Homeಕರ್ನಾಟಕಕಸಾಪ ಅಧ್ಯಕ್ಷ ಮಹೇಶ ಜೋಶಿ, ಗುರುಗೋವಿಂದ ಭಟ್ಟರ ಮರಿಮೊಮ್ಮಗ ಎಂಬುದು ಸುಳ್ಳು: ವರದಿ

ಕಸಾಪ ಅಧ್ಯಕ್ಷ ಮಹೇಶ ಜೋಶಿ, ಗುರುಗೋವಿಂದ ಭಟ್ಟರ ಮರಿಮೊಮ್ಮಗ ಎಂಬುದು ಸುಳ್ಳು: ವರದಿ

- Advertisement -
- Advertisement -

ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದಿಂದ ಮುಸ್ಲಿಂ ಬರಹಗಾರರನ್ನು ಹೊರಗಿಟ್ಟು ಕನ್ನಡತನವನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಮಹೇಶ ಜೋಶಿ ಮರೆತ್ತಿದ್ದಾರೆ ಎಂಬ ಆರೋಪಗಳು ಬಂದಿವೆ. ಇದರ ಬೆನ್ನಲ್ಲೇ ಕಸಾಪ ಅಧ್ಯಕ್ಷರು, “ನಾನು ಗುರು ಗೋವಿಂದಭಟ್ಟರ ಮರಿಮೊಮ್ಮಗ, ನನಗಿಂತ ಜಾತ್ಯತೀತ ವ್ಯಕ್ತಿ ಬೇಕಾ?” ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಗುರು ಗೋವಿಂದ ಭಟ್ಟರಿಗೂ ಮಹೇಶ ಜೋಶಿಯವರಿಗೂ ಯಾವುದೇ ಸಂಬಂಧವಿಲ್ಲ ಎಂದು ‘ಈ ದಿನ.ಕಾಂ’ ವಿಶೇಷ ವರದಿ ಮಾಡಿದೆ.

ಪತ್ರಕರ್ತ ನವೀನ್ ಸೂರಿಂಜೆಯವರು ಬರೆದಿರುವ ವರದಿಯಲ್ಲಿ, “ಮಹೇಶ ಜೋಶಿಯವರು ಸುಳ್ಳನ್ನು ಹೇಳುತ್ತಿದ್ದಾರೆ” ಎಂದು ಪ್ರತಿಪಾದಿಸಲಾಗಿದೆ. ಕಳಸದ ಗೋವಿಂದ ಭಟ್ಟರು ಮತ್ತು ಸಂತ ಶಿಶುನಾಳ ಶರೀಫರ ಗುರು-ಶಿಷ್ಯ ಸಂಬಂಧ ನಾಡಿನ ಅಸ್ಮಿತೆಗೆ ಬಹುದೊಡ್ಡ ಉದಾಹರಣೆ. ಆದರೆ ಗೋವಿಂದ ಭಟ್ಟರ ವಂಶಸ್ಥರೆಂದು ಮಹೇಶ ಜೋಶಿಯವರು ಹೇಳಿಕೊಂಡು ತಮ್ಮ ಕೋಮುವಾದಿ ಕಾರ್ಯಾಚರಣೆಯನ್ನು ಮರೆಮಾಚಲು ಯತ್ನಿಸುತ್ತಿರುವ ಆರೋಪಗಳು ಬಂದಿವೆ. ಇದರ ಬೆನ್ನಲ್ಲೇ ‘ಈ ದಿನ’ ವರದಿ ವಿಶೇಷ ಬೆಳಕು ಚೆಲ್ಲಿದೆ.

ಶಿಥಿಲಾವಾಸ್ಥೆಯಲ್ಲಿದ್ದ ಗುರುಗೋವಿಂದ ಭಟ್ಟರ ಗರ್ಭಗುಡಿ ಕಟ್ಟಿಸಿದ ಕಾಳಪ್ಪ ಕೊಟ್ರಪ್ಪ ಪ್ಯಾಟಿ ಅವರ ಪುತ್ರ ಹಾಗೂ ಗುರುಗೋವಿಂದ ಭಟ್ಟರ ಗುಡಿ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖಪ್ಪ ಕಾಳಪ್ಪ ಪ್ಯಾಟಿಯವರು ಪ್ರತಿಕ್ರಿಯಿಸಿದ್ದು, “ಗುರು ಗೋವಿಂದ ಭಟ್ಟರ ವಂಶಾವಳಿಗೂ, ಮಹೇಶ್ ಜೋಷಿಯವರ ವಂಶಾವಳಿಗೂ ಸಂಬಂಧವಿಲ್ಲ. ಅವೆರಡೂ ಬೇರೆ ಬೇರೆ ವಂಶಾವಳಿಗಳು. ಗುರು ಗೋವಿಂದ ಭಟ್ಟರ ಬಗ್ಗೆ ನಮ್ಮ ಹಿರಿಯರಲ್ಲಿ ಗೊಂದಲಗಳಿವೆ. ಗೋವಿಂದ ಭಟ್ಟರಿಗೆ ಅಣ್ಣ, ತಮ್ಮ ಇದ್ದರೇ ಎಂಬ ಪ್ರಶ್ನೆಗಳಿತ್ತು. ಆದರೆ ಗೋವಿಂದ ಭಟ್ಟರಿಗೆ ಅಣ್ಣ, ತಮ್ಮ ಇರಲಿಲ್ಲ. ಅವರ ಸಂಬಂಧಿಕರು ಯಾರೂ ಕೂಡಾ ಇಲ್ಲ” ಎಂದಿದ್ದಾರೆ.

“ಮಹೇಶ ಜೋಶಿ ಮತ್ತು ಗುರು ಗೋವಿಂದ ಭಟ್ಟರು ಇಬ್ಬರೂ ಬ್ರಾಹ್ಮಣರೇ ಎಂಬುದನ್ನು ಹೊರತುಪಡಿಸಿದರೆ ಇವರಿಬ್ಬರಿಗೂ ಇನ್ನಾವುದೇ ಸಂಬಂಧವೂ ಇಲ್ಲ. ಅವರು ಭಟ್ಟರು, ಇವರು ಜೋಷಿ. ಭಟ್ಟರೇ ಬೇರೆ, ಜೋಷಿಯವರೇ ಬೇರೆ” ಎಂದು ಸ್ಪಷ್ಟಪಡಿಸಿದ್ದಾರೆ.

“ಮಹೇಶ್ ಜೋಷಿಯವರು ತಾನು ಗುರು ಗೋವಿಂದ ಭಟ್ಟರ ವಂಶಸ್ಥ ಎಂಬುದಕ್ಕೆ ದಾಖಲೆ ಕೊಡಬೇಕು. ಗುರು ಗೋವಿಂದ ಭಟ್ಟರ ವಂಶಸ್ಥರು ಯಾರೂ ಇಲ್ಲ. ಗುರು ಗೋವಿಂದ ಭಟ್ಟರ ವಂಶಸ್ಥರು ಯಾರೂ ಇಲ್ಲ ಎಂದೇ ನಾವು ತೀರ್ಮಾನಿಸಿರುವಾಗ ಈ ದೇವಸ್ಥಾನಕ್ಕೆ ಬಂದು ತಾನು ಗುರು ಗೋವಿಂದ ಭಟ್ಟರ ವಂಶಸ್ಥ ಎಂದು ಹೇಳುವವರು ದಾಖಲೆ ನೀಡಬೇಕಾಗುತ್ತದೆ” ಎಂದು ಒತ್ತಾಯಿಸಿದ್ದಾರೆ.

“ಗುರು ಗೋವಿಂದ ಭಟ್ಟರ ದೇವಸ್ಥಾನದಲ್ಲಿ ಈ ಹಿಂದೆ ಅವರ ವಂಶಸ್ಥರು ಪೂಜಾದಿಗಳನ್ನು ಮಾಡುತ್ತಿದ್ದರು. ಅವರ ವಂಶಸ್ಥರು ನಶಿಸಿ ಹೋದ್ದರಿಂದ ನಾವುಗಳು ಜೋಷಿ ಮನೆತನದವರನ್ನು ಕರೆದುಕೊಂಡು ಬಂದು ಅರ್ಚನೆ ಮಾಡುತ್ತಿದ್ದೇವೆ. ಈ ದೇವಸ್ಥಾನದ ಅರ್ಚಕರ ವಂಶಕ್ಕೂ ಮಹೇಶ್ ಜೋಷಿಗೂ ಸಂಬಂಧವಿದ್ದರೂ ಇರಬಹುದು. ಗುರುಗೋವಿಂದ ಭಟ್ಟರ ವಂಶಕ್ಕೂ ಮಹೇಶ್ ಜೋಷಿ ವಂಶಕ್ಕೂ ಸಂಬಂಧವಿಲ್ಲ” ಎಂದಿದ್ದಾರೆ.

ಗುರುಗೋವಿಂದ ಭಟ್ಟರ ಊರಾಗಿರುವ ಕಳಸ ಗ್ರಾಮದ ಹಿರಿಯ ಮುಖಂಡರೂ, ಗುರುಗೋವಿಂದ ಭಟ್ಟರ ದೇವಸ್ಥಾನ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಮಾತನಾಡುತ್ತಾ, “ಜೋಷಿಗೂ ಭಟ್ಟರಿಗೂ ಬ್ರಾಹ್ಮಣರು ಎಂಬುದನ್ನು ಹೊರತುಪಡಿಸಿದರೆ ಬೇರೆ ಸಂಬಂಧ ಇಲ್ಲ. ಗುರು ಗೋವಿಂದ ಭಟ್ಟರ ಮನೆತನದವರು ಯಾರೂ ಇಲ್ಲ. ಮಹೇಶ್ ಜೋಷಿ ಗುರು ಗೋವಿಂದ ಭಟ್ಟರ ಮನೆತನದವರಲ್ಲ. ಜೋಷಿ ಮನೆತನದವರು ಈ ದೇವಸ್ಥಾನದ ಪೂಜೆ ಮಾತ್ರ ಮಾಡುತ್ತಾರೆ. ಜೋಷಿ ಮನೆತನಕ್ಕೂ ನಮ್ಮ ಗುರುಗೋವಿಂದ ಭಟ್ಟ ದೇವಸ್ಥಾನಕ್ಕಾಗಲೀ, ಮನೆತನಕ್ಕಾಗಲೀ ಸಂಬಂಧವಿಲ್ಲ” ಎಂದು ತಿಳಿಸಿದ್ದಾರೆ.

ಈ ವರದಿಗೆ ಸಂಬಂಧಿಸಿದಂತೆ ಮಹೇಶ ಜೋಶಿಯವರ ಪ್ರತಿಕ್ರಿಯೆ ಪಡೆಯಲು ‘ನಾನುಗೌರಿ.ಕಾಂ’ ಪ್ರಯತ್ನಿಸಿತು. ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ. ಮುಸ್ಲಿಂ ಸಮುದಾಯವನ್ನು ಸಮ್ಮೇಳನದಿಂದ ಹೊರಗಿಟ್ಟಿರುವ ವಿವಾದ ಶುರುವಾದಾಗಿನಿಂದ ನಾಲ್ಕಾರು ಸಲ ಜೋಶಿಯವರಿಗೆ ಕರೆ ಮಾಡಲಾಗಿದ್ದು, ಈವರೆಗೆ ಒಂದಕ್ಕೂ ಪ್ರತಿಕ್ರಿಯೆ ನೀಡಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಪೆಂಡಾಲ್ ದೋಸಿಗೆ, ಗೋವಿಂದ ಬಟ್ಟರ ಲಿಂಕೂ ಸಿಗಲಿಲ್ಲವಾ? ಮನುವಾದಿಗಳು ಸುಮ್ಮನಾಗುವುದಿಲ್ಲ. ಬೇರೆ ಯಾವುದಾದರೂ ದಾರಿ ಹುಡುಕುತ್ತಾರೆ. ಸದ್ಯಕ್ಕೆ ಗೋವಿಂದ ಬಟ್ಟರು ಇವನಿಂದ ಬಚಾವಾದರಲ್ಲ. ಅದು ಕನ್ನಡಿಗರಿಗೆ ಸಮಾದಾನಕರ ಸಂಗತಿ.

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...