Homeಅಂತರಾಷ್ಟ್ರೀಯಇಂಟರ್‌ನ್ಯಾಷನಲ್ ಫೋಕಸ್; ಇಟಲಿಯಲ್ಲಿ ಮೆಲೋನಿ ಜಯ: ಬಲಕ್ಕೆ ವಾಲುತ್ತಿರುವ ಯುರೋಪ್

ಇಂಟರ್‌ನ್ಯಾಷನಲ್ ಫೋಕಸ್; ಇಟಲಿಯಲ್ಲಿ ಮೆಲೋನಿ ಜಯ: ಬಲಕ್ಕೆ ವಾಲುತ್ತಿರುವ ಯುರೋಪ್

- Advertisement -
- Advertisement -

ಇಟಲಿಯಲ್ಲಿ ನಡೆದ ಇತ್ತೀಚಿನ ದಿಢೀರ್ ಚುನಾವಣೆಗಳಲ್ಲಿ ಬಲಪಂಥೀಯ ಮೈತ್ರಿಕೂಟ ಜಯಗಳಿಸಿದ್ದು, ’ಬ್ರದರ್ಸ್ ಆಫ್ ಇಟಲಿ’ ಪಕ್ಷದ ನಾಯಕಿ ಜಾರ್ಜಿಯಾ ಮೆಲೋನಿ ಮುಂದಿನ ಪ್ರಧಾನಿಯಾಗಲು ವೇದಿಕೆ ಸಿದ್ಧವಾಗಿದೆ. ’ಬ್ರದರ್ಸ್ ಆಫ್ ಇಟಲಿ’ ಪಕ್ಷವು 25 ಶೇಕಡಾ ಜನಪ್ರಿಯ ಮತಗಳನ್ನು ಗಳಿಸಿದೆ. ಮೆಲೋನಿ ಇಟಲಿಯಲ್ಲಿ ಸರ್ವಾಧಿಕಾರಿ ಬೆನಿಟೊ ಮುಸ್ಸೋಲಿನಿಯ ಬಳಿಕದ ಅತ್ಯಂತ ದೊಡ್ಡ ಬಲಪಂಥೀಯ ನಾಯಕಿ ಎಂದು ಹೇಳಲಾಗಿದೆ. ’ಬ್ರದರ್ಸ್ ಆಫ್ ಇಟಲಿ’ ಪಕ್ಷವು ಯುರೋಪಿನ ಬಲಪಂಥೀಯ ಪಕ್ಷಗಳಾದ ಸ್ಪೇನಿನ ವೋಕ್ಸ್ ಪಾರ್ಟಿ, ಪೋಲೆಂಡಿನ ಲಾ ಎಂಡ್ ಜಸ್ಟಿಸ್ ಪಾರ್ಟಿ ಮತ್ತು ಸ್ವೀಡನ್ನಿನ ಸ್ವೀಡನ್ ಡೆಮೋಕ್ರಾಟ್ಸ್ ಮೊದಲಾದ ಪಕ್ಷಗಳೊಂದಿಗೆ ನಂಟು ಹೊಂದಿದೆ. ಈ ವಿಜಯವು- ಯುರೋಪ್ ಬಲಪಂಥೀಯ ಪಕ್ಷಗಳ ತೆಕ್ಕೆಗೆ ಸರಿಯುತ್ತಿರುವ ವಿದ್ಯಮಾನದ ಭಾಗವಾಗಿದೆ.

ಈ ವಿದ್ಯಮಾನವು ಹೆಚ್ಚುಕಡಿಮೆ 15 ವರ್ಷಗಳಷ್ಟು ಹಳೆಯದು. ಯುರೋಪಿನಲ್ಲಿ ಬಲಪಂಥೀಯ ಒಲವು ಮೂರು ಮುಖ್ಯ ವಿಷಯಗಳಿಗೆ ಥಳಕು ಹಾಕಿಕೊಂಡಿದೆ.

ಮೊದಲನೆಯದಾಗಿ, 2009ರ ಐರೋಪ್ಯ ಬಿಕ್ಕಟ್ಟಿನ ನಂತರ ಐರೋಪ್ಯ ಒಕ್ಕೂಟದಲ್ಲಿ ಹುಟ್ಟಿಕೊಂಡ ಅಸಮಾಧಾನವು ಬೃಹತ್ತಾಗಿ ಬೆಳೆಯಿತು. ಎರಡನೆಯದಾಗಿ, ರಾಜಕೀಯ ಪ್ರತಿಷ್ಟಿತರ, ಅದರಲ್ಲೂ ಎಡ ಮಧ್ಯ ಪಕ್ಷಗಳಲ್ಲಿರುವವರ ಭ್ರಮನಿರಸನ ಸೇರಿದೆ. ಮೂರನೆಯದಾಗಿ, ವಲಸಿಗ ಸಮುದಾಯಗಳ ಬಗ್ಗೆ ಕೋಪವಿದೆ.

ಐರೋಪ್ಯ ಸಂದೇಹ

2008ರಲ್ಲಿ ಅಮೆರಿಕನ್ ಹಣಕಾಸು ಬಿಕ್ಕಟ್ಟು ಆರಂಭವಾಗಿ, ಅದು ವಿಶ್ವದಾದ್ಯಂತ ಪರಿಣಾಮದ ಅಲೆಗಳನ್ನೆಬ್ಬಿಸಿತು. ಅದಾದ ಸ್ವಲ್ಪ ಸಮಯದ ಬಳಿಕವೇ ಯುರೋಪಿನ ಮೇಲೆ ಪರಿಣಾಮ ಬೀರಿ, 2009ರಲ್ಲಿ ಐರೋಪ್ಯ ಒಕ್ಕೂಟ ಬಿಕ್ಕಟ್ಟಿಗೆ ಸಿಲುಕಿತು. ಈ ಬಿಕ್ಕಟ್ಟನ್ನು ಎದುರಿಸುವಲ್ಲಿ ಐರೋಪ್ಯ ಒಕ್ಕೂಟದ ವೈಫಲ್ಯವು ಇಡೀ ಕೂಟದ ಮೇಲೆ ನಂಬಿಕೆ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು. 2009ರಿಂದೀಚೆಗೆ ಹಲವು ದೇಶಗಳಲ್ಲಿ ಐರೋಪ್ಯ ಒಕ್ಕೂಟದ ಮೇಲಿನ ನಂಬಿಕೆ ಕುಸಿದಿದೆ.

ಐರೋಪ್ಯ ಒಕ್ಕೂಟದ ಮೇಲಿನ ಸಂಶಯವಾದ ಅಥವಾ ಸಿನಿಕತನಗಳಿಗೆ ರಾಷ್ಟ್ರೀಯವಾದಗಳನ್ನು ಸಮೀಕರಿಸಿ ಸೇರಿಸುವುದರ ಮೂಲಕ ಈ ಸಮಯದಲ್ಲಿ ಹಲವು ಬಲಪಂಥೀಯ ಪಕ್ಷಗಳು ಮೇಲೇರಲು ತೊಡಗಿದವು. ಅವು ರಾಷ್ಟ್ರೀಯ ಸಾರ್ವಭೌಮತೆಯ ನಾಶ ಮತ್ತು ವಲಸೆಗೆ ಪ್ರೋತ್ಸಾಹವನ್ನು ಐರೋಪ್ಯ ಒಕ್ಕೂಟದ ಜೊತೆಗೆ ಸಮೀಕರಿಸಲು ತೊಡಗಿದವು. ಕೆಲವು ರಾಜಕೀಯ ಪಕ್ಷಗಳು ಆರಂಭದಲ್ಲಿ ಕುಸಿಯುತ್ತಿದ್ದ ದೊಡ್ಡ ಬ್ಯಾಂಕುಗಳನ್ನು ಗುರಿಮಾಡಿ, ಐರೋಪ್ಯ ಪರಿಹಾರ ಧನದ ರಕ್ಷಣೆಯ ಫಲಾನುಭವಿಗಳನ್ನಾಗಿ ಅವನ್ನು ಚಿತ್ರಿಸಿದವು ಮತ್ತು ಅದನ್ನು ಈಗಿನ ರಾಜಕೀಯ ವರ್ಗದ ಭ್ರಷ್ಟಾಚಾರದ ಉದಾಹರಣೆಗಳಾಗಿ ಬಿಂಬಿಸಿದವು. ಕುಸಿಯುತ್ತಿರುವ ಐರೋಪ್ಯ ಒಕ್ಕೂಟಕ್ಕೆ ಎದುರು ನಿಲ್ಲುವ ಪರ್ಯಾಯ ಅಯ್ಕೆಯಾಗಿ ಬಲಪಂಥೀಯ ಪಕ್ಷಗಳು ತಮ್ಮ ಸ್ಥಾನವನ್ನು ಸ್ಥಿರಗೊಳಿಸಿವೆ.

ಅಧಿಕಾರದಲ್ಲಿ ಇರುವಾಗ ಈ ಬಲಪಂಥೀಯ ಪಕ್ಷಗಳಲ್ಲಿ ಹಲವು ತಮ್ಮ ನಿಲುವನ್ನು ಸಡಿಲಗೊಳಿಸುತ್ತವೆ. ಐರೋಪ್ಯ ಒಕ್ಕೂಟವನ್ನು ವಿರೋಧಿಸುವುದಕ್ಕೆ ಬದಲಾಗಿ ಅವು, ಒಕ್ಕೂಟದೊಳಗೆಯೇ ತಮ್ಮ ದೇಶದ ಸ್ಥಾನವನ್ನು ಬಲಪಡಿಸಲು ಯತ್ನಿಸುತ್ತವೆ. ಉದಾಹರಣೆಗೆ ಇಟಲಿಯಲ್ಲಿ ಬಲಪಂಥೀಯ ಪಕ್ಷಗಳು ’ಫೈವ್ ಸ್ಟಾರ್ ಪಾರ್ಟಿ’ ಎಂದು ಜೊತೆ ಸೇರಿ ಸರಕಾರ ಕಟ್ಟುವ ಹವಣಿಕೆಯಲ್ಲಿ ಇದ್ದಾಗ ಐರೋಪ್ಯ ಒಕ್ಕೂಟದಿಂದ ಹೊರಬರುವ ನಿಲುವನ್ನು ತ್ಯಜಿಸಿದವು. ಅಧಿಕಾರಕ್ಕೆ ಬಂದಂದಿನಿಂದ ’ಬ್ರದರ್ಸ್ ಆಫ್ ಇಟಲಿ’ ಪಕ್ಷವು ನಿಲುವು ಸಡಿಲಿಸಿ, ಐರೋಪ್ಯ ಒಕ್ಕೂಟವು ಒಂದು ಸಡಿಲವಾದ ಒಕ್ಕೂಟವಾಗಿರಬೇಕೆಂದು ಹೇಳಿದೆ.

ಕುಸಿಯುತ್ತಿರುವ ಎಡ ಪಕ್ಷಗಳು

1990ರಿಂದೀಚೆಗೆ ಯುರೋಪಿನ ಉದ್ದಗಲಕ್ಕೂ ಹಲವು ದೇಶಗಳಲ್ಲಿ ನಡು-ಎಡ (ಸೆಂಟರ್-ಲೆಫ್ಟ್) ಪಕ್ಷಗಳು ಮಂಕಾಗುತ್ತಾ ಬರುವುದು ಕಂಡಿದೆ. 2009ರ ಐರೋಪ್ಯ ಬಿಕ್ಕಟ್ಟಿನ ನಂತರ ಯುರೋಪಿನಾದ್ಯಂತ ನಡು-ಎಡ ಪಕ್ಷಗಳ ಮೇಲಿನ ನಂಬಿಕೆ ಕುಸಿದಿದೆ. ಇದಕ್ಕೆ ಭಾಗಶಃ ಕಾರಣವೆಂದರೆ, ರಾಜಕೀಯ ಪಕ್ಷಗಳು ಮತ್ತು ಎಡಪಂಥೀಯರಲ್ಲಿರುವ ವೃತ್ತಿಪರ ರಾಜಕಾರಣಿಗಳ ಮೇಲೆ ನಂಬಿಕೆ ಕುಸಿಯುತ್ತಿರುವುದು. ಈ ನವ ಉದಾರವಾದಿ ಯುಗದಲ್ಲಿ ಹೆಚ್ಚಿನ ಯುರೋಪಿಯನ್ನರು, ನಡು-ಎಡ ಮತ್ತು ನಡು-ಬಲ (ಸೆಂಟರ್-ರೈಟ್) ಪಕ್ಷಗಳ ನಡುವೆ ಬಲವಾದ ವ್ಯತ್ಯಾಸಗಳನ್ನೇ ಕಾಣುತ್ತಿಲ್ಲ.

’ಬಲ’ವನ್ನು ವಿರೋಧಿಸುವ ಯುರೋಪಿಯನ್ನರು- ಪ್ರಭಾವಿ ಎಡ ಪಕ್ಷಗಳು ’ಬಲ’ದ ಕುರಿತು ತೀರಾ ರಾಜಿಯ ಮನೋಭಾವ ಹೊಂದಿವೆ ಅಥವಾ ಅದಕ್ಕಿಂತ ಹೆಚ್ಚಾಗಿ, ಬಲಪಂಥೀಯ ತೀವ್ರವಾದದ ಸಮರ್ಥನೆಯಲ್ಲಿ ಪಾತ್ರವಹಿಸುತ್ತಿವೆ ಎಂದು ಭಾವಿಸುತ್ತಾರೆ. ನವ ಉದಾರವಾದಿ ಧೋರಣೆಗಳ ಆನುಷ್ಠಾನದಲ್ಲಾಗಲೀ, 2009ರ ಐರೋಪ್ಯ ಬಿಕ್ಕಟ್ಟನ್ನು ಎದುರಿಸುವುದರಲ್ಲಾಗಲೀ ನಡು-ಎಡ ಮತ್ತು ನಡು-ಬಲ ಪಕ್ಷಗಳ ನಡುವೆ ಹೆಚ್ಚಿನ ವ್ಯತ್ಯಾಸ ಇಲ್ಲ ಎಂದು ಹೆಚ್ಚಿನ ಯುರೋಪಿಯನ್ನರು ಭಾವಿಸುತ್ತಾರೆ.

ಇದೆಲ್ಲವನ್ನು ಹೇಳುತ್ತಿರುವಾಗಲೇ, ನಡು-ಎಡ ಪಕ್ಷಗಳು ಇನ್ನೂ ಪ್ರಬಲವಾದ ಚುನಾವಣಾ ಅಸ್ತಿತ್ವವನ್ನು ಹೊಂದಿವೆ. ಅವು 1990ರಿಂದೀಚೆಗೆ ಕುಸಿಯುತ್ತಿವೆ ಅಷ್ಟೇ.

ಇದೇ ಅವಧಿಯಲ್ಲಿ ಬಲವಾದ ಸ್ಥಾನ ಹೊಂದಿದ್ದ ಎಡ ಪಕ್ಷಗಳು ಇನ್ನಷ್ಟು ಪ್ರಬಲವಾಗಿವೆ. ಅವು ಯುವಕರು, ದುಡಿಯುವ ವರ್ಗ ಮತ್ತು ಸಾಂಪ್ರದಾಯಿಕ ಎಡದೊಂದಿಗೆ ಭ್ರಮನಿರಸನ ಹೊಂದಿರುವ ನಡುವಿನಿಂದ ಎಡ (ಲೆಫ್ಟ್ ಆಫ್ ಸೆಂಟರ್) ನಿಲುವಿನವರ ನಡುವೆ ಜನಪ್ರಿಯವಾಗಿವೆ. ಅವು ಪ್ರಬಲ ಪ್ರತಿಸ್ಪರ್ಧೆ ಎದುರಿಸುತ್ತಿವೆ. ಎಡಪಕ್ಷಗಳು ಅನುಸರಿಸುತ್ತಿರುವ ಧೋರಣೆಗಳು ಬಲಪಂಥೀಯ ಜನಮರುಳು ಘೋಷಣೆಗಳಂತೆಯೇ ಇವೆ. ಅವು ಬಹುಸಂಖ್ಯಾತವಾದಿ ರಾಜಕೀಯದ ಬಗ್ಗೆ ಮಾತನಾಡುತ್ತಿವೆ. ಅವು- ಹಳೆಯ ಪ್ರಬಲ ಪಕ್ಷಗಳು, ಅದರಲ್ಲೂ ಮುಖ್ಯವಾಗಿ ನಡುವಿನಿಂದ ಎಡಕ್ಕಿರುವ ಪಕ್ಷಗಳ ಬಗ್ಗೆ ಇರುವ ಭ್ರಮನಿರಸನದ ಲಾಭ ಪಡೆಯಲು ಯತ್ನಿಸುತ್ತಿವೆ. ನವ ಉದಾರವಾದದ ಕಾರಣದಿಂದ ಸಾರ್ವಭೌಮತೆ ನಾಶವಾಗುತ್ತಿರುವುದಕ್ಕೆ ಅವು ವಿರೋಧವಾಗಿವೆ. ಅವು, ದೊಡ್ಡ ಬ್ಯಾಂಕುಗಳು ಮತ್ತು ಐರೋಪ್ಯ ಒಕ್ಕೂಟವನ್ನು ಗುರಿ ಮಾಡುತ್ತವೆ. ಇದು ಅವುಗಳನ್ನು ನೇರವಾಗಿ ಬಲಪಂಥೀಯ ಪಕ್ಷಗಳ ಎದುರುಬದುರು ನಿಲ್ಲಿಸುತ್ತದೆ. ಎಡಪಂಥೀಯ ಪಕ್ಷಗಳು ಪ್ರತಿಸಂಸ್ಕೃತಿ ಮತ್ತು ಬಹುಸಂಸ್ಕೃತಿಗಳನ್ನು ಬೆಂಬಲಿಸಿ ಯುವಜನರನ್ನು ಓಲೈಸಲು ಯತ್ನಿಸುತ್ತಿವೆ. ಆದರೆ, ಇದು ಬಹಳಷ್ಟು ಮಂದಿ ವಯಸ್ಸಾದ ಜನರಿಗೆ ಒಗ್ಗುವುದಿಲ್ಲ. ಉದಾಹರಣೆಗೆ ಸ್ವೀಡನ್‌ನಲ್ಲಿ ಹಲವಾರು ಮುಸ್ಲಿಂ ಅಭ್ಯರ್ಥಿಗಳನ್ನು ಬಲಪಂಥೀಯ ಗುಂಪುಗಳು ಗುರಿ ಮಾಡಿದ್ದವು.

ವಲಸೆಯ ಭಯ

ಎರಡನೇ ವಿಶ್ವ ಯುದ್ಧದ ನಂತರ ಯುರೋಪ್, ಆರ್ಥಿಕ ಬಿಕ್ಕಟ್ಟಿನ ಅಂಚಿನಲ್ಲಿತ್ತು. ಸಾಮ್ರಾಜ್ಯಗಳ ಯುಗವು ಅಧಿಕೃತವಾಗಿಯೇ ಕೊನೆಗೊಂಡಿತ್ತು ಮತ್ತು ಇಡೀ ಯುರೋಪ್ ಖಂಡವೇ ಯುದ್ಧದಿಂದ ಧ್ವಂಸವಾಗಿತ್ತು. ಯುಎಸ್‌ಎ ಮತ್ತು ಯುಎಸ್‌ಎಸ್‌ಆರ್ ಹೊಸ ಜಾಗತಿಕ ಶಕ್ತಿಗಳಾಗಿ ಮೂಡಿಬಂದಿದ್ದವು ಮತ್ತು ಯುರೋಪಿನ ಶಕ್ತಿಗಳು ತಮ್ಮ ವಸಾಹತುಗಳ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದವು.

ಈ ಸಮಯದಲ್ಲಿ ಐರೋಪ್ಯ ಶಕ್ತಿಗಳಿಗೆ ವಲಸೆ ಕಾರ್ಮಿಕರ ತೀರಾ ಅಗತ್ಯವಿತ್ತು. ಯುದ್ಧದಿಂದಾಗಿ ಯುರೋಪಿನಲ್ಲಿ ಕಾರ್ಮಿಕರ ತೀವ್ರ ಕೊರತೆ ಉಂಟಾಗಿತ್ತು. ಹಿಂದಿನ ವಸಾಹತುಗಳು ಅಗ್ಗದ ಶ್ರಮಶಕ್ತಿಗೆ ಅತ್ಯುತ್ತಮ ಮೂಲಗಳಾಗಿದ್ದವು. ಹೆಚ್ಚಿನವರು ಹೆಚ್ಚಾಗಿ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಿಂದ ಬಂದರು. ಅವರಲ್ಲಿ ಹೆಚ್ಚಿನವರು ಯುರೋಪಿನ ಔಪಚಾರಿಕ ಆರ್ಥಿಕತೆಗೆ ಪೂರಕವಾದ ಅನೌಪಚಾರಿಕ ಆರ್ಥಿಕತೆಯನ್ನು ಕಾಯ್ದುಕೊಳ್ಳುವಲ್ಲಿ ನೆರವಾದರು ಮತ್ತು 1940, 50 ಮತ್ತು 60ರ ದಶಕದಲ್ಲಿ ಯುರೋಪಿನ ಪುನರ್‌ನಿರ್ಮಾಣದಲ್ಲಿ ನೆರವಾದರು.

1970ರ ದಶಕದಲ್ಲಿ ಯುರೋಪ್ ಜಾಗತಿಕವಾದ ಆರ್ಥಿಕ ಹಿಂಜರಿತದಲ್ಲಿ ಸಿಲುಕಿಕೊಂಡಿತು. ದಶಕಗಳ ಮರುನಿರ್ಮಾಣದ ಬಳಿಕ ಯುರೋಪಿನಲ್ಲಿ ಕಾರ್ಮಿಕರ ಕೊರತೆಯು ಬದಲಾಗಿ, ಮಿಗುತೆಯಾಗಿಬಿಟ್ಟಿತು. ಈ ಹೊತ್ತಿನಲ್ಲಿ ವಲಸಿಗರ ಹೊಸದೊಂದು ತಲೆಮಾರು ಅವರನ್ನು ಹೆಚ್ಚು ಕಣ್ಣಿಗೆ ರಾಚುವಂತೆ ಮಾಡಿತು. ಕೆಲವರು ತಮ್ಮ ಧರ್ಮವನ್ನು ಹರಡುವುದು, ಸ್ಥಳೀಯರ ಜೊತೆ ಮದುವೆಯಾಗುವುದು, ದೇಶಗಳ ಉದ್ದಗಲದಲ್ಲಿ ತಮ್ಮದೇ ವ್ಯಾಪಾರವನ್ನು ಸ್ಥಾಪಿಸುವುದು ನಡೆಯಿತು. ಐರೋಪ್ಯ ದೇಶಗಳು ಹೆಚ್ಚುಹೆಚ್ಚು ಕಠಿಣವಾದ ವಲಸೆ ನಿಯಮಗಳನ್ನು ರೂಪಿಸಲು ಆರಂಭಿಸಿದವು. ಹಿಂದೆಲ್ಲಾ ಆರ್ಥಿಕತೆಗೆ ವರವಾಗಿ ಇದ್ದ ವಲಸಿಗರನ್ನು ಸಂಶಯದಿಂದ ಕಾಣುವುದು ಆರಂಭವಾಯಿತು. ರಾಜಕಾರಣಿಗಳು ಸಾಮಾನ್ಯವಾಗಿ ಅಪರಾಧ, ನಿರುದ್ಯೋಗ, ಹಿಂಸಾಚಾರ ಇತ್ಯಾದಿ ಸಾಮಾಜಿಕ ಪಿಡುಗುಗಳಿಗೆಲ್ಲಾ ವಲಸಿಗ ಸಮುದಾಯವನ್ನು ಹೊಣೆ ಮಾಡುತ್ತಿದ್ದರು.

ಎರಡು ದೊಡ್ಡ ವಲಸಿಗ ಜನ ಸಮುದಾಯಗಳೆಂದರೆ ಬ್ಲ್ಯಾಕ್ಸ್ ಮತ್ತು ಮುಸ್ಲಿಮರು. ಜನಾಂಗೀಯ ನಿಂದನೆಯ ಭಾಷೆಯಲ್ಲಿ ಅವರಿಗೆ ಮಸಿಬಳಿಯುವ ಕೆಲಸ ಆರಂಭವಾಯಿತು. ಕಪ್ಪು ಜನರು ಮತ್ತು ಮುಸ್ಲಿಮರು ಸ್ಥಳೀಯ ಸಂಸ್ಕೃತಿಯನ್ನು ಕುಲಗೆಡಿಸುತ್ತಾರೆಂದು ದೂರಿ, ಹಿಂಸಾತ್ಮಕ ಅಪರಾಧಗಳ ಜೊತೆಗೆ ಅವರನ್ನು ಸಮೀಕರಿಸಲಾಯಿತು.

2000ದ ದಶಕದ ಆರಂಭದಲ್ಲಿ ಅನೇಕ ಐರೋಪ್ಯ ದೇಶಗಳು “ಭಯೋತ್ಪಾದನೆಯ ವಿರುದ್ಧ ಯುದ್ಧ” ಆರಂಭಿಸಿದವು. ಇದು ವಿಷಯವನ್ನು ಅಂತಾರಾಷ್ಟೀಕರಣಗೊಳಿಸಿತು. ಪ್ರಪಂಚದ ವಿವಿಧ ಭಾಗಗಳ ಭಯೋತ್ಪಾದಕ ಗುಂಪುಗಳಿಗೆ ವಲಸಿಗರೊಂದಿಗೆ ಸಂಬಂಧ ಕಲ್ಪಿಸಲಾಯಿತು. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಜಾಗತಿಕ ಮಟ್ಟದ ಸಂಘರ್ಷಗಳ ಜೊತೆಜೊತೆಯಲ್ಲಿ ಜನಾಂಗೀಯವಾದಿಗಳಿಂದ ಪ್ರಚೋದಿತವಾದ ಉದ್ವಿಘ್ನತೆ ಹೆಚ್ಚಿತು. ಅಫ್ಘಾನಿಸ್ತಾನದಿಂದ ಆರಂಭವಾಗಿ, ಭಯೋತ್ಪಾದನೆ ವಿರುದ್ಧ ಯುದ್ಧ ಎಂಬುದು ಇಡೀ ಉತ್ತರ ಆಫ್ರಿಕಾಕ್ಕೆ ಹರಡಿತು.

2010ರ ಸಿರಿಯಾದ ಅಂತರ್ಯುದ್ಧವು ಅಭೂತಪೂರ್ವ ನಿರಾಶ್ರಿತ ಬಿಕ್ಕಟ್ಟಿಗೆ ಕಾರಣವಾಗಿ, ಸರಿಸುಮಾರು 70 ಲಕ್ಷ ಜನರು ಸಿರಿಯಾ ಬಿಟ್ಟು ಹೊರಹೋಗಬೇಕಾಯಿತು. ಯುರೋಪ್-ಟರ್ಕಿ ಅಥವಾ ಪಶ್ಚಿಮ ಏಷ್ಯಾದಷ್ಟು ನಿರಾಶ್ರಿತರಿಗೆ ಆಶ್ರಯ ನೀಡದಿದ್ದರೂ, ಈ ಬಿಕ್ಕಟ್ಟು ಸಿರಿಯನ್ನರನ್ನು ಇಸ್ಲಾಮಿಕ್ ಮೂಲಭೂತವಾದ ಮತ್ತು ಭಯೋತ್ಪಾದನೆಗೆ ಥಳಕುಹಾಕುವುದರ ಮೂಲಕ ಯುರೋಪಿನಲ್ಲಿ ನಿರಾಶ್ರಿತರ ಕುರಿತು ಭಯ ಹುಟ್ಟಿಸುವುದಕ್ಕೆ ಆಧಾರವಾಯಿತು.

ಈ ಬಿಕ್ಕಟ್ಟಿನ ಉದ್ದಕ್ಕೂ ಯುರೋಪಿನ ಹಲವು ದೇಶಗಳಲ್ಲಿ ಬಲಪಂಥೀಯ ಪಕ್ಷಗಳು ಈ ಭಯದ ದುರುಪಯೋಗ ಮಾಡಿಕೊಂಡು, ಜನಮರುಳು ರಾಜಕೀಯದಲ್ಲಿ ತೊಡಗಿರುವುದನ್ನು ಕಾಣಬಹುದು. ಯುರೋಪ್ ವಯಸ್ಸಾಗುತ್ತಿರುವ ಒಂದು ದೊಡ್ಡ ಜನಸಮುದಾಯವನ್ನು ಹೊಂದಿದೆ. ವಯಸ್ಸಾದ ಯುರೋಪಿಯನ್ನರು ಜನಾಂಗೀಯವಾದಿ ರಾಜಕೀಯವನ್ನು ಬೆಂಬಲಿಸುವ ಸಾಧ್ಯತೆ ಹೆಚ್ಚು.

ಯುರೋಪಿನಲ್ಲಿ ಬಲಪಂಥದ ಕಡೆಗಿನ ತಿರುವು- ಯುರೋಪಿನಲ್ಲಿ ಒಂದು ದುರ್ಬಲ ಪ್ರಜಾಸತ್ತಾತ್ಮಕ ವ್ಯವಸ್ಥೆಯು ಪರಿಣಾಮವಾಗಿದೆ. ರಾಜಕಾರಣಿಗಳು ತಮ್ಮ ಮಾತುಗಳನ್ನು ಕೇಳುತ್ತಿಲ್ಲ ಎಂದು ಜನರಿಗೆ ಅನಿಸಿದ್ದು, ಅವರಿಗೆ ಬದಲಾವಣೆ ಬೇಕು. ಸ್ಥಾಪಿತ ರಾಜಕೀಯ ಅಭ್ಯರ್ಥಿಗಳು ವಾಸ್ತವದೊಂದಿಗೆ ಸಂಪರ್ಕ ಕಳೆದುಕೊಂಡಿದ್ದಾರೆಂದು ಅವರು ಭಾವಿಸಿದ್ದು, ಅವರು ಬದಲಿ ವ್ಯಕ್ತಿಗಳನ್ನು ಕಂಡುಕೊಳ್ಳಲು ಆರಂಭಿಸಿದ್ದಾರೆ. ಇಟಲಿಯಲ್ಲಿ ’ಫೈವ್ ಸ್ಟಾರ್’ ಚಳವಳಿ ಅಧಿಕಾರದಲ್ಲಿತ್ತು ಏಕೆಂದರೆ, ಆಗ ಅದು ಪರ್ಯಾಯವಾಗಿತ್ತು. ಆದರೆ, ತಾವು ಗೆದ್ದಾಗ, ಅವರು ಆ ಅವಕಾಶವನ್ನು ಕೈಚೆಲ್ಲಿದರು. ಮುಕ್ತವಾದ ಜನಮರುಳಿನ ಹೊರತು ಅವರಲ್ಲಿ ಯಾವುದೇ ಸ್ಪಷ್ಟ ಕಾರ್ಯಕ್ರಮ ಇರಲಿಲ್ಲ. ಜನರು ಹೆಚ್ಚು ಸ್ಪಷ್ಟವಾದ ಕಾರ್ಯಕ್ರಮ ಇರುವಂತೆ ಕಾಣುವ ಅಭ್ಯರ್ಥಿಗಳತ್ತ ಮುಖ ಮಾಡುತ್ತಿದ್ದಾರೆ ಮತ್ತು ಬಲಪಂಥೀಯರು ಈಗ ಅದರ ಲಾಭ ಪಡೆದುಕೊಂಡಿದ್ದಾರೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಸ್ವೀಡನ್ ಸಾರ್ವತ್ರಿಕ ಚುನಾವಣೆಗಳು ಏನನ್ನು ಸೂಚಿಸುತ್ತದೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟ ಮಾಡುತ್ತಿದ್ದ ಯುವಕನಿಗೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...