Homeಮುಖಪುಟಭಾರತ ಜೋಡೋ ನ್ಯಾಯ ಯಾತ್ರೆ: ಇಂಫಾಲ್‌ನ ಪ್ಯಾಲೇಸ್ ಗ್ರೌಂಡ್‌ನಿಂದ ಆರಂಭಕ್ಕೆ ಅನುಮತಿ ನಿರಾಕರಿಸಿದ ಬಿಜೆಪಿ ಸರಕಾರ

ಭಾರತ ಜೋಡೋ ನ್ಯಾಯ ಯಾತ್ರೆ: ಇಂಫಾಲ್‌ನ ಪ್ಯಾಲೇಸ್ ಗ್ರೌಂಡ್‌ನಿಂದ ಆರಂಭಕ್ಕೆ ಅನುಮತಿ ನಿರಾಕರಿಸಿದ ಬಿಜೆಪಿ ಸರಕಾರ

- Advertisement -
- Advertisement -

ಜನವರಿ 14ರಂದು ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಇಂಫಾಲ್‌ನ ಪ್ಯಾಲೇಸ್ ಗ್ರೌಂಡ್‌ ಬಳಸಲು ಮಣಿಪುರ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳನ್ನು ಉಲ್ಲೇಖಿಸಿ ಬುಧವಾರ ಅನುಮತಿ ನಿರಾಕರಿಸಿದೆ.

ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಕೆ.ಮೇಘಚಂದ್ರ ಅವರು ಪಕ್ಷದ ನಾಯಕರ ತಂಡದೊಂದಿಗೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಕಾನೂನು ಸುವ್ಯವಸ್ಥೆಯ ಕಾರಣದಿಂದ ಇಂಫಾಲ್‌ನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಮೇಘಚಂದ್ರ, ಕಾನೂನು ಸುವ್ಯವಸ್ಥೆಯ ಕಾರಣದಿಂದ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ, ಬಿಜೆಪಿ ಸರ್ಕಾರದ ಅನುಮತಿ ನಿರಾಕರಣೆ ತುಂಬಾ ದುರದೃಷ್ಟಕರ ಬೆಳವಣಿಗೆ, ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಇಂಫಾಲ್‌ನ ಪ್ಯಾಲೇಸ್ ಗ್ರೌಂಡ್‌ನ ಬದಲು ತೌಬಲ್ ಜಿಲ್ಲೆಯ ಖೋಂಗ್‌ಜೋಮ್‌ನಲ್ಲಿರುವ ಖಾಸಗಿ ಸ್ಥಳಕ್ಕೆ ಬದಲಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಮಣಿಪುರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 14 ರಾಜ್ಯಗಳು ಮತ್ತು 85 ಜಿಲ್ಲೆಗಳಲ್ಲಿ ಸಂಚರಿಸುವ ಯಾತ್ರೆಗೆ ಚಾಲನೆಯನ್ನು ನೀಡಲಿದ್ದಾರೆ. ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯವಾಗಲಿದೆ. ಘರ್ಷಣೆ ಪೀಡಿತ ಮಣಿಪುರದಿಂದ ಆರಂಭವಾಗಲಿರುವ ಈ ಜಾಥಾದಲ್ಲಿ ಕಾಲ್ನಡಿಗೆ ಜಾಥಾ ಮತ್ತು ಬಸ್ ಸಂಚಾರದ ಮೂಲಕವೂ ಯಾತ್ರೆ ನಡೆಯಲಿದೆ.

ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ನಿನ್ನೆ ಮಾತನಾಡಿ, ಭದ್ರತಾ ಪಡೆಗಳ ಮೇಲಿನ ದಾಳಿಗೆ ಕಾರಣವಾದ ಶಸ್ತ್ರಸಜ್ಜಿತ ಸಿಬ್ಬಂದಿಯನ್ನು ಬಂಧಿಸಲು ಅಸ್ಸಾಂ ರೈಫಲ್ಸ್, ಬಿಎಸ್ಎಫ್ ಮತ್ತು ರಾಜ್ಯ ಪೊಲೀಸರ ಜಂಟಿ ಪ್ರಯತ್ನದ ಭಾಗವಾಗಿ ಕಾರ್ಯಾಚರಣೆ ನಡೆಯುತ್ತಿದೆ. ರಾಹುಲ್ ಗಾಂಧಿಯವರ ರ್ಯಾಲಿಗೆ ಅನುಮತಿ ನೀಡುವ ಬಗ್ಗೆ ಪರಿಶೀಲನೆಯಲ್ಲಿದೆ. ನಾವು ವಿವಿಧ ಭದ್ರತಾ ಏಜೆನ್ಸಿಗಳಿಂದ ವರದಿಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಅವರಿಂದ ವರದಿಗಳನ್ನು ಸ್ವೀಕರಿಸಿದ ನಂತರ ನಾವು ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.

ಕಳೆದ ವರ್ಷ ಮೇ ತಿಂಗಳಿನಿಂದ ಹಿಂಸಾಚಾರದಿಂದ ಬಳಲುತ್ತಿರುವ ಮಣಿಪುರದ ಜನರಿಗೆ ನ್ಯಾಯಕ್ಕಾಗಿ ಒತ್ತಾಯಿಸಲು ರಾಹುಲ್ ಗಾಂಧಿ ಮಣಿಪುರದಿಂದಲೇ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು.

ಮಣಿಪುರದಲ್ಲಿ ಮೈತೈ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಿಂದಾಗಿ ಸುಮಾರು 200 ಜನರು ಸಾವನ್ನಪ್ಪಿದ್ದಾರೆ ಮತ್ತು 60,000 ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಹಿಂಸಾಚಾರದಿಂದ ಸ್ವಲ್ಪ ತಣ್ಣಗಾಗಿದ್ದ ಮಣಿಪುರದಲ್ಲಿ ಮತ್ತೆ ಭಾನುವಾರ ಹಿಂಸಾಚಾರ ಭುಗಿಲೆದ್ದಿತ್ತು. ಇಂಡೋ-ಮ್ಯಾನ್ಮಾರ್ ಗಡಿಯ ಮೊರೆಹ್‌ನಲ್ಲಿ ಮಣಿಪುರ ಪೊಲೀಸರು ಮತ್ತು ಸಶಸ್ತ್ರದಾರಿಗಳ ನಡುವೆ ಇತ್ತೀಚೆಗೆ ನಡೆದ ಗುಂಡಿನ ಚಕಮಕಿಯಿಂದ ಪರಿಸ್ಥಿತಿ ತಿಳಿಯಾಗಿಲ್ಲ. ಸೋಮವಾರ ಬೆಳಗ್ಗೆ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಮೊರೆಹ್‌ನಲ್ಲಿ ಗುಂಡಿನ ಚಕಮಕಿ ನಡೆದಿದೆ.

ಇದನ್ನು ಓದಿ: ಬೆಂಗಳೂರು: ಸಿಇಒ ಪುತ್ರನ ಕೊಲೆ ಪೂರ್ವ ಯೋಜಿತ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read