Homeಮುಖಪುಟಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ನಿರ್ಭಯ ಪ್ರಕರಣದ ನಂತರ ನ್ಯಾ. ವರ್ಮಾ ಸಮಿತಿ ವರದಿ ಏನು ಹೇಳುತ್ತದೆ?

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ನಿರ್ಭಯ ಪ್ರಕರಣದ ನಂತರ ನ್ಯಾ. ವರ್ಮಾ ಸಮಿತಿ ವರದಿ ಏನು ಹೇಳುತ್ತದೆ?

ರಾಸಾಯನಿಕ ವಿಧಾನದಿಂದ ಅತ್ಯಾಚಾರಿಗಳ ಪುರುಷತ್ವ ಹರಣಗೊಳಿಸುವ ಶಿಕ್ಷೆ ನೀಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಹಾಗೂ ದೇಹಕ್ಕೆ ಊನ ಮಾಡುವುದನ್ನು ನಮ್ಮ ಸಂವಿಧಾನ ಸಮ್ಮತಿಸುವುದಿಲ್ಲ.

- Advertisement -
- Advertisement -

ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಿಗೆ ತಿದ್ದುಪಡಿಗಳನ್ನು ಸೂಚಿಸಲು ರಚಿಸಲಾಗಿದ್ದ ನ್ಯಾಯಮೂರ್ತಿ ವರ್ಮಾ ಸಮಿತಿಯು ತನ್ನ ವರದಿಯನ್ನು ಗೃಹಖಾತೆಗೆ ಸಲ್ಲಿಸಿದೆ.

ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ 2012ರ ಡಿಸೆಂಬರಿನಲ್ಲಿ ನಡೆದ ಕ್ರೂರವಾದ ಸಾಮೂಹಿಕ ಅತ್ಯಾಚಾರದ ಬಳಿಕ ಕಾನೂನುಗಳಿಗೆ ತಿದ್ದುಪಡಿ ಸೂಚಿಸಲು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟಿನ ಮಾಜಿ ಪ್ರಧಾನ ನ್ಯಾಯಾಧೀಶ ಜೆ.ಎಸ್. ವರ್ಮಾ ಅವರ ನೇತೃತ್ವದಲ್ಲಿ ಮೂರು ಸದಸ್ಯರ ಈ ಸಮಿತಿಯನ್ನು ನೇಮಿಸಿತ್ತು.

ವಿದ್ಯಾರ್ಥಿನಿಯ ಮೇಲಿನ ಆ ಲೈಂಗಿಕ ದಾಳಿಯು ದೇಶದಾದ್ಯಂತ ಜನರನ್ನು ರೊಚ್ಚಿಗೆಬ್ಬಿಸಿತ್ತಲ್ಲದೆ, ಅತ್ಯಾಚಾರಿಗಳನ್ನು ಶಿಕ್ಷಿಸಲು ಇನ್ನೂ ಕಠಿಣವಾದ ಕಾನೂನುಗಳನ್ನು ರೂಪಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ಹುಟ್ಟುಹಾಕಿತ್ತು.

ನಾನಾ ಮಹಿಳಾ ಗುಂಪುಗಳು, ನ್ಯಾಯವೇತ್ತರು ಹಾಗೂ ಇನ್ನಿತರ ವೇದಿಕೆಗಳಿಂದ ವರ್ಮಾ ಸಮಿತಿಗೆ 80,000 ಸಲಹೆಗಳು ಬಂದಿದ್ದವು. ಸಮಿತಿಯು ವೈವಾಹಿಕ ರೇಪ್ ಬಗ್ಗೆ ಸಹ ಚರ್ಚೆ ಕೈಗೆತ್ತಿಕೊಂಡಿತ್ತು.

ವರದಿಯ ಮುಖ್ಯಾಂಶಗಳು:
ಅ) ಮಹಿಳೆಯರನ್ನು ವಿವಸ್ತ್ರ (ನಗ್ನ)ಗೊಳಿಸುವುದು, (ರಹಸ್ಯವಾಗಿ) ಮಹಿಳೆಯರ ಗುಪ್ತಾಂಗಗಳನ್ನು ನೋಡಿ ಅಥವಾ ಮೈಥುನ ನೋಡಿ ಸುಖಪಡುವುದು, ಮಹಿಳೆಯರ ಹಿಂದೆಮುಂದೆ ಸುತ್ತುತ್ತಾ ಕಿರುಕುಳ ಉಂಟುಮಾಡುವುದು, ವೇಶ್ಯಾವಾಟಿಕೆಗೆ ಹೆಣ್ಣುಗಳ ಮಾರಾಟ – ಇವುಗಳನ್ನು ಸಮಿತಿಯ ಶಿಫಾರಸುಗಳಲ್ಲಿ ಹೊಸ ಅಪರಾಧಗಳನ್ನಾಗಿ ಸೇರ್ಪಡೆ ಮಾಡಲಾಗಿದೆ ಹಾಗೂ ಶಿಕ್ಷೆಯನ್ನು ಇನ್ನೂ ಕಠಿಣಗೊಳಿಸುವಂತೆ ಸಲಹೆ ಮಾಡಲಾಗಿದೆ.

ಆ) ಅತ್ಯಾಚಾರಕ್ಕೊಳಗಾದ ವ್ಯಕ್ತಿ ಅದರ ಪರಿಣಾಮವಾಗಿ ಸತ್ತರೆ ಅಥವಾ ಸಸ್ಯಸದೃಶ ಬದುಕು ನೂಕುವಂಥ ಸ್ಥಿತಿಗೆ (ವೆಜಿಟೇಟಿವ್ ಸ್ಟೇಟ್‌ಗೆ) ತಳ್ಳಲ್ಪಟ್ಟರೆ ಅಪರಾಧಿಗೆ 20 ವರ್ಷದ ಜೈಲು ಶಿಕ್ಷೆ ಹಾಗೂ ಸಾಮೂಹಿಕ ಅತ್ಯಾಚಾರಕ್ಕೆ ಜೀವಾವಧಿ ಶಿಕ್ಷೆ ವಿಧಿಸಲು ಸಮಿತಿ ಸಲಹೆ ಮಾಡಿದೆ. ಸಾಮೂಹಿಕ ಅತ್ಯಾಚಾರದ ಪರಿಣಾಮವಾಗಿ ಮಹಿಳೆ ಸಾವಿಗೀಡಾದರೆ ಅತ್ಯಾಚಾರಿಗಳಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲು ಸಲಹೆ ನೀಡಲಾಗಿದೆ.

ಈಗಿರುವ ಕಾನೂನು ಪ್ರಕಾರ ಈ ಶಿಕ್ಷೆ ಕನಿಷ್ಠ 7 ವರ್ಷದಿಂದ ಗರಿಷ್ಠ ಜೀವಾವಧಿಯದಾಗಿತ್ತು. ಫಾಶಿ ಶಿಕ್ಷೆಯೊಂದು(ಗಲ್ಲಿಗೇರಿಸುವುದು) ‘ತಿರೋಗಾಮಿ ಹೆಜ್ಜೆ’ (ಹಿಂಚಲನೆ) ಮತ್ತು ಅದು ‘ಅಪರಾಧಕ್ಕೆ ತಡೆಯೊಡ್ಡುವ ಪರಿಣಾಮ ಉಂಟುಮಾಡಲಾರದು’ ಎಂಬ ಕಾರಣಕ್ಕಾಗಿ ವರ್ಮಾ ಸಮಿತಿಯು ಅತ್ಯಾಚಾರಕ್ಕೆ ಫಾಶಿ ಶಿಕ್ಷೆಯನ್ನು ಶಿಫಾರಸು ಮಾಡಿಲ್ಲ.

ಇ) ಮಹಿಳೆಯ ಆತ್ಮರಕ್ಷಣೆಯ ಹಕ್ಕನ್ನು ಕುರಿತ ಭಾರತೀಯ ದಂಡಸಂಹಿತೆಯ ಸೆಕ್ಷನ್ 100ಕ್ಕೆ ತಿದ್ದುಪಡಿ ಮಾಡುವಂತೆ ಸಮಿತಿ ಶಿಫಾರಸು ಮಾಡಿದೆ. ಆತ್ಮರಕ್ಷಣೆಯ ಹಕ್ಕಿನ ಚಲಾವಣೆಯಿಂದ ಸಾವು ಉಂಟಾದರೂ ಈ ಸೆಕ್ಷನ್ ಅದಕ್ಕೆ ಅನ್ವಯಿಸಬೇಕು ಎನ್ನುತ್ತದೆ ಶಿಫಾರಸು.

ಈ) ರಾಸಾಯನಿಕ ವಿಧಾನದಿಂದ ಅತ್ಯಾಚಾರಿಗಳ ಪುರುಷತ್ವ ಹರಣಗೊಳಿಸುವ ಶಿಕ್ಷೆ ನೀಡುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಹಾಗೂ ದೇಹಕ್ಕೆ ಊನ ಮಾಡುವುದನ್ನು ನಮ್ಮ ಸಂವಿಧಾನ ಸಮ್ಮತಿಸುವುದಿಲ್ಲ ಎನ್ನುವ ಕಾರಣಕ್ಕೆ ಸಮಿತಿ ಆ ಶಿಕ್ಷೆಯ ಸಲಹೆಯನ್ನು ತಿರಸ್ಕರಿಸಿದೆ.

ಉ) ವೈವಾಹಿಕ ಅತ್ಯಾಚಾರದ ಬಗ್ಗೆ ಹಾಗೂ ಹೋರಾಟದ (“ಗಲಭೆಗ್ರಸ್ತ”) ಪ್ರದೇಶಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಕೂಡ ಸಮಿತಿ ಚರ್ಚಿಸಿದೆ; ‘ಸಶಸ್ತ್ರ ಬಲಗಳ ವಿಶೇಷಾಧಿಕಾರ ಕಾಯ್ದೆ’ (AFSPA)ಯನ್ನು ಸಶಸ್ತ್ರ ಪಡೆಗಳವರು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಲು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿರುವುದರಿಂದ ಆ ಕಾಯ್ದೆಯನ್ನು ಪುನರ್ ವಿಮರ್ಶಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಊ) ಸಾಂವಿಧಾನಿಕ ಪರಿಹಾರದ ಮಾರ್ಗದ ಮೂಲಕ ಮೂಲಭೂತ ಹಕ್ಕುಗಳ ರಕ್ಷಣೆಯು ನ್ಯಾಯಾಂಗದ ಪ್ರಧಾನ ಜವಾಬ್ದಾರಿಯಾಗಿದೆ ಎಂದು ಸಮಿತಿ ಹೇಳಿದೆ. ಭಾರತದ ಪ್ರಧಾನ ನ್ಯಾಯಾಧೀಶರು ಯಾವುದೇ ಪ್ರಕರಣವನ್ನು ತಾವಾಗಿಯೇ ವಿಚಾರಣೆಗೆ ಎತ್ತಿಕೊಳ್ಳಬಹುದು (ಸುವೋ ಮೋಟು ಕಾಗ್ನಿಜನ್ಸ್); ಸಾಮಾಜಿಕ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೋರ್ಟಿಗೆ ನೆರವಾಗಬೇಕು. ಪ್ರತಿಯೊಂದು ರಾಜ್ಯದ ಹೈಕೋರ್ಟುಗಳ ಮುಖ್ಯ ನ್ಯಾಯಾಧೀಶರುಗಳು ಬಾಲ ರಕ್ಷಣಾ ಗೃಹಗಳ ನಿರ್ವಹಣೆ, ಮೇಲ್ವಿಚಾರಣೆ ಮಾಡಲು ಆ ಕ್ಷೇತ್ರದ ತಜ್ಞರ ಸಲಹೆಗಳ ಮೇರೆಗೆ ಸೂಕ್ತವಾದ ಯಂತ್ರಾಂಗವನ್ನು ರೂಪಿಸಬೇಕು ಎಂದೂ ಶಿಫಾರಸು ಮಾಡಿದೆ.

ಇದನ್ನೂ ಓದಿ: ಅತ್ಯಾಚಾರವನ್ನು ತಡೆಗಟ್ಟಲು ಸಾಧ್ಯ! ತಡೆಗಟ್ಟಲೇಬೇಕು! ಅದರ ಮೂಲಬೇರುಗಳನ್ನು ಅರಿತಾಗ ಮಾತ್ರ…

ಋ) ದೇಶದಲ್ಲಿ ಯಾವುದೇ ವೈಯಕ್ತಿಕ ಕಾನೂನಿನ (ಪರ್ಸನಲ್ ಲಾ) ಮೇರೆಗೆ ನಡೆಯುವ ಎಲ್ಲಾ ಮದುವೆಗಳನ್ನೂ ಒಬ್ಬ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ನೊಂದಾವಣೆ ಮಾಡಿಸಲೇಬೇಕು. ಆ ಮದುವೆಯಲ್ಲಿ ವರದಕ್ಷಿಣೆಯ ಡಿಮ್ಯಾಂಡ್ ಇರಲಿಲ್ಲ ಹಾಗೂ ವಧೂವರರಿಬ್ಬರ ಸಂಪೂರ್ಣ, ಸ್ವತಂತ್ರ ಒಪ್ಪಿಗೆಯ ಮೇರೆಗೆ ಮದುವೆ ನಡೆಯುತ್ತಿದೆ ಎಂಬುದನ್ನು ಮ್ಯಾಜಿಸ್ಟ್ರೇಟರು ಖಾತ್ರಿಪಡಿಸಿಕೊಳ್ಳಬೇಕು ಎಂದೂ ಸಮಿತಿ ಶಿಫಾರಸು ಮಾಡಿದೆ.

ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿರುವ ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನು ಸ್ತ್ರೀ ರೋಗ ಮತ್ತು ಮನೋವೈದ್ಯಕೀಯ ಕ್ಷೇತ್ರಗಳಲ್ಲಿನ ಜಾಗತಿಕ ಖ್ಯಾತಿಯ ತಜ್ಞರು ಶಿಫಾರಸು ಮಾಡಿರುವ ಅತ್ಯುತ್ತಮ ವಿಧಾನಗಳ ಮೂಲಕ ನಡೆಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಎ) ಅಪ್ರಾಪ್ತ ವಯಸ್ಸಿನ ಮಕ್ಕಳ ಮಾರಾಟ ಜಾಲವನ್ನು ಒಂದು ತೀವ್ರವಾದ ಅಪರಾಧವೆಂದು ಪರಿಗಣಿಸಬೇಕು ಹಾಗೂ ಅದಕ್ಕೆ ಕಠಿಣ ಶಿಕ್ಷೆ ನೀಡಬೇಕು. ಶಿಕ್ಷೆಯು ಏಳು ವರ್ಷಗಳಿಗಿಂತ ಕಡಿಮೆ ಇರಬಾರದು, ಹತ್ತು ವರ್ಷಗಳವರೆಗೂ ಹೆಚ್ಚಬಹುದು ಎಂದು ಸಮಿತಿ ಶಿಫಾರಸು ಮಾಡಿದೆ.

ಏ) ತನಿಖಾ ಸಂಸ್ಥೆಗಳು ಚುನಾಯಿತ ಸದಸ್ಯರ ಮೇಲೆ ಅಥವಾ ಚುನಾವಣಾ ಅಭ್ಯರ್ಥಿಯ ಮೇಲೆ ಹಾಕಿದ ಚಾರ್ಜ್ ಶೀಟನ್ನು ನ್ಯಾಯಾಲಯವು ವಿಚಾರಣೆಗೆ ಪರಿಗಣಿಸಿದ್ದರೆ ಅಂಥ ಸದಸ್ಯರ ಅಧಿಕಾರ ರದ್ದಾಗಬೇಕು ಹಾಗೂ ಅಂಥ ಅಭ್ಯರ್ಥಿಗೆ ನಾಮಪತ್ರ ಸಲ್ಲಿಸದಂತೆ ನಿಷೇಧ ಹೇರಬೇಕು ಎಂಬ ಸಲಹೆಯನ್ನು ಸಹ ಮಾಡಲಾಗಿದೆ.

ಕೃಪೆ: ಹೇಮಲತಾರವರು ಸಂಪಾದಿಸಿರುವ “ಅತ್ಯಾಚಾರ ಬರ್ಬರತೆಯ ಬೇರುಗಳೆಲ್ಲಿ?” ಪುಸ್ತಕದಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...