Homeಅಂಕಣಗಳುಜಾನಪದ ಲೋಕ ಪ್ರಶಸ್ತಿಗೆ ಗೌರವ ತಂದ ಜೋಗಿ ಜಂಗಮ ಮೇಟಿ ಕೊಟ್ರಪ್ಪ

ಜಾನಪದ ಲೋಕ ಪ್ರಶಸ್ತಿಗೆ ಗೌರವ ತಂದ ಜೋಗಿ ಜಂಗಮ ಮೇಟಿ ಕೊಟ್ರಪ್ಪ

- Advertisement -
- Advertisement -

ಎಲೆಮರೆ-20

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಕೊಟ್ಟೂರು ಭಾಗದ ಯಾವುದೇ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಒಬ್ಬ ಸರಳವಾದ ವ್ಯಕ್ತಿ ಹಾಜರಾಗುತ್ತಾರೆ. ಲುಂಗಿ ತೊಟ್ಟು, ಹೆಗಲಿಗೊಂದು ಟವಲ್ ಹಾಕಿ, ಬೆಳ್ಳಿ ಕೂದಲಿನಲ್ಲಿ ಮಿಂಚುವ ಕೋಲಿಗೆ ಬಟ್ಟೆ ತೊಡಿಸಿದಂತಹ ತೆಳ್ಳನೆಯ ದೇಹದ ಈ ವ್ಯಕ್ತಿ ಕಂಡವರನ್ನು ನಿಷ್ಕಲ್ಮಶವಾದ ನಗುವಿನೊಂದಿಗೆ ಮಾತನಾಡಿಸಿ `ಹೊಸದಾಗಿ ಏನ್ ಬರದ್ರಿ, ಏನ್ ಓದಿದ್ರಿ, ಹೆಂಗದೀರಿ’ ಅಂತ ಆತ್ಮೀಯವಾಗಿ ವಿಚಾರಿಸುವ ಸರಳ ವ್ಯಕ್ತಿತ್ವದ, ಹೆಸರಲ್ಲೆ ರೈತ ಪರಿವಾರದ `ಮೇಟಿ’ ಗುರುತು ಉಳಿಸಿಕೊಂಡ ವ್ಯಕ್ತಿಯೇ ಮೇಟಿ ಕೊಟ್ರಪ್ಪ.

ಹಗರಿಬೊಮ್ಮನಹಳ್ಳಿಯ ಹಿರಿಯ ಸಾಹಿತಿಗಳಾದ ಗುರುಮೂರ್ತಿ ಪೆಂಡಕೂರು ಅವರು ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ಯುವಕ ಸಂಘದ ವತಿಯಿಂದ ಕೆ.ವಿರೂಪಾಕ್ಷಗೌಡರ ನೆನಪಿಗಾಗಿ ನೀಡಿರುವ ದತ್ತಿನಿಧಿಯ `ಜಾನಪದ ಲೋಕ’ ಪ್ರಶಸ್ತಿಯು ಈ ಬಾರಿ ಮೇಟಿ ಕೊಟ್ರಪ್ಪನನ್ನು ಹುಡುಕಿಕೊಂಡು ಬಂದಿದೆ. ಈ ನೆಪದಲ್ಲಿ ಲೋಕದ ಕಣ್ಣಿನಲ್ಲಿ ಕಳೆದುಹೋಗಬಹುದಾಗಿದ್ದ ಮೇಟಿ ಕೊಟ್ರಪ್ಪನಿಗೆ ಈ ಪ್ರಶಸ್ತಿ ಮತ್ತಷ್ಟು ಉತ್ಸಾಹದೊಂದಿಗೆ ಬದುಕುವ ಚೈತನ್ಯವನ್ನು ಇಮ್ಮಡಿಗೊಳಿಸಿದೆ. ಅಂತೆಯೇ ಬಳ್ಳಾರಿ ಜಿಲ್ಲೆಯ ಜಾನಪದ ಅಧ್ಯಯನಕ್ಕೆ ಕಾಣಿಕೆ ಕೊಟ್ಟ ಕೆ.ವಿರೂಪಾಕ್ಷಗೌಡರ ನೆನಪಿನ ಪ್ರಶಸ್ತಿಯ ಗೌರವವೂ ಹೆಚ್ಚಿದೆ.

ಈ ನೆಪದಲ್ಲಿ ಮೇಟಿ ಕೊಟ್ರಪ್ಪ ಅವರೊಂದಿಗೆ ಮಾತನಾಡಿದಾಗ ನೆನಪುಗಳನ್ನು ಮೆಲುಕುಹಾಕಿದರು. ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ 1964 ರಿಂದಲೆ ಪದವಿ ಪ್ರಾರಂಭವಾಗಿತ್ತು. 1971 ರಲ್ಲಿ ಈ ಕಾಲೇಜಿಗೆ ಅಧ್ಯಾಪಕರಾಗಿ ಎಸ್.ಎಸ್.ಹಿರೇಮಠ ಅವರು ಬರುತ್ತಾರೆ. 1973 ರಲ್ಲಿ ಜಾನಪದ ವಿದ್ವಾಂಸರಾದ ಬಸವರಾಜ ಮಲಶೆಟ್ಟರೂ ಕಾಲೇಜಿನ ಪ್ರವೇಶಿಸುತ್ತಾರೆ. ಮೇಟಿ ಕೊಟ್ರಪ್ಪ ಅವರು 1974-75ರ ಸಾಲಿನ ಪದವಿ ವಿದ್ಯಾರ್ಥಿಯಾಗಿ ಬಸರಕೋಡಿನಿಂದ ಹೊಸಪೇಟೆಯ ಈ ಕಾಲೇಜಿಗೆ ಬರುತ್ತಾರೆ. ಆರಂಭಕ್ಕೆ ಎಡಪಂಥೀಯ ಆಲೋಚನೆಗಳಲ್ಲಿ ಆಳವಾದ ತಿಳಿವು ಮತ್ತು ಕಾಳಜಿ ಇದ್ದ ಎಸ್.ಎಸ್ ಹಿರೇಮಠರ ಪ್ರಭಾವಕ್ಕೆ ಕೊಟ್ರಪ್ಪ ಒಳಗಾಗುತ್ತಾರೆ. ಅಂತೆಯೇ ಬಸವರಾಜ ಮಲಶೆಟ್ಟರ ಪ್ರಭಾವದಿಂದ ಜಾನಪದ ಕ್ಷೇತ್ರದ ಬಗೆಗೂ ಆಸಕ್ತಿ ಮೊಳೆಯುತ್ತದೆ.

ಹೀಗೆ ಪದವಿ ಕಾಲೇಜಿನ ಇಬ್ಬರು ಕನ್ನಡ ಅಧ್ಯಾಪಕರ ಪ್ರಭಾವವು ಕೊಟ್ರಪ್ಪನ ಇಡೀ ಬದುಕಿನಲ್ಲಿ ಎರಡು ಕವಲುಗಳಾಗಿ ರೂಪುಗೊಳ್ಳುತ್ತವೆ. ಕೊಟ್ರಪ್ಪ ಪದವಿ ನಂತರ ತನ್ನೂರಿಗೆ ಮರಳಿದಾಗ ಎಸ್.ಎಸ್.ಹಿರೇಮಠರ ಪ್ರಭಾವ ಹೆಚ್ಚಾಗುತ್ತದೆ. ಹೀಗಾಗಿ ಎಂಬತ್ತರ ದಶಕದಲ್ಲಿ ಸಮುದಾಯಕ್ಕೆ ಬರುತ್ತಾರೆ. ಸಮುದಾಯದ ಜಾಥಾ, ನಾಟಕ ಮುಂತಾದ ಚಟುವಟಿಕೆಗಳಲ್ಲಿ ಕೊಟ್ರಪ್ಪ ಸಕ್ರಿಯರಾಗುತ್ತಾರೆ. ನಂತರ ಕಮ್ಯುನಿಸ್ಟ್ ಪಾರ್ಟಿ (ಎಂ) ಪ್ರಾಂತ ರೈತಸಂಘದ ಚಟುವಟಿಕೆಗಳನ್ನು ಆರಂಭಿಸುತ್ತದೆ. ಇದರ ಪರಿಣಾಮ 1986 ರಿಂದ 1996 ರವರೆಗೆ ಒಂದು ದಶಕದ ಕಾಲ ಸಿಪಿಐ (ಎಂ) ಪ್ರಾಂತ ರೈತಸಂಘದಲ್ಲಿ ಮೇಟಿ ಕೊಟ್ರಪ್ಪ ರೈತಪರವಾಗಿ ನಿಷ್ಠೆಯಿಂದ ದುಡಿಯುತ್ತಾರೆ. `ಈ ಭಾಗಕ್ಕೆ ಕಮ್ಯುನಿಸ್ಟ್ ಪಾರ್ಟಿ ಪರಿಚಯಿಸಿದ್ದೇ ನಾನು’ ಎಂದು ಕೊಟ್ರಪ್ಪ ನೆನಪಿಸಿಕೊಳ್ಳುತ್ತಾರೆ. 1990 ರ ಹೊತ್ತಿಗೆ ಸಾಹಿತ್ಯ ಒಲವು ಹೆಚ್ಚಾಗಿ `ಹಿಡಿದಿಟ್ಟಿದೆ ನೆನಪು’ ಮೊದಲ ಕವನ ಸಂಕಲನ ಪ್ರಕಟವಾಗುತ್ತದೆ.

ಕರ್ನಾಟಕದ ಜಾನಪದ ಪರಿಷತ್ತಿನ ಮೊದಲ ಟ್ರಸ್ಟಿಯ ಸದಸ್ಯರಲ್ಲಿ ಕೆ.ವಿರೂಪಾಕ್ಷಗೌಡರು ಸೇರ್ಪಡೆಗೊಳ್ಳುತ್ತಾರೆ. ಆಗಾಗಲೆ ಕೆ.ವಿರೂಪಾಕ್ಷಗೌಡರು, ಗುರುಮೂರ್ತಿ ಪೆಂಡಕೂರು, ಹುರಿಕಡ್ಲಿ ಶಿವಕುಮಾರ್ ಇವರೆಲ್ಲರ ಸಂಪರ್ಕ ಬಂದಾಗ ಕೊಟ್ರಪ್ಪ ಅವರಲ್ಲಿ ಬಸವರಾಜ ಮಲಶೆಟ್ಟರ ಪ್ರಭಾವ ಮೊಳಕೆಯೊಡೆಯುತ್ತದೆ. ಇಲ್ಲಿಂದ ಕೊಟ್ರಪ್ಪ ಜಾನಪದ ಚಟುವಟಿಕೆಗೆ ಹೊರಳುತ್ತಾರೆ. ಹಳ್ಳಿಹಳ್ಳಿಗಳಲ್ಲಿ ಜಾನಪದ ಸಂಗ್ರಹದಲ್ಲಿ ತೊಡಗುತ್ತಾರೆ. ಕೊಟ್ರಪ್ಪನ ಬಹುಪಾಲು ಸಂಗ್ರಹಗಳು ಕೆ.ವಿರೂಪಾಕ್ಷಗೌಡ ಮತ್ತು ಗುರುಮೂರ್ತಿ ಪೆಂಡಕೂರರ ಹೆಸರಲ್ಲಿ ಪುಸ್ತಕಗಳಾಗಿ ಪ್ರಕಟವಾದವು. ನಮ್ಮ ಸಂಗ್ರಹ ನಮ್ಮ ಹೆಸರಲ್ಲೇಕೆ ಪ್ರಕಟವಾಗುವುದಿಲ್ಲ ಎಂದಾಗ, ಕೆ.ವಿರೂಪಾಕ್ಷ ಗೌಡರ ಜತೆಯಲ್ಲಿ ಮೇಟಿ ಕೊಟ್ರಪ್ಪ ಅವರ ಸಂಪಾದನೆಯ `ನಡಿಯಪ್ಪ ನಮ್ಮ ನಾಡಿಗೆ’ ಡೊಳ್ಳಿನ ಹಾಡಿನ ಸಂಗ್ರಹ ಪ್ರಕಟವಾಗುತ್ತದೆ.

ಮೈಸೂರು ವಿಶ್ವವಿದ್ಯಾಲಯದ ಟಿ.ಎಸ್. ರಾಜಪ್ಪ ಅವರು ಬಳ್ಳಾರಿ ಜಿಲ್ಲೆಯ ಜಾನಪದ ಕ್ಷೇತ್ರಕಾರ್ಯಕ್ಕೆ ಬಂದಾಗ ಜಿಲ್ಲೆಯಾದ್ಯಂತ ಕೊಟ್ರಪ್ಪ ತಿರುಗಾಡುತ್ತಾರೆ. ಆಗ `ಬಳ್ಳಾರಿ ಜಿಲ್ಲೆಯ ಜಾನಪದ ಗೀತೆಗಳು’ ಮತ್ತು `ಬಳ್ಳಾರಿ ಜಿಲ್ಲೆಯ ಜನಪದ ಕಥೆಗಳು’ ಎನ್ನುವ ಎರಡು ಪುಸ್ತಕಗಳು ಟಿ.ಎಸ್. ರಾಜಪ್ಪ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತವೆ. ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ವತಿಯಿಂದ ಹೆಚ್.ಎ. ಕೃಷ್ಣಯ್ಯ ಈ ಭಾಗಕ್ಕೆ ಜಾನಪದ ಕ್ಷೇತ್ರಕಾರ್ಯಕ್ಕೆ ಬಂದಾಗಲೂ ಕೊಟ್ರಪ್ಪ ನೆರವಾಗಿ, ಟೇಪ್‍ರೆಕಾರ್ಡರ್ ಮತ್ತು ಕ್ಯಾಮರಾ ಮುಂತಾದ ಎಲೆಕ್ಟ್ರಾನಿಕ್ ಪರಿಕರಗಳನ್ನು ಹೊತ್ತು ಓಡಾಡಿ ಸಂಗ್ರಹಕ್ಕೆ ನೆರವಾಗುತ್ತಾರೆ. ಕೃಷ್ಣಯ್ಯ ಅವರ ಹೆಸರಲ್ಲಿ `ಬಾಚಿಗೊಂಡನಹಳ್ಳಿ ಮತ್ತು ಏಣಿಗೆ ಬಸಾಪುರದ ಜನಪದ ಹಾಡುಗಳು’ಎನ್ನುವ ಪುಸ್ತಕ ಬರುತ್ತದೆ. ಕೊಟ್ರಪ್ಪ ಆಯಾ ಪುಸ್ತಕಗಳ ಕೃತಜ್ಞತೆಯ ಭಾಗದಲ್ಲಿ ನೆನಕೆಯ ಹೆಸರಾಗಿ ಉಳಿಯುತ್ತಾರೆ.

ಕೊಟ್ರಪ್ಪನ ಪಯಣ ಜಾನಪದ ಪರಿಷತ್ತಿನ ಜೊತೆಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೂ ವಿಸ್ತರಿಸುತ್ತದೆ. ಗುರುಮೂರ್ತಿ ಪೆಂಡಕೂರ್ ಕಸಾಪ ಅಧ್ಯಕ್ಷರಾದಾಗ ಕೊಟ್ರಪ್ಪ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. 1999 ರಿಂದ 2001 ಕನ್ನಡ ಸಾಹಿತ್ಯ ಪರಿಷತ್ತಿನ ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ಬಳ್ಳಾರಿ ಜಿಲ್ಲಾ ಕಸಾಪವನ್ನು ಕಟ್ಟಿ ಬೆಳೆಸುವಲ್ಲಿ ಕೊಟ್ರಪ್ಪನವರ ಶ್ರಮವನ್ನು ಅಲ್ಲಗಳೆಯುವಂತಿಲ್ಲ.

ಕೆ. ವಿರೂಪಾಕ್ಷ ಗೌಡರು ತೀರಿದ ಬಳಿಕ ಅವರ ಬಂಧುಬಳಗ, ಸ್ನೇಹಿತರು ಎಲ್ಲರಿಗೂ ಹೀಗೆ ಗೌಡರ ಹೆಸರಲ್ಲಿ ದತ್ತಿನಿಧಿ ಇಡಲು ಆರ್ಥಿಕಸಹಾಯ ಕೋರಿ ಪತ್ರ ಬರೆಯುತ್ತಾರೆ. ಈ ಪತ್ರಕ್ಕೆ ಸ್ಪಂದಿಸಿ ಕೊಟ್ಟ ಹಣ ಒಂದು ಲಕ್ಷ ರೂಪಾಯಿ ಆಗುತ್ತದೆ. ಈ ಹಣವನ್ನು ಪೆಂಡಕೂರು ಮತ್ತು ಕೊಟ್ರಪ್ಪ ಕೂಡಿಯೇ ಸಂಗ್ರಹಿಸಿದ್ದರೂ, ಈ ದತ್ತಿನಿಧಿ ಕೇವಲ ಪೆಂಡಕೂರು ಅವರ ಹೆಸರಲ್ಲಿ ನೊಂದಣಿಯಾಗುತ್ತದೆ. ಈ ಕಾರಣಕ್ಕೆ ಪೆಂಡಕೂರರೆ ಈ ಪ್ರಶಸ್ತಿಗಾಗಿ ಕಲಾವಿದರನ್ನು ಸೂಚಿಸುತ್ತಾರೆ. ಸ್ವತಃ ಕೊಟ್ರಪ್ಪನೇ ಅಂಕಲಿಯ ಜೋಗಿನ ಬಾಳಮ್ಮ, ಮರಿಯಮ್ಮನಹಳ್ಳಿಯ ರಾಮಕ್ಕ ಜೋಗತಿ, ಕ್ಯಾದಗಿಹಳ್ಳಿಯ ಹಂಬಮ್ಮ, ಧೂಪದ ಕೊಟ್ರಪ್ಪ, ಗೊಂದಲಿಗರ ರಾಮಣ್ಣನನ್ನು ಒಳಗೊಂಡಂತೆ ಎಂಟೆತ್ತು ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಗುರುಮೂರ್ತಿ ಪೆಂಡಕೂರರಿಗೆ ಸೂಚಿಸುತ್ತಾರೆ. ಹಾಗಾಗಿ ತನಗೆ ಬಂದಿರುವ ಈ ಪ್ರಶಸ್ತಿಯಲ್ಲೇನು ವಿಶೇಷವಿಲ್ಲ `ನಾವೇ ಸಂಗ್ರಹಿಸಿದ ದತ್ತಿನಿಧಿ ಆಗಿನ ಶ್ರಮಕ್ಕೆ ಪ್ರತಿಫಲವೆಂಬಂತೆ ಪ್ರಶಸ್ತಿರೂಪದಲ್ಲಿ ಮರಳಿ ನನಗೆ ಸಿಕ್ಕಿದೆ’ ಎಂದು ಕೊಟ್ರಪ್ಪ ನಗುತ್ತಾರೆ.

ಕೊಟ್ರಪ್ಪ ಮಾತನಾಡುತ್ತಾ, ಏಣಿಗೆ ಬಸಾಪುರದ ತಾರೆವ್ವ ಎನ್ನುವ ಹರಿಜನ ಕಲಾವಿದೆಯಿಂದ ಮೂರು ದಿನ ಹಾಡುವ ಕೋಮಾಲೆ ಸಂದನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ, ಕೆಲವು ಜನಪದ ಕಲಾವಿದರಿಗೆ ಮಾಸಾಶನ ಕೊಡಿಸಲಾಗಲಿಲ್ಲ ಎನ್ನುವ ವಿಷಾದದ ಸಂಗತಿಯನ್ನು ನೋವಿನಿಂದ ಹೇಳುತ್ತಾರೆ. ಯಾವುದರಲ್ಲಿಯೂ ಗಟ್ಟಿಯಾಗಿ ನಿಲ್ಲದೆ ಎಲ್ಲಾ ಕಡೆಯೂ ಓಡಾಡಿಕೊಂಡಿದ್ದು ಕೊಟ್ರಪ್ಪ ಜೋಗಿ ಜಂಗಮನಂತಾದರು. ಈ ಓಡಾಟದಲ್ಲಿ ಮದುವೆಯಾಗುವುದನ್ನೂ ಮರೆತರು. ಇದೀಗ ಆರೋಗ್ಯ ಕೈಕೊಟ್ಟು ಮೊದಲಿನ ಉತ್ಸಾಹ ಉಳಿದಿಲ್ಲ. ಬಸರಕೋಡಿನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಾರೆ. ಸಾಹಿತ್ಯದ ಆಸಕ್ತಿಯ ಕಾರಣಕ್ಕೆ ಕೆಲಕಾಲ ಲಡಾಯಿ ಪ್ರಕಾಶನದ ಪುಸ್ತಕ ಮಾರಾಟದ ಕೂಲಿಯಾಗಿಯೂ ದುಡಿದರು. ಆರಂಭದಿಂದಲೂ ಮೇಟಿ ಕೊಟ್ರಪ್ಪ ಮತ್ತೊಬ್ಬರಿಗೆ ಬಳಕೆಯಾಗುತ್ತಲೆ ಬದುಕನ್ನು ಇತರರಿಗಾಗಿ ಸವೆಸಿದರು. ಈ ಇಳಿಗಾಲದ ಕಡುಕಷ್ಟದ ಸಂದರ್ಭದಲ್ಲಿ ಜಾನಪದ ಲೋಕಪ್ರಶಸ್ತಿಯ ಮೊತ್ತವೂ ಅವರಿಗೆ ಬಹಳ ಅಗತ್ಯವಾಗಿದೆ. ಅಂತೆಯೇ ಈ ಪ್ರಶಸ್ತಿ ಕೊಟ್ರಪ್ಪನ ಜೀವನೋತ್ಸಾಹವನ್ನು ಕಿಂಚಿತ್ತು ಹೆಚ್ಚಿಸಿ ಮತ್ತಷ್ಟು ಉತ್ಸಾಹ ತುಂಬಿಕೊಳ್ಳಲು ನೆರವಾಗಲಿ ಎಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅತ್ಯಾಚಾರ – ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಖುಲಾಸೆ

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಅವರನ್ನು ಭಾರತೀಯ ದಂಡ ಸಂಹಿತೆ, ಪೋಕ್ಸೋ ಕಾಯ್ದೆಯಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಮಕ್ಕಳ ಮೇಲಿನ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪಗಳಿಂದ ಖುಲಾಸೆಗೊಳಿಸಲಾಗಿದೆ. ಮೇ 27...

ಸಿದ್ದರಾಮಯ್ಯ ಅವರ ಮನವೊಲಿಸಿದ ಕಾಂಗ್ರೆಸ್‌ ಹೈಕಮಾಂಡ್; ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ರಾಜೀನಾಮೆ?

ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯ ಸುತ್ತಲಿನ ತೀವ್ರ ರಾಜಕೀಯ ನಾಟಕವು ಅಂತಿಮವಾಗಿ ನಿರ್ಣಾಯಕ ಹಂತ ತಲುಪಿದೆ. ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ನಿರಂತರ ಒತ್ತಡ ಮತ್ತು ಮಾತುಕತೆಗಳ ನಂತರ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಲು...

“ಎಚ್.ಎಸ್. ದೊರೆಸ್ವಾಮಿ ಭೌತಿಕವಾಗಿ ಇಲ್ಲದಿದ್ದರೂ ನಮ್ಮನ್ನು ಸದಾ ಪ್ರೇರೇಪಿಸುತ್ತಾರೆ”: ತೀಸ್ತಾ ಸೆಟಲ್ವಾಡ್

ಬೆಂಗಳೂರು: "ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ದಿ. ಎಚ್.ಎಸ್. ದೊರೆಸ್ವಾಮಿ ಅವರು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಹೋರಾಟದ ಹಾದಿ ಮತ್ತು ಆದರ್ಶಗಳು ನಮ್ಮನ್ನು ಸದಾ ಪ್ರೇರೇಪಿಸುತ್ತಲೇ ಇರುತ್ತವೆ" ಎಂದು ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ್ತಿ...

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...