Homeಕರ್ನಾಟಕಕೊಡಗು: 2 ದಶಕಗಳ ಬಳಿಕ ಬಿಜೆಪಿಗೆ ಗೇಟ್‌ಪಾಸ್‌; ಕಾಂಗ್ರೆಸ್ ಗೆಲುವಿಗೆ ಕಾರಣವೇನು?

ಕೊಡಗು: 2 ದಶಕಗಳ ಬಳಿಕ ಬಿಜೆಪಿಗೆ ಗೇಟ್‌ಪಾಸ್‌; ಕಾಂಗ್ರೆಸ್ ಗೆಲುವಿಗೆ ಕಾರಣವೇನು?

- Advertisement -
- Advertisement -

ಹಿಂದುತ್ವದ ಪ್ರಯೋಗಶಾಲೆಗಳಲ್ಲಿ ಒಂದಾದ ಕೊಡಗು ಜಿಲ್ಲೆಯಲ್ಲಿ ಚುನಾವಣೆ ಫ್ಯಾಕ್ಟರ್‌ಗಳು ರಾಜ್ಯದ ಇತರ ಕ್ಷೇತ್ರಗಳಿಗಿಂತ ಭಿನ್ನ. ಇಲ್ಲಿ ಜಾತಿಗಿಂತ ಧರ್ಮವನ್ನು ಮುನ್ನೆಲೆಗೆ ತಂದು ರಾಜಕಾರಣ ಮಾಡಿದವರು ಮೇಲುಗೈ ಸಾಧಿಸುತ್ತಾ ಬಂದಿದ್ದರು. ಇಲ್ಲಿನ ವಿರಾಜಪೇಟೆ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಪ್ರಾಬಲ್ಯ ಸಾಧಿಸಿತ್ತು. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆ ಬಿಜೆಪಿಯ ನೆಲೆಯಾಗಿ ಮಾರ್ಪಟ್ಟಿತ್ತು. ಆದರೆ ಈ ಭಾರಿ ಕಾಂಗ್ರೆಸ್ ಪಕ್ಷವು ಪ್ರಬಲ ಅಭ್ಯರ್ಥಿಗಳನ್ನು ಹಾಕಿದ್ದರಿಂದ ಸುಮಾರು ಎರಡು ದಶಕಗಳ ಬಳಿಕ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಖಾತೆ ತೆರೆದಿದೆ. ವಿರಾಜಪೇಟೆ ಮತ್ತು ಮಡಿಕೇರಿ ವಿಧಾನಸಭೆ ಕ್ಷೇತ್ರಗಳೆರಡಲ್ಲೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಬಿಜೆಪಿಯ ಹಿರಿಯ ರಾಜಕಾರಣಿಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚುರಂಜನ್‌ ಇಬ್ಬರಿಗೂ ಕೊಡಗಿನ ಜನತೆ ಸೋಲುಣಿಸಿದ್ದಾರೆ.

ವಿರಾಜಪೇಟೆಯಲ್ಲಿ ಏನಾಯಿತು?

ವಿರಾಜಪೇಟೆಯಲ್ಲಿ ಕೊಡವ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಅರೆಭಾಷೆ ಗೌಡ ಸಮುದಾಯದ ಪ್ರಾಬಲ್ಯವಿದೆ. ಆದರೆ ಕೊಡವರು ಹೆಚ್ಚಿರುವಲ್ಲಿ ಅರೆಭಾಷೆ ಗೌಡ ಸಮುದಾಯದ ಕೆ.ಜಿ.ಬೋಪಯ್ಯ, ಗೌಡರು ಹೆಚ್ಚಿರುವಲ್ಲಿ ಕೊಡವ ಸಮುದಾಯದ ಅಪ್ಪಚ್ಚು ರಂಜನ್ ಗೆಲ್ಲುತ್ತಾ ಬಂದಿದ್ದು ಕೊಡಗು ಜಿಲ್ಲೆಯ ವಿಶೇಷವಾಗಿತ್ತು. ಆದರೆ ಈ ಭಾರಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಾತಿ ದಾಳವನ್ನು ಉರುಳಿಸಿತ್ತು.

ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಎ.ಎಸ್.ಪೊನ್ನಣ್ಣ ಅವರು ಹೈಕೋರ್ಟ್ ವಕೀಲರು. ಪ್ರಖರ ವಿಚಾರವಾದಿ, ರಾಜಕಾರಣಿ ದಿವಂಗತ ಎ.ಕೆ.ಸುಬ್ಬಯ್ಯನವರ ಪುತ್ರರಾದ ಪೊನ್ನಣ್ಣ ಅವರು ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಕೊಡವ ಸಮುದಾಯದ ಅಸ್ಮಿತೆಗಾಗಿಯೂ ಹೋರಾಡಿದ್ದಾರೆ. ಕೊಡವರಿಗಿರುವ ಕೋವಿ ಹಕ್ಕಿನ ಪ್ರಶ್ನೆ ಬಂದಾಗ, ಹೈಕೋರ್ಟ್‌ನಲ್ಲಿ ಹೋರಾಡಿ ಸಫಲರಾಗಿದ್ದಾರೆ. ಕ್ಷೇತ್ರದಲ್ಲಿ ಬಹುದೊಡ್ಡ ಮಟ್ಟದಲ್ಲಿ ಬೆಂಬಲಿಗರನ್ನು ಹೊಂದಿದ್ದು, ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಕಷ್ಟವೆಂದು ಬಂದವರಿಗೆ ತಮ್ಮ ಕೈಯಿಂದ ಹಣಕಾಸಿನ ನೆರವು ನೀಡಿದ್ದಾರೆ. ಇಂತಹ ಪೊನ್ನಣ್ಣ ಅವರನ್ನು ಕೆ.ಜಿ.ಬೋಪಯ್ಯ ಅವರ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿತ್ತು.

ರಾಜ್ಯದ ವಿಧಾನಸಭೆಯ ಸ್ಪೀಕರ್‌ ಆಗಿ ಕೆಲಸ ಮಾಡಿರುವ ಬೋಪಯ್ಯನವರು 2008, 2013, 2018ರಲ್ಲಿ ಹ್ಯಾಟ್ರಿಕ್ ಗೆಲುವನ್ನು ಇಲ್ಲಿ ಪಡೆದಿದ್ದರು. 2004ರಲ್ಲಿ ಮಡಿಕೇರಿಯಿಂದ ಬೋಪಯ್ಯ ಆಯ್ಕೆಯಾಗಿದ್ದರು. ಈಗಾಗಲೇ ಇಳಿ ವಯಸ್ಸಿನಲ್ಲಿರುವ ಬೋಪಯ್ಯನವರಿಗೆ ಟಿಕೆಟ್ ನೀಡಬಾರದೆಂಬ ಆಗ್ರಹಗಳು ಬಿಜೆಪಿಯೊಳಗೆ ಕೇಳಿಬಂದಿದ್ದವು. ಆದರೆ ಅಂತಿಮ ಕ್ಷಣದಲ್ಲಿ ಬಿಜೆಪಿ ಬೋಪಯ್ಯನವರಿಗೆಯೇ ಮಣೆ ಹಾಕಿತು. 2013ರ ಚುನಾವಣೆಯಲ್ಲಿ ಕೆ.ಜಿ.ಬೋಪಯ್ಯ 3,414 ಮತಗಳಿಂದಷ್ಟೇ ಗೆಲುವು ಸಾಧಿಸಿದ್ದರು. ಆದರೆ, 2018ರಲ್ಲಿ ಗೆಲುವಿನ ಅಂತರವನ್ನು ಅವರು 13,353ಕ್ಕೆ ಹೆಚ್ಚಿಸಿಕೊಂಡಿದ್ದರು. 2013ರಲ್ಲಿ ಬೋಪಯ್ಯನವರ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿದ್ದ ಅಭ್ಯರ್ಥಿ ಬಿ.ಟಿ ಪ್ರದೀಪ್ ಮತ್ತು 2018ರ ಸಿ.ಎಸ್.ಅರುಣ್ ಮಾಚಯ್ಯ ಇಬ್ಬರೂ ಕೊಡವ ಸಮುದಾಯದವರು. ಹೀಗಾಗಿ ಅರೆಗೌಡ v/s ಕೊಡವ ದಾಳವನ್ನು ಕಾಂಗ್ರೆಸ್ ಈ ಬಾರಿಯೂ ಉರುಳಿಸಿತ್ತು. ದಿವಂಗತ ಬಿ.ಟಿ.ಪ್ರದೀಪ್ ಅವರಂತೆಯೇ ಪೊನ್ನಣ್ಣನವರು ಪ್ರಬಲ ಪ್ರತಿಸ್ಪರ್ಧಿಯಾಗಿರುವುದರಿಂದ ಬೋಪಯ್ಯನವರಿಗೆ ಸೋಲು ಉಂಟಾಗಿದೆ.

ವಿರಾಜಪೇಟೆಯಲ್ಲಿ ಕೊಡವರು ಹೆಚ್ಚಿರುವ ಕಾರಣ ಇಲ್ಲಿ ಕೊಡವರಿಗೆ ಬಿಜೆಪಿ ಟಿಕೆಟ್ ಕೊಡಬೇಕೆಂದು ಅನೇಕರ ಅಪೇಕ್ಷೆಯಾಗಿತ್ತು. ಆದರೆ ಹಿಂದುತ್ವ ಮುಖ್ಯವಾಗಬೇಕೆಂದು ಬಯಸುವವರು ಕೆ.ಜಿ.ಬೋಪಯ್ಯನವರ ಜೊತೆಯಲ್ಲಿದ್ದರು. ಹಿಂದೂ v/s ಮುಸ್ಲಿಂ ರಾಜಕಾರಣದ ನೆಲದಲ್ಲಿ ಜಾತಿ ಅಸ್ಮಿತೆಯನ್ನು ಬಡಿದೆಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು. ಸುಮಾರು 35,000 ಮುಸ್ಲಿಂ, ಕೊಡವ ಸಮುದಾಯದ 1,20,000 ಮತದಾರರಿದ್ದಾರೆಂದು ಅಂದಾಜಿಸಲಾಗಿದೆ.

ಮಡಿಕೇರಿಯಲ್ಲಿ ಬಿಜೆಪಿ ಸೋತಿದ್ದೇಕೆ?

ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಲಾಗುತ್ತಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಅರೆಭಾಷೆ ಗೌಡ ಸಮುದಾಯದ ಅಪ್ಪಚ್ಚು ರಂಜನ್ ಅವರದ್ದೇ ಪಾರಮ್ಯವಿತ್ತು. ಆರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ, ಐದು ಬಾರಿ ಗೆದ್ದಿರುವ ಹಾಲಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಂಥರ್‌ ಗೌಡ ಸವಾಲಾಗಿ ಪರಿಣಮಿಸಿದರು. ಅಂತಿಮವಾಗಿ ಮಂಥರ್‌ ಗೆಲುವಿನ ನಗೆಬೀರಿದ್ದಾರೆ.

ಗೌಡ ಸಮುದಾಯದ (ಒಕ್ಕಲಿಗ, ಅರೆಭಾಷೆ ಗೌಡ ಸೇರಿ) 51126 ಮತದಾರರು ಇದ್ದಾರೆ. ಉಳಿದಂತೆ ಲಿಂಗಾಯತ 24219, ಪ.ಪಂಗಡ 3456, ಕುರುಬ 6849, ಮುಸ್ಲಿಂ 23554, ಕ್ರೈಸ್ತ 9464, ಬ್ರಾಹ್ಮಣ 3258, ಕೊಡವ ಹಾಗೂ ಕೊಡವ ಭಾಷಿಕ 24856, ಮಲಯಾಳಿ 15624, ತಮಿಳು 6038, ಬಿಲ್ಲವ 1962, ಬಂಟ್ಸ್ 3264, ವಿಶ್ವಕರ್ಮ 3542, ಮಡಿವಾಳ 1503, ದೇವಾಂಗ ಶೆಟ್ಟಿ 4865, ಸವಿತಾ ಸಮಾಜ 1256, ನಾಯಕ್ 563, ಜೈನರು 253, ಇತರೆ ಸಮುದಾಯಗಳ 1735 ಮತದಾರರು ಇದ್ದಾರೆಂದು ಹಿಂದಿನ ಅಂಕಿ-ಅಂಶಗಳು ಹೇಳುತ್ತವೆ. ಜಾತಿ ಲೆಕ್ಕಾಚಾರಗಳು ಇಲ್ಲಿ ವರ್ಕೌಟ್ ಆಗಲ್ಲ, ಹಿಂದುತ್ವವೇ ಪ್ರಧಾನವಾಗುತ್ತದೆ ಎಂದು ಹೇಳಿದರೂ ಅಷ್ಟು ಸುಲಭವಾಗಿ ಜಾತಿ ಸಮೀಕರಣವನ್ನು ತೆಗೆದು ಹಾಕಲೂ ಆಗಲ್ಲ. ಈ ಬಾರಿಯ ಫಲಿತಾಂಶದ ಮೂಲಕ ಜಾತಿ ಸಮೀಕರಣದ ಮಹತ್ವವನ್ನು ಇಲ್ಲಿ ಕಾಂಗ್ರೆಸ್ ಸಾಬೀತು ಮಾಡಿದೆ.

ಹಿಂದುತ್ವ ಪ್ರಯೋಗಶಾಲೆಗಳಲ್ಲಿ ಒಂದಾದ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಂಥರ್‌ ಗೌಡ ಅವರು ಹೊರಗಿನಿಂದ ಬಂದವರು. ಅರಕಲಗೂಡು ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಎ.ಮಂಜು ಅವರ ಪುತ್ರ ಮಂಥರ್‌ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದಾರೆ. ಅಪ್ಪ ಒಂದು ಪಕ್ಷ, ಮಗ ಒಂದು ಪಕ್ಷದಲ್ಲಿದ್ದಾರೆಂಬುದು ನಕರಾತ್ಮಕವಾಗಿ ಕಂಡರೂ ಮಂಥರ್‌ ಮಡಿಕೇರಿಯಲ್ಲಿ ಮ್ಯಾಜಿಕ್ ಮಾಡಬಲ್ಲ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿದ್ದರು. “ನಾನು ಹೊರಗಿನ ಬಂದವನಲ್ಲ. ನನ್ನ ಪತ್ನಿ ಕೊಡಗಿನವರು. ನಾನು ಹತ್ತಾರು ವರ್ಷಗಳಿಂದ ಇಲ್ಲೇ ನೆಲೆಸಿದ್ದು, ಜನರೊಂದಿಗೆ ಕೆಲಸ ಮಾಡುತ್ತಿದ್ದೇನೆ” ಎಂದು ಮಂಥರ್‌ ಹೇಳಿಕೊಂಡಿದ್ದರು.

ಕಳೆದೆರಡು ವರ್ಷಗಳಿಂದ ಮಡಿಕೇರಿ ಭಾಗದಲ್ಲಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಂಥರ್‌ ಪ್ರವರ್ಧಮಾನಕ್ಕೆ ಬಂದರು. ಪಕ್ಷವನ್ನು ಸಂಘಟಿಸುವಲ್ಲಿ ಸಕ್ರಿಯವಾಗಿದ್ದರು. ಇಂತಹ ಮಂಥರ್‌, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಗಳು ನಡೆದಾಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಕೇವಲ 102 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಅಪ್ಪಚ್ಚು ರಂಜನ್‌ ಅವರ ಸಹೋದರ ಸುಜಾ ಕುಶಾಲಪ್ಪ ಗೆದ್ದಿದ್ದರು. ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಮೇಲೆ ತಮ್ಮ ಪ್ರಾಬಲ್ಯವನ್ನು ಮಂಥರ್‌ ಹೊಂದಿದ್ದರಿಂದ ಎಂಎಲ್‌ಎ ಟಿಕೆಟ್ ಕೂಡ ದೊರಕಿತು.

ಇದನ್ನೂ ಓದಿರಿ: ಸಿಎಂ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ; ಶಿಗ್ಗಾಂವಿ ಹೊರತು ಎಲ್ಲ ಕಡೆಯಲ್ಲೂ ಕಾಂಗ್ರೆಸ್ ಮುನ್ನಡೆ

ಆದರೆ ಅಪ್ಪಚ್ಚು ರಂಜನ್‌ ಕೊಡಗಿನವರೇ ಆಗಿದ್ದು, ತಾನು ಸ್ಥಳೀಯನೆಂಬ ಪ್ಲೇಕಾರ್ಡ್ ಬಳಸುತ್ತಿದ್ದರು. ಅದನ್ನೇ ಪ್ರಬಲ ಅಸ್ತ್ರವಾಗಿ ಉಪಯೋಗಿಸಿ ಕ್ಷೇತ್ರದ ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಐದು ಭಾರಿ ಗೆದ್ದು, ಒಂದು ಭಾರಿ ಸೋತಿರುವ ರಂಜನ್ ಏಳನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಆಗ್ರಹ ಬಿಜೆಪಿಯೊಳಗೆ ಕೇಳಿಬಂದಿತ್ತು. ಸಂಘಪರಿವಾರದ ಮುಖಂಡ ಭಾರತೀಶ್‌ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ರಂಜನ್ ಕೊನೆಯ ಕ್ಷಣದಲ್ಲಿ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದರು. ಭಾರತೀಶ್ ಅವರಿಗೆ ಅಪಾರ ಬೆಂಬಲಿಗರಿದ್ದು, ಆಂತರಿಕವಾಗಿ ಅಸಮಾಧಾನ ಹೊಂದಿದ್ದರು. ಇಷ್ಟು ದೀರ್ಘ ಅವಧಿಯಲ್ಲಿ ಶಾಸಕರಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ, ಜನರ ಒಡನಾಡ ಕಡಿಮೆ ಮಾಡಿಕೊಂಡಿದ್ದಾರೆ, ಕಮಿಷನ್ ಪಡೆಯುತ್ತಾರೆಂಬ ಬೇಸರ ಮತದಾರರಲ್ಲಿ ಇತ್ತು.

ಮತ್ತೊಂದೆಡೆ ಯುವಮುಖವಾಗಿ ಹೊಮ್ಮಿದ್ದ ಮಂಥರ್‌, ಯುವಜನರೊಂದಿಗೆ ಗುರುತಿಸಿಕೊಂಡಿದ್ದಾರೆ. ಕ್ರೀಡಾ ಪಂದ್ಯಾವಳಿಗಳಿಗೆ ಧನ ಸಹಾಯ ಮಾಡಿ ಯುವಕರನ್ನು ತಮ್ಮತ್ತ ಸೆಳೆಯುತ್ತಿದ್ದರು. ಹಿಂದುತ್ವ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ಟಿಪ್ಪು ವಿವಾದದಂತಹ ವಿಚಾರಗಳನ್ನು ಕೆದಕುವ ಪ್ರಯತ್ನವನ್ನು ಪ್ರತಿಸ್ಪರ್ಧಿಗಳು ಮಾಡುತ್ತಿದ್ದರು. ಆದರೆ ಇಂಥವುಗಳಿಂದ ಮಂಥರ್‌ ಅಂತರ ಕಾಯ್ದುಕೊಂಡಿದ್ದರು. ವೈದ್ಯಕೀಯ ವೃತ್ತಿಯ ಹಿನ್ನೆಲೆಯವರಾದ ಮಂಥರ್‌, ವಿವಾದಾತ್ಮಕ ವಿಚಾರಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತಟಸ್ಥ ನಿಲುವು ತಾಳುತ್ತಾ ಚಾಣಕ್ಷತೆ ಮೆರೆದಿದ್ದರು. “ಆದರೆ ಅಪ್ಪ ಜೆಡಿಎಸ್‌ನಲ್ಲಿದ್ದು, ನಾನು ಕಾಂಗ್ರೆಸ್ಸಿನಲ್ಲಿಯೇ ಉಳಿಯಲಿದ್ದೇನೆ” ಎಂಬ ಮಾತುಗಳನ್ನು ಮಂಥರ್‌ ಆಡುತ್ತಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಕೇಂದ್ರ ಸರ್ಕಾರದ SIRಗೆ ಕೌಂಟರ್‌, ಮಹತ್ವದ ಆದೇಶಗಳನ್ನು ಹೊರಡಿಸಿದ ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದವು. ಸುಪ್ರೀಂ ಕೋರ್ಟ್‌ ಆ ಪ್ರಕ್ರಿಯೆಯನ್ನು ಮಾನ್ಯ ಮಾಡಿತ್ತು. ಕರ್ನಾಟಕದಲ್ಲಿ ನಾಳೆಯಿಂದ (ಜೂನ್.30)‌...

ರಾಮಮಂದಿರದ ದೇಣಿಗೆ ಕಳ್ಳತನ: ಆರೋಪಿಗಳ ಪರ ಯಾವುದೇ ವಕೀಲರು ವಾದಿಸುವಂತಿಲ್ಲ , ವಾದಿಸಿದರೆ ರೂ. 5ಲಕ್ಷ ದಂಡ

ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಸಂಘದ ಈ ತೀರ್ಮಾನವನ್ನು...

ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್: ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಬ್ರೇಕ್! ಬಂಗಾಳ ಸಿಎಂ ಗೆ ಪತ್ರ ಬರೆದ ಕೇರಳ ಸಿಎಂ

ಹಿರಿಯ ಪತ್ರಕರ್ತ ಮತ್ತು ‘ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ರಾಮದಾಸ್ ಅವರ ಪಾಸ್‌ಪೋರ್ಟ್ ನವೀಕರಣ ವಿವಾದವು ಸೋಮವಾರ ಮತ್ತಷ್ಟು ತೀವ್ರಗೊಂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ...

ರಾಮ ಮಂದಿರ ದೇಣಿಗೆ ಹಗರಣ: ಅರ್ಜಿ ವಿಚಾರಣೆ ಕೆಲ ದಿನ ತಡವಾದರೆ ‘ಆಕಾಶವೇನೂ ಉರುಳಿ ಬೀಳುವುದಿಲ್ಲ’ ಎಂದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರಿಂದ ಬಂದ ದೇಣಿಗೆ ಹಣ ದುರುಪಯೋಗ ಆಗಿರುವ ಕುರಿತು ಸಿಬಿಐ ನೇತೃತ್ವದ ಬಹು-ಸಂಸ್ಥೆಗಳ ಜಂಟಿ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ...

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...