Homeಕರ್ನಾಟಕಜೇನುಕುರುಬರ ಒಳಿತಾಗಿ ದುಡಿವ ಗಟ್ಟಿಗಿತ್ತಿ ಜಾನಕಮ್ಮ.. ಎಲೆಮರೆ-4

ಜೇನುಕುರುಬರ ಒಳಿತಾಗಿ ದುಡಿವ ಗಟ್ಟಿಗಿತ್ತಿ ಜಾನಕಮ್ಮ.. ಎಲೆಮರೆ-4

- Advertisement -
- Advertisement -

ಎಲೆಮರೆ-4 : ಅರುಣ್ ಜೋಳದ ಕೂಡ್ಲಿಗಿ

ಮೈಸೂರಿನಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶೋಭಾರಾಣಿ ಅವರ ಜತೆ ಅಂದು ಪಿರಿಯಾಪಟ್ಟಣ ತಾಲೂಕಿನ ಮಾಲಂಗಿ ಗ್ರಾಮಪಂಚಾಯ್ತಿ ನೋಡಲೆಂದು ಹೋದೆನು. ಅದೊಂದು ಮಾದರಿ ಗ್ರಾಮ ಪಂಚಾಯ್ತಿಯಾಗಿತ್ತು. ಆ ದಿನ ಭೇಟಿಯಾದವರಲ್ಲಿ ಅಬ್ಬಳತಿ ಬಿ. ಕಾಲನಿಯ ಜಾನಕಮ್ಮ ಗಮನ ಸೆಳೆದರು. ಅವರ ಜತೆ ಸ್ವಲ್ಪಹೊತ್ತು ಮಾತನಾಡುತ್ತಾ ಹೋದಂತೆ, ಜಾನಕಮ್ಮ ತಮ್ಮ ಜೇನು ಕುರುಬರ ಹಾಡಿಯ ಸಮಸ್ಯೆಗಳನ್ನು ತನ್ನ ಕೈಚೀಲದಲ್ಲಿ ತುಂಬಿಕೊಂಡೆ ತಿರುಗಾಡುವವರಂತೆ ಕಂಡರು. ತನ್ನ ಜನರಿಗಾಗಿ ಹೋರಾಟ ಮಾಡುವುದು, ತನ್ನವರಿಗಾಗಿ ಹಕ್ಕೊತ್ತಾಯದ ಧ್ವನಿ ಎತ್ತುವುದು ಅನಿವಾರ್ಯ ಎನ್ನುವುದನ್ನು ಅರಿತಿದ್ದರು. ಅದಕ್ಕಾಗಿ ಜಾನಕಮ್ಮ `ನಾನು ನನ್ನವರ ಒಳಿತಿಗಾಗಿ ದುಡಿಯಬೇಕು’ ಎನ್ನುವ ದೃಢನಿಶ್ಚಯ ಮಾಡಿದವರಂತೆ ಕಂಡರು.

 

ಅರವತ್ತೆರಡು ವರ್ಷದ ಜಾನಕಮ್ಮ ಕಳೆದ 30 ವರ್ಷಗಳಿಂದ ಹಾಡಿಜನರ ಅಭಿವೃದ್ಧಿಗಾಗಿ ಸೆಣಸಾಟ ನಡೆಸಿದ್ದಾರೆ. ಜಾನಕಮ್ಮ 18 ವರ್ಷಗಳ ಹಿಂದೆಯೇ ಗಂಡ ಲಿಂಗಪ್ಪನನ್ನು ಕಳೆದುಕೊಂಡು ಒಂಟಿಯಾದರು. ನಾಲ್ಕು ಜನ ಹೆಣ್ಮಕ್ಕಳು, ಒಬ್ಬ ಮಗನಿದ್ದಾನೆ. ಸದ್ಯಕ್ಕೆ ಜಾನಕಮ್ಮ ಇಡೀ ಹಾಡಿಯೆ ನನ್ನ ಕುಟುಂಬ ಎನ್ನುವಂತೆ ತಾವೊಬ್ಬರೆ ಜೀವನ ನಡೆಸಿದ್ದಾರೆ. ಮೂರು ಎಕರೆ ಸಣ್ಣ ಹಿಡುವಳಿಯಷ್ಟು ಜಮೀನಿನಲ್ಲಿಯೇ ಉಳುಮೆ ಮಾಡುತ್ತಾರೆ.

ಇದೀಗ ಮಾಲಂಗಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿರುವ ಜಾನಕಮ್ಮ ಸತತವಾಗಿ 3ನೇ ಬಾರಿ ಯಾವುದೇ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಸಾಮಾನ್ಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇದು ಜಾನಕಮ್ಮನ ನಿಸ್ವಾರ್ಥದ ಬದುಕಿನ ಬಗೆಗೆ ಹಾಡಿಯ ಜನರಿಟ್ಟ ಅಭಿಮಾನದ ಸಂಕೇತವಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಗಿರಿಜನರಿಗೆ, ಅಂಗವಿಕಲರಿಗೆ, ಅಶಕ್ತ ಮಹಿಳೆಯರಿಗೆ, ವಿದ್ಯಾರ್ಥಿಗಳಿಗಿರುವ ಸೌಲಭ್ಯಗಳನ್ನು ಗುರುತಿಸಿ, ಸೂಕ್ತ ಫಲಾನುಭವಿಗಳಿಗೆ ತಲುಪುವ ತನಕ ಕಾಳಜಿ ವಹಿಸುತ್ತಾರೆ. ಗ್ರಾಮ ಪಂಚಾಯ್ತಿಯ ಯಾವುದೇ ಸಾಮಾನ್ಯ ಸಭೆಗೂ ಜಾನಕಮ್ಮ ಹಾಜರಿರುತ್ತಾರೆ. ಗ್ರಾಮ ಸಭೆಯಂತು ಕಡ್ಡಾಯವಾಗಿ ನಿಯಮಗಳ ಪ್ರಕಾರ ನಡೆಯುವಂತೆ ನೋಡಿಕೊಳ್ಳತ್ತಾರೆ. ಯಾವುದೇ ಸಮಸ್ಯೆಗಳಿದ್ದರೂ ಎಲ್ಲಾ ಸದಸ್ಯರಿಗೂ, ಪಂಚಾಯ್ತಿ ಅಧಿಕಾರಿ ವರ್ಗಕ್ಕೂ ಅರ್ಥವಾಗುವಂತೆ ವಿವರಿಸುತ್ತಾರೆ.

ಗ್ರಾ.ಪಂ.ಸದಸ್ಯೆಯಷ್ಟೆ ಅಲ್ಲದೆ ಮಹಿಳಾ ಸಮಖ್ಯದ ತಾಲೂಕು ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಜೇನುಕುರುಬರ ಮಹಿಳಾ ಸಂಘದ ಅಧ್ಯಕ್ಷೆಯೂ ಆಗಿದ್ದಾರೆ. ಮುಖ್ಯವಾಗಿ ಅಬ್ಬಳತಿ ಗಿರಿಜನ ಹಾಡಿಯ ಭಾಗದಲ್ಲಿ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ 22 ಎಕರೆ ಜಮೀನನ್ನು ಹೋರಾಟದ ಮೂಲಕ ತೆರವುಗೊಳಿಸುವಲ್ಲಿ ಜಾನಕಮ್ಮನ ಪ್ರಮುಖ ಪಾತ್ರವಿದೆ. ಈಗ ಈ ಸ್ಥಳದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ ನಿರ್ಮಾಣವಾಗಿದೆ. ಶಾಲಾ ಮಕ್ಕಳಿಂದ ಗಿಜಿಗುಡುತ್ತಾ ಈ ಸ್ಥಳ ಈಗ ವಿದ್ಯಾಕೇಂದ್ರವಾಗಿದೆ. ಈ ಭೂಮಿಯಲ್ಲಿ ಸ್ಮಶಾನಕ್ಕೂ ಜಾಗ ಕಾಯ್ದಿರಿಸಲಾಗಿದೆ. ಇದರಲ್ಲಿಯೇ 2 ಎಕರೆಯಲ್ಲಿ ವಸತಿರಹಿತ ಗಿರಿಜನರಿಗೆ ನಿವೇಶನ ಹಂಚುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ.

ಗಿರಿಜನ ಹಾಸ್ಟಲ್ ನಿರ್ಮಾಣ, ಚೈಲ್ಡ್ ಹೆಲ್ತ್‍ಕೇರ್ ಸೆಂಟರ್‍ಗೆ ಸಹಾಯ, ಗಿರಿಜನರ ಜಮೀನು ನೀಡಿಕೆ ವಿಚಾರದ ಹೋರಾಟ, ರಸ್ತೆ ಅಭಿವೃದ್ಧಿಗೆ ಶಾಸಕರ ಅನುದಾನದ ತರುವಲ್ಲಿ ಶ್ರಮಿಸಿದ್ದಾರೆ. 23ಕ್ಕೂ ಹೆಚ್ಚು ಬಾಲ್ಯವಿವಾಹವನ್ನು ತಡೆಗಟ್ಟಿದ್ದಾರೆ. ನರೇಗಾ ಜಾಬ್ ಕಾರ್ಡ್ ನೀಡಿಕೆ, 66 ಕುಟುಂಬಗಳಿಗೆ ಸೋಲಾರ್ ದೀಪ ಮಂಜೂರು ಮಾಡಿಸುವಲ್ಲಿ ಮುಂಚೂಣಿಯಲ್ಲಿ ನಿಂತು ಜಾನಕಮ್ಮ ಹೋರಾಟ ಮಾಡಿದ್ದಾರೆ.
ಕಳೆದ ಜುಲೈನಲ್ಲಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಗಳ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶಗಳಿಂದ ಹೊರಬಂದು, ಕಾಫಿ ತೋಟಗಳ ಲೈನ್ ಮನೆಗಳಲ್ಲಿ ಬದುಕು ಸವೆಸುತ್ತಿರುವ ಬುಡಕಟ್ಟು ಸಮುದಾಯಕ್ಕೆ ಅಗತ್ಯ ನಿವೇಶನ ಮತ್ತು ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಕೊಡಗು ಜಿಲ್ಲಾ ಬುಡಕಟ್ಟು ಕಾರ್ಮಿಕರ ಸಂಘದ ನೇತೃತ್ವದಲ್ಲಿ ಆದಿವಾಸಿಗಳು ಮಡಿಕೇರಿಯ ಗಿರಿಜನ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಇದರಲ್ಲಿ ಜಾನಕಮ್ಮ ತಮ್ಮ ಸಂಘದ ಜೇನುಕುರುಬರ ಮಹಿಳೆಯರೆ ಮಂಚೂಣಿಯಲ್ಲಿರುವಂತೆ ಅವರಲ್ಲಿ ಅರಿವು ಮೂಡಿಸಿದ್ದಾರೆ.

`ಗಿರಿಜನರಿಗೆ ಇನ್ನು ಹತ್ತಾರು ಸಮಸ್ಯೆಗಳಿವೆ. ಕೆಲವರಿಗೆ ಒಂದು ಕುಂಟೆ ಜಮೀನು ಇಲ್ಲದೆ ಕೂಲಿಯನ್ನು ನಂಬಿದ್ದಾರೆ. ಅಂತವರಿಗೆ ಜಮೀನು ಕೊಡಿಸಬೇಕು. ಮನೆಯೂ ಇಲ್ಲದೆ ಗುಡಿಸಲುಗಳಲ್ಲಿ ಜೀವನ ನಡೆಸುವವರಿದ್ದಾರೆ. ಅಂತವರಿಗೆ ಸರಕಾರದಿಂದ ಮನೆ ಕೊಡಿಸಬೇಕು.. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಸಮುದಾಯದ ಬೆಂಬಲದೊಂದಿಗೆ ಹೋರಾಟ ರೂಪಿಸುತ್ತಿದ್ದೇವೆ. ಹಿರಿಯ ರಾಜಕಾರಣಿಗಳು, ಅಧಿಕಾರಿಗಳಿಗೆ ಗಿರಿಜನ ಸಮಸ್ಯೆಗಳನ್ನು ಮನವರಿಕೆ ಮಾಡಿಸಿ ಅವರಿಗೆ ಸವಲತ್ತು ಒದಗಿಸಬೇಕಿದೆ’ ಎಂದು ಜಾನಕಮ್ಮ ಹೇಳುತ್ತಾರೆ.

2007ರ ಜ.26ರಂದು ಪಂಚಾಯತ್ ರಾಜ್ಯ ವ್ಯವಸ್ಥೆಯ ಕುರಿತು ದೆಹಲಿಯಲ್ಲಿ ರಾಷ್ಟ್ರಪತಿ ನಾರಾಯಣ್ ಮತ್ತು ಅಂದಿನ ಪ್ರಧಾನಿ ವಾಜಪೇಯಿ ಅವರೊಂದಿಗೆ ರಾಜ್ಯದ ಗಿರಿಜನ ಮಹಿಳೆಯರ ಪರವಾಗಿ ಚರ್ಚಿಸಿದ್ದರು. 2015 ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನ್ಯಾಷನಲ್ ಫೌಂಡೇಶನ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಸಿ.ಸುಬ್ರಹ್ಮಣ್ಯ ಫೆಲೋಶಿಪ್ ಮತ್ತು ಕಮ್ಯುನಿಟಿ ಲೀಡರ್‍ಶಿಪ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಕರ್ನಾಟಕದಿಂದ ಏಕೈಕ ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. 2019 ರಲ್ಲಿ ಕರ್ನಾಟಕ ಸರಕಾರ ಇವರನ್ನು ಗುರುತಿಸಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ನೀಡಿತು. ಬೆಂಗಳೂರಿನ ಸ್ಫೂರ್ತಿಧಾಮ ವಾರ್ಷಿಕವಾಗಿ ಎಲೆಮರೆಯ ನಿಜ ಸಾಧಕರನ್ನು ಆಯ್ಕೆ ಮಾಡಿ ನೀಡುವ 2019 ರ ಸಾಲಿನ ಭೋದಿವರ್ಧನ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

`ನಮ್ಮ ಪಂಚಾಯಿತಿಯಲ್ಲಿ ಎಲ್ಲಾ ಸಭೆಗಳಿಗೆ ಭಾಗವಹಿಸುವ ಜಾನಕಮ್ಮ ಹಾಡಿಗಳಲ್ಲಿ ಶೌಚಾಲಯ ನಿರ್ಮಾಣ ಶೇ.90 ಪ್ರಗತಿ ಕಾಣಲು ಕಾರಣರಾಗಿದ್ದಾರೆ. ಶೌಚಾಲಯ ನಿರ್ಮಿಸಲು ಪ್ರತಿ ಕುಟುಂಬದ ಮನ ಒಲಿಸಿದ್ದಾರೆ. ಕಡ್ಡಾಯವಾಗಿ ಗ್ರಾಮಸಭೆ ನಿಯಮಗಳ ಪ್ರಕಾರ ನಡೆಯುವಂತೆ ನೋಡಿಕೊಳ್ಳುತ್ತಾರೆ. ಇವರ ಉತ್ಸಾಹ ಎಲ್ಲಾ ಸದಸ್ಯರಲ್ಲಿಯೂ ಇದ್ದರೆ ಹೆಚ್ಚಿನ ಅಭಿವೃದ್ಧಿಯಾಗುತ್ತದೆ’ ಎಂದು ಹಿಂದೆ ಮಾಲಂಗಿ ಗ್ರಾಮ ಪಂಚಾಯ್ತಿಯ ಪಿಡಿಒ ಆಗಿದ್ದ ಡಾ.ಶೋಭಾರಾಣಿ ಹೇಳುತ್ತಾರೆ.

ಹೀಗೆ ಬುಡಕಟ್ಟು ಜನರಲ್ಲಿ ಹಕ್ಕೊತ್ತಾಯಗಳ ಅರಿವು ಮೂಡಿಸುತ್ತಾ ದಿನನಿತ್ಯದ ಸಾಮಾನ್ಯ ಸಮಸ್ಯೆಗಳನ್ನೂ ಆಲಿಸುತ್ತಾ ಅವಿರತವಾಗಿ ದುಡಿವ ಜಾನಕಮ್ಮ ಬುಡಕಟ್ಟು ನಾಯಕತ್ವಕ್ಕೆ ಒಂದು ಮಾದರಿಯಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...