Homeಮುಖಪುಟಸಿಎಎ: ಪೌರತ್ವ ಕಾಯ್ದೆ ಏನು ಹೇಳುತ್ತದೆ?

ಸಿಎಎ: ಪೌರತ್ವ ಕಾಯ್ದೆ ಏನು ಹೇಳುತ್ತದೆ?

- Advertisement -
- Advertisement -

ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟ 4 ವರ್ಷಗಳ ಬಳಿಕ ಕೇಂದ್ರ ಸರ್ಕಾರ ನಿನ್ನೆ ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ಜಾರಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಪೌರತ್ವ (ತಿದ್ದುಪಡಿ) ಮಸೂದೆ-2019ನ್ನು ಡಿಸೆಂಬರ್ 11, 2019ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಈ ಮಸೂದೆಯು ಪೌರತ್ವ ಕಾಯ್ದೆ-1955ನ್ನು ತಿದ್ದುಪಡಿ ಮಾಡಿದೆ. ಧರ್ಮಾದ ಆಧಾರದಲ್ಲಿ ವಿದೇಶಿ ಅಕ್ರಮ ವಲಸಿಗರನ್ನು ಭಾರತೀಯ ಪೌರತ್ವಕ್ಕೆ ಅರ್ಹರನ್ನಾಗಿ ಮಾಡಿದ್ದು, ಇದು ವ್ಯಾಪಕವಾದ ವಿರೋಧಕ್ಕೆ ಕಾರಣವಾಗಿತ್ತು.

ಪೌರತ್ವ ಕಾಯಿದೆ, 1955 ಏನು ಹೇಳುತ್ತದೆ?

ಪೌರತ್ವ ಕಾಯಿದೆ, 1955ರ ಪ್ರಕಾರ ಭಾರತದಲ್ಲಿ ಐದು ವಿಧಾನಗಳ ಮೂಲಕ ಪೌರತ್ವವನ್ನು ಪಡೆಯಬಹುದು. ಪೌರತ್ವವನ್ನು ಹುಟ್ಟಿನಿಂದ, ಭಾರತೀಯ ಮೂಲದವರಾಗಿದ್ದು ಹೊರದೇಶಗಳಲ್ಲಿ ನೆಲೆಸಿದ್ದರೆ, ವಿದೇಶದವರಾಗಿದ್ದರೂ ಭಾರತದಲ್ಲಿ ಸರ್ಕಾರಿ ಸೇವೆಯಲ್ಲಿದ್ದರೆ, ಭಾರತ ಮೂಲದವರಾಗಿದ್ದು ಭಾರತದಲ್ಲಿ ಈಗಾಗಲೇ ವಾಸ್ತವ್ಯ ಹೂಡಿದ್ದರೆ ಅಥವಾ ಭಾರತದೊಳಗೆ ಸೇರಿಸಿಕೊಳ್ಳಲಾದ ಅನ್ಯದೇಶದ ಭೂಭಾಗದ ನಿವಾಸಿಯಾಗಿದ್ದರೆ, ಅಸ್ಸಾಂ ಒಪ್ಪಂದಕ್ಕೆ ಸೇರಿದ ಜನರಿಗೆ ಪೌರತ್ವ ಅವಕಾಶವನ್ನು ನೀಡಲಾಗಿತ್ತು, ಈ ಕಾಯಿದೆಯು ವಿದೇಶಿ ಅಕ್ರಮ ವಲಸಿಗರು ಭಾರತೀಯ ಪೌರತ್ವವನ್ನು ಪಡೆದುಕೊಳ್ಳುವುದನ್ನು ನಿಷೇಧಿಸಿದೆ. ಇದಲ್ಲದೆ 1955ರ ಕಾಯ್ದೆಯ ಪ್ರಕಾರ ಪೌರತ್ವವನ್ನು ಪಡೆಯಬೇಕಿದ್ದರೆ ಆತ ಭಾರತದಲ್ಲಿ ಕನಿಷ್ಠ 11ವರ್ಷ ವಾಸಿಸಿರಬೇಕು.

ಪೌರತ್ವ (ತಿದ್ದುಪಡಿ) ಮಸೂದೆ-2019

ಈ ಕಾಯ್ದೆಯಡಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರರು ಅಂದರೆ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಅಥವಾ ಕ್ರಿಶ್ಚಿಯನ್ ಧಾರ್ಮಿಕ ಸಮುದಾಯಗಳಿಗೆ ಸೇರಿದ ಅಕ್ರಮ ವಲಸಿಗರು ಡಿಸೆಂಬರ್ 31, 2014ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಪ್ರವೇಶಿಸಿದರೆ ಅವರಿಗೆ ಪೌರತ್ವವನ್ನು ನೀಡಬಹುದು. ಕಾಯಿದೆಯ ಮೂರನೇ ಶೆಡ್ಯೂಲ್‌ನ ಸೆಕ್ಷನ್ 5 ರ ಅಡಿಯಲ್ಲಿನ ಷರತ್ತುಗಳಿಗೆ ಸಮ್ಮತಿಸಿದರೆ ಒಬ್ಬ ವ್ಯಕ್ತಿಗೆ ನೋಂದಣಿ ಪ್ರಮಾಣಪತ್ರ ನೀಡಬಹುದು. ಇದಲ್ಲದೆ ಆ ವ್ಯಕ್ತಿ ಭಾರತದಲ್ಲಿ ಕಡ್ಡಾಯವಾಗಿ ನೆಲೆಸಿದವನಾಗಿರಬೇಕಾಗಿರುವ ವರ್ಷಗಳ ಸಂಖ್ಯೆಯನ್ನು 11 ವರ್ಷದಿಂದ 5 ವರ್ಷಕ್ಕೆ ಇಳಿಸಲಾಗಿದೆ.

2019ರಲ್ಲಿ ಕೈಗೊಂಡ ತಿದ್ದುಪಡಿಯ ಪ್ರಕಾರ, ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದವರಲ್ಲಿ ನಿರ್ದಿಷ್ಟ ಸಮುದಾಯಗಳಿಗೆ ಸೇರಿದವರಿಗೆ ಮಾತ್ರ ಭಾರತದ ಪೌರತ್ವ ನೀಡಬೇಕು ಎಂಬ ಅಂಶವನ್ನು ಸೇರಿಸಲಾಗಿದೆ. ಈ ಸಮುದಾಯಗಳವರು ತಮ್ಮ ದೇಶಗಳಿಂದ ಭಾರತಕ್ಕೆ ಕಾಲಿಟ್ಟ ದಿನಾಂಕದಿಂದಲೇ ಅವರಿಗೆ ಪೌರತ್ವ ಅನ್ವಯವಾಗುತ್ತದೆ. ಭಾರತದ ಕೆಲವು ಪ್ರಾಂತ್ಯಗಳಿಗೆ ಈ ತಿದ್ದುಪಡಿಯಿಂದ ವಿನಾಯ್ತಿ ನೀಡಲಾಗಿದೆ. 2019ರ ಮಸೂದೆಯಲ್ಲೇ ಅದನ್ನು ಉಲ್ಲೇಖಿಸಲಾಗಿತ್ತು. ಸಂವಿಧಾನದ 6ನೇ ಶೆಡ್ಯೂಲ್ ನಲ್ಲಿರುವ ಮೇಘಾಲಯ, ಮಿಜೋರಂ, ಅಸ್ಸಾಂ, ತ್ರಿಪುರಾದಲ್ಲಿ ವಾಸಿಸುತ್ತಿರುವ ಜನರಿಗೆ ಈ ನಿಯಮ ಅನ್ವಯವಾಗುವುದಿಲ್ಲ. 1883ರ ಬಾಂಗ್ಲಾ ಪೂರ್ವ ಗಡಿ ನಿಯಂತ್ರಣಾ ನಿಯಮಗಳಿಗೆ ಅನುಗುಣವಾಗಿ ರೂಪಿಸಲಾಗಿರುವ ಆಂತರಿಕ ಗಡಿ ರೇಖೆಯೊಳಗೆ ಜೀವಿಸುತ್ತಿರುವ ನಾಗರಿಕರಿಗೆ ಇದು ಅನ್ವಯವಾಗುವುದಿಲ್ಲ.

1955ರ ಭಾರತೀಯ ಪೌರತ್ವ ಕಾಯ್ದೆಯ ಪ್ರಕಾರ, ಸಾಗರೋತ್ತರ ಭಾರತೀಯ ಸಂಜಾತರು (ಓವರ್ ಸೀಸ್ ಸಿಟಿಜೆನ್ಸ್ ಆಫ್ ಇಂಡಿಯಾ – ಓಐಸಿ) ಭಾರತೀಯ ಮೂಲದವರಾಗಿದ್ದರೆ ಅವರು ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿ ಪೌರತ್ವ ಪಡೆಯಬಹುದು. ಅದಲ್ಲದೆ, ಅವರು ಭಾರತೀಯ ಮೂಲದವರನ್ನು ವಿವಾಹವಾಗಿದ್ದರೆ ಅಂಥವರೂ ಸಹ ಭಾರತೀಯ ಪೌರತ್ವಕ್ಕೆ ಅರ್ಹರಾಗಿರುತ್ತಾರೆ. ಅಂಥವರು ಭಾರತಕ್ಕೆ ಬಂದು ನೆಲೆಸಲು, ಇಲ್ಲಿ ಶಿಕ್ಷಣವನ್ನು ಪಡೆಯಲು ಅಥವಾ ಉದ್ಯೋಗಗಳನ್ನು ಮಾಡಲು ಅವಕಾಶವಿರುತ್ತದೆ. ಇಂಥವರಿಗಾಗಿ ಓಐಸಿ ಕಾರ್ಡ್ ಗಳನ್ನು ನೀಡಲಾಗುತ್ತದೆ. 2019ರ ತಿದ್ದುಪಡಿಯಲ್ಲಿ, ಹೀಗೆ, ಸಾಗರೋತ್ತರ ಭಾರತೀಯ ಸಂಜಾತರು, ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದಾಗ ಅಂಥವರ ಓಐಸಿ ಕಾರ್ಡ್ ಗಳನ್ನು ರದ್ದುಗೊಳಿಸುವ ಪರಮಾಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.

ಸಿಎಎ ಜಾರಿಗೊಳಿಸಲು ಪೋರ್ಟಲ್ ಆರಂಭ:

ಸಿಎಎ ಜಾರಿಗೊಳಿಸಲು ಕೇಂದ್ರ ಸರ್ಕಾರ ಪೋರ್ಟಲ್ ಆರಂಭಿಸಿದೆ. ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಮತ್ತು ಪೌರತ್ವ ನೀಡುವ ಪ್ರಕ್ರಿಯೆಯು ಆನ್‌ಲೈನ್ ಮುಖಾಂತರ ನಡೆಯಲಿದೆ. ಅರ್ಜಿದಾರರು ದಾಖಲೆಗಳಿಲ್ಲದೆ ಭಾರತವನ್ನು ಪ್ರವೇಶಿಸಿದ ವರ್ಷವನ್ನು ಅಲ್ಲಿ ನಮೂದಿಸಬೇಕು. ಮೂಲಗಳ ಪ್ರಕಾರ, ಅರ್ಜಿ ಸಲ್ಲಿಸಲು ಬಯಸುವವರಿಗೆ ಯಾವುದೇ ದಾಖಲೆಗಳನ್ನು ಕೇಳಲಾಗುವುದಿಲ್ಲ. ಬಳಿಕ ಗೃಹ ಸಚಿವಾಲಯವು ಅರ್ಜಿಯನ್ನು ಪರಿಶೀಲಿಸಿದ ನಂತರ ಅವರಿಗೆ ಪೌರತ್ವವನ್ನು ನೀಡಲಿದೆ.

2018ರಲ್ಲಿ ಸಿಎಎ ಕಾಯ್ದೆ ವಿರುದ್ಧ ವಿರುದ್ಧ ಭಾರತದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು ಮತ್ತು ಆರು ಧರ್ಮಗಳಿಗೆ ಮಾತ್ರ ಪೌರತ್ವ ಯಾಕೆ ಮತ್ತು ಮುಸ್ಲಿಮರಿಗೆ ಪೌರತ್ವ ಯಾಕಿಲ್ಲ ಎಂದು ಪೌರತ್ವ ಕಾಯ್ದೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿದ್ದವು. ಭಾರತದಲ್ಲಿ ಧರ್ಮದ ಆಧಾರದಲ್ಲಿ ಪೌರತ್ವವನ್ನು ನೀಡವುದು ಸಂವಿಧಾನ ಬಾಹಿರವಾಗಿದೆ. ಇದಲ್ಲದೆ ಅಸ್ಸಾಂನಲ್ಲಿ ಎನ್‌ಆರ್‌ಸಿಯಂತೆ ನಾಗರಿಕರ ನೋಂದಣಿಯನ್ನು ಮಾಡಲು ರಾಷ್ಟ್ರವ್ಯಾಪಿ  ಮುಂದಾದರೆ ನಡೆದರೆ ಏನಾಗುತ್ತದೆ ಎಂಬುದು ಜನರಲ್ಲಿ ಭಯ ನೆಲೆಯೂರಿತ್ತು. ಅಸ್ಸಾಂನಲ್ಲಿ ಆರಂಭದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರನ್ನು ನಾಗರಿಕರ ಪಟ್ಟಿಯಿಂದ ಹೊರಗಿಡಲಾಗಿತ್ತು, ವರದಿಗಳ ಪ್ರಕಾರ, ಇದರಲ್ಲಿ ಕನಿಷ್ಠ 5 ಲಕ್ಷ ಹಿಂದೂಗಳು ಅದರಲ್ಲಿ ಸೇರಿದ್ದಾರೆ. ಇದರಿಂದಾಗಿ ಸಿಎಎ ಎನ್‌ಆರ್‌ಸಿ ವಿರುದ್ಧ ದೇಶದಾದ್ಯಂತ ವ್ಯಾಪಕವಾದ ಪ್ರತಿಭಟನೆಗಳು ನಡೆದಿದ್ದವು. ಈ ಬಳಿಕ ನಡೆದ ಗಲಭೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ದೇಶದ ವಿರೋಧ ಪಕ್ಷಗಳು ಮತ್ತು ಬಿಜೆಪಿಯೇತರ ಅಧಿಕಾರದ ರಾಜ್ಯಗಳಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು.

ಇದನ್ನು ಓದಿ: ಮುಸ್ಲಿಮರು, ತಮಿಳರಿಗೆ ದ್ರೋಹ ಮಾಡಿ ವಿಭಜನೆಯ ಬೀಜ ಬಿತ್ತಿದ ಬಿಜೆಪಿ : ಸಿಎಎ ಜಾರಿ ಬಗ್ಗೆ ತಮಿಳುನಾಡು ಸಿಎಂ ಆಕ್ರೋಶ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...