Homeಮುಖಪುಟಹೀಗಿದ್ದರು ನಮ್ಮ ಡಾ. ರಾಜೇಗೌಡ ಹೊಸಹಳ್ಳಿ. - ಪ್ರೊ. ಶಿವರಾಮಯ್ಯ

ಹೀಗಿದ್ದರು ನಮ್ಮ ಡಾ. ರಾಜೇಗೌಡ ಹೊಸಹಳ್ಳಿ. – ಪ್ರೊ. ಶಿವರಾಮಯ್ಯ

- Advertisement -
- Advertisement -

ನಾಗರಭಾವಿ ನಮ್ಮ ಮನೆಗೂ ರಾಜೇಗೌಡ ಹೊಸಹಳ್ಳಿಯವರ ಮನೆಗೂ ಕುರಿಗಾಹಿ ‘ಗಳ್ಳು’ ಹಾಕಿದರೆ ಕೇಳುವಷ್ಟು ದೂರ. ಕಳೆದ ಹತ್ತಾರು ವರ್ಷಗಳ ನನ್ನ ಅವರ ಒಡನಾಟ. ‘ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ; ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ; ನೆರಮನೆಯ ದುಃಖಕ್ಕೆ ಅಳುವರ ಮೆಚ್ಚ ನಮ್ಮ ಕೂಡಲ ಸಂಗಮ ದೇವ’ ಎಂದ ಬಸವಣ್ಣ. ಆದರೆ ಗೌಡರಿಗೆ ಇದು ಆಗದಮಾತು.

ನಾಗರಭಾವಿಯಿಂದ ಹಿಡಿದು ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ ಸುದ್ದಿ ಸಮಾಚಾರಗಳು, ಪರಿಸರ ಕಾಳಜಿಗಳು, ವೈಜ್ಞಾನಿಕ ವೈಚಾರಿಕ ಬೆಳವಣಿಗೆಗಳು; ಜಾತಿ ಮತ ಧರ್ಮ ಮರ್ಮ ಕರ್ಮಗಳು, ರೋಗ ರುಜಿನಗಳು, ರೈತಾಪಿ ಶ್ರಮಿಕರ, ದಲಿತರ, ಮಹಿಳೆಯರ ಮಕ್ಕಳ ಅಧೋಲೋಕದ ಕಳ್ಳಕಾಕರ ಪಾತಕಿಗಳ ಪಾಪಕೃತ್ಯಗಳು- ಈ ಎಲ್ಲದರ ಮೇಲೆ, ಈ ಭೂಮಿ ಬ್ರಹ್ಮಾಂಡದ ಒಳಗೆ ಏನೇನು ನಡೆಯುತ್ತದೆಯೊ ತಿಳಿದವರಾರು? ಎಂದು, ಒಂದು ಕ್ಷಣ ನಿಲ್ಲಿಸಿ, ‘ಅಲ್ಲ ಸಾರ್, ಈ ರಾಜಕಾರಣಿಗಳಿಗೆ ಎಂದು ಬುದ್ಧಿಬರುತ್ತೆ? ಭೂಮಿತಾಯಿಗೆ ಅಡವಿತಾಯಿಗೆ ಇಷ್ಟೊಂದು ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದೇ ಆಗುತ್ತದೆ ಅಲ್ಲವೆ?.’ ಒಟ್ಟಾರೆ ಈ ನಗರಗಳು ಹೀಗೇ ಬೆಳೆದರೆ ಇನ್ನು ಹತ್ತಾರು ವರ್ಷಗಳಲ್ಲಿ ಭೂಮಂಡಲದಲ್ಲಿರುವ ಭಾರಿ ನಗರಗಳೆಲ್ಲ ಗೋಸ್ಟ್ ಸಿಟಿಗಳಾಗುತ್ತವೆ. ಹಾಗಂತ ವಿಜ್ಞಾನಿಗಳು ಈಗಾಗಲೇ ಎಚ್ಚರಿಕೆ ಕೊಟ್ಟಿದ್ದಾರೆ. ಹೀಗೇ ಗೌಡರು ಚಿಂತನ ಮಂಥನ ಮಾಡುತ್ತಾ ಹೇಳುತ್ತಲೇ ಇದ್ದರು. ನಾನು ಸುಮ್ಮನಿದ್ದರೆ, ಯಾಕೆ ಸುಮ್ಮನಾದಿರಲ್ಲ ಎಂದು ನನ್ನನ್ನೇ ಕೇಳುತ್ತಿದ್ದರು. ಅಲ್ಲ, ಕರ್ನಾಟಕ ಇನ್ನು ಹತ್ತಾರು ವರ್ಷಗಳಲ್ಲಿ ಮರುಭೂಮಿ ಆಗುತ್ತದೆ, ಬೆಂಗಳೂರು ಮೊದಲು ಗೋಸ್ಟ್ ಸಿಟಿ ಆಗುತ್ತದೆ. ಇದನ್ನು ನೋಡುವವರೆಗೂ ನಾವು ಬದುಕಿರುತ್ತೇವೊ ಇಲ್ಲವೊ, ಮುಂದೆ ನಮ್ಮ ಮಕ್ಕಳು ಮರಿ ಹೇಗೆ ಬದುಕುತ್ತಾರೆ? ಎಂದು ತಮಗೆ ತಾವೇ ಖಿನ್ನರಾಗಿ ಬಿಡುತ್ತಿದ್ದರು.

ಗೌಡರು ಸಾಮಾನ್ಯವಾಗಿ ನಮ್ಮ ಮನೆಗೆ ಪ್ರತಿ ಸಂಜೆ ಬರುತ್ತಿದ್ದರು. ಅವರು ಒಂದು ದಿನ ಏನಾದರೂ ಬಾರದಿದ್ದರೆ ನಾನಿರಲಿ, ನಮ್ಮ ಮಕ್ಕಳು ಮೊಮ್ಮಕ್ಕಳು ‘ರಾಜೇಗೌಡ ತಾತ ಯಾಕೋ ಬರಲಿಲ್ಲ?’ ಅಂದು ಕೊಳ್ಳುವಷ್ಟು ಆತ್ಮೀಯತೆ. ನಾನು ಅವರನ್ನು ಕಂಡ ಕೂಡಲೆ ಇವತ್ತೇನು ಹೊಸ ಸುದ್ದಿ? ಮರುಭೂಮಿ, ಗೋಸ್ಟ್ ಸಿಟಿ ಬಿಟ್ಟು ಇನ್ನೇನಾದರೂ ಉಂಟೇ ಎಂದರೆ ಸಾಕು ಮಲೆನಾಡ ಸ್ಥಿತಿಗತಿ ಬಿಚ್ಚುತ್ತಿದ್ದರು. ಅಡವಿನಾಶವನ್ನೂ, ಎತ್ತಿಹೊಳೆ ಡ್ಯಾಮಿನ ಭ್ರಷ್ಟಾಚಾರವನ್ನು, ಆನೆ ಕಾರಿಡಾರ್, ಹುಲಿ ರಕ್ಷತಾರಣ್ಯ, ಕಾಡು ಕಡಿದು ಸಸಿನೆಡುವ ಅವೈಜ್ಞಾನಿಕ ಪರದಾಟ, ಏಲಕ್ಕಿ, ಮೆಣಸು ಕಾಫಿ ಬೆಳೆಗಳ ಬಗ್ಗೆ, ಅತಿವೃಷ್ಟಿ ಅನಾವೃಷ್ಟಿ ಇತ್ಯಾದಿ ನೂರೆಂಟು ಹೇಳಿದವರು, ಕಡೆಗೆ ಗಾಂಧಿ ವಿಚಾರಕ್ಕೆ ಬರುತ್ತಿದ್ದರು. ಗಾಂಧಿ ಭಾರತ ನೆಹರೂ ಭಾರತ ಆರ್.ಎಸ್.ಎಸ್. ಭಾರತ, ಆಸೇತು ಹಿಮಾಚಲ ತಿರುಗಾಡಿದ ಪ್ರವಾಸ ಕಥನ ವಿದೇಶಿ ಪ್ಯಾಕೇಜ್ ಟ್ಯೂರ್ ಹೀಗೆ ಪರಿಸರಕ್ಕೆ ಸಂಬಂಧಿಸಿದ ಕಥನಗಳು ರಿಲೇ ಆಗುತ್ತಿದ್ದವು. ಗೌಡರು ಗಾಂಧಿ ಸಾಹಿತ್ಯವನ್ನು ತಲಸ್ಪರ್ಶಿ ಓದಿಕೊಂಡವರು.

ಅವರ ಬದುಕು ಬರಹಗಳನ್ನು ತದೇಕ ಧ್ಯಾನದಿಂದ ಅಧ್ಯಯನ ಮಾಡಿದವರು. ನಮ್ಮ ಇವತ್ತಿನ ಜಾಗತಿಕ ತವಕ ತಲ್ಲಣಗಳ ಪ್ರಶ್ನೆ ಮುಂದಿಟ್ಟುಕೊಂಡು ತಾವು ಗಾಂಧಿಯಲ್ಲಿ ಕಂಡ ಲೋಕ ಸತ್ಯಗಳನ್ನು ಕುರಿತು ಪ್ರಜಾವಾಣಿ ‘ಸಂಗತ’ ಅಂಕಣಕ್ಕೆ ಕಳೆದ 5-6 ವರ್ಷದಿಂದ ಬರೆಯುತ್ತಿದ್ದವರು. ಇಂದಿನ ಯುವ ಪೀಳಿಗೆ ಗಾಂಧಿಯನ್ನು ಓದ ಬೇಕೆಂಬ ಅಪಾರ ಕಳಕಳಿ ಅವರದು. ವಿಶ್ವತೋ ಮುಖಿಯಾದ ಗಾಂಧಿಯ ಸ್ವರಾಜ್ಯ, ಸರ್ವೋದಯ, ಸತ್ಯ, ಅಹಿಂಸೆ, ಸತ್ಯಾಗ್ರಹಗಳ ಬಗ್ಗೆ ಬರೆಯುತ್ತ ಹೋದರು. ಓದುಗರಿಗೆ ಸುಲಭವಾಗಿ ಕೈಗೆಟುಕುವಂತೆ ಗಾಂಧಿ ಕುರಿತು ಸುಮಾರು 20ಕ್ಕೂ ಹೆಚ್ಚು ಲೇಖನಗಳನ್ನು ಪ್ರಜಾವಾಣೆಯಲ್ಲಿ ಪ್ರಕಟಿಸುವ ಮೂಲಕ ಓದುಗರಿಗೆ ಪರಿಚಿತರು.

ಅವರು ಬರಹಗಳಿಗೆ ಕೊಡುತ್ತಿದ್ದ ಕೆಲವು ಶೀರ್ಷಿಕೆಗಳು ಹೀಗಿವೆ: ದಕ್ಷಿಣಾಫ್ರಿಕ ಮತ್ತು ಗಾಂಧಿ; ರೈತಾಪಿ ಚಿಂತನೆ ಮತ್ತು ಗಾಂಧಿ; ಹಿಂದು ಸ್ವರಾಜ್ಯ ಮತ್ತು ಗಾಂಧಿ; ದೇಶ ವಿಭಜನೆ ಕೊರಗಿನಲ್ಲಿ ಗಾಂಧಿ; ಸ್ತ್ರೀಪರ ಚಿಂತನೆ ಮತ್ತು ಗಾಂಧಿ; ನೀತಿ, ಧರ್ಮ ಮತ್ತು ಗಾಂಧಿ; ಚರಕ ಮತ್ತು ಗಾಂಧಿ; ಬ್ರಹ್ಮಚರ್ಯ ಮತ್ತು ಗಾಂಧಿ; ಅಹಿಂಸೆ ಎಂದರೆ ಪ್ರೇಮ ಎಂದ ಗಾಂಧಿ; ಲಜ್ಜೆಯೇ ನನ್ನ ರಕ್ಷಕ ಎಂದ ಗಾಂಧಿ; ಬುಡ ಬುಡಿಕೆ ತಿರುಗಾಟದ ಗಾಂಧಿ ಕುಟುಂಬ, ಶಿಕ್ಷಣ ಮತ್ತು ಗಾಂಧಿ; ದೇವರು ಮತ್ತು ಗಾಂಧಿ, ಮಾಡು ಇಲ್ಲವೆ ಮಡಿ ಎಂದ ಗಾಂಧಿ ಹೀಗೆ ಮುಂದುವರಿಯುತ್ತವೆ.

ಇದೆಲ್ಲ ಗಾಂಧಿ ಓದಿಕೊಂಡು ಬರೆದುದಷ್ಟೇ ಅಲ್ಲ, ಗೌಡರ ಬದುಕಿನ ಪಾಠವೇ ಆಗಿತ್ತು. ಗಾಂಧಿಯ ಜೀವನ ಉನ್ನತ ಇವರ ಚಿಂತನಕ್ಕೆ ದಾರಿ ಮಾಡಿದೆ. ‘ನಾವು ಚಿಕ್ಕ ಹುಡುಗರಾಗಿದ್ದಾಗ ನಮ್ಮಜ್ಜರಂತವರನ್ನು ನೋಡಿ ಬೆಳೆದವರು. ಆ ಅಜ್ಜ ಅಜ್ಜಿಯರ ಬದುಕಿನಾಳದಲ್ಲಿ ಗಾಂಧಿ ಮತ್ತು ಕಸ್ತೂರ್ ಬಾ ಮೌಲ್ಯಗಳಿದ್ದವು. ಅವೇ ಭಾರತೀಯತೆಯ ಸರಳದಾರಿಗಳು. ಅಂದು ಮಳೆಬರಲಿ ಹೋಗಲಿ ಬಳಲಿದ ಆತ್ಮಹತ್ಯೆಗೈದ ಸೂಚನೆಗಳಿರಲಿಲ್ಲ. ಅದರಲ್ಲಿ ನಿಸರ್ಗ ಒಪ್ಪಿತ ಮೌಲ್ಯಗಳಿದ್ದವು. ಬಡತನವೆಂಬುದು ದೇವರು ಕೊಟ್ಟವರವಾಗಿತ್ತು. ಸಿರಿತನ ಸಂಕಟದ ಬೇಲಿಯಾಗಿತ್ತು. ಇದೇ ಬದುಕು. ಗಾಂಧಿಯನ್ನು ಓದಿದ ಮೇಲೆ ಈ ಗಾಂಧಿ ಒಳಗೆ ನಮ್ಮ ಪರಿಸರದ ಬದುಕುಗಳೆಲ್ಲ ನೆಹರು ಕೋಟಿನೊಳಗೆ ನೋಟುಗಳನ್ನು ಹುಡುಕುತ್ತಿದ್ದವು ಎನಿಸುತ್ತಿದೆ. ಅದೇ ಆಧುನಿಕತೆ ಅಥವಾ ನಾಗರೀಕತೆ ಎಂಬ ಗರಿಗರಿನೋಟಿನಾಸೆಯದು. ಅದರಲ್ಲಿ ನಗುತ್ತಿರುವ ಗಾಂಧೀ ಈ ಅವತಾರಗಳನ್ನು ನೋಡಿ ಹುಸಿ ನಗುತ್ತಿದ್ದಾರೆ. ಅದು ಜಗದ ಸಂಸಾರವು ಗಾಂಧಿ ದಾರಿ ಬಿಟ್ಟು ನಡೆದ ಪರಂಪರೆಯ ಮಣ್ಣಿನ ದಾರಿಯು ಸವೆದು ಹೋಗಿ ಮಣ್ಣು ಹುಣ್ಣಾದ ಕಥನ. ಗಾಂಧೀಜಿ ಜೀವನದ ರಥಯಾತ್ರೆಯಲ್ಲಿ ಎಂದೂ ದುಃಖಿನತಾದುದಿಲ್ಲ. ದುಃಖವಿದ್ದರೆ ಅದು ಸಂತೋಷದ ದಾರಿಯ ಚಲನೆ ಆ ಸಂತೋಷದ ಹಾದಿ ಅಹಿಂಸೆ-ಸತ್ಯ ಎಂಬ ಅರಿವಿನದು. ಈ ಅರಿವು ಮಾನವತ್ವದ ಅರಿವು. ಅದಕ್ಕೆ ಏಸುವಿನ, ಬುದ್ಧನ ಹೆಜ್ಜೆಗಳಿವೆ. ಗಾಂಧಿಯು ಅಂತಿಮದಲ್ಲಿ ಶ್ರೀರಾಮನೊಡನೆ ಒಂದಾಗುವಾಗ : ‘ರಾಮರಾಮ’ ಎಂದ ಜಗದೇಕ ರಾಮನ ದನಿಯ ಕಥೆಗಳಿವೆ. ಅದೇ ಗಾಂಧಿ ಎಂಬ ಮೌಲ್ಯ.’

ಗೌಡರ ಹುಟ್ಟೂರು ಹಾಸನ ಜಿಲ್ಲಾ ಆಲೂರು ಬಳಿ ಹೊಸಹಳ್ಳಿ. 1949 ಜುಲೈ 6 ರಂದು ಹೆಚ್. ಎಸ್. ರಂಗಪ್ಪ ಹಾಗೂ ಶ್ರೀಮತಿ ರಂಗಮ್ಮನವರ ಮಗನಾಗಿ ಜನನ. ವ್ಯಾಸಂಗ ಮಾಡಿದ್ದು-ಹೊಸಹಳ್ಳಿ-ಆಲೂರು-ಹಾಸನ ಹಾಗೂ ಮಂಗಳೂರಿನ ಮಂಗಳ ಗಂಗೋತ್ರಿ 1974 ರಲ್ಲಿ ಎಂ.ಎ; 1976ಕ್ಕೆ ನೋದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ ಅಧಿಕಾರಿಯಾಗಿ ವೃತ್ತಿ. 2006ಕ್ಕೆ ಸ್ವಯಂ ನಿವೃತ್ತಿ. 2001ಕ್ಕೆ ಪಿ.ಎಚ್.ಡಿ; ಪ್ರವೃತ್ತಿ ಸಾಹಿತ್ಯಾಸಕ್ತಿ.
ಜನಪದ ಬದುಕಿನಲ್ಲಿ ಹಾಸುಹೊಕ್ಕಾಗಿ ಚಿಂತನ ಮಂಥನ ನಡೆಸುತ್ತಿದ್ದ ರಾಜೇಗೌಡರು ಆ ಸಾಹಿತ್ಯ ಕುರಿತ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮಗನ ತಿಂದ ಮಾರಾಯನದುರ್ಗ (ಲೇಖನಗಳು) ಕೋಳಿ ಮತ್ತು ತುಳಸಿ ಕಟ್ಟೆ (ಪ್ರಬಂಧಗಳು) ಅಕ್ಕಮ್ಮನ ಸಂಸಾರ (ನೀಳ್ಗತೆಗಳು) ಉದರದೊಳು ಹಸಿರುಕ್ಕಿ (ಕಾದಂಬರಿ) ಅರಿವಿನ ಕುರುಹು (ವಿಮರ್ಶೆ) ಆಧುನಿಕತೆ ಎಂಬ ಮಾಯಾ ಕತ್ತರಿ (ಗಾಂಧಿ ಚಿಂತನೆ-1) ಗಾಂಧಿ ಸಂಕಥನ (ಗಾಂಧಿ ಚಿಂತನೆ-2) ಮುಂತಾಗಿ. ವಿ.ವಿ.ಗಳ ಹೆಬ್ಬಾಗಿಲ ಹೊರಗೇ ನಿಂತು ಸಾಹಿತ್ಯ ಸೇವೆ ಮಾಡಿದ ಗೌಡರು ಜನಪದ ಸಾಹಿತ್ಯ ಕುರಿತು ಅಧಿಕೃತವಾಗಿ ಮಾತನಾಡ ಬಲ್ಲವರಾಗಿದ್ದರು. ಇವರು ‘ತಾಳ ಬಂದೋ ತಂಬೂರಿ ಬಂದೋ’ ಎಂಬ ಮಹಾಪ್ರಬಂಧ ಬರೆದು ಪಿ.ಹೆಚ್.ಡಿ ಪಡೆದವರು. ಈಗ ಪ್ರಕಟಣೆಗೆ ಸಿದ್ಧವಾಗಿರುವ ಕೃತಿ ‘ಶ್ರೀರಾಮಾಯಣ ದರ್ಶನಂನಲ್ಲಿ ಆಧುನಿಕ ತತ್ವಾದರ್ಶನ’ (ಪುಟಗಳು 150) ಕುವೆಂಪು ರಾಮಾಯಣ ದರ್ಶನಂ ಕುರಿತ ದೀರ್ಘ ವಿಮರ್ಶಾ ಲೇಖನ.

ಗಾಂಧಿ ಎಂದರೆ ಜಲಗಾರನಿಂದ ಮೊದಲುಗೊಂಡು ಸಂತ ಫಕೀರನ ತನಕ ನಮ್ಮ ಜನಪದರು ಬದುಕಿಬಾಳಿ ಕಂಡ ಅನುಭವ ಸತ್ಯ ಸಾಕ್ಷಾತ್ಕಾರ. ಅದೊಂದು ಬದುಕಿನ ವಿಧಾನ; ವಿದ್ಯಮಾನ. ಅದು ಭಾರತೀಯ ಜನಪದ ಸಮೂಹ ಪ್ರಜ್ಞೆ. ಅದಕ್ಕೆ ಯುಗಯುಗಗಳ ನೆನಪು ಇವೆ; ಭಾರತ ಹಾಗೂ ಜಾಗತಿಕ ವಿಶ್ವದ ಭವಿಷ್ಯತ್ ದರ್ಶನವಿದೆ. ಅದೊಂದು ಸಾಕ್ಷಿ ಪ್ರಜ್ಞೆ. ಈ ಕುರಿತು ಗೌಡರು ಹೇಳುತ್ತಾರೆ. ಗಾಂಧಿ ಚಹರೆಯ ಮಂದಿ ಎಲ್ಲ ದೇಶದಲ್ಲೂ ಎಲ್ಲ ಕಾಲದಲ್ಲೂ ಕಾಣ ಸಿಗುವರು. ಅಮೆರಿಕದ ಥೋರೊ, ಯೂರೋಪಿನ ರಸ್ಕಿನ್, ರಶ್ಯಾದ ಟಾಲ್‌ಸ್ಟಾಯ್, ಬೆಲೂಚಿಸ್ತಾನದ ಖಾನ್ ಅಬ್ದುಲ್ ಗಫಾರ್ ಖಾನ್, ನೆಹರೂ, ಸರ್ದಾರ್ ಪಟೇಲ್, ವಿನೋಬಾ, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್ ಕಿಂಗ್, ಮದರ್ ಥೆರೇಸಾ; ಬಾಲಕಿ ಥನ್ ಬರ್ಗ್ ಕೆಲವರು. ನಮಗೀಗ ಗಾಂಧಿಯನ್ನು ಕೊಂದವರ ಕೃತ್ಯವನ್ನು ಪುನರನಭವಿಸಿ ಹೇಳುವವರ ನಡುವೆ ಮುಂದಿನ ತಲೆಮಾರು ದಿಕ್ಕು ತಪ್ಪದಂತೆ ಗಾಂಧಿ ಬಗ್ಗೆ ಹೇಳುವ ಜವಾಬ್ದಾರಿ ಇದೆ, ಆ ಕೆಲಸವನ್ನು ದಣಿವರಿಯದೆ ಮಾಡಿದವರು ಡಾ.ರಾಜೇಗೌಡ ಹೊಸಹಳ್ಳಿಯವರು.

ಕಳೆದ ಎರಡು ವರ್ಷದ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗೌಡರು ಅಂಥ ನಿಃಶಕ್ತಿಯ ಅವಧಿಯಲ್ಲೂ ಕುವೆಂಪು ರಾಮಾಯಾಣವನ್ನು ಆಬಗ್ಗೆ ಬಂದ ವಿಮರ್ಶ ಕೃತಿಗಳನ್ನು ಸಂಪೂರ್ಣ ಅಧ್ಯೆಯನ ಮಾಡಿ ತಮ್ಮೆಲ್ಲ ಶಕ್ತಿ ಸಂಚಯನವನ್ನು ಬಸಿದು ಬರೆದಿರುವ ಕೃತಿ ಇದಾಗಿದೆ. ಆದರೆ ಅವರಿದ್ದಾಗ ಪುಸ್ತಕ ರೂಪದಲ್ಲಿ ಇದನ್ನು ನೋಡಲಾಗಲಿಲ್ಲ ಎಂಬ ಕೊರಗು ನಮ್ಮನ್ನು ಕಾಡುತ್ತಿದೆ. ಇಲ್ಲಿ ಕಾಣಿಸಿರುವ ಗೌಡರ ಒಳನೋಟಗಳನ್ನು ಗಮನಿಸಿವವರಿಗೆ ‘ಇದು ಅವರದೇ ಕೃತಿ’ ಎಂದು ಹೇಳಬಹುದಾದ ಛಾಪು ಅದರ ಮೇಲೆ ಬಿದ್ದಿದೆ. ಮೈಸೂರಿನ ಪ್ರೊ.ಎನ್.ಬೋರಲಿಂಗಯ್ಯನವರು ಹೇಳುವಂತೆ ‘ಇಷ್ಟೊಂದು ತನ್ಮಯತೆಯಿಂದ ಮತ್ತೇನನ್ನು ಓದಬೇಕಾಗಿಲ್ಲ. ಈ ಪರಿಯ ಸುದೀರ್ಘ ಮತ್ತು ಅಧಿಕೃತ ಅಭಿಪ್ರಯಾಗಳ ಲೇಖನವನ್ನು ಬರೆದ ಮೇಲೆ ಅವರು ಇನ್ನೇನನ್ನು ಬರೆಯ ಬೇಕಾಗಿಲ್ಲ! ನಿಜ. ಆದರೆ ಈಕೃತಿ ಮತ್ತು ಈ ಮಾತುಗಳನ್ನು ಅವರು ನೋಡದೇ ಹೋದರಲ್ಲ ಎಂಬ ಕೊರಗು ನಮ್ಮದು.

ಗೌಡರು ಬದುಕಿದಂತೆ ಬರೆದವರು ಮತ್ತು ಬರೆದಂತೆ ಬದುಕಿದವರು. ಅವರು ಗತ್ತಿನ ಮನುಷ್ಯನೆ! ಎತ್ತರದ ನಿಲುವು, ಖಾದಿ ಜುಬ್ಬ, ಖಾದಿ ಪೈಜಾಮ, ಖಾದಿ ಗ್ರಾಮೋದ್ಯಗದ, ಮೆಟ್ಟು ಕನ್ನಡಕ, ಬಿಳಿ ತಲೆ. ಕಂಡವರಿಗೆ ಗೌರವ ಭಾವನೆ ಮೂಡುತ್ತಿತ್ತು. ಅವರಿನ್ನು ಸಂಜೆ ನಮ್ಮಲ್ಲಿಗೆ ಬರುವಿದಿಲ್ಲ. ಅವರ ಹೊಸಳ್ಳಿ ಮಣ್ಣಿಗೆ ಮರಳಿದರು.

ನಾನು 2016 ಮತ್ತು 2017ರಲ್ಲಿ ಪಂಪನ ಕುರಿತ ಅಧ್ಯಯನಕ್ಕೆ ತೊಡಗಿಕೊಂಡಿದ್ದೆ. ಅವರು ಪ್ರತಿ ಸಂಜೆ ಬಂದು ‘ಎಲ್ಲಿಗೆ ಬಂದ ನಿಮ್ಮ ಪಂಪ?’ ಎಂದು ಕೇಳುತ್ತಿದ್ದ ಚಿತ್ರ ಕಣ್ಣಿಗೆ ಕುಟ್ಟುತ್ತಿದೆ. ಎಷ್ಟೊಂದು ವಿಷಯಗಳನ್ನು ನಾನು ಕೇಳುತ್ತಿದ್ದೆ. ಅವರೂ ಕೇಳುತ್ತಿದ್ದರು. ಒಮ್ಮೊಮ್ಮೆ ಪೋನ್ ಬಂದ ಕೂಡಲೆ ಹೇಳದೆ ಕೇಳದೆ ದಾರಿ ಹೋಕರಂತೆ ನಡೆದೆ ಬಿಡುತ್ತಿದ್ದರು. ನಾನು ಎಚ್ಚೆತ್ತುಕೊಂಡು ಹಿಂದೆ ಹೋಗಿ ಅವರ ಮನೆವರೆಗೂ ಬಿಟ್ಟುಬರುತ್ತಿದ್ದೆ. ಇದು ಹತ್ತಾರು ವರ್ಷಗಳ ನಿತ್ಯನಡೆ. ಜನ್ಮಾಂತರ ಬಂಧುವಿನಂತಿದ್ದ ಅವರು ಈಗ ಗಕ್ಕನೆ ಆಟನಿಲ್ಲಿಸಿ ಹೊರಟೇ ಬಿಟ್ಟರು. ಸದ್ಯ ಕೊರೊನಾ ಮಾರಿ ಮನುಕುಲವನ್ನು ನೆಕ್ಕಿ ಮುಕ್ಕುವುದನ್ನ ನೋಡಲಾರದೆ ಹೋದರೆ? ಈ ಬ್ರಹ್ಮಾಂಡ ಮಾರಿಯ ಕೈಯಿಂದ ಜಾರಿ ತಪ್ಪಿಸಿಕೊಂಡರು.

ತೊಂಡು ಮೇಯುವ ದನದಂತೆ ಗೌಡರ ಓದು. ಒಮ್ಮೊಮ್ಮೆ ಗಾತ್ರದ ಪುಸ್ತಕ ಯಾವುದಾದರೂ ಇದ್ದರೆ ನಾನು ಗೌಡರಿಗೆ ಓದಲು ಕೊಡುತ್ತಿದ್ದೆ. ಅವರು 2-3 ದಿನದಲ್ಲೆ ಓದಿಬಿಡುತ್ತಿದ್ದರು. ನಾನು ಅದರ ಬಗ್ಗೆ ಹಾಗೇ ಏನಾದ್ರೂ ಬರೀರಿ ಸಾರ್ ಎನ್ನುತ್ತಿದ್ದೆ. ಹಾಗಾಗಿ ಅವರು ಬರೆಯಲು ಆರಂಭಿಸಿದರು. ಉದಾ. ತುರುಣ ತೇಜಪಾಲರ ಕಾಮರಸಾಯನ, ತೆಹಮಿನಾ ದರ‍್ರಾನಿ ಅವರ ಆರನೆಯ ಹೆಂಡತಿ ಮತ್ತು ಪೀಠಾಧಿಪತಿಯ ಪತ್ನಿ, ಡಿ.ಕೆ ಚೌಟರ ಅರ್ಧ ಸತ್ಯ, ಮಹಮದ್ ಕುಯ್ಞಿ ಅವರ ದೇವರ ಓದು. ಇದಕ್ಕೆ ಪ್ರಶಸ್ತಿ ಬಂದಾಗ ಅದರ ಬಗ್ಗೆ ಚಂಪಾ ಫೋನ್ ಮಾಡಿ ರಾಜೇಗೌಡರು ಬರೆದಿದ್ದ ಆ ಪುಸ್ತಕ ಪರಿಚಯದ ಲೇಖನ ಪ್ರಕಟಿಸಿದರು. ಗೌಡರು ಆಗಾಗ ತಮ್ಮ ಹಳ್ಳಿಗೆ ಹೋಗಿಬರುತ್ತಿದ್ದರು. ಆಗ ಸಂಗತಕ್ಕೆ ಒಂದು ಲೇಖನ ಬರೆದು ಬಿಡುತ್ತಿದ್ದರು. ರೈತರ ಬವಣೆ, ಮಲೆನಾಡಿಗೆ ಅದವಿನಾಶ, ಅತಿಯೃಷ್ಟಿ ಅನಾವೃಷ್ಟಿ, ಆಳುಕಾಳುಗಳ ಮೈಗಳ್ಳತನ ಸರ್ಕಾರದ ಸವಲತ್ತುಗಳು ಪೊಲಾಗುವ ಬಗೆ ನಿಯತ್ತಿಲ್ಲದ ಜನ ಹೀಗೆ ನೂರೆಂಟು ವಿಷಯಗಳು. ‘ಸಂಗತ’ ಅಕಾಡೆಮಿ ಅಧ್ಯಕ್ಷರೆ ಎಂದು ನಾನು ತಮಾಷೆ ಮಾಡುತ್ತಿದ್ದರೆ, ಕೂತ ಪೆಟ್ಟಿಗೆ ಬರೆದು ಬಿಟ್ಟೆ ‘ಹೇಗಿದೆ?’ ಎಂದವರು, ‘ಏನು ಬರೆದು ಏನು ಪ್ರಯೋಜನ, ಯಾರು ಕೇಳ್ತಾರೆ ನಮ್ಮ ಮಾತು? ಅಂಥಾ ಗಾಂಧಿಯನ್ನೇ ಮರೆತ ಜನ ನಾವು’ ಎಂದವರು, ‘ಅಂತೂ ನಮ್ಮ ಸಮಾಧಾನಕ್ಕೆ ಬರೆದುಕೊಳ್ಳಬೇಕು’ ಎಂದು ಮಾತು ಮುಗಿಸುತ್ತಿದ್ದರು. ಗೌಡರಿಗೆ ಮಾತು ಬೇಕಾಗಿತ್ತು ಅಪ್ಪಟ ಊರ ಗೌಡರಂತೆ ಅವರು. ಮಲೆನಾಡಿನ ಒಂದು ತುಣುಕಿನಂತಿರುವ ತೊಟ್ಟಿಮನೆ ಅವರದು.
2018ರಲ್ಲಿ ನನ್ನ ಪಂಪಭಾರತ: ಒಂದು ಅಧ್ಯನ (1600 ಪುಟ) ಬರುವ ಹೊತ್ತಿಗೆ ಅವರಿಗೆ ಉದರ ಸಂಬAಧಿ ಆಪರೇಷನ್ ಆಗಿತ್ತು. ತೋರಿಸಲು ಹೋಗಿಕೊಟ್ಟೆ. ಅದನ್ನು ಎದೆಮೇಲಿಟ್ಟುಕೊಂಡೆ ಓದಿ, ಒಂದು ವಾರದಲ್ಲಿ ಅದರ ಬಗ್ಗೆ ಪರಿಚಯದ ನುಡಿಯನ್ನು ಬರೆದು ಕೊಟ್ಟರು. ದೇಶ ಸುತ್ತುವುದು ಕೋಶ ಓದುವುದು ಪ್ರಿಯ ಬಾಷಿತ ಮಾಡುವುದು ಅವರಿಗೆ ಇಷ್ಟವಾಗಿತ್ತು. ಮೈಲಿಗಲ್ಲನ್ನೂ ಮಾತಾಡಿಸುವ ಛಾತಿಯುಳ್ಳವರು. ಅಂತವರು ಇಷ್ಟು ಬೇಗ ಮಾತು ನಿಲ್ಲಿಸಿ ಹೋಗುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ‘ಅನುಗಾಲ ಒಡನಿದ್ದು ನನಗೊಂದು ಮಾತು ಹೇಳದೆ ಹೋದೆ ಹಂಸಾ’ ಎಂಬಂತೆ.

ರಾಜೇಗೌಡರು ಕೊನೆ ಕೊನೆಗೆ ತನ್ನ ಸಹಾಯಕ ಹುಡುಗನೊಂದಿಗೆ ನಮ್ಮ ಮನೆವರೆಗೂ ಬಂದು ಕೂಳಿತೋ ಮಲಗಿಯೋ ಎರಡು ಮಾತಾಡಿ ಹೋಗುತ್ತಿದ್ದರು. ಈ ಮೊದಲೆ ಅವರ ತಂಗಿ ನನಗೆ ಹೇಳಿದ್ದರು ‘ಅಣ್ಣ, ನಿಮಗೆ ಒಳ್ಳೆ ಕಂಪನಿ ಅಗುತ್ತಾರೆ’ ಅದು ನಿಜವಾಯಿತು ಕೂಡ. ಆದರೆ ನನಗಿಂತ ಕಿರಿಯರು ಅವರು ಹಿರಿಯರನ್ನು ಬಿಟ್ಟು ಹೋಗಿ ‘ಕ್ರಮ ವಿಪರ್ಯಯ’ ಮಾಡಿಬಿಟ್ಟರು. ಬಹುಶಃ ಕೊರೊನಾ ವೈರಾಣಿಯ ಕ್ವಾರೆಂಟೈನ್ ವಾಸಕ್ಕೆ ಹೆದರಿ ದೇಹ ಕಳಚಿಟ್ಟು ವಿದೇಹಿಯಾಗಿ ತಿರುಗಲು ಹೊರಟು ಹೋದರೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...