Homeಮುಖಪುಟಮಹಾರಾಷ್ಟ್ರ:ಪತ್ರಕರ್ತನ ಮೇಲೆ ಶಾಸಕನ ಬೆಂಬಲಿಗರಿಂದ ಹಲ್ಲೆ

ಮಹಾರಾಷ್ಟ್ರ:ಪತ್ರಕರ್ತನ ಮೇಲೆ ಶಾಸಕನ ಬೆಂಬಲಿಗರಿಂದ ಹಲ್ಲೆ

- Advertisement -
- Advertisement -

8ರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಮುಂದಿಟ್ಟು ಶಾಸಕ ಕಿಶೋರ್ ಪಾಟೀಲ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿದ ಮಹಾರಾಷ್ಟ್ರದ ಪತ್ರಕರ್ತ ಸಂದೀಪ್ ಮಹಾಜನ್ ಮೇಲೆ  ಶಾಸಕ ಕಿಶೋರ್ ಪಾಟೀಲ್ ಬೆಂಬಲಿಗರು ಹಾಗೂ ಗೂಂಡಾಗಳು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಶಿವಸೇನಾ ಶಿಂಧೆ ಬಣದ ಶಾಸಕ ಮತ್ತು ಆತನ ಬೆಂಬಲಿಗರ ಈ ಕೃತ್ಯವನ್ನು ಪ್ರತಿಪಕ್ಷಗಳು ಖಂಡಿಸಿದ್ದು, ಶಾಸಕ ಕಿಶೋರ್ ಪಾಟೀಲ್ ಮತ್ತು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿವೆ. ಅಲ್ಲದೆ ಪತ್ರಕರ್ತನಿಗೆ  ಹಾಗೂ ಆತನ ಕುಟುಂಬಕ್ಕೆ ಬೆದರಿಕೆಯೊಡ್ಡುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದೆ.

ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಕೂಡ ಈ ವಿಷಯ ಪ್ರಸ್ತಾಪಿಸಿದ್ದು, ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ಹೇಳಿದ್ದಾರೆ. ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ ಆದರೆ ಪತ್ರಕರ್ತರ ಮೇಲೆಯೇ ಸವಾರಿ ನಡೆಯುತ್ತದೆ ಯಾಕೆಂದರೆ ಅವರು ಸಮಸ್ಯೆಗಳನ್ನು ಬಯಲಿಗೆಳೆಯುತ್ತಾರೆ ಎಂದು ಅವರು ಹೇಳಿದ್ದು, ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ದೇಶದ್ರೋಹಿ ಗ್ಯಾಂಗ್‌ನ ಗೂಂಡಾಗಳು ನಿರ್ಲಜ್ಜವಾಗಿ ವರ್ತಿಸಿದ್ದಾರೆ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನೆ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಸಂದೀಪ್ ಮಹಾಜನ್ ಅವರು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಚೋರಾದಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮತ್ತು ಪತ್ರಿಕೆಯನ್ನು ನಡೆಸುತ್ತಿದ್ದಾರೆ.ಕೆಲವು ದಿನಗಳ ಹಿಂದೆ, ಎಂಟು ವರ್ಷದ ಬಾಲಕಿಯ ಮೇಲೆ 19 ವರ್ಷದ ನೆರೆಮನೆಯ ಯುವಕನೋರ್ವ ಅತ್ಯಾಚಾರವೆಸಗಿ ಆಕೆಗೆ ಕಲ್ಲಿನಿಂದ ಹಲ್ಲೆ ಮಾಡಿದ್ದ. ಸ್ಥಳೀಯ ಪೊಲೀಸರು ಹಾಗೂ ಶಾಸಕ ಕಿಶೋರ ಪಾಟೀಲ್ ಈ ಪ್ರಕರಣವನ್ನು ಮುಚ್ಚಿ ಹಾಕಲು  ಯತ್ನಿಸಿದರು ಎಂಬ ಆರೋಪ ಕೇಳಿ ಬಂದಿದೆ.

ಸಂದೀಪ್ ಮಹಾಜನ್ ಅವರು ತಮ್ಮ ಸ್ಥಳೀಯ ಪತ್ರಿಕೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನುಸುದ್ದಿ ಮಾಡಿದ್ದರು ಮತ್ತು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಸುದ್ದಿಯನ್ನು ಪ್ರಸಾರ ಮಾಡಿದ್ದರು. ಶಿಂಧೆ ಬಣದ ಶಿವಸೇನೆ ಶಾಸಕ ಕಿಶೋರ್ ಪಾಟೀಲ್ ಪತ್ರಕರ್ತ ಸಂದೀಪ್ ಮಹಾಜನ್ ಅವರ ವರದಿಯ ಬಗ್ಗೆ ಕೋಪಗೊಂಡರು ಮತ್ತು ಫೋನ್ ಮೂಲಕ ಸಂದೀಪ್ ಮಹಾಜನ್ ಗೆ ನಿಂದಿಸಿದ್ದಾರೆ. ಇದನ್ನು ಪತ್ರಕರ್ತ ಪ್ರಶ್ನಿಸಿದಾಗ ಶಾಸಕ ಕಿಶೋರ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆದರೆ ಸಂದೀಪ್ ಮಹಾಜನ್ ಅವರು ಅತ್ಯಾಚಾರ ಮತ್ತು ಕೊಲೆ ಘಟನೆಯ ಬಗ್ಗೆ ತಮ್ಮ ವರದಿಯನ್ನು ಮುಂದುವರಿಸಿದ್ದರು ಮತ್ತು ಸ್ಥಳೀಯ ಶಾಸಕ ಕಿಶೋರ್ ಪಾಟೀಲ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಪ್ರಶ್ನೆಗಳನ್ನು ಎತ್ತಿ ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿದ್ದರು.

ಶಿವಸೇನಾ ಶಾಸಕ ಕಿಶೋರ್ ಪಾಟೀಲ್  ಬೆಂಬಲಿಗರು ಮಹಾಜನ್ ಅವರು ಕಚೇರಿಗೆ ಹೋಗುತ್ತಿದ್ದಾಗ  ಅವರನ್ನು ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸಿದ್ದಾರೆ. ಅವರು ಪೊಲೀಸ್ ಕೇಸ್ ದಾಖಲಿಸಲು ಹೋದಾಗ ಪೊಲೀಸರು ಶಿವಸೇನಾ ಶಾಸಕ ಕಿಶೋರ್ ಪಾಟೀಲ್ ಮತ್ತು ಅವರ ಗೂಂಡಾಗಳ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇದನ್ನು ಓದಿ: ಹರ್ಯಾಣ ಹಿಂಸಾಚಾರ: ಮುಸ್ಲಿಮರ ರಕ್ಷಣೆಗೆ ನಿಲ್ಲುವುದಾಗಿ ನಿರ್ಣಯ ತೆಗೆದುಕೊಂಡ ರೈತ ಮುಖಂಡರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read