Homeಮುಖಪುಟ‘ಅದು ಪೊಲೀಸರೇ ನಡೆಸಿದ ಪೂರ್ವ ಯೋಜಿತ ಕೃತ್ಯ’: ಸಂಭಾಲ್ ಹಿಂಸಾಚಾರ ನ್ಯಾಯಾಂಗ ಆಯೋಗದ ವರದಿ ತಿರಸ್ಕರಿಸಿದ...

‘ಅದು ಪೊಲೀಸರೇ ನಡೆಸಿದ ಪೂರ್ವ ಯೋಜಿತ ಕೃತ್ಯ’: ಸಂಭಾಲ್ ಹಿಂಸಾಚಾರ ನ್ಯಾಯಾಂಗ ಆಯೋಗದ ವರದಿ ತಿರಸ್ಕರಿಸಿದ ಸಂಸದ ಜಿಯಾ-ಉರ್-ರೆಹಮಾನ್

- Advertisement -
- Advertisement -

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ 2024ರ ನವೆಂಬರ್‌ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದ ನ್ಯಾಯಾಂಗ ಆಯೋಗದ ವರದಿಯನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಘಟನೆಯಲ್ಲಿ ನಾಲ್ವರು ಮುಸ್ಲಿಂ ಯುವಕರು ಮೃತಪಟ್ಟಿರುವುದಕ್ಕೆ ಪೊಲೀಸ್ ಇಲಾಖೆಗೆ ಸಂಪೂರ್ಣ ‘ಕ್ಲೀನ್ ಚಿಟ್’ ನೀಡಿರುವ ಮತ್ತು ಹಿಂಸಾಚಾರದ ಹೊಣೆಯನ್ನು ತಮ್ಮ ಮೇಲೆಯೇ ಹೊರಿಸಿರುವ ಆಯೋಗದ ತೀರ್ಮಾನಗಳನ್ನು ತೀವ್ರವಾಗಿ ಖಂಡಿಸಿರುವ ಅವರು, “ಈ ಹಿಂಸಾಚಾರವು ಸಾರ್ವಜನಿಕರು ನಡೆಸಿದ್ದಲ್ಲ, ಬದಲಿಗೆ ಪೊಲೀಸ್ ಆಡಳಿತ ಮತ್ತು ರಾಜ್ಯ ಸರ್ಕಾರ ಸೇರಿ ನಡೆಸಿದ ಪೂರ್ವ ಯೋಜಿತ ಕೃತ್ಯ” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಲಹಾಬಾದ್ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಅರೋರಾ ನೇತೃತ್ವದ ಮೂವರು ಸದಸ್ಯರ ತನಿಖಾ ಆಯೋಗವು ತನ್ನ ವರದಿಯನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಿತ್ತು. ಈ ವರದಿಯನ್ನು ಇತ್ತೀಚೆಗೆ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಮಂಡಿಸಲಾಯಿತು. ವರದಿಯಲ್ಲಿ ಆಯೋಗವು, ಸಂಭಾಲ್‌ನಲ್ಲಿ ಸಂಭವಿಸಿದ ಅಶಾಂತಿಯು ಸಂಪೂರ್ಣವಾಗಿ ‘ಪೂರ್ವ ಯೋಜಿತ’ ಕೃತ್ಯವಾಗಿತ್ತು ಎಂದು ಪ್ರತಿಪಾದಿಸಿದೆ. ಅಲ್ಲದೆ, ಸಮಾಜವಾದಿ ಪಕ್ಷದ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್, ಎಸ್‌ಪಿ ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ಸುಹೇಲ್ ಇಕ್ಬಾಲ್ ಹಾಗೂ ಸ್ಥಳೀಯ ಶಾಹಿ ಜಾಮಾ ಮಸೀದಿಯ ನಿರ್ವಹಣಾ ಸಮಿತಿಯ ಪ್ರಮುಖ ಸದಸ್ಯರು ಸೇರಿ ಈ ಗಲಭೆಯನ್ನು ಸಂಘಟಿಸಿದ್ದಾರೆ ಎಂದು ತೀರ್ಮಾನಕ್ಕೆ ಬಂದಿದೆ.

ಹಿಂಸಾಚಾರದ ಹಿನ್ನೆಲೆ ಮತ್ತು ಆಯೋಗದ ವರದಿಯ ತೀರ್ಮಾನಗಳು:

2024ರ ನವೆಂಬರ್ 19 ರಂದು 16ನೇ ಶತಮಾನಕ್ಕೆ ಸೇರಿದ ಶಾಹಿ ಜಾಮಾ ಮಸೀದಿಯನ್ನು ಭಗವಾನ್ ಕಲ್ಕಿಗೆ ಸಮರ್ಪಿತವಾದ ಪುರಾತನ ‘ಹರಿ ಹರ್ ದೇವಾಲಯ’ದ ಮೇಲೆ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿ ಹಿಂದೂ ಪರ ಅರ್ಜಿದಾರರು ಸಂಭಾಲ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಮಸೀದಿಯ ಸಮೀಕ್ಷೆಗೆ ನ್ಯಾಯಾಲಯ ಆದೇಶಿಸಿತ್ತು. ಅದರಂತೆ ನವೆಂಬರ್ 24, 2024 ರಂದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡವು ಎರಡನೇ ಬಾರಿಗೆ ಮಸೀದಿಯ ಸಮೀಕ್ಷೆಗೆ ಆಗಮಿಸಿತು. ಈ ವೇಳೆ ಸಮೀಕ್ಷಾ ತಂಡದ ಜೊತೆಗಿದ್ದ ಹಿಂದುತ್ವವಾದಿ ಗುಂಪೊಂದು “ಜೈ ಶ್ರೀ ರಾಮ್” ಎಂದು ಘೋಷಣೆಗಳನ್ನು ಕೂಗಿದ್ದರಿಂದ ಸ್ಥಳೀಯವಾಗಿ ಉದ್ವಿಗ್ನತೆ ಉಂಟಾಯಿತು. ಸ್ಥಳೀಯ ಮುಸ್ಲಿಂ ಸಮುದಾಯದ ಜನರು ಮಸೀದಿಯ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಲು ತೊಡಗಿದರು. ಈ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗ ಮಾಡಿ, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು. ಈ ಪೊಲೀಸ್ ಕಾರ್ಯಾಚರಣೆಯಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.

ಆದರೆ, ಈ ಹಿಂಸಾಚಾರವು ಸ್ವಯಂಪ್ರೇರಿತವಾಗಿ ನಡೆದಿದ್ದಲ್ಲ ಎಂದು ಪ್ರತಿಪಾದಿಸಿರುವ ತನಿಖಾ ಆಯೋಗವು, ಬಾರ್ಕ್, ಸುಹೇಲ್ ಇಕ್ಬಾಲ್, ಜಾಮಾ ಮಸೀದಿ ಇಂತೇಜಾಮಿಯಾ ಸಮಿತಿಯ ಅಧ್ಯಕ್ಷ ಜಾಫರ್ ಅಲಿ, ವಕೀಲ ಕಾಸಿಂ ಜಮಾಲ್, ವಕೀಲ ಮಶ್ಹೂದ್ ಅಲಿ ಫಾರೂಕಿ ಹಾಗೂ ಸಮಿತಿಯ ಕಾರ್ಯದರ್ಶಿ ಲದ್ದಾನ್ ಖಾನ್ ಸೇರಿದಂತೆ ಹಲವರು ನಡೆಸಿದ ಸಚಿತ್ರ ಪಿತೂರಿಯೇ ಇದಕ್ಕೆ ಕಾರಣ ಎಂದು ತನ್ನ ವರದಿಯಲ್ಲಿ ಹೇಳಿದೆ. ಆಪಾದಿತ ಪಿತೂರಿಯು “ರಾಜಕೀಯ ಮಹತ್ವಾಕಾಂಕ್ಷೆಗಳು” ಮತ್ತು “ಮಸೀದಿಯ ಮೇಲಿನ ತಮ್ಮ ಪ್ರಭಾವ ಹಾಗೂ ನಿಯಂತ್ರಣವನ್ನು ಉಳಿಸಿಕೊಳ್ಳುವ ಯತ್ನ”ಗಳಿಂದ ಪ್ರೇರಿತವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಹಿಂಸಾಚಾರಕ್ಕೆ ಕಾರಣವಾದ ಘಟನೆಗಳನ್ನು ಪಟ್ಟಿ ಮಾಡಿರುವ ಆಯೋಗ, ನವೆಂಬರ್ 19ರ ಮೊದಲ ಸಮೀಕ್ಷೆಯ ವೇಳೆ ನಡೆದ ಅಡಚಣೆಗಳು, ನವೆಂಬರ್ 22ರ ಶುಕ್ರವಾರದ ಪ್ರಾರ್ಥನೆಯ ನಂತರ ಸಂಸದ ಬಾರ್ಕ್ ನೀಡಿದ ಹೇಳಿಕೆಗಳು, ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತೆ ಪ್ರಚೋದಿಸಿದ ವಾಟ್ಸಾಪ್ ಸಂದೇಶಗಳು ಹಾಗೂ ಎರಡನೇ ಸಮೀಕ್ಷೆಯ ಮುನ್ನಾದಿನ ಬಾರ್ಕ್ ಮತ್ತು ಜಾಫರ್ ಅಲಿ ನಡುವೆ ನಡೆದ ದೂರವಾಣಿ ಸಂಭಾಷಣೆಗಳನ್ನು ಸಾಕ್ಷಿಯಾಗಿ ಉಲ್ಲೇಖಿಸಿದೆ.

ಪೊಲೀಸ್ ಗುಂಡೇಟಿನಿಂದ ಸಾವು ಸಂಭವಿಸಿಲ್ಲ ಎಂದ ಆಯೋಗ:

ನಾಲ್ವರು ಯುವಕರ ಸಾವಿಗೆ ಪೊಲೀಸ್ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯೇ ಕಾರಣ ಎಂಬುದನ್ನು ಆಯೋಗವು ಸಂಪೂರ್ಣವಾಗಿ ತಳ್ಳಿಹಾಕಿದೆ. ಮರಣೋತ್ತರ ಪರೀಕ್ಷೆಯ ವರದಿಗಳು, ವಿಧಿವಿಜ್ಞಾನ ಸಾಕ್ಷ್ಯಗಳು ಮತ್ತು ಬ್ಯಾಲಿಸ್ಟಿಕ್ ಪರಿಶೀಲನೆಗಳನ್ನು ಆಧಾರವಾಗಿಟ್ಟುಕೊಂಡು, ಬಲಿಪಶುಗಳಿಗೆ ತಾಗಿರುವುದು .315-ಬೋರ್ ಶಸ್ತ್ರಾಸ್ತ್ರಗಳ ಗುಂಡುಗಳು ಎಂದು ಆಯೋಗ ಹೇಳಿದೆ. ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಅಂತಹ ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ ಎಂಬುದು ಆಯೋಗದ ವಾದ. ಬದಲಿಗೆ, ಪ್ರತಿಭಟನಾ ನಿರತ ಗುಂಪಿನಲ್ಲಿದ್ದ ಸ್ಥಳೀಯ ಟರ್ಕ್ ಮತ್ತು ಪಠಾಣ್ ಪಂಗಡಗಳ ದುಷ್ಕರ್ಮಿಗಳು ತಮ್ಮತಮ್ಮಲ್ಲೇ ನಡೆಸಿದ ಗುಂಡಿನ ಚಕಮಕಿಯಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಆಯೋಗ ಶಂಕಿಸಿದೆ.

ಅಲ್ಲದೆ, ಮೃತರಾದ ನಯೀಮ್, ಬಿಲಾಲ್, ನುಮಾನ್ ಸೇರಿದಂತೆ 19 ವರ್ಷದ ಯುವಕನ ಸಂಬಂಧಿಕರು ತಮ್ಮ ಎಫ್‌ಐಆರ್‌ಗಳಲ್ಲಿ ಅಥವಾ ಆಯೋಗದ ಮುಂದೆ ನೀಡಿದ ಹೇಳಿಕೆಗಳಲ್ಲಿ ಪೊಲೀಸರ ಮೇಲೆ ನೇರ ಆರೋಪ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಮೃತರ ಕುಟುಂಬಸ್ಥರು ಪೊಲೀಸರೇ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಮಾಧ್ಯಮಗಳು ಹಾಗೂ ತನಿಖಾ ವರದಿಗಳ ಮುಂದೆ ಮಾಡಿದ್ದ ಆರೋಪಗಳಿಗೆ ಇದು ಸಂಪೂರ್ಣ ವಿರುದ್ಧವಾಗಿದೆ. ಜನಸಂದಣಿಯಲ್ಲಿದ್ದವರು ನಡೆಸಿದ ಗುಂಡಿನ ದಾಳಿಯಿಂದ ಏಳು ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದೂ ಆಯೋಗ ನಮೂದಿಸಿದೆ.

ಈ ಹಿಂಸಾಚಾರವನ್ನು “ರಾಷ್ಟ್ರೀಯ ಭದ್ರತೆಗೆ ಗಂಭೀರ ಮತ್ತು ಮಾರಕ ಬೆದರಿಕೆ” ಎಂದು ಕರೆದಿರುವ ತನಿಖಾ ಆಯೋಗವು, ಭಾರತದ ಏಕತೆ, ಸಮಗ್ರತೆ, ಸಾರ್ವಭೌಮತ್ವ ಮತ್ತು ಆರ್ಥಿಕ ಸ್ಥಿರತೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಹೇಳಿದೆ. ಘಟನೆಯಲ್ಲಿ ಭಾಗಿಯಾದ ತಪ್ಪಿತಸ್ಥರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಜೀವಾವಧಿ ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಗಲಭೆಯ ಸಂದರ್ಭದಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ, ಶಸ್ತ್ರಾಸ್ತ್ರ ಚಲಾವಣೆ, ಪೊಲೀಸರ ಮೇಲೆ ದಾಳಿ, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗೆ ಹಾನಿ ಮತ್ತು ಪೊಲೀಸರ ಮದ್ದುಗುಂಡುಗಳನ್ನು ಕಸಿದುಕೊಂಡ ಘಟನೆಗಳನ್ನು ವರದಿಯಲ್ಲಿ ಸೇರಿಸಲಾಗಿದೆ. ಗಲಭೆಯ ನಂತರ ನಡೆದ ಶೋಧ ಕಾರ್ಯದಲ್ಲಿ ತನಿಖಾಧಿಕಾರಿಗಳಿಗೆ “ಮೇಡ್ ಇನ್ ಯುಎಸ್ಎ” ಎಂದು ಬರೆಯಲಾಗಿದ್ದ 12-ಬೋರ್ ಶಾಟ್‌ಗನ್ ಶೆಲ್ ದೊರೆತಿದ್ದು, ಇದು ವಿದೇಶಿ ಶಕ್ತಿಗಳ ಒಳಗೊಳ್ಳುವಿಕೆಯ ಶಂಕೆಯನ್ನು ಹುಟ್ಟುಹಾಕಿದ್ದು ಹೆಚ್ಚಿನ ಪರಿಶೀಲನೆಗೆ ಅರ್ಹವಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಆಯೋಗದ ವರದಿಗೆ ಎಸ್‌ಪಿ ನಾಯಕರ ತೀವ್ರ ಆಕ್ಷೇಪ:

ತನಿಖಾ ಆಯೋಗದ ಈ ವರದಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಎಸ್‌ಪಿ ಸಂಸದ ಜಿಯಾ-ಉರ್-ರೆಹಮಾನ್ ಬಾರ್ಕ್, ಹಿಂಸಾಚಾರವು ‘ಪೂರ್ವ ಯೋಜಿತ’ ಎಂಬ ಒಂದೇ ಒಂದು ಅಂಶವನ್ನು ತಾನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಆದರೆ, “ಇದು ಸಾರ್ವಜನಿಕರು ಯೋಜಿಸಿದ ಪಿತೂರಿಯಲ್ಲ; ಬದಲಿಗೆ ಪೊಲೀಸ್ ಆಡಳಿತ ಮತ್ತು ಉತ್ತರ ಪ್ರದೇಶ ಸರ್ಕಾರವೇ ಸೇರಿ ನಡೆಸಿದ ಪೂರ್ವ ಯೋಜಿತ ಕೃತ್ಯ,” ಎಂದು ತಿರುಗೇಟು ನೀಡಿದ್ದಾರೆ.

ಆಯೋಗದ ತೀರ್ಮಾನಗಳನ್ನು ತೀವ್ರವಾಗಿ ಪ್ರಶ್ನಿಸಿದ ಅವರು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಫೋನ್ ವೀಡಿಯೊಗಳು ಸೇರಿದಂತೆ ಹತ್ತಾರು ಸಾಕ್ಷ್ಯಗಳು ಲಭ್ಯವಿದ್ದರೂ, ಮಸೀದಿಯ ಬಳಿ ಇದ್ದ ಯಾವುದೇ ನಿವಾಸಿ ಶಸ್ತ್ರಾಸ್ತ್ರ ಹಿಡಿದು ಗುಂಡು ಹಾರಿಸುತ್ತಿರುವುದನ್ನು ತೋರಿಸುವ ಒಂದೇ ಒಂದು ಸಚಿತ್ರ ಸಾಕ್ಷ್ಯವನ್ನು ನೀಡಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎಂದು ಸವಾಲು ಹಾಕಿದ್ದಾರೆ. “ಐದು ಮಂದಿ ನಿರಾಯುಧ ನಾಗರಿಕರನ್ನು ಕೊಲ್ಲಲಾಯಿತು, 100ಕ್ಕೂ ಹೆಚ್ಚು ಅಮಾಯಕ ನಿವಾಸಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಜೈಲಿಗೆ ತಳ್ಳಲಾಯಿತು,” ಎಂದು ಆಕ್ರೋಶ ವ್ಯಕ್ತಪಡಿಸಿದ ಬಾರ್ಕ್, ಮುಂಬರುವ ಚುನಾವಣೆಗಳಲ್ಲಿ ರಾಜಕೀಯ ಲಾಭ ಪಡೆಯುವ ಏಕೈಕ ಉದ್ದೇಶದಿಂದ ಸರ್ಕಾರವು ಸುಮಾರು ಒಂದು ವರ್ಷದ ಕಾಲ ಈ ವರದಿಯನ್ನು ಸಾರ್ವಜನಿಕವಾಗಿ ಮಂಡಿಸದೆ ತಡೆಹಿಡಿದಿತ್ತು ಎಂದು ಆರೋಪಿಸಿದರು.

ಇದೇ ವಿಷಯವಾಗಿ ಬಾರ್ಕ್ ಮತ್ತು ಸುಹೇಲ್ ಇಕ್ಬಾಲ್ ಅವರನ್ನು ಬೆಂಬಲಿಸಿರುವ ಮತ್ತೊಬ್ಬ ಎಸ್‌ಪಿ ಸಂಸದ ಮೊಹಿಬುಲ್ಲಾ ನದ್ವಿ, ಆಡಳಿತ ಪಕ್ಷದ ‘ಪೂರ್ವ ಯೋಜಿತ ಪಿತೂರಿ’ಯ ಭಾಗವಾಗಿ ಇಬ್ಬರ ಹೆಸರುಗಳನ್ನು ಈ ವರದಿಯಲ್ಲಿ ಸೇರಿಸಲಾಗಿದೆ ಎಂದಿದ್ದಾರೆ. “ಅಂದು ಇಬ್ಬರು ನಾಯಕರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸದೇ ಇದ್ದಿದ್ದರೆ, ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಇನ್ನೆಷ್ಟೋ ಅಮಾಯಕ ಜೀವಗಳು ಬಲಿಯಾಗುತ್ತಿದ್ದವು,” ಎಂದು ಅವರು ಪ್ರತಿಪಾದಿಸಿದ್ದಾರೆ.

ಸ್ವತಂತ್ರ ಸತ್ಯಶೋಧನಾ ವರದಿಯ ಸ್ಪೋಟಕ ಮಾಹಿತಿ:

ಮತ್ತೊಂದೆಡೆ, ಜುಲೈ 2025 ರಲ್ಲಿ ‘ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್’ (APCR) ಮತ್ತು ‘ಕಾರ್ವಾನ್-ಎ-ಮೊಹಬ್ಬತ್’ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿದ್ದ “ಸಂಭಾಲ್: ಅನ್ಯಾಟಮಿ ಆಫ್ ಆನ್ ಇಂಜಿನಿಯರ್ಡ್ ಕ್ರೈಸಿಸ್” ಎಂಬ ಸ್ವತಂತ್ರ ಸತ್ಯಶೋಧನಾ ವರದಿಯು ಸರಕಾರ ಹಾಗೂ ತನಿಖಾ ಆಯೋಗದ ವಾದಕ್ಕೆ ವಿರುದ್ಧವಾದ ಮಾಹಿತಿಯನ್ನು ನೀಡಿತ್ತು. ನವೆಂಬರ್ 2024ರ ಹಿಂಸಾಚಾರವನ್ನು “ಉದ್ದೇಶಪೂರ್ವಕವಾಗಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿದ ಹಿಂಸಾಚಾರ” ಎಂದು ಆ ವರದಿ ಬಣ್ಣಿಸಿತ್ತು.

ಶಾಹಿ ಜಾಮಾ ಮಸೀದಿಯ ಎರಡನೇ ಸಮೀಕ್ಷೆಯ ಸಮಯದಲ್ಲಿ ಪ್ರಚೋದನಕಾರಿ ಹಿಂದುತ್ವ ಘೋಷಣೆಗಳನ್ನು ಕೂಗಲಾಗಿತ್ತು ಮತ್ತು ಅಪವಿತ್ರ ಕೃತ್ಯಗಳನ್ನು ಎಸಗಲಾಗಿತ್ತು. ಇದನ್ನು ಪ್ರತಿಭಟಿಸಿದವರ ಮೇಲೆ ಪೊಲೀಸರು ಏಕಾಏಕಿ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ಮತ್ತು ನೇರ ಗುಂಡಿನ ದಾಳಿ ನಡೆಸಿದರು. ಇದರ ಪರಿಣಾಮವಾಗಿ ಅಪ್ರಾಪ್ತ ವಯಸ್ಕ ಸೇರಿದಂತೆ ಐದು ಮುಸ್ಲಿಂ ಪುರುಷರು ಕೊಲ್ಲಲ್ಪಟ್ಟರು ಎಂದು ಸತ್ಯಶೋಧನಾ ಸಮಿತಿ ತೀರ್ಮಾನಿಸಿತ್ತು.

ಘಟನೆಯ ನಂತರ ಮುಸ್ಲಿಂ ಸಮುದಾಯವನ್ನೇ ಅಪರಾಧಿಗಳನ್ನಾಗಿ ಬಿಂಬಿಸಲು 85ಕ್ಕೂ ಹೆಚ್ಚು ಜನರನ್ನು (ಹೆಚ್ಚಾಗಿ ಮುಸ್ಲಿಮರನ್ನು) ಬಂಧಿಸಲಾಯಿತು. ಬಲಿಪಶುಗಳ ಕುಟುಂಬ ಬೆದರಿಕೆ ಒಡ್ಡಲಾಯಿತು, ಇಂಟರ್ನೆಟ್ ಸೇವೆಯನ್ನು ನಿರ್ಬಂಧಿಸಿ ಇಡೀ ಪ್ರದೇಶವನ್ನು ಸೇನಾ ಕಾವಲಿಗೆ ಒಳಪಡಿಸಲಾಯಿತು. ಅಷ್ಟೇ ಅಲ್ಲದೆ ಧ್ವಂಸ ಕೃತ್ಯಗಳು, ಸಾಮೂಹಿಕ ಬಂಧನ ಮತ್ತು ಜಾಮೀನು ನಿರಾಕರಣೆಯಂತಹ ಕ್ರಮಗಳ ಮೂಲಕ ಸಮುದಾಯವನ್ನು ದಮನ ಮಾಡಲು ಯತ್ನಿಸಲಾಯಿತು ಎಂದು ವರದಿ ಆರೋಪಿಸಿದೆ. 

ಅಧಿಕಾರಿಗಳು ಮರಣೋತ್ತರ ಪರೀಕ್ಷೆಯ ವರದಿಗಳನ್ನು ಬಹಿರಂಗಪಡಿಸದೆ ಮುಚ್ಚಿಟ್ಟಿದ್ದಾರೆ ಮತ್ತು ಪೊಲೀಸ್ ಗುಂಡಿನ ದಾಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸುವಲ್ಲಿ ವಿಫಲರಾಗಿದ್ದಾರೆ. ಸಂಭಾಲ್ ಅನ್ನು ಬಹುಸಂಖ್ಯಾತವಾದಿ ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಮಾಡಲಾಗುತ್ತಿದೆ ಎಂದು ವರದಿ ಬೆಟ್ಟು ಮಾಡಿತ್ತು. ಈ ಬಗ್ಗೆ ಮಾತನಾಡಿದ್ದ ‘ಕರ್ವಾನ್-ಎ-ಮೊಹಬ್ಬತ್’ ಸಂಸ್ಥಾಪಕ ಹರ್ಷ್ ಮಂದರ್, “ಸಂಭಾಲ್‌ನಲ್ಲಿ ನಡೆದ ಘಟನೆಗಳು ಕೃತಕವಾಗಿ ಸೃಷ್ಟಿಸಲ್ಪಟ್ಟವುಗಳಾಗಿದ್ದು, ಇವು ಮುಂಬರುವ ದಿನಗಳಲ್ಲಿ ‘ಅಯೋಧ್ಯೆಯ ಮಾದರಿ’ಯನ್ನು ಪುನರಾವರ್ತಿಸುವ ಮುನ್ಸೂಚನೆಯಾಗಿದೆ” ಎಂದು ಕಳವಳ ವ್ಯಕ್ತಪಡಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

KPSC ಅಕ್ರಮ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ತನಿಖೆಗೆ ಹೈಕೋರ್ಟ್ ಆದೇಶ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ್ದ ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸೋಮವಾರ ಅತ್ಯಂತ ಮಹತ್ವದ ಆದೇಶ ಹೊರಡಿಸಿದೆ. ಈ ಬಹುಕೋಟಿ ನೇಮಕಾತಿ...

ಲಕ್ನೋದಲ್ಲಿ ಮುಸ್ಲಿಂ ವ್ಯಾಪಾರಿ ಮೇಲೆ ಹಲ್ಲೆ, ಮಾಂಸದ ಅಂಗಡಿಗಳ ವಿರುದ್ಧ ಪ್ರತಿಭಟನೆ: ತೀವ್ರಗೊಂಡ ಬಜರಂಗದಳದ ‘ಆಹಾರ ಭಯೋತ್ಪಾದನೆ’

ಲಕ್ನೋ: ಉತ್ತರ ಪ್ರದೇಶದ ಲಕ್ನೋದಲ್ಲಿ ಮಾಂಸ ಸಾಗಿಸುತ್ತಿದ್ದ ಬಿರಿಯಾನಿ ಅಂಗಡಿ ಮಾಲೀಕರೊಬ್ಬರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ....

ಟಿಎಂಸಿ ಹೆಸರು – ಚಿಹ್ನೆ ‘ಫ್ರೀಜ್‌’ ಪ್ರಶ್ನಿಸಿ ಮಮತಾ ಬ್ಯಾನರ್ಜಿ ಅರ್ಜಿ; ತುರ್ತು ವಿಚಾರಣೆಗೆ ಒಪ್ಪಿಗೆ ಸುಪ್ರೀಂ ಕೋರ್ಟ್‌

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಎರಡು ಬಣಗಳ ನಡುವಿನ ವಿವಾದದ ನಡುವೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಫ್ರೀಜ್ ಮಾಡಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ...

ಸೌಜನ್ಯ ಪ್ರಕರಣ: ಸುಪ್ರೀಂ ಆದೇಶದ ಪ್ರತಿ ಸಿಕ್ಕ ತಕ್ಷಣ SIT ರಚನೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅವರ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮರುತನಿಖೆಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಅಧಿಕೃತ ಆದೇಶದ ಪ್ರತಿ ಕೈ ಸೇರಿದ ತಕ್ಷಣ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ...

ದೆಹಲಿ| ಸಾಮೂಹಿಕ ಮತಾಂತರ ಆರೋಪ; ಕ್ರಿಶ್ಚಿಯನ್ನರ ವಾರಾಂತ್ಯದ ಪ್ರಾರ್ಥನೆಗೆ ಅಡ್ಡಿಪಡಿಸಿದ ಹಿಂದುತ್ವ ಗುಂಪು

ದೆಹಲಿಯ ಜನಕಪುರಿಯಲ್ಲಿರುವ ಹಯಾತ್ ಸೆಂಟ್ರಿಕ್ ಹೋಟೆಲ್‌ನಲ್ಲಿ ನಡೆಯುತ್ತಿದ್ದ (ಸೆಪ್ಟೆಂಬರ್ 20 ರಂದು) ಕ್ರಿಶ್ಚಿಯನ್ನರ ಭಾನುವಾರದ ವಾಡಿಕೆಯ ಪ್ರಾರ್ಥನಾ ಸಭೆಗೆ ನುಗ್ಗಿದ ಹಿಂದುತ್ವ ಗುಂಪು ಪ್ರಾರ್ಥನೆಗೆ ಅಡ್ಡಪಿಡಿಸಿದೆ. ಹಿಂದೂಗಳ ಸಾಮೂಹಿಕ ಮತಾಂತರ ನಡೆಯುತ್ತಿದೆ...

ಕಸ್ತೂರಿ ರಂಗನ್ ವರದಿ ತಿರಸ್ಕಾರ, ಮಲೆನಾಡಿನ ಜನರ ಬದುಕಿಗೆ ಶಾಶ್ವತ ಪರಿಹಾರ : ಡಾ. ಜಿ. ಪರಮೇಶ್ವರ್

ಪಶ್ಚಿಮ ಘಟ್ಟದ ಜೀವ ವೈವಿಧ್ಯ ಮತ್ತು ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಗಳನ್ನು ಪದೇ ಪದೇ ಹೊರಡಿಸುತ್ತಿರುವುದು ಮಲೆನಾಡಿನ ಜನರ ನೆಮ್ಮದಿ ಕೆಡಿಸಿದೆ. ರಾಜ್ಯ ಸರ್ಕಾರವು...

‘ಇದು ಸಂಸ್ಕೃತಿಯಲ್ಲ, ಪಿತೃಪ್ರಭುತ್ವ’: ಜಮುಯಿ ಅಪ್ರಾಪ್ತ ಬಾಲಕಿ ಮೇಲಿನ ಕಿರುಕುಳದ ವಿಡಿಯೋಗೆ ರಾಹುಲ್ ಗಾಂಧಿ ಆಕ್ರೋಶ 

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕ ಮತ್ತು ಬಾಲಕಿಯನ್ನು ರಸ್ತೆಯಲ್ಲಿ ತಡೆದು ಪುರುಷರ ಗುಂಪೊಂದು ಕಿರುಕುಳ ನೀಡಿದೆ ಎಂದು ಆರೋಪಿಸಲಾದ ವೈರಲ್ ವಿಡಿಯೋ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ...

ನಕಲಿ ಔಷಧಗಳ ವಿತರಣೆ ಜಾಲದೊಂದಿಗೆ ನಂಟು; 16 ಫಾರ್ಮಸಿಗಳ ಪರವಾನಗಿ ರದ್ದು

ಬಿಡದಿಯ ಫಾರ್ಮ್‌ಹೌಸ್ (ತೋಟದ ಮನೆ) ಒಂದರಲ್ಲಿ ಪತ್ತೆಯಾದ ನಕಲಿ ಔಷಧಗಳ ವಿತರಣೆಯ ಜಾಲದೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್‌ಡಿಎ) ಸಂಸ್ಥೆಯು 16 ಫಾರ್ಮಸಿಗಳ...

ಚಾಮರಾಜನಗರ: ಬಂಡಿ ಪೂಜೆ ಹಬ್ಬದಲ್ಲಿ ದಲಿತ ಮಕ್ಕಳಿಗೆ ಅಸ್ಪೃಶ್ಯತೆ ಆಚರಣೆ – ಊಟ ನೀಡದೆ ಅಪಮಾನಿಸಿದ ಆರೋಪ

ಸಮಾಜದಲ್ಲಿ ಜಾತಿಪದ್ದತಿ ಇಂದಿಗೂ ಜೀವಂತವಾಗಿದೆಯೇ ಎಂದು ಪ್ರಶ್ನಿಸುವವರಿಗೇನು ಕಡಿಮೆ ಇಲ್ಲ.ಆದರೆ ಜಾತಿ ಕಾರಣಕ್ಕೆ ಪುಟಾಣಿ ಮಕ್ಕಳಿಗೆ ಊಟವನ್ನು ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವುದು ನಾಗರಿಕ ಸಮಾಜ ನಿಜಕ್ಕೂ ತಲೆತಗ್ಗಿಸುವಂತೆ ಮಾಡಿದೆ. ಹೌದು ಚಾಮರಾಜನಗರ ಜಿಲ್ಲೆಯ...

ಥಾಣೆ ಗಣೇಶೋತ್ಸವ 2026: ತಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ವೇಳೆ 2 ಗುಂಪುಗಳ ಘರ್ಷಣೆ, ಬಿಜೆಪಿ ಮಾಜಿ ಉಪಮೇಯರ್ ಸೇರಿ 70-80 ಜನರ ವಿರುದ್ಧ ಪ್ರಕರಣ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ತಿಟ್ವಾಲಾದಲ್ಲಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಉಪಮೇಯರ್ ಹಾಗೂ ಹಾಲಿ ಕಾರ್ಪೊರೇಟರ್ ಉಪೇಕ್ಷಾ ಭೋಯಿರ್...