ಮುಖ್ಯಮಂತ್ರಿ ಯಡಿಯೂರಪ್ಪ ಮರಾಠ ಅಭಿವೃದ್ದಿ ಆಯೋಗ ರಚನೆ ಮಾಡಿ 50 ಕೋಟಿ ಹಣ ಮೀಸಲಿರಿಸಿರುವುದನ್ನು ವಿರೋಧಿಸಿ ತುಮಕೂರಿನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕರ್ನಾಟಕ ಬಂದ್ ಅಂಗವಾಗಿ ಕನ್ನಡಪರ ಸಂಘಟನೆಗಳು ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮರಾಠ ಆಯೋಗವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಟಿ.ಎ.ನಾರಾಯಣಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕನ್ನಡಪರ ಹೋರಾಟಗಾರರ ಬಗ್ಗೆ ಲಘುವಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ರಚನೆ ಮಾಡಿ ಕನ್ನಡಿಗರಿಗೆ ದ್ರೋಹ ಬಗೆದಿದೆ. ಕನ್ನಡಿಗರಿಗೆ ಅವಮಾನ ಮಾಡುತ್ತಿದೆ. ಕನ್ನಡಿಗರ ಭಾವನೆಗಳನ್ನು ಕೆರಳುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿ ಕನ್ನಡ ಅಭಿವೃದ್ಧಿ ಸಂಸ್ಥೆಗಳಿಗೆ ಕೇವಲ 5 ಕೋಟಿ ರೂ ಮೀಸಲಿಟ್ಟಿದೆ. ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ರಚಿಸಿ 50 ಕೋಟಿ ಹಣ ಮೀಸಲಿಟ್ಟಿದೆ. ಇದು ಕನ್ನಡ ನಾಡು, ನುಡಿ, ನೆಲ-ಜಲದ ಬಗ್ಗೆ ತಾರತಮ್ಯ ಮಾಡುವಂತಿದೆ. ಕನ್ನಡ ನಾಡಿನಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಸಡ್ಡೆ ತೋರುತ್ತಿದ್ದಾರೆ. ಇಂತಹ ಧೋರಣೆಯನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮರಾಠ ಪ್ರಾಧಿಕಾರ ಹಿಂತೆಗೆದುಕೊಳ್ಳದಿದ್ದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ. ರಾಜ್ಯ ಸರ್ಕಾರ ಕನ್ನಡಪರ ಹೋರಾಟಗಳನ್ನು ಮತ್ತು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಧಾರವಾಡದಲ್ಲಿ ಮರಾಠರು ವಿಜಯೋತ್ಸವ ಆಚರಿಸಲು ಅವಕಾಶ ನೀಡುವ ಸರ್ಕಾರ ನಮ್ಮ ಭಾಷೆ, ನೆಲ, ಜಲ, ಉದ್ಯೋಗ ರಕ್ಷಣೆಗೆ ಹೋರಾಡುವ ನಮಗೆ ತಡೆಹಾಕುವ ಕೆಲಸ ಮಾಡುತ್ತಿದೆ. ಇಂತಹ ತಾರತಮ್ಯ ಧೋರಣೆ ಸಲ್ಲದು ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಇದನ್ನೂ ಓದಿ: ಕರ್ನಾಟಕ ಬಂದ್ ಆರಂಭ: ಟಿ.ಎ ನಾರಾಯಣಗೌಡ ಸೇರಿ ನೂರಾರು ಕನ್ನಡಪರ ಹೋರಾಟಗಾರರ ಬಂಧನ