Homeಮುಖಪುಟಮಣಿಪುರ ಸಿಎಂ ಕುಕಿ ಸಮುದಾಯದ ವಿರೋಧಿ, ನಮಗೆ ಪ್ರತ್ಯೇಕ ರಾಜ್ಯ ಬೇಕು: ಬಿಜೆಪಿ ಪರ ಕುಕಿ...

ಮಣಿಪುರ ಸಿಎಂ ಕುಕಿ ಸಮುದಾಯದ ವಿರೋಧಿ, ನಮಗೆ ಪ್ರತ್ಯೇಕ ರಾಜ್ಯ ಬೇಕು: ಬಿಜೆಪಿ ಪರ ಕುಕಿ ಮುಖ್ಯಸ್ಥ

- Advertisement -
- Advertisement -

ಮಣಿಪುರ ಮುಖ್ಯಮಂತ್ರಿ ಕುಕಿ ಸಮುದಾಯದ ವಿರೋಧಿಯಾಗಿದ್ದು, ನಮಗೆ ಪ್ರತ್ಯೇಕ ರಾಜ್ಯ ಬೇಕು ಮತ್ತು ಅದಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಪರ ಕುಕಿ ಗುಂಪಿನ ಮುಖ್ಯಸ್ಥ ವಿಲ್ಸನ್ ಲಾಲಂ ಹ್ಯಾಂಗ್‌ಶಿಂಗ್ ಹೇಳಿದ್ದಾರೆ.

‘ದಿ ವೈರ್‌’ ಜಾಲತಾಣದ ಖ್ಯಾತ ಪತ್ರಕರ್ತ ಕರಣ್ ಥಾಪರ್‌ ನಡೆಸಿರುವ ಸಂದರ್ಶನದಲ್ಲಿ ಕುಕಿ ಪೀಪಲ್ಸ್ ಅಲೈಯನ್ಸ್‌ನ ಪ್ರಧಾನ ಕಾರ್ಯದರ್ಶಿ ಹ್ಯಾಂಗ್‌ಶಿಂಗ್ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕುಕಿ ಜನರಿಗೆ ಪ್ರತ್ಯೇಕ ಆಡಳಿತ ಬೇಕು. ಇದೇ ರಾಜ್ಯದಲ್ಲಿ ಮೈಥೇಯಿ ಸಮುದಾಯದೊಂದಿಗೆ ಮುಂದೆಯೂ ಇರುವುದು ಅಸಾಧ್ಯವಾಗಿದೆ ಎಂದಿದ್ದಾರೆ.

ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಎನ್. ಬಿರೇನ್ ಸಿಂಗ್ ಸರ್ಕಾರವನ್ನು ಕುಕಿ ಪೀಪಲ್ಸ್ ಅಲಯನ್ಸ್ ಬೆಂಬಲಿಸಿದೆ ಎಂಬುದನ್ನು ಗಮನಿಸಬಹುದು. ಈ ಬಣದ ಪ್ರಭಾವಿ ನಾಯಕ ವಿಲ್ಸನ್ ಲಾಲಂ ಹ್ಯಾಂಗ್‌ಶಿಂಗ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದು, “ನಮಗೆ ಪ್ರತ್ಯೇಕ ಆಡಳಿತ ಬೇಕೆಂಬ ಬೇಡಿಕೆಯಿಂದ ಕುಕಿ ಸಮುದಾಯ ಹಿಂದೆ ಸರಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ಆಡಳಿತವೆಂದರೆ ಪ್ರತ್ಯೇಕ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಆಗಿರಬಹುದು ಎಂದು ಅವರು ಹೇಳಿದ್ದಾರೆ. ಮಣಿಪುರದೊಳಗೆ ಸ್ವಾಯತ್ತ ಪ್ರಾದೇಶಿಕ ಮಂಡಳಿಗಳ ಆಯ್ಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗಿದೆ ಎಂದು ಅವರು ವಿಷಾದಿಸಿದ್ದಾರೆ.

“ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಮೇಲಿನ ನಂಬಿಕೆಯನ್ನು ಕುಕಿ ಪೀಪಲ್ಸ್ ಅಲೈಯನ್ಸ್ ಕಳೆದುಕೊಂಡಿದೆ” ಎಂದಿರುವ ಅವರು, ತಾಂತ್ರಿಕವಾಗಿ ಬೆಂಬಲವನ್ನು ಹಿಂತೆಗೆದುಕೊಳ್ಳದಿದ್ದರೂ, ಮುಂದಿನ ದಿನಗಳಲ್ಲಿ ಬೆಂಬಲ ವಾಪಸ್ ಪಡೆಯುವ ಸೂಚನೆಯನ್ನೂ ಅವರು ನೀಡಿದ್ದಾರೆ.

ಬಿರೇನ್ ಸಿಂಗ್ ಅವರು ತಮ್ಮದೇ ಆದ ಬಹುಮತವನ್ನು ಹೊಂದಿರುವುದರಿಂದ, ಕುಕಿ ಪೀಪಲ್ಸ್ ಅಲೈಯನ್ಸ್‌ನ ಬೆಂಬಲವು ತಾಂತ್ರಿಕವಾಗಿ ಅತ್ಯುತ್ತಮವಾಗಿದೆ ಎಂದು ಅವರು ವಿವರಿಸಿದ್ದಾರೆ. ಬಿರೇನ್ ಸಿಂಗ್ ‘ಕುಕಿ ವಿರೋಧಿ’ ಎಂದು ಹ್ಯಾಂಗ್‌ಶಿಂಗ್ ಕಿಡಿಕಾರಿದ್ದಾರೆ.

ಕುಕಿ ಮತ್ತು ಮೈಥೇಯಿ ಸಮುದಾಯದ ನಡುವಿನ ಸಮಸ್ಯೆಗೆ ಬಿರೇನ್‌ ಸಿಂಗ್ ಅವರು ಕಳೆದ ನಾಲ್ಕೈದು ವರ್ಷಗಳಲ್ಲಿ ತೋರಿರುವ ವರ್ತನೆಯೇ ಕಾರಣ ಎಂದು ಹ್ಯಾಂಗ್‌ಶಿಂಗ್ ಆರೋಪಿಸಿದ್ದಾರೆ.

ಸಿಎಂ ಬಿರೇನ್ ಸಿಂಗ್ ಅವರು ಬೇಜವಾಬ್ದಾರಿ ತೋರಿದ್ದಾರೆಂದು ಉದಾಹರಣೆಗಳನ್ನು ಅವರು ನೀಡಿದ್ದಾರೆ. “ತಮ್ಮ ಮನೆಯನ್ನು ಲೂಟಿ ಮಾಡಲಾಗುತ್ತಿದೆ, ಸುಟ್ಟು ಹಾಕಲಾಗುತ್ತಿದೆ” ಎಂದು ಹೇಳಲು ಬಿಜೆಪಿ ಶಾಸಕ, ಬಿರೇನ್ ಸಿಂಗ್ ಅವರ ಸರ್ಕಾರದ ಸದಸ್ಯ ಲೆಟ್ಪಾವೊ ಹಾಕಿಪ್ ಅವರು ಬಿರೇನ್ ಸಿಂಗ್ ಅವರಿಗೆ ಪದೇ ಪದೇ ಫೋನ್ ಮಾಡಿದರೂ ಸ್ಪಂದಿಸಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಮೋದಿಯ ಕೋಮುವಾದಿ ಒಬಿಸಿ ರಾಜಕಾರಣಕ್ಕೆ, ಸಿದ್ದರಾಮಯ್ಯ ಎಂಬ ವೈಚಾರಿಕ ಒಬಿಸಿಯ ಕೌಂಟರ್‌‌

ಹಾಕಿಪ್ ನೆರೆಹೊರೆಯವರಾಗಿದ್ದರೂ, ಬಿರೇನ್ ಸಿಂಗ್ ಏನೂ ಮಾಡಲಿಲ್ಲ. ಅಂತಿಮವಾಗಿ ಮನೆ ಸುಟ್ಟುಹೋಯಿತು. ಬಿರೇನ್ ಸಿಂಗ್ ಉದ್ದೇಶಪೂರ್ವಕವಾಗಿ ಕುಕಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದು ಹ್ಯಾಂಗ್‌ಶಿಂಗ್ ಆಪಾದಿಸಿದ್ದಾರೆ. “ಅದಕ್ಕಾಗಿಯೇ ಈಗ ಪ್ರತ್ಯೇಕತೆ ಅಗತ್ಯವಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

ಅಗತ್ಯವಿದ್ದರೆ, ಕುಕಿಗಳು ಪ್ರತ್ಯೇಕ ಆಡಳಿತಕ್ಕಾಗಿ ಹೋರಾಡುತ್ತಾರೆ ಎಂದು ಹ್ಯಾಂಗ್‌ಶಿಂಗ್ ಸ್ಪಷ್ಟಪಡಿಸಿದ್ದಾರೆ. ಇದು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆಯೇ ಎಂದು ಕೇಳಿದಾಗ ಹ್ಯಾಂಗ್‌ಶಿಂಗ್‌ ಆ ಮಾತನ್ನು ನಿರಾಕರಿಸಿಲ್ಲ. “ಬದಲಿಗೆ, ಇದು ಆತ್ಮರಕ್ಷಣೆಯಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಕುಕಿ-ಮೈಥೇಯಿ ಘರ್ಷಣೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕ್ರಿಯೆಯ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ನಡೆಸುವಂತೆ ತೆಲಂಗಾಣ ಸಿಎಂಗೆ ಭೇಟಿ ಮಾಡಿದ ರಾಧಿಕಾ ವೇಮುಲಾ

0
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ...