ಮುತ್ತಯ್ಯ ಮರುಳೀಧರನ್ ಬಯೋಪಿಕ್: ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಿದ ಮಾಜಿ ಕ್ರಿಕೆಟಿಗ

ಮುತ್ತಯ್ಯ ಮುರುಳೀಧರನ್ ಬಯೋಪಿಕ್ “800” ತಮಿಳಿನಲ್ಲಿ ಸಿದ್ಧವಾಗುತ್ತಿದ್ದು, ಶ್ರೀಲಂಕಾದಲ್ಲಿನ ಮುಗ್ಧ ತಮಿಳರ ಸಾವನ್ನು ಮುತ್ತಯ್ಯ ಸಮರ್ಥಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ತಮಿಳುನಾಡಿನಲ್ಲಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಮುತ್ತಯ್ಯ, “ಮುಗ್ಧರ ಹತ್ಯೆಯನ್ನು ಎಂದಿಗೂ ಸಮರ್ಥಿಸುವುದಿಲ್ಲ” ಎಂದಿದ್ದಾರೆ.

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರುಳೀಧರನ್ ಜೀವನ ಚರಿತ್ರೆ ಆಧಾರಿತ ಚಲನಚಿತ್ರದ ಫಸ್ಟ್‌ಲುಕ್ ಈ ವಾರ ಬಿಡುಗಡೆಯಾಗಿದ್ದು, ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಮುತ್ತಯ್ಯ ಮುರುಳೀಧರನ್ ಈ ಹಿಂದೆ ವಿವಾದಾತ್ಮಕ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದರಿಂದ ತಮಿಳುನಾಡಿನಲ್ಲಿ ಇವರ ಚಿತ್ರಕ್ಕೆ ವಿರೋಧ ವ್ಯಕ್ತವಾಗಿತ್ತು.

ಇದಕ್ಕೆ ಸ್ಪಷ್ಟನೆ ನೀಡಿದ ಮುತ್ತಯ್ಯ, “ಇದುವರೆಗೂ ಯುದ್ಧದಲ್ಲಿ ಎರಡೂ ಕಡೆ ಸಂಭವಿಸಿದ್ದ ಪ್ರಾಣಹಾನಿಗಳು 2009 ರಲ್ಲಿ ಯುದ್ಧ ಕೊನೆಗೊಳ್ಳುವುದರ ಮೂಲಕ ನಿಂತಿದ್ದರಿಂದ ಈ ದಿನವನ್ನು ನನ್ನ ಜೀವನದಲ್ಲಿ ಅತ್ಯಂತ ಸಂತೋಷದಾಯಕ ದಿನ ಎಂದು ಹೇಳಿದ್ದೆ. ಆದರೆ ಈಗ ಈ ಹೇಳಿಕೆಯನ್ನು ತಿರುಚಿ, ತಮಿಳರನ್ನು ಕೊಂದ ದಿನ ನನ್ನ ಜೀವನದಲ್ಲಿ ಸಂತೋಷದಾಯಕ ದಿನ ಎಂದು ಬಿಂಬಿಸಲಾಗುತ್ತಿದೆ. ಮುಗ್ಧರನ್ನು ಕೊಲ್ಲುವುದನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: ಮುತ್ತಯ್ಯ ಮುರುಳೀಧರನ್ ಪಾತ್ರದಲ್ಲಿ ವಿಜಯ್ ಸೇತುಪತಿ: ‘800’ ಚಿತ್ರ ಬಾಯ್ಕಾಟ್ ಎಂದ ತಮಿಳಿಗರು!

“ಯುದ್ಧದ ನೋವು ನನಗೆ ತಿಳಿದಿದೆ. ನಾನು 30 ವರ್ಷಗಳಿಗೂ ಹೆಚ್ಚು ಕಾಲ ಯುದ್ಧದ ನಡುವೆಯೇ ಶ್ರೀಲಂಕಾದಲ್ಲಿ ಬೆಳೆದಿದ್ದೇನೆ. ನಾನು ಏಳು ವರ್ಷದವನಿದ್ದಾಗ ನನ್ನ ತಂದೆಯನ್ನು ಹತ್ಯೆ ಮಾಡಲಾಯಿತು. ಅನೇಕ ಬಾರಿ ನಾವು ಬೀದಿಯಲ್ಲಿರಬೇಕಾಯಿತು” ಎಂದು ಅವರು ಹೇಳಿದರು.

ಶ್ರೀಲಂಕನ್ ತಮಿಳರಿಗೆ ಅಲ್ಲಿ ತಾರತಮ್ಯವಿದೆ ಎಂದು ದಶಕಗಳಿಂದ ಆರೋಪಗಳಿವೆ. ಹಲವಾರು ವರ್ಷಗಳಿಂದ ಸಶಸ್ತ್ರ ಹೋರಾಟ ನಡೆಸಿದ ಸಶಸ್ತ್ರ ಲಂಕಾ ತಮಿಳು ಗುಂಪಾದ ಎಲ್‌ಟಿಟಿಇಯನ್ನು 2009 ರಲ್ಲಿ ಲಂಕಾ ಪಡೆಗಳು ಹತ್ತಿಕ್ಕಿದವು. ಯುದ್ಧ ಮುಗಿದಾಗ, ಬೃಹತ್ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಬಾಂಬ್ ಸ್ಫೋಟಗಳಲ್ಲಿ ಲಕ್ಷಕ್ಕೂ ಹೆಚ್ಚು ತಮಿಳು ನಾಗರಿಕರ ಸಾವುಗಳು ವರದಿಯಾಗಿದ್ದವು.

ಇದನ್ನೂ ಓದಿ: ನಾನು ಸರ್ವಾಧಿಕಾರಿಯಾಗಲು ಇಚ್ಚಿಸುತ್ತೇನೆ: ವಿಜಯ್ ದೇವರಕೊಂಡ ವಿವಾದಾತ್ಮಕ ಹೇಳಿಕೆ

“ಲಂಕಾ ತಮಿಳರು ಸಾಯುತ್ತಿರುವಾಗ ಮುತ್ತಯ್ಯ ಪಿಟೀಲು ನುಡಿಸುತ್ತಿದ್ದರು. ತಮ್ಮ ಜನರು ಸಾಯುವಾಗ ನಗುತ್ತಿರುವ ಅವರು ಕ್ರೀಡಾಪಟುವಾಗಿ ಸಾಧಿಸಿದರೆ ಏನು ಪ್ರಯೋಜನ? ಮುತ್ತಯ್ಯ ನಮ್ಮ ನಂಬಿಕೆಗೆ ದ್ರೋಹ ಬಗೆದಿದ್ದಾರೆ” ಎಂದು ಹಿರಿಯ ನಿರ್ದೇಶಕ ಭಾರತಿರಾಜ ಹೇಳಿದ್ದಾರೆ.

ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ ಪಿಎಂಕೆ ಮುಖ್ಯಸ್ಥ ಡಾ.ಪಿ.ರಾಮದಾಸ್, “ವಿಜಯ್ ಸೇತುಪತಿ ಈ ಚಿತ್ರವನ್ನು ತಿರಸ್ಕರಿಸಿದರೆ, ಅವರು ತಮಿಳರ ಹೆಮ್ಮೆಯ ಇತಿಹಾಸದಲ್ಲಿ ಸ್ಥಾನ ಪಡೆಯುತ್ತಾರೆ; ಬದಲಿಗೆ ಅವರು ಅದನ್ನು ಮಾಡಿದರೆ, ನಮ್ಮ ವಿರೋಧವನ್ನು ಧಿಕ್ಕರಿಸಿದರೆ, ದ್ರೋಹಿಗಳ ಇತಿಹಾಸದಲ್ಲಿ ಸ್ಥಾನ ಪಡೆಯುತ್ತಾರೆ” ಎಂದು ಹೇಳಿದ್ದಾರೆ.

ಚಿತ್ರದ ನಿರ್ಮಾಪಕರಾದ ದಾರ್ ಮೋಷನ್ ಪಿಕ್ಚರ್ಸ್, “ಈ ಚಿತ್ರವು ಕೇವಲ ಕ್ರೀಡಾಪಟುವಿನ ಜೀವನಚರಿತ್ರೆಯಾಗಿದ್ದು, ಇದು ಶ್ರೀಲಂಕಾದಲ್ಲಿ ತಮಿಳರ ಹೋರಾಟಕ್ಕೆ ಹಿನ್ನಡೆಯಾಗಿಸುವ ಯಾವುದೇ ದೃಶ್ಯಗಳನ್ನು ಪ್ರದರ್ಶಿಸುವುದಿಲ್ಲ” ಎಂದು ಹೇಳಿದೆ.


ಇದನ್ನೂ ಓದಿ: ಎಡಿಟ್‌ ಆದ ವಿಡಿಯೋ ಟ್ವೀಟ್‌ ಮಾಡಿ ತೊಂದರೆಗೆ ಸಿಕ್ಕಿಕೊಂಡ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here