ನಾಟಕ ಕರುಣಾಳು ಬಾ ಬೆಳಕೆ

ಕಳೆದು ಹೋದ ದಿನಗಳು ಭಾಗ-2, ಅಧ್ಯಾಯ – 9

ಕಾಫಿ ಬೆಲೆಯೇರಿಕೆ ಮತ್ತಿತರ ಸಂಗತಿಗಳಿಂದ ಗೂಡು ಸೇರಿಕೊಂಡಿದ್ದ ಜನರನ್ನು ಮತ್ತೆ ಬಯಲಿಗೆ ತಂದಿದ್ದು ಆಗ ನಡೆದ “ಸಂಪೂರ್ಣ ಸಾಕ್ಷರತಾ ಆಂದೋಲನ”. ದೇಶದ ಹಲವು ಭಾಗಳಲ್ಲಿ ಮೊದಲೇ ಪ್ರಾರಂಭವಾಗಿದ್ದ ಸಾಕ್ಷರತಾ ಆಂದೋಲನ 1992-93 ರ ವೇಳೆಗೆ ಕಾಫಿ ವಲಯದಲ್ಲಿ ವ್ಯಾಪಕವಾಗಿ ಪ್ರಾರಂಭವಾಯಿತು. ಆ ವೇಳೆಗಾಗಲೇ ಎಲ್ಲ ಜನಪರ ಚಳುವಳಿಗಳು ಮಲೆನಾಡಿನಲ್ಲಿ ಸಂಪೂರ್ಣ ನಿಂತುಹೋಗದಿದ್ದರೂ ತನ್ನ ಕಾವನ್ನು ಕಳೆದುಕೊಂಡಿದ್ದವು.

ಆಗ ಬಂದ ಸರ್ಕಾರಿ ಪ್ರಾಯೋಜಿತ ಆಂದೋಲನವನ್ನು ಸುಮಾರಾಗಿ ಎಲ್ಲ ಚಳುವಳಿಗಳೂ ಜನ ಸಂಪರ್ಕಕ್ಕೆ ಮತ್ತು ಸಂಘಟನೆಗೆ ಬಳಸಿಕೊಂಡವು. ಈ ಅವಕಾಶವನ್ನು ರೈತ ಸಂಘಟನೆಗಳು, ದಲಿತ ಹಾಗೂ ಎಡ ರಾಜಕೀಯ ಪಕ್ಷಗಳು ಚೆನ್ನಾಗಿಯೇ ಬಳಸಿಕೊಂಡವು.

ನಮ್ಮ ಜೈಕರ್ನಾಟಕ ಸಂಘ ಸಕಲೇಶಪುರದ ಕೆಲವು ಗೆಳೆಯರ ಜೊತೆಸೇರಿ ಸರ್ಕಾರದ ಅಧಿಕೃತ ಆಂದೋಲನ ಪ್ರಾರಂಭವಾಗುವ ಮುಂಚೆಯೇ ಇಡೀ ತಾಲ್ಲೂಕಿನಲ್ಲಿ ಒಂದು ಸಾಂಸ್ಕೃತಿಕ ಜಾಥಾವನ್ನು ಮಾಡಿತ್ತು. ಸಕಲೇಶಪುರದಲ್ಲಿ ಉದ್ಯೋಗಿಗಳಾಗಿದ್ದ ಹಡ್ಳಹಳ್ಳಿ ರಾಮಚಂದ್ರ, ಎಸ್.ಆರ್.ಜಗದೀಶ್, ಶೈಲೇಶ್ ಕುಮಾರ್ ಬಾಬು ಮುಂತಾವರೆಲ್ಲರೂ ಸೇರಿ ಅಕ್ಷರದೀಪ ಎಂಬ ಸಂಘಟನೆಯನ್ನು ಮಾಡಿದ್ದರು.

ಸಾಕ್ಷರತಾ ರಂಗ ಶಿಬಿರ

ಈ ಅಕ್ಷರ ದೀಪ ಸಂಘಟನೆಗೆ ಅಧ್ಯಕ್ಷರಾಗಿ ಎಂದು ರವೀಂದ್ರನಾಥರನ್ನು ಕೇಳಿಕೊಳ್ಳಲು ಸಕಲೇಶಪುರದ ಗೆಳೆಯರು ಹಾರ್ಲೆಗೆ ಬಂದರು. ಆದರೆ ಕೊಮಾರ್ಕ್ ಸಂಸ್ಥೆಯ ಕೆಲಸಕಾರ್ಯಗಳಲ್ಲಿ ಮುಳುಗಿ ಹೋಗಿದ್ದ ಅವರು ಆ ಆಹ್ವಾನವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಎಲ್ಲ ರೀತಿಯ ಸಹಕಾರವನ್ನು ನೀಡಿದರು.

ಹಾಸನದ ಗ್ಯಾರಂಟಿ ರಾಮಣ್ಣ ಕೂಡಾ ಇದರಲ್ಲಿ ಭಾಗವಹಿಸಿ ಬೀದಿನಾಟಕಗಳ ತರಭೇತಿಯೂ ಸೇರಿದಂತೆ ಹಲವು ಕೆಲಸಗಳಲ್ಲಿ ಸಹಕಾರ ನೀಡಿದರು. ಈ ಜಾಥಾಕ್ಕಾಗಿ “ಭೀಮಣ್ಣನ ಕಥಾ ಪ್ರಸಂಗ” ಎಂಬ ಐದು ನಾಟಕಗಳ ಸರಣಿಯೊಂದನ್ನು ನಾನು ಬರೆದಿದ್ದೆ. ನಮ್ಮ ತಂಡದ ನಟರೂ ಸೇರಿ ಇಡೀ ತಾಲ್ಲೂಕಿನಲ್ಲಿ ಈ ನಾಟಕಗಳೂ ಸೇರಿದಂತೆ ಹಲವು ಕಾರ್ಯಕ್ರಮಗಳೊಂದಿಗೆ ಜಾಥಾ ನಡೆಸಿದ್ದವು. ಇದು ಮುಂದೆ ಹಾಸನದ ಆಕಾಶವಾಣಿಯಿಂದಲೂ ಪ್ರಸಾರವಾಗಿ ಉತ್ತಮ ಸಾಕ್ಷರತಾ ನಾಟಕವೆಂಬ ಮನ್ನಣೆ ಪಡೆಯಿತು.

ಇದರಿಂದಾಗಿ ಅಧಿಕೃತವಾಗಿ ಸಾಕ್ಷರತಾ ಆಂದೋಲನ ಪ್ರಾರಂಭವಾದಾಗ ಸಹಜವಾಗಿಯೇ ಜಿಲ್ಲಾಧಿಕಾರಿಗಳು ನಮಗೆ ಆಹ್ವಾನವನ್ನು ನೀಡಿದ್ದರು.

ಹಾಸನದ ಜ.ಹೊ.ನಾರಾಯಣ ಸ್ವಾಮಿಯವರ ಮಾರ್ಗದರ್ಶನದಲ್ಲಿ ಹಾಸನ ಜಿಲ್ಲೆಯಲ್ಲಿ ಸಾಕ್ಷರತಾ ಆಂದೋಲನ ಸಂಘಟನೆಯಾಯಿತು, ಜಿಲ್ಲೆಯ ರೈತ -ದಲಿತ ಸಂಘಟನೆಗಳು, ಎಡ ಪಕ್ಷಗಳ ಕಾರ್ಯಕರ್ತರು, ಜನವಿಜ್ಞಾನ ಜಾಥಾದ ಗೆಳೆಯರು, ಎಲ್ಲರೂ ಉತ್ಸಾಹದಿಂದ ಸೇರಿದರು.

ಆಗ ಸಕಲೇಶಪುರದಲ್ಲಿ ಉಪವಿಭಾಗಾಧಿಕಾರಿಗಳಾಗಿದ್ದವರು ಎ.ಬಿ.ಇಬ್ರಾಹಿಂ ಅವರು, ಇವರು ನಂತರ ಹಲವು ಕಡೆಗಳಲ್ಲಿ ಜಿಲ್ಲಾಧಿಕಾರಿಗಳಾಗಿ, ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳಾಗಿ ನಿವೃತ್ತರಾದರು.

ಎ.ಬಿ.ಇಬ್ರಾಹಿಂ ಅವರು ಈ ಆಂದೋಲನದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ದುಡಿದರು. ನಾವು ನಾಲ್ಕು ಸಾಂಸ್ಕೃತಿಕ ತಂಡಗಳನ್ನು ರಚಿಸಿಕೊಂಡೆವು. ಅವುಗಳಿಗೆ ತರಬೇತಿ, ಜಾಥಾ ಹೋಗಬೇಕಾದ ಸ್ಥಳಗಳ ತೀರ್ಮಾನ, ಅಲ್ಲಿನ ಸ್ಥಳೀಯ ಸಂಘಟನೆ, ಜೊತೆಗೆ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿಯೂ ನಮ್ಮ ತಂಡಗಳ ಬಳಕೆ ಇವೆಲ್ಲದರ ಹಿಂದೆ ಇಬ್ರಾಹಿಂ ಅವರು ಜೊತೆಗಿದ್ದರು. ಹೆಚ್ಚಾಗಿ ತಡ ರಾತ್ರಿಯಲ್ಲಿ ನಡೆಯುತ್ತಿದ್ದ ಹಳ್ಳಿಗಳಲ್ಲಿನ ಕಾರ್ಯಕ್ರಮಗಳಿಗೂ ಅವರು ಬರುತ್ತಿದ್ದರಲ್ಲದೆ. ಬೆಳಗ್ಗೆ ಆರು ಗಂಟೆಗೆ ಮತ್ತೆ ಜಾಥಾದ ಸ್ಥಳಕ್ಕೆ ಭೇಟಿಕೊಟ್ಟು ವಿಚಾರಿಸಿಕೊಂಡು ತಮ್ಮ ಕೆಲಸದ ನಿಮಿತ್ತ ಹೋಗುವರು.

ಜನರು ಇಬ್ರಾಹಿಂ ಅವರನ್ನು ಸಾಕ್ಷರತಾ ಆಂದೋಲನದ ಹೀರೋ ಎಂದು ಕರೆಯುತ್ತಿದ್ದರು.

ಮಾಯಾಮೃಗ ನಾಟಕ ತಂಡ

ಇದೆಲ್ಲದರ ಜೊತೆಯಲ್ಲಿ ನಮ್ಮ ಜೈಕರ್ನಾಟಕ ಸಂಘ ಶಾಲಾಶಿಕ್ಷಕರಿಗಾಗಿಯೇ ಒಂದು ಹತ್ತು ದಿನಗಳ ರಂಗಶಿಬಿರವನ್ನು ಏರ್ಪಡಿಸಿತ್ತು. ಸುತ್ತಲಿನ ಎಲ್ಲ ಗ್ರಾಮಗಳ ಜನರನ್ನೂ ಒಳಗೊಂಡು, ಪ್ರತಿದಿನ ಕೃಷಿ, ಹೈನುಗಾರಿಕೆ, ಆರೋಗ್ಯ, ಕಲೆ, ಸಾಹಿತ್ಯ, ರಂಗಭೂಮಿ, ಜಾನಪದ ಕಲೆಗಳು, ಚಿತ್ರಕಲೆ ಹೀಗೆ ಹಲವು ವಿಚಾರಗಳನ್ನಿಟ್ಟುಕೊಂಡು ರಾಜ್ಯ ಹೆಸರಾಂತ ಸಾಹಿತಿಗಳು, ಕಲಾವಿದರು, ಜನಪರ ಹೋರಾಟಗಾರರು, ಕೃಷಿ ವಿಜ್ಞಾನ ಕೇಂದ್ರಗಳ ತಜ್ಞರುಗಳನ್ನು ಕರೆಸಿ ವಿಚಾರ ವಿನಿಮಯವನ್ನೂ ಮಾಡಿದೆವು. ಇದರಲ್ಲಿ ಹಲವಾರು ಜನರು ಉತ್ಸಾಹದಿಂದ ಭಾಗವಹಿಸಿದರು.

ಇಡೀ ಶಿಬಿರದ ನಿರ್ದೇಶಕರಾಗಿ ಹಿರಿಯ ರಂಗ ನಿರ್ದೇಶಕ ದ್ರುವರಾಜ ದೇಶಪಾಂಡೆ ಇದ್ದರು. ಅವರು ಶಾಲಾ ಶಿಕ್ಷಕರ ತಂಡವೊಂದನ್ನು ಕಟ್ಟಿ “ಕರುಣಾಳು ಬಾ ಬೆಳಕೆ” ಎಂಬ ನಾಟಕವನ್ನು ಸಿದ್ಧಮಾಡಿಕೊಟ್ಟರು. ಅಕ್ಷರದ ಮೂಲಕ ಅರಿವಿನತ್ತ ಸಾಗುವ ಅಗತ್ಯವನ್ನು ಹೇಳುವ ಈ ನಾಟಕ ಜಿಲ್ಲೆಯ ಹಲವು ಕಡೆಗಳಲ್ಲಿ ಪ್ರದರ್ಶನವಾಯಿತು. ಈ ಎಲ್ಲ ಕಾರ್ಯಕ್ರಮಗಳ ಮೂಲಕ ನಾವು ಹಳ್ಳಿಗಳು ಮಾತ್ರವಲ್ಲ ಕಾಫಿವಲಯ ಎಲ್ಲ ತೋಟಗಳ ಕಾರ್ಮಿಕರನ್ನೂ ತಲುಪಲು ಸಾಧ್ಯವಾಯಿತು.

ಇವೆಲ್ಲದ ಜೊತೆಯಲ್ಲಿ ಅದೇ ಸಮಯದಲ್ಲಿ ನಮ್ಮ ರಂಗತಂಡಕ್ಕೆ ಪ್ಲಾಂಟರ್ ಪರಮೇಶಿ ಎನ್ನುವ ನಾಟಕವನ್ನು ಮಾಡಿಸಿದೆ. ಅದು ಫ್ರೆಂಚ್ ನಾಟಕಕಾರ ‘ಮೊಲಿಯೇರ್’ ನ “ಬೂರ್ಜ್ವಾ ಜಂಟಲ್ ಮನ್” ನಾಟಕದ ಸ್ಥಳೀಯ ರೂಪವಾಗಿತ್ತು. ನಮ್ಮ ಕಾಫಿಬೆಳೆಗಾರರೆನ್ನಿಸಿಕೊಂಡವರ ಜೀವನ ಶೈಲಿಯನ್ನಾಧರಿಸಿ ಈ ನಾಟಕವನ್ನು ಕಟ್ಟಿದ್ದೆವು.

ಇವೆಲ್ಲ ಚಟುವಟಿಕೆಗಳಿಂದ ಬೇರೆ ಹಲವು ರೀತಿಯ ಚಟುವಟಿಕೆಗಳಿಂದ ಪ್ರಕ್ಷುಬ್ಧವಾದಂತಿದ್ದ ನಮ್ಮ ತಾಲ್ಲೂಕಿನ ಕಾಫಿ ವಲಯಕ್ಕೆ ಒಂದಷ್ಟು ಸಾಂತ್ವನದ ಸ್ಪರ್ಶ ಸಿಕ್ಕಿದಂತಾಗಿತ್ತು.

ಈ ರೀತಿಯ ಚಟುವಟಿಕೆಗಳಿಂದಾಗಿ ಹಾಸನ ಜಿಲ್ಲೆಯ ಕಾಫಿವಲಯ ಮಾತ್ರವಲ್ಲ ಇಡೀ ಜಿಲ್ಲೆಯಲ್ಲಿಯೇ  ಸಾಕ್ಷರತಾ ಆಂದೋಲನ ಒಳ್ಳೆಯ ಯಶಸ್ಸನ್ನು ಕಂಡಿತು. ಅಷ್ಟೇ ಸಾಂಸ್ಕೃತಿಕವಾಗಿಯೂ ಮುನ್ನಡೆಗೆ ಚಾಲನಾ ಶಕ್ತಿಯಾಗಿ ಕೆಲಸಮಾಡಿತು.

ನಾಟಕ ಪ್ಲಾಂಟರ್ ಪರಮೇಶಿ

ಸಾಕ್ಷರತಾ ಅಂದೋಲನವನ್ನು ಜನರು ಅನೇಕ ಕಡೆಗಳಲ್ಲಿ ಮನೆರಂಜನೆಯ ಕಾರ್ಯಕ್ರಮವಾಗಿಯೇ ಕಂಡರು. ಹಾಗೂ ಆ ನಂತರದಲ್ಲಿ ಹಿರಿಯರು ತರಗತಿಗಳಲ್ಲಿ ಬಂದು ಅಕ್ಷರಾಭ್ಯಾಸ ಮಾಡಿದ್ದು ಕೂಡಾ ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಆ ಕ್ಷಣದಲ್ಲಿ ಆಂದೋಲನದ ಉದ್ದೇಶ ಜನರನ್ನು ಮುಟ್ಟಲಿಲ್ಲವೇನೋ ಎನಿಸಿದರೂ, ಸಾಕ್ಷರತಾ ಆಂದೋಲನದ ಯಶಸ್ಸು ಗೋಚರಿಸಿದ್ದು, ಮಕ್ಕಳ ವಿದ್ಯಾಭ್ಯಾಸದ ಹೆಚ್ಚಳದಲ್ಲಿ. ನಂತರದ ವರ್ಷಗಳಲ್ಲಿ ಎಲ್ಲ ಕೂಲಿ ಕಾರ್ಮಿಕರ ಮಕ್ಕಳೂ ಶಾಲೆಗೆ ಬರತೊಡಗಿದರು. ಹಳ್ಳಿ ಶಾಲೆಗಳಲ್ಲಿಯೂ ಮಕ್ಕಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಯಿತು. ಇಂದು ಸಾಕ್ಷರತೆಯ ಪ್ರಮಾಣ ಇಷ್ಟು ಏರಿಕೆಯಾಗುವಲ್ಲಿ ಅಂದಿನ ಸಾಕ್ಷರತಾ ಆಂದೋಲನದ ಪ್ರೇರಣೆ ಬುನಾದಿಯನ್ನು ಒದಗಿಸಿತ್ತು.

ಯಾವುದೇ ಸಮಾಜದಲ್ಲಿ ಆಗಲಿ ನಿರಂತರವಾಗಿ ಗಲಭೆ, ಯುದ್ಧಗಳಾಗಲೀ ಅಥವಾ ಇನ್ನಾವುದೇ ಕಾರಣಗಳಿಂದಾಗಲೀ ಯಾವುದೇ ರೀತಿಯ ಸಾಂಸ್ಕೃತಿಕವಾದ ಸ್ಪರ್ಷವಿಲ್ಲದೆ ಬಹಳಕಾಲ ಇರಲಾರದು. ಆದು ಆ ಸಮಾಜದ ಅಭಿವ್ಯಕ್ತಿಯಾಗಿರುತ್ತದೆ. ಅದರಲ್ಲಿ ಸಾಮಾಜಿಕ, ಪ್ರಾದೇಶಿಕ, ಜನಾಂಗೀಯವೂ ಆಗಿರುವ ಹಲವು ಭಿನ್ನತೆಗಳಿದೆ ನಿಜ. ಆದರೆ ಸಾಂಸ್ಕೃತಿಕ ಅಭಿವ್ಯಕ್ತಿಯ ತುಡಿತವನ್ನು ಬಹಳ ಕಾಲ ತಡೆದು ನಿಲ್ಲಿಸಲು ಸಾಧ್ಯವಾಗದು. ಇದು ಕಾಲದೊಡನೆ ಮನುಷ್ಯನೆಂಬ ಪ್ರಾಣಿ ಮಾತ್ರ ಕಂಡುಕೊಂಡ ಬದುಕಿನ ಹಾದಿಯಲ್ಲಿನ ಕೈಪಿಡಿಯಾಗಿದೆ.

ದೇಶದಲ್ಲಿನ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳು ಮತ್ತು ಕಾಫಿವಲಯದ ಆರ್ಥಿಕ ಪರಿಸ್ಥಿತಿಗಳು ಈ ಪ್ರದೇಶದಲ್ಲಿ ಒಟ್ಟಾರೆಯಾಗಿ ಪ್ರಕ್ಷುಬ್ಧತೆಯನ್ನು ತಂದಿದ್ದರೂ ಅದನ್ನು ಮೀರಿ ಅದರಿಂದ ಹೊರ ಬರುವ ಮತ್ತು ಸಮಾಜಕ್ಕೊಂದು ಸಾಂತ್ವನದ ಸ್ಪರ್ಷ ನೀಡುವ ಕೆಲಸಗಳೂ ನಡೆದೇ ಇದ್ದವು.

ಇದಕ್ಕೊಂದು ಉದಾಹರಣೆಯೆಂದರೆ 1994ರಲ್ಲಿ ಸಕಲೇಶಪುರದಲ್ಲಿ ನಡೆದ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ.

ಎರಡು ದಿನಗಳು ನಡೆದ ಆ ಜಿಲ್ಲಾ ಸಮ್ಮೇಳನ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಷ್ಟೇ ದೊಡ್ಡಮಟ್ಟದಲ್ಲಿ ನಡೆದಿತ್ತು. ಡಾ.ಹೆಚ್.ಜೆ ಲಕ್ಕಪ್ಪಗೌಡರು ಸಮ್ಮೇಳನಾಧ್ಯಕ್ಷರಾಗಿದ್ದರು. ಪೂರ್ಣಚಂದ್ರ ತೇಜಸ್ವಿ, ಎಂ.ಪಿ.ಪ್ರಕಾಶ್ ಸೇರಿದಂತೆ ನಾಡಿನ ಅನೇಕ ಹಿರಿಯ ಸಾಹಿತಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಕಲೇಶಪುರದ ಹೆಮ್ಮೆಯ ಎಸ್.ಕೆ.ಕರೀಂಖಾನರನ್ನು ಆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅಂದಿನ ಕನ್ನಡ ಸಂಸ್ಕೃತಿ ಸಚಿವರಾಗಿದ್ದ ಹೆಚ್.ವಿಶ್ವನಾಥ್ ಅವರು ಆ ವೇದಿಕೆಯಲ್ಲಿ ಕರೀಂಖಾನರ “ನಟವರ ಗಂಗಾಧರ” ಹಾಡನ್ನು ಹಾಡಿದರು.

ತಾಲ್ಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಚೆನ್ನವೇಣಿ ಶೆಟ್ಟಿ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದ ಬಾಳ್ಳು ಜಗನ್ನಾಥ್ ಅವರು ಈ ಸಮ್ಮೇಳನದ ಯಶಸ್ಸಿನ ರೂವಾರಿಗಳಾಗಿದ್ದರು. ಇದೇ ವೇದಿಕೆಯಲ್ಲಿ ನಮ್ಮ ರಂಗತಂಡದಿಂದ “ಮಾಯಾಮೃಗ” ನಾಟಕ ಪ್ರದರ್ಶನವಿತ್ತು. ರೈತ ಕಾರ್ಮಿಕರ ತಂಡದ ಈ ನಾಟಕ ಕರ್ನಾಟಕ ನಾಟಕ ಅಕಾಡೆಮಿಯಿಂದ ಗುಲ್ಬರ್ಗಾದಲ್ಲಿ ನಡೆದ ಗ್ರಾಮೀಣ ರಂಗೋತ್ಸವದಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿತ್ತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -1: ನಿಮಗೂ, ನನಗೂ ಸಂಬಳ ಕೊಡುವುದು ಈ ಕಾಫಿ ಗಿಡ ಎನ್ನುತ್ತಿದ್ದ ರವೀಂದ್ರನಾಥರು

LEAVE A REPLY

Please enter your comment!
Please enter your name here