ಖೈರ್ಲಾಂಜಿ ದಲಿತರ ಅತ್ಯಾಚಾರ ಮತ್ತು ಕೊಲೆ ಪ್ರಕರಣ : ನ್ಯಾಯಾಲಯ ನಡೆದುಕೊಂಡಿದ್ದಾದರೂ ಹೇಗೆ?

ಬಹುತೇಕ ದಲಿತರನ್ನು ಈಡು ಮಾಡಲಾಗಿರುವ ಅಮಾನುಷವಾದ ಪರಿಸ್ಥಿತಿಯ ಬದುಕಿನಿಂದ ಹೊರಬರಲು ಪ್ರಯತ್ನ ನಡೆಸಿದ್ದೇ ಭೋತ್‌ಮಾಂಗೆ ಕುಟುಂಬ ಎಸಗಿದ ಏಕೈಕ ‘ಅಪರಾಧ’ವಾಗಿತ್ತು. ಅದಕ್ಕೆ ಪ್ರತೀಕಾರ: ರೇಪ್, ಚಿತ್ರಹಿಂಸೆ ಮತ್ತು ಕಗ್ಗೊಲೆ.

0
8
ಖೈರ್ಲಾಂಜಿ ಪ್ರಕರಣದ ಅಪರಾಧಿಗಳು

2006ರ ಸೆಪ್ಟೆಂಬರ್ 29ರಂದು ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಖೈರ್ಲಾಂಜಿ ಹಳ್ಳಿಯಲ್ಲಿ ದಲಿತ ಕುಟುಂಬವೊಂದರ ನಾಲ್ಕು ಮಂದಿಯ ಮೇಲೆ ಅಮಾನುಷವಾಗಿ ಹಲ್ಲೆಯೆಸಗಿ ಅವರನ್ನು ಕೊಲೆ ಮಾಡಲಾಯಿತು. ಅವರೆಂದರೆ ತಾಯಿ, 45 ವರ್ಷದ ಸುರೇಖಾ ಭೋತ್‌ಮಾಂಗೆ, ಮಕ್ಕಳು 21 ವರ್ಷದ ಸುಧೀರ್ ಭಯ್ಯಾಲಾಲ್ ಭೋತ್‌ಮಾಂಗೆ, 19 ವರ್ಷದ ರೋಶನ್ ಭಯ್ಯಾಲಾಲ್ ಭೋತ್‌ಮಾಂಗೆ ಹಾಗೂ ಮಗಳು 17 ವರ್ಷದ ಪ್ರಿಯಾಂಕಾ ಭಯ್ಯಾಲಾಲ್ ಭೋತ್‌ಮಾಂಗೆ.

ಅವರೆಲ್ಲರನ್ನೂ ಅವರ ಗುಡಿಸಲಿನಿಂದ ಹೊರಗೆಳೆದು, ಬೆತ್ತಲೆ ಮಾಡಿ ಎತ್ತಿನ ಬಂಡಿಯೊಂದರ ಮೇಲೆ ಕಟ್ಟಿಹಾಕಿ ಊರೆಲ್ಲಾ ಮೆರವಣಿಗೆ ಮಾಡಲಾಯಿತು. ನಂತರ ಅವರ ಮೇಲೆ ಚಿತ್ರಹಿಂಸೆ, ಇಬ್ಬರು ಮಹಿಳೆಯರ ಮೇಲೂ ಲೈಂಗಿಕ ಅತ್ಯಾಚಾರ ಮತ್ತು ನಾಲ್ಕೂ ಜನರ ಕೊಲೆ ಸರಣಿಯಂತೆ ನಡೆಯಿತು. ಮಹಿಳೆಯರನ್ನೂ ಒಳಗೊಂಡಂತೆ ಸುಮಾರು 70 ಮಂದಿಯಿದ್ದ ಬಲಿಷ್ಠ ಜಾತಿಯವರು ಈ ಕಗ್ಗೊಲೆಗಳಲ್ಲಿ ಪಾಲ್ಗೊಂಡರು. ಇಡೀ ಹಳ್ಳಿಯ ಕಣ್ಮುಂದೆ ಹಾಡೇಹಗಲು ನಡೆದ ಈ ಘೋರ ಪಾತಕದ ಬಳಿಕ ಮೃತದೇಹಗಳನ್ನು ಸಮೀಪದ ನಾಲೆಯಲ್ಲಿ ಎಸೆಯಲಾಯಿತು. ನಂತರ ಹಳ್ಳಿಯಲ್ಲಿ ಸಭೆ ನಡೆಸಿ, ಯಾರೂ ಈ ಪ್ರಕರಣದ ಬಗ್ಗೆ ಹೊರಗಿನ ಯಾರೊಂದಿಗೂ ತುಟಿ ಪಿಟಕ್ಕೆನ್ನಬಾರದು ಎಂದು ತಾಕೀತು ಮಾಡಲಾಯಿತು.

ಆ ಕುಟುಂಬದ ಹಿರಿಯರಾದ ಭಯ್ಯಾಲಾಲ್ ಆ ಸಮಯದಲ್ಲಿ ಮನೆಯಲ್ಲಿ ಇರದಿದ್ದರಿಂದ ಅವರೊಬ್ಬರು ಮಾತ್ರ ಉಳಿದುಕೊಂಡರು. ಹಿಂಸೆಯಲ್ಲಿ ನಿರತವಾಗಿದ್ದ ಗುಂಪಿನ ಕಣ್ಣು ತಪ್ಪಿಸಿ ಮರೆಯಲ್ಲಿ ಇದ್ದುಕೊಂಡೇ ಅವರು ಇಡೀ ಘಟನೆಯನ್ನು ಅಸಹಾಯಕರಾಗಿ ನೋಡಿದರು, ಆನಂತರ ಹೇಗೋ ಮಾಡಿ ಪೊಲೀಸ್ ಠಾಣೆಗೆ ತಲುಪಿ ಅವರಿಗೆ ತಿಳಿಸಿದರು. ಆದರೆ ಪೊಲೀಸರು ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದು ಮಾತ್ರ ಮಾರನೆಯ ದಿನ ಜರ್ಝರಿತವಾದ ಮೃತದೇಹಗಳು ದೊರೆತ ನಂತರವೇ.

ನಾಗಪುರದಿಂದ 120 ಕಿಲೋಮೀಟರ್ ದೂರವಿರುವ ಖೈರ್ಲಾಂಜಿಯಲ್ಲಿ 181 ಕುಟುಂಬಗಳಿವೆ, ಸುಮಾರು 700 ಜನಸಂಖ್ಯೆಯಿದೆ. ಅವುಗಳಲ್ಲಿ ಮೂರು ಮಾತ್ರ ದಲಿತ ಕುಟುಂಬಗಳು. ಅದರಲ್ಲಿ ಭೋತ್‌ಮಾಂಗೆ ಕುಟುಂಬವೂ ಒಂದು. ಮಹಾರಾಷ್ಟ್ರದಲ್ಲಿ ‘ಇತರ ಹಿಂದುಳಿದ ವರ್ಗಗಳು’ ಎಂದು ವರ್ಗೀಕರಿಸಲಾಗಿರುವ ಕುಣಬಿ ಮತ್ತು ಕಾಲಾರ್ ಜಾತಿಗಳು ಖೈರ್ಲಾಂಜಿಯ ಪ್ರಬಲ ಜಾತಿಗಳು.

ಇದನ್ನೂ ಓದಿ: ಅತ್ಯಾಚಾರವನ್ನು ತಡೆಗಟ್ಟಲು ಸಾಧ್ಯ! ತಡೆಗಟ್ಟಲೇಬೇಕು! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ…

ಭೋತ್‌ಮಾಂಗೆ ಕುಟುಂಬದ ಮೇಲೆ ಎಸಗಲಾದ ಅಮಾನುಷ ದಾಳಿ ಆಕಸ್ಮಿಕವಾಗಿ ನಡೆದುದೇನೂ ಅಲ್ಲ. ಸುಮಾರು 20 ವರ್ಷಗಳಿಂದಲೂ ಈ ಕುಟುಂಬಕ್ಕೆ ಕಿರುಕುಳ ನೀಡುತ್ತಾ ಬರಲಾಗಿತ್ತು. ಭಾರತದ ಬಹಳಷ್ಟು ದಲಿತ ಕುಟುಂಬಗಳ ಸ್ಥಿತಿಗೆ ವಿರುದ್ಧವಾಗಿ ಭೋತ್‌ಮಾಂಗೆ ಕುಟುಂಬದ ಸ್ಥಿತಿ ಆ ಹಳ್ಳಿಯಲ್ಲಿನ ಪ್ರಬಲ ಜಾತಿಗಳ ಕೆಲವು ಕುಟುಂಬಗಳಿಗಿಂತಲೂ ಉತ್ತಮವಾಗಿತ್ತು. ಅವರು ತಮ್ಮ ಮೂವರು ಮಕ್ಕಳನ್ನೂ ವಿದ್ಯಾವಂತರಾಗಿ ಮಾಡುವ ಧಾಷ್ಟ್ಯ ತೋರಿದ್ದರು; ಅವರೊಂದು ಪಕ್ಕಾ ಮನೆ ನಿರ್ಮಿಸಲು ಬಯಸಿದ್ದರು. ಇದನ್ನು ಪ್ರಬಲ ಜಾತಿಗಳು ಭೋತ್‌ಮಾಂಗೆಗಳ ಉದ್ಧಟತನವೆಂದೇ ಬಗೆದರು.

ಗ್ರಾಮ ಪಂಚಾಯಿತಿಯು ಭಯ್ಯಾಲಾಲ್‌ಗೆ ಮನೆ ಕಟ್ಟುವ ಅವಕಾಶ ನಿರಾಕರಿಸುವ ಸಲುವಾಗಿ ಅವರ ಹೆಸರನ್ನು ಗ್ರಾಮದ ಕಂದಾಯ ದಾಖಲೆಗಳಲ್ಲಿ ಸೇರ್ಪಡೆಗೊಳಿಸಲು ಸತತವಾಗಿ ನಿರಾಕರಿಸುತ್ತಾ ಬಂದಿತ್ತು. ಅವರು ಮನೆ ಕಟ್ಟಲು ಆರಂಭಿಸಿದಾಗೆಲ್ಲಾ ಅದನ್ನು ಬಲಾತ್ಕಾರವಾಗಿ ನೆಲಸಮ ಮಾಡಿ ಅವರಿಗೆ ತೀವ್ರ ಪರಿಣಾಮದ ಎಚ್ಚರಿಕೆ ನೀಡಲಾಗುತ್ತಿತ್ತು. ಇದರ ಫಲವಾಗಿ ಅವರು ತಟಿಕೆ ಗೋಡೆಯ ಗುಡಿಸಲಲ್ಲೇ ಜೀವಿಸಬೇಕಾಗಿತ್ತು. ಇಲ್ಲಿ ಯಾರಾದರೂ ಪಕ್ಕಾ ಮನೆ ನಿರ್ಮಿಸಿಕೊಳ್ಳುವುದು ಬಿಡುವುದು ಅವರ ಆರ್ಥಿಕ ಸ್ಥಿತಿಗತಿಯನ್ನು ಅವಲಂಬಿಸಿರಲಿಲ್ಲ, ಬದಲಿಗೆ ಜಾತಿಯನ್ನಾಧರಿಸಿದ ಅವರ ಸಾಮಾಜಿಕ ಸ್ಥಾನಮಾನವು ಇದರಲ್ಲಿ ನಿರ್ಣಾಯಕ ವಿಚಾರವಾಗಿತ್ತು.

ಭೋತ್‌ಮಾಂಗೆ ಕುಟುಂಬಕ್ಕೆ ಈ ಹಿಂದೆ ಏಳು ಎಕರೆ ಜಮೀನಿತ್ತು, ಅದರಲ್ಲಿ ಅವರು ಭತ್ತ ಮತ್ತು ಹತ್ತಿ ಬೆಳೆಯುತ್ತಿದ್ದರು. ಆದರೆ 1996ರಲ್ಲಿ ಅದರಲ್ಲಿ ಎರಡು ಎಕರೆಯನ್ನು ಪ್ರಬಲ ಜಾತಿಗಳ ರೈತರು ರಸ್ತೆ ನಿರ್ಮಾಣಕ್ಕಾಗಿ ಆಕ್ರಮಿಸಿಕೊಂಡಿದ್ದರು.

ಭಯ್ಯಾಲಾಲ್ ಕುಟುಂಬದ ಮೇಲೆ ನಡೆದ ಈ ದೌರ್ಜನ್ಯಕ್ಕೆ ಕಾರಣವಾದುದೂ ಒಂದು ದೌರ್ಜನ್ಯದ ಘಟನೆಯೇ. ಹತ್ತಿರದ ಹಳ್ಳಿಯ ಪೊಲೀಸ್ ಪಾಟೀಲನಾಗಿದ್ದ ದಲಿತ ವ್ಯಕ್ತಿ ಸಿದ್ಧಾರ್ಥ ಗಜಭಿಯೆ ಎಂಬವರ ಮೇಲೆ ಖೈರ್ಲಾಂಜಿಯ ಕೆಲವರು 2006ರ ಸೆಪ್ಟೆಂಬರ್ 3ರಂದು ಹಲ್ಲೆ ನಡೆಸಿ ಥಳಿಸಿದ್ದನ್ನು ಭೋತ್‌ಮಾಂಗೆ ಕುಟುಂಬದವರು ಖುದ್ದು ನೋಡಿದ್ದರು; ದೇಶದ ಜವಾಬ್ದಾರಿಯುತ ನಾಗರಿಕರಾಗಿ ಅವರು ಪೊಲೀಸರ ಮುಂದೆ ಸಾಕ್ಷಿ ಹೇಳಿದ್ದರಿಂದ ಹಳ್ಳಿಯ ಕೆಲ ಮಂದಿ ಪ್ರಬಲ ಜಾತಿಯವರು ಬಂಧನಕ್ಕೆ ಒಳಗಾಗುವಂತಾಯಿತು. ಅವರೆಲ್ಲ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತರ ಊರವರು ಸೇರಿ ‘ನಮ್ಮ ಅಥಾರಿಟಿಯನ್ನು ಉಲ್ಲಂಘಿಸಿದ ದಲಿತರಿಗೆ ಸರಿಯಾದ ಪಾಠ ಕಲಿಸಲು’ ತೀರ್ಮಾನಿಸಿದರು.

ಇಂತಹ ಪ್ರತೀಕಾರ ದಾಳಿ ಖಂಡಿತಾ ನಡೆಯುವುದೆಂದು ಪೊಲೀಸರಿಗೆ ಗೊತ್ತೇ ಇತ್ತು, ಆದರೂ ಅವರು ಅದನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕೊಲೆಗಳು ನಡೆದ ನಂತರವೂ ಹತ್ತಿರದ ಠಾಣೆಯ ಕಾನ್‌ಸ್ಟೇಬಲ್‌ಗಳೊಂದಿಗೆ ಹಳ್ಳಿಗೆ ಬಂದ ಇನ್‌ಸ್ಪೆಕ್ಟರ್ ಊರೊಳಗೂ ಬರದೆ ಊರ ಹೊರಗಡೆಯೇ ಸರಪಂಚನ ಜೊತೆ ಮಾತಾಡಿ ವಾಪಸ್ ಹೊರಟುಹೋದ. ಭಯ್ಯಾಲಾಲ್ ದೂರು ದಾಖಲಿಸಲು ಠಾಣೆಗೆ ಹೋದರೆ ಪೊಲೀಸರು ಮೊದಲು ದೂರು ದಾಖಲಿಸಲು ಒಪ್ಪಲಿಲ್ಲ. ಮಾರನೆಯ ದಿನ ಮೃತದೇಹಗಳು ದೊರೆತ ನಂತರವಷ್ಟೇ ದೂರು ದಾಖಲಿಸಿಕೊಂಡಿದ್ದು.

ವೈದ್ಯಕೀಯ ಇಲಾಖೆ ಸಿಬ್ಬಂದಿಯ ಧೋರಣೆ ಕೂಡ ನಿಷ್ಕರುಣೆ, ನಿರ್ಲಕ್ಷ್ಯದ್ದೇ ಆಗಿತ್ತು. ಪ್ರಿಯಾಂಕ ಮತ್ತು ಸುರೇಖಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತಾದರೂ, ವೈದ್ಯಾಧಿಕಾರಿಯು ಅವರ ಲೈಂಗಿಕ ಪರೀಕ್ಷೆ ನಡೆಸದೆಯೇ, ಅವರ ದೇಹದ ಮೇಲೆ ಉಂಟಾದ ಗಾಯಗಳು ಮತ್ತು ಟ್ರಾಮಾದಿಂದಾಗಿ ಮರಣ ಸಂಭವಿಸಿದೆ ಎಂದು ವರದಿ ನೀಡಿದ. ಪೊಲೀಸರು ಲಿಖಿತ ಕೋರಿಕೆ ಸಲ್ಲಿಸಿದ್ದರೂ ಅವರುಗಳ ರಕ್ತದ ಮಾದರಿ ತೆಗೆದುಕೊಳ್ಳಲಿಲ್ಲ.

ವಾಸ್ತವವಾಗಿ ಸುರೇಖಾರ ತಲೆಯ ಮೇಲೆ ದೊಡ್ಡದಾದ ಸೀಳುಗಾಯ ಇದ್ದರೂ ಅದನ್ನು ಪೋಸ್ಟ್ಮಾರ್ಟಮ್ ವರದಿಯಲ್ಲಿ ಹೇಳಿಲ್ಲ. ಸೆಪ್ಟೆಂಬರ್ 30ರಂದು ನೀಡಿದ್ದ ಮೊದಲನೆಯ ಪೋಸ್ಟ್ಮಾರ್ಟಮ್ ವರದಿಯಲ್ಲಿ ರೇಪ್ ನಡೆದೇ ಇಲ್ಲ ಎಂದು ಹೇಳಲಾಗಿತ್ತು. ಆದರೆ ದಲಿತ ಸಂಘಟನೆಗಳು ಮತ್ತಿತರ ಕಾರ್ಯಕರ್ತರು ಒತ್ತಡ ಹಾಕಿದ ಪರಿಣಾಮವಾಗಿ ನಂತರ ಶವಗಳನ್ನು ಹೊರತೆಗೆದು 2006ರ ಅಕ್ಟೋಬರ್ 5ರಂದು ಪುನಃ ಪೋಸ್ಟ್ಮಾರ್ಟಮ್ ಮಾಡಲಾಯಿತು. ಈ ಬಾರಿ ಕೂಡ ಅವರು ಆ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಕುರಿತಂತೆ ಅತ್ಯಂತ ಅಸ್ಪಷ್ಟವೂ, ಜಾರಿಕೆಯದೂ ಆದ ವರದಿ ನೀಡಿದರು ಹಾಗೂ ಎಫ್‌ಐಆರ್‌ನಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಉಲ್ಲೇಖವನ್ನೇ ಮಾಡಲಿಲ್ಲ.

ಅಂತಿಮವಾಗಿ ಈ ಪ್ರಕರಣದ ಬಗ್ಗೆ ಭಂಡಾರಾದ ತ್ವರಿತ ವಿಚಾರಣೆಯ ಸೆಶನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. 2008ರ ಸೆಪ್ಟೆಂಬರ್ 15ರಂದು ಹೊರಬಿದ್ದ ಅದರ ತೀರ್ಪು 11 ಮಂದಿ ಆರೋಪಿಗಳ ಪೈಕಿ 8 ಮಂದಿಯನ್ನು ಕೊಲೆಯ ಅಪರಾಧಿಗಳೆಂದು ಘೋಷಿಸಿ ಮಿಕ್ಕ ಮೂವರನ್ನು ಖುಲಾಸೆ ಮಾಡಿತು. ಆ ಎಂಟು ಮಂದಿಯಲ್ಲಿ ಆರು ಮಂದಿಗೆ ಮರಣದಂಡನೆಯನ್ನೂ, ಇಬ್ಬರಿಗೆ ಆಜೀವ ಜೈಲು ಶಿಕ್ಷೆಯನ್ನೂ ವಿಧಿಸಿತು.

“ಖೈರ್ಲಾಂಜಿ ಪ್ರಕರಣವು ಈ ಮೊದಲು ಹತ್ತಿರದ ಹಳ್ಳಿಯೊಂದರ ಪೊಲೀಸ್ ಪಾಟೀಲನ ಮೇಲೆ ನಡೆದ ಹಲ್ಲೆಯ ಘಟನೆಯಿಂದ ಪ್ರೇರಿತವಾದ ಪ್ರತೀಕಾರದ ಕೊಲೆ” ಎಂದು ತೀರ್ಪು ಸ್ಪಷ್ಟವಾಗಿ ಹೇಳಿತು. ಈ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟುಗಳ (ದೌರ್ಜನ್ಯ ನಿಗ್ರಹ) ಕಾಯ್ದೆ 1989ರ (PoA Act) ವಿಧಿಗಳನ್ನು ಅನ್ವಯಿಸುವುದಕ್ಕೆ ಆಧಾರವಿದೆಯೆಂದು ಆ ನ್ಯಾಯಾಧೀಶನಿಗೆ ಅನ್ನಿಸಲೇ ಇಲ್ಲ. ಈ ಕಾಯ್ದೆ ಕ್ರಾಂತಿಕಾರಕವಾದುದು ಎನ್ನಲಾಗಿದ್ದರೂ ಅದರ ನಿಜವಾದ ಆಶಯಕ್ಕೆ ಅನುಗುಣವಾಗಿ ಅದನ್ನು ಅನ್ವಯಿಸಿರುವುದು ತೀರಾ ಅಪರೂಪ.

ಸುರೇಖಾ ಮತ್ತು ಪ್ರಿಯಾಂಕಾ ಭೋತ್‌ಮಾಂಗೆಯವರ ಮೇಲೆ ಸಾಮೂಹಿಕ ಲೈಂಗಿಕ ಅತ್ಯಾಚಾರ ನಡೆಸಿದ್ದು ಮಾತ್ರವಲ್ಲ, ಅವರಿಗೆ ತೀರಾ ಘೋರ ರೀತಿಯಲ್ಲಿ ಚಿತ್ರಹಿಂಸೆ ಕೂಡ ನೀಡಲಾಗಿದೆ (ಎತ್ತಿನ ಬಂಡಿಯ ಚಕ್ರದ ಅರೆಗಳನ್ನು ಅವರ ಯೋನಿಯೊಳಗೆ ತೂರಿ ಹಿಂಸಿಸಲಾಗಿತ್ತು, ಇತ್ಯಾದಿ) ಎಂಬುದನ್ನು 2006ರ ಅಕ್ಟೋಬರ್-ನವೆಂಬರಿನಲ್ಲಿ ನಡೆಸಲಾದ ಹಲವು ಸ್ವತಂತ್ರ ಸತ್ಯಶೋಧನಾ ವರದಿಗಳು ನಿಚ್ಚಳವಾಗಿ ಸಾಬೀತು ಮಾಡಿದ್ದರು. ಆದರೂ ಸಹ, ‘ಮಹಿಳೆಯ ಘನತೆಗೆ ಕುಂದುಂಟುಮಾಡುವ ಉದ್ದೇಶದೊಂದಿಗೆ ಹಲ್ಲೆ ಅಥವಾ ಬಲಪ್ರಯೋಗ’ಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ 354, ರೇಪ್ ಮತ್ತು ಅದರ ಶಿಕ್ಷೆಗೆ ಸಂಬಂಧಿಸಿದ ಸೆಕ್ಷನ್ 375 ಮತ್ತು 376 ಇವುಗಳನ್ನು ಆ ನ್ಯಾಯಾಧೀಶ ಈ ಪ್ರಕರಣದಲ್ಲಿ ಅನ್ವಯಿಸಲಿಲ್ಲ. ಹಾಗೆಯೇ, ಕ್ರಿಮಿನಲ್ ಒಳಸಂಚು ಹಾಗೂ ಅದಕ್ಕೆ ಸೂಕ್ತ ಶಿಕ್ಷೆಗೆ ಸಂಬಂಧಿಸಿದ ಸೆಕ್ಷನ್ 120 ಎ ಮತ್ತು 120 ಬಿ ಇವುಗಳನ್ನೂ ಬಳಸಲಿಲ್ಲ. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಜಾತಿ ದ್ವೇಷ, ಲೈಂಗಿಕ ಹಿಂಸೆ ಮತ್ತು ಕ್ರಿಮಿನಲ್ ಒಳಸಂಚಿನ ಅಂಶವನ್ನೂ ಅಲ್ಲಗಳೆದು, ಅದು ಕೇವಲ ಪ್ರತೀಕಾರದ ಕೊಲೆ ಎಂದು ತೀರ್ಪು ನೀಡಿದ.

ಇದನ್ನೂ ಓದಿ: ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ನಿರ್ಭಯ ಪ್ರಕರಣದ ನಂತರ ನ್ಯಾ. ವರ್ಮಾ ಸಮಿತಿ ವರದಿ ಏನು ಹೇಳುತ್ತದೆ?

ಈ ಪ್ರಕರಣದಲ್ಲಿ ಬಲಿಪಶುಗಳು ದಲಿತರಾಗಿದ್ದರು, ದೌರ್ಜನ್ಯಕೋರರು ಮೇಲ್ಜಾತಿಯವರು. ಜಾತಿಗೆ ಸಂಬಂಧಿಸಿದ ನಿರ್ದಿಷ್ಟವಾದ ನಿಂದನೆಯ ಮಾತುಗಳನ್ನು ಅವರು ಕಗ್ಗೊಲೆಯ ಸಂದರ್ಭದಲ್ಲಿ ಬಲಿಪಶುಗಳ ವಿರುದ್ಧ ಮನಸ್ವಿಯಾಗಿ ಬಳಸಿದ್ದರು. ದೇಶದ ಕಾಯ್ದೆಯು ಪ್ರಭುತ್ವದ ಸಂಸ್ಥೆಗಳಿಗೆ ಇಂತಹ ಜಾತಿ ಆಧಾರಿತ ಅಪರಾಧಗಳನ್ನು ಎಸಗುವವರನ್ನು ಶಿಕ್ಷಿಸಲೆಂದೇ PoA Act ಎಂಬ ವಿಶೇಷವಾದ ಸಾಧನವನ್ನು ನೀಡಿದೆ; ಇಷ್ಟಾಗಿಯೂ ಅವುಗಳನ್ನು ಈ ಪ್ರಕರಣದಲ್ಲಿ ಅನ್ವಯಿಸಬಹುದಾದ ಯಾವುದೇ ಕಾರಣವೂ ನ್ಯಾಯಾಲಯಕ್ಕೆ ಕಂಡುಬರಲಿಲ್ಲ. ಅದು ಅಪರಾಧದ ಹಿನ್ನೆಲೆಯಲ್ಲಿದ್ದ ಜಾತಿ ವಿಚಾರವನ್ನು ಕಡೆಗಣಿಸಿ ಅದಕ್ಕಿಂತಲೂ ಹೆಚ್ಚು ‘ಜಾತ್ಯತೀತ’ವಾದ ಕಾರಣವನ್ನು ಮುಂದೆ ಮಾಡಿತು: ‘ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಗಳು ಸಿದ್ಧಾರ್ಥ ಗಜಭಿಯೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸುರೇಖಾ ಮತ್ತು ಪ್ರಿಯಾಂಕಾ ನೀಡಿದ ಸಾಕ್ಷ್ಯದಿಂದಾಗಿಯೇ ತಮ್ಮ ಬಂಧನವಾಗಿತ್ತೆಂದು ಬಹಳ ವ್ಯಗ್ರರಾಗಿದ್ದರು’ ಎಂದು ತೀರ್ಪು ಹೇಳುತ್ತದೆ.

ಖೈರ್ಲಾಂಜಿ ಕೊಲೆ ಪ್ರಕರಣದ ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಹನ್ನೊಂದು ಜನರೂ ಗಜಭಿಯೆ ಹಲ್ಲೆ ಪ್ರಕರಣದಲ್ಲೂ ಆರೋಪಿಗಳಾಗಿದ್ದವರೇ. ಇದೊಂದು ಪ್ರತೀಕಾರದ ಕೊಲೆ ಮಾತ್ರವೆಂದು ನಿರ್ಣಯಕ್ಕೆ ಬಂದ ಬಳಿಕ ನ್ಯಾಯಾಧೀಶ ಅವರುಗಳನ್ನು ಐಪಿಸಿ ಸೆಕ್ಷನ್ 302, 148, 149, 201ರ ಅನ್ವಯ (ದೊಂಬಿ, ಮಾರಕ ಆಯುಧಗಳ ಬಳಕೆ, ಅಕ್ರಮ ಕೂಟ ಸೇರಿ ನಡೆಸುವ ಸಮಾನ ಉದ್ದೇಶದ ಅಪರಾಧದಲ್ಲಿ ಕೂಟದ ಪ್ರತಿಯೊಬ್ಬ ಸದಸ್ಯನೂ ಅಪರಾಧಿ ಎಂಬ ನಿಯಮ ಹಾಗೂ ಸಾಕ್ಷ್ಯ ಗಳ ನಾಶ ಅಥವಾ ಅಪರಾಧಿಗಳನ್ನು ರಕ್ಷಿಸಲೆಂದು ಸುಳ್ಳು ಸಾಕ್ಷ್ಯ ನೀಡುವುದು) ಕೊಲೆ ಅಪರಾಧಕ್ಕಾಗಿ ಶಿಕ್ಷೆ ವಿಧಿಸಿದ. 354ನೇ ವಿಧಿಯನ್ವಯದ ಆರೋಪಗಳನ್ನು ಕುರಿತಂತೆ, ‘ಇಬ್ಬರು ಮಹಿಳೆಯರನ್ನೂ ಕೊಲೆಗೆ ಮೊದಲು ಅಥವಾ ಕೊಲೆಯ ನಂತರ ವಿವಸ್ತ್ರಗೊಳಿಸಲಾಗಿತ್ತು ಎಂಬುದನ್ನು ನಿಸ್ಸಂದೇಹವಾಗಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ’ ಎಂದು ಆತ ಹೇಳಿದ.

ಜಾತ್ಯಾಧಾರಿತ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನೂ ನಾಶಪಡಿಸಲು ಪ್ರಾಸಿಕ್ಯೂಶನ್ನು ಶಕ್ತಿಮೀರಿ ಶ್ರಮಿಸಿತು ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟುಗಳ ಕಾಯ್ದೆಯನ್ನು ಅನ್ವಯಿಸಲಿಲ್ಲ ಎನ್ನುವುದು ಜಾತಿಯ ವ್ಯವಸ್ಥಿತವಾದ ಹಾಗೂ ಸಾಂಸ್ಥೀಕೃತ ಸ್ವರೂಪವನ್ನು ತೋರಿಸುತ್ತದೆ. ಮೇಲಾಗಿ ಈ ಕಗ್ಗೊಲೆಯು ಪೂರ್ಣವಾಗಿ ಸಾರ್ವಜನಿಕರ ಎದುರೇ, ಯಾವುದೇ ಪ್ರತಿರೋಧವೂ ಇಲ್ಲದೆ ರಾಜಾರೋಷವಾಗಿ ನಡೆದುದು ಜಾತಿ ಸಿದ್ಧಾಂತವು ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಸೂಚಿಸುತ್ತದೆ. ಘಟನೆಯ ಪ್ರೇಕ್ಷಕರನ್ನು ಸಹ ಅಪರಾಧದಲ್ಲಿ ಸಹಭಾಗಿಗಳೆಂದು ಪ್ರಾಸಿಕ್ಯೂಶನ್ನು ಪರಿಗಣಿಸದಿರುವುದು ಪ್ರಭುತ್ವ ಸಂಸ್ಥೆಗಳು ಜಾತ್ಯಾಧಾರಿತ ದೌರ್ಜನ್ಯಗಳನ್ನು ಹೇಗೆ ಸಹಜವೆಂಬಂತೆ ಸಹಿಸಿಕೊಳ್ಳುತ್ತವೆ ಎಂಬುದನ್ನು ಬಯಲುಗೊಳಿಸುತ್ತದೆ.

ಅಪರಾಧಿಗಳಿಗೆ ಸೆಶನ್ಸ್ ಕೋರ್ಟು ಮರಣದಂಡನೆ ವಿಧಿಸಿರುವುದು, ಈ ಪ್ರಕರಣದ ಆರೋಪಗಳನ್ನು ರೂಪಿಸುವಲ್ಲಿ ಹಾಗೂ ನ್ಯಾಯನಿರ್ಣಯದಲ್ಲಿ PoA Act ನ್ನಾಗಲಿ ರೇಪ್ ಸಂಬಂಧಿ ಕಾಯ್ದೆಗಳನ್ನಾಗಲಿ ಅನ್ವಯಿಸದೇ ಬಿಟ್ಟಿರುವ ಸತ್ಯವನ್ನು ಯಶಸ್ವಿಯಾಗಿ ಮುಚ್ಚಿಹಾಕುತ್ತದೆ. ಅಪರಾಧಿಗಳಿಗೆ ನೀಡಿರುವ ಶಿಕ್ಷೆಯ ಪ್ರಮಾಣ ಸಮರ್ಪಕವಾಗಿದೆಯಾದರೂ ಅದರ ಗುಣಮಟ್ಟ ಕಳಪೆಯಾಗಿದೆ ಎಂದು ಅನೇಕರು ಭಾವಿಸುತ್ತಿದ್ದಾರೆ. ಈ ಅಸ್ಪಷ್ಟತೆ ಉಂಟಾಗಲು ಹಲವು ನಿರ್ದಿಷ್ಟ ಕಾರಣಗಳಿವೆ. ಒಂದೆಡೆ ದಲಿತರ ವಿರುದ್ಧದ ದೌರ್ಜನ್ಯಗಳಿಗೆ ಸಂಬಂಧಪಟ್ಟಂತೆ ಯಾವಾಗಲೂ ಜಡಸ್ವಭಾವ ಹೊಂದಿರುವ ಈ ವ್ಯವಸ್ಥೆ ಈ ನಿರ್ದಿಷ್ಟ ಪ್ರಕರಣದಲ್ಲಿ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಿದೆ. ಅಪರೂಪದ್ದಾದ ಇಂತಹ ಅಪರಾಧಕ್ಕೆ ನೀಡಲಾಗಿರುವ ಶಿಕ್ಷೆಯು ಒಂದು ರೀತಿಯಲ್ಲಿ ಒಂದಷ್ಟು ಸಮಾಧಾನ ನೀಡುವಂತಿದೆ. ಯಾಕೆಂದರೆ PoA Act ಇದ್ದಾಗ್ಯೂ ಅದರಿಂದ ದಲಿತರಿಗೆ ದೊರಕಿರುವ ಕಾನೂನು ರೂಪದ ಪರಿಹಾರ ನಗಣ್ಯವಾಗಿದೆ. ಆದರೆ ಜಾತಿ ವೈಷಮ್ಯ ಹಾಗೂ ಲೈಂಗಿಕ ಅತ್ಯಾಚಾರ ಇವು ಈ ಪ್ರಕರಣದ ಅಪರಾಧದಲ್ಲಿ ಬಹಳ ಎದ್ದುಕಾಣುವ ಎರಡು ಅಂಶಗಳು. ಆರು ಮಂದಿಗೆ ಮರಣದಂಡನೆಯ ಶಿಕ್ಷೆಯನ್ನು ಘೋಷಿಸಿದ್ದರೂ ಈ ಎರಡು ಅತಿ ಮುಖ್ಯ ಅಂಶಗಳನ್ನೇ ತೀರ್ಪು ತಿರಸ್ಕರಿಸಿದೆ.

ನಮ್ಮ ಸಮಾಜದಲ್ಲಿ ಗಟ್ಟಿಯಾಗಿ ಉಳಿದುಕೊಂಡಿರುವ ಊಳಿಗಮಾನ್ಯ ಮೌಲ್ಯಗಳೆಂಬ ಅನಾಗರಿಕವಾದ, ಅತ್ಯಂತ ತಿರೋಗಾಮಿಯಾದ ಸಾಮಾಜಿಕ ಸಂರಚನೆಯನ್ನು ಸಮರ್ಥಿಸಿ ಕಾಪಾಡಿಕೊಳ್ಳುವುದು ಈ ಪ್ರಕರಣದಲ್ಲಿ ನಡೆದ ಕಗ್ಗೊಲೆಗಳ ಉದ್ದೇಶವಾಗಿತ್ತು. ದೌರ್ಜನ್ಯಕೋರರೇನೂ ತತ್‌ಕ್ಷಣದ ಕೋಪದ ಫಲವಾಗಿ ಈ ಕುಟುಂಬವನ್ನು ಕೊಲೆಗೈದಿದ್ದಲ್ಲ; ಅವರ ಕೋಪ ಕ್ಷಣಿಕವಾದುದಲ್ಲ. ಯಾವುದೇ ವ್ಯಕ್ತಿಗತ ವೈರ ಅದಕ್ಕೆ ಕಾರಣವಾಗಿರಲಿಲ್ಲ. ಅವರನ್ನು ರೊಚ್ಚಿಗೆಬ್ಬಿಸುವಂಥ ಅಥವಾ ಅವರ ಕೋಪಕ್ಕೆ ಕಾರಣವಾಗುವಂಥದ್ದೇನನ್ನೂ ಭೋತ್‌ಮಾಂಗೆ ಕುಟುಂಬ ಮಾಡಿರಲಿಲ್ಲ. ಅವರ ಅಸ್ಪೃಶ್ಯ ಜಾತಿಗೆ ಅಂಟಿಸಲಾಗಿರುವ ಕೆಳಮಟ್ಟದ ಸಾಮಾಜಿಕ ಸ್ಥಾನಮಾನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದೊಂದೇ ಭೋತ್‌ಮಾಂಗೆ ಕುಟುಂಬ ಎಸಗಿದ್ದ ‘ಅಪರಾಧ’ವಾಗಿತ್ತು. ಶತಶತಮಾನಗಳಿಂದ ದಲಿತರನ್ನು ಈಡು ಮಾಡಲಾಗಿರುವ ಅಮಾನುಷವಾದ ಪರಿಸ್ಥಿತಿಯ ಬದುಕಿನಿಂದ ಹೊರಬರಲು ಅವರು ಪ್ರಯತ್ನ ನಡೆಸಿದ್ದೇ ಪ್ರಬಲ ಜಾತಿಗಳ ಕೊಲೆಗಡುಕರನ್ನು ಪ್ರಚೋದಿಸಲು ಸಾಕಾಗಿತ್ತು.

ಆದ್ದರಿಂದ ಈ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಘೋಷಿಸಿರುವ ಮರಣದಂಡನೆಯ ಶಿಕ್ಷೆಯು ಸಾಮಾಜಿಕ ನ್ಯಾಯಕ್ಕೆ ಸಂದ ಜಯವೇನೂ ಅಲ್ಲ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ನಿನ ತೀರಾ ಕಳಪೆಯಾದ ತನಿಖೆ ಹಾಗೂ ಅಪರಾಧವನ್ನು ಕೇವಲ ಒಂದು ಪ್ರತೀಕಾರದ ಕೊಲೆಯೆಂದು ತಿಪ್ಪೆ ಸಾರಿಸಿಬಿಡಲು ಅದು ಮುಂದಿಟ್ಟ ದುರ್ಬಲ ವಾದಗಳಿಂದ ಕೋರ್ಟು ಸಂತುಷ್ಟವಾದಂತೆ ಕಾಣುತ್ತದೆ.

ಖೈರ್ಲಾಂಜಿ ಕಗ್ಗೊಲೆ ಪ್ರಕರಣವು ‘ಭಾರತ’ವೆಂಬ ಗ್ರಹಿಕೆಯನ್ನೇ ಅಲ್ಲಗಳೆಯುವಂಥ, ನಾವು ಎಂಥದೊಂದು ಕೊಳೆತ, ಅರೆಕೊರೆ ಪ್ರಜಾತಂತ್ರವಾಗಿ ಬೆಳೆದುನಿಂತಿದ್ದೇವೆ ಎಂಬುದನ್ನು ತೋರ್ಪಡಿಸುವಂಥ ಪ್ರಕರಣವಾಗಿದೆ. ದುರದೃಷ್ಟದ ಮಾತೆಂದರೆ ಇದೇನೂ ಭಾರತೀಯ ಸಮಾಜದಲ್ಲಿನ ಅರಾಜಕ ಪುಂಡು ವ್ಯಕ್ತಿಗಳಿಂದ ನಡೆದ ಎಲ್ಲೋ ಅಪರೂಪಕ್ಕೆ ನಡೆದ ಘಟನೆಯಲ್ಲ; ಅದು ಅಂಥ ಅಸಂಖ್ಯ ಪ್ರಕರಣಗಳಲ್ಲಿ ಒಂದು ಮಾತ್ರ.

ಸೆಶನ್ಸ್ ಕೋರ್ಟಿನ ತೀರ್ಪಿನ ವಿರುದ್ಧ ಬಾಂಬೆ ಹೈಕೋರ್ಟಿನ ನಾಗಪುರ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಯಿತು, 2010ರ ಏಪ್ರಿಲ್‌ನಲ್ಲಿ ವಿಚಾರಣೆಗಳು ಆರಂಭವಾದವು. ಜುಲೈ 14ರಂದು ನಾಗಪುರ ಪೀಠವು ಆರು ಮಂದಿಗೆ ನೀಡಲಾಗಿದ್ದ ಮರಣದಂಡನೆಯನ್ನು 25 ವರ್ಷಗಳ ದೀರ್ಘಾವಧಿ ಕಠಿಣ ಶಿಕ್ಷೆಯಾಗಿ ಮಾರ್ಪಡಿಸಿತು. ಆಜೀವ ಜೈಲು ಶಿಕ್ಷೆಗೆ ಗುರಿಯಾಗಿದ್ದ ಇನ್ನಿಬ್ಬರಿಗೂ ಇದೇ ಶಿಕ್ಷೆ ವಿಧಿಸಲಾಯಿತು.

ಸಹಜವಾಗಿ, ಭಯ್ಯಾಲಾಲ್ ಭೋತ್‌ಮಾಂಗೆ ಹಾಗೂ ಈ ಪ್ರಕರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದ ಬಹುತೇಕ ಕಾರ್ಯಕರ್ತರು ವಿಭಾಗ ಪೀಠದ ಈ ತೀರ್ಪಿನ ಬಗ್ಗೆ ಆಘಾತ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮರಣದಂಡನೆಯನ್ನು ಪರಿವರ್ತಿಸಿದ ತೀರ್ಪಿನ ವಿರುದ್ಧ ಸಿಬಿಐ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದೆಂದು ಅವರೆಲ್ಲ ನಿರೀಕ್ಷಿಸಿದ್ದರು. ಆದರೆ ಸಿಬಿಐ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಭಯ್ಯಾಲಾಲ್ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ನಿರ್ಣಯ ಇನ್ನೂ ಬರಬೇಕಾಗಿದೆ.

ಕೃಪೆ: ಹೇಮಲತಾರವರು ಸಂಪಾದಿಸಿರುವ, ಮಹಿಳಾ ಮುನ್ನಡೆ ಸಂಘಟನೆ ಪ್ರಕಟಿಸಿರುವ “ಅತ್ಯಾಚಾರ ಬರ್ಬರತೆಯ ಬೇರುಗಳೆಲ್ಲಿ” ಪುಸ್ತಕದಿಂದ ಈ ಲೇಖನವನ್ನು ತೆಗೆದುಕೊಳ್ಳಲಾಗಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here