Homeಮುಖಪುಟರಾಷ್ಟ್ರಪತಿಗಳ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಕೇರಳ ಸರ್ಕಾರ

ರಾಷ್ಟ್ರಪತಿಗಳ ವಿರುದ್ಧ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಕೇರಳ ಸರ್ಕಾರ

- Advertisement -
- Advertisement -

ಕೇರಳ ಸರ್ಕಾರವು ಅಂಗೀಕರಿಸಿದ ನಾಲ್ಕು ಮಸೂದೆಗಳಿಗೆ ಒಪ್ಪಿಗೆಯನ್ನು ನೀಡಲು ಯಾವುದೇ ಕಾರಣವನ್ನು ನೀಡದೆ ತಡೆ ಹಿಡಿದಿದ್ದಕ್ಕಾಗಿ ಕೇರಳ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಸುಪ್ರೀಂಕೋರ್ಟ್‌ ಕದ ತಟ್ಟಿದೆ.

ಕೇರಳ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದ ಮಸೂದೆಗಳಿಗೆ ಅಂಕಿತ ನೀಡದೆ ಅನಿರ್ದಿಷ್ಟ ವಿಳಂಬ ಉಂಟು ಮಾಡಿ ನಂತರ ಅವುಗಳನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಿದ ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಅವರ ವಿರುದ್ಧವೂ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು.

ಯಾವುದೇ ಕಾರಣ ನೀಡದೆ ನಾಲ್ಕು ವಿಧೇಯಕಗಳಿಗೆ ಒಪ್ಪಿಗೆಯನ್ನು ತಡೆಹಿಡಿಯುವ ರಾಷ್ಟ್ರಪತಿಗಳ ಕಾರ್ಯವು ಅತ್ಯಂತ ನಿರಂಕುಶವಾಗಿದೆ. ನಾಲ್ಕು ಮಸೂದೆಗಳಿಗೆ ಯಾವುದೇ ಕಾರಣ ನೀಡದೆ ಅಂಗೀಕಾರ ತಡೆಹಿಡಿದಿರುವುದು ಸಂವಿಧಾನದ ವಿಧಿ 14, 200 ಮತ್ತು 201ರ ಉಲ್ಲಂಘನೆಯಾಗಿದೆ. ಒಟ್ಟು 7 ಮಸೂದೆಗಳನ್ನು ರಾಷ್ಟ್ರಪತಿಗಳಿಗೆ ಅಂಕಿತ ಹಾಕಲು ಕಳುಹಿಸಿಕೊಡಲಾಗಿತ್ತು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ರಾಷ್ಟ್ರಪತಿಗಳ ಕಾರ್ಯದರ್ಶಿ, ಕೇರಳ ರಾಜ್ಯಪಾಲ, ರಾಜ್ಯಪಾಲರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ಕೇರಳ ಸರ್ಕಾರ ಪರವಾಗಿ ಹಿರಿಯ ವಕೀಲ ಸಿ ಕೆ ಶಶಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಲಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ಪಾಸ್‌ ಆದ ಬಿಲ್‌ಗಳಿಗೆ ಅಂಕಿತ ಹಾಕದೆ ರಾಜ್ಯಪಾಲರು ಬಾಕಿಯಿಟ್ಟಿದ್ದಾರೆ ಎಂದು ಈ ಮೊದಲು ಪಿಣರಾಯಿ ವಿಜಯನ್ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. 8 ಮಸೂದೆಗಳನ್ನು ಅಂಗೀಕರಿಸದೆ ರಾಜ್ಯಪಾಲರು ನಿರ್ಲಕ್ಷ್ಯ ತೋರಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತರಲಾಗಿತ್ತು. ಇದಲ್ಲದೆ ಮಸೂದೆಗಳನ್ನು ವಿಲೇವಾರಿಗೆ ರಾಜ್ಯಪಾಲರಿಗೆ ಕಾಲಮಿತಿಯನ್ನು ನಿಗದಿಪಡಿಸಲು ನಿರಾಕರಿಸಿದ ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ಕೂಡ ಮೇಲ್ಮನವಿ ಸಲ್ಲಿಸಲಾಗಿತ್ತು. ನವೆಂಬರ್ 2ರಂದು ಸಲ್ಲಿಸಲಾದ ಅರ್ಜಿಯಲ್ಲಿ ರಾಜ್ಯಪಾಲರು ಸಂವಿಧಾನವನ್ನು ಉಲ್ಲಂಘನೆ ಮಾಡಿದ್ದಾರೆ ಮತ್ತು ಅನಿರ್ದಿಷ್ಟ ಅವಧಿಗೆ ಮಸೂದೆಗಳಿಗೆ ಅಂಕಿತ ಹಾಕದೆ ನಿರಂಕುಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಕೇರಳ ಸರಕಾರ ಹೇಳಿತ್ತು.

ಕೇರಳ ವಿಧಾನಸಭೆಯಲ್ಲಿ ಅಂಗೀಕಾರವಾದ ಬಿಲ್‌ಗಳನ್ನು ಅಂಕಿತ ಹಾಕದೆ ವಿಳಂಬ ಮಾಡಿರುವ ಬಗ್ಗೆ ಕೇರಳ  ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಮಸೂದೆಗಳನ್ನು ಬಾಕಿ ಇರಿಸಿಕೊಳ್ಳಲು ರಾಜ್ಯಪಾಲರು ಯಾವುದೇ ಕಾರಣವನ್ನು ನೀಡಿಲ್ಲ. ಶಾಸಕಾಂಗ ಅಂಗೀಕರಿಸಿದ ಬಿಲ್‌ಗಳನ್ನು ತಡೆಯಲು ರಾಜ್ಯಪಾಲರು ತಮ್ಮ ಅಧಿಕಾರವನ್ನು ಬಳಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದರು.

ಕೇರಳ ಸರ್ಕಾರದ ಅರ್ಜಿಯನ್ನು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳುವ ಒಂದು ದಿನ ಮುಂಚಿತವಾಗಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು 8 ಬಾಕಿ ಉಳಿದಿರುವ ಮಸೂದೆಗಳಲ್ಲಿ 7ನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕಳುಹಿಸಿದ್ದರು. ಸುಮಾರು 3 ವರ್ಷಗಳಿಂದ ಮಸೂದೆಗಳು ಅಂಕಿತ ಹಾಕದೆ ಬಾಕಿ ಉಳಿದಿತ್ತು. ಲೋಕಾಯುಕ್ತ ತಿದ್ದುಪಡಿ ಮಸೂದೆ, ವಿಶ್ವವಿದ್ಯಾಲಯ ಕಾನೂನು ತಿದ್ದುಪಡಿಗಳ ಮಸೂದೆ-2022 ಮತ್ತು ಅಸ್ತಿತ್ವದಲ್ಲಿರುವ ವಿಶ್ವವಿದ್ಯಾನಿಲಯ ಕಾಯಿದೆಗೆ ತಿದ್ದುಪಡಿ ತರುವ ಕುರಿತ ಮಸೂದೆಯನ್ನು ರಾಷ್ಟ್ರಪತಿಗೆ ಕಳುಹಿಸಿದ್ದರು.

ಮಸೂದೆಗಳನ್ನು ಬಾಕಿ ಉಳಿಸಿಕೊಳ್ಳುವ ಬದಲು ಏನಾದರೂ ಆಕ್ಷೇಪಾರ್ಹವೆಂದು ಕಂಡು ಬಂದರೆ ಅವುಗಳನ್ನು ಹಿಂದಕ್ಕೆ ಕಳುಹಿಸಬೇಕು ಎಂದು ಈ ಮೊದಲು ಸುಪ್ರೀಂಕೋರ್ಟ್‌ ಹೇಳಿತ್ತು. ಪಂಜಾಬ್ ಸರ್ಕಾರವು  ರಾಜ್ಯಪಾಲರ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆಯ ವೇಳೆ ಕೇರಳ ರಾಜ್ಯಪಾಲರು ಕೂಡ ಈ ಕುರಿತ ತೀರ್ಪನ್ನು ಓದುವಂತೆ ಸೂಚಿಸಿದ್ದರು.

ಇದನ್ನು ಓದಿ: ಲೋಕಸಭೆ ಚನಾವಣೆ: ಪ್ರತಿಪಕ್ಷಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ತಡೆಯಲು ಬಿಜೆಪಿಯಿಂದ ಪ್ರಯತ್ನ?

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...