Homeಕರ್ನಾಟಕಜನ ಮೆಚ್ಚಿದ ನಾಯಕಿ, ಹೋರಾಟಗಾರ್ತಿ ಕರೆಮ್ಮ ಜಿ.ನಾಯಕ

ಜನ ಮೆಚ್ಚಿದ ನಾಯಕಿ, ಹೋರಾಟಗಾರ್ತಿ ಕರೆಮ್ಮ ಜಿ.ನಾಯಕ

ನಾಯಕರ ದೊಡ್ಡಿಗಳಿಂದ 9 ಲಕ್ಷ ರೂ. ಕೊಡಲು ಬಂದರೆ ಅದನ್ನು ತೆಗೆದುಕೊಳ್ಳದೆ ಈಗಾಗಲೇ ಬಂದಿರುವ ಹಣ ನನ್ನಲ್ಲಿ ಹಾಗೇ ಉಳಿದಿದೆ ಎಂದಿದ್ದರು ಕರೆಮ್ಮ

- Advertisement -
- Advertisement -

ಕೃಷ್ಣಾ ನದಿಯ ತಟದಲ್ಲಿರುವ ಹಾಗೂ ನಾರಾಯಣಪುರ ಜಲಾಶಯಕ್ಕೆ ಸಮೀಪವೂ ಇರುವ ರಾಯಚೂರು ಜಿಲ್ಲೆಯ ತಾಲೂಕು ದೇವದುರ್ಗ. ಹಿಂದುಳಿದ ತಾಲ್ಲೂಕೆಂದು ಅಪಖ್ಯಾತಿ ಪಡೆದಾಗ ಇಲ್ಲಿನ ರೈತರಿಗೆ ಅನುಕೂಲವಾಗಲೆಂದು ನಾರಾಯಣಪುರ ಜಲಾಶಯದಿಂದ ನೀರು ತಂದು ನೀರಾವರಿ ಕ್ಷೇತ್ರವನ್ನಾಗಿ ಮಾಡಿದ ಕೀರ್ತಿ ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರಿಗೆ ಸಲ್ಲುತ್ತದೆ.

ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರವೂ ಈ ಬಾರಿಯ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ ಕ್ಷೇತ್ರಗಳ ಪೈಕಿ ಒಂದು. ಕಳೆದ 20 ವರ್ಷಗಳಿಂದ ಅರಕೇರಾ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಕ್ಷೇತ್ರ ಈ ಬಾರಿ ದಿ.ಎ.ವೆಂಕಟೇಶ ನಾಯಕ ಕುಟುಂಬೇತರರನ್ನು ಕ್ಷೇತ್ರದ ಜನ ಆಯ್ಕೆ ಮಾಡಿದ್ದಾರೆ. ಪ್ರತೀ ಚುನಾವಣೆಯಲ್ಲಿಯೂ ಒಂದೇ ಕುಟುಂಬದ ವ್ಯಕ್ತಿಗಳು ಮೂರು ಪಕ್ಷಗಳಿಂದ ಸ್ಪರ್ಧಿಸುತ್ತಿದ್ದುದರಿಂದ ಎರಡನೆಯ ವ್ಯಕ್ತಿ ಗೆಲ್ಲುವುದಿರಲಿ, ಸ್ಪರ್ಧಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಕರೆಮ್ಮ ಜಿ.ನಾಯಕ ಎನ್ನುವ ಸಾಮಾನ್ಯ ದಿಟ್ಟ ಮಹಿಳೆ ಕೆ.ಶಿವನಗೌಡನಾಯಕ ಎನ್ನುವ ಬಲಾಢ್ಯರನ್ನು ಸೋಲಿಸಿದ್ದಾರೆ.

2005ರಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಮೂಲಕ ರಾಜಕೀಯ ಪ್ರವೇಶ ಮಾಡಿ ಅವಿರೋಧವಾಗಿ ಮುಷ್ಠೂರು ಪಂಚಾಯತಿಯ ಅಧ್ಯಕ್ಷರಾಗಿ ಕರೆಮ್ಮ ಆಯ್ಕೆಯಾದರು. ಆಗ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತೆಯಾಗಿದ್ದ ಇವರು ನಂತರ ಮಹಿಳಾ ಘಟಕದ ತಾಲ್ಲೂಕಾಧ್ಯಕ್ಷರಾಗಿ ಪಕ್ಷ ಸಂಘಟನೆಗೆ ದುಡಿದು ರಾಜಕೀಯದಲ್ಲಿ ಸಕ್ರಿಯರಾದ ಕರೆಮ್ಮ ಆ ನಂತರ ಜಿಲ್ಲಾ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆಗ ಪಕ್ಷ ಬಿ.ಫಾರ್ಮ್‌ ನೀಡಿ ಮತ್ತೆ ವಾಪಸ್‌ ಪಡೆದಿದ್ದರಿಂದ ಬೇಸತ್ತ ಇವರು ಕಾಂಗ್ರೆಸ್‌ನಿಂದ ಹೊರ ಬಂದರು. ನಂತರ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗಿ ಕ್ಷೇತ್ರದಾದ್ಯಂತ
ಸಂಚರಿಸಿ ಪಕ್ಷ ಸಂಘಟಿಸಿ ಜನಮನ್ನಣೆ ಗಳಿಸಿದರು.

2018ರ ವಿಧಾನಸಭೆ ಚುನಾವಣೆಗೆ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾದರು. ಕ್ಷೇತ್ರದಲ್ಲಿ ಇದನ್ನು ಗಮನಿಸಿದ ಬಿಜೆಪಿಯ ಕೆ.ಶಿವನಗೌಡ ನಾಯಕ ಹಣಬಲವನ್ನು ಬಳಸಿ ಕುತಂತ್ರದಿಂದ ಟಿಕೆಟನ್ನು ಕರೆಮ್ಮ ಅವರಿಗೆ ತಪ್ಪಿಸಿ, ತಮ್ಮ ಸಂಬಂಧಿಕರಾದ ವೆಂಕಟೇಶ್ ಪೂಜಾರಿ ಎನ್ನುವ ವ್ಯಕ್ತಿಗೆ ಕೊಡಿಸಿದ್ದರು. ಅ ನಂತರ ಟಿಕೆಟ್‌ ವಂಚಿತರಾದ ಕರೆಮ್ಮ ಜನಾಭಿಪ್ರಾಯವನ್ನು ಪಡೆದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು 26,000 ಮತಗಳನ್ನು ಪಡೆಯುವ ಮೂಲಕ ಮೂರನೆಯ ಸ್ಥಾನಕ್ಕಿಳಿದು ಸೋಲು ಕಂಡರು.

ಸೋತರೂ ಧೃತಿಗೆಡದ ಗಟ್ಟಿಗಿತ್ತಿ ದಿಟ್ಟ ಮಹಿಳೆಯಾದ ಹಳ್ಳಿಗಾಡಿನ ಕರೆಮ್ಮ, ಮತ್ತೆ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತ ಸಣ್ಣಪುಟ್ಟ ಕೆಲಸಗಳಿಗೆ ಬೆನ್ನುಲುಬಾಗಿ ನಿಂತು ಕಳೆದ ಐದು ವರ್ಷ ಕ್ಷೇತ್ರದಲ್ಲಿ ವಿರೋಧ ಪಕ್ಷದ ರೀತಿಯಲ್ಲಿ ಹಾಲಿ ಶಾಸಕರ ವಿರುದ್ಧ ದನಿ ಎತ್ತುವ ಮೂಲಕ ಅಪಾರ ಜನರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಳಿಸಿಕೊಂಡು ಜನರ ಮನಸ್ಸನ್ನು ಗೆದ್ದರು. ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ ಶಾಸಕರಾಗಿದ್ದು ಯಾರದ್ದೋ ಬೆಂಬಲದಿಂದಲ್ಲ, ಸತತ 8 ವರ್ಷಗಳಿಂದ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದರ ಪರಿಣಾಮ. 200 ಹಳ್ಳಿಗಳ ಜನ ಊರಿನ ಮಗಳೆಂದು ಹಾರೈಸಿ, ಸನ್ಮಾನಿಸಿ, ಉಡಿ ತುಂಬಿ ಹಾರೈಸಿದ್ದು, ಜೊತೆಗೆ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಮಸ್ಯೆಗಳನ್ನ ಆಲಿಸಿದ್ದು ಗೆಲುವಿಗೆ ಕಾರಣವಾಗಿದೆ. ಇಂಥ ಸಾಹಸದ ಮಹಿಳೆಯ ಗೆಲುವು ಜೆಡಿಎಸ್‌ ಪಕ್ಷಕ್ಕೆ ದೊಡ್ಡ ಸಾಧನೆಯೇ ಅನಿಸುತ್ತಿಲ್ಲ ಎಂಬುದೇ ಬೇಸರದ ಸಂಗತಿ.

ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆ, ಮತಯಾಚನೆಯ ಬೃಹತ್‌ ಸಮಾವೇಶದಲ್ಲಿ ಒಬ್ಬಸಾಮಾನ್ಯ ಹೆಣ್ಣು ಮಗಳು ಸೇರಿಸಿದ್ದ ಜನಸ್ತೋಮವನ್ನು ಕಂಡು ಸಭೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕರೆಮ್ಮ ಈಗಾಗಲೇ ಗೆದ್ದುಬಿಟ್ಟಿದ್ದಾರೆ ಎಂದು ಹೇಳಿದ್ದರು. ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಜನರ ಜೊತೆಗೆ ನಿರಂತರ ಸಂಪರ್ಕ, ಪರಿಶ್ರಮ ಮತ್ತು ಕಠಿಣ ಪ್ರಯತ್ನವಿದ್ದರೆ ಮಾತ್ರ ಗೆಲುವಾಗಬಲ್ಲದು ಎಂಬುದನ್ನು ನಿರೂಪಿಸಿದರು.

ಶಿವನಗೌಡ ನಾಯಕ ಜಿಲ್ಲೆಯಲ್ಲಿ ಪ್ರಭಾವಿ ನಾಯಕ. ಬಿಜೆಪಿ ಪಕ್ಷದ ಹೈಕಮಾಂಡ್‌ ಜೊತೆಗೂ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಆದರೆ ತಾಲ್ಲೂಕಿನಲ್ಲಿ ವಿಪರೀತ ಮರಳು ದಂಧೆ, ಮಟಕಾ ದಂಧೆಯಂಥ ಕೆಲಸಗಳು ಇವರ ಕುಮ್ಮಕ್ಕುನಿಂದ ಲೈಸೆನ್ಸ್‌ ಇಲ್ಲದೆ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಮೆರೆಯುತ್ತಿವೆ. ಅಷ್ಟೇ ಅಲ್ಲದೇ ಬಾರ್‌ ‍‍& ವೈನ್‌ ಶಾಪ್‌ಗಳು ಅವರ ಮಾಲೀಕತ್ವದಲ್ಲಿ ಅತೀ ಹೆಚ್ಚು ಜಿಲ್ಲೆಯಲ್ಲಿವೆ. ಅವರು ಜಿಲ್ಲೆಗೆ ಬಂದ ಪ್ರತಿ ಅಧಿಕಾರಿಗಳು ತನ್ನದೇ ಮಾತು ಕೇಳಿಕೊಂಡು ಇರಬೇಕೆನ್ನುವ ಅಹಂಕಾರ ಪ್ರದರ್ಶಿಸಿದರು, ಯಾವುದೇ ಅಧಿಕಾರಿಗಳು ಇರಲಿ ಏಕವಚನದಲ್ಲಿ ಬಾಯಿಗೆ ಬಂದಂತೆ ಮಾತಾಡಿದರು. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದರೂ ಅಭಿವೃದ್ಧಿ ಮಾತ್ರ ಗೌಣ.

ಈ ಬಾರಿಯೂ ಕರೆಮ್ಮರನ್ನು ನೇರವಾಗಿ ಎದುರಿಸಲಾಗದೆ ಕಾಂಗ್ರೆಸ್‌-ಬಿಜೆಪಿಯಲ್ಲಿ ಮಾವ-ಅಳಿಯ ಒಳಒಪ್ಪಂದ ಮಾಡಿಕೊಂಡು, ತಮ್ಮ ಹಣಬಲವನ್ನು ಪ್ರಯೋಗಿಸಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಮತ್ತು ತಾಲ್ಲೂಕನ್ನು ತಮ್ಮ ಹಿಡಿತದಲ್ಲೇ ಇಟ್ಟಕೊಳ್ಳಬೇಕೆಂಬ ಹಟದಿಂದ ಕರೆಮ್ಮರ ವಿರುದ್ಧ ಅವರದ್ದೇ ಕುಟುಂಬದ ರೂಪಾ ಶ್ರೀನಿವಾಸ ನಾಯಕ್‌ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಯಾಕೆಂದರೆ ರೂಪಾ ಅವರು ರೈತಸಂಘದಲ್ಲಿ ಗುರುತಿಸಿಕೊಂಡಿದ್ದಾರೆ. ಅವರೂ ಸ್ಪರ್ಧಿಸಿದರೆ, ಕರೆಮ್ಮಗೆ ದೊರೆಯಬಹುದಾದ ಒಂದಷ್ಟು ಮತಗಳನ್ನು ರೂಪಾ ಸೆಳೆಯಬಹುದು ಎನ್ನುವ ಲೆಕ್ಕಾಚಾರವೂ ಇವರಲ್ಲಿತ್ತು. ಆದರೆ ಅದು ಫಲ ನೀಡಲಿಲ್ಲ.

ಇನ್ನು ಒಂದು ಕಾಲದಲ್ಲಿ ದೇವದುರ್ಗ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೆ ಈಗ ಕ್ಷೇತ್ರದಲ್ಲಿ ಒಳಒಪ್ಪಂದ ರಾಜಕಾರಣದಿಂದ ಕಾಂಗ್ರೆಸ್‌ ಪಕ್ಷ 3,000 ಮತಗಳು ಪಡೆಯುವ ಮೂಲಕ ತನ್ನ ಠೇವಣಿ ಕಳೆದುಕೊಂಡಿದೆ. ಕಾಂಗ್ರೆಸ್‌ನಲ್ಲಿದ್ದ ಬಿ.ವಿ ನಾಯಕ್, ಅಧಿಕಾರದಾಸೆಗಾಗಿ ಬಿಜೆಪಿ ಸೇರಿಕೊಂಡು ಮಾನ್ವಿಯಿಂದ ಸ್ಪರ್ಧಿಸಿ ಸೋತರು. ದೇವದುರ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀದೇವಿ ನಾಯಕ ಬಿಜೆಪಿಯ ಶಿವನಗೌಡ ನಾಯಕ ಇಬ್ಬರು ರಾತ್ರೋರಾತ್ರಿ ಮಾಡಿಕೊಂಡ ಒಪ್ಪಂದದ ರಾಜಕಾರಣವವನ್ನು ಅರ್ಥ ಮಾಡಿಕೊಂಡ ಕ್ಷೇತ್ರದ ಜನ ಪಕ್ಷದ ಕೆಲವು ಕಾರ್ಯಕರ್ತರು ಮತ್ತು ಮುಖಂಡರು ಜೆಡಿಎಸ್‌ನತ್ತ ಮುಖ ಮಾಡಿದರು.

ʼನಾನುಗೌರಿ.ಕಾಂʼ ಜೊತೆ ಮಾತನಾಡಿದ ಕರೆಮ್ಮ, “ತಾಲ್ಲೂಕಿನಲ್ಲಿ ಇದುವರೆಗೂ ಹೇಳಿಕೊಳ್ಳುವಂಥ ಅಭಿವೃದ್ಧಿ ಕಂಡಿಲ್ಲ. ತಾಲ್ಲೂಕಿನಲ್ಲಿ ಅಪೌಷ್ಟಿಕತೆ ಹೆಚ್ಚಿದೆ, ಸರಿಯಾದ ಆಸ್ಪತ್ರೆ ವ್ಯವಸ್ಥೆಯಿಲ್ಲ, ಹಳ್ಳಿಗಳಿಗೆ ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲ, ಮಹಿಳೆಯರಿಗೆ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ, ಈ ಸಮಸ್ಯೆಗಳನ್ನು ಹೋಗಲಾಡಿಸಬೇಕು, ಮೊದಲು ಅಭಿವೃದ್ಧಿ ಮಾಡಬೇಕು, ಕ್ಷೇತ್ರದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡುತ್ತೇವೆ. ಜೊತೆಗೆ ಕೆಲವು ಹಳ್ಳಿಗಳಿಗೆ ನೀರಾವರಿ ವ್ಯವಸ್ಥೆಯಿಲ್ಲ. ಅದನ್ನು ಜಾರಿ ಮಾಡಿಕೊಡಲು ಸರ್ಕಾರದ ಮೇಲೆ ಒತ್ತಡ ತಂದು ಅದನ್ನು ಜಾರಿಗೆ ತರುವ ಕೆಲಸ ಮಾಡುತ್ತೇನೆ” ಎಂದು ಹೇಳಿದರು.

ಚುನಾವಣೆಯೆಂದರೆ ಅಭ್ಯರ್ಥಿಗಳು ಕೋಟಿಗಟ್ಟಲೇ ದುಡ್ಡು ಖರ್ಚು ಮಾಡಿ ಮತಗಳನ್ನು ಪಡೆದರೆ, ಆದರೆ ಅತ್ಯಂತ ಹಿಂದುಳಿದ ತಾಲ್ಲೂಕೆಂದು ಖ್ಯಾತಿ ಪಡೆದ ದೇವದುರ್ಗದಲ್ಲಿ ಜನರೇ ಅಭ್ಯರ್ಥಿಗಳ ಖರ್ಚು ನಿಭಾಯಿಸುವ ಪದ್ಧತಿಯನ್ನು ಈ ಕರೆಮ್ಮ ನಿರೂಪಿಸಿಬಿಟ್ಟರು. ಪ್ರತಿಯೊಂದು ಗ್ರಾಮವು ಕೂಡ ಚುನಾವಣಾ ಖರ್ಚಿಗಾಗಿ 2000-100000 ರೂ.ವರೆಗೆ ಅವರ ಉಡಿಯಲ್ಲಿ ಹಾಕಿ ಆಶೀರ್ವದಿಸಿ, ಹಾರೈಸಿದ ಉದಾಹರಣೆಯಿದೆ. ʼಚುನಾವಣೆಯ ಹಿಂದಿನ ದಿನ ಒಂಭತ್ತು ನಾಯಕರ ದೊಡ್ಡಿಗಳಿಂದ ಒಂಭತ್ತು ಲಕ್ಷ ರೂಪಾಯಿ ಕೊಡಲು ಬಂದರೆ ಅದನ್ನು ತೆಗೆದುಕೊಳ್ಳದೆ ಈಗಾಗಲೇ ಬಂದಿರುವ ಹಣ ನನ್ನಲ್ಲಿ ಹಾಗೇ ಉಳಿದಿದೆ, ಅದು ಖರ್ಚಾಗಿಲ್ಲ ನಿಮ್ಮದೇ ಊರಿನಲ್ಲಿ ನೀವೇ ಖರ್ಚು ಮಾಡಿ ಎಂದು ವಾಪಸ್ಸ್‌ ಕಳಿಸಿದ್ದರುʼ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.

ಇದನ್ನೂ ಓದಿರಿ: ಬಜರಂಗದಳ ಬ್ಯಾನ್ ಚರ್ಚೆಯ ಸುತ್ತ

ಕರೆಮ್ಮ ಎರಡು ಬಾರಿ ಸೋತರೂ ಜನರ ಸಂಪರ್ಕ ಬಿಡಲಿಲ್ಲ. ನಿರಂತರವಾಗಿ ಜನರೊಂದಿಗೆ ಇರುವುದು ಅವರ ಗೆಲುವಿಗೆ ದಾರಿ ಮಾಡಿಕೊಟ್ಟಿದೆ. ಇತ್ತೀಚೆಗೆ, ಗಬ್ಬೂರಿಗೆ ತಾಲೂಕು ಸ್ಥಾನಮಾನವನ್ನು ತಪ್ಪಿಸಿದ ಹಾಲಿ ಶಾಸಕರು, ಸ್ವಂತ ಊರಾದ ಅರಕೇರಾವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಮೂಲಕ ಇಲ್ಲಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರಿಂದ ಕೆಲವು ಬಿಜೆಪಿ (ಲಿಂಗಾಯತ) ಮುಖಂಡರು ಶಿವನಗೌಡ ವಿರುದ್ಧ ತಿರುಗಿ ಬಿದ್ದಿದ್ದು ಕೂಡ ಕರೆಮ್ಮಗೆ ಲಾಭವಾಗಿದೆ.

ಸರಳತೆಯ ಜೊತೆಗೆ ಜನಗಳ ನಿರಂತರ ಸಂಪರ್ಕ, ಶಿವನಗೌಡ ಮತ್ತು ಪ್ರತಿಸ್ಪರ್ಧಿಗಳ ಕ್ಷುಲ್ಲಕ ಮಾತುಗಳು ಕರೆಮ್ಮನನ್ನು ಒಬ್ಬ ಜನನಾಯಕಿಯನ್ನಾಗಿ ರೂಪುಗೊಳಿಸಿದವು. ನಿರಂತರ ಸಂಪರ್ಕವಿದ್ದರೆ ಸಾಕು ಚುನಾವಣೆ ಗೆಲ್ಲಬಹುದು ಅಂತ ರಾಜ್ಯಕ್ಕೆ ತೋರಿಸಿಕೊಟ್ಟರು. ಈ ಗೆಲುವು ಇವತ್ತು ನಿನ್ನೆಯದಲ್ಲ. ಕರೆಮ್ಮನವರ ಸತತ 10 ವರ್ಷಗಳ ಪ್ರಯತ್ನ ಕ್ಷೇತ್ರದ ತುಂಬೆಲ್ಲ ಸಂಚರಿಸಿ ಜನಮನ ಗೆದ್ದಿರುವುದೇ ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಸೋಲಿಸಲು ವಿರೋಧಿಗಳಿಂದ ಎಷ್ಟೇ ಪ್ರಯತ್ನ ನಡೆದರೂ ಕುಟುಂಬ ರಾಜಕಾರಣಿಗಳ ತಂತ್ರ-ಕುತಂತ್ರಗಳ ಆಟ ನಡೆಯಲಿಲ್ಲ. ಈ ದಿಟ್ಟಮಹಿಳೆಯ ಗೆಲುವು ಸುಲಭದಲ್ಲ. ಹತ್ತು ವರ್ಷಗಳ ಕಾಲ ಬಲಾಢ್ಯರು ಕೊಟ್ಟಿರುವ ಕಿರುಕುಳ ಅಷ್ಟಿಷ್ಟಲ್ಲ. ಅದೆಲ್ಲವನ್ನೂ ಎದುರಿಸಿ ನಿಂತು ಇವತ್ತು ಜಯ ಸಾಧಿಸಿದರು. ಇಂಥ ಹೋರಾಟದ ಗೆಲುವು ಪಕ್ಷದ ಮುಖ್ಯಸ್ಥರಿಗೆ ಗೊತ್ತಾಗುವುದೇ ಇಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...