್ಯಕ್ರಮವಾಗಿತ್ತು. ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆದರೆ, ಒಕ್ಕೂಟ ಸರಕಾರದ ಮೇಲೆ ಒತ್ತಡ ಬೀಳುತ್ತದೆ, ಆಗ ಅವರು ಮಾತುಕತೆಗೆ ಬರಲೇಬೇಕಾಗುತ್ತದೆ ಹಾಗೂ ರೈತರ ಬೇಡಿಕೆಗಳನ್ನು ಮನ್ನಿಸಬೇಕಾಗುತ್ತದೆ.

ಸ್ವಾತಿ: ನಾಲ್ಕು ರಾಜ್ಯಗಳಲ್ಲಿ ಚುನಾವಣೆಗಳನ್ನು ಘೋಷಿಸಲಾಗಿದೆ. ಚುನಾವಣೆ ಆದ ನಂತರ ಏನಾಗಬಹುದು?

ದರ್ಶನ್ ಪಾಲ್: ನೋಡಿ, ನಾಲ್ಕು ರಾಜ್ಯಗಳಲ್ಲಿ ಚುನಾವಣೆಗಳಿವೆ. ಸಂಯುಕ್ತ ಕಿಸಾನ್ ಮೋರ್ಚಾದಲ್ಲಿ ಇದರ ಬಗ್ಗೆ ದೀರ್ಘ ಚರ್ಚೆ ನಡೆಸಲಾಯಿತು ಹಾಗೂ ಆ ರಾಜ್ಯಗಳ ಜನತೆಗೆ ಒಂದು ಕರೆ ನೀಡಬೇಕೆಂದು ತೀರ್ಮಾನಿಸಲಾಯಿತು. ಆ ಕರೆ; ಬಿಜೆಪಿಗೆ ಪಾಠ ಕಲಿಸಿ. ಏಕೆಂದರೆ, ಬಿಜೆಪಿಗೆ ಎರಡೂ ಭಾಷೆಗಳು ಗೊತ್ತಿದೆ; ಒಂದು ವೋಟಿನದ್ದು, ಇನ್ನೊಂದು ಗಾಯದ್ದು (ಚೋಟ್). ಹಾಗಾಗಿ, ಹೋರಾಟ ಮಾಡುವುದು ಒಂದು ವಿಷಯವಾದರೆ, ಅದರೊಂದಿಗೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಿಗೆ ಹೋಗಿ, ಬಿಜೆಪಿಯನ್ನು ಶಿಕ್ಷಿಸಿ, ಅವರಿಗೆ ಮತ ಹಾಕಬೇಡಿ ಎಂಬುದು ಕರೆ ನೀಡುವುದು ಇನ್ನೊಂದು. ಮೊದಲ ಲಾಕ್‌ಡೌನ್ ಸಮಯದಲ್ಲಿ ಈ ಮೂರು ಕಾನೂನುಗಳನ್ನು ತಂದಾಗ ನಾವು ತಗೆದುಕೊಂಡ ನಿರ್ಣಯ ಇದಾಗಿದೆ. ಪ್ರತಿಯೊಂದು ರಾಜ್ಯದಲ್ಲಿ ರೈತ ಸಂಘಟನೆಗಳು ಬಿಜೆಪಿಯನ್ನು ಬಾಯ್ಕಾಟ್ ಮಾಡಬೇಕು, ಅವರ ನಾಯಕರಿಗೆ ಕಪ್ಪು ಬಾವುಟ ತೋರಿಸಬೇಕು, ಹಳ್ಳಿಗಳಲ್ಲಿ ಅವರಿಗೆ ಸಭೆ ಮಾಡಲು ಬಿಡಬಾರದು ಎಂದು ಕರೆ ನೀಡಿದ್ದೆವು. ಇದು ಅನೇಕ ರಾಜ್ಯಗಳಲ್ಲಿ ಜಾರಿ ಆಯಿತು. ಇದು ಬಿಜೆಪಿಯ ಮೇಲೆ ಒತ್ತಡ ತರುವ ಭಾಗದ ಮುಂದುವರಿಕೆಯಾಗಿದೆ. ನಾವು ಮತದಾರರಿಗೆ ಒಂದು ಪತ್ರವನ್ನು ಬರೆದಿದ್ದೇವೆ. ಅದನ್ನು ಐದು ರಾಜ್ಯಗಳ ರೈತರಿಗೆ ಕಳುಹಿಸಲಾಗಿದೆ. ಎರಡನೆಯದಾಗಿ, ಒಕ್ಕೂಟ ಸರಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ ಏಕೆಂದರೆ, ನಾವು ಕಳೆದ ಆರೂವರೆ ವರ್ಷಗಳಲ್ಲಿ ನೋಡಿದಂತೆ, ಈ ಸರಕಾರ ಜನರ ಧ್ವನಿಗಳನ್ನು ಕೇಳಲು ನಿರಾಕರಿಸುತ್ತಲೇ ಇದೆ. ಒಂದು ಸಲ ಕಾಯಿದೆಗಳನ್ನು ಜಾರಿ ಮಾಡಿದ ಮೇಲೆ, ಆ ವಿಷಯಗಳ ವಿರುದ್ಧ ಎಷ್ಟೇ ವಿರುದ್ಧ ಅಭಿಪ್ರಾಯ ಬಂದರೂ ಒಂದು ಇಂಚೂ ಹಿಂದೆ ಕದಲುವುದಿಲ್ಲ. ರೈತ ವಿಷಯದಲ್ಲೂ ಅದನ್ನೇ ಮಾಡುತ್ತಿದ್ದಾರೆ ಹಾಗಾಗಿ, ಈ ಆಂದೋಲನ ಸುದೀರ್ಘವಾಗುತ್ತಲೇ ಇದೆ, ಎಲ್ಲಡೆ ವಿಸ್ತರಿಸುತ್ತಿದೆ ಹಾಗೂ ಇನ್ನಷ್ಟು ಜೀವಂತಿಕೆ ಪಡೆದುಕೊಳ್ಳುತ್ತಿದೆ. ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡುತ್ತ, ಎಲ್ಲಾ ಜನರು ಮತ್ತು ಮಾಧ್ಯಮಗಳು ಇದರ ಬಗ್ಗೆ ಮಾತನಾಡುವಂತೆ ಆಗುತ್ತಿದೆ. ಇದರಿಂದ ಈ ರೈತರ ಆಂದೋಲನವು ಭಾರತೀಯ ರಾಜಕೀಯದ ಕೇಂದ್ರಬಿಂದುವಾಗಲಿದೆ. ಕೊನೆಯದಾಗಿ, ದೇಶದ ಜನರು, ಈ ಆಂದೋನದ ಭಾಗವಾಗುತ್ತಿದ್ದಾರೆ. ಮೋದಿ ಮತ್ತು ಶಾ ಈ ವಿಷಯವನ್ನು ಅಂಚಿಗೆ ತಳ್ಳಲು ಪ್ರಯತ್ನಿಸಿತ್ತಿದ್ದಾರೆ ಆದರೆ ನಾವು ಅವರು ಯಶಸ್ವಿಯಾಗಲು ಬಿಡುವುದಿಲ್ಲ. ಇನ್ನೂ ಹೆಚ್ಚಿನ ಒತ್ತಡ ಹೇರುತ್ತ, ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತೇವೆ.

ಸ್ವಾತಿ: ಕಳೆದ ಎರಡು ತಿಂಗಳಲ್ಲಿ, ಮಾರಿಕೊಂಡ ಮಾಧ್ಯಮಗಳು ಅತ್ಯಂತ ಕೆಟ್ಟ ಪಾತ್ರ ವಹಿಸಿ, ಈ ಆಂದೋಲನಕ್ಕೆ ಮಸಿ ಬಳಿಯಲು ಪ್ರಯತ್ನಿಸಿದರು. ಈಗ ಕಳೆದ ಒಂದು ತಿಂಗಳಿಂದ, ಈ ಹೋರಾಟ ತೆಳುವಾಗುತ್ತದೆ, ಜನರು ಹಿಂದಿರುಗುತ್ತಿದ್ದಾರೆ, ಹಾಗೂ ಹಿಂದೂ ಪತ್ರಿಕೆಯಲ್ಲಿ ಬಂದಂತೆ, ಇದರಲ್ಲಿ ಒಂದು ಕಾಯಿದೆಯನ್ನು ಜಾರಿ ಮಾಡಲು ನಾಯಕರು ಒಪ್ಪಿಕೊಳ್ಳುವರು ಎಂದು ಹೇಳಲಾಗುತ್ತಿದೆ. ಇದಕ್ಕೆ ತಾವೇನು ಹೇಳುವಿರಿ?

ದರ್ಶನ್ ಪಾಲ್: ಈ ಸರಕಾರ ಬಂದಾಗಿನಿಂದ ಮಾಧ್ಯಮಗಳು, ಅವುಗಳ ಐಟಿ ಸೆಲ್‌ಗಳು ಜನರ ಚಳವಳಿಗಳಿಗೆ ಮಸಿ ಬಳಿಯುವ ಕೆಲಸ ಮಾಡುತ್ತಲೇ ಇವೆ. ರೈತರ ಚಳವಳಿಗಳ ಬಗ್ಗೆಯೂ ಮುಂಚೆಯಿಂದ ಸುಳ್ಳುಗಳನ್ನು ಹೇಳುವ ಪ್ರಯತ್ನ ಮಾಡಿದರು. ಮಾರ್ಚ್ 26ರಂದು ಈ ಆಂದೋಲನ ನಾಲ್ಕು ತಿಂಗಳ ಅವಧಿಯನ್ನು ಪೂರೈಸುತ್ತದೆ. ಈ ರೈತರ ಆಂದೋಲನವು ರೈತರ ವಿಷಯಗಳಿಗಾಗಿ, ರೈತರ ಸಂಘಟನೆಗಳ ಕೊಆರ್ಡಿನೇಷನ್‌ನಿಂದಲೇ ಸಂಯುಕ್ತ ಕಿಸಾನ್ ಮೋರ್ಚಾ ಎಂಬ ಹೆಸರಿನಲ್ಲಿ ಮುನ್ನಡೆಯುತ್ತಿದೆ ಎಂಬುದರಲ್ಲಿ ಈಗ ಯಾವುದೇ ಸಂಶಯ ಉಳಿದಿಲ್ಲ. ಹಿಂದೂ ಪತ್ರಿಕೆಯಲ್ಲಿ ನನ್ನನ್ನು ಉಲ್ಲೇಖಿಸಿ ನಮ್ಮ ನಿಲುವು ಮೃದುವಾಗುತ್ತಿದೆ ಎಂದು ಬರೆಯಲಾಗಿದೆ. 100 ದಿನಗಳು ಪೂರ್ಣವಾದಾಗ ದೀರ್ಘ ಚರ್ಚೆಯಾಗಿತ್ತು. ಆಗ ಹಿಂದೂ ಪತ್ರಿಕಯೆಲ್ಲಿ ನನ್ನ ಹೆಸರಿನಲ್ಲಿ ಬಂದ ಹೇಳಿಕೆ ನಾನು ಹೇಳಿದ್ದಲ್ಲ. ನಾನು ಬೇರೆ ಸಂದರ್ಭದಲ್ಲಿ ಹೇಳಿದ್ದನ್ನು ಅವರು ಇನ್ನೇನೋ ಅರ್ಥದಲ್ಲಿ ಬರೆದಿದ್ದಾರೆ. ಹಿಂದೂ ಪತ್ರಿಕೆ ಗೋದಿ ಮೀಡಿಯಾ ಎಂದು ನನಗೆ ಅನಿಸುವುದಿಲ್ಲ ಆದರೆ ಗೋದಿ ಮಾಧ್ಯಮದವರು ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಆಂದೋಲನ ದುರ್ಬಲವಾಗುತ್ತಿದೆ, ಜನರು ಬಿಟ್ಟು ಹೋಗುತ್ತಿದ್ದಾರೆ ಎಂದೆಲ್ಲ ಅವರು ಸುಳ್ಳು ಹೇಳುತ್ತಿದ್ದಾರೆ. ಒಂದು ಹಳ್ಳಿಯಿಂದ ಹದಿನೈದು ಜನರು ಬಂದರೆ, ಅವರು ಒಂದು ವಾರದ ನಂತರ ಮರಳುತ್ತಾರೆ, ಆಗ ಇನ್ನೊಂದು ಹಳ್ಳಿಯಿಂದ ಹದಿನೈದು ಜನರು ಬರುತ್ತಾರೆ. ಈಗ ಬೆಳೆ ಕಟಾವಿನ ಅಥವಾ ಸುಗ್ಗಿಯ ಸಮಯ ಬರುತ್ತಿದೆ. ಹಾಗಾಗಿ ರೈತರು ಸುಗ್ಗಿಗಾಗಿ ಹಳ್ಳಿಗೆ ಹೋಗುತ್ತಾರೆ. ಆಗ ಇತರ ಜನರು ಬಂದು ಸೇರಿಕೊಳ್ಳುತ್ತಾರೆ. ಕಳೆದ ಸಭೆಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಜನರು ಅವರವರ ಸಂಘಟನೆಯಿಂದ ಜನರನ್ನು ಸೇರಿಸುವುದಾಗಿ ಹೇಳಿದ್ದಾರೆ. ನಮಗೆ ಇದರ ಬಗ್ಗೆ ದೀರ್ಘ ಅನುಭವವಿದೆ. ಕೆಲಸದ ಸಮಯದಲ್ಲಿ ಅಥವಾ ಸುಗ್ಗಿಯ ಕಾಲದಲ್ಲಿ ಹೋರಾಟ ಹೇಗೆ ಮಾಡಬೇಕು ಎಂಬುದು ನಮಗೆ ತಿಳಿದಿದೆ, ಅದರ ಅನುಭವವೂ ಇದೆ. ಹಾಗಾಗಿ ದೆಹಲಿ ಗಡಿಗಳಲ್ಲಿ ನಾವು ನಮ್ಮ ಮೋರ್ಚಾಗಳನ್ನು ಜೀವಂತವಾಗಿಟ್ಟು, ಎಲ್ಲರಿಗೂ ಮುಟ್ಟುವಂತೆ ಇಡುತ್ತೇವೆ. ಇನ್ನಷ್ಟು ಗಟ್ಟಿಯಾಗದೇ ಇದ್ದರೂ, ಇಷ್ಟಂತೂ ಮುಂದುವರೆಯಲಿದೆ. ಅದರೊಂದಿಗೆ, ದೇಶದ ಇತರ ಭಾಗಗಳಲ್ಲಿ ಕಿಸಾನ್ ಮಹಾಪಂಚಾಯತ್‌ಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಗಳು ದಿನೇದಿನೆ ಹೆಚ್ಚು ಜನಪ್ರಿಯವಾಗುತ್ತಿವೆ, ಹೆಚ್ಚೆಚ್ಚು ಜನ ಸೇರಿಕೊಳ್ಳುತ್ತಿದ್ದಾರೆ.

PC : Edexlive

ಮೊದಲು ಇದನ್ನು ಪಂಜಾಬಿನ ರೈತರ ಇಷ್ಯೂ ಎಂದಿದ್ದರು, ನಂತರ ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿಷಯ ಎಂದರು. ಈಗ ಕರ್ನಾಟಕದ ರೈತರೂ ಜೊತೆಗೂಡಿದ್ದಾರೆ, ಆಂಧ್ರ, ತೆಲಂಗಾಣದ ರೈತರೂ, ದಕ್ಷಿಣ ಭಾರತದ ಎಲ್ಲಾ ರೈತರೂ ಜೊತೆಗೂಡುತ್ತಿದ್ದಾರೆ. ಸಣ್ಣ ರೈತರು, ಶ್ರೀಮಂತ ರೈತರು, ಮೇಲ್ಜಾತಿಯ ರೈತರು, ಹಿಂದುಳಿದ ಜಾತಿಗಳ ರೈತರು, ಮೀನಾ, ಗುಜ್ಜರರು, ಹಿಂದೂಗಳು, ಮುಸ್ಲಿಮರು ಇವರೆಲ್ಲರನ್ನೂ ಈ ಆಂದೋಲನ ಜೊತೆಗೆ ತರುತ್ತಿದೆ. ದೊಡ್ಡ ಸಂಖ್ಯೆಯ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ. ನಿಮಗೆ ಆಶ್ಚರ್ಯವಾಗಬಹುದು, 8ನೆ ಮಾರ್ಚ್‌ರಂದು 80 ಸಾವಿರಕ್ಕಿಂತಲೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಹಾಗೆಯೇ 23ನೇ ಮಾರ್ಚ್‌ರಂದು ಭಗತ್ ಸಿಂಗ್ ಹುತಾತ್ಮ ದಿನದಂದು ಸಾವಿರಾರು ಯುವಜನರು ಪಾಲ್ಗೊಳ್ಳಲಿದ್ದಾರೆ.

ಸ್ವಾತಿ: ಕಳೆದ ತಿಂಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳ ಬೆಂಬಲ ಕಂಡುಬಂದಿತ್ತು. ಕೇವಲ ಸೆಲಬ್ರಿಟಿಗಳಲ್ಲದೇ ಕೆಲವು ಸೆನೆಟರ್‌ಗಳು, ರಾಜಕೀಯ ಮುಖಂಡರೂ ಬೆಂಬಲ ಸೂಚಿಸಿದ್ದಾರೆ. ಆದರೆ ಭಾರತ ಸರಕಾರವು ಇದನ್ನು ಒಂದು ಪಿತೂರಿ ಎಂದು ಕರೆದಿದೆ. ಆದರೆ ಒಂದೆಡೆ ಸರಕಾರವು ಸಾರ್ವಜನಿಕ ಆಸ್ತಿಯನ್ನು ಮಾರಿ, ಎಫ್‌ಡಿಐ (ವಿದೇಶೀ ಹೂಡಿಕೆ)ಯನ್ನು ತರುತ್ತಿದೆ ಹಾಗೂ ಅದೇ ಸಮಯದಲ್ಲಿ ವಿದೇಶದ ಯಾರಾದರೂ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಮಾತನಾಡಿದಾಗ ಇದು ನಮ್ಮ ಆಂತರಿಕ ವಿಷಯ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇದಕ್ಕೆ ತಾವೇನು ಹೇಳುತ್ತೀರಿ?

ದರ್ಶನ್ ಪಾಲ್: ಈ ಜಾಗತೀಕರಣಗೊಂಡ ವಿಶ್ವದಲ್ಲಿ ಯಾವುದೇ ವಿದ್ಯಮಾನವನ್ನು ಸ್ವತಂತ್ರ ವಿದ್ಯಮಾನ ಎಂದು ನೋಡಲು ಆಗುವುದಿಲ್ಲ. ಜಗತ್ತಿನ ಯಾವ ಮೂಲೆಯಲ್ಲಿ ಏನೇ ನಡೆದರೂ, ಇನ್ನೊಂದು ಮೂಲೆಯಿಂದ ಅದರ ಬಗ್ಗೆ ಮಾತನಾಡುವುದು, ಆಯಾ ವಿಷಯಗಳಿಗೆ ಬೆಂಬಲ ಸೂಚಿಸುವುದನ್ನು ನಾವು ನೋಡುತಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ವ್ಯಕ್ತಿಗಳು, ಸರಕಾರಗಳು ಬೆಂಬಲ ಸೂಚಿಸಿದ್ದಿದ್ದು ವಾಸ್ತವ.

ಈ ತಿಂಗಳ 8ನೇ ತಾರೀಕಿನಂದು ಬ್ರಿಟಿಷ್ ಲೋಕಸಭೆಯಲ್ಲಿ ಚರ್ಚೆಯಾಗಿದೆ. ಅಮೆರಿಕ, ಕೆನಡದ ಸೆನೆಟರ್‌ಗಳು ಇದರ ಬಗ್ಗೆ ಮಾತನಾಡಿದ್ದಾರೆ. ಸೆಲೆಬ್ರಿಟಿಗಳೂ ಬೆಂಬಲ ಸೂಚಿಸಿದ್ದಾರೆ. ಒಂದು ವಾರದ ಹಿಂದೆ ವಿಶ್ವಸಂಸ್ಥೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಭಾಷಣ ಪ್ರಸಾರವಾಯಿತು. ನಿನ್ನೆ ಇಂಗ್ಲೆಂಡಿನ ಲೇಬರ್ ಪಾರ್ಟಿಯ ನಾಯಕಿಯೊಬ್ಬರು ನನಗೆ ನೇರವಾಗಿ ಸಂಪರ್ಕಿಸಿ, ನಾವು ನಿಮ್ಮ ಆಂದೋಲನಕ್ಕೆ ಬೆಂಬಲ ನೀಡಿ, ಅಂತಾರಾಷ್ಟ್ರೀಯ ಸಮುದಾಯದ ಸಹಾಯ ತರಲು ಇಚ್ಛಿಸುತ್ತೇವೆ ಎಂದರು. ಹಾಗಾಗಿ, ಸರಕಾರ ಸ್ವತಃ ತಮ್ಮ ಜನರ ವಿರುದ್ಧವೇ ಪಿತೂರಿ ನಡೆಸುತ್ತಿರುವಾಗ ಅವರಿಗೆ ಇಂತಹ ಆಪಾದನೆ ಮಾಡುವ ಯಾವ ಹಕ್ಕೂ ಇಲ್ಲ. ಅವರು ಬೆಂಬಲ ನೀಡುತ್ತಿದ್ದಾರೆ, ಸಾಲಿಡಾರಿಟಿ ತೋರಿಸುತ್ತಿದ್ದಾರೆ. ಹಾಗೂ ಈಗ ವಿಶ್ವದಲ್ಲಿ ಆಂತರಿಕ, ಬಹಿರಂಗ ಎಂಬುದೂ ಏನೂ ಇಲ್ಲ. ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ಚಾಲ್ತಿಯಲ್ಲಿರುವ ಆಂದೋಲನದ ಬಗ್ಗೆ, ಜನರಿಗೆ ಅನ್ನ ನೀಡುವವರ ಹೋರಾಟದ ಬಗ್ಗೆ ಮಾತನಾಡಲು, ಬೆಂಬಲ ಸೂಚಿಸಲು ಎಲ್ಲಾ ಹಕ್ಕೂ ಇದೆ. ಸರಕಾರ ಇದನ್ನು ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಎಂದು ಕರೆಯುತ್ತಿದೆ, ಅದನ್ನು ನಾನು ಒಪ್ಪುವುದಿಲ್ಲ.

ರಾಜಸ್ತಾನದಲ್ಲಿ ಭಾರಿ ಬೆಂಬಲ ಪಡೆಯುತ್ತಿರುವ ಮಹಾಪಂಚಾಯತ್‌ಗಳು: ಟಿಕಾಯತ್ ಹಿಂದೆ ಬೃಹತ್ ಜನಸ್ತೋಮ

ಸ್ವಾತಿ: ಇಂದು ಹೋರಾಟದ 116ನೇ ದಿನ. ಈ ಹೋರಾಟದಲ್ಲಿ ನಿಮಗಾದ ಅತ್ಯಂತ ದೊಡ್ಡ ಸಾಮೂಹಿಕ ಅನುಭವ ಯಾವುದು? ಹಾಗೂ ಇತರ ಜನಾಂದೋಲನಗಳಿಗೆ ಇದರಲ್ಲಿ ಯಾವುದಾದರೂ ಪಾಠಗಳಿವೆಯೇ?

ದರ್ಶನ್ ಪಾಲ್: ಒಳ್ಳೆಯ ಪ್ರಶ್ನೆ. ಮೊದಲನೆಯದಾಗಿ, ಈ ಆಂದೋಲನ ಶುರುವಾದಾಗ ಇಷ್ಟು ದೊಡ್ಡ ಆಂದೋಲನಕ್ಕೆ ಹೆಗಲು ಕೊಡಬೇಕಾಗುತ್ತೆ ಎಂದು ನಮಗೆ ಗೊತ್ತಿದ್ದಿಲ್ಲ. ಎರಡನೆಯದಾಗಿ, ನಾವು ಈ ಆಂದೋಲನವನ್ನು ರೈತರಿಗೆ ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗಲಿ ಎಂದು, ರೈತವಿರೋಧಿ ಕಾಯಿದೆಗಳನ್ನು ರದ್ದುಗೊಳಿಸಲು ಶುರು ಮಾಡಿದ್ದು. ಹಾಗೂ ನಾವು ಇದನ್ನು ಕೃಷಿಯ ಕಾರ್ಪೋರೆಟೀಕರಣ ಮತ್ತು ಇಡೀ ದೇಶದ ಕಾರ್ಪೋರೆಟೀಕರಣದ ವಿರುದ್ಧದ ಹೋರಾಟ ಎಂದು ಪರಿಗಣಿಸಿದ್ದೆವು. ಆಂದೋಲನ ಬೆಳೆಯುತ್ತ ಹೋದಂತೆಲ್ಲ ರಾಷ್ಟ್ರೀಯ ಕಾರ್ಯಕ್ರಮವಾಯಿತು, ಇದು ಎಲ್ಲಾ ಪ್ರಜಾಸತ್ತಾತ್ಮಕ ಶಕ್ತಿಗಳನ್ನು, ಕಾರ್ಮಿಕರನ್ನು, ಮಹಿಳೆಯರನ್ನು, ದಲಿತರನ್ನು ಸೆಳೆಯಿತು. ಅವರು ಈ ಆಂದೋಲನದ ಸಕ್ರಿಯ ಭಾಗೀದಾರರಾದರು. ಈ ಆಂದೋಲನವು ಬಿಜೆಪಿಯ ಕೋಮುವಾದ ಅಜೆಂಡಾವನ್ನು ಕಿತ್ತೆಸೆಯುವ ಕೆಲಸವನ್ನೂ ಮಾಡಿತು. ಉತ್ತರಪ್ರದೇಶದ ಮುಜಫರ್‌ನಗರದಲ್ಲಿ ಬೇರೆಬೇರೆಯಾಗಿದ್ದ ಹಿಂದೂ ಮುಸ್ಲಿಮರನ್ನು ಈ ಆಂದೋಲನವು ಒಂದುಗೂಡಿಸಿದೆ. ರಾಜಸ್ಥಾನದಲ್ಲಿ, ಮೀನಾ ಸಮುದಾಯದವರು ಮತ್ತು ಗುಜ್ಜರ್ ಸಮುದಾಯದವರು ಜೊತೆಗೂಡಿದ್ದಾರೆ. ದಲಿತರು ಮತ್ತು ದಲಿತೇತರರು ಜೊತೆಗೂಡಿದ್ದಾರೆ. ಮಹಿಳೆಯರು ಪುರುಷರು ಜೊತೆಗೂಡಿದ್ದಾರೆ. ಬೇರೆ ಬೇರೆ ರಾಜ್ಯಗಳ, ಬೇರೆ ಬೇರೆ ಭಾಷೆಯನ್ನು ಮಾತನಾಡುವ ರೈತರು ಜೊತೆಗೂಡಿದ್ದಾರೆ. ಒಕ್ಕೂಟ ಸರಕಾರವು ರಾಜ್ಯ ಸರಕಾರದ ವಿಷಯಗಳ ಮೇಲೆ ಅತಿಕ್ರಮಣ ಮಾಡಿ, ಅವರ ಅಧಿಕಾರದಲ್ಲಿರುವ ವಿಷಯದ ಮೇಲೆ ಕಾಯಿದೆಗಳನ್ನು ರಚಿಸುತ್ತಿದೆ ಎಂದು ಹೋರಾಟ ಮಾಡಿದೆವು. ಹಾಗಾಗಿ ದೇಶದ ಒಕ್ಕೂಟ ವ್ಯವಸ್ಥೆ, ವಿಕೇಂದ್ರೀಕರಣದ ವಿಷಯದಲ್ಲೂ ಈ ಆಂದೋಲನ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಿದೆ. ಹಾಗೂ ಮೋದಿ ಸರಕಾರವೂ ಬ್ಯಾಕ್‌ಫುಟ್‌ಗೆ ಹೋಗಿದೆ. ಹಾಗೂ ಈ ಆಂದೋಲನ ಮುಂದುವರೆದಲ್ಲಿ ಈ ದೇಶದ ಜನರು ಒಗ್ಗಟ್ಟಾಗಿ, ಈ ಮೋದಿ ಸರಕಾರ ತರಲು ಬಯಸುತ್ತಿರುವ ಒಂದು ದೇಶ, ಒಂದು ಭಾಷೆ, ಒಂದು ಧರ್ಮ ಎಂಬ ಅಜೆಂಡಾವನ್ನು ಛಿದ್ರಗೊಳಿಸಲಿದ್ದಾರೆ. ಹಾಗೂ ಈ ಆಂದೋಲನ ಹೀಗೆಯೇ ಮುಂದವರೆದರೆ, ಮೋದಿ ತನ್ನ ರಿಜಿಡಿಟಿ ಹೀಗೆಯೇ ಮುಂದವರೆಸಿದರೆ ಜನರು ಮೋದಿ ಸರಕಾರದ ಕಥನವನ್ನು ಮುರಿದುಹಾಕಲಿದ್ದಾರೆ.

ಕನ್ನಡಕ್ಕೆ ಮತ್ತು ವಿಡಿಯೋ ಇಂದ ಅಕ್ಷರ ರೂಪಕ್ಕೆ: ರಾಜಶೇಖರ್ ಅಕ್ಕಿ


ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರೆದ ಹೋರಾಟ: ಮಾ.‌ 31 ಕ್ಕೆ ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...