Homeಅಂಕಣಗಳುಮೋದಿ ಆಡಳಿತಕ್ಕೆ ಆರು ವರ್ಷ : ಸೂತಕದ ಮನೆಯಲ್ಲಿ ಸಂಭ್ರಮ

ಮೋದಿ ಆಡಳಿತಕ್ಕೆ ಆರು ವರ್ಷ : ಸೂತಕದ ಮನೆಯಲ್ಲಿ ಸಂಭ್ರಮ

- Advertisement -
- Advertisement -

ಈ ಸಂಚಿಕೆಯನ್ನು ನಾವು ಅಂತಿಮಗೊಳಿಸುತ್ತಿರುವ ಹೊತ್ತಿನಲ್ಲಿ ಯಡಿಯೂರಪ್ಪನವರು ಯಲಹಂಕ ಫ್ಲೈಓವರ್‌ಗೆ ಮರುನಾಮಕರಣ ಮಾಡಲು ಸಿದ್ಧರಾಗುತ್ತಿರುವ ಸುದ್ದಿ ಬಂದಿದೆ. ಅದೇ ಸಮಯದಲ್ಲಿ ದೆಹಲಿಯ ಸಿಂಹಾಸನದಲ್ಲಿ ಕುಳಿತಿರುವವರು ಎರಡನೆ ಸಾರಿ ಪಟ್ಟಾಭಿಷಕ್ತರಾಗಿ ಒಂದು ವರ್ಷ ಕಳೆಯುತ್ತಿದ್ದು, ಒಟ್ಟು ಆರು ವರ್ಷಗಳ ಸಂಭ್ರಮಕ್ಕೆ ಛೇ ಸಾಲ್ ಬೇಮಿಸಾಲ್ ಎಂಬ ಘೋಷಣೆ, ಹ್ಯಾಷ್‍ಟ್ಯಾಗ್‍ಅನ್ನು ಅಂತಿಮಗೊಳಿಸುತ್ತಿದ್ದಾರೆಂದು ಹೇಳಲಾಗಿದೆ.

ಇಲ್ಲೇ ಕರ್ನಾಟಕದಲ್ಲಿ ಜಾರ್ಖಂಡ್‍ನಿಂದ ಇಲ್ಲಿಗೆ ‘ಬಂದಿರುವ’ ಇಬ್ಬರು ವಲಸೆ ಕಾರ್ಮಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೆಂದು ನೆರವು ನೀಡಲು ಹೋದ ಜನಶಕ್ತಿ ಮತ್ತು ಸ್ವಾನ್ ಕಾರ್ಯಕರ್ತರಿಗೆ ಅದು ‘ಅತ್ಯಾಚಾರ, ಮಾನವ ಕಳ್ಳಸಾಗಾಣಿಕೆ, ಅಕ್ರಮ ಬಂಧನ ಹಾಗೂ ಜೀತದ ದುಡಿಮೆ’ಯ ಪ್ರಕರಣವೆಂದು ಗೊತ್ತಾಗಿದೆ. ಆ ಮಹಿಳೆಯರಿಗೆ ಅಕಸ್ಮಾತ್ತಾಗಿ ಪರಿಚಯವಾದ್ದರಿಂದ ನೆರವು ನೀಡಲು ಇಲ್ಲೇ ಉಳಿದುಕೊಂಡ ನಿಕೊಲಸ್ ಮುರ್ಮು ಎಂಬ ಸಂತಾಲಿ ಯುವಕ ಈಗ ತಾನೇ ನಮ್ಮ ಕಚೇರಿಗೆ ಬಂದು ಹೋದರು.

ಆ ನಿಕೊಲಸ್ ಮುರ್ಮುವನ್ನು ನಾನೊಂದು ಪ್ರಶ್ನೆ ಕೇಳಿದೆ, ‘ನಿಮಗೆ ಸಿದ್ದು ಮುರ್ಮು ಗೊತ್ತಾ?’. ಆತ ನೀಡಿದ ಉತ್ತರ ನನಗೆ ಅಚ್ಚರಿ ಮೂಡಿಸಿತು. ‘ಅಂಗ್ರೇಜಿಗಳ ವಿರುದ್ಧ ನಮ್ಮ ಸಂತಾಲರು ನಡೆಸಿದ ಸಂಗ್ರಾಮದ ನಾಯಕನಾತ. ನಮಗೆ ಸ್ವಾತಂತ್ರ್ಯ ಬಂದಿತೆಂದು ಹೇಳುತ್ತಾರೆ. ನಮಗಂತೂ ಬಂದಿಲ್ಲ. ಬಂದಿದ್ದರೆ ಹೀಗೇಕಾಗುತ್ತಿತ್ತು?’ ಪಕ್ಕದಲ್ಲೇ ಕೂತಿದ್ದ ಅತ್ಯಾಚಾರವನ್ನು ಎದುರಿಸಿ ಗಟ್ಟಿಯಾಗಿ ನಿಂತಿರುವ ಮಹಿಳೆಯನ್ನು ತೋರಿಸಿ ಹೇಳಿದರು. ಕಳೆದ ನಾಲ್ಕು ದಿನಗಳಿಂದ ಸತತವಾಗಿ ಪೊಲೀಸ್ ಸ್ಟೇಷನ್ನುಗಳನ್ನು ಸುತ್ತುತ್ತಾ ಇದ್ದ ಆಕೆ ತನ್ನನ್ನು ಬಾಧಿಸುತ್ತಿರುವ ಕಿವಿ ನೋವಿಗೆ ಪರಿಹಾರ ಕೇಳಲು ಬಂದಿದ್ದರು.

ಇಂತಹ ನೂರಲ್ಲ, ಸಾವಿರವಲ್ಲ, ಕೋಟಿ ಕಥೆಗಳು ಈ ದೇಶದ ವಲಸೆ ಕಾರ್ಮಿಕರದ್ದಿದೆ ಎಂದು ಕಳೆದ ಒಂದು ತಿಂಗಳಿಂದ ಗೊತ್ತಾಗುತ್ತಿದೆ. ಹಸಿವಿನಿಂದ ರೈಲಿನಲ್ಲೇ ಸತ್ತ ಮಗು, ನಡೆದೂ ನಡೆದೂ ಸತ್ತ ವಯಸ್ಕರು, ಬಹುಶಃ ದಿಕ್ಕೇಡಿಗಳಾಗಿರುವ ವೃದ್ಧರು ಇಂತಹ ಎಷ್ಟೋ ಎಷ್ಟೋ ಕಥೆಗಳು. ಕನಿಷ್ಠ ಸಂವೇದನೆಯಿರುವವರು ಯಾರಾಗಿದ್ದರೂ ಅವರಿಗೆ ನಾವು ಗಾಢ ಸೂತಕದ ಮಧ್ಯೆ ಇದ್ದೇವೆ ಎನಿಸಬೇಕು. ಆದರೆ ಹ್ಯಾಷ್‍ಟ್ಯಾಗ್‍ಗಳನ್ನು ಅಂತಿಮಗೊಳಿಸಿಕೊಂಡು ಸಂಭ್ರಮಿಸಲು ಯತ್ನಿಸುತ್ತಿರುವವರಿಗೆ ಅದು ತಟ್ಟಿದಂತೆ ಕಾಣುತ್ತಿಲ್ಲ.

ಅಂತಹುದೇ ಮನಸ್ಥಿತಿಯ ಭಾಗವಾಗಿ ಕರ್ನಾಟಕದ ಮುಖ್ಯಮಂತ್ರಿಯೂ ಫ್ಲೈಓವರ್ ಮರುನಾಮಕರಣಕ್ಕೆ ಮುಂದಾಗಿದ್ದಾರೆಯೇ? ಅಷ್ಟೇ ಇದ್ದಂತೆ ಕಾಣುತ್ತಿಲ್ಲ. ಸಾವರ್ಕರ್ ಹೆಸರನ್ನು ಇಡುವ ಘೋಷಣೆ ಮಾಡಿದಾಕ್ಷಣ ಅದರ ಬಗ್ಗೆ ಚರ್ಚೆ ಶುರುವಾಗುತ್ತದೆ. ಅಲ್ಲಿಗೆ ಕರ್ನಾಟಕಕ್ಕೆ ಕೇಂದ್ರದಿಂದಾದ ಅನ್ಯಾಯ, ವಲಸೆ ಕಾರ್ಮಿಕರ ಬವಣೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುವುದು ಎಲ್ಲವೂ ಪಕ್ಕಕ್ಕೆ ಸರಿಯುತ್ತದೆ. ಇನ್ನು ಮುಂದೆ ಶ್ರಮಿಕರು ಕೆಲಸವಿಲ್ಲದೇ ಮತ್ತಷ್ಟು ಅಗ್ಗವಾಗುವುದು, ವ್ಯಾಪಾರಸ್ಥರು ವ್ಯಾಪಾರ ಕಡಿಮೆಯಾಗಿ ಕಂಗೆಡುವುದು ಇವ್ಯಾವುವೂ ಚರ್ಚೆಯ ವಿಷಯಗಳಾಗದಿರಬೇಕೆಂದರೆ ಇಂತಹ ವಿವಾದಗಳು ಮೇಲಿಂದ ಮೇಲೆ ಏಳುತ್ತಿರಬೇಕು.

ಹೀಗಿರುವಾಗ ಮಾಧ್ಯಮಗಳು ಆಳುವವರನ್ನು ಪ್ರಶ್ನಿಸುವ ಬದಲು, ತುತ್ತೂರಿಗಳಾಗಲಿವೆ ಎಂಬುದರಲ್ಲಿ ಅನುಮಾನವೇ ಇಲ್ಲ. ಕೇಂದ್ರ ಸರ್ಕಾರ ಮಾಡಿದ ಸರಿಯನ್ನು, ಸರಿಯೆಂದೂ, ತಪ್ಪನ್ನು ತಪ್ಪೆಂದೂ ಹೇಳುವ ಧೈರ್ಯವಾಗಲೀ, ವೃತ್ತಿ ಬದ್ಧತೆಯಾಗಲೀ ಇಲ್ಲವೇ ಇಲ್ಲ. ಹೀಗಾಗಿ ಪತ್ರಿಕೆಯಲ್ಲಿ ಈ ಸಾರಿ ಒಂದು ವರ್ಷದ ಕೇಂದ್ರ ಸರ್ಕಾರದ ಸಾಧನೆಯನ್ನು ಒರೆಗೆ ಹಚ್ಚಲು ಪ್ರಯತ್ನಿಸಲಾಗಿದೆ.

ಹಲವಾರು ತಜ್ಞರನ್ನು ಈ ಕುರಿತ ಲೇಖನಗಳನ್ನು ಬರೆದುಕೊಡಲು ಕೇಳಿದೆವು. ಕೆಲವರಿಗೆ 5 ವರ್ಷಗಳಲ್ಲಿ ನಡೆದದ್ದಕ್ಕೂ ಈ ಒಂದು ವರ್ಷಕ್ಕೂ ವ್ಯತ್ಯಾಸವಿದೆಯೆನಿಸಿದರೆ, ಇನ್ನು ಕೆಲವರಿಗೆ 5 ವರ್ಷಗಳಲ್ಲಿ ಮಾಡಲು ಯತ್ನಿಸಿ ವಿಫಲವಾದದ್ದಕ್ಕೆಲ್ಲಾ ಈಗ ಒಂದು ರೂಪ ಕೊಡುತ್ತಿದ್ದಾರೆ ಎನಿಸಿದೆ. ಆದರೆ, ಕೊರೊನಾ ಬಿಕ್ಕಟ್ಟನ್ನು ಸರ್ಕಾರವು ಜನವಿರೋಧಿ ನೀತಿಗಳನ್ನು ತರಲು ಬಳಸುತ್ತಿದೆ ಎಂಬ ವಿಚಾರದಲ್ಲಿ ಯಾರಿಗೂ ಅನುಮಾನವಿಲ್ಲ. ಉಳಿದೆಲ್ಲಾ ದೇಶಗಳು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಎಂದಿನ ನೀತಿಗಳನ್ನು ಮಾರ್ಪಡಿಸಿಕೊಂಡು ಜನಪರವಾದ ಕೆಲವು ನೀತಿಗಳನ್ನು ಜಾರಿಗೆ ತರಲು ಮುಂದಾಗಿದ್ದರೆ, ಭಾರತವು ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿ ಸಾಗಿದೆ.

ರೈತರು-ಕೃಷಿ ಕ್ಷೇತ್ರ, ಕಾರ್ಮಿಕರು-ಉದ್ದಿಮೆಗಳ ಕ್ಷೇತ, ಪರಿಸರ-ಅರಣ್ಯ ಒಳಗೊಂಡಂತೆ ಎಲ್ಲಾ ಕಡೆ ಒಂದೇ ಹಾಡು. ದೇಶದ ಆಡಳಿತದ ಚುಕ್ಕಾಣಿ ಹಿಡಿದವರಿಗೆ ಇದೊಂದು ರೀತಿಯ ಸಂಭ್ರಮವಿದ್ದಂತೆ ಕಾಣುತ್ತಿದೆ. ಎಲ್ಲವೂ ಸೂತಕದ ಮನೆಯ ಸಂಭ್ರಮವಲ್ಲದೇ ಇನ್ನೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...