ರಾಜ್ಯದ ಕೆಲವೆಡೆ ಒಂದು ಕೋಮಿನ ಜನರಿಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಬ್ಯಾನರ್ ಹಾಕಿ ಸೌಹಾರ್ದತೆ ಹಾಳು ಮಾಡುವ ಪ್ರಯತ್ನ ನಡೆದಿತ್ತು. ಅದರ ಬೆನ್ನಿಗೆ ಧಾರವಾಡದ ನುಗ್ಗಿಕೇರಿಯಲ್ಲಿನ ಹನುಮಂತ ದೇವಸ್ಥಾನದ ಬಳಿ ಕಳೆದ ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುತ್ತಿರುವ ನಬಿಸಾಬ್ ಅವರ ವ್ಯಾಪಾರಕ್ಕೆ ಅಡ್ಡಿಪಡಿಸಿ, ಶ್ರೀರಾಮಸೇನೆಯ ದುಷ್ಕರ್ಮಿಗಳು ಕಲ್ಲಂಗಡಿಗಳನ್ನು ರಸ್ತೆಗೆ ಎಸೆದು ವಿಕೃತಿ ಮೆರೆದಿದ್ದರು. ಈ ಘಟನೆಗಳನ್ನು ನಾಡಿನ ಪ್ರಜ್ಞಾವಂತರು, ಜೀವಪರರೆಲ್ಲರೂ ಖಂಡಿಸಿದ್ದರು. ಈ ಘಟನೆಗಳಿಂದ ನೊಂದ ಬಳ್ಳಾರಿಯ ಗ್ರಾಮವೊಂದರ ಹಿಂದೂ-ಮುಸಲ್ಮಾನ ಗ್ರಾಮಸ್ಥರು ನಾವು ಮತ್ತಷ್ಟು ಒಗ್ಗಟ್ಟಾಗಿದ್ದೇವೆ ಎಂಬ ಸೌಹಾರ್ದ ಸಂದೇಶ ಸಾರಿದ್ದಾರೆ. ಆ ಮೂಲಕ ಒಡೆದು ಆಳುವವರಿಗೆ ಬಂಧುತ್ವದ ಪಾಠ ಹೇಳಲು ಹೊರಟಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಪ್ರತಿವರ್ಷ ರಾಮನವಮಿಯ ಅಂಗವಾಗಿ ಹಿಂದೂ ಯುವಕರು ರಾಮ ಮಾಲೆ ಹಾಕಿಕೊಂಡು ವ್ರತ ಆಚರಿಸುತ್ತಾರೆ. ಅದೇ ಊರಿನಲ್ಲಿನ ಮುಸ್ಲಿಮರು ರಂಜಾನ್ ಮಾಸದಲ್ಲಿ ಉಪವಾಸವಿದ್ದು ಸಂಜೆ ಪ್ರಾರ್ಥನೆ ಬಳಿಕ ಇಫ್ತಾರ್ ಆಚರಿಸುತ್ತಾರೆ. ಇದನ್ನು ಹಲವು ವರ್ಷಗಳಿಂದ ತಮ್ಮ ಪಾಡಿಗೆ ತಾವು ಮಾಡಿಕೊಂಡು ಬರುತ್ತಿದ್ದರು. ಆದರೆ ಈ ಬಾರಿ ಕರ್ನಾಟಕದಲ್ಲಿನ ಅಶಾಂತ ವಾತವರಣ ಗಮನಿಸಿದ ಊರಿನ ಗ್ರಾಮಸ್ಥರು ಒಟ್ಟಾಗಿ ಸೇರಿ ರಾಮನವಮಿ ಮತ್ತು ಇಫ್ತಾರ್ ಆಚರಿಸುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಏಪ್ರಿಲ್ 09ರ ಕಳೆದ ಶನಿವಾರದಂದು ರಾಮನವಮಿ ಹಬ್ಬದ ಪ್ರಯುಕ್ತ ಮೆರವಣಿಗೆ ಹೊರಟಿದ್ದ ರಾಮ ಭಕ್ತರನ್ನು ಮುಸ್ಲಿಂ ಬಾಂಧವರು ಅಪ್ಪಿಕೊಂಡು, ಅವರಿಗೆ ಕೇಸರಿ ಶಾಲನ್ನು ಹಾಕುವುದರ ಮೂಲಕ ರಾಮನವಮಿಯ ಶುಭಾಶಯಗಳನ್ನು ತಿಳಿಸಿದ್ದರು. ಜೈ ಶ್ರೀರಾಮ್ ಘೋಷಣೆ ಕೂಗಿ ತಾವು ಹಬ್ಬದಲ್ಲಿ ಭಾಗಿಯಾಗಿದ್ದರು.
ಅದಕ್ಕೆ ಪ್ರತಿಯಾಗಿ ಏಪ್ರಿಲ್ 12ರ ಮಂಗಳವಾರದಂದು ಮುಸ್ಲಿಮರು ಸಂಜೆ ಪ್ರಾರ್ಥನೆ ಮುಗಿಸಿದ ಸಮಯದಲ್ಲಿ ರಾಮ ಮಾಲೆ ಹಾಕಿಕೊಂಡಿರುವ ಹಲವು ಭಕ್ತರು ಮಸೀದಿಗೆ ಭೇಟಿ ಕೊಟ್ಟು ಸಿಹಿ, ಹಣ್ಣು ಹಂಪಲುಗಳನ್ನು ಹಂಚಿ ಇಫ್ತಾರ್ ಆಚರಿಸುವ ಮೂಲಕ ಕೃತಜ್ಞತೆ ತಿಳಿಸಿದ್ದಾರೆ. ಪರಸ್ಪರ ಹಣ್ಣು ತಿನಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಸೌಹಾರ್ದತೆಯನ್ನು ಸಾರುತ್ತಿವೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ರಾಮಸಾಗರ ಗ್ರಾಮದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸದಸ್ಯ ಭುವನ್ ಕುಮಾರ್, “ನಮ್ಮ ಗ್ರಾಮದಲ್ಲಿ ಹಿಂದಿನಿಂದಲೂ ಎಲ್ಲಾ ಧರ್ಮದವರು ಪರಸ್ಪರ ಸೌಹಾರ್ದತೆಯಿಂದ ಬದುಕಿದ್ದೇವೆ. ಈ ಹಿಂದೆ ರಾಮಭಕ್ತರು ತಮ್ಮ ಪಾಡಿಗೆ ತಾವು ರಾಮನವಮಿ ಆಚರಿಸುತ್ತಿದ್ದಾಗ ಮುಸ್ಲಿಮರು ಶುಭ ಹಾರೈಸುತ್ತಿದ್ದರು. ಆದರೆ ಈ ಬಾರಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅವರನ್ನು ಆಲಂಗಿಸಿ ಕೇಸರಿ ಶಾಲು ಹಾಕಿದ್ದಾರೆ. ಅದೇ ರೀತಿ ಹಿಂದೂ ಯುವಕರು ಸಹ ಮಸೀದಿಗೆ ತೆರಳಿ ಹಣ್ಣು-ಸಿಹಿ ತಿನಿಸಿ ಇಫ್ತಾರ್ ಆಚರಿಸಿದ್ದಾರೆ. ಹಾಗಾಗಿ ನಮ್ಮ ಊರಿನ ಜನರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಇಡೀ ಭಾರತ ಇರಬೇಕಾದ್ದು ಹೀಗೆ” ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ; Exclusive: ಮಸೀದಿ ಸುತ್ತಲಿನ ಹಿಂದೂ ವ್ಯಾಪಾರಿಗಳ ಮನದ ಮಾತುಗಳು