Homeಮುಖಪುಟಇದು ಯಡಿಯೂರಪ್ಪನವರ ’ಜಾತಿಗೊಂದು ನಿಗಮ’ವಷ್ಟೇ ಅಲ್ಲ, ಬಿಜೆಪಿಯ ಅಪಾಯಕಾರಿ ವೈದಿಕಶಾಹಿ ವರಸೆ!

ಇದು ಯಡಿಯೂರಪ್ಪನವರ ’ಜಾತಿಗೊಂದು ನಿಗಮ’ವಷ್ಟೇ ಅಲ್ಲ, ಬಿಜೆಪಿಯ ಅಪಾಯಕಾರಿ ವೈದಿಕಶಾಹಿ ವರಸೆ!

ಇದು ಇನ್ನೂ ಕನಿಷ್ಠ 20 ಜಾತಿ ನಿಗಮಗಳಿಗೆ ದಾರಿ ಮಾಡಿಕೊಡಲಿದೆ. ಒಂದು ನಿಗಮ ಎಂದಾಕ್ಷಣ ಬೇರಾವ ಸಮುದಾಯಮುಖಿ ಕೆಲಸ ಮಾಡದಿದ್ದರೂ ಕೆಲವು ಕೋಟಿಗಳ ಹಣ ವಾರ್ಷಿಕವಾಗಿ ಖರ್ಚಾಗಲಿದೆ.

- Advertisement -
- Advertisement -

ಯಡಿಯೂರಪ್ಪನವರು ಮೊದಲ ಸಾರಿ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಒಂದು ಯಶಸ್ವೀ ಅಭಿಯಾನವು ಈಗ ಇನ್ನೊಂದು ಮಜಲನ್ನು ಪಡೆದುಕೊಂಡಿದೆ. ಆದರೆ ಈ ಸಾರಿ ಅದು ಒಂದಾದಮೇಲೆ ಒಂದರಂತೆ ಬರುತ್ತಿರುವ ಉಪಚುನಾವಣೆಗಳ ಜೊತೆಗೆ ತಳುಕು ಹಾಕಿಕೊಂಡು ಸ್ವಲ್ಪ ಗದ್ದಲ ಎಬ್ಬಿಸಿದೆಯಷ್ಟೇ. ಆ ಅಭಿಯಾನವೇನೆಂದರೆ ವಿವಿಧ ಸಮುದಾಯಗಳನ್ನು, ಅದರಲ್ಲೂ ಶೋಷಿತ ಸಮುದಾಯಗಳಿಗೆ ಸಾಂಕೇತಿಕವಾಗಿ ವಿಶೇಷ ಪ್ರಾತಿನಿಧ್ಯ ಕೊಟ್ಟಂತೆ ಮಾಡಿ ವಾಸ್ತವದಲ್ಲಿ ಅವರ ವಿರುದ್ಧ ಕೆಲಸ ಮಾಡುವ ಒಂದು ವಿಧಾನ. ಆದರೆ ಆ ಸಮುದಾಯದ ಒಂದು ಸಣ್ಣ ಗುಂಪಿಗೆ ವಿಶೇಷ ಸವಲತ್ತುಗಳು ಸೃಷ್ಟಿಯಾಗಿರುತ್ತವೆ. ಅವರು ಅದಕ್ಕಾಗಿ ಇಡೀ ಸಮುದಾಯವನ್ನು ದಿಕ್ಕುತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಾರೆ. ಸಣ್ಣಪುಟ್ಟ ಹಾಗೂ ಸಂಖ್ಯೆಯಲ್ಲಿ ಗಣನೀಯವಾಗಿರುವ ಜಾತಿಗಳೂ ಸಹಾ ಶೋಷಿತರಾಗಿಯೇ ಉಳಿದುಕೊಂಡುಬಿಡಲು ಬೇಕಾದ ಒಂದು ’ವ್ಯವಸ್ಥೆ’ ಗಟ್ಟಿಯಾಗಿ ಉಳಿಯುತ್ತದೆ. ಇದನ್ನು ಮೇಲ್ನೋಟಕ್ಕೆ ’ಆರೆಸ್ಸೆಸ್‌ನ ವೈದಿಕ ಅಜೆಂಡಾ’ದ ಆಚೆಗೂ ಯೋಚಿಸುವವರೆಂದು ಭಾವಿಸಲಾಗುವ ಯಡಿಯೂರಪ್ಪನವರು ಯಶಸ್ವಿಯಾಗಿ ನಿರ್ವಹಿಸಿದರು; ನಿರ್ವಹಿಸುತ್ತಿದ್ದಾರೆ.

ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮರಾಠಾ ಪ್ರಾಧಿಕಾರವನ್ನು ಈ ನೆಲೆಯಲ್ಲಿ ನೋಡದಿದ್ದರೆ ಮರಾಠಾ ಭಾಷಿಕರ ಪರವಾಗಿ ಯಡಿಯೂರಪ್ಪನವರು ಏನೋ ಮಾಡುತ್ತಿದ್ದಾರೆಂದು ಭಾಷಿಕ ನೆಲೆಯಲ್ಲಿ ವಿರೋಧಕ್ಕೆ ಸೀಮಿತವಾಗಿಬಿಡುವ ಅಪಾಯವಿದೆ. ಇದರಲ್ಲೂ ಮೇಲ್ನೋಟಕ್ಕೇ ಒಂದು ಅಪಾಯಕಾರಿ ವಿದ್ಯಮಾನ ಎದ್ದು ಕಾಣುತ್ತಿದೆ. ಅದು ನಿರ್ದಿಷ್ಟ ಕ್ಷೇತ್ರವೊಂದರ ಚುನಾವಣೆಯನ್ನು ಗೆಲ್ಲಲು ಅಲ್ಲಿನ ಸಾಮಾಜಿಕ ಸಮೀಕರಣವನ್ನು ಅರ್ಥ ಮಾಡಿಕೊಂಡು ಅಧಿಕಾರದಲ್ಲಿರುವ ಸರ್ಕಾರವೊಂದು ಸಮುದಾಯದ ಮೂಗಿಗೆ ತುಪ್ಪ ಸವರುವ ಮತ್ತು ಅನೈತಿಕ ಕ್ರಮವಾಗಿದೆ. ಎಲ್ಲ ರೀತಿಯಲ್ಲೂ ಚುನಾವಣಾ ನೀತಿಸಂಹಿತೆಯ ವಿರೋಧಿ ಕ್ರಮವಿದು.

ಹಾಗಾದರೆ ಕಾಡುಗೊಲ್ಲ ಸಮುದಾಯಕ್ಕೆ ಸರ್ಕಾರದಿಂದ ವಿಶೇಷಗಮನ ಅಗತ್ಯವೇ ಇರಲಿಲ್ಲವೇ? ಕಾಡುಗೊಲ್ಲ ಸಮುದಾಯವು ನಿಜಕ್ಕೂ ಹಿಂದುಳಿದ ಸಮುದಾಯ. ಆರ್ಥಿಕವಾಗಿ ಹಿಂದುಳಿದಿದೆ, ಸಾಮಾಜಿಕವಾಗಿ ಶೋಷಣೆಗೆ ಗುರಿಯಾಗಿದೆ ಮತ್ತು ಸಾಂಸ್ಕೃತಿಕವಾದ ಹಲವು ಆಚರಣೆಗಳು ಆ ಸಮುದಾಯದ ಗಣನೀಯ ಗ್ರಾಮೀಣ ವಿಭಾಗವನ್ನು ಮೌಢ್ಯದಲ್ಲೂ ಇಟ್ಟಿವೆ. ಹೀಗಾಗಿ ಅದನ್ನು ಸಮಗ್ರವಾಗಿ ಸರಿಪಡಿಸುವ ಕೆಲಸ ಆಗಬೇಕಿದೆ. ಅದು ಯಾವುದೇ ಪ್ರಜಾತಾಂತ್ರಿಕ ಸಮಾಜದ ಸರ್ಕಾರದ ಕೆಲಸ. ಕರ್ನಾಟಕದಲ್ಲಿ ಮೀಸಲಾತಿ ನೀಡಲು ಅದನ್ನು 1 ಎ ಕೆಟಗರಿಯಲ್ಲಿಟ್ಟಿರುವುದು ಸೂಕ್ತವಾಗಿದೆ, ಎಸ್‌ಟಿ ಪಂಗಡಕ್ಕೆ ಸೇರಿಸಿದರೂ ಅದಕ್ಕೆ ಸಮರ್ಥನೀಯ. 1 ಎ ಕೆಟಗರಿಯಲ್ಲಿರುವುದರಿಂದ ಇತರ ಹಿಂದುಳಿದ ಸಮುದಾಯಗಳಿಗಿಂತ ಸ್ವಲ್ಪ ಹೆಚ್ಚಿನ ಅನುಕೂಲಗಳು ಕೆಲವು ಅಂಶಗಳಲ್ಲಿ ಸಿಗುತ್ತಿದ್ದುದು ಸರಿಯಾಗಿಯೇ ಇದೆ.

ಆ ರೀತಿ ಇದುವರೆಗೆ ಸಿಕ್ಕಿರುವ ಸವಲತ್ತುಗಳ್ಯಾವುದಕ್ಕೂ ಬಿಜೆಪಿಯು ಕಾರಣವಲ್ಲ. ಅದನ್ನು ದಾಟಿ ನಿರ್ದಿಷ್ಟ ಪ್ರಮಾಣದ ಅನುದಾನವನ್ನು ಆ ಸಮುದಾಯಕ್ಕೆ ಒದಗಿಸಿ, ಈಗಿರುವ ಸೌಲಭ್ಯವನ್ನೂ ಸಮರ್ಥವಾಗಿ ತಲುಪಿಸಲು ಯಾವುದೇ ಸರ್ಕಾರ (ಬಿಜೆಪಿಯೂ ಸೇರಿ) ಮಾಡುವುದಾದರೆ ಅದನ್ನು ಸ್ವಾಗತಿಸಬೇಕು. ಅದರ ಅಗತ್ಯ ನಿಜಕ್ಕೂ ಇದೆ. ಆದರೆ, ಒಂದು ನಿಗಮವೋ ಅಥವಾ ಪ್ರಾಧಿಕಾರವನ್ನೋ ಮಾಡುವುದರ ಮುಖಾಂತರ ಅದು ಸಾಧ್ಯವೇ? ಸಮಾಜ ಕಲ್ಯಾಣ ಅಥವಾ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ನಿಗಮಗಳ ಮುಖಾಂತರ ಒಂದಷ್ಟು ಕೆಲಸ ನಡೆಯುತ್ತಿಲ್ಲವೇ? ಎಷ್ಟೇ ಭ್ರಷ್ಟಾಚಾರ, ಅಧಿಕಾರಶಾಹಿಯ ಕೊಕ್ಕೆ ಇತ್ಯಾದಿಗಳು ಇದ್ದರೂ ಅದರಿಂದ ಒಂದಷ್ಟು ಒಳ್ಳೆಯದು ಆಗಿಯೇ ಇದೆ. ಹಾಗಿದ್ದರೆ ಇದರಿಂದ ಏಕಾಗದು?

ಈಗಾಗಲೇ ಕಾಣುತ್ತಿರುವಂತೆ, ಇದು ಇನ್ನೂ ಕನಿಷ್ಠ 20 ಜಾತಿ ನಿಗಮಗಳಿಗೆ ದಾರಿ ಮಾಡಿಕೊಡಲಿದೆ. ಒಂದು ನಿಗಮ ಎಂದಾಕ್ಷಣ ಬೇರಾವ ಸಮುದಾಯಮುಖಿ ಕೆಲಸ ಮಾಡದಿದ್ದರೂ ಕೆಲವು ಕೋಟಿಗಳ ಹಣ ವಾರ್ಷಿಕವಾಗಿ ಖರ್ಚಾಗಲಿದೆ. ಆಫೀಸು, ಸಿಬ್ಬಂದಿ ವೇತನ, ಆಫೀಸು ಖರ್ಚು, ಅಧ್ಯಕ್ಷರಿಗೆ ಕಾರು, ಸದಸ್ಯರಿಗೆ ಭತ್ಯೆ, ಮೀಟಿಂಗ್ ಭತ್ಯೆಗಳು ಇವಿಷ್ಟು ಕೆಲಸ ಮಾಡದಿದ್ದರೆ ಆಗುವ ಖರ್ಚು. ಕೆಲಸ ಮಾಡಿದರೆ ನಿಗಮ-ಪ್ರಾಧಿಕಾರದ ಸದಸ್ಯರ ಪ್ರಯಾಣ ಭತ್ಯೆ, ಕೆಲವು ವೇದಿಕೆ ಕಾರ್ಯಕ್ರಮಗಳು ಸೇರಿಕೊಂಡರೆ ಇನ್ನಷ್ಟು ಕೋಟಿಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸೇರಿದಂತೆ ಹಲವು ಪ್ರಾಧಿಕಾರ/ನಿಗಮಗಳು ಒಂದಷ್ಟು ಕೆಲಸ ಮಾಡುತ್ತಿವೆಯಾದರೂ ಅವಕ್ಕಿರುವ ಅನುದಾನದ ಕೊರತೆಯ ಬಗ್ಗೆ ಈಗಾಗಲೇ ಆಕ್ಷೇಪಣೆಗಳಿವೆ. ಹೀಗಿರುವಾಗ ಚುನಾವಣಾಪೂರ್ವದಲ್ಲಿ ಯಾವ ಮುನ್ನೋಟವೂ ಇಲ್ಲದೇ ಘೋಷಣೆಯಾಗುವ ನಿಗಮಗಳಿಗೆ ಇನ್ನೆಷ್ಟು ಅನುದಾನ ಕೊಟ್ಟಾರು? ಒಂದುವೇಳೆ ಕೊಟ್ಟರೂ ಈಗ ಆಗಲು ಹೊರಟಿರುವ ರೀತಿಯಲ್ಲಿ 20 ಜಾತಿ ನಿಗಮಗಳು ಸ್ಥಾಪನೆಯಾದರೆ ಏನಾದೀತು? ತಲಾ ಐದು ಕೋಟಿ ಕೊಟ್ಟರೂ ಇದಕ್ಕೆ 100 ಕೋಟಿ ಬೇಕು. ಅಲ್ಲಿಗೆ ಆಫೀಸು, ಅಧ್ಯಕ್ಷರು, ಕಾರು, ಸಿಬ್ಬಂದಿ, ವೇದಿಕೆ ಕಾರ್ಯಕ್ರಮಗಳಿಗೆ ಸಾಕಾಗುತ್ತದೆ.

ಆದರೆ, ಇದರ ಜೊತೆಗೆ ಇನ್ನೊಂದು ಬೆಳವಣಿಗೆ ನಡೆಯುತ್ತದೆ. ಗೊಲ್ಲ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿ ಶಿರಾ ಉಪಚುನಾವಣೆಯಲ್ಲಿ ಗೆದ್ದ ನಂತರ ಸರ್ಕಾರ ಅಧ್ಯಕ್ಷರ ನೇಮಕಾತಿಯನ್ನೂ ಮಾಡಿಲ್ಲ, ಹಣವನ್ನೂ ಬಿಡುಗಡೆ ಮಾಡಿಲ್ಲವೆಂದು ಆ ಸಮುದಾಯದ ಕೆಲವರು ಒಂದು ಸಭೆ ಮಾಡಿದ್ದಾರೆ. ಕೂಡಲೇ ನೇಮಕಾತಿ ಮತ್ತು ಹಣ ಬಿಡುಗಡೆ ಮಾಡಿ ಎಂದು ಕೇಳಿರುವ ಅವರಲ್ಲಿ ಸದರಿ ನಿಗಮದ ಅಧ್ಯಕ್ಷ ಆಕಾಂಕ್ಷಿಗಳೂ ಇರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಅಧ್ಯಕ್ಷರು ಮತ್ತು ಸದಸ್ಯರಾಗಿ ಒಟ್ಟು 10 ಜನ ಆಗಬಹುದಾದರೆ, ಎಷ್ಟೇ ಪುಟ್ಟ ಸಮುದಾಯವಾದರೂ 100 ಜನರು ಅದರ ಹಿಂದೆ ಒಂದು ಲಾಬಿ ನಡೆಸಲು ಸಾಧ್ಯವಾಗುತ್ತದೆ. ಅದು ಸಮುದಾಯದ ಹಿತ ಇರುವುದು ಈ ಪ್ರಾಧಿಕಾರದಲ್ಲಿ ಎಂದು ನಂಬಿಸಲು ಸನ್ನದ್ಧವಾಗಿರುವ ಒಂದು ಗುಂಪಾಗಿರುತ್ತದೆ. ಒಂದು ವೇಳೆ ಪರಿಣಾಮಕಾರಿ ಕೆಲಸ ನಡೆಯುತ್ತಿಲ್ಲವೆನ್ನುವುದಾದರೆ ಅದಕ್ಕೆ ಕಾರಣ ಈ ಹಿಂದಿನ ಅವಧಿಯಲ್ಲಿದ್ದ ಅಧ್ಯಕ್ಷ/ಸದಸ್ಯರೇ ಹೊರತು ಈ ನಿಗಮದ ರಚನೆಯೇ ಪರಿಣಾಮಹೀನ ಎನ್ನಲು ಅವರು ಸಿದ್ಧರಿರುವುದಿಲ್ಲ. ಏಕೆಂದರೆ ಸ್ವತಃ ಅವರೇ ಆಕಾಂಕ್ಷಿಗಳಾಗಿರುತ್ತಾರೆ ಮತ್ತು ಅಧಿಕಾರ ಪಡೆದುಕೊಂಡರೆ ಅವರು ತಮ್ಮ ಅಭಿವೃದ್ಧಿಯನ್ನು ಚೆನ್ನಾಗಿ ಮಾಡಿಕೊಳ್ಳುವ ಸಾಧ್ಯತೆ ಇದೆ, ಸಮುದಾಯದ ಅಭಿವೃದ್ಧಿಯಲ್ಲ.

ಏಕೆಂದರೆ ಈ ಅನುದಾನ ಹಾಗೂ ಶೂನ್ಯ ಅಧಿಕಾರದಲ್ಲಿ ಅವರು ಏನೂ ಮಾಡುವ ಸಾಧ್ಯತೆಯೂ ಇರುವುದಿಲ್ಲ. ಇದು ಕೇವಲ ನಿಗಮ, ಪ್ರಾಧಿಕಾರಗಳಿಗೆ ಸೀಮಿತವಾಗಿಲ್ಲ. ನಮ್ಮ ಇಡೀ ಸ್ಥಳೀಯ ಸಂಸ್ಥೆಗಳೇ (ಅದರಲ್ಲೂ ಗ್ರಾ.ಪಂ., ತಾ.ಪಂ., ಹಾಗೂ ಜಿ.ಪಂಗಳು) ಅನುದಾನಹೀನ, ಅಧಿಕಾರಹೀನ ಸಂಸ್ಥೆಗಳಾಗಿವೆ. ಏನೂ ಇಲ್ಲ ಎಂದಲ್ಲ; ಕಾಗದದ ಮೇಲೆ ಅವು ಹುಲಿಗಳೇ. ಆದರೆ ಬಹುತೇಕ ಅಧಿಕಾರವು ಎಂಎಲ್‌ಎಗಳ ಕೈಯ್ಯಲ್ಲಿರುತ್ತದೆ. ಇರುವಷ್ಟು ಅಧಿಕಾರ ಮತ್ತು ಅನುದಾನವು ಇಲ್ಲಿನ ಅಧ್ಯಕ್ಷರು ಹಾಗೂ ಸದಸ್ಯರುಗಳ ಹಿತಕ್ಕೆ ಬಳಕೆಯಾಗುತ್ತದೆ. ಮಂಡಲ್ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ ಇದ್ದಾಗ ಇದ್ದ ಅಧಿಕಾರ ಹಾಗೂ ಅನುದಾನಕ್ಕೂ ಈಗಿನದ್ದಕ್ಕೂ ಹೋಲಿಕೆಯೇ ಇಲ್ಲದಂತಾಗಿದೆ.

ಹಾಗೆಂದು ಇದು ಸರ್ಕಾರೀ ಸಂಸ್ಥೆಗಳ ಪ್ರಾತಿನಿಧ್ಯಕ್ಕೆ ಸೀಮಿತವಾದ ಸಂಗತಿಯೂ ಅಲ್ಲ. ಯಡಿಯೂರಪ್ಪನವರು ಮೊದಲ ಅವಧಿಯಲ್ಲಿ ಏನು ಸಾಧಿಸಿದರು ಎಂದು ನೋಡಿದರೆ ಗೊತ್ತಾಗುತ್ತದೆ. ಅವರು ಸಾರ್ವಜನಿಕವಾಗಿ ಇದುವರೆಗೆ ದೊಡ್ಡ ಗುರುತು ಪಡೆದುಕೊಂಡಿರುವ, ಪಡೆದುಕೊಂಡಿರದ ಅದೆಷ್ಟೋ ಸಮುದಾಯಗಳ ಸಮ್ಮೇಳನಗಳನ್ನು ಮಾಡಲು ಉತ್ತೇಜಿಸಿದರು. ಬಹುಶಃ ಅಂತಹ ಸಮ್ಮೇಳನ ಸಂಘಟಿಸದ ಯಾವೊಂದು ಸಮುದಾಯವೂ ಇಲ್ಲವೇನೋ ಎಂಬ ಮಟ್ಟಿಗೆ ಅವು ನಡೆದವು. ಆ ಎಲ್ಲಾ ಸಮ್ಮೇಳನಗಳಿಗೂ ಯಡಿಯೂರಪ್ಪನವರು ಅತಿಥಿಯಾಗಿದ್ದರು; ಹಣವನ್ನೂ ಕೊಟ್ಟಿರುತ್ತಾರೆಂಬ ಬಗ್ಗೆ ಸಂದೇಹವಿರುವ ಅಗತ್ಯವಿಲ್ಲ. ನಂತರ ಆಯಾ ಸಮುದಾಯಗಳ ಮಠಗಳಿಗೆ ಅಥವಾ ದೇವಸ್ಥಾನಗಳಿಗೆ ಬಜೆಟ್‌ನಲ್ಲಿ ಹಣ ನೀಡಿದರು. ಇದು ಆಯಾ ಸಮುದಾಯಗಳಲ್ಲಿನ ಸ್ಥಾಪಿತ ಹಿತಾಸಕ್ತಿಗಳ ಹಿತವನ್ನು ಕಾಪಾಡಿತಷ್ಟೇ ಅಲ್ಲ; ಸಮುದಾಯಕ್ಕೆ ’ಬಿಜೆಪಿ ಆಡಳಿತದಲ್ಲಿ ಮತ್ತು ’ಹಿಂದುತ್ವದ ಅಜೆಂಡಾ’ದಡಿ ಒಂದು ’ಗುರುತು’ ಸಿಕ್ಕಿತು. ಈ ಗುರುತು ವಿಶಾಲವಾದ ದೊಡ್ಡ ಗುರುತಿನಡಿ ಸೇರಿಕೊಂಡ ಸಮಾಧಾನವನ್ನೂ ತರುತ್ತದೆ. ಆದರೆ ಯಾವ ರೀತಿಯಲ್ಲೂ ದೊಡ್ಡ ಆರ್ಥಿಕ, ಸಾಮಾಜಿಕ, ರಾಜಕೀಯ ಚಲನೆಯನ್ನೂ ಇಡೀ ಸಮುದಾಯಕ್ಕೆ ತರುವುದಿಲ್ಲ.

ರಾಜಕೀಯವಾಗಿ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಕ್ಕಂತೆ ಮತ್ತು ಸಾಮಾಜಿಕವಾಗಿ ಹಿಂದುತ್ವದಡಿ ಗುರುತು ಸಿಕ್ಕಂತೆ.
ಇದನ್ನು ಕಳೆದ ಬಾರಿ ಸಮ್ಮೇಳನ, ಬಜೆಟ್‌ನಲ್ಲಿ ಮಠಕ್ಕೆ ಹಣದ ಮುಖಾಂತರ ನಡೆಸಿದ ಕಾರ್ಯಾಚರಣೆ ಮೂಲಕ ಮಾಡಲಾಯಿತು. ಈ ಸಾರಿ ಅದನ್ನು ಸಾಂಸ್ಥಿಕಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸರ್ಕಾರದ ಅಂದರೆ ರಾಜ್ಯದ ಜನರ ಹಣದಲ್ಲಿ! ಹಿಂದೆಯೂ ಅದು ರಾಜ್ಯದ ಜನರ ಹಣವೇ ಆಗಿತ್ತು. ಆದರೆ ಸರ್ಕಾರೀ ಯಂತ್ರಾಂಗದ ಭಾಗವಾಗಿ ಸಾಂಸ್ಥೀಕರಿಸಿರಲಿಲ್ಲ. ಈ ಸಾರಿ ಅದನ್ನೂ ಮಾಡುತ್ತಿದ್ದಾರೆ.

ಕಾಡುಗೊಲ್ಲ ಅಭಿವೃದ್ಧಿ ಪ್ರಾಧಿಕಾರವನ್ನು ಶಿರಾದ ಉಪಚುನಾವಣೆಗೆ ಮುಂಚೆ ಘೋಷಿಸಿದರು. ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಬಸವಕಲ್ಯಾಣ ಉಪಚುನಾವಣೆಗೆ (ಅಲ್ಲಿ ಮರಾಠಾ ಮತಗಳು ಹೆಚ್ಚಿದ್ದು ಕಳೆದ ಚುನಾವಣೆಯಲ್ಲಿ ಪಿ.ಜಿ.ಆರ್.ಸಿಂಧ್ಯಾ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರಿಂದ ಅವು ವಿಭಜನೆಯಾಗಿ ಕಾಂಗ್ರೆಸ್‌ನಿಂದ ಹಿಂದುಳಿದ ಸಮುದಾಯಕ್ಕೆ ಸೇರಿದ್ದ ನಾರಾಯಣರಾವ್ ಗೆದ್ದಿದ್ದರು) ಮುಂಚೆ ಘೋಷಿಸಿದರು. ಅದೇ ಹೊತ್ತಿಗೆ ಲಿಂಗಾಯಿತರಿಗೇಕೆ ಅಭಿವೃದ್ಧಿ ಪ್ರಾಧಿಕಾರವಿಲ್ಲ ಎಂಬ ಪ್ರಶ್ನೆ ಎದ್ದಿತು. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ಘೋಷಿಸಿದ್ದರು. ಯಾವ ರೀತಿಯಲ್ಲೂ ಸಮರ್ಥನೀಯವಲ್ಲದ ಕೆಲಸ ಅದಾಗಿತ್ತು. 3% ಬ್ರಾಹ್ಮಣರು ಮತ್ತು ಇನ್ನಿತರ ಸಮುದಾಯಗಳಿಗೆ 10% ಮೀಸಲಾತಿ ಕೊಟ್ಟಿದ್ದನ್ನು ದೇಶದ ಯಾವೊಂದು ಪಕ್ಷವೂ ಹೇಗೆ ವಿರೋಧಿಸಲಿಲ್ಲವೋ ಹಾಗೆಯೇ ಇದೂ ಸಹಾ ಸಣ್ಣ ಗೊಣಗಾಟವೂ ಇಲ್ಲದೇ ಪಾಸಾಗಿ ಹೋಯಿತು. ಹೀಗಿರುವಾಗ ಲಿಂಗಾಯಿತರಿಗೆ ಈ ಪ್ರಶ್ನೆ ಬರಬಾರದೆಂದರೆ ಹೇಗೆ? ಇದೇ ಬಸವಕಲ್ಯಾಣದಲ್ಲಿ ಲಿಂಗಾಯಿತ ಮತಗಳ ಪಾರುಪತ್ಯವನ್ನು ಗಣನೆಗೆ ತೆಗೆದುಕೊಳ್ಳುವುದರ ಜೊತೆಗೆ ಲಿಂಗಾಯಿತರ ಏಕಮೇವಾದ್ವಿತೀಯ ನಾಯಕನ ಸ್ಥಾನವನ್ನು ಬಿಟ್ಟುಕೊಡುವುದಾದರೆ ಅದು ವಿಜಯೇಂದ್ರನ ಹೊರತಾಗಿ ಯಾರಿಗೂ ಅಲ್ಲ ಎಂಬ ಭಾವನೆಯಲ್ಲಿರುವ ಯಡಿಯೂರಪ್ಪನವರು ಸುಮ್ಮನಿರಲಾದೀತೇ? ವೀರಶೈವ ಲಿಂಗಾಯಿತ ಅಭಿವೃದ್ಧಿ ಪ್ರಾಧಿಕಾರದ ಘೋಷಣೆಯೂ ಆಗಿ ಹೋಯಿತು.

ಈಗ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರದ ಒತ್ತಾಯವೂ ಬಂದಿದೆ. ಬಿಜೆಪಿಯಲ್ಲಿ ಮೂರ್‍ನಾಲ್ಕು ದೊಡ್ಡ ಒಕ್ಕಲಿಗ ನಾಯಕರಿದ್ದು, ಬಿಜೆಪಿಯಲ್ಲಿ ಸತತವಾಗಿ ಗೆದ್ದು ಶಾಸಕನಾಗಿರುವ ತನ್ನನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲವಲ್ಲಾ ಎಂಬ ಕೊರಗಿರುವ ಬಿಜೆಪಿಯ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅದನ್ನು ಮುಂದಿಟ್ಟಿದ್ದಾರೆ. ಅಂದರೆ ಈಗ ಸಮಸ್ಯೆಯ ಪೆಟ್ಟಿಗೆಯನ್ನು ತೆರೆದಂತೇ.. ಒಂದಾದ ಮೇಲೆ ಒಂದು ಸಮುದಾಯಗಳು ಈಗ ಕೇಳಿಯೇ ಕೇಳುತ್ತಾರೆ. ರಾಜ್ಯದ ದೊಡ್ಡ ಮತ್ತು ಬಲಾಢ್ಯ ಸಮುದಾಯವಾದ ಲಿಂಗಾಯಿತರಿಗೇ ಕೊಟ್ಟ ಮೇಲೆ ನಮಗೇಕಿಲ್ಲ ಎಂದು ಯಾರಾದರೂ ಕೇಳಿದರೆ ಅದು ಸಮರ್ಥನೀಯ ಎಂದೇ ಅನಿಸುತ್ತದೆ. ಆದರೆ ಬಿಜೆಪಿ ಇದನ್ನು ಸಮಸ್ಯೆಯೆಂದು ನೋಡುವ ಸಾಧ್ಯತೆ ಇಲ್ಲ. ಬದಲಿಗೆ ಮುಸ್ಲಿಮರು, ಛಲವಾದಿಗಳನ್ನು ಬಿಟ್ಟರೆ ಯಾರನ್ನೂ ಬಿಜೆಪಿ ಸದ್ಯಕ್ಕೆ ಕೂಡಲೇ ಒಳಕ್ಕೆಳೆದುಕೊಳ್ಳದ ಪಟ್ಟಿಯಲ್ಲಿ ಇಟ್ಟಿಲ್ಲ. ಕುರುಬರನ್ನೂ ಜೊತೆಗೆಳೆದುಕೊಂಡು, ಸಿದ್ದರಾಮಯ್ಯನವರು ಆ ಸಮುದಾಯದ ಹಿತ ಕಾಪಾಡುತ್ತಿಲ್ಲ ಎಂದು ಹೇಳಲು ಬೇಕಾದ ’ಕುರುಬರಿಗೆ ಎಸ್‌ಟಿ ಮೀಸಲಾತಿ ಬೇಕು’ ಹೋರಾಟವನ್ನು ಎತ್ತಿ ಕಟ್ಟಲು ಹೊರಟಿದೆ.

ಕಾಂಗ್ರೆಸ್‌ನ ಮತಬ್ಯಾಂಕಿನಲ್ಲಿ ಅಹಿಂದ ಭದ್ರವಾಗಿದೆ ಎಂದು ಯಾರಾದರೂ ಭಾವಿಸಿದರೆ ಅದು ಮೂರ್ಖತನವಾದೀತು. ಹಿಂದುಳಿದವರಲ್ಲಿ ಕುರುಬರನ್ನು ಬಿಟ್ಟು ಮಿಕ್ಕೆಲ್ಲರನ್ನು ಜೊತೆಗೆ ಕರೆದುಕೊಳ್ಳಲು, ಈಗಾಗಲೇ ಹೇಳಿದಂತೆ, ಯಡಿಯೂರಪ್ಪನವರ ಮೊದಲ ಅವಧಿಯಲ್ಲೇ ಪ್ರಯತ್ನಪಟ್ಟ ಕಾರ್ಯಾಚರಣೆ ಭಾಗಶಃ ಯಶಸ್ವಿಯಾಗಿತ್ತು. ವಾಲ್ಮೀಕಿ ಸಮುದಾಯವು ಹಲವು ಜಿಲ್ಲೆಗಳಲ್ಲಿ ಬಿಜೆಪಿಯ ಜೊತೆಗೇ ಗುರುತಿಸಿಕೊಂಡಿದೆ. ಮಾದಿಗರನ್ನು ಸೆಳೆಯಲು ಬೇಕಾದ ಸುಳ್ಳಾಟಗಳು ನಡೆದೇ ಇವೆ (ಕಾಂಗ್ರೆಸ್ ಸರ್ಕಾರವಿದ್ದಾಗ ಅಷ್ಟು ದೊಡ್ಡದಾಗಿ ಸದ್ದು ಮಾಡಿದ್ದ ದಲಿತ ಮುಖ್ಯಮಂತ್ರಿಯ ವಿಚಾರವಾಗಲೀ, ಒಳಮೀಸಲಾತಿಯ ಪ್ರಶ್ನೆಯಾಗಲೀ ಈಗ ದೂರ ಸರಿದಿರುವುದನ್ನು ಗಮನಿಸಬೇಕು). ಇಷ್ಟಾದ ಮೇಲೆ ಇನ್ನು ಕುರುಬರು ಹಾಗೂ ಛಲವಾದಿಗಳು ದೂರವುಳಿದಾರೇ? ಏಕೆಂದರೆ ಇದು ಕೇವಲ ಪಕ್ಷವೊಂದರ ಜೊತೆಗೆ ಸಮುದಾಯವು ಬರುವ ಪ್ರಶ್ನೆಯಾಗುಳಿದಿಲ್ಲ.

ವೈದಿಕಶಾಹಿ ಸಿದ್ಧಾಂತವೊಂದು ಎಚ್ಚೆತ್ತ ಶೋಷಿತ ಸಮುದಾಯಗಳು ತನ್ನಿಂದ ದೂರ ಸರಿದಾಗ, ಮತ್ತೆ ತೆಕ್ಕೆಗೆ ಎಳೆದುಕೊಳ್ಳಲು ವಿಶಾಲವಾದ ಐಡೆಂಟಿಟಿಯ ಭಾಗ ಮಾಡಿಕೊಳ್ಳುತ್ತಲೇ ಮೇಲು ಕೀಳಿನ ಶ್ರೇಣೀಕರಣವನ್ನೂ ಮುಂದುವರೆಸುವ ಸೋಷಿಯಲ್ ಮತ್ತು ಪೊಲಿಟಿಕಲ್ ಇಂಜಿನಿಯರಿಂಗ್‌ನ ದೊಡ್ಡ ಹುನ್ನಾರವಾಗಿದೆ.
ಇದನ್ನು ಶೋಷಿತ ಸಮುದಾಯಗಳು ಅರ್ಥಮಾಡಿಕೊಳ್ಳುವ ಸಾಧ್ಯತೆ ಈಗಂತೂ ಇಲ್ಲ. ಏಕೆಂದರೆ ಆ ಸಮುದಾಯಗಳ ಐಡೆಂಟಿಟಿಗಳನ್ನು ರೂಪಿಸುತ್ತಿರುವುದು ಆಯಾ ಸಮುದಾಯಗಳಲ್ಲಿ ನಿಗಮ, ಪ್ರಾಧಿಕಾರಗಳ ಅಧಿಕಾರಸ್ಥಾನಗಳ ಮೇಲೆ ಆಸಕ್ತಿ ಹೊಂದಿರುವ ಪುಢಾರಿಗಳು ಮತ್ತು ಅದಕ್ಕೆ ಪುಷ್ಟಿ ಕೊಡುತ್ತಿರುವ ಅವಕಾಶವಾದಿ ಬುದ್ಧಿಜೀವಿ ಗುಂಪುಗಳೇ ಹೊರತು, ಸಮಗ್ರ ವಿಮೋಚನೆ ಒದಗಿಸಬಲ್ಲ ವೈದಿಕಶಾಹಿ ವಿರೋಧಿ ಅಜೆಂಡಾ ಅಲ್ಲ.

ಅದನ್ನು ಮೀರಿದ ಪ್ರಜ್ಞೆ ಬರಬೇಕೆಂದರೆ ಅದು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯಗಳ ಐಕ್ಯತೆಯ ಕುರಿತು ಆಲೋಚಿಸುವವರೆಲ್ಲರೂ ಈ ಸೀಮಿತ ಐಡೆಂಟಿಟಿಗಳನ್ನು ದಾಟಬಲ್ಲ ಆಂದೋಲನವನ್ನು ವಿಶ್ವಾಸ ಮೂಡಿಸುವಷ್ಟು ದೊಡ್ಡದಾಗಿ ಕಟ್ಟಲು ತಯಾರಾಗಬೇಕಿದೆ. ಕರ್ನಾಟಕದ ಪ್ರಸ್ತುತ ಸಾಮಾಜಿಕ, ರಾಜಕೀಯ ಸಂದರ್ಭದಲ್ಲಿ ಅಂತಹ ಸಾಧ್ಯತೆ ಇದೆಯೇ ಎಂಬುದನ್ನು ಮುಂದಿನ ದಿನಗಳಷ್ಟೇ ತೋರಬಲ್ಲವು.

  • ನೀಲಗಾರ

ಇದನ್ನೂ ಓದಿ: ಸರ್ಕಾರ ಮರಾಠಿಗರ ಪ್ರಾಧಿಕಾರ ರಚಿಸಿ ಕನ್ನಡಿಗರನ್ನ ಕೆರಳಿಸಿದೆ – ಸಿದ್ದರಾಮಯ್ಯ ಸರಣಿ ಟ್ವೀಟ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...