ಮೋದಿ ಸರ್ಕಾರ ತನ್ನ ಪ್ರಜೆಗಳ ಮೇಲೆ ಸಮರ ಸಾರಿದೆ. ಸರ್ಕಾರದ ಧೋರಣೆಯನ್ನು ಒಪ್ಪದ ನಾಗರಿಕರು ಸರ್ಕಾರವನ್ನು ಟೀಕೆ ಮಾಡಿದರೆ ಅವರ ಮೇಲೆ ದೇಶದ್ರೋಹದ ಆಪಾದನೆ ಹೊರಿಸಿ ಬಂಧನದಲ್ಲಿಡಲಾಗುತ್ತಿದೆ. ತನ್ನ ಧೋರಣೆಯನ್ನು ಒಪ್ಪದವರ ಮೇಲೆ, ರಾಜಕೀಯ ವಿರೋಧಿಗಳ ಮೇಲೆ, ಸ್ವತಂತ್ರ ಧೋರಣೆಯ ಪತ್ರಕರ್ತರು, ಬರಹಗಾರರು, ಕಾಲೇಜು ಅಧ್ಯಾಪಕರುಗಳ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸುವುದರಿಂದ ಹಿಡಿದು, ದಸ್ತಗಿರಿ ಮಾಡುವುದು ಅವರ ವಿರುದ್ಧ ಖಟ್ಳೆ ಹೂಡುವುದು ಇವನ್ನೆಲ್ಲಾ ಸರ್ಕಾರ ಮಾಡುತ್ತಿದ್ದು ತನ್ನ ಧೋರಣೆಯನ್ನು ಎತ್ತಿ ಹಿಡಿಯುವ, ಹಾಡಿಹೊಗಳುವವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ರಾಜದ್ರೋಹದ ಕಾನೂನು ಬ್ರಿಟಿಷರು ಸ್ವಾತಂತ್ರ್ಯ ಬಯಸುವವರನ್ನು ಬಗ್ಗುಬಡಿಯಲು ಬಳಸುತ್ತಿದ್ದ ದುರ್ಬಳಕೆಯ ಆಯುಧ. ಈ ಕಾನೂನನ್ನು ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಮನಸೋಇಚ್ಛೆ ಬಳಸುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ಈ ಉಗ್ರ ಕಾಯಿದೆಯನ್ನು ತೆಗೆದುಹಾಕಿದ್ದರೂ ಭಾರತದಲ್ಲಿ ಈ ಅನ್ಯಾಯದ ಕಾಯ್ದೆಯನ್ನು ಜೀವಂತ ಇಟ್ಟು, ಮೋದಿ ಸರ್ಕಾರದಂತಹ ಸರ್ಕಾರಗಳು ಅದನ್ನು ದುರ್ಬಳಕೆ ಮಾಡುತ್ತಿವೆ.

ಗಾಂಧೀಜಿಯವರ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ನ್ಯಾಯಾಲಯದ ಮುಂದೆ ನಿಲ್ಲಿಸಲಾಗಿತ್ತು. “ನೀವು ರಾಜದ್ರೋಹ ಮಾಡಿದ್ದೀರಿ ಎಂದು ಸರ್ಕಾರ ಖಟ್ಳೆ ಹಾಕಿದೆ, ಇದನ್ನು ನೀವು ಅಲ್ಲೆಗಳೆಯುತ್ತೀರಾ” ಎಂದು ಕೇಳಿದಾಗ, ಗಾಂಧೀಜಿ ಹೌದು ನಾನು ರಾಜದ್ರೋಹ ಕೆಲಸ ಮಾಡಿದ್ದೇನೆ, ಬ್ರಿಟಿಷರು ಭಾರತ ಬಿಟ್ಟು ತೊಲಗುವವರೆಗೆ ರಾಜದ್ರೋಹ ಭಾಷಣ ಮಾಡುತ್ತಲೇ ಇರುತ್ತೇನೆ ಎಂದು ಉತ್ತರಿಸಿದರು. ನ್ಯಾಯಾಧೀಶರು ಇದು ನಿಮ್ಮ ನಿಲುವಾಗಿದ್ದರೆ, ಪ್ರಚಲಿತ ರಾಜದ್ರೋಹ ಕಾನೂನಿಗನುಸಾರ ನಿಮಗೆ 6 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದೇನೆ ಎಂದರು. ಈ ಮೊದಲೇ ರಾಜದ್ರೋಹ ಆರೋಪದ ಮೇಲೆ 6 ವರ್ಷಗಳ ಕಠಿಣ ಶಿಕ್ಷೆಗೆ ಒಳಗಾಗಿರುವ ಗೌರವಾನ್ವಿತ ಬಾಲಗಂಗಾಧರ ತಿಲಕ್‌ರವರಿಗೆ ಕೊಟ್ಟಿರುವಷ್ಟು ಶಿಕ್ಷೆಯನ್ನು ನನಗೂ ವಿಧಿಸಿ ನನ್ನನ್ನು ಅವರ ಮಟ್ಟಕ್ಕೆ ಏರಿಸಿದ್ದೀರಿ ಅದಕ್ಕಾಗಿ ನಿಮಗೆ ವಂದನೆಗಳು ಎಂದರು ಗಾಂಧೀಜಿ.

ದೇಶದ್ರೋಹ

ಅಂದಿನ ಬ್ರಿಟಿಷ್ ಸರ್ಕಾರ ತನ್ನ ಮೇಲೆ ಯಾವುದೇ ಭಿನ್ನಾಭಿಪ್ರಾಯ ಸೂಚಿಸಿದರೂ ಅದನ್ನು ರಾಜದ್ರೋಹ ಎಂದು ಭಾವಿಸುತ್ತಿತ್ತು. ಪ್ರತಿರೋಧ ತೋರಿಸುವ ಯಾವುದೇ ಕಾರ್ಯಕ್ರಮವನ್ನು ರಾಜದ್ರೋಹ ಎಂದು ಭಾವಿಸುತ್ತಿತ್ತು. ಸರ್ಕಾರದ ನೀತಿಯನ್ನು ಖಂಡಿಸಿ ಸಭೆ ನಡೆಸುವುದು ಅಥವಾ ಮೆರವಣಿಗೆ ತೆರಳುವುದು ರಾಜದ್ರೋಹದ ಕೆಲಸ ಎಂದು ಬ್ರಿಟಿಷ್ ಸರ್ಕಾರ ಭಾವಿಸುತ್ತಿತ್ತು. ಸರ್ಕಾರದ ಬಗೆಗೆ ಕೋಪ-ದ್ವೇಷ ಮೂಡಿಸುವುದೂ ರಾಜದ್ರೋಹವೆನಿಸಿತ್ತು. ಈ ಕಾನೂನನ್ನೇ ಬ್ರಿಟಿಷರು ಬಾಲಗಂಗಾಧರ ತಿಲಕ್, ಅನಿಬೆಸೆಂಟ್, ಮೌಲಾನ ಅಬ್ದುಲ್ ಕಲಾಂ ಅಜಾದ್, ಅಲಿ ಸಹೋದರರು ಈ ಎಲ್ಲರ ಮೇಲೆ ಹೇರಿತ್ತು. ಮುಕ್ತ ವಾಕ್ ಸ್ವಾತಂತ್ರ್ಯದ ಹಕ್ಕನ್ನು ಕಸಿಯಲು ಸರ್ಕಾರ ತೊಡಗುವುದು ಪ್ರಜೆಯ ಮೂಲಭೂತ ಹಕ್ಕನ್ನು ಕಸಿದಂತೆ. ಈ ಬರ್ಬರ ರಾಜದ್ರೋಹ ಕಾನೂನು ನಮ್ಮ ರಾಜ್ಯಾಂಗದ ಆಶಯಗಳಿಗೆ ಕಂಟಕಪ್ರಾಯ.

ರಾಜ್ಯಾಂಗ ಸಭೆಯಲ್ಲಿ ಕೆ.ಎಂ ಮುನ್ಷಿಯವರು, ರಾಜ್ಯಾಂಗದಲ್ಲಿ ನುಸುಳಿದ ರಾಜದ್ರ್ರೋಹದ ಕಲಂ ಅನ್ನು ಕೈಬಿಡಬೇಕೆಂದು ತಿದ್ದುಪಡಿ ಸೂಚಿಸಿದರು. ಈ ತಿದ್ದುಪಡಿಗೆ ಅನುಮೋದನೆ ದೊರೆಯಿತಾದರೂ, ದೇಶದ ಭದ್ರತೆ ಮತ್ತು ಅಖಂಡತೆಯನ್ನು ಕಾಪಾಡುವ ದೃಷ್ಟಿಯಿಂದ ಕೆಲವು ಕ್ಲಾಸ್‌ಗಳನ್ನು ಉಳಿಸಿಕೊಳ್ಳಲಾಯಿತು. ಹೀಗಾಗಿ ರಾಜದ್ರೋಹದ ಕಾನೂನು ಕೆಲವು ಬದಲಾವಣೆಗಳೊಂದಿಗೆ ಹಾಗೇ ಉಳಿದುಹೋಯಿತು.

ರಾಜದ್ರೋಹ ಕಾನೂನಿನ ದುರ್ಬಳಕೆಯಿಂದ ಅನೇಕರ ಜೀವನ ಹಾಳಾಯಿತು. ರಾಜದ್ರೋಹ ಆಪಾದನೆಯಲ್ಲಿ ವಿಚಾರಣೆಯಾಗುತ್ತಿದ್ದು, 2019ನೆ ಇಸವಿಯಲ್ಲಿ ಬಾಕಿ ಇದ್ದ ಕೇಸುಗಳ ಶೇ 9ರಷ್ಟರಲ್ಲಿ ಖಟ್ಳೆಗಳನ್ನು ಕೈಬಿಡಲಾಯಿತು. ಕಾರಣ: ಸಾಕ್ಷ್ಯಾಧಾರಗಳ ಕೊರತೆ ಅಥವಾ ತಪ್ಪಿತಸ್ಥರ ಪರಾರಿಯಾಗಿದ್ದರಿಂದ! 2014ರ ನಂತರ ಸರ್ಕಾರ ನಡೆಸುವವರನ್ನು ಟೀಕೆ ಮಾಡಿದ್ದಕ್ಕಾಗಿ, ಮೋದಿ ಮುಂತಾದ ನಾಯಕರನ್ನು ಟೀಕೆ ಮಾಡಿದ್ದಕ್ಕಾಗಿ ನೂರಾರು ಜನರ ಮೇಲೆ ಕೇಸು ದಾಖಲಾಗಿವೆ.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ರಾಜದ್ರೋಹ ಆಪಾದನೆ ಹೊರೆಸುವುದರಲ್ಲಿ ಬಹಳ ಮುಂದಿದ್ದಾರೆ. ಕಳೆದ 4 ವರ್ಷಗಳಲ್ಲಿ ನಾಗರಿಕ (ತಿದ್ದುಪಡಿಯಾದ 2019) ಮಸೂದೆ ವಿರುದ್ಧ ಸೊಲ್ಲೆತ್ತಿದ 90 ಜನರ ಮೇಲೆ ರಾಜದ್ರೋಹ ಆಪಾದನೆ ಖಟ್ಳೆ ಹಾಕಿದ್ದಾರೆ. ಕಾರಣವಿಲ್ಲದೆ ಅವರ ಬಾಯಿ ಮುಚ್ಚಿಸಲು ರಾಜದ್ರೋಹ ಆಪಾದನೆಯನ್ನು ಅವರ ಮೇಲೆ ಹೊರಿಸಲಾಗಿದೆ.

ಸರ್ಕಾರಗಳು ಅನೇಕರ ಮೇಲೆ ರಾಜದ್ರೋಹ ಆಪಾದನೆ ಹೊರಿಸಿ ಸೆರೆಮನೆಗೆ ಕಳುಹಿಸುತ್ತಿರುವುದನ್ನು ಸರ್ವೋಚ್ಚ ನ್ಯಾಯಾಲಯ ಪ್ರಶ್ನಿಸಿದೆ. ದೇಶದ ಇತರ ಭಾಗಗಳಲ್ಲಿರುವ ಅಧೀನ ನ್ಯಾಯಾಲಯಗಳು ರಾಜದ್ರೋಹ ಹೇರುತ್ತಿರುವ ಸರ್ಕಾರದ ಆತುರದ ಕ್ರಮಗಳನ್ನು ಪ್ರಶ್ನಿಸಲು ತೊಡಗಿವೆ. ಅಪಾಯಕಾರಿ ಐಡಿಯಾಲಜಿಗಳು ಭಾರತದ ಐಕ್ಯತೆ ಮತ್ತು ಸಾರ್ವಭೌಮತ್ವವನ್ನು ಅಲ್ಲಗಳೆಯುತ್ತಿವೆ ಎಂದು ಮೋದಿ ಹರಿಹಾಯ್ದಿದ್ದಾರೆ. ಈ ಬಗೆಯ ಹೇಳಿಕೆ ಕೊಡುವ ಬದಲು ಮೋದಿಯವರು ತಮ್ಮ ಗೆಯ್ಮೆ ಸರಿಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು.


ಇದನ್ನೂ ಓದಿ: ಸರ್ಕಾರದಿಂದ ದೇಶದ್ರೋಹ ಕಾನೂನು ದುರುಪಯೋಗ, ಅದನ್ನು ರದ್ದುಗೊಳಿಸಬೇಕು : ನಿವೃತ್ತ ಸುಪ್ರೀಂ ನ್ಯಾಯಾಧೀಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಎಚ್.ಎಸ್ ದೊರೆಸ್ವಾಮಿ
+ posts

LEAVE A REPLY

Please enter your comment!
Please enter your name here