Homeಮುಖಪುಟಕುಸ್ತಿಪಟುಗಳು ಬಂಧನದಲ್ಲೂ ನಗುತ್ತಿದ್ದಾರೆ ಎಂದು ನಕಲಿ ಫೋಟೋ ಹರಿಬಿಟ್ಟ ಐಟಿ ಸೆಲ್: ಬಜರಂಗ್ ಪೂನಿಯಾ ಆರೋಪ

ಕುಸ್ತಿಪಟುಗಳು ಬಂಧನದಲ್ಲೂ ನಗುತ್ತಿದ್ದಾರೆ ಎಂದು ನಕಲಿ ಫೋಟೋ ಹರಿಬಿಟ್ಟ ಐಟಿ ಸೆಲ್: ಬಜರಂಗ್ ಪೂನಿಯಾ ಆರೋಪ

- Advertisement -
- Advertisement -

ಐಟಿ ಸೆಲ್‌ನವರು ಪ್ರತಿಭಟನಾ ನಿರತ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರ ಮಾರ್ಫ್ ಮಾಡಿದ ಚಿತ್ರವನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ಒಲಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ ಭಾನುವಾರ ಆರೋಪಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನವದೆಹಲಿಯ ಹೊಸ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲು ಹೊರಟಿದ್ದ ಭಾರತದ ಹಲವಾರು ಪ್ರಮುಖ ಕುಸ್ತಿಪಟುಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಈ ವೇಳೆ ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರನ್ನು ಪೊಲೀಸ್ ಅಧಿಕಾರಿಗಳು ಬಸ್‌ನಲ್ಲಿ ಎಳೆದೊಯ್ಯುವಾಗ ಅವರು ನಗುತ್ತಿರುವಂತೆ ನಕಲಿ ಫೋಟೋ ಚಿತ್ರಸಿ, ಕುಸ್ತಿಪಟುಗಳು ತಮ್ಮ ಪ್ರತಿಭಟನೆಯ ಬಗ್ಗೆ ಗಂಭೀರವಾಗಿಲ್ಲ ಎಂಬ ಹೇಳಿಕೆಯೊಂದಿಗೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ಪತ್ರಕರ್ತ ಮಂದೀಪ್ ಪುನಿಯಾ ಅವರು ಮೂಲ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಮಾರ್ಫ್ ಮಾಡಲಾದ ಚಿತ್ರ ಹೊರಬರುವ ಮುನ್ನ ತಗೆದ ಫೋಟೊವನ್ನು ತೋರಿಸಿ, ಇದು ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ನಗುತ್ತಿರುವುದನ್ನು ತೋರಿಸುವುದಿಲ್ಲ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪುನಿಯಾ, ”ಐಟಿ ಸೆಲ್‌ನವರು ಈ ನಕಲಿ ಚಿತ್ರವನ್ನು ಹರಡುತ್ತಿದ್ದಾರೆ. ಈ ನಕಲಿ ಚಿತ್ರವನ್ನು ಪೋಸ್ಟ್ ಮಾಡಿದವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ನಾವು ಸ್ಪಷ್ಟಪಡಿಸುತ್ತೇವೆ” ಎಂದಿದ್ದಾರೆ.

ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ಎಎಫ್‌ಪಿಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತ ಉಝೈರ್ ರಿಜ್ವಿ ಅವರು ಕುಸ್ತಿಪಟುಗಳ ಮೂಲ ಚಿತ್ರವನ್ನು ಹೇಗೆ ಮಾರ್ಪಡಿಸಲು ಸಾಫ್ಟ್‌ವೇರ್ ಅನ್ನು ಬಳಸಲಾಗಿದೆ ಎಂಬುದನ್ನು ಪ್ರದರ್ಶಿಸಲು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. FaceApp ಎಂಬ ಸಾಫ್ಟ್‌ವೇರ್, ಬಳಕೆದಾರರಿಗೆ “ಸ್ಮೈಲ್” ಫಿಲ್ಟರ್ ಅನ್ನು ಪ್ರಯತ್ನಿಸಲು ಮತ್ತು ಜನರು ನಗುತ್ತಿರುವಂತೆ ಕಾಣುವಂತೆ ಅವರ ಮುಖಗಳನ್ನು ಮಾರ್ಪಡಿಸುತ್ತದೆ ಎಂಬುದು ಅಲ್ಲಿ ಕಾಣಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನವನ್ನು ಉದ್ಘಾಟಿಸುತ್ತಿದ್ದಂತೆಯೇ ಕುಸ್ತಿಪಟುಗಳು ಅದರತ್ತ ಮೆರವಣಿಗೆ ನಡೆಸಲು ಯತ್ನಿಸಿದರು. ಆದರೆ ನೂರಾರು ಪೊಲೀಸರು ಅವರನ್ನು ತಡೆದರು.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ಸಾಕ್ಷಿ ಮಲಿಕ್, ಕುಸ್ತಿಪಟುಗಳನ್ನು ಪೊಲೀಸ್ ಅಧಿಕಾರಿಗಳು ಎಳೆದೊಯ್ದ ಫೋಟೋಗಳು ಮತ್ತು ವೀಡಿಯೊವನ್ನು ಹಂಚಿಕೊಂಡಿದ್ದಾರೆ.

”ನಮ್ಮ ಚಾಂಪಿಯನ್‌ಗಳನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಜಗತ್ತು ನಮ್ಮನ್ನು ನೋಡುತ್ತಿದೆ” ಎಂದು ಸಾಕ್ಷಿ ಮಲಿಕ್ ಟ್ವೀಟ್ ಮಾಡಿದ್ದಾರೆ.

ಹಲವಾರು ವಿರೋಧ ಪಕ್ಷದ ನಾಯಕರು ಪೊಲೀಸರ ಕ್ರಮಗಳನ್ನು ಟೀಕಿಸಿದ್ದು, ಇದು ”ಅತ್ಯಂತ ನಾಚಿಕೆಗೇಡಿನ ಮತ್ತು ದುರದೃಷ್ಟಕರ” ಎಂದು ಹೇಳಿದರು.

ಇದನ್ನೂ ಓದಿ: ಒಲಿಂಪಿಕ್ಸ್ ಪದಕ ವಿಜೇತರ ಮೇಲೆ ಗಲಭೆ ಪ್ರಕರಣ ದಾಖಲು: ದೇಶದಲ್ಲಿ ಸರ್ವಾಧಿಕಾರ ಆರಂಭವಾಗಿದೆಯೇ?; ವಿನೇಶ್ ಫೋಗಟ್ ಪ್ರಶ್ನೆ

ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮಾತನಾಡಿ, ಬಿಜೆಪಿಯು ಮತಗಳ ಅಗತ್ಯವಿದ್ದಾಗ ”ಬೇಟಿ ಬಚಾವೋ” ಅಭಿಯಾನವನ್ನು ಪ್ರಾರಂಭಿಸಿತು. ಆದರೆ ಈಗ ಅವರು ”ದೇಶದ ಹೆಣ್ಣುಮಕ್ಕಳನ್ನು ಅವಮಾನಿಸುತ್ತಿದ್ದಾರೆ” ಎಂದು ಹೇಳಿದರು.

“ದುರಹಂಕಾರಿ ರಾಜ ಬೀದಿಗಳಲ್ಲಿ ಸಾರ್ವಜನಿಕರ ಧ್ವನಿಯನ್ನು ಹತ್ತಿಕ್ಕುವನು” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ”ಆಟಗಾರರ ಎದೆಯ ಮೇಲಿರುವ ಪದಕಗಳು ನಮ್ಮ ದೇಶದ ಹೆಮ್ಮೆ. ಆ ಪದಕಗಳಿಂದ ಕ್ರೀಡಾ ಪಟುಗಳ ಪರಿಶ್ರಮದಿಂದ ದೇಶದ ಗೌರವ ಹೆಚ್ಚುತ್ತದೆ. ಬಿಜೆಪಿ ಸರ್ಕಾರದ ದುರಹಂಕಾರ ಎಷ್ಟರಮಟ್ಟಿಗೆ ಹೆಚ್ಚಿದೆ ಎಂದರೆ ಸರ್ಕಾರ ನಮ್ಮ ಮಹಿಳಾ ಆಟಗಾರ್ತಿಯರ ದನಿಯನ್ನು ನಿರ್ದಯವಾಗಿ ಅವರ ಬೂಟಿನ ಕೆಳಗೆ ತುಳಿಯುತ್ತಿದೆ. ಇದು ಸಂಪೂರ್ಣವಾಗಿ ತಪ್ಪು. ಸರ್ಕಾರದ ದುರಹಂಕಾರ ಹಾಗೂ ಈ ಅನ್ಯಾಯವನ್ನು ಇಡೀ ದೇಶವೇ ನೋಡುತ್ತಿದೆ” ಎಂದು ಟೀಕಿಸಿದ್ದಾರೆ.

ಪೊಲೀಸರ ವರ್ತನೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ. “ಭಾರತದ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯುವ ನಮ್ಮ ಕ್ರೀಡಾಪಟುಗಳೊಂದಿಗೆ ಇಂತಹ ವರ್ತನೆಯು ತುಂಬಾ ತಪ್ಪು ಮತ್ತು ಖಂಡನೀಯ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಜಸ್ಥಾನ: ಲೈಂಗಿಕ ದೌರ್ಜನ್ಯದ ಕುರಿತು ವರದಿ ಮಾಡಿದ್ದ ದಲಿತ ಪತ್ರಕರ್ತನ ಮೇಲೆ ಹಲ್ಲೆ

0
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ನಿರಂತರವಾಗಿ ವರದಿಯನ್ನು ಪ್ರಕಟಿಸಿ, ಆರೋಪಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಕಾರಣನಾಗಿದ್ದ ದಲಿತ ಪತ್ರಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ಹರಿ ಸಿಂಗ್...