Homeನ್ಯಾಯ ಪಥಪುಸ್ತಕ ಪರಿಚಯ; ಇಡಬ್ಲ್ಯುಎಸ್ ’ಮಹಾವಂಚನೆ’ಯ ಸುತ್ತ

ಪುಸ್ತಕ ಪರಿಚಯ; ಇಡಬ್ಲ್ಯುಎಸ್ ’ಮಹಾವಂಚನೆ’ಯ ಸುತ್ತ

- Advertisement -
- Advertisement -

ಶಾಸಕಾಂಗ, ಕಾರ್ಯಾಂಗ ಜನ ವಿರೋಧಿ ನಿಲುವುಗಳನ್ನು ತಾಳಿದಾಗ, ‘ನ್ಯಾಯಾಂಗ’ ಭರವಸೆಯ ಕೊನೆಯ ನಿಲ್ದಾಣವಾಗಿ ತೋರುತ್ತದೆ. ಆದರೆ ಆ ನ್ಯಾಯಾಂಗವೂ ತಪ್ಪು ಗ್ರಹಿಕೆಗಳನ್ನು ಹೊಂದಿದ್ದರೆ, ನ್ಯಾಯಕ್ಕೆ ದನಿಯಾಗದೇಹೋದರೆ ಯಾರಲ್ಲಿ ಗೋಗರೆಯುವುದು? ಸಂವಿಧಾನವನ್ನು ಉಳಿಸಬೇಕಾದ ವ್ಯವಸ್ಥೆಯೇ ಸಾಮಾಜಿಕ ನ್ಯಾಯವನ್ನು ವ್ಯತಿರಿಕ್ತವಾಗಿ ವಿಶ್ಲೇಷಿಸಿದರೆ ಯಾರು ದಿಕ್ಕು?- ಇಂತಹದೊಂದು ಪ್ರಶ್ನೆಯನ್ನು ‘ಇಡಬ್ಲ್ಯುಎಸ್ 10% ಕೋಟಾ’ವನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್ ಹುಟ್ಟುಹಾಕಿದೆ.

2019ರ ಚಳಿಗಾಲದ ಅಧಿವೇಶನದ ವೇಳೆ, ಲೋಕಸಭಾ ಚುನಾವಣೆಗೆ ಹೋಗುವ ಮುನ್ನ ಇಡಬ್ಲ್ಯುಎಸ್ ಕಾಯ್ದೆ ಮತ್ತು ಸಂವಿಧಾನದ 103ನೇ ತಿದ್ದುಪಡಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತರಾತುರಿಯಲ್ಲಿ ಅಂಗೀಕರಿಸಲಾಯಿತು. ಅದಕ್ಕೆ ರಾಷ್ಟ್ರಪತಿಯವರ ಅಂಕಿತವೂ ಕ್ಷಿಪ್ರಗತಿಯಲ್ಲಿ ಬಿದ್ದಿತು. ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು 3:2 ತೀರ್ಪಿನ ಮೂಲಕ ಇದಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಿತು. ಭಿನ್ನಮತದ ತೀರ್ಪು ನೀಡಿದ ನ್ಯಾಯಮೂರ್ತಿ ರವೀಂದ್ರ ಭಟ್, “ಆರ್ಥಿಕ ಆಧಾರದಲ್ಲಿ ಮೀಸಲಾತಿ ಕೊಡುವುದು ಸಂವಿಧಾನದ ಉಲ್ಲಂಘನೆಯಾಗುವುದಿಲ್ಲ ಎನ್ನುವುದು ನಿಜವಾದರೂ ವಿಷಯ ಅಷ್ಟು ಸರಳವಾಗಿಲ್ಲ. ಸಾಂವಿಧಾನಿಕ ನೈತಿಕತೆಯ ಸೂಚನೆಗಳ ಮತ್ತು ಮೌಲ್ಯಗಳ ಕುರಿತು ಮೂಲ ಸ್ವರೂಪದ ಕಾಳಜಿ ಇದೆ. ನಮ್ಮ ಸಂವಿಧಾನವು ಹೊರಗಿಡುವ ಭಾಷಯನ್ನು ಮಾತನಾಡುವುದಿಲ್ಲ. ನನ್ನ ಅಭಿಪ್ರಾಯದಲ್ಲಿ ಈ 103ನೇ ತಿದ್ದುಪಡಿಯು ಹೊರಗಿಡುವಿಕೆಯ ಭಾಷಯನ್ನು ಮಾತನಾಡುತ್ತದೆ, ನ್ಯಾಯದ ಆದರ್ಶವನ್ನು ಉಲ್ಲಂಘಿಸುತ್ತದೆ, ಆ ಮೂಲಕ ಸಂವಿಧಾನದ ಮೂಲ ಸ್ವರೂಪವನ್ನು ಉಲ್ಲಂಘಿಸುತ್ತದೆ” ಎನ್ನುತ್ತಾರೆ. ಆದರೆ ಇವರು ಕೂಡ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಪ್ರಸ್ತಾಪಿಸಲಿಲ್ಲ. ಮೀಸಲಾತಿಯನ್ನು ಬಡತನ ನಿರ್ಮೂಲನ ಕಾರ್ಯಕ್ರಮವೆಂಬಂತೆ ನೋಡಿಬಿಟ್ಟಿದ್ದಾರೆ.

ಮೇಲ್ಜಾತಿಯ ಬಡವರ ಸಂಖ್ಯೆ ಎಷ್ಟಿದೆ? ಯಾವ ಸಮೀಕ್ಷೆಗಳಾಗಿವೆ? ಯಾವ ಆಧಾರದ ಮೇಲೆ ಶೇ.10 ಮೀಸಲಾತಿಯನ್ನು ನೀಡಲಾಗಿದೆ? ಆರ್ಥಿಕ ಹಿಂದುಳಿದಿರುವಿಕೆಗೆ ನೀಡಿರುವ ಎಂಟು ಲಕ್ಷ ರೂ. ಆದಾಯ ಮಿತಿಯಂತಹ ಮಾನದಂಡಗಳನ್ನು ಸುಪ್ರೀಂ ಕೋರ್ಟ್ ಹೇಗಾದರೂ ಒಪ್ಪಿಕೊಂಡಿತು? ಬಡತನಕ್ಕೂ ಮತ್ತು ಸಾಮಾಜಿಕವಾಗಿ ಅನುಭವಿಸಿದ ತರತಮಕ್ಕೂ ಇರುವ ವ್ಯತ್ಯಾಸಕ್ಕೆ ನಮ್ಮ ನ್ಯಾಯಾಂಗ ವ್ಯವಸ್ಥೆ ಕುರುಡಾಗಿದ್ದು ಹೇಗೆ?- ಹೀಗೆ ಸಾಲುಸಾಲು ಪ್ರಶ್ನೆಗಳಿಗೆ ಉತ್ತರ ದೊರಕಿಲ್ಲ. ಇಡಬ್ಲ್ಯುಎಸ್ ಮೀಸಲಾತಿಯ ಹಿಂದೆ ಅಡಗಿರುವ ದಲಿತ, ದಮನಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳಿಗೆ ಆಗಿರುವ ಮಹಾಮೋಸವನ್ನು EWS 10% ಮಹಾವಂಚನೆ’ ಕೃತಿ ತೆರೆದಿಟ್ಟಿದೆ.

ದಲಿತ ಸಂಘ? ಸಮಿತಿ (ಅಂಬೇಡ್ಕರ್ ವಾದ) ಹೊರತಂದಿರುವ, ಮಾವಳ್ಳಿ ಶಂಕರ್, ಬಿ.ಶ್ರೀಪಾದ ಭಟ್, ವಿಕಾಸ್ ಆರ್.ಮೌರ್ಯ ಅವರು ಸಂಪಾದಿಸಿರುವ ಈ ಕೃತಿ ಸದ್ಯ ಬಾಧಿಸುತ್ತಿರುವ ಗಂಭೀರ ಸಮಸ್ಯೆಯೊಂದರ ಕುರಿತು ಐತಿಹಾಸಿಕ ಸತ್ಯಗಳೊಂದಿಗೆ ಚರ್ಚಿಸಿದೆ. ಕನಿ? ಶೇ.5 ದಾಟದ ಜನಸಂಖ್ಯೆಗೆ ಶೇ.10ರ? ಮೀಸಲಾತಿಯನ್ನು ನೀಡಿದ್ದಾದರೂ ಹೇಗೆ? ಪ್ರಾತಿನಿಧ್ಯವಿರುವ ಸಮುದಾಯಗಳಿಗೆ ಮತ್ತ? ಅವಕಾಶಗಳನ್ನು ಕಲ್ಪಿಸಿದ್ದಾದರೂ ಹೇಗೆ?- ಇದಕ್ಕೆಲ್ಲ ಇರುವ ಉತ್ತರವೆಂದರೆ ನಾವು ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿಗಳ ಮೌನ ಮತ್ತು ಬ್ರಾಹ್ಮಣ್ಯದ ಗುಲಾಮಗಿರಿ.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಅಣುಕು ಅಂತ್ಯ ಸಂಸ್ಕಾರ ಮಾಡಲು ಮುಂದಾದ ಒಳಮೀಸಲಾತಿ ಹೋರಾಟಗಾರರು – ಪೊಲೀಸರಿಂದ ಅಡ್ಡಿ

12 ಅಪರೂಪದ ಬರಹಗಳನ್ನು ಹೊಂದಿರುವ ಈ ಕೃತಿಯು ‘ಇಡಬ್ಲ್ಯುಎಸ್’ ಒಳಹೊರಗನ್ನು ಆಮೂಲಾಗ್ರವಾಗಿ ಚರ್ಚೆಗೆ ಒಳಪಡಿಸಿದೆ. ಆರ್ಥಿಕವಾಗಿ ಹಿಂದುಳಿದಿದ್ದೇವೆ ಎನ್ನುವ ಬಲಾಢ್ಯ ಜಾತಿಗಳು ಶ್ರೇಣೀಕೃತ ಜಾತಿವ್ಯವಸ್ಥೆಯಲ್ಲಿ ಅನುಭವಿಸಿರುವ ಸಾಮಾಜಿಕ ಸವಲತ್ತಿನ ಕುರಿತು ಇತಿಹಾಸದ ದಾಖಲೆಗಳನ್ನು ಪುಸ್ತಕ ಮುಂದಿಡುತ್ತದೆ. ಮಾವಳ್ಳಿ ಶಂಕರ್, ವಿಕಾಸ್ ಆರ್. ಮೌರ್ಯ, ಬಿ.ಶ್ರೀಪಾದ ಭಟ್, ನಿಧಿನ್ ಶೋಭನ, ಮಾಲವಿಕಾ ಪ್ರಸಾದ್, ಅಶ್ವಿನಿ ಓಬಳೇಶ್, ಕೆಸ್ತಾರ ವಿ.ಮೌರ್ಯ, ಎಚ್.ವಿ.ಮಂಜುನಾಥ್, ಬಿ.ಸಿ.ಬಸವರಾಜ್ ಅವರ ಬರಹಗಳು ಇಲ್ಲಿವೆ. ಇಂಗ್ಲಿಷನಲ್ಲಿ ಪ್ರಕಟವಾಗಿರುವ ಕೆಲವು ಲೇಖನಗಳನ್ನು ಶಶಾಂಕ್ ಎಸ್.ಆರ್. ಮತ್ತು ನಿಖಿಲ್ ಕೋಲ್ಪೆಯವರು ಅನುವಾದಿಸಿದ್ದಾರೆ.

“ಇಡಬ್ಲ್ಯುಎಸ್ ಸಂಬಂಧ, ಪರ್ದೀವಾಲಾ ಎನ್ನುವ ನ್ಯಾಯಮೂರ್ತಿ ತಮ್ಮ ತೀರ್ಪಿನಲ್ಲಿ ‘ಸಾಮಾಜಿಕ ನ್ಯಾಯ ನಿರಾಕರಣೆ ಮೊದಲ ಹೆಜ್ಜೆ’ ಎನ್ನುತ್ತಾರೆ. ಅವರ ಮಾತಿನ ಉದ್ದೇಶವಾದರೂ ಏನು? ಅವರ ಬಾಯಲ್ಲಿ ಈ ಮಾತು ಬರುತ್ತದೆ ಎಂದರೆ ಅವರ ಪುರಾತನ ಹಾಗೂ ಪೂರ್ವಿಕರ ಮಾತುಗಳು ಇವರ ಮೂಲಕ ಬಂದಿವೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಬೇಕು” ಎನ್ನುತ್ತಾರೆ ಮಾವಳ್ಳಿ ಶಂಕರ್.

ಮಾವಳ್ಳಿ ಶಂಕರ್

ಇಡಬ್ಲ್ಯುಎಸ್‌ನಿಂದಾಗಿ ಹಿಂದುಳಿದ ವರ್ಗಗಳಿಗೆ ಆಗಿರುವ ಮಹಾಮೋಸದ ಕುರಿತು ವಿಕಾಸ್ ಆರ್.ಮೌರ್ಯ ಅವರ ಲೇಖನಗಳು ವಿಸ್ತೃತವಾಗಿ ಚರ್ಚಿಸಿವೆ. “‘ಕಾಕ ಕಾಲೇಲ್ಕರ್’ ಸಮಿತಿಯಿಂದ ಆರಂಭವಾಗಿ ‘ಮಂಡಲ್’ ಸಮಿತಿಯ ವರದಿಯವರೆಗೂ (ಹಲವು ರಾಜ್ಯಗಳೂ ಸಹ ಹಿಂದುಳಿದ ಜಾತಿಗಳ ಮೀಸಲಾತಿಗೆ ಸಮಿತಿ ನೇಮಿಸಿದ್ದವು) ಹಲವು ಸಮಿತಿಗಳನ್ನು ಓಬಿಸಿ ಜಾತಿಗಳ ಮೀಸಲಾತಿಗೆ ರಚಿಸಲಾಗಿತ್ತು. ಆ ಸಮಿತಿಗಳು ‘ಒಬಿಸಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಳನ್ನು ನಡೆಸಿ ವರದಿ ನೀಡಿದ್ದವು. ಈ ಕಾರಣದಿಂದ ಮಂಡಲ್ ವರದಿ ನೀಡಿದ ಅಂಕಿಅಂಶಗಳ ಆಧಾರದಲ್ಲಿ ‘ಒಬಿಸಿ’ ಜಾತಿಗಳಿಗೆ ಶೇ.27ರ? ಮೀಸಲಾತಿಯನ್ನು ನೀಡಲಾಯಿತು. ಒಟ್ಟಾರೆ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯ ಪ್ರಮಾಣವನ್ನು ಜನಗಣತಿ ಹಾಗೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯ ಆಧಾರದ ಮೇಲೆ ನಿಗದಿಗೊಳಿಸಲಾಯಿತು. ಇಡಬ್ಲ್ಯುಎಸ್ ಮೀಸಲಾತಿಯ ವಿಚಾರದಲ್ಲಿ ಈ ರೀತಿಯ ಯಾವುದೇ ಸಮೀಕ್ಷೆಗಳು ಆಗಿಲ್ಲ. ಹಾಗಾದರೆ ಮೇಲ್ಜಾತಿ ಬಡವರ ಸಂಖ್ಯೆಯೇ ತಿಳಿದಿಲ್ಲದಿರುವಾಗ ಕೇಂದ್ರ ಸರ್ಕಾರ ಶೇ.10ರ? ಮೀಸಲಾತಿಯನ್ನು ನಿಗದಿಪಡಿಸಿದ್ದಾದರೂ ಹೇಗೆ?” ಎಂದು ಪ್ರಶ್ನಿಸಿದ್ದಾರೆ ವಿಕಾಸ್.

‘ಧನಾತ್ಮಕ ಮೀಸಲಾತಿ’- ಅಂದರೆ ನಿರ್ದಿಷ್ಟ ಜನಾಂಗಕ್ಕೆ ಅವರ ಜನಸಂಖ್ಯೆಗಿಂತಲೂ ಹೆಚ್ಚು ಪ್ರಮಾಣದ ಮೀಸಲಾತಿ ನೀಡುವುದಾಗಿದೆ. ಅಮೆರಿಕ, ಬ್ರಿಟನ್ ಮುಂತಾದ ಮುಂದುವರಿದ ರಾಷ್ಟ್ರಗಳು ಈ ರೀತಿಯ ಮೀಸಲಾತಿಯನ್ನು ಅತಿ ಹಿಂದುಳಿದ ಜನಾಂಗಗಳಿಗೆ ನೀಡುತ್ತಿವೆ. ಆದರೆ ಭಾರತದಲ್ಲಿ ಸವಲತ್ತುಳ್ಳ ಮೇಲ್ಜಾತಿಗಳಿಗೆ ಈ ಮೀಸಲಾತಿಯನ್ನು ನೀಡಲಾಗಿದೆ. ಇಡಬ್ಲ್ಯುಎಸ್ ನಿಯಮದ ಪ್ರಕಾರ ಅವರಲ್ಲಿನ ಬಡವರ ಸಂಖ್ಯೆ ಶೇ.1ರಷ್ಟನ್ನೂ ತಲುಪಲಾರದೇನೋ. ಹೀಗಿರುವಾಗ ಶೇ.1ರಷ್ಟಿರುವ ಜನರಿಗೆ ಶೇ.10ರಷ್ಟು ಮೀಸಲಾಗಿ ನೀಡಲಾಗಿದೆ! ಶೇ. 52ರಷ್ಟಿರುವ ಒಬಿಸಿಗಳು ಕೇವಲ ಶೇ. 27ರಷ್ಟು ಮೀಸಲಾತಿ ಪಡೆದಿದ್ದಾರೆ. ‘ಮನುಸ್ಮೃತಿ ನ್ಯಾಯ’ದಿಂದ ಮೇಲ್ಜಾತಿಗಳು ಶೇ.9ರಷ್ಟು ಹೆಚ್ಚುವರಿ ಮೀಸಲಾತಿಗೆ ಅಪ್ಪಣೆ ಕೊಡಿಸಿಕೊಂಡಿದ್ದಾರೆ. ಇಂತಹ ಅನ್ಯಾಯವನ್ನು ಹಿಂದೆಂದೂ ಕಂಡಿರಲಿಲ್ಲ ಎಂದಿದ್ದಾರೆ.

ಶ್ರೀಪಾದ್ ಭಟ್ ಅವರು ತಮ್ಮ ಲೇಖನದಲ್ಲಿ ಹೇಗೆ ಇಡಬ್ಲ್ಯುಎಸ್ ತರಾತುರಿಯಲ್ಲಿ ಜಾರಿಯಾಯಿತು ಎಂಬುದನ್ನು ಚರ್ಚಿಸುತ್ತಾ, “ಒಳ ಮೀಸಲಾತಿಯ ಪ್ರಶ್ನೆ ಬಂದಾಗ ವಂಚಿತ ಸಮುದಾಯಗಳು ಸತತ ಹೋರಾಟ ಮಾಡಿದರೂ ಅದಕ್ಕೆ ಸೊಪ್ಪು ಹಾಕದ ಸರ್ಕಾರವು ಕಣ್ಣೊರೆಸುವ ತಂತ್ರವಾಗಿ ಉಪಸಮಿತಿಗಳನ್ನು ರಚಿಸಿ ನಿಧಾನಗತಿಯ, ಅಧಿಕಾರಶಾಹಿ ಮನಸ್ಥಿತಿಯ ಪ್ರವೃತ್ತಿ ಅನುಸರಿಸುತ್ತಿದೆ” ಎನ್ನುತ್ತಾರೆ.

ಶೈಕ್ಷಣಿಕವಾಗಿ, ಆರ್ಥಿಕವಾಗಿ ಶೋಷಿತ ಸಮುದಾಯಗಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಅಂಕಿ-ಅಂಶಗಳ ಸಹಿತ ಶ್ರೀಪಾದ್ ವಿವರಿಸಿದ್ದಾರೆ. “ಉದಾಹರಣೆ ನೋಡಿ. 2019ರ ಸಂಯೋಜಿತ ವೈದ್ಯಕೀಯ ಸೇವೆಗಳ ಪ್ರವೇಶ ಪರೀಕ್ಷೆಗೆ ಸಾಮಾನ್ಯ ಕೆಟಗರಿಗೆ 306 ಕಟ್‌ಆಫ್ ಅಂಕಗಳು (600ಕ್ಕೆ). ಹಿಂದುಳಿದ ವರ್ಗಗಳಿಗೆ 268, ಪ.ಜಾತಿಗೆ 271, ಪರಿಶಿಷ್ಟ ಪಂಗಡಕ್ಕೆ 225 ನಿಗದಿಪಡಿಸಿದರೆ ಇಡಬ್ಲ್ಯುಎಸ್‌ನಲ್ಲಿ ಶೇ.10 ಮೀಸಲಾತಿಗೆ 220 ಕಟ್‌ಆಫ್ ಅಂಕಗಳನ್ನು ನಿಗದಿಪಡಿಸಲಾಗಿದೆ. 2019ರಲ್ಲಿ ಯುಪಿಎಸ್‌ಇ ಪೂರ್ವಭಾವಿ ಪರೀಕ್ಷೆಯಲ್ಲಿ EWSಗೆ 90 ಕಟ್‌ಆಫ್ ಅಂಕಗಳಿದ್ದರೆ ಹಿಂದುಳಿದ ವರ್ಗಗಳಿಗೆ 95.34 ಕಟ್‌ಆಫ್ ಅಂಕಗಳನ್ನು, ಮೇನ್ಸ್ ಪರೀಕ್ಷೆಯಲ್ಲಿ EWSಗೆ 696 ಕಟ್ ಆಫ್ ಅಂಕಗಳಿದ್ದರೆ ಹಿಂದುಳಿದ ವರ್ಗಗಳಿಗೆ 718 ಕಟ್‌ಆಫ್ ಅಂಕಗಳನ್ನು, ಅಂತಿಮ ಪರೀಕ್ಷೆಯಲ್ಲಿ EWSಗೆ 909 ಕಟ್‌ಆಫ್ ಅಂಕಗಳಿದ್ದರೆ, ಹಿಂದುಳಿದ ವರ್ಗಗಳಿಗೆ 925 ಕಟ್‌ಆಫ್ ಅಂಗಳನ್ನು ನಿಗದಿಪಡಿಸಿದ್ದಾರೆ”. ಇಂತಹ ಅನೇಕ ಕ್ರೌರ್ಯದ ತರತಮಗಳನ್ನು ಶ್ರೀಪಾದ್ ಭಟ್ ತಮ್ಮ ಲೇಖನಗಳಲ್ಲಿ ಹೊರಗೆಳೆದಿದ್ದಾರೆ. ಐವರು ನ್ಯಾಯಮೂರ್ತಿಗಳು (ದಿನೇಶ್ ಮಹೇಶ್ವರಿ, ಬೇಲಾ ತ್ರಿವೇದಿ, ಜೆ.ಬಿ.ಪರ್ದಿವಾಲಾ, ಬಿ.ಯು.ಲಲಿತ್, ರವೀಂದ್ರ ಭಟ್) ತಾಳಿರುವ ನಿಲುವುಗಳನ್ನು ಮತ್ತೊಂದು ಲೇಖನದಲ್ಲಿ ವಿಸ್ತೃತವಾಗಿ ಚರ್ಚಿಸಿದ್ದಾರೆ.

ಇದನ್ನೂ ಓದಿ: ತೃತೀಯ ರಂಗದಿಂದ ಬಿಜೆಪಿಗೆ ಲಾಭ, ಸಮಾನ ಮನಸ್ಕರು ಒಂದಾಗುವ ತುರ್ತು ಅಗತ್ಯವಿದೆ: ಕಾಂಗ್ರೆಸ್

ನಿಧಿನ್ ಶೋಭನಾ ಅವರ ಲೇಖನ ಬ್ರಾಹ್ಮಣರಿಗೆ ಕಾಲಕಾಲಕ್ಕೆ ದೊರಕುತ್ತಿದ್ದ ಸವಲತ್ತುಗಳ ಕುರಿತು ಐತಿಹಾಸಿಕ ದಾಖಲೆಗಳೊಂದಿಗೆ ಹೊರಗೆಳೆಯುತ್ತದೆ. ಬ್ರಾಹ್ಮಣರಿಗಾಗಿ ದೊರಕುತ್ತಿದ್ದ ‘ದಕ್ಷಿಣ’ ಎಂಬ ಹೆಸರಿನ ಸರ್ಕಾರಿ ದತ್ತಿಯ ಚರಿತ್ರೆ ಮತ್ತು ವಿಶ್ವವಿದ್ಯಾನಿಲಯಗಳ ಕ್ಯಾಲೆಂಡರುಗಳಲ್ಲಿ ದಾಖಲಾಗಿರುವ ಬ್ರಾಹ್ಮಣರ ಸವಲತ್ತುಗಳ ಕುರಿತು ಈ ಬರಹ ಬೆಳಕು ಚೆಲ್ಲುತ್ತದೆ. “ಬಡ ಸವರ್ಣರಿಗೆ ನೀಡಲಾಗುತ್ತಿರುವ ಹೊಸ ಮೀಸಲಾತಿಯನ್ನೂ ಈ ಜಾತೀಯ ಪ್ರಯತ್ನಗಳ ಹಿನ್ನೆಲೆಯಲ್ಲಿಯೇ ಅರ್ಥೈಸಬೇಕು. ಬಡ ಬ್ರಾಹ್ಮಣನ ಹೊರೆಯನ್ನು ಜಾತಿಯ ವ್ಯವಸ್ಥೆಯಲ್ಲಿರುವ ಎಲ್ಲರೂ, ಅದರಲ್ಲೂ ಪ್ರಮುಖವಾಗಿ ಬಹುಜನರೇ ಹೊತ್ತಿದ್ದಾರೆ” ಎಂಬ ನೋವಿನೊಂದಿಗೆ ಲೇಖನ ಪೂರ್ಣಗೊಳ್ಳುತ್ತದೆ.

“ಮೇಲುಜಾತಿಗಳಿಗೆ 10 ಶೇಕಡಾ ಮೀಸಲಾತಿಯು ಸಮಾನ ನೈತಿಕ ಸದಸ್ಯತ್ವದ ಕಡೆಗೆ, ಜಾತಿ ದಮನಕ್ಕೆ ಪರಿಹಾರ ಒದಗಿಸುವುದರ ಬದಲು ಈಗಾಗಲೇ ಭದ್ರವಾಗಿ ಸ್ಥಾಪಿತವಾದ ಮೇಲುಜಾತಿ ವ್ಯಕ್ತಿಗಳ ಪ್ರಾತಿನಿಧ್ಯವನ್ನು ಇನ್ನ? ಭದ್ರವಾಗಿ ಸ್ಥಾಪಿಸುವುದಾಗಿದೆ. ಈ ನಿಟ್ಟಿನಲ್ಲಿ ಪ.ಜಾತಿ, ಪ.ಪಂಗಳ, ಒಬಿಸಿಗಳು ಶೇ.40 ಮೀಸಲಾತಿಗೆ ಅರ್ಹರಾಗಿರುವುದರಿಂದ, ಶೇ.50 ಮೀಸಲಾತಿಯ ಒಳಗೆ ಈ ಶೇ.10 ಇದೆಯೋ ಅಥವಾ ಶೇ.50 ಮೀಸಲಾತಿ ಮಿತಿಯನ್ನು ಮೀರಲಾಗಿದೆಯೋ ಎಂಬುದು ಅಪ್ರಸ್ತುತವಾಗುತ್ತದೆ” ಎಂದಿದ್ದಾರೆ ನ್ಯಾಯವಾದಿ ಮಾಲವಿಕಾ ಪ್ರಸಾದ್.

ನ್ಯಾಯವಾದಿ ಎಚ್.ವಿ.ಮಂಜುನಾಥ್, “ಈ ನನ್ನ ಅನುಮಾನ ಮತ್ತು ಕಳವಳ ಏಕೆಂದರೆ ಮೆಜಾರಿಟಿ ತೀರ್ಪು ನೀಡಿದ ಮೂವರು ನ್ಯಾಯಮೂರ್ತಿಗಳ ಪೈಕಿ ಇಬ್ಬರು ನ್ಯಾಯಮೂರ್ತಿಗಳು- ‘ಸ್ವಾತಂತ್ರ್ಯ ಬಂದು 75 ವರ್ಷ ಮುಗಿಯುತ್ತಿರುವ ಹೊತ್ತಿನಲ್ಲಾದರೂ ಸಮಾಜದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮೀಸಲಾತಿ ವ್ಯವಸ್ಥೆ ಬಗ್ಗೆ ಪುನರ್ ಪರಿಶೀಲಿಸಬೇಕು ಮತ್ತು ಮೀಸಲಾತಿಗೆ ಕಾಲ ಮಿತಿ ನಿಗದಿಗೊಳಿಸಬೇಕು. ಬಾಬಾ ಸಾಹೇಬರು ಮೀಸಲಾತಿಯನ್ನು ಕೇವಲ ಹತ್ತು ವ?ಕ್ಕೆ ಅಳವಡಿಸಿದ್ದರೂ (ಬಾಬಾ ಸಾಹೇಬರು ಆ ರೀತಿ ಹೇಳದೆ ಇದ್ದಾಗ್ಯೂ) ಏಳು ದಶಕಗಳು ಕಳೆದರೂ ಮುಂದುವರಿಯುತ್ತಿದೆ. ಹಾಗಾಗಿ ಅನಿರ್ದಿಷ್ಟ ಕಾಲ ಮುಂದುವರೆಸಬಾರದು’- ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದು ಏನನ್ನು ಹೇಳುತ್ತದೆ ಎಂದು ಅರ್ಥೈಸಿಕೊಂಡರೆ ಸಂವಿಧಾನ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯಲ್ಲಿ ನಂಬಿಕೆಯಿಟ್ಟಿರುವವರೆಲ್ಲರಿಗೂ ಇದೊಂದು ಅಪಾಯದ ಕರೆಗಂಟೆ ಎಂಬುದು ತಿಳಿಯುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕೆಸ್ತಾರ ವಿ.ಮೌರ್ಯ ಮತ್ತು ಡಾ.ಬಿ.ಸಿ.ಬಸವರಾಜು ಅವರ ಲೇಖನಗಳು ಉದ್ಯೋಗದಲ್ಲಿ ಆಗುತ್ತಿರುವ ತಾರತಮ್ಯಗಳನ್ನು, ಈಗಾಗಲೇ ಪ್ರಾತಿನಿಧ್ಯವುಳ್ಳ ಸಮುದಾಯಗಳೇ ಮತ್ತಷ್ಟು ಪ್ರಾತಿನಿಧ್ಯವನ್ನು ಪಡೆದಿರುವುದನ್ನು ಅಂಕಿ-ಅಂಶಗಳ ಸಹಿತ ವಿವರಿಸುತ್ತವೆ.

ಇಡಬ್ಲ್ಯುಎಸ್- ಈ ಕಾಲದ ಮಹಾವಂಚನೆ ಎಂಬುದನ್ನು ಸಾಕ್ಷ್ಯಗಳನ್ನು ಆಧರಿಸಿ ಹೊರತರಲಾಗಿರುವ ಈ ಕೃತಿಯು ಅವಕಾಶವಂಚಿತ ಸಮುದಾಯಗಳಲ್ಲಿ ಜಾಗೃತಿಯ ದೀವಿಗೆ ಹಚ್ಚುವಂತೆ ನೋಡಿಕೊಳ್ಳಬೇಕಿದೆ. ಒಂದು ವಿಚಾರದ ಸುತ್ತ ನೂರೆಂಟು ಆಯಾಮಗಳಲ್ಲಿ ಇಲ್ಲಿನ ಲೇಖನಗಳು ಚರ್ಚಿಸಿವೆ. ಯಾವುದೇ ಸಂಗತಿ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಿ, ಮತ್ತೊಂದು ಚಳವಳಿಯ ಅಗತ್ಯತೆಯನ್ನು ಸಂಪಾದನ ಮಂಡಳಿ ಪ್ರಸ್ತಾಪಿಸಿದೆ. ಡಿಎಂಕೆ ಹೊರತುಪಡಿಸಿ ಎಲ್ಲ ಪಕ್ಷಗಳು ಈ ಮಹಾಮೋಸವನ್ನು ಒಪ್ಪಿಕೊಂಡಿರುವುದು ದುರಂತ. ಈ ವಿಚಾರಗಳನ್ನು ಮತ್ತೆಮತ್ತೆ ಮಾತನಾಡುವ, ಆ ಮೂಲಕ ಸಂವಿಧಾನ ಕೊಡಮಾಡಿರುವ ಸಾಮಾಜಿಕ ನ್ಯಾಯ ಎಂಬ ಉದಾತ್ತ ಕಲ್ಪನೆಯನ್ನು ಉಳಿಸಿಕೊಳ್ಳುವ ತುರ್ತು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ.

ಯತಿರಾಜ್ ಬ್ಯಾಲಹಳ್ಳಿ
ನಾನುಗೌರಿ.ಕಾಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆಗೆ ಸಂಚು: ವಾಷಿಂಗ್‌ ಟನ್‌ ಪೋಸ್ಟ್‌ ವರದಿ ತಿರಸ್ಕರಿಸಿದ ಭಾರತ

0
ಭಾರತದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನೂನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು ಎಂಬ ವಾಷಿಂಗ್ಟನ್ ಪೋಸ್ಟ್‌ನ ವರದಿಯನ್ನು ಭಾರತ ಇಂದು ಬಲವಾಗಿ ತಿರಸ್ಕರಿಸಿದೆ. ಭಾರತದ ರಿಸರ್ಚ್...