Homeಮುಖಪುಟಕುಂದಾಪುರದ ಗೌಲು: ಡಾ ಜಯಪ್ರಕಾಶ್‌ ಶೆಟ್ಟಿ ಹೆಚ್‌ ಕುಂದಾಪುರ

ಕುಂದಾಪುರದ ಗೌಲು: ಡಾ ಜಯಪ್ರಕಾಶ್‌ ಶೆಟ್ಟಿ ಹೆಚ್‌ ಕುಂದಾಪುರ

ಕುಂದಾಪುರದ ಗೌಲು ಹೊಲಸು ಹೌದು. ಆದರೆ ಹೊಲೆ, ಹೊರಗೆಂಬ ಅಶುದ್ಧವಲ್ಲ. ನಮಗೆ ಗೌಲಿಲ್ಲದ ಬದುಕು ಬದುಕೇ ಅಲ್ಲ, ಸೂತಕ.

- Advertisement -
- Advertisement -

ಕನ್ನಡದ ಕವಲಂತಿದ್ದೂ ತನ್ನ ಅನನ್ಯ ಪ್ರಯೋಗಗಳಿಂದ ಭಿನ್ನ ಅಸ್ಮಿತೆಯನ್ನು ತೋರುವ ಕುಂದಗನ್ನಡ ಭಾಷಾವಲಯ ಕನ್ನಡದ ವಿಶಿಷ್ಟ ಸಾಂಸ್ಕತಿಕ ಪರಿಸರಗಳಲೊಂದು. ಇದು ಪುರುಸೊತ್ತಿನ ಸೋಮಾರಿಗಳ ಭಾಷೆಯಲ್ಲ. ಅಪಹಾಸ್ಯದ ಲಘು ಭಾಷೆಯೂ ಅಲ್ಲ. ಅದು ಕಾಯಕನಿರತರ ಕಸುಬಿನಿಂದ ಕೆನೆಗಟ್ಟಿದ ಭಾಷೆ. ಕೃಷಿಯ ಸುತ್ತ ಸುತ್ತಿಕೊಂಡ ಕಮ್ಮಾರಿಕೆ, ಕುಂಬಾರಿಕೆ, ಚಮ್ಮಾರಿಕೆಯೇ ಮೊದಲಾದ ನೆಲಮೂಲ ಜೀವನಕ್ರಮದಿಂದ ಹದಗೊಂಡ ಲೋಕದ ಭಾಷೆ. ಬೆವರಿನಲ್ಲಿ ಹದಗೊಂಡ ಬದುಕಿನ ಆಗುಹೋಗುಗಳಲ್ಲಿ ಅರಳಿಕೊಂಡ ಭಾಷೆ. ಅಲ್ಲಿನ ಬದುಕಿಗೆ ಅದು ಕೇವಲ ಸಂವಹನ ವಾಹಕವಲ್ಲ. ತಲೆಮಾರುಗಳು ಸಾಗಿಸಿಕೊಂಡು ಬಂದ ಕಸುಬು, ಕುಲಾಚಾರಗಳ ತಿಳುವಳಿಕೆ, ಅರಿವುಗಳ ಬನಿ. ಇದರ ಅರಿವಿಗೆ ಅದು ಹಬ್ಬಿ ಹರಡಿದ ಕಸುಬು ಕೌಶಲ್ಯಗಳ ಒಳಗನ್ನೇ ಹೊಕ್ಕುನೋಡಬೇಕಿದೆ. ಹೀಗೆ ಕುಂದಗನ್ನಡ ಇಲ್ಲಿನ ನೆಲಮೂಲಿಗರ ನೆಲೆ ನಿಲುವುಗಳ ಅರಿವಿನ ಭಾಷೆ. ನಮ್ಮದಲ್ಲದ ಪರಕೀಯ ಬೀಸುಪದದಲ್ಲಿ ಇದು ಶೂದ್ರಜಗತ್ತಿನ ಭಾಷೆ. ಆದರೆ ನಾವದನ್ನು ಹಾಗೆನ್ನಲಾಗದು. ಯಾಕೆಂದರೆ ಯಾರೋ ಕೊಟ್ಟ ಹೆಸರು ನಮ್ಮ ಗುರುತಾಗಬಾರದು. ದುರಂತವೆಂದರೆ ಅನೇಕಬಾರಿ ಹೀಗೆ ಯಾರೋ ಹೊರಗಿಟ್ಟು ಬಳಸಿದ ಪದಗಳೇ ನಮ್ಮ ಮತಾಚಾರ, ಭಾಷಾಚಾರಗಳ ಗುರುತಾಗಿ ಬಳಸುವ ದಡ್ಡತನವೇ ಸಂಭ್ರಮದ ಸಂಗತಿಯಾದುದಿದೆ.

ಮಣ್ಣಿನಿಂದಾದ ಜೀವಸಮಷ್ಟಿಯ ಪ್ರತೀ ಜೀವವೂ ಬದುಕಲು ಮಣ್ಣನ್ನೇ ಆಶ್ರಯಿಸಿದೆ. ಜೀವವನ್ನು ತಿಂದೇ ಜೀವ ಬದುಕುವುದು ನಿಸರ್ಗಸತ್ಯ. ಸಸ್ಯವಾಗಿರಲಿ, ಪ್ರಾಣಿಯಾಗಿರಲಿ ಅದು ಜೀವಸತ್ವದಿಂದ ಕೂಡಿದ್ಧಾಗ ಮಾತ್ರ ತಿನ್ನಬಹುದಾದ ಅನ್ನವಾಗುತ್ತದೆ. ಆದ್ದರಿಂದ ತಿನ್ನುವ ಅನ್ನವೆಲ್ಲವೂ ಈ ಲೋಕದ ಮಣ್ಣಿನಿಂದ ದತ್ತವಾದುದು. ಹಾಗಾಗಿ ಪವಿತ್ರವಾದ ಜೀವದ ಅಸ್ತಿತ್ವಕ್ಕಾಗಿ ಜೀವವು ತಿನ್ನುವ ಅನ್ನವೂ ಪವಿತ್ರ ಎಂದಾಗಿ ಅನ್ನವೇ ʼದೈವʼ ಎನಿಸಿತು. ಇದನ್ನೇ ಉಪನಿಷದ್‌ ʼಬ್ರಹ್ಮʼ ಎಂದರೆ, ಸರ್ವಜ್ಞ ʼದೇವರುʼ ಅಂದಿದ್ದಾನೆ. ಸೂಫೀಸಾಹಿತ್ಯ ʼಜೋಡನಾʼ ಎಂದು ಕರೆದಿದೆ. ಸಹಜ ನಿಸರ್ಗವಿವೇಕದ ಈ ನಿರೂಪಣೆಗಳಲ್ಲಿ  ಅನ್ನದ ಮೇಲು-ಕೀಳು, ಮಡಿ-ಮೈಲಿಗೆ ಇಲ್ಲ. ಕಾಲ-ದೇಶಾಧಾರಿತ ಆಯ್ಕೆ, ಆದ್ಯತೆಗಳ ಭಿನ್ನತೆಗಳನ್ನೇ ಗುರುತಾಗಿಸಿದ ʼಅನ್ನದೈವʼದ ಅಪಚಾರವಿಲ್ಲ. ಅಂತೆಯೇ ಈ ನಿಸರ್ಗವಿವೇಕ ಹಾಗೂ ಲೋಕ ಒಂದೆಯೂ ಅಲ್ಲ, ಭಿನ್ನವೂ ಅಲ್ಲವೆಂಬ ತಾತ್ವಿಕ ಎಚ್ಚರವುಳ್ಳ ದುಡಿಮೆಯ ಜಗತ್ತಿಗೂ ಅನ್ನ ಭಿನ್ನವಾಗಿಯೂ ಬೇರಲ್ಲ. ಕುಂದಗನ್ನಡದಲ್ಲಿ ಅನ್ನದ ಈ ಭಿನ್ನತೆಯ ಅರಿವು ಮತ್ತು ಭಿನ್ನವಳಿದು ಬೆಸೆದ ನಂಟಿನ ಕುರುಹು ಎರಡೂ ಇದೆ. ಅದಕ್ಕೆ ಸಾಕ್ಷಿಯಂತೆ ಅದರ ʼಗೌಲು-ಸಿರʼ ಎಂಬ ನುಡಿರೂಪಗಳಿವೆ.

ಕುಂದಗನ್ನಡ ಪದಕೋಶದ ʼಗೌಲು – ಸಿರʼಗಳು ಶಾಖಾಹಾರ – ಮಾಂಸಾಹಾರಗಳಿಗೆ ಸಂವಾದಿಯಂತೆ ಕಂಡರೂ ಅವಳಿವಿರೋಧದಲ್ಲಿ ಬಳಕೆಯಾಗುವ ಎದುರಾಳಿ ರೂಪಗಳಲ್ಲ. ಆಹಾರದ ಬಹುರೂಪಗಳ ಜೊತೆಗೆ ಬದುಕುವ ಜಗತ್ತಿನ ಸಹರೂಪೀ ಪದಗಳು. ಬದುಕು ಮತ್ತು ಕಾಲದ ಗತಿಯಾಧರಿಸಿದ ಆಚರಣೆಗಳ ಹಿನ್ನೆಲೆಯಲ್ಲಿ ಈ ಆಹಾರಕ್ರಮಗಳಿಗೆ ವಿಶಿಷ್ಟ ಸಾಂಸ್ಕೃತಿಕ ಮಹತ್ವವಿದೆ. ಅವು ಬದುಕಿನ ಗತಿಯ ಹೊಸತನ, ನಿಲುಗಡೆ ಮತ್ತು ಸಂದು ಸೇರಿಸುವ ನಿರಂತರತೆಗಳಿಗೆ ಲಗತ್ತಾಗುತ್ತವೆ. ಹೊಸತಾಗುವಲ್ಲಿ ಒಂದು ಬಳಕೆಯಾದರೆ, ಸಹಜಲಯವನ್ನು ಆಗುಗೊಳಿಸುವಲ್ಲಿ ಮತ್ತೊಂದು ಬಳಕೆಯಾಗುತ್ತದೆ. ಹೀಗೆ ಈ ಆಚರಣೆಗಳಿಂದಾಗಿ ಆಹಾರಮಾದರಿಗಳೇ ಬದುಕಿನ ಏರಿಳಿತವನ್ನು ದೃಢೀಕರಿಸುವ ಸಾಧನಗಳಾಗಿ ಮೇಲು-ಕೀಳು ಎನ್ನುವ ಶ್ರೇಣೀಕರಣವನ್ನು ಮೀರಿ ನಿಲ್ಲುತ್ತವೆ.

ಸಿರ ಎನ್ನುವುದು ಕ್ಷೀರದ ತದ್ಬವರೂಪವಲ್ಲ. ಅದಕ್ಕೆ ಸಾಂದರ್ಭಿಕ ಅರ್ಥಗಳಿವೆ. ಕಾಯಿಪಲ್ಲೆಗಳಿಂದ ಮಾಡಿದ ಮೇಲೋಗರ(ವೆಜಿಟೇರಿಯನ್‌ ) ಎಂಬ ಅರ್ಥ ಇವುಗಳಲ್ಲೊಂದು. ಈ ಅರ್ಥದಲ್ಲಿ ಗೌಲು ಕೂಡ  ಮೇಲೋಗರ ಸಂಬಂಧಿ ಪದವೇ . ಸಿರ ಅಳಗೆ, ಗೌಲು ಅಳಗೆ (ಹೊಲಸಿನ ಅಳಗೆ) ಎಂಬಂತೆ ಪಾತ್ರೆ(ಅಳಗೆ)ಗಳ ಜೊತೆಗೂ ಇದೇ ಅರ್ಥ ಅನ್ವಯವಾಗುತ್ತದೆ. ಎರಡರ ಜೊತೆಗೂ ಸಮಾನ ಬಳಕೆಯ ಅನ್ನದ ಮಡಕೆ ಹಾಗೂ ಇತರ ಪಾತ್ರೆಗಳಿಗೆ ಸಿರ, ಗೌಲುಗಳು ಅಂಟಿಲ್ಲ. ಆದರೆ ಒಲೆಯ ವಿಚಾರಕ್ಕೆ ಬಂದಾಗ ಅಲ್ಲಿ ಬೇರೆ ವಿಸ್ತರಣೆ ಸಿಗುತ್ತದೆ. ಮನೆಯೊಳಗಿನ ಖಾಯಂ ಒಲೆ ಸಿರ ಒಲೆಯಾದರೆ, ಗೌಲು ಅಡುವ ಹೊರಗಣ ಒಲೆ ಇಲ್ಲವೆ ಒಲೆಗುಂಡು ಹೂಡಿ ನಿರ್ಮಿಸಿಕೊಳ್ಳುವ ತಾತ್ಕಾಲಿಕ ಒಲೆ ʼಹೊಲ್ಸಿನ ಒಲೆʼ ಆಗುತ್ತದೆ. ಹಾಗಾಗಿ ಒಲೆಯ ವಿಚಾರಕ್ಕೆ ಬಂದರೆ ದ್ರಾವಿಡಭಾಷಾ ನಿಯಮದ ಅನ್ವಯ ಚಿರ > ಸಿರ(ಚ>ಸ) ಎಂದಾದ ಹಾಗೆ ಕಾಣುತ್ತಿದೆ. ಇದು ಬೆಂಕಿ ನೆಂಗದ(ನಂದದ) ಹಾಗೆ ಉರಿಯುವ ಒಲೆ. ಅನ್ನ, ಹಾಲು ಮತ್ತು ತರಕಾರಿ ಮೇಲೋಗರಗಳು ಇಲ್ಲಿ ಬೆಂದು ತಯಾರಾಗುತ್ತವೆಯಾಗಿ ಅವು ಸಿರ ಅಡುಗೆ ಆಗುತ್ತದೆ.

ʼಸಿರʼ ಒಲೆಯ ಕಾರಣದಿಂದಲೇ ಬಂದಿರಬಹುದಾದ ಪದ. ʼಸಿರʼ ಆಗುವ ಆಗುವಿಕೆ ಅಲ್ಲ, ಇರುವಿಕೆ. ಹಾಗಾಗಿ ಅಲ್ಲಿ ರುಚಿಸೂಚಕ ಹಾಗೂ ನಕಾರಾತ್ಮಕ ಅರ್ಥವಿಸ್ತರಣೆಗಳಿಲ್ಲ. ಅಲ್ಲಿ ರುಚಿಗಳನ್ನು ಬೇರೆ ಬೇರೆ ರಸಸೂಚಕ ಪದಗಳಿಂದ ಸೂಚಿಸಲಾಗುತ್ತದೆ. ಆದರೆ ʼಗೌಲ್‌ʼ ಪದ ಹಾಗಲ್ಲ. ಅಲ್ಲಿ ಮಾಂಸದ ಜೊತೆಗೆ ಇತರ ಸೂಚನೆಗಳಿವೆ. ಮುಖ್ಯವಾಗಿ ಅದು ರುಚಿ, ವಾಸನೆ, ಪ್ಲೇವರ್‌ ಆಗುತ್ತದೆ. ಹಾಗೆಯೇ ಈ ಪದರೂಪಕ್ಕೆ ಒಲೆಯ ನಂಟಿದ್ದಂತಿಲ್ಲ. ಅದು ಇರುವಿಕೆಯಲ್ಲದ ಆಗುವಿಕೆ. ಮೀನು, ಮಾಂಸ ಇದ್ದ ಮಾತ್ರಕ್ಕೆ ಗೌಲ್‌ ಅಲ್ಲ.  ಅದು ಸಂಬಂಧದಲ್ಲಿ ಸಾಧ್ಯವಾಗಿ, ಅನುಭವದಲ್ಲಿ ನಿಜಗೊಳ್ಳುವ ಮೂಲಕ ಗೌಲಾಗುತ್ತದೆ. ಅಂದರೆ ʼಗೌಲ್‌ ಆಯಿತುʼ ಎಂಬ ಅನುಭವದ ಮಟ್ಟಕ್ಕೆ ಏರಿದಾಗ ಮಾತ್ರವೇ ಅದು ಗೌಲು. ಈ ಹಿನ್ನೆಲೆಯಲ್ಲಿ ಅದು ಬೆಂದ ಮೇಲೆ ದತ್ತವಾಗುವ ರುಚಿಸ್ವಾರಸ್ಯಕ್ಕೆ ಸಂಬಂಧಿಸಿದೆ. ಇನ್ನು ಅನೇಕ ವೇಳೆ ಗೌಲು ಎಂದರೆ ಕೇವಲ ಮಾಂಸವೇ ಅಲ್ಲ. ಯಾಕೆಂದರೆ ಬಸಲೆ ಮತ್ತು ಅಣಬೆಗಳು ಗೌಲು ಎಂದೇ ಪರಿಗಣಿತ. ಇದು ಕುತೂಹಲದಾಯಕವೂ ಹೌದು. ಪ್ರಾಯಶಃ ಅಣಬೆ ಮತ್ತು ಬಸಲೆಗಳ ಜೊತೆ ನಮ್ಮ ಕುಲಸಂಬಂಧಿ, ಆಚರಣಾಸಂಬಂಧಿ ಹಿನ್ನೆಲೆಗಳಲ್ಲಿ ಇದರ ಕಾರಣ ಇರಬಹುದೇ? ಇದನ್ನು ವಿಚಾರಿಸಬೇಕಿದೆ. ಯಾಕೆಂದರೆ ʼಅಣಬೆʼ ನಮ್ಮ ಅತ್ಯಂತ ಪುರಾತನ ಸ್ಮೃತಿಯ ಭಾಗವಾದ ಪೂರ್ವಪಿತೃವಿನ ಸಂಕೇತ. ʼಅಣಪೆ ನೂರಾಳೊಡೆಯʼ ಎಂಬಂತೆ ಪರಿಭಾವಿಸುವ ಜೇನುಕುರುಬರ ಆಚರಣೆ ಮತ್ತು ಲಿಂಗಾರಾಧನೆಯ ನೆಲೆಯಲ್ಲಿಯೇ ನಮಗೆ ಅತ್ಯಂತ ಪವಿತ್ರ ದೈವತವಾಗುವ ಅಣ್ಣಪ್ಪನ  ಹೆಸರಿನ ನಡುವಣ ಸಾಮ್ಯತೆ, ಶಿಶ್ನಸಂಕೇತವಾಗುವ ಅಣಬೆಯ ಸ್ವರೂಪ ಮತ್ತು ಪದರೂಪಕ್ಕೆ ಇರುವ ಸಾಮ್ಯತೆಗಳನ್ನು ಗಮನಿಸಬಹುದು. ಹಾಗೆಯೇ ಬಸಲೆಗೆ ತಳಮೂಲದ ಹುಟ್ಟಿನ ಆಚರಣೆಗಳ ಜೊತೆಗೆ ನೇರ ಸಂಬಂಧಗಳಿವೆ. ಹೆಣ್ಣು ಮೈನೆರೆದಾಗ ಮಾಡುವ ತಲೆನೀರುಮದುವೆ, ಬಯಕೆಮದುವೆಗಳಲ್ಲಿ ಬಸಲೆಪದಾರ್ಥ ಇರಲೇಬೇಕು. ಅದಲ್ಲದೆ, ನಮ್ಮ ಜನನಕಾಲದ ಕಸ(ಪ್ಲಸೆಂಟಾ/ಹೊಕ್ಕುಳಬಳ್ಳಿ) ತುಂಬಿದ ಮಗೆ(ಮಣ್ಣಿನಪಾತ್ರೆ) ಹೂತ ಜಾಗದಲ್ಲಿ ಬಸಲೆ ನೆಡಲಾಗುತ್ತದೆ. ಹೀಗೆ ಈ ಎರಡೂ ಗೌಲಾಗುವುದಕ್ಕೂ ಫಲಸಂಪ್ರದಾಯದ ನೆತ್ತರ ಸಂಬಂಧಕ್ಕೆ ಲಗತ್ತಾಗುವ ಈ ಆಚರಣೆಗಳಿಗೂ ಸಂಬಂಧವಿರುವಂತಿದೆ. ಹಾಗೆಯೇ ಗೌಲು ಎನ್ನುವಂತೆ ಪರಿಗಣಿತವಾಗುವ ಮಾಂಸ, ಮೀನುಗಳ ಬೇಟೆ ಮತ್ತು ಬಲಿಗಳಲ್ಲಿ ನೆತ್ತರೂ ಇದೆ, ಫಲಾರಾಧನಾ ಪರಂಪರೆಯೂ ಇದೆ. ವಿಚಿತ್ರವೆಂದರೆ ಕೆಲವು ಸಮುದಾಯದಲ್ಲಿ ಕೆಲವು ಮಾಂಸಗಳೂ ಗೌಲಲ್ಲ. ಕುಡುಬಿ ಸಮುದಾಯದಲ್ಲಿ ಮೊಲ ಮತ್ತು ಬರ್ಕನ ಮಾಂಸ ಗೌಲ್ ಅಲ್ಲ!(ಆದರೆ ಈ ಸಮುದಾಯ ತಾನು ಗೋವಾ ಮೂಲದ್ದೆನ್ನುತ್ತದೆ)

ಹಾಗೆಯೇ ರುಚಿ, ಸುವಾಸನೆಯ ಸಮ್ಮೋಹಕ ಅರ್ಥದ ಜೊತೆಗೆ ಒಂದು ನಿಗಧಿತ ಹಂತ ದಾಟಿದ ಗೌಲಿನ ಕಟುತ್ವ ಸೂಚಿಯಾಗಿ ನಕಾರಾತ್ಮಕವಾಗಿಯೂ ಈ ಪದ ಬಳಕೆಯಾಗುತ್ತದೆ. ಅದರ ಭಾಗವಾಗಿ ಗೌಲ್‌ನಾತ, ಗೌಲ್‌ ಹೊಡಿತ್ತ್‌, ಕೆಂಗೌಲ್‌ ಎಂಬವುಗಳಿವೆ. ಆದರೆ ಈ ಬಳಕೆ ಮಾಂಸಕ್ಕಿಂತ ಮೀನಿಗೇ ಲಗತ್ತುಗೊಂಡಿದೆ. ಉದಾಹರಣೆಗೆ ಶಾಡಿ, ದೊಡ್ಡ ಬೂತಾಯಿ(ಹೋರ್‌ ಬೈಗಿ), ದೊಡ್ಡ ಬಂಗುಡೆ(ಹೋರ್‌ ಬಂಗ್ಡಿ) ಇತ್ಯಾದಿಗಳ ಅನಪೇಕ್ಷಿತ ಗೌಲಿಗೆ ಇರುವ ನಿರೂಪಣೆಗಳನ್ನು ಗಮನಿಸಿ. ಹಾಗಾಗಿ ಗೌಲು ಪರಿಕರಕ್ಕಿಂತ ಇಂದ್ರಿಯಬದ್ಧ ಅನುಭವಕ್ಕೆ ಸಂಬಂಧಿಸಿದ್ದು. ಅದರ ಜೊತೆಗೆ ಗೌಲಿನಲ್ಲಿ ಇರುವಂತೆ ರುಚಿ, ವಾಸನೆಗಳ ಸಾಪೇಕ್ಷತೆ ಆಧರಿತ ಶ್ರೇಣೀಕರಣದ ವೈವಿಧ್ಯ ಸಿರ ಎನ್ನಲಾದ ತರಕಾರಿಯಲ್ಲಿ ಇಲ್ಲ. ಗೌಲಿನಲ್ಲಿ ಆಪ್ಯಾಯತೆ ಇರುವಂತೆ ಅಸಹನೀಯತೆಯ ಸೂಚನೆಯೂ ಇದೆ. ಗೌಲ್‌ ಜಂಬು, ಗೌಲ್ ನಾತ, ಗೌಲ್‌ ಹೊಡಿತ್ತ್ ಇತ್ಯಾದಿ ಪದಗಳಲ್ಲಿ ಗೌಲಿನ ಈ ಋಣಾತ್ಮಕ ಮುಖವಿದೆ. ಮಾಂಸಕ್ಕಿಂತ ಹೆಚ್ಚಾಗಿ ಮೀನಿನ ಗೌಲು ಕಟುತ್ವ ಕಳೆಯಲು ಸಾರಿನ ಮಸಾಲೆಗೆ ಹಸಿಮೆಣಸು, ಶುಂಠಿ, ವಾಮದ ಕಾಳು ಇತ್ಯಾದಿಗಳನ್ನು ಸ್ವಲ್ಪ ಒತ್ತಿ ಹಾಕುವುದಿದೆ.

ಗೌಲಿಗೆ ಪರ್ಯಾಯವಾಗಿ ಬಳಕೆ ಇರುವ ಇನ್ನೊಂದು ಪದ ಹೊಲಸು. ಆದರೆ ಇದು ಅಟ್ಟುಣ್ಣುವ ಅಡುಗೆಗಿಂತ ಆ ಪ್ರಕ್ರಿಯೆಯಲ್ಲಿ ಬಳಕೆಯಾಗುವ ಒಲೆ, ಪಾತ್ರೆ, ಸೌಟುಗಳಿಗೆ ಬಳಕೆಯಾಗುವ ಪದ. ಆದರೆ ಒಲೆ ಮತ್ತು ಪಾತ್ರೆಗಳ ಜೊತೆಗಷ್ಟೇ ಬಳಸಲಾಗುವ ಹೊಲಸು ಎಂಬ ಪದದ ಒಳಗೂ ಗೌಲಿನ ತೇವ ಇದೆ. ಉದಾಹರಣೆಗೆ ಈ ಭಾಗದಲ್ಲಿ ಮಾಂಸಕ್ಕಾಗಿಯೂ ಬಳಸುವ ಪಾರಿವಾಳದ ಕುಲಕ್ಕೆ ಸೇರಿದ ಮುತ್ತುಕತ್ತಿನ ಪಾರಿವಾಳ ಎಂಬ ಪುಟ್ಟಹಕ್ಕಿಯೊಂದಿದೆ. ಚೋರೆಹಕ್ಕಿ/ಪರ್ವತ ಪಾರಿವಾಳ/ಸ್ಪಾಟೆಡ್‌ ಡವ್ ಎಂಬಂತೆ  ಪರಿಚಿತವಾದ ಈ ಹಕ್ಕಿಯಲ್ಲಿ ಸಿಗುವುದು ಮುಷ್ಟಿಯಷ್ಟು ಮಾಂಸ. ಇದು ಒಂದು ಸೌತೆಕಾಯಿಯನ್ನು ಮರುಳು ಮಾಡುವಷ್ಟು ಗೌಲಂತೆ!(ಸೌತೆಕಾಯಿಯನ್ನು ಮರ್ಲ್‌ ಮಾಡುವುದು – ಅದರ ರುಚಿಯನ್ನೇ ಬದಲಿಸಿ ತನ್ನ ಪ್ಲೇವರ್‌ ಕೊಡವಷ್ಟು ಸಮರ್ಥ). ಹೀಗೆ ಬಳಕೆಯಾಗುವಲ್ಲೆಲ್ಲಾ ಗೌಲು ರುಚಿಸಂಬಂಧಿ  ಪದವೇ ಆಗಿ ʼಸಿರʼ ದ ಎದುರಾಳಿತದಿಂದ ಪೂರ್ಣವಾಗಿ ಪಾರಾಗುತ್ತದೆ. ಈ ಹಕ್ಕಿಯನ್ನು ಸ್ಥಳೀಯವಾಗಿ ʼಹೊಲಸಿನ ಹಕ್ಕಿʼ ಎಂದೇ ಕರೆಯುತ್ತಾರೆ. ಇಲ್ಲಿ ಗೌಲಿಗೆ ಇರುವ ಅರ್ಥದ ಹಿನ್ನೆಲೆಯಲ್ಲಿ ಬಳಕೆಯಾದ ʼಹೊಲಸುʼ ಪದದಲ್ಲಿ ನಕಾರಾತ್ಮಕತೆ ಇಲ್ಲ. ಆ ಹಕ್ಕಿಯ ಮಾಂಸದ ಸಾಮರ್ಥ್ಯ ಕುರಿತ ಮೆಚ್ಚುಗೆ ಇದೆ.  ಹಾಗಾಗಿ ಈ ʼಹೊಲಸುʼ ಮೈಲಿಗೆಗೆ ಸಂವಾದಿಯಲ್ಲ. ಹಾಗೆ ನೋಡಿದರೆ ನಮ್ಮʼಹೊಲಿರಾಶಿʼ ಮೂಲದಲ್ಲೂ ಹೊಲಿ/ಪೊಲಿ ಇದೆ. ನಾನು ತಿಳಿದಂತೆ ಈ ಪವಿತ್ರ ಹೊಲಿರಾಶಿಗೆ ಹೊಲ್ಗೀಟು/ಹೊಲೇಟ್‌ ಹಿಡಿಯಲು ಅಂದರೆ ಭತ್ತದ ರಾಶಿ ಮೇಲೆ ಪವಿತ್ರಗೆರೆಗಳನ್ನು ಎಳೆಯಲು ಈ ಹೊಲಸಿನ ಒಲೆಯಿಂದಲೇ ಬೂದಿ ಒಯ್ಯಲಾಗುತ್ತದೆ.

ಹೊಲಸು ಎಂಬ ಪದ ನಕಾರಾತ್ಮಕ ಅರ್ಥ ಛಾಯೆಯಲ್ಲಿಲ್ಲ ಮತ್ತು ಸಾರು ಮಾಡುವ ಅಳಗೆ(ಪಾತ್ರೆ), ಒಲೆಗಳನ್ನು ಗೌಲು, ಹೊಲಸು ಎರಡೂ ಪದಗಳಿಂದ ಗುರುತಿಸಲಾಗುತ್ತದೆ ನಿಜ. ಆದರೆ ಅಟ್ಟುಂಡುದನ್ನು  ಸೂಚಿಸಲು ಗೌಲು-ಸಿರ ಮಾತ್ರ ಬಳಸಲಾಗುತ್ತದೆ. ಅಲ್ಲಿ ʼಹೊಲಸುʼ ಇಲ್ಲ. ಒಲೆ, ಅಳಗೆ, ಹಕ್ಕಿಗಳಿಗೆ ಹೊಲಸು ಎಂಬ ಪೂರ್ವಪದವನ್ನು ಸೇರಿಸಿ ಬಳಸುವಂತೆ ಉಣ್ಣುವ ಉಣಿಸಿಗೆ ಈ ಪೂರ್ವಪದ ಇಟ್ಟು ಹೇಳುವ ರೂಢಿಯಿಲ್ಲ. ಅಲ್ಲಿರುವುದು ಗೌಲು-ಸಿರ ಮಾತ್ರವೇ. ಏನು ಊಟಮಾಡಿದೆ ಎಂಬುದನ್ನು ಸಿರ ಊಟ, ಗೌಲು ಊಟ ಎಂಬಂತೆ ಹೇಳಲಾಗುತ್ತದೆಯೇ ಹೊರತು ʼಹೊಲಸು ಊಟʼ ಎಂದಲ್ಲ. ಹೀಗೆ ಒಲೆ, ಪಾತ್ರೆ ಹೊಲಸಾದರೂ, ಅನ್ನ/ಉಣಿಸು ಹೊಲಸಾಗಲಿಲ್ಲ! ಇಲ್ಲಿ ಇನ್ನೊಂದು ಸೂಕ್ಷ್ಮವಿದೆ ಅದೇನೆಂದರೆ ತರಕಾರಿ ಮಾಂಸ ಎರಡೂ ತಿನ್ನುವ ಪರಿಕರಗಳೇ ಆಗಿ ಒಂದೇ ಹೊಟ್ಟೆಗೆ ಸೇರುವಂತಿದ್ದರೂ ಸವಿಯುವ ನಾಲಗೆ ಅದನ್ನು ವಿಂಗಡಿಸಿಕೊಂಡೇ ತಿನ್ನಬೇಕು. ಹಾಲು ಮತ್ತು ಮೊಸರನ್ನು ಒಟ್ಟಿಗೇ ಬೆರೆಸಿ ತಿನ್ನಲಾಗದು. ನೀರುಕುಡಿಯುವಾಗ ಉಪ್ಪಿನಕಾಯಿ ಮತ್ತು ಬೆಲ್ಲ ಎರಡನ್ನೂ ಒಟ್ಟಿಗೇ ತಿನ್ನಲಾಗದು. ಹಾಗೆಯೇ ಮಾಂಸ ಮತ್ತು ತರಕಾರಿ ಒಟ್ಟಿಗೇ ಬೇಯಿಸಲಾರದ ಮತ್ತು ಬೆಂದ ಮೇಲೆ ಒಟ್ಟಿಗೇ ಬೆರೆಸಿ ಸವಿಯಲಾರದ ಖಾದ್ಯಗಳಾಗುತ್ತವೆ. ಎರಡರ ರುಚಿಸಂಸ್ಕಾರಗಳು ಸಹಜವಾಗಿಯೇ ಒಂದೇ ಆಗಲಾರವು. ಈ ಹಿನ್ನೆಲೆಯಲ್ಲಿ ಬೇಯುವ ಒಲೆ, ಪಾತ್ರೆ, ಸೌಟುಗಳು ಎರಡಕ್ಕೂ ಬೇರೆಯಾಗುವುದರಲ್ಲಿ ಒಂದು ತರ್ಕವಿದೆ. ಹಾಲು ಮಜ್ಜಿಗೆಗಳನ್ನು ಬೇರಿಡುವಂತೆ ಆಹಾರದ ಆರೋಗ್ಯ, ನೈರ್ಮಲ್ಯದ ಕಾರಣಕ್ಕೂ ಈ ಅಡುವ ಪಾತ್ರೆ, ಪರಡಿ ಒಲೆಗಳು ಮತ್ತು ಅವುಗಳನ್ನು ಸಂಕೇತಿಸುವ ಪದಕೋಶಗಳು ಹೀಗೆ ಬೇರಾಗಿರಬಹುದು. ಆದ್ದರಿಂದ ಹೊಲಸು ಒಂದರ್ಥದಲ್ಲಿ ಸಂಕೀರ್ಣ ಪದ. ಪ್ರಾಯಶಃ ಹೊಲಸು ಪದ ನಕಾರಾತ್ಮಕವಲ್ಲದೆಯೂ ನೀಚೀಕರಣಕ್ಕೆ ಒಳಗಾಗಲು ಅದರ ಬಳಕೆಯಲ್ಲಿರುವ ಈ ಸ್ಪೇಸ್‌ ಕೂಡ ಒಂದು ಕಾರಣವಾಗಿ ಸಂಸ್ಕೃತಿಯ ಒಳನಡೆಗೆ ಲಗ್ಗೆಯಿಟ್ಟ ದಾಳಿಕೋರಪಡೆಯ ಕೆಲಸ ಹಗುರಾಗಿರಬಹುದು.

ಜನಪದ ಜಗತ್ತು ವಿಂಗಡಣೆ ಇಲ್ಲದೆ ಎಲ್ಲವನ್ನೂ ಒಳಕೊಳ್ಳುತ್ತದೆ ಎಂದಾಗಲೀ, ಅಲ್ಲಿ ಒಳಗು-ಹೊರಗು ಎನ್ನುವ ವ್ಯತ್ಯಾಸಗಳೇ ಇಲ್ಲವೆಂದಾಗಲೀ ಹೇಳಿದರೆ ಅದು ಬೀಸು ಹೇಳಿಕೆಯಾಗುತ್ತದೆ. ಆದರೆ ಅಲ್ಲಿರುವ ಈ ವಿಂಗಡಣೆ, ಮಡಿ-ಮೈಲಿಗೆಗಳು ಕಾಲಿಕ. ಅವುಗಳಿಗೆ ಚಿರ ನಾಮಫಲಕಗಳಿಲ್ಲ. ಅಲ್ಲಿ ಹೊರಗೆ ಅಟ್ಟು ಮಾಡುವ ಅಡುಗೆಯೇ ಹಿರೀಕರ ಎಡೆಗಳಿಗೆ ಒಳತಂದು ಬಡಿಸುವ ಮೀಸಲು! ಕುಂದಗನ್ನಡ ಸಾಂಸ್ಕೃತಿಕ ಸೀಮೆಯಲ್ಲಿ ಹೀಗೆ ಹಿರೀಕರಿಗೆ ಬಡಿಸಿಡುವ ಬಹುಮಟ್ಟಿನ ಮೀಸಲೆಡೆಗಳು ಇಂತಹ ಗೌಲುಗಳೇ ಆಗಿವೆ. ದೀಪಾವಳಿಯಲ್ಲಿ ಗದ್ದೆಗೆ ಹಿಟ್ಟು ಬಡಿಸಿ ಹೊಲಿ ಕರೆದು ಬಂದ ನಂತರದಲ್ಲಿ ಮೊರ(ಗೆರಸಿ)ದಲ್ಲಿ ಹಿಟ್ಟು, ದೀಪ ಇರಿಸಿಕೊಂಡು “ಆಸಾಡಿಹಬ್ಬದ್ ಆಸಿ ಕಂಡೆ, ದೀಪೋಳಿ ಹಬ್ಬದ್‌ ದೀಪಾ ಕಂಡೆ ಮುಂದ್‌ ಬತ್ತ್‌ ಕೊಡಿ ಕಾಣ್”‌ ಎಂದು ಹಸುವಿನ ಎದುರು ಹೇಳುವ ಸೊಲ್ಲಿನಲ್ಲಿ ಬರುವ ಎಲ್ಲ ಆಚರಣೆಗಳು ಗೌಲಿನ ಜೊತೆಗೇ ಇವೆ. ಆಸಾಡಿ ಹಬ್ಬದ ದೋಸೆಯ ಆಸಿಯೂ ಗೌಲೇ, ದೀಪಾವಳಿಯ ಕಡುಬಿನ ಗಸಿಯೂ ಗೌಲೇ, ಕೊಡಿಹಬ್ಬದ ಓಡುದೋಸೆಯ ತೂಂತಿಗೂ ಗೌಲೇ. ಹೊಸ್ತಿನ ದಿನದ ಮಧ್ಯಾಹ್ನಕ್ಕೆ ಸಿಹಿಯಾದರೆ ರಾತ್ರಿಗೆ ಗೌಲೇ ಇರಬೇಕು. ಕೊಯ್ಲು ಆರಂಭಕ್ಕೆ ಮೊದಲು ಮಾಡುವ ಹೊಸಕ್ಕಿ ಬಾಗುವ ಆಚರಣೆಯಲ್ಲಿ ಹೊಸ ಅನ್ನಕ್ಕೆ ಮೀನು ಅಥವಾ ಗೌಲೇ ಬೇಕು ಅಂದಮೇಲೆ ಗೌಲೆಲ್ಲಿ ಮೈಲಿಗೆ?

ಎಲ್ಲಕಿಂತ ಮುಖ್ಯವಾಗಿ ಜೀವನದ ಗತಿಯ ಭಾಗವಾದ ಸಾವಿನ ಆಚರಣೆ ಸೂಚಿತವಾಗುವುದೇ ಗೌಲಿನ ಮೂಲಕ. ಸೂತಕ ಆರಂಭವಾಗುತ್ತಿದ್ದಂತೆಯೇ ನಿಂತುಬಿಡುವ ಗೌಲು ಅಡುಗೆ ಸೂತಕ ಮುಗಿಯುತಿದ್ದ ಹಾಗೆಯೇ ಮತ್ತೆ ಆರಂಭವಾಗುತ್ತದೆ. ಹಾಗಾಗಿ ಗೌಲು ಬಿಡುವುದು ಮತ್ತು ಗೌಲು ಮುಟ್ಟುವುದೇ ಸಾವಿನ ಆಚರಣೆಯ ಬಹುಮುಖ್ಯ ನಡೆ. ಸತ್ತ ದಿನದಿಂದ ತೊಡಗಿ ಹನ್ನೊಂದನೇ ದಿನದ ಮಧ್ಯಾಹ್ನದ ತನಕ ಗೌಲುಬಿಟ್ಟು ಸೂತಕದಲ್ಲಿದ್ದ ಕುಟುಂಬ ಸೂತಕ ಕಳೆಯುತಿದ್ದಂತೆಯೇ ಹನ್ನೊಂದರ ರಾತ್ರಿ ಸತ್ತವನ ಕುರುಹಾಗಿ ಒಂದು ತೆಂಗಿನಕಾಯಿಯನ್ನು ಮಣೆಯ ಮೇಲಿಟ್ಟು ಗೌಲು ಎಡೆ ಬಡಿಸಿ ನಂತರ ಸರಿರಾತ್ರಿಯ ಕತ್ತಲಲ್ಲೇ ದೈವದ ಕಾಲಡಿಗೆ ಹಾಕಿ ಬರುತ್ತದೆ. ನಂಬಿಕೆಯ ಪ್ರಕಾರ ನಮಗೆ ಸ್ವರ್ಗವೂ ಇಲ್ಲ, ಸಾಯುಜ್ಯವೂ ಇಲ್ಲ. ಇರುವುದು ದೈವದಮನೆ ಮಾತ್ರ. ಆದರೆ ಅಲ್ಲಿಗೆ ಸೇರಬೇಕಾದರೆ ಯಾವ ಮಾಲಿನ್ಯವೂ ಇರಬಾರದು. ಮಾತಿನಮಾಲಿನ್ಯ, ಅರೆಬದುಕಿನ ಮಾಲಿನ್ಯ ಇರಕೂಡದು(ಮದುವೆಯಿಲ್ಲದ ಗೊಡ್ಡು ಬಾಳು. ಮಕ್ಕಳಿಲ್ಲ ಎನ್ನುವದಲ್ಲ, ಮದುವೆ ಇಲ್ಲ ಎನ್ನುವುದು ಬದುಕಿನ ಬಹುದೊಡ್ಡ ಊನ. “ಹುಟ್ಟದ್ದಕ್ಕ್‌ ಒಂದ್‌ ಮದಿ ಸತ್ತದ್ದಕ್ಕ್‌ ಒಂದ್‌ ಬಜ್ಜ” ಎಂಬ ಮಾತು ಅದಕ್ಕಾಗಿಯೇ ಇರುವ ವಾಗ್ರೂಢಿ. ಹಾಗಾಗಿ ʼಒಡಲಿಚ್ಚೆಯನ್ನು ಸಲಿಸದೆ ನಿಮಿಷವಿರಕೂಡದುʼ ಎಂಬ ಅಲ್ಲಮನ ಮಾತಿನಂತೆಯೇ ಇಂದ್ರಿಯಬದ್ಧ ದೇಹವು ಇಂದ್ರಿಯದ ಇಚ್ಚೆಯನ್ನು ಸಲಿಸುವ ಅನುಭವಕ್ಕೆ ಒಡ್ಡಿಕೊಳ್ಳುವ ಕೂಡಿದ ಬಾಳಾಗಬೇಕು. ಹಾಗಾಗದ ಒಂಟಿಬಾಳು ಎಂಬ ನಿಸರ್ಗವಿರೋಧಿ ನಡೆ ನಮ್ಮದಲ್ಲ. ಹಾಗಾಗಿ ಇಂದು ಬಹುವಾಗಿ ವೈಭವೀಕರಿಸಲಾಗುತ್ತಿರುವ ಬ್ರಹ್ಮಚರ್ಯ ನಮ್ಮ ಪಾಲಿಗೆ ಮೌಲ್ಯವಲ. ಹೀಗೇ ಉಳಿದವನಿಗೆ ಅನ್ನ ನೀರಿಲ್ಲ.). ಹೀಗೆ ಶುದ್ಧವಾದವನನ್ನು ಸೂತಕ ಶುದ್ದವಾದ ಮೇಲೆ ʼಶುದ್ಧ ಗೌಲುʼ ಹಾಕಿ ದೈವದ ಮನೆ ಎಂಬ ನಮ್ಮದೇ ಮನೆಗೆ ಬಿಟ್ಟು ಬರುತ್ತೇವೆ! ಸಾವಿನ ವಿಧಿ ಎಲ್ಲವೂ ಸುಸೂತ್ರವಾಗಿ ನಡೆದವನು ಹೀಗೆ ಕೊನೆಯ ಗೌಲುಮುಟ್ಟಿ ʼದೈವದ ಮನೆಗೆʼ ಸೇರುವ ಮೂಲಕ ʼಅನ್ನನೀರಿಗೆʼ ಬರುವ ಅರ್ಹತೆ ಪಡೆಯುತ್ತಾನೆ.  ಆತನನ್ನು ಹೀಗೆ ಅನ್ನ ನೀರಿನ ಕಲ್ಪಿತ ಸಹಜತೆಗೆ ಸೇರಿಸಿದ ಕುಟುಂಬಿಕರು ತಮ್ಮ ಸಹಜ ಬದುಕಿನ ಲಯವನ್ನು ಮತ್ತೆ ಜೋಡಿಸಿಕೊಳ್ಳುವ ಹಾಗೆ ತಾವೂ ʼಗೌಲು ಮುಟ್ಟಿʼ ಸೂತಕ ದಾಟುತ್ತಾರೆ. ಈ ಆಚರಣೆ ಕುಂದಗನ್ನಡದ ತಳಮೂಲ ಬದುಕು ʼಗೌಲುʼ ಎನ್ನುವ ಪದ ಮತ್ತು ಅದು ಸೂಚಿಸುವ ಪರಿಕರದ ಜೊತೆಗೆ ಹೊಂದಿರುವ ಸಾಂಸ್ಕೃತಿಕ ಸಂಬಂಧ ಹಾಗೂ ಮಹತ್ವ ಎಂಥಾದ್ದು ಎಂಬುದರ ಸ್ಪಷ್ಟಸೂಚನೆ ನೀಡುತ್ತದೆ. ಯಾವುದನ್ನು ಹೊರಗೆ ತಯಾರಾಗುವ ಹೊಲಸು ಎಂಬಂತೆ ಕರೆಯಲಾಗುತ್ತದೆಯೋ ಅದೇ ಸಂಗತಿಯನ್ನು ಬದುಕಿನ ಸಹಜಲಯವನ್ನು ಆಗುಗೊಳಿಸುವ, ಹೊರಗುಳಿಸಲಾದ ಬದುಕನ್ನು ಒಳಗೆ ಸೇರಿಸಿಬಿಡುವ ಸಾಧನ ಅಥವಾ ತಂತುವಾಗಿ ಬಳಸುವ ಈ ಪರಿ ಅನನ್ಯವಾದುದೇ ಆಗಿದೆ. ಸ್ವರ್ಗದ ಪರಿಭಾಷೆಯನ್ನೇ ಬಳಸದ, ಮೋಕ್ಷ ಎನ್ನುವ ಅಮೂರ್ತದ ಜೊತೆಗೂ ವ್ಯವಹರಿಸದ ಈ ಲೋಕ ಬದುಕಿರುವವನಿಗೆ ಅಷ್ಟೇ ಅಲ್ಲ, ಸತ್ತವನಿಗೂ ಅನ್ನನೀರು ಮುಖ್ಯ ಎನ್ನುತ್ತದೆ. ಹಾಗೆ ಅದು ಅನ್ನ ನೀರು ಅಂತ ಕರೆಯುವುದರ ಒಳಗೆ ಗೌಲೇ ಇದೆ. ನಾವು ʼಹಾಕಿಬೆಚ್ಚು/ಮಿಸಾಲ್‌ ಇಡುವುದುʼ   ಏನಿದ್ದರೂ ಮುಖ್ಯವಾಗಿ ಮಾಂಸದೂಟವನ್ನೇ. ನಮ್ಮ ʼಜಕಣಿʼ ಇದೇ ಅಲ್ಲವೆ?

ಹೊಲಸು ಎಂಬ ಪದ ಮೈಲಿಗೆಗೆ ಸಂವಾದಿ ಅಲ್ಲ. ಹಾಗಾಗಿ ಈ ʼಗೌಲು – ಸಿರʼಗಳನ್ನು ವಿಂಗಡಿಸಿ ಗೌಲು/ಹೊಲಸುಗಳನ್ನು ಮೈಲಿಗೆ/ಹೊರಗೆ/ಅಶುದ್ಧ ಎನಿಸಿದ ಬೆಳವಣಿಗೆ ಸಾಂಸ್ಕೃತಿಕ ವಸಾಹತೀಕರಣದ ಪರಿಣಾಮದಲ್ಲಾದುದು. ಹೊಲಸು, ಹೊಲಸಿನ ಒಲೆಗಳು ನೀಚವಲ್ಲದ ಸಂಸ್ಕೃತಿಯೊಂದರ ಒಳಗೆ ಆ ಆಹಾರವೇ ʼನೀಚ/ಅಶುದ್ಧʼವೆಂಬ ಸ್ವಸಮ್ಮತಿ, ಅದರ ಸೀಮಿತ ತ್ಯಾಗಗಳು ಬಾಹ್ಯನುಸುಳುಕೋರರ ದಾಳಿಯ ಪರಿಣಾಮಗಳು. ನಮ್ಮ ಮನೆಯ ಒಳಾಂಗಣಗಳಿಗೆ ಹೊಕ್ಕ ಎರವಲು ದೇವರುಗಳ ದಾಳಿಯಿಂದ ಅಥವಾ ದೈವಗಳ ಜಾಗಕ್ಕೆ ಲಗ್ಗೆಯಿಟ್ಟ ದೇವರುಗಳಿಂದಾದ ಬೆಳವಣಿಗೆ. ಇದನ್ನು ಮತ್ತಷ್ಟು ಸ್ಪಷ್ಟಪಡಿಸುವುದಾದರೆ ಶಂಕರತಂದೆ/ಸಂಕರಗಂಡ ಎಂಬಂತೆಯೇ ತೀರಾ ಗೌರವದಿಂದ ಕರೆಯುವ, ಬತ್ತದ ರಾಶಿಯನ್ನು ʼಹೊಲಿರಾಶಿʼ ಎಂದೇ ಕರೆವ ನಾವು ಆ ಪವಿತ್ರಹೊಲಿರಾಶಿಗೆ ಹೊಲಿಗೀಟು(ಹೊಲ್ಗೀಟು) ಹಾಕಲು ಬೂದಿ ತೆಗೆಯುವ ಒಲೆ ಹಾಗೂ ದೀಪಾವಳಿಯಂದು ಗದ್ದೆಗೆ ಹಿಟ್ಟುಹಾಕಲು ಒಯ್ದ ಬೆಂಕಿ ಸೂಡಿ(ಸೂಟೆ)ಯನ್ನು ಊಡುವ(ಕೂಡುವ) ಒಲೆ ಎರಡೂ ಈ ಹೊಲಸಿನ ಒಲೆಯೇ ಆಗಿದೆ. ಆದರೆ ದೈವವನ್ನು ಉಂಟುಮಾಡಿಕೊಳ್ಳು/ಆಳಿಸುವಾಗ, ತುಳಸಿ ಇತ್ಯಾದಿಗಳಿಗೆ ದೂಪ ಹಾಕುವಾಗ ಒಳಗಿನ ಒಲೆಯ ಬೆಂಕಿಯ ಗೆಂಡವನ್ನೇ ಬಳಸುತ್ತೇವೆ. ಹಾಗೆಯೇ ದೈವದ ಹೆಸರಲ್ಲಿ ಉರಿಸಿದ ದೀಪದ ಕುಡಿಯನ್ನು ಈ ಒಲೆಯಲ್ಲೇ ಕೂಡಲಾಗುತ್ತದೆ. ಇದಕ್ಕೆ ಮುಖ್ಯಕಾರಣ ಈ ಒಳಗಿನ/ಸಿರ ಒಲೆ ಯಾವ ದಿನವೂ ನಂದದೆಯೇ ಉರಿಯುವ ಒಲೆ. ಅದು ಎಂದೂ ಆರಬಾರದ ಬೆಂಕಿ(ʼಒಲೆಗ್ ಹಾವ್ ಹೊಡ್ಕತ್ತ್‌ʼ ಎಂಬ ಮಾತನ್ನು ಗಮನಿಸಿ). ಮನೆಯಲ್ಲಿ ಬೆಂಕಿ ಉಳಿಸಿಕೊಳ್ಳುವುದು ಸವಾಲೇ. ಅದು ಕೇವಲ ಕಟ್ಟಿಗೆಯ ಸಮಸ್ಯೆಯಷ್ಟೇ ಅಲ್ಲ, ಪ್ರತಿ ದಿನ ಅನ್ನ ಬೇಯಿಸುವ ಸವಾಲು. ಮೇಲೋಗರ ಇಲ್ಲದೆಯೂ ಬದುಕಬಹುದು ,ಓಗರವೇ ಇಲ್ಲವೆಂದರೆ ಬದುಕು ಹೇಗೆ? ಹೊಲಸಿನ ಒಲೆಯ ಬೆಂಕಿ ಹೀಗೆ ಆರದೆ ಉರಿಯಬೇಕೆಂಬ ನಿಯಮವಿಲ್ಲ. ಹಾಗೆ ಉರಿಸಲೂಬಾರದು ಎಂಬ ಆರೋಗ್ಯದ ಅರಿವು ನಮ್ಮ ಹಿರೀಕರಿಗೆ ಇತ್ತು. ಹಾಗಾಗಿ ನಂದಾದೀಪದಂತೆ ಉರಿಯುವ ಸಿರ ಒಲೆಯ ನಿರಂತರತೆಯೇ ಈ ರಿವಾಜುಗಳ ಹಿಂದಿನ ಕಾರಣವಿದ್ದಂತಿದೆ. ಈ ಅರ್ಥದಲ್ಲಿ ಅದು ಚಿರ(ಚಿರ>ಸಿರ)/ ಶಾಶ್ವತ ಒಲೆ. ನಿರಂತರತೆಯ ನಿರೀಕ್ಷೆಯ ಶುಭ ಸಂಗತಿಗಳೊಂದಿಗೆ ನಂಟುಳ್ಳ ಒಲೆ. ಸಹಜವಾಗಿಯೇ ಹೀಗೆ ಉರಿಯುತ್ತಲೇ ಇರುವ ಖಾಯಂ ಒಲೆಯಲ್ಲದ ಹೊಲಸಿನ ಒಲೆ ಈ ಆಚರಣೆಗಳಿಂದ ಹೊರಗಿದೆಯಲ್ಲದೆ, ಅಶುದ್ಧವೆಂದಲ್ಲ. ಆದರೆ ಇದನ್ನು ಹೀಗೆ ವಿವರಿಸಿಕೊಳ್ಳದೆ ಹೊಲಸು ಎಂಬುದನ್ನು ಹೊಲೆ, ಮೈಲಿಗೆ ಅಶುದ್ಧ ಎಂಬ ಅನ್ಯ ನಿರ್ದೇಶನಕ್ಕೇ ಕಿವಿಗೊಟ್ಟುದರ ಪರಿಣಾಮವಾಗಿ ನಮ್ಮ ಅನ್ನವನ್ನು ನಾವೇ ತುಚ್ಚೀಕರಿಸುವಂತಾಗಿದೆ. ಆದ್ದರಿಂದ ಕುಂದಾಪುರದ ಗೌಲು ಹೊಲಸು ಹೌದು. ಆದರೆ ಹೊಲೆ, ಹೊರಗೆಂಬ ಅಶುದ್ಧವಲ್ಲ. ನಮಗೆ ಗೌಲಿಲ್ಲದ ಬದುಕು ಬದುಕೇ ಅಲ್ಲ, ಸೂತಕ.

  • ಡಾ ಜಯಪ್ರಕಾಶ್ ಶೆಟ್ಟಿ ಹೆಚ್ ಕುಂದಾಪುರ

(ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥರು. ಇವರ ‘ನೆಲದ ನೆನಪು’ ಕೃತಿಯು ‘2014ನೇ ಸಾಲಿನ ಜಾನಪದ ಅಕಾಡೆಮಿಯ ಸಂಕೀರ್ಣ ವಿಭಾಗದ ಪುಸ್ತಕ ಪ್ರಶಸ್ತಿ’ಗೆ ಆಯ್ಕೆಗೊಂಡಿದೆ.)


ಇದನ್ನೂ ಓದಿ: ನಾಳೆ ವಿಶ್ವ ಕುಂದಾಪುರ ದಿನಾಚರಣೆ: ಕುಂದಗನ್ನಡ ಒಂದು ಹರ್‌ಕಟ್ ಭಾಷಿ ಅಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...