Homeಮುಖಪುಟಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೃಹತ್ ನೇಮಕಾತಿ ಹಗರಣ ಬಯಲು

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬೃಹತ್ ನೇಮಕಾತಿ ಹಗರಣ ಬಯಲು

ಯುಜಿಸಿ ನಿಯಮಾವಳಿ, ನೇಮಕಾತಿ ಅಧಿಸೂಚನೆ ಮತ್ತು ಎಕ್ಸಿಕ್ಯೂಟಿವ್ ಕೌನ್ಸಿಲ್ ನಿರ್ಣಯಗಳನ್ನು ಗಾಳಿಗೆ ತೂರಿ ಅನರ್ಹ ಅಭ್ಯರ್ಥಿಗಳನ್ನು ಬೋಧಕ ಸಿಬ್ಬಂಧಿಯಾಗಿ ನೇಮಕ... ಉಪಕುಲಪತಿ ಎಚ್.ಎಂ. ಮಹೇಶ್ವರಯ್ಯನವರೇ ನೇಮಕಾತಿ ಹಗರಣದ ಕಿಂಗ್ ಪಿನ್?

- Advertisement -
- Advertisement -

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯ ಸಮೀಪ ಇರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕರ್ನಾಟಕದಲ್ಲಿರುವ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯ. ಹತ್ತು ವರ್ಷಗಳ ಹಿಂದೆ ಇದು ಸ್ಥಾಪನೆಯಾದಾಗ ಹಿಂದುಳಿದ ಕಲ್ಯಾಣ ಕರ್ನಾಟಕಕ್ಕೆ ಸಿಕ್ಕ ವರ ಎಂದೇ ಭಾವಿಸಲಾಗಿತ್ತು. ಶೈಕ್ಷಣಿಕವಾಗಿ ಹಿಂದುಳಿದ ಈ ಪ್ರದೇಶ ಮುಂದುವರೆಯುವುದಕ್ಕೆ ಒದಗಿ ಬಂದ ಸದಾವಕಾಶ ಎಂದೇ ಪರಿಭಾವಿಸಲಾಗಿತ್ತು. ಆರಂಭಿಕ ಕೆಲವು ವರ್ಷಗಳಲ್ಲಿ ಆಡಳಿತ, ಬೋಧನೆ ಮತ್ತು ಸಂಶೋಧನೆಯಲ್ಲಿ ಉತ್ಕೃಷ್ಟತೆ ಮತ್ತು ಪಾರದರ್ಶಕತೆಗಳನ್ನು ಕಾಪಾಡಿಕೊಳ್ಳುತ್ತಾ ಬಂದ ಈ ವಿಶ್ವವಿದ್ಯಾಲಯ ಬರುಬರುತ್ತಾ ಭ್ರಷ್ಟರ ಪಾಲಿಗೆ ಪುಷ್ಕಳವಾಗಿ ಮೇಯಲು ಒಂದು ದಟ್ಟ ಹುಲ್ಲುಗಾವಲಾಗಿ ಪರಿವರ್ತಿತವಾದುದ್ದು ನಿಜಕ್ಕೂ ಕಲ್ಯಾಣ ಕರ್ನಾಟಕದ ದುರಾದೃಷ್ಟ.

ಅದರಲ್ಲೂ ನಿರ್ದಿಷ್ಟವಾಗಿ ಎಚ್.ಎಂ.ಮಹೇಶ್ವರಯ್ಯ ಇಂತಹ ಉತ್ಕೃಷ್ಟ ವಿಶ್ವವಿದ್ಯಾಲಯಕ್ಕೆ ಉಪಕುಲಪತಿಯಾಗಿ ವಕ್ಕರಿಸಿಕೊಂಡ ಮೇಲಂತೂ ವಿಶ್ವವಿದ್ಯಾಲಯದ ಉನ್ನತ ಹಂತದ ಆಯಕಟ್ಟಿನ ಸ್ಥಳಗಳು ಬಿಜೆಪಿ ಪರಿವಾರದ ನಾಲಾಯಕ್ ಮಂದಿಯ ಗಂಜಿಕೇಂದ್ರಗಳಾಗಿ ಪರಿವರ್ತನೆಯಾಗಿವೆ. ಮಾತ್ರವಲ್ಲ, ಕೇಂದ್ರ ಸರ್ಕಾರದಿಂದ ವರ್ಷಕ್ಕೆ ಐನೂರು ಕೋಟಿ ರೂಪಾಯಿ ಅನುದಾನ ಪಡೆಯುವ ಈ ಸಂಸ್ಥೆ ಅಕ್ಷರಶಃ ಮಹೇಶ್ವರಯ್ಯರ ಪಾಲಿಗೆ ಅಕ್ಷಯಪಾತ್ರೆಯಾಗಿ ಮಾರ್ಪಟ್ಟಿದೆ. ಅದಕ್ಕೆ ತಾಜಾ ಉದಾಹರಣೆಯೆಂದರೆ ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಬೃಹತ್ ನೇಮಕಾತಿ ಹಗರಣ.

ಉಪಕುಲಪತಿ ಎಚ್.ಎಂ.ಮಹೇಶ್ವರಯ್ಯ

ಮಹೇಶ್ವರಯ್ಯ ಉಪಕುಲಪತಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಬಿಡುಗಡೆಯಾಗಿರುವ ಸಾವಿರಾರು ಕೋಟಿ ರೂಪಾಯಿಗಳಲ್ಲಿ ಗಣನೀಯ ಭಾಗ ಹೇಗೆ ಯಾರ ಜೇಬು ಸೇರಿದೆ; ಕಟ್ಟಡ, ಕೆರೆ, ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳ ನಿರ್ಮಾಣದಲ್ಲಿ ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಆಮೇಲೆ ಇನ್ನೊಂದು ಲೇಖನದಲ್ಲಿ ವಿವರಿಸುತ್ತೇವೆ. ಸದ್ಯಕ್ಕೆ ಈಗ ಇತ್ತೀಚೆಗೆ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಯ ನೇಮಕಾತಿಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನಷ್ಟೇ ಈ ಲೇಖನದಲ್ಲಿ ನೋಡೋಣ.

ಈಗ ನೇರವಾಗಿ ವಿಷಯಕ್ಕೆ ಬರೋಣ. ವಿಶ್ವವಿದ್ಯಾಲಯದ 30 ವಿಭಾಗದಲ್ಲಿ ಖಾಲಿ ಇರುವ 67 ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ವಿಶ್ವವಿದ್ಯಾಲಯವು ದಿನಾಂಕ 25.09.2019ರಂದು ಅಧಿಸೂಚನೆಯನ್ನು ಹೊರಡಿಸಿತ್ತು (ಅಧಿಸೂಚನೆ ಸಂಖ್ಯೆ 26/2019). ಇದರಲ್ಲಿ ಐದು ವಿಭಾಗದಲ್ಲಿ ಖಾಲಿ ಇರುವ ಐದು ಬ್ಯಾಕ್‍ಲಾಗ್ ಹುದ್ದೆಗಳೂ ಸೇರಿದ್ದವು.
ಈ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಹಗರಣವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದರೆ ನಾವು ಮೊದಲು ನೇಮಕಾತಿ ಮಾಡಿಕೊಳ್ಳುವಾಗ ಕಡ್ಡಾಯವಾಗಿ ಪಾಲಿಸಬೇಕಿರುವ ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ (ಯುಜಿಸಿ) ಒಂದೆರಡು ನಿಯಮಾವಳಿಗಳನ್ನು ತಿಳಿದುಕೊಳ್ಳುವುದು ಸೂಕ್ತ.
ಯಾವುದೇ ವಿಶ್ವವಿದ್ಯಾಲಯವು ತನ್ನ ಬೋದಕ ಸಿಬ್ಬಂದಿಯನ್ನು ನೇಮಕ ಮಾಡುವಾಗ ಕಡ್ಡಾಯವಾಗಿ ಪರಿಪಾಲಿಸಬೇಕಾದ ಕೆಲವು ನಿಯಮಗಳನ್ನು ಯುಜಿಸಿ ರೂಪಿಸಿದೆ. ಅಭ್ಯರ್ಥಿಗಳ ವಯಸ್ಸು, ಶೈಕ್ಷಣಿಕ ಅರ್ಹತೆ, ಬೋಧನಾ ಅನುಭವ ಮುಂತಾದವುಗಳ ಜೊತೆಗೆ ಇಂತಿಷ್ಟು ಸಂಶೋಧನಾ ಪ್ರಬಂಧಗಳನ್ನು ಆಯಾ ಕ್ಷೇತ್ರದ ಪ್ರತಿಷ್ಟಿತ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರಬೇಕು ಎಂಬ ನಿಯಮಾವಳಿಯೂ ಇದೆ. ಈ ಸಂಶೋಧನಾ ಪ್ರಬಂಧಗಳು ಯಾವುದೊ ಸಣ್ಣಪುಟ್ಟ ಪತ್ರಿಕೆಗಳಲ್ಲಿ/ ನಿಯತಕಾಲಿಕೆಗಳಲ್ಲಿ ಪ್ರಕಟವಾದರೆ ಅದನ್ನು ಪರಿಗಣಿಸುವಂತಿಲ್ಲ. ಅವು ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ/ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದರೆ ಮಾತ್ರ ಅವುಗಳನ್ನು ಪರಿಗಣಿಸಬೇಕು. ಹೀಗೆ, ಯುಜಿಸಿಯಿಂದ ಮಾನ್ಯತೆ ಪಡೆದಿರುವ ಪತ್ರಿಕೆ/ ನಿಯತಕಾಲಿಕೆಗಳ ಪಟ್ಟಿಯನ್ನೂ ಯುಜಿಸಿ ತನ್ನ ಅಂತರ್ಜಾಲ ತಾಣದಲ್ಲೂ ಪ್ರಕಟಿಸಿದೆ ಮತ್ತು ಎಲ್ಲಾ ವಿಶ್ವವಿದ್ಯಾಲಯಗಳಿಗೂ ಕಳಿಸಿಕೊಟ್ಟಿದೆ.

ಇತ್ತೀಚೆಗೆ, ಯುಜಿಸಿಯು ತನ್ನ ಮಾನ್ಯತೆಯಿರುವ ಪತ್ರಿಕೆ ಮತ್ತು ನಿಯತಕಾಲಿಕೆಗಳ ಪಟ್ಟಿಯನ್ನು ಪರಿಷ್ಕರಿಸಿತ್ತು. ಅಂದರೆ, ಹಿಂದಿನ ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ ಮತ್ತು ನಿಯತಕಾಲಿಕೆಗಳ ಪಟ್ಟಿಯನ್ನು ಹಿಂಪಡೆದು ಅದರ ಜಾಗದಲ್ಲಿ ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ ಮತ್ತು ನಿಯತಕಾಲಿಕೆಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಕುರಿತು ದಿನಾಂಕ 16.09.2019ರಂದು ಒಂದು ನೋಟೀಸನ್ನು ಹೊರಡಿಸಿ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಕಳಿಸಿಕೊಟ್ಟಿತ್ತು. ಆ ನೋಟೀಸಿನ ಸಂಖ್ಯೆ: F.1-1/2018 (journal/CARE). ಅದರಲ್ಲಿ ಈ ಹಿಂದೆ ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ ಮತ್ತು ನಿಯತಕಾಲಿಕೆಗಳ ಪಟ್ಟಿಯನ್ನು ಹಿಂಪಡೆದು ಹೊಸ ಪಟ್ಟಿಯನ್ನು (UGC-CARE Reference List of Quality Journals (UGC-CARE List) ಬಿಡುಗಡೆ ಮಾಡಿರುವ ವಿಷಯವನ್ನು ತಿಳಿಸಿತ್ತು. ಅಲ್ಲದೇ, ಇನ್ನು ಮುಂದೆ ಎಲ್ಲಾ ಉಪಕುಲಪತಿಗಳು, ಆಯ್ಕೆ ಸಮಿತಿಗಳು, ಪರಿವೀಕ್ಷಣಾ ಸಮಿತಿಗಳು, ಸಂಶೋಧನಾ ಮೇಲುಸ್ತುವಾರಿ ನಡೆಸುವವರು ಮತ್ತು ಎಲ್ಲಾ ರೀತಿಯ ಅಕೆಡೆಮಿಕ್ ಮತ್ತು ಸಾಮರ್ಥ್ಯ ಮೌಲ್ಯಮಾಪನಕ್ಕೆ ಈ ಹೊಸ ಪಟ್ಟಿಯನ್ನೇ ಪರಿಗಣಿಸಬೇಕು ಎಂದೂ ಹೇಳಿತ್ತು.
ಮುಂದುವರಿದು, ಅದೇ ಪತ್ರದ ಎರಡನೇ ಪ್ಯಾರಾದಲ್ಲಿ ಅದು “ಯಾವುದೇ ರೀತಿಯ ಅಕೆಡೆಮಿಕ್/ ಸಾಮರ್ಥ್ಯ ಮೌಲ್ಯಮಾಪನ ಮತ್ತು ಅಂದಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವ ಎಲ್ಲಾ ಉಪಕುಲಪತಿಗಳು, ಆಯ್ಕೆ ಸಮಿತಿಗಳು, ಪರಿವೀಕ್ಷಣಾ ಸಮಿತಿಗಳು ನೇಮಕಾತಿ ಮಾಡುವಾಗ, ಬಡ್ತಿ ನೀಡುವಾಗ, ಕ್ರೆಡಿಟ್ ನೀಡುವಾಗ, ಸಂಶೋಧನಾ ಪದವಿಗಳನ್ನು ನೀಡುವಾಗ ತಮ್ಮ ತೀರ್ಮಾನಗಳು [ಅಭ್ಯರ್ಥಿಗಳ] ಪ್ರಕಟಗೊಂಡ ಕೃತಿಗಳ ಗುಣಮಟ್ಟವನ್ನು ಆಧರಿಸಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕೆ ವಿನಃ [ಅಭ್ಯರ್ಥಿ] ಎಷ್ಟು ಕೃತಿಗಳನ್ನು ಪ್ರಕಟಿಸಿದ್ದಾನೆ ಎಂಬ ಸಂಖ್ಯೆಯ ಮೇಲಾಗಲೀ ಅಥವಾ ತಜ್ಞರಿಂದ ಪರಾಮರ್ಶನಕ್ಕೊಳಪಟ್ಟಿದೆ ಎಂಬ ಅಂಶದ ಮೇಲಾಗಲೀ ಅಥವಾ ಯುಜಿಸಿಯ ಹಳೆಯ ಮಾನ್ಯತಾ ಪಟ್ಟಿಯಲ್ಲಿ ಅವರ ಕೃತಿ ಪ್ರಕಟಣೆಯಾಗಿದೆ ಎಂಬ ಅಂಶದ ಮೇಲಾಗಲೀ ಆಧರಿಸಿರಬಾರದು” ಎಂದು ಸ್ಪಷ್ಟವಾಗಿ ಹೇಳಿತ್ತು.

ಈಗ ಮತ್ತೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿರುವ ನೇಮಕಾತಿ ಹಗರಣಕ್ಕೆ ಮರಳುವುದಾದರೆ, ಯುಜಿಸಿಯ ಈ ಪತ್ರ ಬಂದು ಒಂದು ವಾರದ ನಂತರ ವಿಶ್ವವಿದ್ಯಾಲಯವು ತನ್ನಲ್ಲಿ ಖಾಲಿ ಇರುವ 67 ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ದಿನಾಂಕ 25.09.2019ರಂದು ಅಧಿಸೂಚನೆಯನ್ನು ಹೊರಡಿಸಿತು. ಈ ಅಧಿಸೂಚನೆಯಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಏನೇನು ಅರ್ಹತಾ ಷರತ್ತುಗಳಿವೆ ಮತ್ತು ಪ್ರಾಧ್ಯಾಪಕ ಹುದ್ದೆಗೆ ಏನೇನು ಅರ್ಹತಾ ಷರತ್ತುಗಳಿವೆ ಎಂಬುದನ್ನು ಪ್ರತ್ಯೇಕವಾಗಿ ನೀಡಲಾಗಿತ್ತು. ಅದರಲ್ಲಿ ಒಂದು ಷರತ್ತು ಎಂದರೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಕನಿಷ್ಠ ಏಳು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರಬೇಕು ಹಾಗೂ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಕನಿಷ್ಠ ಹತ್ತು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿತ್ತು.

ಇಲ್ಲಿ ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ ಮತ್ತು ನಿಯತಕಾಲಿಕೆಗಳು ಎಂದರೆ ಹಳೆಯ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳೋ ಅಥವಾ ಹೊಸದಾಗಿ ಪರಿಷ್ಕರಣೆಗೊಂಡ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳೋ ಎಂಬುದರ ಬಗ್ಗೆ ಯಾವುದೇ ರೀತಿಯ ಗೊಂದಲ ಉಂಟಾಗದಿರಲೆಂದು ಅಧಿಸೂಚನೆಯ 56ನೇ ಅಂಶದಲ್ಲಿ ಸಾಮಾನ್ಯ ಮಾಹಿತಿ ಎಂಬ ಉಪಶೀರ್ಷಿಕೆಯಡಿಯಲ್ಲಿ “16.09.2019ರ ದಿನಾಂಕದ ಯುಜಿಸಿ ಪತ್ರಸಂಖ್ಯೆ F.1-1/2018 (journal/CARE) ಪ್ರಕಾರ ಸಂಶೋಧನಾ ಪ್ರಬಂಧಗಳ ಪ್ರಕಟಣೆಗಳನ್ನು ಪರಿಗಣಸಿಲಾಗುವುದು” ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅಂದರೆ, ಯುಜಿಸಿಯ ಹೊಸ ಮಾನ್ಯತಾ ಪಟ್ಟಿಯಲ್ಲಿ ಪ್ರಕಟವಾದ ಪ್ರಬಂಧಗಳನ್ನು ಮಾತ್ರ ಪರಿಗಣಿಸಲಾಗುವುದು ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ.

ಈ ನೇಮಕಾತಿ ಅಧಿಸೂಚನೆಯಲ್ಲಿರುವ ಈ ಅರ್ಹತಾ ಷರತ್ತುಗಳನ್ನು ಗಮನಿಸಿದ ಸಾವಿರಾರು ಅನರ್ಹ ಅಭ್ಯರ್ಥಿಗಳು, ಅಂದರೆ ಯುಜಿಸಿಯ ಹೊಸ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಪ್ರಕಟಿಸಿದ ಅಭ್ಯರ್ಥಿಗಳು ತಾವು ಈ ಹುದ್ದೆಗೆ ಅನರ್ಹರು ಎಂದು ಪರಿಭಾವಿಸಿ ಅರ್ಜಿಯನ್ನೇ ಹಾಕಲಿಲ್ಲ. ಅದು ಸರಿ ಕೂಡ. ಇನ್ನೊಂದೆಡೆಗೆ, ಯುಜಿಸಿಯ ಹೊಸ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಪ್ರಕಟಿಸದ ಅಭ್ಯರ್ಥಿಗಳು ಅರ್ಜಿ ಹಾಕುವುದಕ್ಕೆ ಅನರ್ಹರಾಗಿದ್ದರೂ ಅರ್ಜಿ ಹಾಕಿದರು. ಅಭ್ಯರ್ಥಿಗಳ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಉಪಕುಲಪತಿ ಎಚ್.ಎಂ.ಮಹೇಶ್ವರಯ್ಯನವರೇ ಇಂತಹ ಕೆಲವು ಅನರ್ಹ ಅಭ್ಯರ್ಥಿಗಳಿಂದ ಅರ್ಜಿ ಹಾಕಿಸಿದ್ದಾರೆ ಎಂದುಕೊಳ್ಳಲು ಸಾಂದರ್ಭಿಕ ಸಾಕ್ಷ್ಯಗಳು ಲಭ್ಯವಿವೆ.

ಅಸಲಿಗೆ ಇಂತಹ ಅನರ್ಹ ಅಭ್ಯರ್ಥಿಗಳು ಅರ್ಜಿ ಹಾಕಿದಾಗ ಅರ್ಜಿಗಳ ಪರಿಶೀಲನೆಯ ಸಮಯದಲ್ಲಿ ಅಂತಹ ಅಭ್ಯರ್ಥಿಗಳನ್ನು ಅನರ್ಹರೆಂದು ಘೋಷಿಸಿ ಅವರನ್ನು ತಿರಸ್ಕರಿಸಲಾಗುತ್ತದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲೂ ಕೂಡ ಕೆಲವು ವಿಭಾಗಗಳಲ್ಲೂ ಕೂಡ ಇಂತಹ ಅನರ್ಹ ಅಭ್ಯರ್ಥಿಗಳನ್ನು ಪರಿಶೀಲನೆಯ ವೇಳೆ ತಿರಸ್ಕರಿಸಲಾಗಿದೆ. ಉದಾಹರಣೆಗೆ, ಜಿಯಾಲಜಿ, ಜಿಯೋಗ್ರಫಿ, ಲಿಂಗ್ವೆಸ್ಟಿಕ್ಸ್ ಮತ್ತು ಫಿಸಿಕ್ಸ್ ವಿಭಾಗಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಹಳ ಕರಾರುವಕ್ಕಾಗಿ, ಪಾರದರ್ಶಕವಾಗಿ, ಯುಜಿಸಿ ನಿಯಮಾವಳಿಗಳ ಪ್ರಕಾರ ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ನಡೆದಿದೆ.

ಇನ್ನೂ ಆಳಕ್ಕಿಳಿದು ನೋಡುವುದಾದರೆ, ಜಿಯೋಗ್ರಫಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಹದಿನಾಲ್ಕು ಅಭ್ಯರ್ಥಿಗಳು ಹಾಗೂ ಜಿಯಾಲಜಿ ವಿಭಾಗದ ಅದೇ ಹುದ್ದೆಗೆ ಏಳು ಅಭ್ಯರ್ಥಿಗಳು ಅರ್ಜಿ ಹಾಕಿದ್ದರು. ಆದರೆ, ಅವರು ಯುಜಿಸಿ ಮಾನದಂಡಗಳ ಪ್ರಕಾರ ಅನರ್ಹರಾಗಿದ್ದ ಕಾರಣ ಅವರೆಲ್ಲರನ್ನೂ ತಿರಸ್ಕರಿಸಲಾಯಿತು. ಆ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನೇ ಮುಂದುವರಿಸಲಿಲ್ಲ. ಲಿಂಗ್ವೆಸ್ಟಿಕ್ಸ್ ವಿಭಾಗದಲ್ಲಿ ಅರ್ಜಿ ಹಾಕಿದ 12 ಅಭ್ಯರ್ಥಿಗಳಲ್ಲಿ 10 ಅಭ್ಯರ್ಥಿಗಳನ್ನು ತಿರಸ್ಕರಿಸಿ ಅರ್ಹರಾದ ಕೇವಲ ಇಬ್ಬರನ್ನು ಮಾತ್ರ ನೇಮಕಾತಿಯ ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಯಿತು. ಫಿಸಿಕ್ಸ್ ವಿಭಾಗದಲ್ಲಿ ಅರ್ಜಿ ಹಾಕಿದ 9 ಅಭ್ಯರ್ಥಿಗಳ ಪೈಕಿ ಐವರನ್ನು ತಿರಸ್ಕರಿಸಿ ನಾಲ್ವರನ್ನು ಮುಂದಿನ ಹಂತದ ಪ್ರಕ್ರಿಯೆಗೆ ಆಯ್ಕೆ ಮಾಡಲಾಯಿತು. ತಿರಸ್ಕೃತಗೊಂಡ ಅಭ್ಯರ್ಥಿಗಳನ್ನು ಯಾಕೆ ತಿರಸ್ಕರಿಸಲಾಯಿತು ಎಂಬುದನ್ನೂ ಕೂಡ ಪರಿಶೀಲನಾ ಸಮಿತಿಗಳು ಸ್ಪಷ್ಟವಾಗಿ ಕಾರಣ ಕೊಟ್ಟು “Not Eligible”’ ಎಂದು ಸ್ಪಷ್ಟವಾಗಿ ನಮೂದಿಸಿವೆ.

ಆದರೆ ‘ಮಹೇಶ್ವರಯ್ಯನವರ ಅನರ್ಹ ಅಭ್ಯರ್ಥಿಗಳು’ ಅರ್ಜಿ ಹಾಕಿದ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಲೈಫ್ ಸೈನ್ಸಸ್, ಹಿಸ್ಟರಿ ಅಂಡ್ ಆರ್ಕಿಯಾಲಾಜಿ, ಟೂರಿಸಂ ಅಂಡ್ ಹೊಟೇಲ್ ಮ್ಯಾನೇಜ್ಮೆಂಟ್, ಎಜ್ಯೂಕೇಶನ್, ಕಾಮರ್ಸ್, ಇಕನಾಮಿಕ್ಸ್ ಸ್ಟಡೀಸ್ ಅಂಡ್ ಪ್ಲಾನಿಂಗ್ ಮತ್ತು ಬ್ಯುಸಿನೆಸ್ ಸ್ಟಡೀಸ್ ವಿಭಾಗಗಳಲ್ಲಿ ಪರಿಶೀಲನೆ ನಡೆಸಿದವರು ಮಹೇಶ್ವರಯ್ಯನವರ ಅಣತಿಯ ಮೇರೆಗೆ ಯುಜಿಸಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಅನರ್ಹ ಅಭ್ಯರ್ಥಿಗಳನ್ನೂ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗೆ ಆಯ್ಕೆ ಮಾಡಿದ್ದಾರೆ. ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆ ಎಂದರೆ ಸಂದರ್ಶನ. ಅಲ್ಲಿ ಮಹೇಶ್ವರಯ್ಯನವರೇ ಪ್ರಧಾನ ಸಂದರ್ಶಕರಾಗಿ ಕುಳಿತಿರುತ್ತಾರೆ!

ಈ ರೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡುವಾಗ ಪರಿಶೀಲನಾ ಸಮಿತಿಗಳು ಬಹಳ ಜಾಣತನದಿಂದ “subject to submission of publication evidence as per UGC norms” ಹಾಗೂ “subject to submission of past service documents…” ಎಂಬ ಷರಾ ಬರೆದಿದ್ದಾರೆ. ಅಂದರೆ, ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಪ್ರಕಟಿಸದ ಅಭ್ಯರ್ಥಿಗಳನ್ನೂ ಮುಂದಿನ ಹಂತಕ್ಕೆ ಆಯ್ಕೆ ಮಾಡಿ “ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರಕಟಣೆಯ ಸಾಕ್ಷಾಧಾರಗಳನ್ನು ಒದಗಿಸುವುದಕ್ಕೆ ಒಳಪಟ್ಟಿದೆ” ಎಂದು ಷರಾ ಬರೆದಿದ್ದಾರೆ. ಅಂತೆಯೇ ಯುಜಿಸಿ ನಿಯಮಾವಳಿಗಳ ಪ್ರಕಾರ ಅಗತ್ಯವಿರುವಷ್ಟು ಬೋಧನಾ ಅನುಭವವಿಲ್ಲದವರನ್ನೂ ಆಯ್ಕೆ ಮಾಡಿ “ಯುಜಿಸಿ ನಿಯಮಾವಳಿಗಳ ಪ್ರಕಾರ ಹಿಂದಿನ ಅನುಭವದ ದಾಖಲೆಗಳನ್ನು ಒದಗಿಸುವುದಕ್ಕೆ ಒಳಪಟ್ಟಿದೆ” ಎಂದು ಷರಾ ಬರೆದಿದ್ದಾರೆ.

ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಜಿಯಾಲಜಿ, ಜಿಯೋಗ್ರಫಿ, ಲಿಂಗ್ವೆಸ್ಟಿಕ್ಸ್ ಮತ್ತು ಫಿಸಿಕ್ಸ್ ವಿಭಾಗಗಳಲ್ಲಿ ಈ ರೀತಿಯಲ್ಲಿ ಷರಾ ಬರೆದು ಷರತ್ತುಗಳನ್ನು ಹಾಕಿ ಅನರ್ಹರನ್ನು ಮುಂದಿನ ಹಂತದ ನೇಮಕಾತಿಗೆ ದೂಡಲಿಲ್ಲ. ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಲೈಫ್ ಸೈನ್ಸಸ್, ಹಿಸ್ಟರಿ ಅಂಡ್ ಆರ್ಕಿಯಾಲಾಜಿ, ಟೂರಿಸಂ ಅಂಡ್ ಹೊಟೇಲ್ ಮ್ಯಾನೇಜ್ಮೆಂಟ್, ಎಜ್ಯೂಕೇಶನ್, ಕಾಮರ್ಸ್, ಇಕನಾಮಿಕ್ಸ್ ಸ್ಟಡೀಸ್ ಅಂಡ್ ಪ್ಲಾನಿಂಗ್ ಮತ್ತು ಬ್ಯುಸಿನೆಸ್ ಸ್ಟಡೀಸ್ ವಿಭಾಗಗಳಲ್ಲಿ ಮಾತ್ರ ಈ ರೀತಿ ಷರಾ ಬರೆದು, ಷರತ್ತು ಹಾಕಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಏಕೆಂದರೆ, ಮುಂದಿನ ಹಂತವಾದ ಸಂದರ್ಶನದಲ್ಲಿ ಮಹೇಶ್ವರಯ್ಯನವರೇ ಇರುತ್ತಾರಾದ್ದರಿಂದ ಅವರು ತಮಗೆ ಬೇಕಾದ ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅನುಕೂಲವಾಗಲಿ ಎಂಬುದಷ್ಟೇ ಉದ್ದೇಶವಲ್ಲದೇ ಮತ್ತೇನಿಲ್ಲ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವಿದೆ. ಪರಿಶೀಲನಾ ಸಮಿತಿಗಳಲ್ಲಿ ತಜ್ಞರು ಇರುತ್ತಾರೆ. ಉದಾಹರಣೆಗೆ ಫಿಜಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ಪ್ರಧ್ಯಾಪಕ ಹುದ್ದೆಗಳಿಗೆ ಬಂದ ಅರ್ಜಿಗಳನ್ನು ಆ ವಿಭಾಗದ ಮುಖ್ಯಸ್ಥರು ಮತ್ತು ಅದೇ ವಿಷಯದಲ್ಲಿ ಪರಿಣಿತರಾಗಿರುವ ತಜ್ಞರು ಇರುವ ಪರಿಶೀಲನಾ ಸಮಿತಿಯು ಪರಿಶೀಲನೆ ನಡೆಸುತ್ತದೆ. ಈ ಹಂತದಲ್ಲೇ ಅಭ್ಯರ್ಥಿಯೊಬ್ಬ ಅರ್ಹನೋ ಅಥವಾ ಅನರ್ಹನೋ ಎಂಬುದನ್ನು ಈ ತಜ್ಞರ ಸಮಿತಿ ತೀರ್ಮಾನಿಸಬೇಕಾಗುತ್ತದೆ. ಆದರೆ, ಒಂದಿಷ್ಟು ವಿಭಾಗಗಳ ತಜ್ಞರ ಸಮಿತಿಗಳು ಆ ಕೆಲಸವನ್ನು ಚೆನ್ನಾಗಿ ಮಾಡಿವೆ ಕೂಡ. ಆದರೆ, ಎಲ್ಲೆಲ್ಲಿ ಮಹೇಶ್ವರಯ್ಯನವರ ಅನರ್ಹ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೋ ಅಲ್ಲಲ್ಲೆಲ್ಲಾ ಈ ತಜ್ಞರ ಸಮಿತಿಗಳು ಅನರ್ಹರನ್ನೂ ಮುಂದಿನ ಹಂತಕ್ಕೆ ಕಳಿಸಿ “ಅಂತಿಮ ತೀರ್ಮಾನ ಸಕ್ಷಮ ಪ್ರಾಧಿಕಾರಕ್ಕೆ ಬಿಟ್ಟಿದ್ದು” ಅಂತ ಷರಾ ಬರೆದಿದ್ದಾರೆ. ಮೊದಲಿಗೆ ಅನರ್ಹರನ್ನು ಇವರು ಯಾಕೆ ಆಯ್ಕೆ ಮಾಡಿದರು ಎಂಬ ಮೂಲಭೂತ ಪ್ರಶ್ನೆ ಇಲ್ಲಿ ಏಳುತ್ತದೆ. ಇಲ್ಲಿ ಸಕ್ಷಮ ಪ್ರಾಧಿಕಾರ ಎಂದರೆ ಮಹೇಶ್ವರಯ್ಯನವರೇ. ಅವರು ಎಲ್ಲಾ ಮೂವತ್ತು ವಿಭಾಗಗಳಲ್ಲೂ ಪರಿಣಿತರಲ್ಲ. ಅವರು ಒಂದು ವಿಭಾಗದಲ್ಲಿ ಪರಿಣಿತರಿರಬಹುದು. ಎಲ್ಲಾ ವಿಭಾಗಗಳ ಅಭ್ಯರ್ಥಿಗಳ ಅಕೆಡೆಮಿಕ್ ಅರ್ಹತೆಯನ್ನು ಪರಿಶೀಲಿಸುವ ಸಾಮರ್ಥ್ಯ ಅವರಿಗಿರುವುದಿಲ್ಲ. ಈ ಕಾರಣದಿಂದಲೇ ಅಭ್ಯರ್ಥಿಗಳು ತಮ್ಮ ಎದುರು ಸಂದರ್ಶನಕ್ಕೆ ಬರುವ ಮೊದಲು ತಜ್ಞರ ಸಮಿತಿಯನ್ನು ಹಾದು ಬರಬೇಕೆಂಬ ನಿಯಮ ಮಾಡಿರುವುದು. ತಜ್ಞರ ಸಮಿತಿಗಳು ಪರಿಶೀಲನೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕಳಿಸಬೇಕು. ಸಂದರ್ಶಕರು ತಮ್ಮೆದುರು ಬಂದ ಅರ್ಹ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು. ಆದರೆ, ಇಲ್ಲಿ ಏನಾಗಿದೆ ಎಂದರೆ ತಜ್ಞರ ಸಮಿತಿಗಳು ಅನರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಿವೆ. ಈ ಅನರ್ಹ ಅಭ್ಯರ್ಥಿಗಳ ಪೈಕಿ ಮಹೇಶ್ವರಯ್ಯನವರ ಅಭ್ಯರ್ಥಿಯೂ ಒಬ್ಬ ಇರುತ್ತಾನೆ. ಕೊನೆಗೆ ಅವನೇ ಆಯ್ಕೆಯಾಗುತ್ತಾನೆ.

ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಿರುವುದು ಗೊತ್ತಾಗುತ್ತಿದ್ದಂತೆ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರಾದ ಗಣಪತಿ ಸಿನ್ನೂರ್ ಅವರು ವಿಶ್ವವಿದ್ಯಾಲಯದ ಅತ್ಯುನ್ನತ ಆಡಳಿತ ಮಂಡಳಿಯಾದ ಎಕ್ಸಿಕ್ಯೂಟಿವ್ ಕೌನ್ಸಿಲ್ ಗಮನಕ್ಕೆ ತರುತ್ತಾರೆ. ದಿನಾಂಕ 14.11.2019ರರಂದು ನಡೆದ ಎಕ್ಸಿಕ್ಯೂಟಿವ್ ಸಭೆಯು ಈ ವಿಷಯವನ್ನು ಗಂಭೀರವಾಗಿ ಚರ್ಚಿಸಿ “16.09.2019ರ ತಾರೀಖಿನಂದು ಯುಜಿಸಿ ಬರೆದ ಪತ್ರ ಸಂಖ್ಯೆ ಈ.1-1/2018 F.1-1/2018 (Journal/CARE) 2019ರ ಪ್ಯಾರಾ ಸಂಖ್ಯೆ 2ರಲ್ಲಿ ಯುಜಿಸಿ ಕೂಡ ಸಲಹೆ ನೀಡಿದಂತೆ ಈ ವಿಷಯವನ್ನು ಗುಣಮಟ್ಟದ ಆಧಾರದಲ್ಲಿ ಪರಿಗಣಿಸಬೇಕು” ಎಂಬ ತೀರ್ಮಾನ ತೆಗೆದುಕೊಳ್ಳುತ್ತದೆ.

ಈಗಾಗಲೇ ವಿವರಿಸಿರುವಂತೆ ಪತ್ರ ಸಂಖ್ಯೆ F.1-1/2018 (Journal/CARE) 2019ರಲ್ಲಿ ಯುಜಿಸಿ ಎರಡು ಪ್ಯಾರಾಗಳಲ್ಲಿ ಎರಡು ಮುಖ್ಯ ಅಂಶಗಳನ್ನು ಹೇಳಿದೆ. ಒಂದನೇ ಪ್ಯಾರಾದಲ್ಲಿ ಅಲ್ಲಿಯ ತನಕ ಅಸ್ತಿತ್ವದಲ್ಲಿರುವ ಯುಜಿಸಿ ಮಾನ್ಯತೆ ಹೊಂದಿರುವ ಪತ್ರಿಕೆ/ ನಿಯತಕಾಲಿಕೆಗಳ ಪಟ್ಟಿಯ ಬದಲಿಗೆ ಪರಿಷ್ಕೃತ ಹೊಸ ಪಟ್ಟಿ ಅಸ್ತಿತ್ವಕ್ಕೆ (UGC-CARE Reference List of Quality Journals ?UGC-CARE List) ಬಂದಿದ್ದು ಇನ್ನು ಮುಂದೆ ಎಲ್ಲಾ ಉಪಕುಲಪತಿಗಳು, ಆಯ್ಕೆ ಸಮಿತಿಗಳು, ಪರಿವೀಕ್ಷಣಾ ಸಮಿತಿಗಳು, ಸಂಶೋಧನಾ ಮೇಲುಸ್ತುವಾರಿ ನಡೆಸುವವರು ಮತ್ತು ಎಲ್ಲಾ ರೀತಿಯ ಅಕೆಡೆಮಿಕ್ ಮತ್ತು ಸಾಮರ್ಥ್ಯ ಮೌಲ್ಯಮಾಪನಕ್ಕೆ ಈ ಹೊಸ ಪಟ್ಟಿಯನ್ನೇ ಪರಿಗಣಿಸಬೇಕು ಎಂದೂ ಹೇಳಿದೆ.

ಯುಜಿಸಿ ಪತ್ರ

ಮುಂದುವರಿದು, ಅದೇ ಪತ್ರದ ಎರಡನೇ ಪ್ಯಾರಾದಲ್ಲಿ ಅದು “ಯಾವುದೇ ರೀತಿಯ ಅಕೆಡೆಮಿಕ್/ ಸಾಮರ್ಥ್ಯ ಮೌಲ್ಯಮಾಪನ ಮತ್ತು ಅಂದಾಜು ಪ್ರಕ್ರಿಯೆಯಲ್ಲಿ ಭಾಗಿಯಾಗುವ ಎಲ್ಲಾ ಉಪಕುಲಪತಿಗಳು, ಆಯ್ಕೆ ಸಮಿತಿಗಳು, ಪರಿವೀಕ್ಷಣಾ ಸಮಿತಿಗಳು ನೇಮಕಾತಿ ಮಾಡುವಾಗ, ಬಡ್ತಿ ನೀಡುವಾಗ, ಕ್ರೆಡಿಟ್ ನೀಡುವಾಗ, ಸಂಶೋಧನಾ ಪದವಿಗಳನ್ನು ನೀಡುವಾಗ ತಮ್ಮ ತೀರ್ಮಾನಗಳು [ಅಭ್ಯರ್ಥಿಗಳ] ಪ್ರಕಟಗೊಂಡ ಕೃತಿಗಳ ಗುಣಮಟ್ಟವನ್ನು ಆಧರಿಸಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕೆ ವಿನಃ ಎಷ್ಟು ಕೃತಿಗಳನ್ನು ಪ್ರಕಟಿಸಿದ್ದಾನೆ ಎಂಬ ಸಂಖ್ಯೆಯ ಮೇಲಾಗಲೀ ಅಥವಾ ತಜ್ಞರಿಂದ ಪರಾಮರ್ಶನಕ್ಕೊಳಪಟ್ಟಿದೆ ಎಂಬ ಅಂಶದ ಮೇಲಾಗಲೀ ಅಥವಾ ಯುಜಿಸಿಯ ಹಳೆಯ ಮಾನ್ಯತಾ ಪಟ್ಟಿಯಲ್ಲಿ ಅವರ ಕೃತಿ ಪ್ರಕಟಣೆಯಾಗಿದೆ ಎಂಬ ಅಂಶದ ಮೇಲಾಗಲೀ ಆಧರಿಸಿರಬಾರದು” ಎಂದು ಸ್ಪಷ್ಟವಾಗಿ ಹೇಳಿದೆ. (The Vice Chancellors, Selection Committees, Screening Committees, research Supervisors and all/ any expert(s) involved in academic/ performance evaluation and assessment are hereby advised to ensure that their decisions in the case of selections, promotions, credit-allotment, award of research degrees etc must be based on the quality of published work rather than just numbers or a mere presence in peer reviewed or in old UGC Approved List of Journals which is available for reference on the UGC website ಒತ್ತು ನಮ್ಮದು)

ದಿನಾಂಕ 14.11.2019ರರಂದು ನಡೆದ ಎಕ್ಸಿಕ್ಯೂಟಿವ್ ಕೌನ್ಸಿಲ್ ಸಭೆಯು ಯುಜಿಸಿಯ ಇದೇ ಪತ್ರದ, ಈ ಎರಡನೇ ಪ್ಯಾರವನ್ನೇ ನಿರ್ದಿಷ್ಟವಾಗಿ ಉದ್ಧರಿಸಿ ಅದರ ಪ್ರಕಾರ ಗುಣಮಟ್ಟದ ಆಧಾರದಲ್ಲಿ ಪರಿಗಣಿಸಬೇಕು ಎಂದು ತೀರ್ಮಾನ ಮಾಡಿದರೂ ವಿಶ್ವವಿದ್ಯಾಲಯದ ಈ ಅತ್ಯುನ್ನತ ಆಡಳಿತ ಮಂಡಳಿಯ ತೀರ್ಮಾನವನ್ನೂ, ಯುಜಿಸಿಯ ನಿಯಮಾವಳಿಗಳನ್ನೂ ಹಾಗೂ ವಿಶ್ವವಿದ್ಯಾಲಯ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನೂ ಗಾಳಿಗೆ ತೂರಿ ಅನರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ.

ಈಗ ಕೆಲವು ಉದಾಹರಣೆಗಳನ್ನು ನೋಡೋಣ.
ಅರ್ಜಿ ಸಂಖ್ಯೆ 5158110SECU ಹೊಂದಿರುವ ಅಭ್ಯರ್ಥಿಯೊಬ್ಬ ಇಕನಾಮಿಕ್ಸ್ ಸ್ಟಡೀಸ್ ಅಂಡ್ ಪ್ಲಾನಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದರು. ಆದರೆ ಅವರು ಯುಜಿಸಿಯ ಹೊಸ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಪ್ರಕಟಿಸಿರಲಿಲ್ಲ. ಹಾಗಾಗಿ ಅವರನ್ನು Not Eligible ಎಂಬ ಷರಾ ಬರೆಯುವ ಮೂಲಕ ತಿರಸ್ಕರಿಸಲಾಯಿತು. ಅರ್ಜಿ ಸಂಖ್ಯೆ 5135710SECU ಹೊಂದಿರುವ ಇನ್ನೊಬ್ಬ ಅಭ್ಯರ್ಥಿಯೂ ಅದೇ ವಿಭಾಗದ ಅದೇ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಯುಜಿಸಿಯ ಹೊಸ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಅವರೂ ಪ್ರಕಟಿಸಿರಲಿಲ್ಲ. ಆದರೆ, ಅವರನ್ನು Eligible ಎಂದು ಷರಾ ಬರೆಯುವ ಮೂಲಕ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಈ ಎರಡೂ ಅಭ್ಯರ್ಥಿಗಳ ವಿವರಗಳು 10.12.2019ರಂದು ಪ್ರಕಟವಾದ ಅರ್ಹತಾ ಪಟ್ಟಿಯಲ್ಲಿ ಲಭ್ಯವಿದ್ದು ಯಾರು ಬೇಕಾದರೂ ಪರಿಶೀಲಿಸಬಹುದು. ಆದರೆ, ಮೊದಲನೆಯ ಅಭ್ಯರ್ಥಿಯು ಈ ಅನ್ಯಾಯವನ್ನು ಪ್ರತಿಭಟಿಸಿದ ಮೇಲೆ ದಿನಾಂಕ 04.02.2020ರಂದು ಪ್ರಕಟಿಸಿದ ಇನ್ನೊಂದು ಪರಿಷ್ಕೃತ ಅರ್ಹತಾ ಪಟ್ಟಿಯಲ್ಲಿ ಅವರನ್ನೂ ಸೇರಿಸಲಾಯಿತು! ದಿನಾಂಕ 04.12.2019ರಂದು ಇವರ ಅರ್ಜಿಯನ್ನು ಪರಿಶೀಲನೆ ಮಾಡಿದ ತಜ್ಞ ಸಮಿತಿಯು ಇವರನ್ನು ಏಕೆ ತಿರಸ್ಕರಿಸಲಾಗಿದೆ ಎಂಬುದಕ್ಕೆ ಸ್ಪಷ್ಟ ಕಾರಣಗಳನ್ನು ಕೊಟ್ಟಿದೆ. ಆದರೆ, ಮತ್ತೆ ದಿನಾಂಕ 19.12.2019ರಂದು ಇವರ ಅರ್ಜಿಯನ್ನು ಮರುಪರಿಶೀಲನೆ ಮಾಡಿದ ಸಮಿತಿಯು ಅವರನ್ನು ಆಯ್ಕೆ ಮಾಡಿದ್ದು ಅದಕ್ಕೆ ತನ್ನ ತೀರ್ಮಾನ ಬದಲಾವಣೆಗೆ ಸ್ಪಷ್ಟ ಕಾರಣಗಳನ್ನು ನೀಡಿಲ್ಲ. ಸಾರಾಂಶ ಇಷ್ಟೆ. ಮಹೇಶ್ವರಯ್ಯನವರ ಅಭ್ಯರ್ಥಿಯ ಜೊತೆಗೆ ಈ ಅಭ್ಯರ್ಥಿಯೂ ಸಂದರ್ಶನಕ್ಕೆ ಹೋಗುತ್ತಾರೆ. ಆದರೆ, ಸಂದರ್ಶನದಲ್ಲಿ ಇವರನ್ನು ತಿರಸ್ಕರಿಸಿ ಮಹೇಶ್ವರಯ್ಯನವರ ಅಭ್ಯರ್ಥಿಯೇ ಆಯ್ಕೆಯಾಗುತ್ತಾರೆ. ತಾನು ಪ್ರತಿಭಟಿಸಿದ ಕಾರಣಕ್ಕೆ ಸಂದರ್ಶನಕ್ಕೆ ಆಯ್ಕೆಯಾದೆ ಎಂಬ ತೃಪ್ತಿ ಈ ಅಭ್ಯರ್ಥಿಯಲ್ಲಿ ಈ ಅಭ್ಯರ್ಥಿ ಮನೆಗೆ ಮರಳಬೇಕಾಗುತ್ತದೆ.

ಎರಡನೆಯ ಉದಾಹರಣೆ ನೋಡಿ. 10086110SCHU ಎಂಬ ಅರ್ಜಿ ಸಂಖ್ಯೆ ಹೊಂದಿರುವ ಅಭ್ಯರ್ಥಿಯೊಬ್ಬರು ಕೆಮಿಸ್ಟ್ರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದು ಅವರನ್ನು ದಿನಾಂಕ 23-12-2019 ರಂದು ಪ್ರಕಟವಾದ ಅರ್ಹತಾ ಪಟ್ಟಿಯಲ್ಲಿ (ಕ್ರ.ಸಂ.39) ಅವರನ್ನು “subject to the submission of publication evidence as per UGC norms” ಎಂಬ ಷರಾದೊಂದಿಗೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಅಂದರೆ ಅವರೂ ಕೂಡ ಯುಜಿಸಿಯ ಹೊಸ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಪ್ರಕಟಿಸಿಲ್ಲ; ಹಾಗಾಗಿ ಅವುಗಳ ವಿವರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿಲ್ಲ. ಆದರೆ ಅವರನ್ನು ಯುಜಿಸಿ ನಿಯಮಾವಳಿಗಳ ಪ್ರಕಾರ ತಿರಸ್ಕರಿಸುವುದನ್ನು ಬಿಟ್ಟು “ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರಕಟವಾದ ಲೇಖನಗಳ ದಾಖಲೆಗಳನ್ನು ಒದಗಿಸುವ ಷರತ್ತಿಗೆ ಒಳಪಟ್ಟು” ಎಂಬ ನಿಬಂಧನೆಯ ಮೂಲಕ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಅದೇ ಅರ್ಹತಾ ಪಟ್ಟಿಯ ಕ್ರ.ಸಂ. 13ರಲ್ಲಿರುವ ಅರ್ಜಿ ಸಂಖ್ಯೆ 5076610SCSE ಹೊಂದಿರುವ ಇನ್ನೊಬ್ಬ ಅಭ್ಯರ್ಥಿಯು ಕಂಪ್ಯೂಟರ್ ಸೈನ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದು ಅವರನ್ನು ಹೊಸ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಪ್ರಕಟಿಸಿಲ್ಲ ಎಂಬ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ. ಅಂದರೆ, ಹೊಸ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಇಬ್ಬರೂ ಪ್ರಕಟಿಸಿಲ್ಲವಾದ್ದರಿಂದ ಯುಜಿಸಿ ನಿಯಮಾವಳಿಗಳ ಪ್ರಕಾರ ಇಬ್ಬರೂ ಅನರ್ಹರೇ. ಆದರೆ, ಹೊಸ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಅಗತ್ಯವಿದ್ದಷ್ಟು ಪ್ರಬಂಧಗಳನ್ನು ಪ್ರಕಟಿಸಿದ ದಾಖಲೆ ಒದಗಿಸುವ ಷರತ್ತಿನೊಂದಿಗೆ ಆಯ್ಕೆ ಮಾಡಿದರೆ ಇನ್ನೊಬ್ಬರನ್ನು ಏಕಾಏಕಿ ತಿರಸ್ಕರಿಸಲಾಗಿದೆ.

ವಿಶ್ವವಿದ್ಯಾಲಯವು ದಿನಾಂಕ 25.09.2019ರಂದು ಹೊರಡಿಸಿದ ನೇಮಕಾತಿ ಅಧಿಸೂಚನೆಯ (ಅಧಿಸೂಚನೆ ಸಂಖ್ಯೆ 26/2019). ಪ್ರಕಾರ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಎಂಟು ವರ್ಷ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಬೋಧನಾ ಅನುಭವ ಹೊಂದಿರಬೇಕು ಎಂಬ ಮಾನದಂಡ ವಿಧಿಸಲಾಗಿದೆ. ಆದರೆ ಈ ನಿಯಮಾವಳಿಯನ್ನೂ ಗಾಳಿಗೆ ತೂರಿರುವ ಪ್ರಸಂಗಗಳು ಅಲ್ಲಲ್ಲಿ ಕಂಡುಬರುತ್ತವೆ.

ಉದಾಹರಣೆಗೆ, ಅರ್ಜಿ ಸಂಖ್ಯೆ 5186610SGEU ಹೊಂದಿರುವ ಅಭ್ಯರ್ಥಿಯೊಬ್ಬರು ಜಿಯಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದು ಅವರಿಗೆ ಅಗತ್ಯವಿದ್ದಷ್ಟು ಬೋಧನಾ ಅನುಭವ ಇಲ್ಲ ಎಂಬ ಕಾರಣಕ್ಕಾಗಿ ಪರಿಶೀಲನಾ ಸಮಿತಿಯು ಅವರನ್ನು ತಿರಸ್ಕರಿಸಿದೆ. ಆದರೆ, ಇಕನಾಮಿಕ್ಸ್ ಸ್ಟಡೀಸ್ ಅಂಡ್ ಪ್ಲಾನಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ 5105010SECU ಅರ್ಜಿ ಸಂಖ್ಯೆಯ ಅಭ್ಯರ್ಥಿಗೂ ಕೂಡ ಅಗತ್ಯವಿದ್ದಷ್ಟು ಬೋಧನಾ ಅನುಭವ ಇಲ್ಲದಿದ್ದರೂ ಅವರನ್ನು ಪರಿಶೀಲನಾ ಸಮಿತಿಯು “ಹಿಂದಿನ ಸೇವಾನುಭವ ಕುರಿತ ದಾಖಲೆಗಳನ್ನು ಒದಗಿಸುವ ಷರತ್ತಿನೊಂದಿಗೆ” ಆಯ್ಕೆ ಮಾಡಿದೆ. ಸಾರಾಂಶದಲ್ಲಿ ಹೇಳುವುದಾದರೆ, ಈ ಎರಡೂ ಅಭ್ಯರ್ಥಿಗಳಿಗೆ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಆಯ್ಕೆಯಾಗುವುದಕ್ಕೆ ಅಗತ್ಯವಿದ್ದಷ್ಟು ಬೋಧನಾ ಅನುಭವ ಇಲ್ಲ. ಆದರೂ ಅವರು ಅರ್ಜಿ ಹಾಕಿದ್ದಾರೆ. ಸಂಬಂಧಪಟ್ಟ ಪರಿಶೀಲನಾ ಸಮಿತಿಗಳು ಅವರನ್ನು ತಿರಸ್ಕರಿಸಬೇಕಾಗಿತ್ತು. ಆದರೆ, ಯುಜಿಸಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಿದ ಒಂದು ವಿಭಾಗದ ಪರಿಶೀಲನಾ ಸಮಿತಿಯು ತನ್ನೆದುರು ಇದ್ದ ಅರ್ಜಿಯನ್ನು ತಿರಸ್ಕರಿಸಿದರೆ ಮಹೇಶ್ವರಯ್ಯನವರ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಿದ ಇನ್ನೊಂದು ಸಮಿತಿಯು ಅನರ್ಹ ಅಭ್ಯರ್ಥಿಯನ್ನು ಅರ್ಹ ಅಭ್ಯರ್ಥಿಯೆಂದು ಘೋಷಿಸಿ ಸಂದರ್ಶನಕ್ಕೆ ಆಯ್ಕೆ ಮಾಡಿದೆ.

ಇನ್ನೊಂದು ಉದಾಹರಣೆ ನೋಡಿ. 5702510SLIS ಎಂಬ ಅರ್ಜಿ ಸಂಖ್ಯೆಯನ್ನು ಹೊಂದಿರುವ ಅಭ್ಯರ್ಥಿಯು ಲೈಫ್ ಸೈನ್ಸಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದು ಅವರಿಗೆ ಅಗತ್ಯವಿದ್ದಷ್ಟು ಬೋಧನಾ ಅನುಭವ ಇಲ್ಲ ಎಂಬ ಕಾರಣಕ್ಕಾಗಿ ಪರಿಶೀಲನಾ ಸಮಿತಿಯು ಅವರನ್ನು ತಿರಸ್ಕರಿಸಿದೆ. ಆದರೆ, ಅದೇ ವಿಭಾಗದ ಅದೇ ಹುದ್ದೆಗೆ ಅರ್ಜಿ ಹಾಕಿದ 5146910SLIS ಅರ್ಜಿ ಸಂಖ್ಯೆಯ ಅಭ್ಯರ್ಥಿಗೂ ಕೂಡ ಅಗತ್ಯವಿದ್ದಷ್ಟು ಬೋಧನಾ ಅನುಭವ ಇಲ್ಲದಿದ್ದರೂ ಅವರನ್ನು “ಸೇವಾನುಭ ದಾಖಲೆಗಳನ್ನು ಸಲ್ಲಿಸುವ ನಿಬಂಧನೆಗೆ ಒಳಪಟ್ಟು” ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಇಲ್ಲೂ ಕೂಡ ಎರಡೂ ಅಭ್ಯರ್ಥಿಗಳಿಗೂ ಅಸೋಸಿಯೇಟ್ ಪ್ರೊಫೆಸರ್ ಆಗುವುದಕ್ಕೆ ಅಗತ್ಯವಿದ್ದಷ್ಟು ಸೇವಾನುಭವ ಇಲ್ಲ. ಹಾಗಾಗಿ, ಈ ಅರ್ಜಿಗಳನ್ನು ಪರಿಶೀಲನೆ ಮಾಡಿದ ತಜ್ಞರ ಸಮಿತಿಯು ಇಬ್ಬರನ್ನೂ ತಿರಸ್ಕರಿಸಬೇಕಿತ್ತು. ಆದರೆ, ಅದು ಮಹೇಶ್ವರಯ್ಯನವರ ನಿಯಮವನ್ನು ಪಾಲಿಸುವುದಕ್ಕೋಸ್ಕರ ಯುಜಿಸಿಯ ನಿಯಮವನ್ನು ಗಾಳಿಗೆ ತೂರಿ ಇಬ್ಬರು ಅನರ್ಹ ಅಭ್ಯರ್ಥಿಗಳಲ್ಲಿ ಒಬ್ಬ ಅನರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಇನ್ನೊಬ್ಬ ಅನರ್ಹ ಅಭ್ಯರ್ಥಿಯನ್ನು ತಿರಸ್ಕರಿಸಿದೆ.

ಮತ್ತೊಂದು ಉದಾಹರಣೆಯನ್ನು ನೋಡಿ. 5680410SECE ಮತ್ತು 5037110SECE ಅರ್ಜಿ ಸಂಖ್ಯೆಗಳನ್ನು ಹೊಂದಿರುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ಅರ್ಜಿ ಹಾಕಿದ್ದರು. ಆದರೆ, ಅವರಿಗೆ ಅಗತ್ಯವಿದ್ದಷ್ಟು ಬೋಧನಾ ಅನುಭವ ಇಲ್ಲದಿದ್ದುದರಿಂದ ಪರಿಶೀಲನಾ ಸಮಿತಿಯು ಅವರನ್ನು “ಯುಜಿಸಿ ನಿಯಮಾವಳಿಗಳ ಪ್ರಕಾರ ಸೇವಾನುಭವದ ದಾಖಲೆಗಳು ಇಲ್ಲ” ಎಂಬ ಕಾರಣ ನೀಡಿ ತಿರಸ್ಕರಿಸಿದೆ. ಆದರೆ, ಅದೇ ವಿಭಾಗದ ಅದೇ ಹುದ್ದೆಗೆ ಅರ್ಜಿ ಹಾಕಿರುವ5219110SECE ಎಂಬ ಅರ್ಜಿ ಸಂಖ್ಯೆಯನ್ನು ಅಭ್ಯರ್ಥಿಗೂ ಕೂಡ ಯುಜಿಸಿ ನಿಯಮಾವಳಿಗಳ ಪ್ರಕಾರ ಸೇವಾನುಭವದ ದಾಖಲೆಗಳು ಇಲ್ಲದಿದ್ದರೂ ಅವರನ್ನು ಅದೇ ಪರಿಶೀಲನಾ ಸಮಿತಿಯು “ಯುಜಿಸಿ ನಿಯಮಾವಳಿಗಳ ಪ್ರಕಾರ ಸೇವಾನುಭವದ ದಾಖಲೆಗಳನ್ನು ಸಲ್ಲಿಸುವ ಷರತ್ತುಗಳೊಂದಿಗೆ” ಆಯ್ಕೆ ಮಾಡಿದೆ. ಇಲ್ಲಿಯೂ ಕೂಡ ಮೂವರೂ ಅಭ್ಯರ್ಥಿಗಳು ಯುಜಿಸಿ ನಿಯಮವಾಳಿಗಳ ಪ್ರಕಾರ ಅನರ್ಹರೇ. ಇವರ ಅರ್ಜಿಗಳನ್ನು ಪರಿಶೀಲನೆ ಮಾಡಿದ ತಜ್ಞರ ಸಮಿತಿಯೂ ಒಂದೇ. ಆದರೂ ಮೂವರು ಅನರ್ಹರಲ್ಲಿ ಒಬ್ಬ ಅನರ್ಹರನ್ನು ಆಯ್ಕೆ ಮಾಡಿ ಇಬ್ಬರು ಅನರ್ಹರನ್ನು ತಿರಸ್ಕರಿಸಿದೆ.

ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಯುಜಿಸಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಿದ ಹಲವು ವಿಭಾಗಗಳ ಪರಿಶೀಲನಾ ಸಮಿತಿಗಳು ಅಗತ್ಯವಿದ್ದಷ್ಟು ಸಂಖ್ಯೆಯ ಸಂಶೋಧನಾ ಪ್ರಬಂಧಗಳನ್ನು ಪ್ರಕಟಣೆ ಮಾಡಿಲ್ಲದ ಅಭ್ಯರ್ಥಿಗಳನ್ನು, ಅಗತ್ಯವಿದ್ದಷ್ಟು ಬೋಧನಾ ಅನುಭವ ಇಲ್ಲದ ಅಭ್ಯರ್ಥಿಗಳನ್ನು ನೇರವಾಗಿ ಸಕಾರಣ ಕೊಟ್ಟು ತಿರಸ್ಕರಿಸಿವೆ. ಇವು ಮಹೇಶ್ವರಯ್ಯನವರ ಹಿಡಿತಕ್ಕೆ ಸಿಕ್ಕದಿರುವ ವಿಭಾಗಗಳು. ಆದರೆ, ಮಹೇಶ್ವರಯ್ಯನವರ ಅಡಿಯಾಳಿನಂತೆ ಕಾರ್ಯನಿರ್ವಹಿಸಿದ ಹಲವು ವಿಭಾಗಗಳ ಪರಿಶೀಲನಾ ಸಮಿತಿಗಳು ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ ಮಹೇಶ್ವರಯ್ಯನವರ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಿವೆ. ಮಹೇಶ್ವರಯ್ಯನವರ ಅನರ್ಹ ಅಭ್ಯರ್ಥಿಗಳನ್ನು ಹೀಗೆ ಮಾಡುವಾಗ “ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರಬಂಧ ಪ್ರಕಟಣೆಯ ಸಾಕ್ಷ್ಯಗಳನ್ನು ಒದಗಿಸುವ ಷರತ್ತಿಗೆ ಒಳಪಟ್ಟು, ಯುಜಿಸಿ ನಿಯಮಾವಳಿಗಳ ಪ್ರಕಾರ ಸೇವಾನುಭವದ ದಾಖಲೆಗಳು ಒದಗಿಸುವ ಷರತ್ತಿಗೆ ಒಳಪಟ್ಟು” ಹಾಗೂ “ಅಂತಿಮ ಅರ್ಹತೆಯುನ್ನು ಸಕ್ಷಮ ಪ್ರಾಧಿಕಾರವು ನಿರ್ಧರಿಸುತ್ತದೆ” ಎಂಬಂತಹ ಷರತ್ತುಗಳನ್ನು ಬಹಳ ಕುಟಿಲತೆಯಿಂದ ಹಾಕಿವೆ. ಇಲ್ಲಿ ಸಕ್ಷಮ ಪ್ರಾಧಿಕಾರ ಎಂದರೆ ಮಹೇಶ್ವರಯ್ಯನವರೇ. ಸಂದರ್ಶನದಲ್ಲೂ ಅವರೇ ಇರುತ್ತಾರೆ, ಅಂತಿಮ ತೀರ್ಮಾನವನ್ನೂ ಅವರೇ ಮಾಡುತ್ತಾರೆ. ಅವರಿಗೆ ಬೇಕಾದ ಅಭ್ಯರ್ಥಿಗಳು ಅನರ್ಹರಾಗಿದ್ದರೂ ಸರಿ ಅವರನ್ನು ಪ್ರಾಥಮಿಕ ಪರಿಶೀಲನಾ ಹಂತದಲ್ಲಿ ತೇರ್ಗಡೆ ಮಾಡಿ ತಮ್ಮ ಬಳಿ ಸಂದರ್ಶನಕ್ಕೆ ಕಳಿಸುವ ಜವಾಬ್ದಾರಿಯನ್ನು ಅವರು ಪರಿಶೀಲನಾ ಸಮಿತಿಗೆ ಒಪ್ಪಿಸಿದ್ದಾರೆ. ಯುಜಿಸಿ ನಿಯಮಾವಳಿಗಳನ್ನು, ವಿಶ್ವವಿದ್ಯಾಲಯವೇ ಹೊರಡಿಸಿದ ನೇಮಕಾತಿ ಅಧಿಸೂಚನೆಯನ್ನು ಹಾಗೂ ವಿಶ್ವವಿದ್ಯಾಲಯದ ಪರಮೋಚ್ಛ ಆಡಳಿತ ಮಂಡಳಿಯಾದ ಎಕ್ಸಿಕ್ಯೂಟಿವ್ ಕೌನ್ಸಿಲ್ ನಿರ್ಣಯವನ್ನೂ ಗಾಳಿಗೆ ತೂರಿ ಈ ಸಮಿತಿಗಳು ಮಹೇಶ್ವರಯ್ಯನವರ ಆಜ್ಞೆಯನ್ನು ಪರಿಪಾಲಿಸಿವೆ. ಅಂತಹ ಅಂತಹ ಕಾನೂನುಬಾಹಿರ ಕೃತ್ಯ ಎಸಗುವುದಕ್ಕೆ ಈ ಸಮಿತಿಗಳು ಮಹೇಶ್ವರಯ್ಯನವರಿಂದ ಕಪ್ಪಕಾಣಿಕೆ ಪಡೆದಿವೆಯೇ ಅಥವಾ ಒತ್ತಡಕ್ಕೆ ಸಿಲುಕಿ ಮಾಡಿದ್ದಾರೆಯೇ ಎಂಬುದು ತನಿಖೆ ನಡೆಸಿದರೆ ಮಾತ್ರ ಬಯಲಾಗುತ್ತದೆ.

ಈ ರೀತಿ ಕಾನೂನುಬಾಹಿರವಾಗಿ, ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಅಂತಿಮ ಸಂದರ್ಶನ ಸುತ್ತಿಗೆ ಆಯ್ಕೆಯಾದ ಅನರ್ಹ ಅಭ್ಯರ್ಥಿಗಳ ನೂರಾರು ಉದಾಹರಣೆಗಳು ನಮ್ಮ ಬಳಿ ದಾಖಲೆ ಸಮೇತವಾಗಿ ಇವೆ. ಇಲ್ಲಿ ಕೆಲವು ಉದಾಹರಣೆಗಳನ್ನು ಮಾತ್ರ ಕೊಟ್ಟಿದ್ದೇವೆ. ಮಹೇಶ್ವರಯ್ಯನವರು ತಮಗೆ ಬೇಕಾದ ಅನರ್ಹ ಅಭ್ಯರ್ಥಿಗಳನ್ನು ಹಾಗೂ ಬಿಜೆಪಿ ಪಕ್ಷದ ಶಿಫಾರಸ್ಸು ಇರುವ ಅಭ್ಯರ್ಥಿಗಳನ್ನು ಆಯಕಟ್ಟಿನ ಜಾಗಗಳಿಗೆ ಆಯ್ಕೆ ಮಾಡುವುದಕ್ಕೆ ಅಸ್ತಿತ್ವದಲ್ಲಿರುವ ಯುಜಿಸಿಯ ನಿಯಮಾವಳಿಗಳನ್ನು, ತಾವೇ ಹೊರಡಿಸಿದ ನೇಮಕಾತಿ ಅಧಿಸೂಚನೆಯನ್ನು ಹಾಗೂ ವಿಶ್ವವಿದ್ಯಾಲಯದ ಪರಮೋಚ್ಛ ಆಡಳಿತ ಮಂಡಳಿಯಾದ ಎಕ್ಸಿಕ್ಯೂಟಿವ್ ಕೌನ್ಸಿಲ್‍ನ ನಿರ್ಣಯವನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅನರ್ಹ ಅಭ್ಯರ್ಥಿಗಳನ್ನು ಲಕ್ಷಾಂತರ ಸಂಬಳ ನೀಡುವ ಉನ್ನತ ಬೋಧನಾ ಹುದ್ದೆಗಳಿಗೆ ಆಯ್ಕೆ ಮಾಡುವುದಕ್ಕೆ ಮಹೇಶ್ವರಯ್ಯನವರು ಒಬ್ಬೊಬ್ಬ ಅಭ್ಯರ್ಥಿಯಿಂದ 30-40 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆಂಬ ಸುದ್ದಿ ಇಡೀ ವಲಯದಲ್ಲಿ ಹರಿದಾಡುತ್ತಿದೆ. ಮೇಲ್ನೋಟಕ್ಕೆ ಕಾಣುವ ಈ ನೇಮಕಾತಿ ಅವ್ಯವಹಾರಗಳನ್ನು ನೋಡಿದರೆ ಅದು ಕೇವಲ ಗಾಳಿಸುದ್ದಿ ಮಾತ್ರ ಆಗಿರಲಾರದು ಎಂಬ ಅನುಮಾನ ಇನ್ನಷ್ಟು ದಟ್ಟವಾಗುತ್ತಾ ಹೋಗುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಈ ನೇಮಕಾತಿ ಹಗರಣದ ಗಂಭೀರತೆಯನ್ನು ಪರಿಗಣಿಸಿದ ಉನ್ನತ ಮಟ್ಟದಲ್ಲಿ ನಿಷ್ಪಕ್ಷಪಾತಿ ತನಿಖೆ ನಡೆಸಿದರೆ ಮಹೇಶ್ವರಯ್ಯನವರ ಅಸಲಿ ಬಂಡವಾಳ ಬಯಲಿಗೆ ಬರುತ್ತದೆ.

ಯುಜಿಸಿ ಮಾನ್ಯತೆ ಪಡೆದಿರುವ ಪತ್ರಿಕೆ/ನಿಯತಕಾಲಿಕೆಗಳಲ್ಲಿ ಅಗತ್ಯವಿರುವಷ್ಟು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರದ ಹಾಗೂ ಅಗತ್ಯವಿರುವಷ್ಟು ಸೇವಾನುಭವ ಇಲ್ಲದ ಸಾವಿರಾರು ಅಭ್ಯರ್ಥಿಗಳು ಯುಜಿಸಿ ನಿಯಮಾವಳಿ ಮತ್ತು ವಿಶ್ವವಿದ್ಯಾಲಯದ ನೇಮಕಾತಿ ಅಧಿಸೂಚನೆಯಲ್ಲಿನ ಅರ್ಹತಾ ಷರತ್ತುಗಳನ್ನು ಗಂಭೀರವಾಗಿ ಪರಿಗಣಿಸಿ ತಾವು ಅನರ್ಹರೆಂದು ತಿಳಿದು ಅರ್ಜಿಗಳನ್ನೇ ಹಾಕಿಲ್ಲ. ಈಗ ನೋಡಿದರೆ ತಮಗಿಂತಲೂ ಕಡಿಮೆ ಸೇವಾನುಭವ ಇರುವ ಹಾಗೂ ತಮಗಿಂತ ಕಡಿಮೆ ಸಂಶೋಧನಾ ಪ್ರಬಂಧಗಳನ್ನು ಯುಜಿಸಿ ಮಾನ್ಯತೆ ಪಡೆದ ಹೊಸ ಪತ್ರಿಕೆ/ ನಿಯತಕಾಲಿಕೆಗಳಲ್ಲಿ ಪ್ರಕಟಿಸಿರುವ, ತಮಗಿಂತಲೂ ಕಡಿಮೆ ಯೋಗ್ಯತೆಯಿರುವ ಮಂದಿ ಈ ಉನ್ನತ ವಿಶ್ವವಿದ್ಯಾಲಯಕ್ಕೆ ಬೋಧಕರಾಗಿ ಆಯ್ಕೆಯಾಗುತ್ತಿದ್ದಾರೆ. ಇದು ಮಹೇಶ್ವರಯ್ಯ ಸೃಷ್ಟಿಸಿದ ದುರಂತವಲ್ಲದೇ ಮತ್ತೇನಲ್ಲ.

ಅರ್ಜಿ ಹಾಕದೇ ಮನೆಯಲ್ಲಿ ಕುಳಿತವರು, ಅರ್ಜಿ ಹಾಕಿದರೂ ತಿರಸ್ಕೃತರಾದವರು ತಮಗಿಂತ ಕಡಿಮೆ ಯೋಗ್ಯತೆಯಿರುವ ಅಭ್ಯರ್ಥಿಗಳು ಆಯ್ಕೆಯಾದರೂ ಬಾಯ್ಮುಚ್ಚಿಕೊಂಡು ಕುಳಿತಿರುವುದಕ್ಕೆ ಮುಖ್ಯ ಕಾರಣ ಎಂದರೆ ತಮಗಾದ ಅನ್ಯಾಯದ ವಿರುದ್ಧ ದನಿಯೆತ್ತಿದರೆ ತಮ್ಮನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸಿ ಮುಂದೆಂದೂ ಮತ್ತೆ ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಆಯ್ಕೆಯಾಗುವ ಅವಕಾಶವನ್ನೇ ಕಿತ್ತುಕೊಳ್ಳಲಾಗುತ್ತದೆ ಎಂಬ ಭಯ. ಆದರೂ ಕೆಲವರು ಇದಕ್ಕೆ ದನಿಯೆತ್ತುವುದಕ್ಕೆ ನಿರ್ಧರಿಸಿದ್ದಾರೆ. ಈಗಾಗಲೇ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದಿರುವ ನೇಮಕಾತಿ ಅವ್ಯವಹಾರಗಳ ಬಗ್ಗೆ ದೂರು ಸಲ್ಲಿಸಿದ್ದಾರೆ. ಮಹೇಶ್ವರಯ್ಯನವರಿಗೂ ಲೀಗಲ್ ನೊಟೀಸ್ ಜಾರಿ ಮಾಡಿದ್ದಾರೆ. ನ್ಯಾಯಾಲಯದ ಮೆಟ್ಟಿಲು ಹತ್ತುವುದಕ್ಕೂ ಸಿದ್ಧವಾಗಿದ್ದಾರೆ.

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೇಂದ್ರ ಸರ್ಕಾರ ಈ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಮೂಲಕ ಈ ಭಾಗದ ಜನರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಇಂತಹ ಶ್ರೇಷ್ಠ ಗುಣಮಟ್ಟದ ಉನ್ನತ ಕಲಿಕಾ ಕೇಂದ್ರವು ಈ ಭಾಗ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಹೊಡೆದಟ್ಟುವುದಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತದೆಂದು ಜನ ಭಾವಿಸಿದ್ದರು. ಆದರೆ, ಈ ವಿಶ್ವವಿದ್ಯಾಲಯ ಮುಂದೊಂದು ದಿನ ಮಹೇಶ್ವರಯ್ಯನವರಂಥ ಕಲ್ಯಾಣ ಕರ್ನಾಟಕದಾಚೆಯ ಮಂದಿಯ ಪಾಲಿಗೆ ಪುಷ್ಕಳವಾಗಿ ಮೇಯುವುದಕ್ಕೆ ಹುಲುಸಾದ ಹುಲ್ಲುಗಾವಲಾಗುತ್ತದೆ ಎಂದು ಯಾರು ತಾನೇ ಎಣಿಸಿದ್ದರು?

ಇದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಸಂಕ್ಷಿಪ್ತ ವಿವರಣೆ. ಇದಕ್ಕೂ ಮೊದಲು ಕೆಲವೇ ತಿಂಗಳ ಹಿಂದೆ ನಡೆದ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳ ನೇಮಕಾತಿಯಲ್ಲೂ ಮಹೇಶ್ವರಯ್ಯನವರು ಯುಜಿಸಿ ನಿಯಮಗಳನ್ನು ಗಾಳಿಗೆ ತೂರಿ ದೊಡ್ಡ ಮಟ್ಟದ ಅವ್ಯವಹಾರ ನಡೆಸಿರುವುದಕ್ಕೆ ದಾಖಲೆಗಳಿವೆ. ಅದು ಇದಕ್ಕಿಂತಲೂ ದೊಡ್ಡ ಹಗರಣ. ಅದರ ಬಗ್ಗೆಯೂ ತನಿಖೆ ನಡೆಯಬೇಕಿದೆ; ‘ಪತ್ರಿಕೆ’ಯ ತನಿಖೆ ಮುಂದುವರೆಯುತ್ತದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...