ಕರವೇ ಅಂದರೆ ಕಳ್ಳರ ರಕ್ಷಣಾ ವೇದಿಕೆ. ನಕಲಿ ಕನ್ನಡ ಪರ ಸಂಘಟನೆಗಳಿಗೆ ಯಾರೂ ಹೆದರಬೇಡಿ. ಡಿ. 5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿಫಲಗೊಳಿಸಿ ಎಂಬ ವಿವಾದಾತ್ಮಕ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕರವೇ ಕಿಡಿಕಾರಿದೆ.
ಈ ನಾಡಿನ ರಕ್ಷಣೆಗಾಗಿ ತಮ್ಮ ಸರ್ವಸ್ವವನ್ನು ಧಾರೆಯೆರೆದು ಹೋರಾಡುತ್ತಿರುವ ರಾಜ್ಯದ ಲಕ್ಷಾಂತರ ಕರವೇ ಕಾರ್ಯಕರ್ತರು ಸರಿಯಾದ ಸಂದರ್ಭದಲ್ಲಿ ಯತ್ನಾಳ್‌ಗೆ ಸರಿಯಾದ ಉತ್ತರ ನೀಡುತ್ತಾರೆ. ಯಾರು ಕಳ್ಳರು, ಯಾರು ಸುಳ್ಳರು ಎಂಬುದನ್ನು ರಾಜ್ಯದ ಜನತೆಯ ಮುಂದೆ ತೆರೆದಿಡಲಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರು ತಿಳಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಅವರು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತಮ್ಮ ಬಾಯಿಹರುಕತನ ಪ್ರದರ್ಶಿಸಿದ್ದಾರೆ. ನೆರೆ ಪರಿಹಾರ, ಜಿಎಸ್‌ಟಿ ಬಾಕಿ ತರಲು ಒಕ್ಕೂಟ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಎಂದು ಹಿಂದೆ ಸವಾಲು ಹಾಕಿದ್ದೆ. ಆದರೆ ಯತ್ನಾಳ್ ಆ ವಿಷಯ ಮಾತಾಡುತ್ತಿಲ್ಲ. ಅವರಿಗೆ ಜನರ ಕಷ್ಟಗಳ ಕುರಿತು ಕಾಳಜಿಯಿಲ್ಲ, ಕೇವಲ ಪ್ರಚಾರಕ್ಕಾಗಿ ನಾಲಿಗೆ ಹರಿಬಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಅವರು ನಾಡಿನ ಸಾಕ್ಷಿಪ್ರಜ್ಞೆ, ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್.ಎಸ್ ದೊರೆಸ್ವಾಮಿಯವರ ಕುರಿತೂ ಕೀಳಾಗಿ ಮಾತಾಡಿದ್ದಾರೆ. ಇದು ಅವರ ಸಂಸ್ಕಾರ, ಸಂಸ್ಕೃತಿಯನ್ನು ತೋರಿಸುತ್ತದೆ. ಒಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನು ನಿಂದಿಸುವ ಇವರು ಯಾವ ಸೀಮೆಯ ದೇಶಭಕ್ತರು? ಇವರೆಂಥ ರಾಷ್ಟ್ರೀಯವಾದಿಗಳು? ಎಂದು ಪ್ರಶ್ನಿಸಿದ್ದಾರೆ.
“ಕರವೇಯಲ್ಲಿ ಸಾಬರು ಇದ್ದಾರೆ” ಎಂದು ಹೇಳಿದ್ದಾರೆ ಯತ್ನಾಳ್. ಕರವೇಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧರಾದಿಯಾಗಿ ಎಲ್ಲ ಧರ್ಮದವರೂ ಇದ್ದಾರೆ. ಭಾರತ ಸಂವಿಧಾನದ 14 ನೇ ವಿಧಿ, ಎಲ್ಲ ಭಾರತೀಯರೂ ಸಮಾನರೆಂದು ಹೇಳುತ್ತದೆ. ಕರವೇಯಲ್ಲಿ ಎಲ್ಲ ಧರ್ಮದವರೂ ಕನ್ನಡಸೇವೆಯಲ್ಲಿ ತೊಡಗಿದ್ದಾರೆ, ಅದಕ್ಕಾಗಿ ನಾವು ಹೆಮ್ಮೆಪಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ “ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು” ಎಂಬ ಘೋಷವಾಕ್ಯದೊಂದಿಗೆ 21 ವರ್ಷಗಳಿಂದ ಕನ್ನಡ ಚಳವಳಿಯನ್ನು ಸಂಘಟಿಸುತ್ತಿದೆ. ಧರ್ಮ-ಧರ್ಮಗಳ ನಡುವೆ ದ್ವೇಷ ಹರಡಿ, ಕೋಮುಗಲಭೆ ಎಬ್ಬಿಸಿ ಬೇಳೆ ಬೇಯಿಸಿಕೊಳ್ಳುವುದು ಯತ್ನಾಳ್‌ರಂಥವರ ಕುತಂತ್ರ. ಯತ್ನಾಳ್ ಕುತಂತ್ರ ಫಲ ಕೊಡುವುದಿಲ್ಲ, ಅವರಿಗೆ ತಿರುಗುಬಾಣವಾಗುತ್ತದೆ ಎಂದಿದ್ದಾರೆ.
ತನ್ನನ್ನು ಮಂತ್ರಿ ಮಾಡಲೆಂದು ಆಗಾಗ ಬ್ಲಾಕ್ ಮೇಲ್ ಮಾಡುವ ಯತ್ನಾಳ್ ಈಗ ಬಿಜೆಪಿಯವರ ಪಾಲಿಗೇ ಗೊಡ್ಡುಹಸುವಾಗಿದ್ದಾರೆ. ಹೀಗಾಗಿ ಸುದ್ದಿಯಲ್ಲಿ ಇರಲು, ಆಕಾಶಕ್ಕೆ ಉಗುಳುವ ಕೆಲಸ ಮಾಡುತ್ತಿದ್ದಾರೆ. ಆಕಾಶಕ್ಕೆ ಉಗಿದರೆ ಅದು ಅವರ ಮೇಲೇ ಬೀಳುವುದಿಲ್ಲವೇ? ಹತ್ತು ಮಂದಿ ಪುಂಡಪೋಕರಿಗಳನ್ನು ಸುತ್ತ ನಿಲ್ಲಿಸಿಕೊಂಡು, ಮೀಡಿಯಾ ಮೈಕುಗಳ ಎದುರು ಬಾಯಿಗೆ ಬಂದಿದ್ದು ಮಾತನಾಡಿದರೆ ದೊಡ್ಡ ನಾಯಕನೆನಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿ ಯತ್ನಾಳ್ ಇದ್ದಾರೆ. ಇಂಥವರು ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿದ್ದಾರೆ, ಇವರೂ ಆಗುತ್ತಾರೆ ಎಂದಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನಿಜಕ್ಕೂ ಜನರ ಪರವಾದ ಕಾಳಜಿ ಇದ್ದರೆ, ಅವರದೇ ಜಿಲ್ಲೆ ವಿಜಯಪುರದಲ್ಲಿ ನರಳುತ್ತಿರುವ ನೆರೆಸಂತ್ರಸ್ಥರ ಜತೆ ನಿಲ್ಲಲಿ. ನೆರೆ ಪರಿಹಾರ ಯಾಕೆ ಕೊಟ್ಟಿಲ್ಲವೆಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋರಾಟ ರೂಪಿಸಲಿ. ಆಗ ಅವರನ್ನು ಜನರು ನಾಯಕರೆಂದು ಪರಿಗಣಿಸುತ್ತಾರೆ ಎಂದು ನಾರಾಯಣಗೌಡ್ರು ತಿಳಿಸಿದ್ದಾರೆ.
ಇದನ್ನೂ ಓದಿ: ಯತ್ನಾಳ್‌ಗೆ ಗುಲಾಮಗಿರಿ ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಒಪ್ಪಿಕೊಳ್ಳುತ್ತಾರೆಯೇ?: ಕರವೇ ಪ್ರಶ್ನೆ