ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸಜ್ಜಾಗುತ್ತಿದ್ದೇವೆ. ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವಂತೆ, ಸಾಮಾಜಿಕ ಮಾಧ್ಯಮಗಳ ಪ್ರೊಫೈಲ್‌ನಲ್ಲಿ ರಾಷ್ಟ್ರಧ್ವಜದ ಚಿತ್ರವನ್ನು ಹಾಕಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಪ್ರಧಾನಿಯವರ ಮನವಿಯ ಹಿನ್ನೆಲೆಯಲ್ಲಿ ಹಲವಾರು ಬೆಳವಣಿಗೆಗಳಾಗುತ್ತಿವೆ. ಇದರ ನಡುವೆ ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಬಾವುಟವನ್ನು ಮಾರಲು ಮುಂದಾಗಿರುವ ಸುದ್ದಿ ಲಭ್ಯವಾಗಿದೆ.
ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜ್ಞಾಪನ ಪತ್ರವನ್ನು ಹೊರಡಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಹಮ್ಮಿಕೊಂಡಿರುವ ಕುರಿತು ಈ ಜ್ಞಾಪನ ಪತ್ರವಿದೆ. “…ಆಗಸ್ಟ್ 13ರಿಂದ 15ರವರೆಗೆ ದೇಶದ ಪ್ರತಿ ಮನೆಮನೆಗಳಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿ, ದೇಶಾಭಿಮಾನ ಬಿಂಬಿಸಲು ಉದ್ದೇಶಿಸಿರುವುದರಿಂದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಧ್ವಜವನ್ನು ಖರೀದಿಸಲು ಪದವಿ ಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ವಿದ್ಯಾರ್ಥಿಯಿಂದ ರೂ. 22 ರಂತೆ ಸಂಗ್ರಹಿಸಿ ಬಾವುಟವನ್ನು ಖರೀದಿಸಲು (ಜಿಲ್ಲಾಧಿಕಾರಿ) ಸೂಚಿಸಿರುತ್ತಾರೆ. ಜಿಲ್ಲೆಯ ಪದವಿಪುರ್ವ ಕಾಲೇಜಿನ ಪ್ರಾಂಶುಪಾಲರು ಬಾವುಟಗಳನ್ನು ಮೋಹನ್ ಎಂ.ಪಿ. (ಪ್ರಾಂಶುಪಾಲರು, ಸರ್ಕಾರಿ ಪದವಿಪೂರ್ವ ಕಾಲೇಜು, ವಿದ್ಯಾನಗರ, ಆಕಾಶವಾಣಿ ಹತ್ತಿರ, ಹಾಸನ) ಅವರನ್ನು ಸಂಪರ್ಕಿಸಿ ಬಾವುಟಗಳನ್ನು ಪ್ರದರ್ಶಿಸಲು ಸೂಚಿಸಲಾಗಿದೆ..” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಭಾನುವಾರ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಹಾಸನ ಡಿಡಿಪಿಯು ಸಿ.ಎಂ.ಮಹಲಿಂಗಯ್ಯ ಅವರು, “ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬಾವುಟ ಹಂಚಿಕೆ ಮಾಡಲು ಮುಂದಾಗಿದ್ದೇವೆ. ಜಿಲ್ಲಾಧಿಕಾರಿಯವರು ವಿವಿಧ ಇಲಾಖೆಗೆ ಇಂತಿಷ್ಟು ಬಾವುಟಗಳನ್ನು ನೀಡಿದ್ದಾರೆ. ಆಸಕ್ತರು ಮಾತ್ರ ಖರೀದಿಸಬಹುದು. 10,000 ಬಾವುಟಗಳನ್ನು ಮಾರುವಂತೆ ನಮ್ಮ ಇಲಾಖೆಗೆ ಟಾರ್ಗೆಟ್ ನೀಡಲಾಗಿದೆ. ಮಾರಾಟವಾಗದ ಬಾವುಟಗಳನ್ನು ವಾಪಸ್ ಕಳುಹಿಸುತ್ತೇವೆ. ನಮ್ಮ ವ್ಯಾಪ್ತಿಯಲ್ಲಿ 31,000 ವಿದ್ಯಾರ್ಥಿಗಳಿದ್ದಾರೆ. ಖಾದಿ ಬಾವುಟವನ್ನೇ ನೀಡಿದ್ದಾರೆ. ಪಿಯು ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಬಾವುಟ ಮಾರಲಾಗುತ್ತಿದೆ” ಎಂದು ಮಾಹಿತಿ ನೀಡಿದರು.
ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿ, “ಬಾವುಟವನ್ನು ಹೇಗೆ ಕೊಡಬೇಕು, ಎಲ್ಲಿ ಕೊಡಬೇಕು ಎಂದು ಯೋಜನೆ ರೂಪಿಸುತ್ತಿದ್ದೇವೆ. ಬಹುಶಃ ನಾಳೆ (ಸೋಮವಾರ) ಪತ್ರಿಕಾಗೋಷ್ಠಿ ಕರೆಯುತ್ತೇನೆ. ಜಿಲ್ಲಾ ಪಂಚಾಯಿತಿ ಮೂಲಕ 1.1 ಲಕ್ಷ ಬಾವುಟಗಳನ್ನು ಹಂಚುತ್ತಿದ್ದೇವೆ. ಸ್ಥಳೀಯ ಸಂಸ್ಥೆಗಳಿಂದ 50 ಸಾವಿರ ಬಾವುಟ, ಶಾಲಾ ಮಕ್ಕಳಿಗೆ ಸುಮಾರು 20,000 ಭಾವುಟವನ್ನು ಮಾರಲು ಇಚ್ಛಿಸಿದ್ದೇವೆ. ಬಾವುಟವನ್ನು ಉಚಿತವಾಗಿ ನೀಡುತ್ತಿಲ್ಲ. ಹಣ ನಿಗದಿ ಮಾಡಿದ್ದೇವೆ” ಎಂದು ಸ್ಪಷ್ಟಪಡಿಸಿದರು.
“ಹಾಸನ ಜಿಲ್ಲೆಯಷ್ಟೇ ಅಲ್ಲ. ಇಡೀ ರಾಜ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ” ಎಂದ ಅವರು, ಸರ್ಕಾರದ ಮಟ್ಟದಿಂದಲೇ ಸೂಚನೆ ಬಂದಿರುವ ಕುರಿತು ಸುಳಿವು ನೀಡಿದರು.
“ದೇಶಭಕ್ತಿಯ ಹೆಸರಲ್ಲಿ ದುಡ್ಡು ಮಾಡುವ ಬಿಸಿನೆಟ್ ಇಲ್ಲಿ ನಡೆಯುತ್ತಿದೆಯೇ? ವಿದ್ಯಾರ್ಥಿಗಳಿಗೆ ಉಚಿತವಾಗಿ ಬಾವುಟವನ್ನು ಹಂಚಬಹುದಿತ್ತಲ್ಲ? ಸರಿಯಾದ ಸೂರಿಲ್ಲದ ಜನರು ಬಾವುಟವನ್ನು ಎಲ್ಲಿ ಹಾರಿಸಬೇಕು?” ಮೊದಲಾದ ಪ್ರಶ್ನೆಗಳು ಮುಂದೆ ಬಂದಿವೆ.
ಹಾಸನ ಜಿಲ್ಲೆಯ ರೈತ ಮುಖಂಡ ಎಚ್.ಆರ್.ನವೀನ್‌ಕುಮಾರ್ ಪ್ರತಿಕ್ರಿಯೆ ನೀಡಿ, “ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರನ್ನು ಮರಳು ಮಾಡುತ್ತಿವೆ. ಭಾವನಾತ್ಮಕವಾಗಿ ಸೆಳೆಯಲು ಬಾವುಟದ ವಿಚಾರವನ್ನು ತರುತ್ತಿದ್ದಾರೆ. ಜನರ ನೈಜ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಮರೆಮಾಚಲು ಹರ್ ಘರ್ ತಿರಂಗ ಎಂಬ ಕಾರ್ಯಕ್ರಮವನ್ನು ಬಳಸಿಕೊಳ್ಳಲಾಗುತ್ತಿದೆ” ಎಂದು ವಿಷಾದಿಸಿದರು.
ಇದನ್ನೂ ಓದಿರಿ: ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ: ಮನೆಯೇ ಇಲ್ಲದವರು ಏನು ಮಾಡಬೇಕು?
“ಒಂದು ಕಾರ್ಟೂನ್ ನೋಡಿದೆ. ನನಗೂ ತಿರಂಗ ಹಾರಿಸಲು ಇಷ್ಟ. ಆದರೆ ಮನೆಯಿಲ್ಲ. ಮೊದಲು ಮನೆ ನಿರ್ಮಿಸಿಕೊಡಿ ಎಂದು ಆ ಕಾರ್ಟೂನ್ ಆಗ್ರಹಿಸಿತ್ತು. ಸರ್ಕಾರ ಜನರ ನೈಜ ಪ್ರಶ್ನೆಗಳಿಗೆ ಗಮನ ಕೊಡುತ್ತಿಲ್ಲ. ಬೆಲೆ ಏರಿಕೆ, ಶಿಕ್ಷಣದ ಖಾಸಗೀಕರಣ, ಪಠ್ಯಪುಸ್ತಕಗಳ ಅಧ್ವಾನ ಮೊದಲಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು, ಜನರನ್ನು ಬೇರೆ ದಿಕ್ಕಿಗೆ ತಿರುಗಿಸಲು ಯತ್ನಿಸುತ್ತಿದ್ದಾರೆ. ಭಾವುಟ, ಸೈನಿಕರು, ದೇಶಭಕ್ತಿ- ಇವೆಲ್ಲವೂ ಭಾವನಾತ್ಮಕ ಸಂಗತಿಗಳು. ಇವುಗಳ ಬಗ್ಗೆ ಮಾತನಾಡಿದರೆ ದೇಶದ್ರೋಹ ಎಂಬ ಮನಸ್ಥಿತಿಯನ್ನು ಬೆಳೆಸಲಾಗುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ದೇಶಭಕ್ತಿ ಬಗ್ಗೆ ಮಾತನಾಡೋರು ಕರ್ನಾಟಕದ ಖಾದಿ ಉದ್ಯಮಕ್ಕೆ ಪ್ರೋತ್ಸಾಹ ಕೊಡಬೇಕಿತ್ತು. ನಿಜವಾಗಿಯೂ ಇವರಿಗೆ ದೇಶಭಕ್ತಿ ಇದ್ದರೆ ತ್ರಿವರ್ಣಧ್ವಜದ ಜೊತೆಗೆ ಸಂವಿಧಾನ ಒಂದು ಪ್ರತಿಯನ್ನು ಉಚಿತವಾಗಿ ಹಂಚಲಿ. ದುಡ್ಡು ಪಡೆದು ಬಾವುಟವನ್ನು ಮಾರುತ್ತಿರುವುದು ದೇಶಭಕ್ತಿಯೂ ಅಲ್ಲ, ಅಮೃತ ಮಹೋತ್ಸವಕ್ಕೆ ಕೊಡುತ್ತಿರುವ ಗೌರವವೂ ಅಲ್ಲ” ಎಂದು ಅಭಿಪ್ರಾಯಪಟ್ಟರು.
ಸರ್ ನಮಸ್ತೆ…ಇದು ಕೇವಲ ಪದವಿಪೂರ್ವ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಗಳು ,ಕಛೇರಿಗಳ ಕತೆಯೂ ಹೀಗೆಯೇ ಇದೆ..ಪ್ರಥಮ ದರ್ಜೆ ಕಾಲೇಜುಗಳಿಗೂ ಹೀಗೆಯೆ ಸುತ್ತೊಲೆ ಇದೆ ಜೊತೆಗೆ ಎನ್ ಎಸ್ ಎಸ್ ಘಟಕಗಳು ಇದರ ಹಿಂದೆ ಬಿದ್ದು ಕೊಳ್ಳುವಂತೆ ಸೂಚಿಸುತ್ತಿವೆ ಅದನ್ನು ಮಾರಲು ಕಾಲೇಜುಗಳು ವಿದ್ಯಾರ್ಥಿಗಳನ್ನ ಮನೆ ಮನೆಗೆ ಕಳುಹಿಸಿ ಮನೆಯವರಿಗೆ ಮಾರಿ ಫೋಟೊ ತೆಗೆದು ಗುಂಪುಗಳಲದಲಿ ಹಾಕುತ್ತಿದ್ದಾರೆ…ಎಲ್ಲಾ ಆಷಾಢಭೂತಿತನವಷ್ಟೆ.ಮಂಗ ಮಾಡ್ತಾ ಇದಾರೆ ಜನರನ್ನು