Homeಮುಖಪುಟವಿಶ್ವ ಭಾರತಿ ಕೇಂದ್ರೀಯ ವಿವಿಯ ಉದ್ದೇಶ ಅರ್ಥವಾಗುತ್ತಿಲ್ಲ: ಪ್ಲಾಟ್ ವಿವಾದಕ್ಕೆ ಅಮರ್ತ್ಯ ಸೇನ್‌ ಪ್ರತಿಕ್ರಿಯೆ

ವಿಶ್ವ ಭಾರತಿ ಕೇಂದ್ರೀಯ ವಿವಿಯ ಉದ್ದೇಶ ಅರ್ಥವಾಗುತ್ತಿಲ್ಲ: ಪ್ಲಾಟ್ ವಿವಾದಕ್ಕೆ ಅಮರ್ತ್ಯ ಸೇನ್‌ ಪ್ರತಿಕ್ರಿಯೆ

- Advertisement -
- Advertisement -

ಮೋದಿ ಸರ್ಕಾರದ ಟೀಕಾಕಾರರೂ ಹಾಗೂ ನೊಬೆಲ್‌ ಪ್ರಶಸ್ತಿ ಪುರಸ್ಕೃತರು ಆದ ಅಮರ್ತ್ಯ ಸೇನ್‌, “ವಿಶ್ವಭಾರತಿ ಕೇಂದ್ರೀಯ ವಿವಿಯ ಕ್ಯಾಂಪಸ್‌ನಲ್ಲಿ ಪ್ಲಾಟ್ ಒತ್ತುವರಿ ಮಾಡಿಕೊಂಡಿದ್ದಾರೆ” ಎಂದು ವಿವಿಯ ಆಡಳಿತ ವರ್ಗ ಆರೋಪಿಸಿದೆ. ಇದರ ಹಿನ್ನೆಲೆಯಲ್ಲಿ ಸೇನ್‌ ಪ್ರತಿಕ್ರಿಯಿಸಿದ್ದು, “ವಿಶ್ವವಿದ್ಯಾನಿಲಯದ ಉದ್ದೇಶವೇ ನನಗೆ ಅರ್ಥವಾಗುತ್ತಿಲ್ಲ. ಕೇಂದ್ರೀಯ ವಿವಿಯು ಏಕಾಏಕಿ ಯಾಕಿಷ್ಟು ಸಕ್ರಿಯವಾಗಿದೆ ಎಂಬುದು ತಿಳಿಯುತ್ತಿಲ್ಲ” ಎಂದಿದ್ದಾರೆ.

ಪ್ಲಾಟ್ ಸಂಬಂಧ ವಿಶ್ವವಿದ್ಯಾನಿಲಯದಿಂದ ಪತ್ರ ಬಂದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ಅವರು, “ಈ ಕ್ರಮದ ಹಿಂದಿನ ರಾಜಕೀಯ ನನಗೆ ಅರ್ಥವಾಗುತ್ತಿಲ್ಲ. ಶಾಂತಿನಿಕೇತನ ಕ್ಯಾಂಪಸ್‌ನಲ್ಲಿ ಹೊಂದಿರುವ ಹೆಚ್ಚಿನ ಭೂಮಿಯನ್ನು ನಮ್ಮ ತಂದೆ ಖರೀದಿಸಿದ್ದರು. ಇತರ ಕೆಲವು ಪ್ಲಾಟ್‌ಗಳನ್ನು ಗುತ್ತಿಗೆಗೆ ತೆಗೆದುಕೊಳ್ಳಲಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಇದು 1940ರ ದಶಕದಲ್ಲಿ ವಿಶ್ವಭಾರತಿಯಿಂದ ಗುತ್ತಿಗೆ ಪಡೆದ ಭೂಮಿಯಲ್ಲಿ ನಿರ್ಮಿಸಲಾದ ನನ್ನ ನಿವಾಸವಾಗಿದೆ. ಭೂಮಿಯನ್ನು 100 ವರ್ಷಗಳ ಕಾಲ ನಮಗೆ ಗುತ್ತಿಗೆಗೆ ನೀಡಲಾಯಿತು. ಕೆಲವು ಭೂಮಿಯನ್ನು ನನ್ನ ತಂದೆ ಮಾರುಕಟ್ಟೆಯಿಂದ ಎಲ್ಲಾ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಿ ಖರೀದಿಸಿದರು” ಎಂದು ಹೇಳಿದ್ದಾರೆ.

“ಈ ವಿಷಯದಲ್ಲಿ ನನ್ನ ಸಮಯವನ್ನು ವ್ಯರ್ಥ ಮಾಡಲು ನನಗೆ ಯಾವುದೇ ಕಾರಣವಿಲ್ಲ. ವಿಶ್ವಭಾರತಿ ಏಕಾಏಕಿ ನನ್ನನ್ನು ಓಡಿಸುವ ಪ್ರಯತ್ನದಲ್ಲಿ ಏಕೆ ಸಕ್ರಿಯವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ” ಎಂದು ಪ್ರಸ್ತುತ ಶಾಂತಿನಿಕೇತನದಲ್ಲಿರುವ ಸೇನ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವವಿದ್ಯಾನಿಲಯವು ಶುಕ್ರವಾರ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರಿಗೆ ಪತ್ರ ಬರೆದಿದ್ದು, ಬಿರ್ಭುಮ್ ಜಿಲ್ಲೆಯ ಶಾಂತಿನಿಕೇತನದಲ್ಲಿ ಆಕ್ರಮಿಸಿಕೊಂಡಿದ್ದಾರೆ ಎನ್ನಲಾದ ಪ್ಲಾಟ್‌ನ ಭಾಗಗಳನ್ನು ತಕ್ಷಣವೇ ಹಸ್ತಾಂತರಿಸಬೇಕು ಎಂದು ಸೂಚಿಸಿತ್ತು.

“ನೀವು 1.38 ಎಕರೆ ಭೂಮಿಯನ್ನು ಹೊಂದಿದ್ದೀರಿ. ಆದರೆ ಕಾನೂನಾತ್ಮಕವಾಗಿ 1.25 ಎಕರೆಗಿಂತ ಭೂಮಿ ಹೆಚ್ಚಿದೆ” ಎಂದು ವಿಶ್ವವಿದ್ಯಾಲಯದ ಆಡಳಿತವು ಸೇನ್‌ಗೆ ಬರೆದ ಪತ್ರದಲ್ಲಿ ತಿಳಿಸಿತ್ತು.

ಕಳೆದ ಮೂರು ದಿನಗಳಲ್ಲಿ ಭೂಮಿಗೆ ಸಂಬಂಧಿಸಿದಂತೆ ಸೇನ್ ಅವರಿಗೆ ವಿಶ್ವವಿದ್ಯಾಲಯ ಬರೆಯುತ್ತಿರುವ ಎರಡನೇ ಪತ್ರ ಇದಾಗಿದೆ. ಮಂಗಳವಾರ, ವಿಶ್ವ ಭಾರತಿ ವಿಶ್ವವಿದ್ಯಾಲಯವು ಸೇನ್ ಅವರಿಗೆ ನೋಟಿಸ್ ನೀಡಿದ್ದು, ಈ ಜಾಗವು ಅವರ ಕುಟುಂಬ ಒಡೆತನದ ಎಸ್ಟೇಟ್ ಭಾಗವಲ್ಲ ಎಂದು ಹೇಳಿ ಭೂಮಿಯನ್ನು ಹಿಂದಿರುಗಿಸುವಂತೆ ಸೂಚಿಸಿತ್ತು.

ಸಾರ್ವಜನಿಕ ಕೇಂದ್ರೀಯ ವಿಶ್ವವಿದ್ಯಾನಿಲಯವಾದ ವಿಶ್ವ ಭಾರತಿ ತನ್ನ ಆವರಣದೊಳಗೆ ಅಕ್ರಮ ಪ್ಲಾಟ್ ಹೊಂದಿರುವವರ ಪಟ್ಟಿ ಮಾಡಿತ್ತು. ಅದರಲ್ಲಿ ಸೇನ್ ಹೆಸರಿಸಿತ್ತು. ನೊಬೆಲ್ ಪ್ರಶಸ್ತಿ ವಿಜೇತ ಸೇನ್‌ ಶಾಂತಿನಿಕೇತನದಲ್ಲಿ ತಮ್ಮ ಕುಟುಂಬದ ಮನೆಯನ್ನು ಹೊಂದಿದ್ದಾರೆ, ಇದನ್ನು ಅವರ ಅಜ್ಜ ಮತ್ತು ಸಂಸ್ಕೃತ ವಿದ್ವಾಂಸರಾದ ಕ್ಷಿತಿಮೋಹನ್ ಸೇನ್ ಅವರು ಕಟ್ಟಿದ್ದಾಗಿದೆ. ಈ ಪಟ್ಟಿಯು ಸೇನ್ ಅವರ ಮನೆಯಾದ ‘ಪ್ರತಿಚಿ’ ಹೆಸರನ್ನು ಒಳಗೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹಲವಾರು ನೀತಿಗಳ ಬಗ್ಗೆ ಸೇನ್ ಅವರು ತಮ್ಮ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಜನವರಿ 15ರಂದು ಪ್ರತಿಕ್ರಿಯಿಸಿದ್ದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದರಿಂದ ದೇಶದಲ್ಲಿ ಅಲ್ಪಸಂಖ್ಯಾತರ ಪಾತ್ರವನ್ನು ಕಡಿಮೆ ಮಾಡಲಾಗುತ್ತದೆ ಮತ್ತು ಬಹುಸಂಖ್ಯಾತ ಶಕ್ತಿಗಳನ್ನು ಪ್ರೋತ್ಸಾಹಿಸಲಾಗುತ್ತದೆ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read