Homeಮುಖಪುಟಕೇಂದ್ರದಿಂದ ಸಿಎಎ ಜಾರಿ: ದೇಶದ ವಿವಿದೆಡೆ ಭುಗಿಲೆದ್ದ ಪ್ರತಿಭಟನೆ

ಕೇಂದ್ರದಿಂದ ಸಿಎಎ ಜಾರಿ: ದೇಶದ ವಿವಿದೆಡೆ ಭುಗಿಲೆದ್ದ ಪ್ರತಿಭಟನೆ

- Advertisement -
- Advertisement -

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಿ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸುತ್ತಿದ್ದಂತೆ ಅಸ್ಸಾಂ, ಕೇರಳ ಸೇರಿದಂತೆ ದೇಶದ ವಿವಿದೆಡೆ ಪ್ರತಿಭಟನೆ ಭುಗಿಲೆದ್ದಿದೆ.

ನಿನ್ನೆ (ಮಾ.11) ಸಂಜೆ ಸಿಎಎ ಜಾರಿಯಾಗುತ್ತಿದ್ದಂತೆ ಮಲಪ್ಪುರಂನಲ್ಲಿ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್‌ಐ) ಮೊದಲು ಪ್ರತಿಭಟನೆ ನಡೆಸಿತು. ಆ ಬಳಿಕ ಯುವ ಕಾಂಗ್ರೆಸ್ ಕಾರ್ಯಕರ್ತರು ಕೂಡ ಎರಡು ರೈಲುಗಳನ್ನು ತಡೆದು ಕೇಂದ್ರದ ನಿಲುವಿನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಲಪ್ಪುರಂನ ಕುನ್ನುಮ್ಮಲ್‌ನಲ್ಲಿ ಡಿವೈಎಫ್‌ಐ ಪ್ರತಿಭಟನೆ ನಡೆಸಿತು. ಮಲಪ್ಪುರಂ ಲೋಕಸಭಾ ಕ್ಷೇತ್ರದ ಎಲ್‌ಡಿಎಫ್‌ ಅಭ್ಯರ್ಥಿ ಹಾಗೂ ಡಿವೈಎಫ್‌ಐ ರಾಜ್ಯಾಧ್ಯಕ್ಷ ವಿ.ವಾಸಿಫ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ನಂತರ ಡಿವೈಎಫ್‌ಐ ಕಾರ್ಯಕರ್ತರು ಕೋಝಿಕ್ಕೋಡ್, ಕೊಲ್ಲಂ ಹಾಗೂ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಕೋಝಿಕ್ಕೋಡ್‌ನಲ್ಲಿ ಮಲಬಾರ್ ಎಕ್ಸ್ ಪ್ರೆಸ್ ರೈಲು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ನಿರತರನ್ನು ಪೊಲೀಸರು ವಶಕ್ಕೆ ಪಡೆದು, ರೈಲು ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಪ್ರತಿಭಟನೆಯಿಂದ ಅರ್ಧ ಗಂಟೆ ರೈಲು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮತ್ತೊಂದೆಡೆ ಎರ್ನಾಕುಲಂ ಸೌತ್‌ನಲ್ಲಿ ಮಾವೇಲಿ ಎಕ್ಸ್‌ಪ್ರೆಸ್ ರೈಲು ತಡೆದು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು.

ಎಲ್‌ಡಿಎಫ್-ಯುಡಿಎಫ್ ಜಂಟಿ ಸಮರ

ಕೇರಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ಆಡಳಿತರೂಡ ಎಲ್‌ಡಿಎಫ್‌ ಮತ್ತು ಪ್ರತಿಪಕ್ಷ ಮೈತ್ರಿಕೂಟ ಯುಡಿಎಫ್ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಹಿರಿಯ ಸಿಪಿಐ (ಎಂ) ನಾಯಕ ಮತ್ತು ರಾಜ್ಯ ಕಾನೂನು ಸಚಿವ ಪಿ ರಾಜೀವ್ ಅವರು, “ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಬಿಜೆಪಿ ಗಮನವನ್ನು ಬೇರೆಡೆ ಸೆಳೆಯಲು ಮತ್ತು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ” ಎಂದು ಹೇಳಿದ್ದಾರೆ.

ಸಿಎಎ ಜಾರಿ ವಿರುದ್ದ ರಾಜ್ಯಾದ್ಯಂತ ಪ್ರತಿಭಟನೆಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಕೆ.ಸುಧಾಕರನ್ ಕರೆ ನೀಡಿದ್ದು, “ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ದೇಶದ ಪ್ರಜೆಗಳನ್ನು ಒಡೆದು ಆಳುವ ಈ ಕಾನೂನನ್ನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತೇವೆ” ಎಂದಿದ್ದಾರೆ.

“ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಕಾನೂನು ಜಾರಿಗೊಳಿಸಿದೆ. ಇದರ ವಿರುದ್ಧ ನಾವು ಕಾನೂನು ಸಮರ ನಡೆಸುತ್ತೇವೆ” ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಮುಖ್ಯಸ್ಥ ಪಿ ಕುಂಞಾಲಿಕುಟ್ಟಿ ಹೇಳಿದ್ದಾರೆ.

ಕೇರಳದಲ್ಲಿ ಸಿಎಎ ಜಾರಿಗೊಳಿಸುವುದಿಲ್ಲ : ಪಿಣರಾಯಿ ವಿಜಯನ್

ಕೇರಳದಲ್ಲಿ ಸಿಎಎ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುನರುಚ್ಚಿಸಿದ್ದಾರೆ. ಸಂಸತ್‌ನಲ್ಲಿ ಸಿಎಎ ಮಸೂದೆ ಅಂಗೀಕರಿಸಿದಾಗಲೇ ಕೇರಳದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳು ಜಂಟಿಯಾಗಿ ಪ್ರತಿಭಟನೆ ನಡೆಸಿತ್ತು ಮತ್ತು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು.

ಕೇರಳದಲ್ಲಿ ಸಿಪಿಐ, ಸಿಪಿಐ(ಎಂ), ಡಿವೈಎಫ್‌ಐ, ಮುಸ್ಲಿಂ ಲೀಗ್, ಎಂಎಸ್‌ಎಫ್‌, ಎಸ್‌ಎಸ್‌ಎಫ್‌, ಎಸ್‌ಕೆಎಸ್‌ಎಸ್‌ಎಫ್‌ ಸೇರಿದಂತೆ ರಾಜಕೀಯ, ಧಾರ್ಮಿಕ ಸಂಘಟನೆಗಳು ಮತ್ತೊಮ್ಮೆ ಸಿಎಎ ವಿರುದ್ದ ಹೋರಾಟಕ್ಕೆ ಸಿದ್ದತೆ ನಡೆಸಿದೆ.

ಅಸ್ಸಾಂನಲ್ಲಿ ಪ್ರತಿಭಟನೆ

ಸಿಎಎ-ಎನ್‌ಆರ್‌ಸಿ ಜಾರಿಯಾದರೆ ಅದರ ಹೆಚ್ಚಿನ ಪರಿಣಾಮ ಉಂಟಾಗುವುದು ಅಸ್ಸಾಂ ಮೇಲೆ. ಹಾಗಾಗಿ, ಸಿಎಎ ಮಸೂದೆ ಸಂಸತ್ತಿನಲ್ಲಿ ಅಂಗೀಕರಿಸಿದಾಗ ಅಸ್ಸಾಂನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಇದೀಗ ಸಿಎಎ ಜಾರಿ ಬೆನ್ನಲ್ಲೆ ಮತ್ತೊಮ್ಮೆ ಪ್ರತಿಭಟನೆಗೆ ಅಸ್ಸಾಂನ ವಿವಿಧ ಸಂಘಟನೆಗಳು ಮುಂದಾಗಿವೆ.

ಆಲ್ ಅಸ್ಸಾಂ ಸ್ಟೂಡೆಂಟ್ ಯೂನಿಯನ್ (ಎಎಎಸ್‌ಯು) ಸೇರಿದಂತೆ ಹಲವು ಸಂಘಟನೆಗಳು ಈಗಾಗಲೇ ಸಿಎಎ ವಿರುದ್ದ ಪ್ರತಿಭಟನೆ ಪ್ರಾರಂಭಿಸಿದ್ದು, ರಾಜ್ಯಾದ್ಯಂತ ರ್‍ಯಾಲಿಗಳನ್ನು ಆಯೋಜಿಸುತ್ತಿದೆ ಮತ್ತು ಸಿಎಎ ಪ್ರತಿಗಳನ್ನು ಸುಡುತ್ತಿದೆ.

ಶಾಂತಿಯುತವಾಗಿ ಕಾನೂನು ಚೌಕಟ್ಟಿನೊಳಗೆ ಪ್ರತಿಭಟನೆ ನಡೆಸುವುದಾಗಿ ಮತ್ತು ಸಿಎಎ ವಿರುದ್ದ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಎಎಎಸ್‌ಯು ಘೋಷಿಸಿದೆ.

ಸಿಎಎ ವಿರೋಧಿ ಆಂದೋಲನದಿಂದ ರೂಪುಗೊಂಡ ರೈಜೋರ್ ದಳ ಮತ್ತು ಅಸ್ಸಾಂ ರಾಷ್ಟ್ರೀಯ ಪರಿಷತ್ ಸಕ್ರಿಯವಾಗಿ ಪ್ರತಿಭಟನೆ ನಡೆಸುತ್ತಿವೆ. ಆಮ್ ಆದ್ಮಿ ಪಕ್ಷವೂ ಗುವಾಹಟಿಯಲ್ಲಿ ಪ್ರತಿಭಟನೆ ನಡೆಸಿದೆ.

ಸಿಎಂ ಶರ್ಮಾ ಎಚ್ಚರಿಕೆ

ಅಸ್ಸಾಂನಲ್ಲಿ ಕಾನೂನು ಮೀರಿ ಪ್ರತಿಭಟಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಹೇಳಿದ್ದಾರೆ. ರಾಜಕೀಯ ಪಕ್ಷಗಳು ಕಾನೂನು ಮೀರಿದರೆ ನೋಂದಣಿ ರದ್ದಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಗುವಾಹಟಿ ಪೊಲೀಸರಿಂದ ಎಚ್ಚರಿಕೆ

ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಲು ಅವಕಾಶ ಇಲ್ಲ ಎಂದು ಗುವಾಹಟಿ ಪೊಲೀಸರು ತಿಳಿಸಿದ್ದು, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ : ಮುಸ್ಲಿಮರು, ತಮಿಳರಿಗೆ ದ್ರೋಹ ಮಾಡಿ ವಿಭಜನೆಯ ಬೀಜ ಬಿತ್ತಿದ ಬಿಜೆಪಿ : ಸಿಎಎ ಜಾರಿ ಬಗ್ಗೆ ತಮಿಳುನಾಡು ಸಿಎಂ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...