Homeಕರ್ನಾಟಕಮಂಗಳೂರು: ಹೋಳಿ ಕಾರ್ಯಕ್ರಮಕ್ಕೆ ನುಗ್ಗಿ ಬಜರಂಗದಳ ಕಾರ್ಯಕರ್ತರ ಪುಂಡಾಟ; ಪ್ರಕರಣ ದಾಖಲು

ಮಂಗಳೂರು: ಹೋಳಿ ಕಾರ್ಯಕ್ರಮಕ್ಕೆ ನುಗ್ಗಿ ಬಜರಂಗದಳ ಕಾರ್ಯಕರ್ತರ ಪುಂಡಾಟ; ಪ್ರಕರಣ ದಾಖಲು

- Advertisement -
- Advertisement -

ಬಜರಂಗದಳದ ಕಾರ್ಯಕರ್ತರು ಹೋಳಿ ಹಬ್ಬ ಆಚರಿಸುತ್ತಿದ್ದ ಕಾರ್ಯಕ್ರಮಕ್ಕೆ ನುಗ್ಗಿ ಗಲಾಟೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮರೋಳಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬಜರಂಗದಳದ ಆರು ಕಾರ್ಯಕರ್ತರ ಮೇಲೆ ಭಾನುವಾರ ಪ್ರಕರಣ ದಾಖಲಿಸಿದ್ದಾರೆ.

ಮರೋಳಿಯಲ್ಲಿ ರಂಗ್ ದೇ ಬರ್ಸಾ ಎಂಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಆವರಣದಲ್ಲಿ ಹಾಕಲಾಗಿದ್ದ ಹೋಳಿ ಪಾರ್ಟಿಯ ಬ್ಯಾನರ್‌ಗಳನ್ನು ಹರಿದು ಹಾಕಿದ್ದಾರೆ.

ಈ ಕಾರ್ಯಕ್ರಮದಲ್ಲಿ ಯುವಕರು ಮತ್ತು ಯುವತಿಯರು ಸೇರಿ ಹೋಳಿ ಪಾರ್ಟಿಯನ್ನು ಆನಂದಿಸುತ್ತಿದ್ದರು. ಒಬ್ಬರ ಮೇಲೆ ಒಬ್ಬರು ಬಣ್ಣ ಎರಚುತ್ತಿದ್ದರು. ಆಗ ಅಲ್ಲಿಗೆ ನುಗ್ಗಿದ ಬಜರಂಗದಳ ಕಾರ್ಯಕರ್ತರು ಅಲ್ಲಿನ ಯುವಕರು ಅಸಭ್ಯ ವರ್ತನೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಅಲ್ಲದೇ ಅನ್ಯ ಧರ್ಮದ ಯುವಕರೂ ಸೇರಿ ಅಲ್ಲಿ ಹೋಳಿ ಆಚರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮದ ಆಯೋಜಕರೊಂದಿಗೆ ವಾಗ್ವಾದ ನಡೆಸಿ, ”ನಾವು ನಿಮಗೆ ಒಳ್ಳೆಯ ಮಾತುಗಳಲ್ಲಿ ಕಾರ್ಯಕ್ರಮವನ್ನು ನಿಲ್ಲಿಸಲು ಹೇಳಿದ್ದೇವೆ, ಆದರೆ ನೀವು ಕೇಳುತ್ತಿಲ್ಲ. ಸಂಸದರು ಮತ್ತು ಶಾಸಕರ ಹೆಸರನ್ನು ಇಲ್ಲಿ ತರಬೇಡಿ. ಕಾರ್ಯಕ್ರಮ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುತ್ತೇವೆ” ಎಂದು ವೈರಲ್ ಆಗಿರುವ ವೀಡಿಯೊದಲ್ಲಿ ಒಬ್ಬರು ಹೇಳುವುದನ್ನು ಕೇಳಬಹುದು.

 

ಇದನ್ನೂ ಓದಿ: ಶಿವಮೊಗ್ಗ: ಪ್ರಾರ್ಥನಾ ಮಂದಿರ, ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರು ಬಜರಂಗದಳ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಈ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಅವರು, ಈ ಕಾರ್ಯಕ್ರಮದ  ಆಯೋಜಕರು ಹೋಳಿ ಪಾರ್ಟಿಗೆ ಅನುಮತಿ ಪಡೆದಿದ್ದಾರೆ. ಯಾರಾದರೂ ಕಾರ್ಯಕ್ರಮವನ್ನು ವಿರೋಧಿಸುವುದಿದ್ದರೆ, ಪೊಲೀಸರಿಗೆ ದೂರು ನೀಡಬೇಕಾಗಿತ್ತು. ಬದಲಿಗೆ, ಈ ದಾಳಿ ನಡೆಸಿದ ಗುಂಪಿನವರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿದ್ದಾರೆ” ಎಂದು ಹೇಳಿದ್ದಾರೆ.

ಆಯೋಜಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತಿಚೇಗೆ ಶಿವಮೊಗ್ಗದಲ್ಲೂ ಬಜರಂಗದಳ ಕಾರ್ಯಕರ್ತರ ಪುಂಡಾಟ ಪ್ರದರ್ಶನ

ಮಾರ್ಚ್ 18ರಂದು ಶಿವಮೊಗ್ಗದ ಖಾಸಗಿ ಹೋಟೆಲೊಂದರಲ್ಲಿ ಆಯೋಜಿಸಿದ್ದ ಲೇಡಿಸ್ ನೈಟ್ ಪಾರ್ಟಿ ಮೇಲೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಕಾರ್ಯಕ್ರಮವನ್ನೇ ನಿಲ್ಲಿಸಿದ್ದರು. ಹೀಗೆ ಬಜರಂಗದಳ ಕಾರ್ಯಕರ್ತರ ಪುಂಡಾಟ ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿದೆ.

ನಗರದ ಕ್ಲಿಫ್ ಎಂಬಸಿ ಹೋಟೆಲ್‌ನ ಹೈವ್‌ ಸೈಬಾರ್‌ನಲ್ಲಿ ಲೇಡಿಸ್ ನೈಟ್ ಪಾರ್ಟಿ ಆಯೋಜಿಸಲಾಗಿತ್ತು. ವಿಷಯ ತಿಳಿದ ಬಜರಂಗದಳ ಕಾರ್ಯಕರ್ತರು, ಹೋಟೆಲ್ ಬಳಿ ಜಮಾಯಿಸಿ ಆಕ್ಷೇಪ ವ್ಯಕ್ತಪಡಿಸಿ ಪಾರ್ಟಿಯನ್ನು ನಿಲ್ಲಿಸಿದ್ದರು. ಹೆಣ್ಣು ಮಕ್ಕಳನ್ನು ಕರೆಯಿಸಿ ಡಾನ್ಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಜರಂಗದಳ ಆರೋಪಿಸಿತ್ತು.

ಬಜರಂಗದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಅವರು ಮಾತನಾಡಿ, ”ಇದು ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಶಿವಮೊಗ್ಗದಲ್ಲಿ ಅವಕಾಶ ಕೊಡಲ್ಲ. ಮಲೆನಾಡಿನ ಜನರು ಸುಸಂಸ್ಕೃತರು, ಇಂತಹ ಕಾರ್ಯಕ್ರಮ ಆಯೋಜಿಸಿದರೆ ಸುಮ್ಮನಿರುವುದಿಲ್ಲ. ಲೇಟ್ ನೈಟ್ ಲೇಡಿಸ್ ಪಾರ್ಟಿ ಬಗ್ಗೆ ಈ ಮೊದಲೇ ಪೊಲೀಸರ ಗಮನಕ್ಕೆ ತಂದಿದ್ದೆವು. ಆದ್ದರಿಂದ ಪೊಲೀಸರ ಜತೆ ಬಂದು ಕಾರ್ಯಕ್ರಮ ನಿಲ್ಲಿಸಿದ್ದೇವೆ” ಎಂದು ಹೇಳಿದ್ದರು.

”ಶಿವಮೊಗ್ಗದಲ್ಲಿ ಇಂತಹ ಕಾರ್ಯಕ್ರಮಗಳಿಗೆ ನಾವು ಅವಕಾಶ ನೀಡುವುದಿಲ್ಲ ಏಕೆಂದರೆ ನಮ್ಮ ನಗರವು ಮತ್ತೊಂದು ಮಣಿಪಾಲವಾಗುವುದು ನಮಗೆ ಇಷ್ಟವಿಲ್ಲ. ಇಂತಹ ಘಟನೆಗಳನ್ನು ಭಜರಂಗದಳ ಸಹಿಸುವುದಿಲ್ಲ” ಎಂದು ಹೇಳಿದ ಅವರು, ಪಾರ್ಟಿಯಲ್ಲಿ ಮಹಿಳೆಯರ ಉಡುಗೆಯನ್ನೂ ಆಕ್ಷೇಪಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ: ದಲಿತ ಬಾಲಕಿಯ ಸಜೀವ ದಹನ

0
ಬಯಲು ಶೌಚಾಲಯಕ್ಕೆ ತೆರಳಿದ್ದ 13 ವರ್ಷದ ದಲಿತ ಬಾಲಕಿಯನ್ನು ಸುಟ್ಟು ಹಾಕಿರುವ ಆಘಾತಕಾರಿ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಹರಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದಿದೆ. ಬಲರಾಂಪುರ್ ಗ್ರಾಮದಲ್ಲಿ ಬಹಿರ್ದೆಸೆಗೆ ತೆರಳಿದ್ದ 13...